ನಾವು ಕಳಕೊಳ್ಳುವ ಮೊದಲೇ ತನ್ನನ್ನು ತಾನು ಕಳೆದುಕೊಂಡ ಜಾರ್ಜ್
ಜಾರ್ಜ್ ಫೆರ್ನಾಂಡಿಸ್ ನನ್ನ ಜೀವನದಲ್ಲಿ ಮೊದಲ ಬಾರಿಗೆ ಪ್ರವೇಶಿಸಿದ್ದು, ನನಗೆ ಆರು ಅಥವಾ ಏಳು ವರ್ಷವಿದ್ದಾಗ, ಅಸೂಯೆಯ ಕಾರಣಕ್ಕಾಗಿ. ಒಮ್ಮೆ ಅವರು ದಿಲ್ಲಿಗೆ ಬಂದಿದ್ದಾಗ ನನ್ನ ತಂದೆ, ಜಾರ್ಜ್ ಅವರನ್ನು ಭೇಟಿ ಮಾಡಲು, ನನ್ನನ್ನು ಮನೆಯಲ್ಲೇ ಬಿಟ್ಟು ಅಣ್ಣ ನಿರಂಜನ್ ಅವರನ್ನು ಕರೆದೊಯ್ದಿದ್ದರು. ನನ್ನ ಅಣ್ಣನ ಆಟೋಗ್ರಾಫ್ ಪುಸ್ತಕದಲ್ಲಿ ದೇವನಾಗರಿ ಲಿಪಿಯಲ್ಲಿ ಅವರು ನೀಡಿದ್ದ ಹಸ್ತಾಕ್ಷರ ಪ್ರತಿದಿನ ನನ್ನನ್ನು ಹೊರಗಿಟ್ಟದ್ದನ್ನು ನೆನಪಿಸುತ್ತಿತ್ತು. ಆದರೆ ಕ್ರಮೇಣ ನನಗೆ ಜಾರ್ಜ್ ಅವರ ಪರಿಚಯವಾದದ್ದು, ಜೀವಮಾನವಿಡೀ ಸಮಾಜವಾದಿಯಾಗಿದ್ದ, 1942ರ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ನನ್ನ ತಂದೆ ಕೆ.ಜಿ.ರಾಮಕೃಷ್ಣನ್ ಅವರಿಂದಾಗಿ.
ರಾಮ ಮನೋಹರ ಲೋಹಿಯಾ ಅವರ ಸ್ನೇಹಿತ ಹಾಗೂ ಅಚ್ಚುಮೆಚ್ಚಿನವರಾಗಿದ್ದ ನನ್ನ ತಂದೆ, ಭಾರತದ ರಾಜಕೀಯಕ್ಕೆ ಜಾರ್ಜ್ ಫೆರ್ನಾಂಡಿಸ್ ಪ್ರಸ್ತುತವಾಗಲು ಮೂಲ ಕಾರಣವೆಂದರೆ ಅವರ ಅದ್ಭುತ ಹಾಗೂ ಅಸಾಧಾರಣ ಪ್ರತಿಭೆ ಎಂದು ಹೇಳಿದ್ದರು. ಯಶಸ್ಸಿನ ರಹಸ್ಯ ಅಡಗಿರುವುದು ಹೇಗೆ ನಾಯಕನಾಗಿರಬೇಕು ಎಂಬ ಜ್ಞಾನ ಹೊಂದಿರುವುದರಲ್ಲಲ್ಲ; ಬದಲಾಗಿ ಹೇಗೆ ನಾಯಕನನ್ನು ಅನುಸರಿಸಬೇಕು ಎನ್ನುವುದರಲ್ಲಿ. ಮೊದಲು ಪ್ಲೆಸಿಡ್ ಡಿಮೆಲ್ಲೊ ಹಾಗೂ ನಂತರ ಲೋಹಿಯಾ ಜತೆ ಫೆರ್ನಾಂಡಿಸ್ ಹೊಂದಿದ್ದ ಸಂಬಂಧ ಸಮೀಕರಣದಿಂದ ಇದು ಸ್ಪಷ್ಟವಾಗುತ್ತದೆ.
1960 ಹಾಗೂ 70ರ ದಶಕದಲ್ಲಿ ಸಮಾಜವಾದಿ ಮುಖಂಡರ ದೊಡ್ಡ ಸಮೂಹವೇ ಇತ್ತು. ಈ ಘಟಾನುಘಟಿಗಳಲ್ಲಿ ಸೌಮ್ಯ ಸ್ವಭಾವದ ಮಧು ಲಿಮಯೆ ಹಾಗೂ ಮುನ್ನುಗ್ಗುವ ಛಾತಿಯ ಜಾರ್ಜ್ ಫೆರ್ನಾಂಡಿಸ್ ಭಿನ್ನವಾಗಿ ಕಾಣುತ್ತಿದ್ದರು. ಲೋಹಿಯಾ ಅವರ ಅಸಾಧಾರಣ ಛಾತಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಡುವ ರಾಜಕೀಯ ಶಕ್ತಿಯನ್ನು ಇವರಲ್ಲಿ ಗುರುತಿಸಬಹುದಾಗಿತ್ತು. ಸಂಘಟಿತ ಕಾರ್ಮಿಕ ಚಳವಳಿ ಮತ್ತು ಇದರ ಹಿನ್ನೆಲೆಯಾಗಿದ್ದುದು ಜಾರ್ಜ್ ಫೆರ್ನಾಂಡಿಸ್ ಎನ್ನುವ ಅಂಶ ಇಲ್ಲಿ ಮುಖ್ಯವಾಗುತ್ತದೆ.
ಬೆಂಗಳೂರಿನಲ್ಲಿ ಸೆಮಿನರಿಯಾಗಿದ್ದ ಜಾರ್ಜ್ ಅವರು ಮುಂಬೈ ಕಾರ್ಮಿಕ ಸಂಘಟನೆಗಳ ನೇತಾರರಾದ ಪಯಣ ರೋಚಕ. ಹಿಂದಿ, ಮರಾಠಿ ಹಾಗೂ ಇತರ ಭಾಷೆಗಳಲ್ಲಿದ್ದ ಅದ್ಭುತ ಪ್ರಾವೀಣ್ಯ, ಮೈತ್ರಿಯನ್ನು ರೂಪಿಸುವ ಹಾಗೂ ಒಡೆಯುವ ಸಾಮರ್ಥ್ಯ, ಎಲ್ಲಕ್ಕಿಂತ ಹೆಚ್ಚಾಗಿ ದೀರ್ಘಾವಧಿ ನಿಷ್ಠೆಯನ್ನು ಸ್ಥಾಪಿಸಬಲ್ಲ ಅಯಸ್ಕಾಂತೀಯ ಶಕ್ತಿ, ಹೀರೊಯಿಸಂ ಇದಕ್ಕೆ ಕಾರಣ.
1967ರಲ್ಲಿ ಮುಂಬೈ ದಕ್ಷಿಣ ಕ್ಷೇತ್ರದಲ್ಲಿ ಎಸ್.ಕೆ.ಪಾಟೀಲ್ ಅವರ ಆಘಾತಕಾರಿ ಸೋಲು, ಜಾರ್ಜ್ ಫೆರ್ನಾಂಡಿಸ್ ಅವರನ್ನು ಲೋಕಸಭೆಗೆ ಕರೆತಂದಿತು. ಜತೆಗೆ ಅವರ ಸಂಘಟನಾ ಪ್ರತಿಭೆ ಕೇವಲ ಕಾರ್ಮಿಕ ಸಂಘಟನೆಗೆ ಸೀಮಿತವಲ್ಲ ಎನ್ನುವುದನ್ನು ತೋರಿಸಿಕೊಟ್ಟಿತು. ಜಾರ್ಜ್ ರಾಷ್ಟ್ರ ರಾಜಕಾರಣದಲ್ಲಿ ಸ್ಥಾನ ಪಡೆದರು. 1974ರ ರೈಲ್ವೆ ಪ್ರತಿಭಟನೆ ಹಾಗೂ ಅವರ ಸೈದ್ಧಾಂತಿಕ ಕಾಮ್ರೇಡ್ಗಳ ವಿಶ್ವಾಸಘಾತಕತನದ ಕಥೆ ಮುಂದಿನ ಪೀಳಿಗೆಗೆ ಪ್ರತ್ಯೇಕವಾಗಿ ಹೇಳುವಂಥದ್ದು. ಮಧು ಲಿಮಯೆ ತಮ್ಮ ಹಳೆಯ ಕಾಮ್ರೇಡ್ನ ಪ್ರೀತಿಯಿಂದ ನನಗೆ ವೈಯಕ್ತಿಕವಾಗಿ ಹೇಳಿದ ಒಂದು ಅಂಶವನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸುತ್ತೇನೆ. ‘‘ಮುಷ್ಕರವನ್ನು ಸಂಘಟಿಸುವ ಜಾರ್ಜ್ ಸಾಮರ್ಥ್ಯದ ಬಗ್ಗೆ ನಿಮಗೆಲ್ಲರಿಗೂ ಗೊತ್ತು. ಆದರೆ ಅದನ್ನು ವಾಪಸು ಪಡೆಯುವ ಕಾರ್ಯತಂತ್ರ ಹಾಗೂ ಸಾಹಸದ ಬಗ್ಗೆ ನಿಮಗೆ ಗೊತ್ತೇ?’’
ಹದಿಹರೆಯದವರಾಗಿ ನಮ್ಮ ರಾಜಕೀಯ ದೀಕ್ಷೆ ಎಂದರೆ 1975ರ ತುರ್ತು ಪರಿಸ್ಥಿತಿ. ಜಾರ್ಜ್ ಅದರ ಹೀರೊ. ತಮ್ಮ ಅಸಾಮಾನ್ಯ ಸಂಪರ್ಕದಿಂದಾಗಿ, ಜೂನ್ 25ರಂದು ಮಧ್ಯರಾತ್ರಿ ತುರ್ತು ಪರಿಸ್ಥಿತಿ ಘೋಷಣೆಗೆ ಮುನ್ನವೇ ಅದರ ಸುಳಿವು ಜಾರ್ಜ್ ಅವರಿಗಿತ್ತು. ಬೆಸ್ತರ ವೇಷದಲ್ಲಿ ತಪ್ಪಿಸಿಕೊಂಡು ದಿಢೀರನೇ ಅವರು ಭೂಗತರಾದರು. ಬಳಿಕ 1976ರ ಜೂನ್ 10ರಂದು ಅವರನ್ನು ಬಂಧಿಸಲಾಯಿತು. ಅಂದಿನ ಆಡಳಿತದಲ್ಲಿದ್ದವರಿಗೆ ಹಾಗೂ ಅವರ ವಿರೋಧಿಗಳಿಗೂ ಜಾರ್ಜ್ ಬಂಧನ ಎಷ್ಟು ಪ್ರಮುಖವಾಗಿತ್ತೆಂದರೆ, ಶಕ್ತಿಶಾಲಿ ಮಾಧ್ಯಮಗಳು ಕೂಡಾ ಈ ವಿಷಯವನ್ನು ಪ್ರಸಾರ ಮಾಡಲಾಗಲಿಲ್ಲ. ಸ್ವತಃ ನನಗೇ ಇದು ತಿಳಿದಿದ್ದು, ಬಹುದ್ದೂರ್ ಶಾ ಜಾಫರ್ ಮಾರ್ಗದಲ್ಲಿದ್ದ ಸ್ಪಾಟ್ ನ್ಯೂಸ್ನಿಂದ. ಆಗ ಎಲ್ಲವನ್ನೂ ಕಳೆದುಕೊಂಡ ಭಾವನೆ ನನ್ನಲ್ಲಿ ಮೂಡಿತು.
ಬೇಡಿ ತೊಡಿಸಿದರೂ, ದನಿಯಡಗಿಸಲು ಸಾಧ್ಯವಾಗಲಿಲ್ಲ:
ಆದರೆ ಜಾರ್ಜ್ ಫೆರ್ನಾಂಡಿಸ್ ಅವರು ಮುಕ್ತರಾಗಿದ್ದಾಗ ಇದ್ದುದಕ್ಕಿಂತ ಬಂದಿಯಾಗಿದ್ದಾಗಲೇ ಹೆಚ್ಚಿನ ಶಕ್ತಿಶಾಲಿ ಎನಿಸಿದರು. ಅವರನ್ನು ಪ್ರತಿ ಬಾರಿ ನ್ಯಾಯಾಲಯದಲ್ಲಿ ಹಾಜರುಪಡಿಸುವುದು ಕೂಡಾ ಅವರ ರಾಜಕೀಯ ಪ್ರಚಾರವಾಗಿ ಮಾರ್ಪಟ್ಟಿತು.
ಆ ಪ್ರತಿಭಟನೆಯ ಛಾತಿ, ಜಯಪ್ರಕಾಶ್ ನಾರಾಯಣ್ ಅವರ ನಾಯಕತ್ವದ ನೈತಿಕ ಬಲ ಹಾಗೂ ಕೆಲ ಸಾಂದರ್ಭಿಕ ಅಂಶಗಳು 1977ರ ಚುನಾವಣಾ ಘೋಷಣೆಗೆ ಕಾರಣವಾಯಿತು. ಮೊದಲು ಇದು ತುರ್ತು ಪರಿಸ್ಥಿತಿಯನ್ನು ಕ್ರಮಬದ್ಧಗೊಳಿಸುವ ಹುನ್ನಾರ ಎನಿಸಿ, ಜಾರ್ಜ್ ಹಾಗೂ ಮಧು ಲಿಮಯೆ ಚುನಾವಣಾ ಬಹಿಷ್ಕಾರವನ್ನು ಪ್ರತಿಪಾದಿಸಿದರೂ, ಬಳಿಕ ಅದನ್ನು ಬದಲಿಸಿದರು.
ಚುನಾವಣಾ ಪ್ರಚಾರದ ವೇಳೆ ಜಾರ್ಜ್ ಜೈಲಿನಲ್ಲಿದ್ದರು. ಕಾಲೇಜಿನಿಂದ ಮನೆಗೆ ಮರಳುವ ವೇಳೆ ನಾನು ಬಸ್ಸಿನಿಂದ ಇಳಿಯುತ್ತಿದ್ದ ಆ ಸ್ಥಳ ಡ್ಯೂಪ್ಲಿಯೆಕ್ಸ್ ಮಾರ್ಗದ ಮನೆಸಂಖ್ಯೆ 5ರ ಹೊರಭಾಗದಲ್ಲಿತ್ತು. ಅದು ಆಗ ಮೊರಾರ್ಜಿ ದೇಸಾಯಿಯವರ ನಿವಾಸ. ಆ ದಿನಗಳು ಭಿನ್ನ ಹಾಗೂ ನಾಯಕರಿಗೆ ಹಿಂದೆ ಭದ್ರತಾ ಪಡೆಗಳ ಗೋಡೆ ಇರಲಿಲ್ಲ. ಮೊರಾರ್ಜಿ ದೇಸಾಯಿಯವರನ್ನು ನೇರವಾಗಿ ಹೋಗಿ ಭೇಟಿ ಮಾಡಬಹುದಿತ್ತು. ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿದ ಜಾರ್ಜ್ ಫೆರ್ನಾಂಡಿಸ್ ಪರ ಏಕೆ ಹೇಳಿಕೆ ನೀಡಿಲ್ಲ ಎಂದು ನಾನು ಅವರನ್ನು ಕೇಳಿದ್ದೆ. ಹಿಂಸೆಯನ್ನು ನಾನು ಬೆಂಬಲಿಸುವುದಿಲ್ಲ ಎಂಬ ಉತ್ತರ ಶುಭ್ರ ಬಿಳಿಬಣ್ಣದ ಉಡುಪು ಧರಿಸಿದ್ದ ಅವರಿಂದ ಬಂತು. ಅವರ ತೀರ್ಪಿನ ಗುಣಮಟ್ಟವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಹಾಗೂ ತೀರಾ ಎಳೆವಯಸ್ಸಿನ ನಾನು ಭಾರವಾದ ಹೃದಯದೊಂದಿಗೆ ಮನೆಗೆ ವಾಪಸಾಗಿದ್ದೆ.
ಭಾರತದ ಜನ ಈ ನಿರ್ಬಂಧದಿಂದ ಹೈರಾಣಾಗಿದ್ದರು. ಆದರೆ ಜಾರ್ಜ್ ಅವರ ವ್ಯಕ್ತಿತ್ವವೇ ಭಿನ್ನ. ಅವರು ಬಿಹಾರದ ಮುಝಪ್ಫರ್ಪುರದಿಂದ ಸುಮಾರು ನಾಲ್ಕು ಲಕ್ಷ ಮತಗಳ ಅಂತರದ ಜಯ ಸಾಧಿಸಿದರು. ಬಂದಿಯಾಗಿದ್ದ ಈ ವ್ಯಕ್ತಿ ಮತ್ತೆ ಮ್ಯಾಜಿಕ್ ಮಾಡಿದರು.
ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದ ವೇಳೆಗೆ ಹಿರಿಯ ಕಮ್ಯುನಿಸ್ಟ್ ಮುಖಂಡ ಎ.ಕೆ.ಗೋಪಾಲನ್ ನಿಧನರಾದರು. ಆ ದಿನ ಮುಂಜಾನೆಯಷ್ಟೇ ಬಿಡುಗಡೆಯಾಗಿದ್ದ ಜಾರ್ಜ್ ಫೆರ್ನಾಂಡಿಸ್, ವಿಠಲ್ಭಾಯ್ ಪಟೇಲ್ ಹೌಸ್ ಮುಂದಿನ ಹುಲ್ಲುಹಾಸಿನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಹಿಂದಿಯಲ್ಲಿ ಮಾತನಾಡಿದರು. ಅವರು ಗೋಪಾಲನ್ ಅವರನ್ನು ಕೊನೆಯ ಬಾರಿ ಭೇಟಿ ಮಾಡಿದ್ದು ಭೂಗತರಾಗಿದ್ದ ಅವಧಿಯಲ್ಲಿ. ಭಾರತದ ಶಕ್ತಿಶಾಲಿ ಕಾರ್ಮಿಕ ಸಂಘಟನೆಗಳು ತುರ್ತು ಪರಿಸ್ಥಿತಿಯಲ್ಲಿ ಹೇಗೆ ನಲುಗುತ್ತಿವೆ ಎಂಬ ಬಗ್ಗೆ ಚರ್ಚಿಸಿದ್ದರು. ಅಂತಿಮವಾಗಿ ಕಾರ್ಮಿಕ ಸಂಘಟನೆಗಳು ಸೊರಗಿರುವುದು ರಾಜಕೀಯ ಸಿದ್ಧಾಂತಕ್ಕಿಂತ ಹೆಚ್ಚಾಗಿ ಆರ್ಥಿಕ ಕಾರಣಗಳಿಂದ ಎಂಬ ನಿರ್ಧಾರಕ್ಕೆ ಅವರು ಬಂದರು. ಆರಂಭದಲ್ಲಿ ಸಂಪುಟ ಸೇರಲು ಜಾರ್ಜ್ ನಿರಾಕರಿಸಿದರೂ, ಬಳಿಕ ಕೈಗಾರಿಕಾ ಸಚಿವರಾಗಿ ಕೋಕಕೋಲಾವನ್ನು ಹೊಡೆದೋಡಿಸಿದ್ದು ನನಗೆ ನೆನಪಿದೆ. ಬಳಿಕ ನಿಧಾನವಾಗಿ ಅವರ ಸಹವರ್ತಿ ಸಮಾಜವಾದಿ ಧುರೀಣ ನಡೆಸುತ್ತಿದ್ದ 77 ಹೆಸರಿನ ತಂಪುಪಾನೀಯ ಈ ಜಾಗವನ್ನು ಆಕ್ರಮಿಸಿಕೊಂಡಿತು. ಸಂಸತ್ತಿನಲ್ಲಿ ಮೊರಾರ್ಜಿ ಸರಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ ರೀತಿಯನ್ನೂ ನಾನು ನೆನಪಿಗೆ ತಂದುಕೊಳ್ಳುತ್ತೇನೆ. (ಜಾರ್ಜ್ ಅವರ ಸಹೋದರ ಮೈಕೆಲ್ ನನ್ನ ಸ್ನೇಹಿತರಾಗಿದ್ದರಿಂದ ಸಂದರ್ಶಕರ ಗ್ಯಾಲರಿಯಲ್ಲಿ ನಾನು ಕಲಾಪ ವೀಕ್ಷಿಸುತ್ತಿದ್ದೆ). ಮರುದಿನವೇ ಆತ್ಮಹತ್ಯಾಕಾರಿ ಮಧ್ಯಂತರ ಚುನಾವಣೆ ಘೋಷಣೆಯಾಯಿತು. ಇದು ಇತಿಹಾಸ ಮರುಕಳಿಸಲು ಕಾರಣವಾಯಿತು. ರಾಜಕೀಯ ಕೈದಿಗಳ ಬಗೆಗಿನ ಅವರ ಸಾರ್ವಜನಿಕ ನಿಲುವಿನ ಬದಲಾಗಿ, ಅಧಿಕಾರದಲ್ಲಿದ್ದಾಗ ಅವರು ಸ್ವಯಂ ಬದ್ಧತೆ ಮತ್ತು ಮಾನವಹಕ್ಕುಗಳನ್ನು ಬೆಂಬಲಿಸುವ ನಿಲುವನ್ನು ನಾನು ಉಲ್ಲೇಖಿಸುತ್ತೇನೆ. ಇದನ್ನು ನಾನು ಉಲ್ಲೇಖಿಸಲು ಮುಖ್ಯ ಕಾರಣವೆಂದರೆ, ಅವರು ಬಿಜೆಪಿ ಜತೆ ಗುರುತಿಸಿಕೊಂಡ ಮತ್ತು 2002ರ ನರಮೇಧದ ಬಳಿಕವೂ ಬಿಜೆಪಿಗೆ ಬೆಂಬಲ ಮುಂದುವರಿಸಿದ ಕ್ರಮದ ಬಗ್ಗೆ ನನಗೆ ಇರುವ ಅತೀವ ಬೇಸರಕ್ಕೆ ಇದು ಪೂರಕವಾಗಿದೆ.2003ರಲ್ಲಿ ಅವರ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರನ್ನು ಭೇಟಿ ಮಾಡಿ ಮಾತನಾಡುವ ಅವಕಾಶ ಸಿಕ್ಕಾಗ, ಇನ್ನೆಂದೂ ಅವರೊಂದಿಗೆ ಮಾತನಾಡಲು ಬಯಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಆದರೆ ನೀವು ಈಗ ನನ್ನೊಂದಿಗೆ ಮಾತನಾಡುತ್ತಿದ್ದೀರಿ ಎಂದು ಆತ್ಮೀಯತೆಯಿಂದ ಹೆಗಲ ಮೇಲೆ ಕೈಹಾಕಿಕೊಂಡು ಹೇಳಿದ್ದರು. ಆದರೆ ನಾನು ಅವರನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡಿದ್ದು ಅದೇ ಕೊನೆಯ ಬಾರಿ.
1966ರಲ್ಲಿ ಬುಡಕಟ್ಟು ಜನಾಂಗದ ಮುಖಂಡ ಹಾಗೂ ಪ್ರಭಾವಿ ರಾಜಕಾರಣಿ ಪ್ರವೀರ್ ಚಂದ್ರ ಬಂಜ್ದೇವ್, ಬಸ್ತರ್ನಲ್ಲಿ ಹತ್ಯೆಯಾದಾಗ, ಜನರ ಸಿಟ್ಟು ನಿಮ್ಮ ಮೇಲಿದೆ ಎಂದು ಸಂಸದರನ್ನು ಉದ್ದೇಶಿಸಿ ಜಾರ್ಜ್ ಹೇಳಿದ್ದರು. 2002ರಲ್ಲೂ ಜಾರ್ಜ್ ಹಾಗೆಯೇ ಇದ್ದಾರೆಯೇ ಎಂದು ನನ್ನ ಸಹೋದರ ನನಗೆ ನೆನಪಿಸಿದ್ದರು.
ಇಷ್ಟಾಗಿಯೂ ಇದಕ್ಕೂ ಮುನ್ನ ಹಲವು ವಿಷಯಗಳಿಗೆ ಅವರೇ ನನಗೆ ಮಾರ್ಗದರ್ಶಿಯಾಗಿದ್ದರು. 1978ರಲ್ಲಿ ಸಚಿವರಾಗಿದ್ದಾಗ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ, ನಕ್ಸಲ್ ಕೈದಿಗಳ ಪರವಾಗಿ ಧ್ವನಿ ಎತ್ತಿದ್ದರು. ಮರಣ ದಂಡನೆಯ ಪ್ರತಿ ಪ್ರಕರಣವನ್ನೂ ಅವರ ಬಳಿಗೆ ಒಯ್ಯುತ್ತಿದ್ದೆ. ವಿದ್ಯಾ ಜೈನ್ ಹತ್ಯೆ ಪ್ರಕರಣದ ಬಾಡಿಗೆ ಹಂತಕರಾಗಿದ್ದ ಕರ್ತಾರ್ ಹಾಗೂ ಉಜಾಗರ್ ಅವರಿಗೆ ಮರಣ ದಂಡನೆ ಘೋಷಣೆಯಾಗಿ, ಈ ಕೃತ್ಯದ ಮೂಲ ಸಂಚುಕೋರರು ಬಿಡುಗಡೆಯಾಗಿದ್ದಾಗ, ಜಾರ್ಜ್ ಸಚಿವರಾಗಿದ್ದರು. ಆಗ ವರ್ಗ ಪಕ್ಷಪಾತ ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು. ಈ ಅಂಶವನ್ನು ರಾಷ್ಟ್ರಪತಿ ಹಾಗೂ ಸಚಿವ ಸಂಪುಟದ ಗಮನಕ್ಕೆ ಜಾರ್ಜ್ ತಂದರು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಇಂದಿರಾಗಾಂಧಿ ಹತ್ಯೆ ಪ್ರಕರಣದಲ್ಲಿ, ಖೇಹರ್ ಸಿಂಗ್ ಹತ್ಯೆ ವಿರುದ್ಧ ದೊಡ್ಡ ಅಭಿಯಾನವನ್ನೇ ಅವರು ಕೈಗೊಂಡರು. ಇಂದಿಗೂ ಆಂಧ್ರಪ್ರದೇಶದಲ್ಲಿ ಇಬ್ಬರು ಶಿಕ್ಷಿತ ದಲಿತರು ಜೀವಂತ ಇದ್ದಾರೆ ಎಂದರೆ ಇದಕ್ಕೆ ಕಾರಣ ಜಾರ್ಜ್ ಫೆರ್ನಾಂಡಿಸ್.
1996ರ ಗುಡ್ಫ್ರೈಡೆ ದಿನ ಮಧ್ಯರಾತ್ರಿ ಗಲ್ಲಿಗೇರಿಸುವ ಐದು ಗಂಟೆ ಮೊದಲು ಅವರ ಜೀವದಾನಕ್ಕಾಗಿ ದೇವೇಗೌಡ ಸಂಪುಟವನ್ನು ಮನವೊಲಿಸುವಲ್ಲಿ ಜಾರ್ಜ್ ಫೆರ್ನಾಂಡಿಸ್ ಯಶಸ್ವಿಯಾಗಿದ್ದರು. ದೇವೇಗೌಡ ಪ್ರಧಾನಿಯಾಗಿ ತೆಗೆದುಕೊಂಡ ಕೊನೆಯ ನಿರ್ಧಾರವೆಂದರೆ, ಈ ಮರಣ ದಂಡನೆಯನ್ನು ಅನಿರ್ದಿಷ್ಟವಾಗಿ ಮುಂದೂಡಿದ್ದು ಎಂದು ಅವರು ನನಗೆ ಕರೆ ಮಾಡಿ ತಿಳಿಸಿದ್ದರು. (ಅಂತಿಮವಾಗಿ ಕೆ.ಆರ್. ನಾರಾಯಣನ್ ರಾಷ್ಟ್ರಪತಿಯಾಗಿದ್ದಾಗ ಗಲ್ಲುಶಿಕ್ಷೆ ಕುರಿತ ಕೊನೆಯ ಆದೇಶ ಹೊರಬಿದ್ದಿತು).
ಪಂಜಾಬ್ ಸಂಘರ್ಷದ ವೇಳೆ ವಿನಾಕಾರಣ ಬಂಧಿತರಾಗಿದ್ದ ಅಸಂಖ್ಯಾತ ಮಂದಿ ಇವರ ಮಧ್ಯಪ್ರವೇಶದಿಂದಾಗಿ ಬಿಡುಗಡೆಯಾಗಿದ್ದರು. ಕಾಶ್ಮೀರ ವಿಷಯದಲ್ಲಿನ ಅವರ ಪ್ರಯತ್ನವನ್ನು ಕೇಂದ್ರ ಸರಕಾರ ನಿರ್ಲಕ್ಷಿಸಿದ ಪರಿಣಾಮವಾಗಿ ಇಂದಿಗೂ ಸಮಸ್ಯೆ ಮುಂದುವರಿದಿದೆ. ನಾಗಾ, ಟಿಬೆಟಿಯನ್, ಬರ್ಮನ್ನರು ಮತ್ತು ಇತರ ರಾಜಕೀಯವಾಗಿ ಗುರಿ ಮಾಡಲಾದ ಹೋರಾಟಗಾರರು ಸಚಿವರಾಗಿದ್ದಾಗಲೂ ಅವರ ನಿವಾಸದಲ್ಲಿ ಆಶ್ರಯ ಪಡೆದಿದ್ದರು. ಅವರ ವಾಸದ ಮನೆ ಕೇವಲ ಎರಡು ಕೊಠಡಿಯದ್ದಾಗಿತ್ತು. ಉಳಿದಂತೆ ಅವರ ಬಂಗಲೆಯ ಇತರ ಕೊಠಡಿಗಳು, ಕಾರ್ಮಿಕ ಮುಖಂಡರಿಗೆ, ಪಕ್ಷದ ಕಾರ್ಯಕರ್ತರಿಗೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರರಿಗೆ ಆಶ್ರಯತಾಣವಾಗಿದ್ದವು. ಅವರಿಗೆ ರಕ್ಷಣಾ ಪರಿಧಿ ಇರಲಿಲ್ಲ ಹಾಗೂ ತಮ್ಮ ಫಿಯೆಟ್ ಕಾರನ್ನು ಸ್ವತಃ ಅವರೇ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು.
1978ರಲ್ಲಿ ಚಿಕ್ಕಮಗಳೂರು ಉಪ ಚುನಾವಣೆ ಇಂದಿರಾಗಾಂಧಿಯವರನ್ನು ಮತ್ತೆ ಸಂಸತ್ತಿಗೆ ಕರೆತಂದಿತು. 1977ರ ಚುನಾವಣೆಯಲ್ಲಿ ಉತ್ತರದಲ್ಲಿ ಹೀನಾಯವಾಗಿ ಸೋತಿದ್ದ ಅವರು, ಮರುಪ್ರವೇಶಕ್ಕೆ ದಕ್ಷಿಣವನ್ನು ಅವಲಂಬಿಸಿದ್ದರು. ಇದಲ್ಲದೇ, ಕಾಂಗ್ರೆಸ್ ಕರ್ನಾಟಕದಲ್ಲಿ ಆಡಳಿತ ಸೂತ್ರ ಹಿಡಿದಿತ್ತು. ಇಂದಿರಾ ವಿರುದ್ಧ ವೀರೇಂದ್ರ ಪಾಟೀಲ್ ಪರ ಜನತಾ ಪಕ್ಷದ ಪ್ರಚಾರ ಕಾರ್ಯದ ಸಾರಥ್ಯವನ್ನು ಜಾರ್ಜ್ ವಹಿಸಿದ್ದರು. ಅವರ ಸರಳತೆ ಜನಸಾಮಾನ್ಯರಿಗೆ ಅವರು ಸಚಿವರೆನ್ನುವುದನ್ನೂ ಮರೆಸಿತು. ಇಡೀ ವಾತಾವರಣದಲ್ಲಿ ಅವರು ಮಿಂಚು ಹರಿಯುವಂತೆ ಮಾಡಿದರು. ಇಂದಿರಾ ಗೆದ್ದರೂ, ಕರ್ನಾಟಕದಲ್ಲಿ ಜನತಾ ಪಕ್ಷದ ಬಲವರ್ಧನೆಗೆ ಜಾರ್ಜ್ ನೆರವಾದರು.
ತೆಹಲ್ಕಾ ಕುಟುಕು ಕಾರ್ಯಾಚರಣೆ ಬಳಿಕ 2001ರಲ್ಲಿ ಅದು ಅತಿರಂಜಿತ ಎಂದು ನಾನು ಬರೆದಿದ್ದೆ. ಪ್ರತಿದಿನ ದೇಶದಲ್ಲಿ ದುರ್ಬಲ ವರ್ಗದವರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ಮಾಧ್ಯಮ ಗಮನಿಸದಿರುವುದು ನಾಚಿಕೆಗೇಡು ಎಂದು ಬರೆದಿದ್ದೆ. ಫೆರ್ನಾಂಡಿಸ್ ಭ್ರಷ್ಟ ಎನ್ನುವುದನ್ನು ಯಾರೂ ನಂಬಲಾರರು. ತೆಹಲ್ಕಾ ಕೂಡಾ ವೈಯಕ್ತಿಕವಾಗಿ ಅವರ ವಿರುದ್ಧ ಏನೂ ಆರೋಪ ಮಾಡಿರಲಿಲ್ಲ. ಗಡಿಭಾಗದಲ್ಲಿ ಹಾಗೂ ಇತರೆಡೆಗಳಲ್ಲಿದ್ದ ಸೇನೆಯ ಸಿಬ್ಬಂದಿಗೆ ಕೂಡಾ ಅವರ ಭೇಟಿಯ ಬಗ್ಗೆ ರೋಮಾಂಚನವಾಗುತ್ತಿತ್ತು. ಅವರ ಅಗತ್ಯಗಳಿಗೆ ಸಚಿವರು ಗಮನ ಹರಿಸುತ್ತಿದ್ದ ಬಗ್ಗೆ ಪುಳಕಿತರಾಗುತ್ತಿದ್ದರು. ಆದರೆ ದುರಂತವೆಂದರೆ ಅವರು ಭ್ರಷ್ಟರಲ್ಲ; ಬದಲಾಗಿ ತಮ್ಮತನವನ್ನು ಕಳೆದುಕೊಂಡರು. ಧೈರ್ಯ ಹಾಗೂ ಸಾಹಸದ ಶಕ್ತಿಕೇಂದ್ರ, ಅದ್ಭುತ ಪ್ರತಿಭೆ ಹಾಗೂ ಶಕ್ತಿಶಾಲಿ ಎನಿಸಿಕೊಂಡಿದ್ದ ಅವರು ಭಾರತೀಯತೆಯ ಕಲ್ಪನೆಯ ಮೇಲಿನ ಅತಿದೊಡ್ಡ ಹೊಡೆತವನ್ನು ಪ್ರತಿನಿಧಿಸುವ ಬಿಜೆಪಿಯನ್ನು ಸಕ್ರಮಗೊಳಿಸುವ ಪ್ರಯತ್ನದಲ್ಲಿ ವಿಶ್ವಾಸದ್ರೋಹ ಎಸಗಿದರು ಎಂಬ ಭಾವನೆ ನನ್ನದು.
ಚಾಣಾಕ್ಷತನ ಹಾಗೂ ಶಕ್ತಿ ಎನ್ನುವ ಎರಡು ಶಬ್ದಗಳು ಜಾರ್ಜ್ ಫೆರ್ನಾಂಡಿಸ್ ಅವರಿಗೆ ಅನ್ವರ್ಥ ಎನಿಸಿವೆ. ನನ್ನ ತಂದೆ ಸದಾ ನನ್ನಲ್ಲಿ ಹೇಳುತ್ತಿದ್ದಂತೆ ಜಾರ್ಜ್ ಅವರ ಬಗೆಗಿನ ಅವರ ಆಕ್ಷೇಪಣೆ ಎಂದರೆ, ಜಾರ್ಜ್ ಅವರ ದೊಡ್ಡ ಸಮಸ್ಯೆ ಅವರ ಅಗಾಧ ಶಕ್ತಿ ಹಾಗೂ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿಯದಿರುವುದು. ಇತ್ತೀಚಿನ ದಿನಗಳಲ್ಲಿ ಅವರು ಅನಾರೋಗ್ಯದ ಕಾರಣದಿಂದ ಮಾತನಾಡಲು ಅಸಮರ್ಥರಾದ ಬಗ್ಗೆ ಬೇಸರ ಇರುವಂತೆಯೇ, ದಶಕದ ಹಿಂದಿನ ಅವರ ಉದ್ದೇಶಪೂರ್ವಕ ಮೌನದ ಬಗ್ಗೆಯೂ ಅಗಾಧ ಬೇಸರವಿದೆ. ಇದಕ್ಕೆ ಕಾರಣ ಅವರ ನಿರ್ಣಯಿಸುವ ಶಕ್ತಿ ಕುಸಿದದ್ದು. ಆದರೆ ಅವರ ರಾಜಕೀಯ ವೃತ್ತಿಯ ಅಂತಿಮ ಹಂತದ ವಿಚಾರಕ್ಕೆ ಬಂದಾಗ, ಸಮಗ್ರ ಸಮಾಜವಾದದ ಇತಿಹಾಸದಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರು ಡಾಕ್ಟರ್ ಲೋಹಿಯಾ ಅವರ ಅತ್ಯಂತ ಕ್ರಿಯಾಶೀಲ ಸಹವರ್ತಿಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.
ಕೃಪೆ: thewire.in
(ಈ ಲೇಖನ ಮೂಲವಾಗಿ 2018ರ ಜೂನ್ 4ರಂದು ಪ್ರಕಟವಾಗಿತ್ತು.)