ಸಾಧನೆಯಲ್ಲಿ ಜಂಟಿ-ಪುರಸ್ಕಾರದಲ್ಲಿ ಒಂಟಿ!
ಬಾಲ್ ಪುರಸ್ಕಾರ್ನಿಂದ ವಂಚಿತ ದ.ಕ. ಜಿಲ್ಲೆಯ ಯುವ ವಿಜ್ಞಾನಿ ಅಮನ್
ಮಂಗಳೂರು, ಜ.26: ದ.ಕ. ಜಿಲ್ಲೆಯ ಯುವ ವಿಜ್ಞಾನಿಯೋರ್ವನಿಗೆ ರಾಷ್ಟ್ರಪತಿಯಿಂದ ಬಾಲ್ ಪುರಸ್ಕಾರದ ಗೌರವು ಜಿಲ್ಲೆಯ ಪಾಲಿಗೆ ಹೆಮ್ಮೆ ಹಾಗೂ ಸಂತಸವನ್ನು ನೀಡಿದೆ. ಇದೇ ವೇಳೆ ಆ ಸಾಧನೆಯಲ್ಲಿ ಜಂಟಿಯಾಗಿದ್ದ ಇನ್ನೋರ್ವ ಯುವ ವಿಜ್ಞಾನಿಯನ್ನು ಕಡೆಗಣಿಸಲಾಗಿದೆ ಎಂಬ ಬೇಸರ ಕೂಡ ವ್ಯಕ್ತವಾಗಿದೆ.
ಇದು ಅಮೆರಿಕದ ಟೆಕ್ಸಾಸ್-ಹ್ಯೂಸ್ಟನ್ನಲ್ಲಿ ನಡೆದ ಅಂತರ್ರಾಷ್ಟ್ರೀಯ ಮಟ್ಟದ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ‘ಐ ಸ್ವೀಪ್’ ವಿಜ್ಞಾನ ಸಂಶೋಧನಾ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಜತೆಯಾಗಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದ ದ.ಕ. ಜಿಲ್ಲೆಯ ಉಪ್ಪಿನಂಗಡಿಯ ಬಾಲಕರಿಬ್ಬರ ಸಂತಸ- ನೋವಿನ ಕಥನ. ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳಾದ ಎ.ಯು. ನಚಿಕೇತ್ ಕುಮಾರ್ ಹಾಗೂ ಅಮನ್ ಕೆ.ಎ. ಅಂತರ್ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಜಿಲ್ಲಾ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ತಮ್ಮ ಸಂಶೋಧನಾ ಪ್ರಯೋಗಕ್ಕೆ ಪ್ರಶಸ್ತಿ ಗಳಿಸಿ ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಜಿಲ್ಲೆಗೆ ಹೆಮ್ಮೆ ತಂದಿದ್ದರು. ಆದರೆ, ಭಾರತ ಸರಕಾರದಿಂದ ನೀಡುವ ಪ್ರಧಾನಮಂತ್ರಿ ಬಾಲ ಪುರಸ್ಕಾರ್ 2019ರ ಬಾಲ್ ಶಕ್ತಿ ಪುರಸ್ಕಾರಕ್ಕೆ ಎ.ಯು. ನಚಿಕೇತ್ ಮಾತ್ರವೇ ಆಯ್ಕೆಯಾಗಿ ಪ್ರಶಸ್ತಿ ಸ್ವೀಕರಿಸುವ ಮೂಲಕ ಇನ್ನೋರ್ವ ವಿದ್ಯಾರ್ಥಿ ಅಮನ್ ಕೆ.ಎ.ಯನ್ನು ಕಡೆಗಣಿಸಿರುವ ನೋವು ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕ ವರ್ಗದಿಂದ ವ್ಯಕ್ತವಾಗಿದೆ.
ಇಂದ್ರಪ್ರಸ್ಥ ಹೈಸ್ಕೂಲ್ ಹಾಗೂ ಪ್ರಸ್ತುತ ಪಿಯುಸಿಯಲ್ಲೂ ಜತೆಯಾಗಿ ಓದುತ್ತಿರುವ ನಚಿಕೇತ್ ಹಾಗೂ ಅಮನ್ 9ನೇ ತರಗತಿಯಲ್ಲಿದ್ದಾಗ ವಿಜ್ಞಾನ ಮಾದರಿ ಸುಧಾರಣೆಗೊಂಡು ಅಂತರ್ರಾಷ್ಟ್ರೀಯ ಮನ್ನಣೆ ಪಡೆಯುವಲ್ಲಿ ಸಫಲವಾಗಿತ್ತು.
ಮನೆಯಂಗಳದಲ್ಲಿ ಬೆಳೆಯುವ ಬಿಂಬುಳಿ ಹಣ್ಣಿನ ರಸವನ್ನು ಬಳಸಿಯೂ ರಬ್ಬರ್ ಶೀಟ್ ತಯಾರಿಸಬಹುದು ಎಂಬ ಪ್ರಯೋಗಬದ್ಧ ಸಂಶೋಧನೆಯನ್ನು ಈ ವಿದ್ಯಾರ್ಥಿಗಳು ತಮ್ಮ ಶಾಲೆಯ ಶಿಕ್ಷಕಿ ನಿಶಿತಾ ಸಹಕಾರದಲ್ಲಿ ಮಾಡಿ ತೋರಿಸಿದ್ದರು. ಪುತ್ತೂರಿನಲ್ಲಿ 2016ರ ನವೆಂಬರ್ 5ರಂದು ವಿಭಾಗೀಯ ಮಟ್ಟದಲ್ಲಿ, 2017ರ ಜ.9ರಂದು ರಾಜ್ಕೋಟ್ನಲ್ಲಿ ವಿದ್ಯಾರ್ಥಿಗಳಿಬ್ಬರ ಸಂಶೋಧನೆಯು ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕಕ್ಕೆ ಪಾತ್ರವಾಗಿತ್ತು.
ಭಾರತದ ಖ್ಯಾತ ವಿಜ್ಞಾನಿಗಳಾದ ನಾರಾಯಣ ಅಯ್ಯರ್ ಹಾಗೂ ಹರೀಶ್ ಭಟ್ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಉನ್ನತ ಮಟ್ಟದಲ್ಲಿ ಪ್ರಯೋಗಕ್ಕೆ ಒಳಪಡಿಸಿ, ಮಂಗಳೂರಿನ ನಿವೃತ್ತ ರಸಾಯನಶಾಸ್ತ್ರ ಉಪನ್ಯಾಸಕ ಜಯಂತ್ ಅವರ ಸಹಕಾರದೊಂದಿಗೆ ವಿಭಿನ್ನ ಸ್ತರದ ಪ್ರಯೋಗದೊಂದಿಗೆ ಸಂಶೋಧನೆಯು ಅಮೆರಿಕದಲ್ಲಿ 2017ರ ಮೇ 3ರಿಂದ 8ರವರೆಗೆ ನಡೆದ ಐ ಸ್ವೀಪ್ ವಿಜ್ಞಾನ ಸಂಶೋಧನಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿತ್ತು. ಹೀಗೆ ತಮ್ಮ ಸಂಶೋಧನೆಗಾಗಿ ಜತೆಯಾಗಿಯೇ ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಪಡೆದಿರುವ ಈ ವಿದ್ಯಾರ್ಥಿಗಳ ಪೈಕಿ ಬಾಲ್ ಪುರಸ್ಕಾರ ಪಡೆದಿರುವುದು ನಚಿಕೇತ್ ಮಾತ್ರ.
ನಾನು ಈ ಸಂಶೋಧನೆಗಾಗಿ ಬಹಳಷ್ಟು ಶ್ರಮ ಪಟ್ಟಿದ್ದೇನೆ. ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಪ್ರಶಸ್ತಿಯಲ್ಲಿ ಜತೆಯಾಗಿಯೇ ಭಾಗವಹಿಸಿದ್ದೆವು. ಆದರೆ, ರಾಷ್ಟ್ರಪತಿಯಿಂದ ಪುರಸ್ಕಾರ ತೆಗೆದುಕೊಳ್ಳುವ ಅವಕಾಶ ನನಗೆ ಸಿಗದ ಬಗ್ಗೆ ಬೇಸರವಾಗಿದೆ. ನಚಿಕೇತ್ಗೆ ನಾನು ಅಭಿನಂದನೆ ಸಲ್ಲಿಸಿದ್ದೇನೆ.
ಅಮನ್ ಕೆ.ಎ., ಪ್ರಥಮ ಪಿಯು ವಿದ್ಯಾರ್ಥಿ, ಇಂದ್ರಪ್ರಸ್ಥ ಕಾಲೇಜು, ಉಪ್ಪಿನಂಗಡಿ
ಬಿಂಬುಳಿ ರಸದಲ್ಲಿ ರಬ್ಬರ್ ಶೀಟ್ ತಯಾರಿಗೆ ಸಂಬಂಧಿಸಿ ನಮ್ಮ ಸಂಸ್ಥೆಯ ವಿದ್ಯಾರ್ಥಿ ನಚಿಕೇತ್ಗೆ ಬಾಲ್ ಪುರಸ್ಕಾರ್ ದೊರಕಿದೆ. ಈ ಬಗ್ಗೆ ನಮಗೆ ಅಭಿಮಾನವಿದೆ, ಸಂತಸವಿದೆ. ಆದರೆ, ಈ ಸಂಶೋಧನೆಯನ್ನು ನಚಿಕೇತ್ ಹಾಗೂ ಅಮನ್ ಜತೆಯಾಗಿ ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಪದಕ ಜಯಿಸಿದ್ದರು. ಇಬ್ಬರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದರೂ ಬಾಲ್ ಪುರಸ್ಕಾರ್ ನಮ್ಮ ಒಬ್ಬ ವಿದ್ಯಾರ್ಥಿಗೆ ಮಾತ್ರ ದೊರಕಿದೆ. ನಮಗೂ ಅಚ್ಚರಿಯಾಗಿದೆ. ಬೇಸರವಾಗಿದೆ. ಇಬ್ಬರಿಗೂ ಸಿಗಬೇಕಿತ್ತು. ಸರಕಾರ ಮಟ್ಟದಿಂದ ಈ ಪುರಸ್ಕಾರದ ಬಗ್ಗೆ ನಮಗೆ ಯಾವುದೇ ರೀತಿಯ ಮಾಹಿತಿ ಇರಲಿಲ್ಲ. ಮುಂದಿನ ಶನಿವಾರ ನಾನು ಮಂಗಳೂರಿಗೆ ಭೇಟಿ ನೀಡಲಿದ್ದೇನೆ. ಅಮನ್ ಪೋಷಕರ ಜತೆ ನಾನು ಮಾತನಾಡಲಿದ್ದೇನೆ. ಅವರಿಗಾದಷ್ಟೇ ನೋವು ನನಗೂ ಆಗಿದೆ. ನಾನು ಈಗಾಗಲೇ ಈ ಬಗ್ಗೆ ನಮ್ಮ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರ ಜತೆ ಮಾತನಾಡಿದ್ದೇನೆ. ಅಮನ್ ತುಂಬ ಚುರುಕು, ಬುದ್ಧಿವಂತ ಹಾಗೂ ಶಿಸ್ತಿನ ಹುಡುಗ. ಸರಕಾರದ ಈ ನಡೆಯಿಂದ ತಪ್ಪು ಸಂದೇಶ ನೀಡಿದಂತಾಗಿದೆ. ಎಲ್ಲಿ, ಯಾವ ರೀತಿಯಲ್ಲಿ ತಪ್ಪಾಗಿದೆ ಎಂಬ ಬಗ್ಗೆ ನಾನು ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸುತ್ತೇನೆ.
-ಯು.ಎಸ್.ಎ. ನಾಯಕ್, ಸಂಚಾಲಕರು, ಇಂದ್ರಪ್ರಸ್ಥ ವಿದ್ಯಾಲಯ
ರಬ್ಬರ್ ತಯಾರಿಸುವ ಸಂದರ್ಭ ಗಟ್ಟಿಯಾಗಲು ಆ್ಯಸಿಡ್ ಬಳಸಲಾಗುತ್ತದೆ. ಆದರೆ, ಅದು ಅಪಾಯಕಾರಿ. ಆದರೆ, ಪ್ರಾಕೃತಿಕವಾಗಿ ದೊರೆಯುವ ಬಿಂಬುಳಿಯಲ್ಲೂ ಆ್ಯಸಿಡ್ ಗುಣ ಇರುವುದರಿಂದ ಅದರ ರಸದಿಂದ ರಬ್ಬರ್ ಹಾಳೆಯನ್ನು ತಯಾರಿಸಬಹುದು ಎಂಬ ಅಮನ್ ತನ್ನ ಅಜ್ಜನವರಿಂದ ತಿಳಿದು ವಿಜ್ಞಾನ ಮಾದರಿಗೆ ಈ ವಿಷಯವನ್ನು ಆಯ್ದುಕೊಂಡು ಸಹಪಾಠಿ ನಚಿಕೇತ್ ಜತೆ ಈ ಮಾದರಿಯನ್ನು ತಯಾರಿಸಿದ್ದರು. ಅದು ಜಿಲ್ಲಾ ಮಟ್ಟದಿಂದ ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ದೊರಕಿಸಿತು. ಇವರ ಸಾಧನೆಗೆ ಜಿಲ್ಲಾಮಟ್ಟದಲ್ಲಿ ನಗದು ಪುರಸ್ಕಾರವೂ ಲಭಿಸಿದೆ. ಆದರೆ, ಬಾಲ್ ಶಕ್ತಿ ಪುರಸ್ಕಾರ್ಗೆ ಮಾತ್ರ ನಮ್ಮ ಮಗ ಆಯ್ಕೆಯಾಗಿಲ್ಲ. ಆತನ ಹೆಸರನ್ನೂ ಆನ್ಲೈನ್ ಮೂಲಕ ಪ್ರಶಸ್ತಿಗಾಗಿ ಕಳುಹಿಸಲಾಗಿತ್ತು. ಆದರೆ, ಅಮನ್ಗೆ ದೊರಕಿಲ್ಲ. ಇದು ಅವನ ಜತೆ ನವುಗೂ ಬೇಸರ ತರಿಸಿದೆ.
-ಅಬ್ದುಲ್ ಅಝೀಝ್, ಅಮನ್ ತಂದೆ, ನಿವೃತ್ತ ಯೋಧ, ಪ್ರಸಕ್ತ ಪುತ್ತೂರು ಅಗ್ನಿಶಾಮಕ ದಳದ ಉದ್ಯೋಗಿ