ಮಹಾಬಲ ಶೆಟ್ಟಿಯವರ ಆರೆಸ್ಸೆಸ್ ಅಂತರಂಗ
ಭಾಗ-3
ಹಳ್ಳಿಗಳಲ್ಲಿ ಆರೆಸ್ಸೆಸ್‌ನವರದ್ದೇ ಕಾರುಬಾರು. ಒಂದು ಸಣ್ಣ ಗಲಾಟೆಯಾದರೂ ಆರೆಸ್ಸೆಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪೊಲೀಸ್ ಠಾಣೆಗೆ ತೆರಳುತ್ತಾರೆ. ಒತ್ತಡ ತರುತ್ತಾರೆ. ಅನೈತಿಕ ಪೊಲೀಸ್‌ಗಿರಿ ನಡೆಸುತ್ತಾರೆ. ಪೊಲೀಸ್ ಇಲಾಖೆಯಲ್ಲಿ ನಮ್ಮವರು ಇದ್ದಾರೆ ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ.
ಕಾಂಗ್ರೆಸ್‌ನವರು ಕಳ್ಳರು, ಅಯೋಗ್ಯರು, ಅಸಮರ್ಥರು, ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪದಲ್ಲಿ ಬಿಜೆಪಿಯವರಿಗೆ ಕೇಂದ್ರದಲ್ಲಿ ಅಧಿಕಾರ ಸಿಕ್ಕಿದ್ದಲ್ಲವೇ? ಹಾಗಿರುವಾಗ ನೀವು ಅಧಿಕಾರಕ್ಕೆ ಬಂದು ಏನು ಮಾಡಿದ್ದೀರಿ? ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಲ್ಲಿ ಅದೆಷ್ಟನ್ನು ಅನುಷ್ಠಾನಗೊಳಿಸಿದ್ದೀರಿ? ಕಪ್ಪು ಹಣ ತರುವುದಾಗಿ ಹೇಳಿದ್ದೀರಿ? ಆ ಹಣವನ್ನು ಜನರ ಖಾತೆಗೆ ಹಾಕುವುದಾಗಿ ಹೇಳಿದ್ದೀರಿ? ಜನಧನ್ ಎಂಬ ಹೆಸರಿನಲ್ಲಿ ಸಂಗ್ರಹಿಸಲಾದ ಹಣ ಬಡವರ ಹಣವಲ್ಲವೇ? ಖಾತೆ ಇದ್ದವರ ಹೆಸರಿಗೆ ಹಣ ಬೀಳುತ್ತದೆ ಎಂಬ ಪುಕಾರಿನ ಮೇರೆಗೆ ಕೆಲವರು ಮೂರ್ನಾಲ್ಕು ಖಾತೆಗಳನ್ನು ಜನಧನ್ ಹೆಸರಿನಲ್ಲಿ ತೆರೆದಿದ್ದಾರೆ. ಮಂಗಳೂರಿನದ್ದೇ ಮಾತನಾಡೋಣ. ನಂತೂರು- ಪಂಪ್‌ವೆಲ್ ಸೇತುವೆ 10 ವರ್ಷಗಳು ಕಳೆದಿವೆ. ಕಾಮಗಾರಿ ಇನ್ನೂ ಆಗಿಲ್ಲ. ಬಿಜೆಪಿ ಮಾಡಿರುವ ಅಭಿವೃದ್ಧಿ ಏನು? ಇದು ನನ್ನ ಪ್ರಶ್ನೆ.
ರಾಜಕೀಯವಾಗಿ ಆರೆಸ್ಸೆಸ್ ಅದೇನೇ ಮಾಡಿದರೂ, ಸಾಮಾಜಿಕವಾಗಿ ಅದು ಯುವಕರ ಮನಸ್ಸಿನಲ್ಲಿ ದ್ವೇಷದ ಭಾವನೆಗಳನ್ನು ಬೆಳೆಸುವ ಬಗ್ಗೆ ಬೇಸರವಿದೆ.
1983ರಲ್ಲಿ ನನಗೆ ಭಾಗಮಂಡಲದಿಂದ ವಿಧಾನಸಭೆಗೆ ಟಿಕೆಟ್ ಸಿಗಬಾರದೆಂದು ಬಹಳ ಪ್ರಯತ್ನ ಆಯಿತು. ಸುಬ್ಬಯ್ಯರ ಮೇಲಿನ ದ್ವೇಷದಿಂದ ನನ್ನನ್ನೂ ರಾಜಕೀಯದಿಂದ ಮುಗಿಸುತ್ತಾರೆಂಬುದು ಸ್ಪಷ್ಟವಾಗಿತ್ತು. ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಧ್ಯಕ್ಷ ಪ್ರತಿನಿಧಿಯಾಗಿ ನಾನು ಆಯ್ಕೆಯಾಗಬೇಕಿತ್ತು. ಶೇ. 99ರಷ್ಟು ಮಂದಿಯಿಂದ ನನ್ನ ಆಯ್ಕೆಗೆ ಸಹಮತವಿತ್ತು. ಅಂತಹ ಬೆಂಬಲಿಗರ ತಂಡವನ್ನೂ ನಾನು ಕಟ್ಟಿದ್ದೆ. ಆದರೆ ನಾನು ಸುಬ್ಬಯ್ಯನವರ ಬಲಗೈಯಂತಿದ್ದ ಕಾರಣ ನಾನು ಆಯ್ಕೆಯಾಗಬಾರದು ಎಂಬುದು ಆರೆಸ್ಸೆಸ್‌ನ ಮೂಲದಿಂದ ಅಪ್ಪಣೆಯಾಗಿತ್ತು. ಹೀಗಾಗಿ ನಮ್ಮ ಪೈಕಿಯವರನ್ನೇ ಒಬ್ಬರನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಲಾಯಿತು. ನಾನು ಆ ಆಯ್ಕೆಯಲ್ಲಿ ನಾಲ್ಕು ಮತಗಳಿಂದ ಸೋಲು ಅನುಭವಿಸಿದ್ದೆ. 24 ಗಂಟೆ ಪಕ್ಷಕ್ಕಾಗಿ ದುಡಿದು ಪ್ರತಿನಿಧಿಯಾಗುವುದಕ್ಕೂ ಅವಕಾಶ ಇಲ್ಲ ಎಂದಾಗುವಾಗ ಈ ಕುತಂತ್ರದ ಬಗ್ಗೆ ನನಗೆ ಅರಿವಾಯಿತು. ಸುಬ್ಬಯ್ಯನ ಜನ ಆತ. ಆತನನ್ನು ಕಳುಹಿಸಿದರೆ, ನಮಗೆ ತೊಂದರೆಯಾಗುತ್ತದೆ ಎಂದು ನನ್ನ ಜತೆಗಿದ್ದವರನ್ನೇ ಬ್ರೈನ್‌ವಾಶ್ ಮಾಡಲಾಗಿತ್ತು.
78ರ ಚುನಾವಣೆಯಲ್ಲಿ ನಾನು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗುವುದು ತಪ್ಪಿ ಹೋದಾಗ, ನಾನೂ ಒಬ್ಬ ಮಾದರಿ ಶಾಸಕನಾಗಿ ಸೇವೆ ನೀಡಬೇಕೆಂಬ ಛಲ ನನ್ನಲ್ಲಿ ಹುಟ್ಟಿತ್ತು. ಅದಕ್ಕಾಗಿ ನಾನು ಆ ಸಮಯದಿಂದ ಪಕ್ಷದ ಹೆಸರಿನಲ್ಲಿ ಭಾಗಮಂಡಲದ ಗ್ರಾಮ, ತಾಲೂಕು ಮಟ್ಟದಿಂದ ಪಕ್ಷ ಸಂಘಟನೆ ಕಾರ್ಯ ಮಾಡಿದ್ದೆ. ದಲಿತರು, ಅಲ್ಪಸಂಖ್ಯಾತರು ನನ್ನ ಜತೆಗಿದ್ದರು. ಬೂತ್ ಮಟ್ಟದ ಕಾರ್ಯಕರ್ತರನ್ನು ನಾನು ಕಟ್ಟಿ ಬೆಳೆಸಿದ್ದೆ.
ವ್ಯಕ್ತಿಸ್ವಾತಂತ್ರಕ್ಕೆ ಬೆಲೆಯೇ ಇಲ್ಲ
67ರಿಂದ 84ರವರೆಗೆ ನಾನು ಜನಸಂಘ, ಜನತಾಪಾರ್ಟಿ, ಬಿಜೆಪಿಯಲ್ಲಿದ್ದೆ. 67ರಿಂದ ಆರೆಸ್ಸೆಸ್‌ನಲ್ಲಿರುವವರೆಗೆ ನಾಲ್ಕೈದು ವರ್ಷ ನಾನು ಗುಲಾಮನಂತಿದ್ದೆ. ತುರ್ತು ಪರಿಸ್ಥಿತಿಯವರೆಗೆ ಜನಸಂಘ ಆರೆಸ್ಸೆಸ್‌ನ ಹಿಡಿತದಲ್ಲಿತ್ತು. ಸುಬ್ಬಯ್ಯನವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಜನತಾ ಪಾರ್ಟಿ ಇದ್ದ ಸಂದರ್ಭ ಆರೆಸ್ಸೆಸ್‌ನ ಯಾವ ಮಾರ್ಗದರ್ಶನವನ್ನೂ ಅವರು ಪಡೆಯುತ್ತಿರಲಿಲ್ಲ. ಜತೆಗಿದ್ದರೂ ಅವರ ಕುತಂತ್ರ ಮಾತ್ರ ನಡೆಯುತ್ತಿರಲಿಲ್ಲ. 84ರ ನಂತರ ಕನ್ನಡನಾಡು ಕಟ್ಟಲಾಯಿತು. ಇಂದಿರಾಗಾಂಧಿ ಮರಣಾನಂತರ ಡಿಎಂಕೆಪಿ ಎಂಬ ಪಕ್ಷ ಅಸ್ತಿತ್ವಕ್ಕೆ ಬಂತು. ಬಳಿಕ 1992ರಲ್ಲಿ ಮತ್ತೆ ಸುಬ್ಬಯ್ಯರ ಜತೆ ನಾವೆಲ್ಲಾ ಕಾಂಗ್ರೆಸ್ ಸೇರಿದೆವು. ನಾವು ಈ ರೀತಿ ಕಾಂಗ್ರೆಸ್ ಸೇರುವ ಸಂದರ್ಭ ನನ್ನನ್ನು ಸೆಳೆಯುವ ಪ್ರಯತ್ನ ನಡೆಯಿತು. ಆದರೆ ಆರೆಸ್ಸೆಸ್ ಸಿದ್ಧಾಂತಗಳು ನನಗೆ ಹಿಡಿಸುವುದಿಲ್ಲ. ಸಾಮಾಜಿಕ ನ್ಯಾಯ ಇಲ್ಲದ, ನಿಮ್ಮದೇ ಆದ ಮಡಿವಂತಿಕೆ ಇರುವ, ವ್ಯಕ್ತಿ ಸ್ವಾತಂತ್ರವೂ ಇಲ್ಲದ, ಸ್ವಾಭಿಮಾನಕ್ಕೆ ಅವಕಾಶವೇ ಇಲ್ಲದ ಪಕ್ಷದಲ್ಲಿ ಕೆಲಸ ಮಾಡಲು ಕಷ್ಟ ಎಂದು ನನ್ನನ್ನು ಆ ಸಂದರ್ಭ ಸಂಪರ್ಕಿಸಿದವರಿಗೆ ನೇರವಾಗಿ ನುಡಿದಿದ್ದೆ.
ನನ್ನ ತಮ್ಮನೂ ಆರೆಸ್ಸೆಸ್ ಪ್ರಚಾರಕನಾಗಿದ್ದು, ಹೊರಬಂದವ
ನನ್ನ ತಮ್ಮ ಎಸೆಸೆಲ್ಸಿ ಆಗಿ ಮುಂಬೈಗೆ ತೆರಳಿದ. ಆತ ಫುಟ್ಬಾಲ್ ಆಟಗಾರ. ಅಲ್ಲಿ ಹಾಸ್ಟೆಲ್‌ನಲ್ಲಿದ್ದು ಸ್ನಾತಕೋತ್ತರ ಪದವಿ ಮಾಡಿದ. ಬಳಿಕ ಭಾಗಮಂಡಲಕ್ಕೆ ಹಿಂದಿರುಗಿದ್ದ. ನನಗೆ ಆರೆಸ್ಸೆಸ್ ಸಂಪರ್ಕವಿತ್ತು. ಅದರ ಸಂಪರ್ಕ ಅವನಿಗೂ ಆಗಿ, ಆತನನ್ನು ಬ್ರೈನ್‌ವಾಶ್ ಮಾಡಲಾಯಿತು. ಆರೆಸ್ಸೆಸ್ ವಿಸ್ತಾರಕನಾದ. ಹಂತ ಹಂತವಾಗಿ ತರಬೇತಿಯನ್ನು ಆರೆಸ್ಸೆಸ್‌ನಲ್ಲಿ ನೀಡಲಾಗುತ್ತದೆ. ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಸಂಪೂರ್ಣ ರೀತಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಲು ಸಾಧ್ಯ. ಒಂದು ವರ್ಷ ನಾನೂ ಈ ತರಬೇತಿಯಲ್ಲಿ ಪಾಲ್ಗೊಂಡಿದ್ದೆ. ತಮ್ಮ ಮೂರು ವರ್ಷದ ತರಬೇತಿ ಮೂಲಕ ಪೂರ್ಣ ಅವಧಿಯ ಕಾರ್ಯಕರ್ತನಾಗಿದ್ದ. ಹಿಂದೂಗಳು ಮಾತ್ರವೇ ಒಳ್ಳೆಯವರು. ಉಳಿದವರೆಲ್ಲರೂ ಕಳ್ಳರು ಎಂಬುದನ್ನೇ ಈ ತರಬೇತಿಯಲ್ಲಿ ಕಾರ್ಯಕರ್ತರ ತಲೆಯಲ್ಲಿ ತುಂಬಿಸಲಾಗುತ್ತದೆ. ನಾವು ಮಾತ್ರ ದೇಶಭಕ್ತರು, ಉಳಿದವರೆಲ್ಲರೂ ದೇಶದ್ರೋಹಿಗಳು. ದೇಶ ವಿಭಜನೆ ಮಾಡಿದ ನೆಹರೂ, ಗಾಂಧಿ ಎಲ್ಲರೂ ದೇಶದ್ರೋಹಿಗಳೇ ಎಂಬುದು ಆರೆಸ್ಸೆಸ್ ವಾದ. ಒಟ್ಟು ಮುಸ್ಲಿಂ ವಿರೋಧಿ ಭಾವನೆಯನ್ನು ತುಂಬಿಸುವುದೇ ಈ ತರಬೇತಿಯ ಕೆಲಸ. ಸೋನಿಯಾಗಾಂಧಿ, ಇಂದಿರಾಗಾಂಧಿಯನ್ನು ಅದ್ಯಾವ ರೀತಿಯಲ್ಲಿ ಅವಮಾನ ಮಾಡಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಯಚೂರಿನಲ್ಲಿ ಆರೆಸ್ಸೆಸ್ ಪ್ರಚಾರಕನಾಗಿದ್ದ ನನ್ನ ತಮ್ಮ ನಾನು ಬೆಂಗಳೂರಿಗೆ ಹೋದಾಗ ಸಿಗುತ್ತಿದ್ದ. ರಾಮಣ್ಣ ಶೆಟ್ಟಿ ಹೋಗಿ ರಾಮಣ್ಣ ಆಗಿದ್ದ. ಜನಿವಾರ ಕೂಡಾ ಹಾಕುತ್ತಿದ್ದ. ಇದ್ಯಾಕೆ ಜನಿವಾರ ಎಂದು ಪ್ರಶ್ನಿಸಿದರೆ, ಸಂಘದ ಸಂಪ್ರದಾಯ ಎಂದು ಹೇಳಿದ್ದ. ಫುಟ್ಬಾಲ್ ಆಟಗಾರನಾಗಿದ್ದ ಆತ ದೇಹದಲ್ಲಿಯೂ ಸದೃಢನಾಗಿದ್ದ. ಅಲ್ಲಿ ಅದೇನೋ ಕೆಲ ವರ್ಷಗಳ ಬಳಿಕ ಅವನಿಗೆ ಭೇದ ಭಾವ ಮಾಡಲಾಗುತ್ತದೆ ಎಂಬ ನೋವಾಗಿ ಅದರಿಂದ ಹೊರಬಂದಿದ್ದ. ಸಾಮಾನ್ಯ ಪ್ರಚಾರಕನಿಗೂ, ಮೇಲ್ಪಟ್ಟದಲ್ಲಿರುವವರಿಗೂ ಉಡುಪಿನಲ್ಲೂ ವ್ಯತ್ಯಾಸವಿರುತ್ತದೆ. ಇಂತಹ ಭೇದ ಭಾವ ಹಿಡಿಸದೆ ಆತ ಹೊರಬಂದಿದ್ದ. ಬಳಿಕ ಆಸ್ಟ್ರಿಯಾದಲ್ಲಿ, ಅಲ್ಲಿನ ಯುವತಿಯನ್ನು ವಿವಾಹವಾಗಿ ನೆಲೆಸಿದ್ದ. ಮೂರು ವರ್ಷಗಳ ಹಿಂದೆ ಆತ ತೀರಿಕೊಂಡ.