ಮಹಾಬಲ ಶೆಟ್ಟಿಯವರ ಆರೆಸ್ಸೆಸ್ ಅಂತರಂಗ
ಭಾಗ-1
ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ಹಿಂದುತ್ವದ ತಳಹದಿಯಲ್ಲಿ ನಿಂತ ರಾಷ್ಟ್ರೀಯತೆ ಎಷ್ಟು ಪೊಳ್ಳಾದುದು ಎನ್ನುವುದನ್ನು ಆರೆಸ್ಸೆಸ್ ಕಾರ್ಯಕರ್ತನಾಗಿ ಸಕ್ರಿಯವಾಗಿ ದುಡಿದು, ಅದರಿಂದ ಭ್ರಮನಿರಸನಗೊಂಡು ಹೊರಬಂದ ಮಡಿಕೇರಿ ಮೂಲದ ಮಹಾಬಲ ಶೆಟ್ಟಿ ಇಲ್ಲಿ ಬಹಿರಂಗ ಪಡಿಸಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದರೂ ಬಳಿಕ ಜನಸಂಘಕ್ಕೆ ಸೇರಿ, ಹಿರಿಯ ರಾಜಕೀಯ ಮುತ್ಸದ್ದಿ ಎ.ಕೆ. ಸುಬ್ಬಯ್ಯನವರ ಜತೆ ಜನತಾಪಾರ್ಟಿ ಹಾಗೂ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿ ಆರೆಸ್ಸೆಸ್‌ನ ಒಡನಾಟದಲ್ಲಿದ್ದವರು ಮಹಾಬಲ ಶೆಟ್ಟಿ. 81ರ ಹರೆಯದ ಮಹಾಬಲ ಶೆಟ್ಟಿ ರಾಜಕೀಯದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದುಕೊಂಡೇ ಜನ ಸಂಘಟನೆಯ ಕಾರ್ಯವನ್ನು ಮಾಡಿದವರು. ಜನಸಂಘ, ಜನತಾಪಾರ್ಟಿ ಹಾಗೂ ಬಿಜೆಪಿಯಲ್ಲಿದ್ದ ಸಂದರ್ಭ ಆರೆಸ್ಸೆಸ್‌ನ ಸಂಪರ್ಕದಲ್ಲಿದ್ದರೂ, ಬಳಿಕ ಲೋಹಿಯಾ ಚಿಂತನೆ, ಗಾಂಧಿ ತತ್ವದ ಜತೆ ತಮ್ಮ ರಾಜಕೀಯ ಪಯಣವನ್ನು ಬೆಳೆಸಿದವರು. 2013ರ ವಿಧಾನಸಭಾ ಚುನಾವಣೆಯಲ್ಲಿ ಮಹಾಬಲ ಶೆಟ್ಟಿಯವರು ಭ್ರಷ್ಟಾಚಾರದ ವಿರುದ್ಧ್ದ ಧ್ವನಿಯಾಗಿ ಮಂಗಳೂರು ಉತ್ತರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇದು ಮಹಾಬಲ ಶೆಟ್ಟಿಯವರ ಆರೆಸ್ಸೆಸ್ ಅಂತರಂಗ.
1937ರಲ್ಲಿ ನಾನು ಭಾಗಮಂಡಲದಲ್ಲಿ ಹುಟ್ಟಿದ್ದು. ನಮ್ಮ ತಂದೆ ತ್ಯಾಂಪಣ್ಣ ಶೆಟ್ಟಿ ಹಾಗೂ ತಾಯಿ ಮುತ್ತಮ್ಮ. ಮೂಲತ: ದ.ಕ. ಜಿಲ್ಲೆಯವರಾಗಿದ್ದರೂ ಭಾಗಮಂಡಲದಲ್ಲಿ ನೆಲೆಸಿದವರು. ನನ್ನ ಹುಟ್ಟು ಅಲ್ಲೇ ಆಯಿತು. ತಾಯಿಯ ತವರು ಮನೆ ಜಪ್ಪು ಗುಡ್ಲೆಗುತ್ತು ಮುಗೇರ ಮನೆ. ನನ್ನ ತಂದೆ ವ್ಯಾಪಾರಿಯಾಗಿದ್ದರು. 1885ಲ್ಲಿ ಹುಟ್ಟಿದ ನನ್ನ ತಂದೆ ಗಾಂಧೀಜಿಯ ಅನುಯಾಯಿ. ನಮ್ಮ ತಂದೆಯವರು ಸ್ವಾತಂತ್ರ ಸಂಗ್ರಾಮದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸದಿದ್ದರೂ ಅವರ ಸಮಕಾಲೀನರಿಗೆ ನೆರವು ನೀಡುತ್ತಿದ್ದರು. ಧರ್ಮಸ್ಥಳ, ಬೆಳ್ತಂಗಡಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ನಮ್ಮ ತಂದೆಯವರು 1928ಕ್ಕೆ ಭಾಗಮಂಡಲಕ್ಕೆ ಆಗಮಿಸಿದ್ದರು.
ನಾನು ಬಾಲ್ಯದಲ್ಲೇ ರಾಜಕೀಯದಲ್ಲಿ ತೊಡಗಿಸಿಕೊಂಡವ. ಆರಂಭದಲ್ಲಿ ಅಸ್ಪಶ್ಯತೆ ವಿರುದ್ಧದ ಹೋರಾಟದಲ್ಲಿ ಗುರುತಿಸಿಕೊಂಡಿದ್ದೆ. 1952ರಿಂದ 1965ರವರೆಗೆ ನಾನು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತನಾಗಿದ್ದೆ. 1967ರಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತವಾ ಯಿತು. ಆ ಸಂದರ್ಭ ನನಗೆ ಎ.ಕೆ. ಸುಬ್ಬಯ್ಯನವರ ಪರಿಚಯವಾಯಿತು. ದೊಡ್ಡ ಹೋರಾಟಗಾರನಾಗಿದ್ದ ಅವರು, ವೀರಾಜಪೇಟೆಯಲ್ಲಿ ಉಪ ಚುನಾವಣೆಯಲ್ಲಿ ಸೋಶಿಯಲಿಸ್ಟ್ ಪಾರ್ಟಿಯ ಅಭ್ಯರ್ಥಿ ಕರುಂಬಯ್ಯ ಎಂಬವರ ಗೆಲುವಿಗೆ ಕೆಲಸ ಮಾಡಿದ್ದರು. ಹಾಗಾಗಿ ಸಮಾಜವಾದಿಗಳ ಸಂಪರ್ಕ ನನಗೂ ಬೆಳೆಯಿತು. ಸಮಾಜವಾದದ ಬಗ್ಗೆ ತೀವ್ರ ಒಲವಿದ್ದ ನಾನು, ಲೋಹಿಯಾವಾದದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದೆ. ಜಿಲ್ಲೆಯಲ್ಲಿ ಸೋಶಿಯಲಿಸ್ಟ್ ಪಕ್ಷ ಕಟ್ಟಬೇಕೆಂಬ ಹಂಬಲವಿತ್ತಾದರೂ ನನಗೆ ಜನ ಬೆಂಬಲವಿರಲಿಲ್ಲ. ಹೀಗೆ ಸುಬ್ಬಯ್ಯನವರ ಸಂಪರ್ಕದಿಂದ ನಾನು ಜನ ಸಂಘ ಸೇರಿದೆ. ಆ ನನ್ನ ಬಳಿ ಆರೆಸ್ಸೆಸ್‌ನ ಕಾಶೀ ರಾವ್ ಎಂಬವರು ಆಗಾಗ್ಗೆ ಬರುತ್ತಿದ್ದರು. ಮಂಗಳೂರು, ಕೊಡಗು, ಮೈಸೂರು, ಹಾಸನ ಜಿಲ್ಲೆಗಳ ಆರೆಸ್ಸೆಸ್ ಪ್ರಚಾರಕಾಗಿದ್ದ ಅವರದ್ದು, ಮಂಗಳೂರು ಕಾರ್ಯಕ್ಷೇತ್ರವಾಗಿತ್ತು. ಕೊಡಗಿಗೆ ಬಂದಾಗಲೆಲ್ಲಾ ನನ್ನನ್ನು ಭೇಟಿಯಾಗುತ್ತಿದ್ದರು. ಆರೆಸ್ಸೆಸ್ ಬೆಳೆಸಲು ಜನ ಬೇಕಾಗಿತ್ತು. ಆದರೆ ನಾನು ಗಾಂಧೀಜಿ ಬಗ್ಗೆ ಒಲವಿದ್ದ ಕಾರಣ, ಆರೆಸ್ಸೆಸ್ ಸಿದ್ಧಾಂತಗಳನ್ನು ಒಪ್ಪುವುದು ಕಷ್ಟವಾಗಿತ್ತು. ನಾವು ರಾಜಕೀಯವಾಗಿ ಹೋರಾಟದಲ್ಲಿದ್ದರಿಂದ ಆರೆಸ್ಸೆಸ್ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಸುಬ್ಬಯ್ಯನವರ ಜತೆ ಹೋರಾಟಗಳು ನಡೆಯಿತು. 1969ರಲ್ಲಿ ಪಂಚಾಯತ್ ಚುನಾವಣೆ ಆರಂಭವಾಯಿತು. ಭಾಗಮಂಡಲ, ಕರಿಕೆ, ಚೆಟ್ಟಿಮಾನಿ, ಚಾರಿಮಣಿ ಸೇರಿ ನಾಲ್ಕು ಗ್ರಾಮಗಳಲ್ಲಿ ಜನಸಂಘದ ಅಭ್ಯರ್ಥಿಗಳು ಗೆದ್ದರು. ನಾನು ಆ ಸಂದರ್ಭ ಜನಸಂಘದ ಜಿಲ್ಲಾ ಕಾರ್ಯದರ್ಶಿಯಾಗಿದ್ದೆ. ಜನಸಂಘದಲ್ಲಿದ್ದ ಕಾರಣ ಆರೆಸ್ಸೆಸ್ ಸಂಪರ್ಕ ಸಾಮಾನ್ಯವಾಗಿತ್ತು. ಕೊಡಗಿಗೆ ಯಾರೇ ಆರೆಸ್ಸೆಸ್ ನಾಯಕರು ಬಂದರೂ, ಅವರು ತಲಕಾವೇರಿ, ಭಾಗಮಂಡಲಕ್ಕೆ ಬರುತ್ತಿದ್ದರು. ಆಗ ನಮ್ಮ ದೊಡ್ಡ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯೂ ಇತ್ತು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು ನಮ್ಮ ಮನೆಯಲ್ಲೇ ಇರುತ್ತಿದ್ದರು. ಬಳಿಕ ದೇಶದಲ್ಲಿ ತುತುಪರಿಸ್ಥಿತಿ ಹೇರಲ್ಪಟ್ಟಿತು. ಆಗ, ಜಯಪ್ರಕಾಶ್ ನಾರಾಯಣ್‌ರ ಹೆಸರಿನಲ್ಲಿ ಆಂದೋಲನ ಆರಂಭವಾಯಿತು. ಕರ್ನಾಟಕದಲ್ಲಿ ಅದರ ನೇತೃತ್ವ ಆರೆಸ್ಸೆಸ್ ಕೈಯಲ್ಲಿತ್ತು. ತುರ್ತು ಪರಿಸ್ಥಿತಿ ಸಂದರ್ಭ ಕೇವಲ ಆರೆಸ್ಸೆಸ್‌ನವರು ಮಾತ್ರ ಜೈಲು ಸೇರಿದ್ದಲ್ಲ. ಸೋಶಿಯಲಿಸ್ಟ್ ಗಳು ಕೂಡಾ ಜೈಲು ವಾಸ ಅನುಭವಿಸಿದ್ದರು. ಆದರೆ ಕೆಲಸ ಯಾರೋ ಮಾಡುವುದು ನೇತೃತ್ವ ತಾವು ವಹಿಸಿಕೊಳ್ಳುವುದರಲ್ಲಿ ಆರೆಸ್ಸೆಸಿಗರು ಚಾಣಾಕ್ಷರು. ತುರ್ತು ಪರಿಸ್ಥಿತಿ ಸಂದರ್ಭ ನಾನು ಐದು ತಿಂಗಳು ಜೈಲಿನಲ್ಲಿದ್ದೆ. 1967ರಿಂದ 1975ರವರೆಗೆ ನಾನು ಜನಸಂಘದಲ್ಲಿದ್ದೆ. 75ರಲ್ಲಿ ಚುನಾವಣೆ ಸಂದರ್ಭ ಜನಸಂಘ, ಸ್ವತಂತ್ರ ಪಾರ್ಟಿ, ಸಂಸ್ಥಾ ಕಾಂಗ್ರೆಸ್ ಸೇರಿ ಜನತಾ ಪಾರ್ಟಿ ಆಯಿತು. ಚುನಾವಣೆ ಘೋಷಣೆ ಆಗಿದ್ದರೂ ಪಕ್ಷಕ್ಕೆ ಚಿಹ್ನೆ ಇರಲಿಲ್ಲ. ಚರಣ್ ಸಿಂಗ್‌ರ ನೇಗಿಲು ಹೊತ್ತ ಚಿಹ್ನೆ ಇತ್ತು. ಅದು ಭಾರತೀಯ ಲೋಕ ದಳದ್ದು. ಚಿಹ್ನೆಯಿಂದ ಚುನಾವಣೆಯನ್ನು ಗೆಲ್ಲಲಾಗಿತ್ತು. ಮಂಗಳೂರಿನಲ್ಲಿ ಜನತಾ ಪಾರ್ಟಿಯಿಂದ ಸುಬ್ಬಯ್ಯ ಅಭ್ಯರ್ಥಿಯಾಗಿದ್ದರೆ, ಜನಾರ್ದನ ಪೂಜಾರಿ ಕಾಂಗ್ರೆಸ್ ಅಭ್ಯರ್ಥಿ. ಹಣ ಕೊಟ್ಟು, ಚಿನ್ನ ಕೊಟ್ಟು ಜನ ಸಹಕರಿಸಿದರು. ಕೊಡಗು ಜಿಲ್ಲೆಯ ಚುನಾವಣಾ ಉಸ್ತುವಾರಿ ನನ್ನದಾಗಿತ್ತು. ಸುಬ್ಬಯ್ಯನವರ ಜತೆ ಮಂಗಳೂರಿನಲ್ಲಿಯೂ ಪ್ರಚಾರ ನಡೆಸಿದ್ದೆ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಸೋಲಾಯಿತು. ಆರೆಸ್ಸೆಸಿಗರಿಗೆ ಪ್ರಾಮಾಣಿಕರಿಗೆ ಅಧಿಕಾರ ಬಂದರೆ ತಮ್ಮನ್ನು ಕಡೆಗಣಿಸುತ್ತಾರೆಂಬ ಭೀತಿ ಇತ್ತು. ಜನತಾ ಪಾರ್ಟಿಯನ್ನು ದೇವೇಗೌಡರ ಕೈಗೆ ನೀಡಲಾಯಿತು. ಎ. ಕೆ. ಸುಬ್ಬಯ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರೂ ಅವರೊಬ್ಬರು ಏನು ಮಾಡಲು ಸಾಧ್ಯ?. ಹಾಗಾಗಿ ಜನತಾ ಪಾರ್ಟಿಯನ್ನು ತಮ್ಮ ಕೈವಶಮಾಡಿಕೊಳ್ಳಲು ಮುಂದಾದರು. ಆ ಸಂದರ್ಭ ಜನಸಂಘ ಜನತಾಪಾರ್ಟಿಯಲ್ಲಿ ವಿಲೀನವಾಗಿತ್ತು. ಪ್ರತಿ ತಿಂಗಳು ಆರೆಸ್ಸೆಸ್ ಬೈಠಕ್ ನಡೆಯುತ್ತಿತ್ತು. ನಾನೂ, ವಿ. ಎಸ್. ಆಚಾರ್ಯರೂ ಭಾಗವಹಿಸುತ್ತಿದ್ದೆವು.
ಜಯಪ್ರಕಾಶ್ ನಾರಾಯಣರ ಸಮಗ್ರ ಗ್ರಾಮ ಸ್ವರಾಜ್ಯ, ಭ್ರಷ್ಟಾಚಾರ ನಿರ್ಮೂಲನ ಮಾಡುವ ತತ್ವತಡಿ ಜನತಾ ಪಾರ್ಟಿ ಸ್ಥಾಪನೆಯಾಯಿತು. ಆದರೆ ಇದು ಆರೆಸ್ಸೆಸ್‌ಗೆ ನುಂಗಲಾರದ ತುತ್ತಾಗಿತ್ತು. ಆರೆಸ್ಸೆಸ್‌ನಿಂದ ಬ್ರೈನ್‌ವಾಶ್ ಮಾಡುವ ಕಾರ್ಯ ನಡೆಯಿತು. ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟುವ ಕೆಲಸ ನಡೆಸಿದರು. ಆರೆಸ್ಸೆಸ್‌ನ ಹಿಂದುತ್ವದ ಅಜೆಂಡಾದಿಂದ ನಮ್ಮಂತಹ ಜಾತ್ಯತೀತ ನಿಲುವಿದ್ದವರು ಜನತಾಪಾರ್ಟಿಯಲ್ಲಿ ಕೆಲಸ ಮಾಡುವುದು ಅಸಾಧ್ಯವಾಗಿತ್ತು. ಜಾತ್ಯತೀತ ನಿಲುವಿನ ಬಗ್ಗೆ ಸ್ಪಷ್ಟತೆ ಇಲ್ಲದಂತಾಯಿತು. ಹಳೆ ಜನಸಂಘದವರನ್ನು ಕರೆದು ಸಭೆ ನಡೆಸಲಾಗುತ್ತಿತ್ತು. ಹೀಗೆ ಜನತಾಪಾರ್ಟಿಯೊಳಗೆ ಪ್ರತ್ಯೇಕ ಒಂದು ಗುಂಪು ರಚನೆಗೆ ಸುಬ್ಬಯ್ಯನವರು ಪ್ರಬಲ ವಿರೋಧಿಯಾಗಿದ್ದರು. ನಾನೂ ವಿರೋಧಿಸಿದ್ದೆ. ಬೈಠಕ್‌ಗೆ ಹೋಗುತ್ತಿದ್ದರೂ ಅಲ್ಲಿ ನಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದೆ. ಆದರೆ ನಮ್ಮ ಬಲ ಕಡಿಮೆಯಾಗಿತ್ತು. ನಮ್ಮನ್ನು ಕಡೆಗಣಿಸಲು ಆರಂಭಿಸಿದರು. ನನಗೆ ವಿಧಾನಸಭೆಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರೂ ದಿಲ್ಲಿಯಿಂದ ಅಭ್ಯರ್ಥಿ ಹೆಸರು ಬದಲಾಗಿ ಬಂದಿತ್ತು. ಅಡ್ವಾಣಿಯಿಂದಲೂ ನನಗೆ ಭರವಸೆ ದೊರಕಿತ್ತಾದರೂ ಸೀಟು ಮಾತ್ರ ನೀಡಲಿಲ್ಲ.
ಈ ಸಂದರ್ಭ ಸುಬ್ಬಯ್ಯನವರು ಮುಸ್ಲಿಂ ವಿರೋಧಿ ಎಂಬ ಅಪವಾದವನ್ನು ಬಿತ್ತಲಾಯಿತು. ಸೋಮವಾರ ಪೇಟೆ ಗಲಭೆಗೆ ಸುಬ್ಬಯ್ಯರು ಕಾರಣ, ಭಾಗಮಂಡಲ ಮಸೀದಿಗೆ ಸುಬ್ಬಯ್ಯ ನೇತೃತ್ವದಲ್ಲಿ ಹಂದಿ ಮಾಂಸ ಹಾಕಲಾಯಿತು ಎಂಬ ಅಪಪ್ರಚಾರ ಹಬ್ಬಲಾಯಿತು. ಯಾರೋ ಹೆಂಡ ಕುಡಿದು ಮಾಡಿದ ಪ್ರಮಾದವನ್ನು ನಮ್ಮ ತಲೆಗೆ ಕಟ್ಟಲಾಯಿತು. ಹೀಗೆ ಅಪಪ್ರಚಾರದಿಂದಾಗಿ ನಮ್ಮನ್ನು ಜನಪರ ಹೋರಾಟಗಳಿಂದ ಹಿಂದಕ್ಕೆ ಸರಿಸುವ ಪ್ರಯತ್ನ ನಡೆಯಿತು.
ಕೊಡಗಿನಲ್ಲಿ ನಮ್ಮ ಜನಸಂಘದ ಹಿಡಿತ ತಳಮಟ್ಟದಲ್ಲಿತ್ತು. ಸಂಘ ಸಂಸ್ಥೆಗಳು ನಮ್ಮ ಕೈಯಲ್ಲಿದ್ದವು. 1979ರಲ್ಲಿ ತಾಲೂಕು ಬೋರ್ಡ್ ಚುನಾವಣೆಯಲ್ಲಿ ಭಾಗಮಂಡಲ ಕ್ಷೇತ್ರದಿಂದ ನಾನು ತಾಲೂಕು ಬೋರ್ಡ್ ಸದಸ್ಯನಾಗಿದ್ದೆ. ಕರ್ನಾಟಕದಲ್ಲಿ ಜನತಾ ಪಾರ್ಟಿ ಅಧಿಕಾರಕ್ಕೆ ಬರಲಾಗದೆ ಪಕ್ಷ ಒಡೆದು ಹೋಯಿತು. 1980ರಲ್ಲಿ ಇಂದಿರಾ ಗಾಂಧಿ ಮತ್ತೆ ಪ್ರಧಾನಿಯಾದಾಗ ನಾವು ಜನತಾ ಪಾರ್ಟಿಯವರು ಜಗಜೀವನ್‌ರಾಂ ಅವರನ್ನು ಪದಾಧಿಕಾರಿಯನ್ನಾಗಿ ಮಾಡಿದರೆ, ಆರೆಸ್ಸೆಸ್‌ನವರು ಮುಂದೆ ಬರಲಿಲ್ಲ. ಉತ್ತರ ಪ್ರದೇಶದಲ್ಲಿ ಅಸ್ಪಶ್ಯತೆ ತೀವ್ರವಾಗಿದ್ದ ಕಾಲವದು. ದಲಿತರು ಪ್ರಧಾನ ಮಂತ್ರಿಯಾಗುವುದು ಅಷ್ಟು ಸುಲಭವಾಗಿರಲಿಲ್ಲ. 80ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ರಾಜಕೀಯ ಹೋರಾಟಕ್ಕೆ ಜಗಜೀವನ್‌ರಾಂರನ್ನು ಜನತಾಪಾರ್ಟಿ ಆಯ್ಕೆ ಮಾಡಿದರೆ, ಆರೆಸ್ಸೆಸ್‌ನವರು ಜನತಾಪಾರ್ಟಿಗೆ ಒಳಗಿಂದೊಳಗೇ ದ್ರೋಹ ಮಾಡಿದರು. 1983ರಲ್ಲಿ ಚುನಾವಣೆಯಲ್ಲಿ ಎ.ಕೆ. ಸುಬ್ಬಯ್ಯರಿಗೆ ಒಳಗಿಂದೊಳಗೆ ವಿರೋಧ ವ್ಯಕ್ತವಾಯಿತು. 1980ರಲ್ಲಿ ಕೆಲ ಸಮಯಕ್ಕೆ ಜಗಜೀವನ್‌ರಾಂ ಪ್ರಧಾನಿಯಾಗಿ ಸರಕಾರ ಕೆಲ ಸಮಯದಲ್ಲೇ ಬಿದ್ದು ಹೋದಾಗ, ನಾವೆಲ್ಲಾ ರಾಜಕೀಯ ನಿವೃತ್ತಿಗೆ ಮುಂದಾಗಿದ್ದೆವು. ಉತ್ತಮ ಸರಕಾರ ಮಾಡಿಯೂ ಪ್ರಯೋಜನ ಇಲ್ಲವೆಂದಾದಾಗ ಇನ್ನು ರಾಜಕೀಯ ಯಾಕೆ ಎಂಬ ಭಾವನೆ ನಮಗಾಗಿತ್ತು. ಭ್ರಮ ನಿರಸನ ಆಗಿತ್ತು. ಹೊಸದಿಲ್ಲಿಯಲ್ಲಿ ಸಭೆ ಕರೆದಾಗ ಒತ್ತಾಯಕ್ಕೆ ಅಲ್ಲಿಗೆ ತೆರಳಿದ್ದೆವು. ಅಲ್ಲಿ ವಾಜಪೇಯಿಯವರ ಭಾಷಣ ಕೇಳಿ ಆಕರ್ಷಿತರಾದ ನಮಗೆ ಮತ್ತೆ ಪಕ್ಷ ಮುಂದುವರಿಯಬಹುದೆಂಬ ಆಸೆ ಚಿಗುರೊಡೆಯಿತು. ಮತ್ತೆ ಬಿಜೆಪಿಗೆ ನಾವು ಸೇರಿದೆವು. ಕರ್ನಾಟಕದಲ್ಲಿ ಸುಬ್ಬಯ್ಯರನ್ನು ಸಂಚಾಲಕರನ್ನಾಗಿಸಿ ಅವರ ನೇತೃತ್ವದಲ್ಲಿ ಪಕ್ಷ ಕಟ್ಟಲಾಯಿತು. ಆದರೆ ಅವರನ್ನು ಸಂಚಾಲಕರನ್ನಾಗಿಸಿದಾಗಲೂ ವಿರೋಧ ವ್ಯಕ್ತವಾಗಿತ್ತು. ಸುಬ್ಬಯ್ಯನವರನ್ನು ಬೆಳೆಯಲು ಬಿಡಬಾರದೆಂಬುದು ಆರೆಸ್ಸೆಸ್ ತಂತ್ರವಾಗಿತ್ತು. ಆದರೆ ಸುಬ್ಬಯ್ಯನವರಿಗೆ ಜನಬೆಂಬಲವಿತ್ತು. ಕರ್ನಾಟಕದಲ್ಲಿ ಬಿಜೆಪಿ ಸ್ಥಾಪನೆಗೆ ಮೊದಲು ದಿಲ್ಲಿಯಲ್ಲಿ ಸಭೆ ಆದಾಗ ನಾನು, ವಿ. ಎಸ್. ಆಚಾರ್ಯ ಸೇರಿದಂತೆ ಕೆಲವರು ವಾಜಪೇಯಿ ಬಳಿ ನಿಯೋಗ ತೆರಳಿ, ಕರ್ನಾಟಕದಲ್ಲಿ ಬಿಜೆಪಿ ಕಟ್ಟಬೇಕಾದರೆ, ಹಳೆ ಜನಸಂಘದ ನಾಯಕರಿಂದ ಆಗದು. ಎ.ಕೆ. ಸುಬ್ಬಯ್ಯನವರಿಂದ ಮಾತ್ರ ಅದು ಸಾಧ್ಯ ಎಂದು ಮನವರಿಕೆ ಮಾಡಿದೆವು. ಎ.ಕೆ. ಸುಬ್ಬಯ್ಯನವರನ್ನೇ ಸಂಚಾಲಕರನ್ನಾಗಿ ಮಾಡಲಾಯಿತು.