ಮಹಾಬಲ ಶೆಟ್ಟಿಯವರ ಆರೆಸ್ಸೆಸ್ ಅಂತರಂಗ
ಮಹಾಬಲ ಶೆಟ್ಟಿ ದಂಪತಿ
ಭಾಗ-2
ಸುಳ್ಳುಗಳ ಮೂಲಕ ದ್ವೇಷ ಬಿತ್ತನೆ!
ಆರೆಸ್ಸೆಸ್ಗೆ ಸೇರುವಾಗಲೇ ಸುಳ್ಳು ಹಾಗೂ ದ್ವೇಷದ ಭಾವನೆಗಳನ್ನು ಮನದಲ್ಲಿ ಬಿತ್ತಲಾಗುತ್ತದೆ. ಸಾಮಾನ್ಯ ಕಾರ್ಯಕರ್ತರಿಗೆ ಸುಳ್ಳುಗಳ ಮೂಲಕ ದ್ವೇಷ ಭಾವನೆಯನ್ನು ಬೆಳೆಸುವುದು ಆರೆಸ್ಸೆಸ್ ಜಾಯಮಾನ. ಮುಸಲ್ಮಾನರು ದಾಳಿ ಮಾಡಿದ್ದಾರೆ, ಕ್ರೈಸ್ತರು ಮತಾಂತರ ಮಾಡುತ್ತಾರೆ ಎಂಬ ದ್ವೇಷದ ಭಾವನೆ ಮೂಡಿಸುವ ಕೆಲಸ ಆ ಸಮಯದಲ್ಲೇ ಇತ್ತು. ಅದು ಇಂದು ಪರಾಕಾಷ್ಠೆಯನ್ನು ತಲುಪಿದೆ. ಮೇಲ್ನೋಟಕ್ಕೆ ರಾಷ್ಟ್ರೀಯತೆಯ ಸೋಗು, ಅಖಂಡ ಭಾರತ, ಗೋಹತ್ಯೆ ಕುರಿತಂತೆಯೂ ದ್ವೇಷ ಭಾವನೆಯನ್ನು ಬಿತ್ತಲಾಗುತ್ತಿತ್ತು. ಬೈಠಕ್ನಲ್ಲಿ ಹೇಳುವುದು ಒಂದು, ಬಹಿರಂಗ ಸಭೆಯಲ್ಲಿ ಹೇಳುವುದು ಒಂದು. ಇದು ಆರೆಸ್ಸೆಸ್ ಜಾಯಮಾನ!
ತಮ್ಮ ಅಗತ್ಯಕ್ಕೆ ಒಬ್ಬ ವ್ಯಕ್ತಿಯನ್ನು ಯಾವ ರೀತಿಯಿಂದಲಾದರೂ ಪ್ರಚಾರದ ಮೂಲಕ ದೊಡ್ಡ ವ್ಯಕ್ತಿಯನ್ನಾಗಿ ಎತ್ತರಕ್ಕೇರಿಸುವುದರಲ್ಲಿ ಆರೆಸ್ಸೆಸ್ಸಿಗರು ನಿಸ್ಸೀಮರು. ಅದೇ ತಮಗೆ ಬೇಡದವರನ್ನು ತುಳಿಯುವು ದರಲ್ಲೂ ಎತ್ತಿದ ಕೈ. ಆರಂಭದಲ್ಲಿ ಜನಸಂಘದಲ್ಲಿದ್ದುದು ಸೀಮಿತವಾದ ಜನ. ತುರ್ತು ಪರಿಸ್ಥಿತಿಯ ಬಳಿಕ ನಾನು ಬೈಠಕ್ನ ಚರ್ಚೆಯ ವೇಳೆ ಕೆಲವೊಂದು ವಿಚಾರಗಳನ್ನು ವಿರೋಧಿಸಿದೆ. ಅದೊಂದು ಬೈಠಕ್ನಲ್ಲಿ ನಾನು ‘‘ಇಲ್ಲಿ ಗಾಂಧೀಜಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದೇವೆ. ಶಾಖೆಯ ಪ್ರಾತಃಸ್ಮರಣೆಯಲ್ಲಿ ಗಾಂಧೀಜಿಯನ್ನು ಹೊಗಳುತ್ತೇವೆ. ಇದು ದ್ವಂದ್ವ ನೀತಿ ಅಲ್ಲವೇ’’ ಎಂದು ಪ್ರಶ್ನಿಸಿದರೆ, ಬೈಠಕ್ನಲ್ಲಿ ಉತ್ತರ ಸಿಗುವುದಿಲ್ಲ. ಆಮೇಲೆ ನಿಮ್ಮನ್ನು ಕರೆಯಲಾಗುತ್ತದೆ ಎಂದು ಹೇಳಿ ಬಾಯಿ ಮುಚ್ಚಿಸಿದ್ದರು. ಆಮೇಲೆ ಕರೆಸಿ, ಅದು ಹಾಗಲ್ಲ ಹೀಗೆಂದು ತಮ್ಮದೇ ಕೆಲವೊಂದು ನಿದರ್ಶನಗಳನ್ನು ನೀಡಿ ಸುಮ್ಮನಾಗಿಸುತ್ತಾರೆ. ಸ್ವಂತಿಕೆ ಎನ್ನುವುದು ಅವರಲ್ಲಿಲ್ಲ. ಸೀಮಿತವಾದ ವಿಚಾರಧಾರೆ. ರಾಷ್ಟ್ರೀಯತೆ, ಹಿಂದುತ್ವ ಹೊರತುಪಡಿಸಿ ಸಮಾಜ ಸುಧಾರಣೆಯಾಗಬೇಕೆಂಬ ಆಶಯ ಅವರಲ್ಲಿಲ್ಲ.
ಭೂ ಮಸೂದೆ, ಬ್ಯಾಂಕ್ ರಾಷ್ಟ್ರೀಕರಣಕ್ಕೂ ವಿರೋಧ. ಅಷ್ಟೇ ಯಾಕೆ ದೂರದರ್ಶನ, ದೂರದರ್ಶನ ಇಂದಿರಾ ಗಾಂಧಿ ವರ್ಚಸ್ಸಿಗಾಗಿ ತರಲಾಗುತ್ತದೆ ಎಂಬ ಪುಕಾರು ಹಬ್ಬಿಸಿದ್ದರು. ಟೆಲಿಫೋನ್ ಆರಂಭಿಸಿದಾಗಲೂ ವಿರೋಧ ವ್ಯಕ್ತವಾಗಿತ್ತು. ರಾಜೀವ್ ಗಾಂಧಿಯವರ ಅವಧಿಯಲ್ಲಿ ಮೊಬೈಲ್ ಕ್ರಾಂತಿಗೆ ಮುಂದಾದಾಗ ಈ ಆರೆಸ್ಸೆಸ್ನವರು ವಿರೋಧಿಸಿದ್ದರು. ರಾಜ್ಯದಲ್ಲಿ ಮೂಢನಂಬಿಕೆ ವಿರುದ್ಧ ಕಾನೂನು ತರಲು ಅದೆಷ್ಟು ಕಷ್ಟ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಶಬರಿಮಲೆ ವಿಷಯಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪನ್ನು ಬಯ್ಯೆಜಿ ಜೋಶಿ ಸ್ವಾಗತಿಸುತ್ತಾರೆ. ಬಿಜೆಪಿಯ ಭಾಸ್ಕರ ಪಿಳ್ಳೆ ಸ್ವಾಗತಿಸಿ, ಕೊನೆಗೆ ಉಲ್ಟಾ ಹೊಡೆಯುತ್ತಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ವಿಚಾರ ಕಳೆಗುಂದಿದಾಗ ಶಬರಿ ಮಲೆ ವಿಷಯವನ್ನೇ ತಮ್ಮ ದಾಳವನ್ನಾಗಿಸಿರುವುದು ಈ ವಿಚಾರದ ಹಿಂದಿರುವ ಸತ್ಯ. ವಿಷಬೀಜ ಬಿತ್ತಿ ಸ್ಫೋಟ ಮಾಡಿ ದುರ್ಲಾಭ ಪಡೆಯುವ ತಂತ್ರಗಾರಿಕೆ ರಾಜಕೀಯವನ್ನು ಆರೆಸ್ಸೆಸ್ ಪ್ರೇರಿತ ಬಿಜೆಪಿ ಮಾಡುತ್ತಿದೆ. ನೋಟು ನಿಷೇಧಿಸಬೇಕಿರುವುದು ರಿಸರ್ವ್ ಬ್ಯಾಂಕ್. ಅದು ನಮ್ಮ ದೇಶದ ಹಣಕಾಸು ಸಚಿವರಿಗೆ ಗೊತ್ತಿಲ್ಲದ ಆಡಳಿತಶಾಹಿಯಲ್ಲಿ ನಾವಿದ್ದೇವೆ. ಸರ್ವಾಧಿಕಾರದ ಆಡಳಿತದಲ್ಲಿ ನಾವಿದ್ದೇವೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಆರೆಸ್ಸೆಸ್ಸಿಗರು ಕರಪತ್ರ ಹೊರಡಿಸುತ್ತಿದ್ದರು. ಇವರನ್ನು ಹೊಗಳಿಕೊಂಡು ಬರೆಯುವುದು, ಜೈಲು ಭರೋ ಕಾರ್ಯಕ್ರಮದಲ್ಲಿ 50 ಜನ ಭಾಗವಹಿಸಿದ್ದರೆ, 5000 ಜನ ಭಾಗವಹಿಸಿದ್ದರು ಎಂಬ ಕರಪತ್ರಗಳ ಮೂಲಕ ಜನರನ್ನು ಪ್ರಚೋದಿಸುವ ಕೆಲಸವನ್ನು ಮಾಡಲಾಗುತ್ತಿತ್ತು.
1978ಅವಧಿಯಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭ ನಾನು ಜೈಲಿನಲ್ಲಿದ್ದ ಸಂದರ್ಭದಲ್ಲಿಯೇ ನನಗೆ ಈ ಆರೆಸ್ಸೆಸ್ಸಿಗರ ಬ್ರೈನ್ವಾಶ್ನ ಬಗ್ಗೆ ಜ್ಞಾನೋದಯವಾಗಿದ್ದು. ಬೆಂಗಳೂರು ಜೈಲಿನಲ್ಲಿ ಹಂಚಿಕೆಯಾಗಿದೆ ಎನ್ನಲಾದ ಕರಪತ್ರವೊಂದು ನನಗೂ ದೊರಕಿತ್ತು. ಆರೆಸ್ಸೆಸ್ಸಿನ ಮುಖ್ಯಸ್ಥ ಬಾಳಾ ಸಾಹೇಬ್, ಇಂದಿರಾ ಗಾಂಧಿಗೊಂದು ಪತ್ರ ಬರೆದು, ‘‘ನೀವು ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದೀರಿ. ನೀವು ಆರೆಸ್ಸೆಸ್ನ ನಿರ್ಬಂಧ ತೆರವುಗೊಳಿಸಿದರೆ, ನಾವು ನಿಮ್ಮ 20 ಅಂಶ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತೇವೆ’’ ಎಂಬ ಪತ್ರ ಚರಣ್ ಸಿಂಗ್ ಗುಂಪಿನವರಿಗೆ ದೊರಕಿತ್ತು. ಅದು ಅನುಯಾಯಿಗಳಿಗೆ ಕಳುಹಿಸಿದ್ದು, ನನಗೂ ಸಿಕ್ಕಿತ್ತು. ಒಂದು ಕಡೆ ಕಾರ್ಯಕರ್ತರನ್ನು ಜೈಲಿಗೆ ತುಂಬಿಸುವುದು ಮತ್ತೊಂದು ಕಡೆ ಬೆಂಬಲ ನೀಡುವ ದ್ವಂದ್ವ ನೀತಿ! ಇಂತಹ ಪರಿಸ್ಥಿತಿಯಲ್ಲಿ ಇವರನ್ನು ನಂಬುವುದು ಹೇಗೆ?
ಬಿಹಾರದ ಗಲಾಟೆ ಸಂದರ್ಭದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೀಸಲಾತಿ ಬದಲಾವಣೆಯ ಕೂಗೆಬ್ಬಿಸಿದ್ದರು. ಮೀಸಲಾತಿಗೆ ಒಂದು ಕಾಲ ಮಿತಿ ಎಂಬುದಾಗಿ ಅಂಬೇಡ್ಕರ್ರವರೇ ಹೇಳಿದ್ದಾರೆಂಬ ಮಾತನ್ನು ಎತ್ತಿ ಹಾಕಿದ್ದರು. ಮುಖ್ಯವಾಗಿ ಮೀಸಲಾತಿಯ ಬದ್ಧ ವಿರೋಧಿಗಳವರು. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಗಿರಿಜನರು ಲಾಭ ಪಡೆಯುತ್ತಾರೆ. ಇಂದಿರಾ ಕಾಲದಲ್ಲಿ ಭೂಮಸೂದೆ ಜಾರಿ ಆದಾಗಲೂ ವಿರೋಧ. ಅದರ ಲಾಭ ದಕ್ಷಿಣ ಕನ್ನಡದಲ್ಲಿ ಪಡೆದಿದ್ದೇ ಹಿಂದುಳಿದ ವರ್ಗದ ಬಿಲ್ಲವರು. ಆದರೆ ಅವರೆಲ್ಲಾ ಇಂದು ಆರೆಸ್ಸೆಸ್, ಬಿಜೆಪಿಯಲ್ಲಿದ್ದಾರೆ. ಅಂದು ಆರೆಸ್ಸೆಸ್ನವರು ಭೂ ಮಸೂದೆ ಕಾಯ್ದೆಯನ್ನು ವಿರೋಧಿಸಿದ್ದಾರೆ, ಮತ್ಯಾಕೆ ಈಗ ಅಲ್ಲಿದ್ದೀರಿ ಎಂದರೆ, ಹಿಂದುತ್ವ. ಇಲ್ಲಿ ಹಿಂದೂ ಮತ್ತು ಹಿಂದುತ್ವದ ವ್ಯತ್ಯಾಸವೇ ಗೊತ್ತಿಲ್ಲ.
ಆರೆಸ್ಸೆಸ್ ವಿರೋಧಿಸುವ ಗಟ್ಟಿಗರು ಕಾಂಗ್ರೆಸ್ನಲ್ಲೂ ಇಲ್ಲ!
ದ.ಕ. ಜಿಲ್ಲೆಯಲ್ಲಿ ಇಂದು ಆರೆಸ್ಸೆಸ್ನ ಅಟ್ಟಹಾಸ ಮುಂದುವರಿದಿದೆ. 1930ರಲ್ಲಿ ಇಲ್ಲಿ ಆರೆಸ್ಸೆಸ್ ಬೇರೂರಿತ್ತು. ಅಲ್ಪಸ್ವಲ್ಪ ಮಂದಿ ಮಾತ್ರ ಆ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ನಗರ ಪ್ರದೇಶಗಳಲ್ಲಿ ಶಾಖೆಗಳು ನಡೆಯುತ್ತಿತ್ತು. 1967ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಂ ಗಲಾಟೆ ನಡೆದಿತ್ತು. ಆಗ ಬೆಳೆದು ಬಂದವರು. ಮಂಗಳೂರು ನಗರ ಪಾಲಿಕೆಯಲ್ಲಿ 12 ಮಂದಿ ಜನಸಂಘದವರು ಗೆದ್ದರು. ಅವರನ್ನು ವಿರೋಧಿಸುತ್ತಿದ್ದವರು ಕಮ್ಯುನಿಸ್ಟರು. ಇಲ್ಲಿ ಕಮ್ಯುನಿಸ್ಟರು ಪ್ರಬಲವಾಗಿದ್ದರು. ಸಮಾಜವಾದಿಗಳು ಸೈದ್ಧ್ದಾಂತಿಕವಾಗಿ ಆರೆಸ್ಸೆಸನ್ನು ವಿರೋಧಿಸಿದರೆ, ಕಾಂಗ್ರೆಸಿಗರು ಮಾತ್ರ ಕೇವಲ ಚುನಾವಣೆಯ ಸಂದರ್ಭದಲ್ಲಿ ಅವರು ಕೋಮುವಾದಿಗಳು ಎಂಬ ಹೇಳಿಕೆಯ ವಿರೋಧವನ್ನಷ್ಟೇ ನೀಡುತ್ತಿದ್ದರು. ಭವಿಷ್ಯದಲ್ಲಿ ಮುಂದೆ ಏನಾಗಬಹುದು ಎಂಬ ಬಗ್ಗೆ ಕಾಂಗ್ರೆಸ್ನವರಿಗೆ ಕಾಳಜಿಯೇ ಇಲ್ಲ. 2013ರ ವಿಧಾನಸಭಾ ಚುನಾವಣೆ ಬಳಿಕ 7 ಸ್ಥಾನಗಳು ಕಾಂಗ್ರೆಸ್ ಕೈಯಲ್ಲಿತ್ತು. ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಎಲ್ಲವೂ ಕಾಂಗ್ರೆಸ್ ಕೈಯಲ್ಲಿತ್ತು. ಸಾಕಷ್ಟು ಇಲ್ಲಿ ಹಿಂದೂ-ಮುಸ್ಲಿಂ ಗಲಭೆಗಳು ನಡೆದರೂ ಅದನ್ನು ವಿರೋಧ ವ್ಯಕ್ತಪಡಿಸಿದ ರಮಾನಾಥ ರೈ, ಯು.ಟಿ.ಖಾದರ್, ಸ್ವಲ್ಪ ಮಟ್ಟಿಗೆ ಐವನ್ ಡಿ’ಸೋಜಾರನ್ನು ಹೊರತುಪಡಿಸಿದರೆ, ಉಳಿದಂತೆ ಯಾರೂ ಕಠೋರವಾದ ಶಬ್ದದಿಂದ ವಿರೋಧಿಸಲೇ ಇಲ್ಲ. ತಳ ಮಟ್ಟದಲ್ಲಿ ಆರೆಸ್ಸೆಸನ್ನು ವಿರೋಧಿಸುವವರು ಯಾರಿದ್ದಾರೆ?
ನಾನೂ ಆರೆಸ್ಸೆಸ್ ವಶೀಕರಣದಲ್ಲಿದ್ದೆ
ನಾನೂ ಐದಾರು ವರ್ಷ ಆರೆಸ್ಸೆಸ್ನ ವಶೀಕರಣದಲ್ಲಿದ್ದೆ. ಆರೆಸ್ಸೆಸ್ ಎಂದರೆ ನನ್ನ ಪಾಲಿಗೆ ಅವರು ಹೇಳಿದ್ದೆಲ್ಲವೂ ಸತ್ಯ ಎಂದು ನಂಬುವಂತಹ ಸ್ಥಿತಿಯಾಗಿತ್ತು. ಒಂದು ರೀತಿಯ ಮದ್ಯವಸನಿಗಳಂತೆ ನಾನು ರಾಜಕೀಯ ವ್ಯಸನಕ್ಕೆ ತುತ್ತಾಗಿದ್ದೆ. ನಾನಾಗ ಸುಮಾರು 35 ವರ್ಷದವನಾಗಿದ್ದೆ. ಆದರೆ, ಬರಬರುತ್ತಾ ಅನುಭವಗಳು, ತುರ್ತು ಸಂದರ್ಭದಲ್ಲಿ ಜೈಲಿನಲ್ಲಿದ್ದ ವೇಳೆ ಚಿಂತನಾತ್ಮಕ ಬರಹಗಳ ಓದು, ಇತಿಹಾಸ ಪುಸ್ತಕಗಳ ಓದು ಆರೆಸ್ಸೆಸ್ನ ವಶೀಕರಣದಿಂದ ನನ್ನನ್ನು ಸತ್ಯವನ್ನು ಅರಿಯುವಂತೆ ಮಾಡಿತು. ಬರುಬರುತ್ತಾ ನಾನು ಆ ವಶೀಕರಣದಿಂದ ಹೊರಬರಲು ಸಾಧ್ಯವಾಯಿತು. ಆರೆಸ್ಸೆಸ್ನ ಮತ್ತೊಂದು ಕುತಂತ್ರವೆಂದರೆ, ಪಕ್ಷದಲ್ಲಿ ಅವರಿಗೆ ಯಾರಾದರೂ ಬೇಡ ಎಂದಾದರೆ ತಕ್ಷಣ ಅವರನ್ನು ಹೊರಗಟ್ಟುವುದಿಲ್ಲ. ಬದಲಾಗಿ ಹಿಂಬಾಲಕರಲ್ಲಿ ಅವರ ನಾಯಕನ ಬಗ್ಗೆ ಕೆಟ್ಟದಾಗಿ ಅಪಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಾರೆ. ಅವರಲ್ಲಿ ಗೊಂದಲ ಸೃಷ್ಟಿಸಿ ಅವರಿಂದ ದೂರವಾಗುವ ಹಾಗೆ ಮಾಡುವುದು. ಎ.ಕೆ. ಸುಬ್ಬಯ್ಯರನ್ನು ಪಕ್ಷದಿಂದ ಹೊರ ಹಾಕುವ ಸಂದರ್ಭದಲ್ಲೂ ಇದೇ ಕುತಂತ್ರ ಉಪಯೋಗಿಸಲಾಗಿತ್ತು.
(ಮುಂದುವರಿಯುವುದು)