ಕಾಷ್ಠ ಮೌನಿಯ ಕಥನ
ಸದಾ ಸುದ್ದಿಯಲ್ಲಿರುವ, ಪೊಲೀಸ್ ವ್ಯಾನ್ ತಪ್ಪದ ನಮ್ಮೂರಿಗೆ ಪೊಲೀಸರ, ಊರವರ ಕಣ್ಣು ತಪ್ಪಿಸಿ ಮುಖೇಶನೆಂಬ ಅರೆ ಹುಚ್ಚ ಯಾವಾಗ ಕಾಲಿಟ್ಟನೋ ಗೊತ್ತಿಲ್ಲ, ಖಾಲಿ ಬೀಳುತ್ತಿದ್ದ ಬಸ್ ಸ್ಟಾಂಡ್ಗೆ ಒಂದು ವಿಚಿತ್ರ ಕಳೆ ಬಂದುಬಿಟ್ಟಿತ್ತು. ದೊಗಳೆ ಅಂಗಿ, ಕೊಳೆಕೊಳೆಯಾದ ಪ್ಯಾಂಟು, ಪ್ಯಾಂಟ್ನ ಒಂದು ಬದಿಯ ಜೇಬಿಗೆ ಸಿಕ್ಕಿಸಿಕೊಂಡಿದ್ದ ಹ್ಯಾಟ್, ಕೆದರಿದ ತಲೆಗೂದಲು, ಏನನ್ನೋ ನೋಡಿ ಬೆದರಿದಂತಿರುವ ಕಣ್ಣುಗಳು, ಸದಾ ಮಣಗುಡುವ ತುಟಿಗಳು, ಕಾಲಲ್ಲಿ ಆ ಕಾಲಕ್ಕೆ ದುಬಾರಿ ಅನ್ನಿಸಿದ್ದ ಬಾಟಾ ಚಪ್ಪಲಿಗಳು... ಮುಖೇಶ ನಿಜಕ್ಕೂ ಅರೆ ಹುಚ್ಚನಾ ಅಥವಾ ಹಾಗೆ ನಟಿಸುತ್ತಿದ್ದನಾ? ಒಂದೂ ಅರ್ಥ ವಾಗುತ್ತಿರಲಿಲ್ಲ.
ಮುಖೇಶ ನಮ್ಮೂರಿಗೆ ಕಾಲಿಟ್ಟದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. ಅಷ್ಟಮಿಯಂದು ಒಂದು ಕೋಮಿನವನನ್ನು ಮತ್ತೊಂದು ಕೋಮಿನ ವನು ಗುರಾಯಿಸಿ ನೋಡಿದ ಎಂಬ ಕಾರಣಕ್ಕೆ ಶುರುವಾದ ಜಗಳ ಭಜನಾ ಮಂದಿರದ ಗಾಜಿಗೆ ಬಾಟ್ಲಿ ಬೀಳುವುದರೊಂದಿಗೆ ಮತ್ತು ಮಸೀದಿಯ ಕಿಟಕಿಗಳಿಗೆ ಕಲ್ಲು ತೂರಾಟ ನಡೆಯುವುದರೊಂದಿಗೆ ತಾರಕಕ್ಕೇರಿತ್ತು. ರಾತ್ರಿ ಹೊತ್ತಿಗಾಗುವಾಗ ಕರ್ಪ್ಯೂ ಜಾರಿಯಾಗಿ ಮೂರು ಪೊಲೀಸ್ ಜೀಪುಗಳು ಮತ್ತೊಂದು ವ್ಯಾನ್ ಊರ ಹೆಬ್ಬಾಗಿಲನ್ನೂ, ಮಸೀದಿಯ ಮೆಟ್ಟಿಲುಗಳನ್ನೂ, ಭಜನಾಮಂದಿರದ ಬಾಗಿಲನ್ನೂ ಕಾಯುತ್ತಿದ್ದವು. ಇಡೀ ಊರು ಅಘೋಷಿತ ಶೋಕಾಚರಣೆಯಲ್ಲಿದ್ದರೆ ಮುಖೇಶನೆಂಬ ಅಪರಿಚಿತ ಯಾವುದೋ ಮಾಯದಲ್ಲಿ ಊರು ಸೇರಿದ್ದ. ಅಥವಾ ಜಗಳ ಕಾಯಲು ಕಾಲು ಕೆದರಿಕೊಂಡು ಕಾಯುತ್ತಿರುವವರ ಊರಿಗೆ ಯಾವ ಗಲಭೆಯೂ ಬೇಕಿಲ್ಲದ ಪರಮ ಮೌನಿಯೊಬ್ಬ ಕಾಲಿಟ್ಟಿದ್ದ.
ಮೊದಮೊದಲು ಇವರು ಮುಖೇಶನನ್ನು ಅವರ ಕಡೆಯ ವನೆಂದೂ, ಅವರು ಇವರ ಕಡೆಯವನೆಂದೂ ಒಂದು ರೀತಿಯ ಗುಮಾನಿಯಿಂದಲೇ ನೋಡುತ್ತಿದ್ದರು. ಆಮೇಲೆ ಒಬ್ಬೊಬ್ಬರಾಗಿ ಬೆಳಗಿನ ತಿಂಡಿ, ಊಟ ಅಂತ ಅವನಿಗೆ ನೀಡತೊಡಗಿದರು. ಹಾಗೆ ನೀಡುವಾಗಲೂ ಅವರ ಕಡೆ ಹೋಗಬೇಡ ಅವರು ಕೆಟ್ಟವರು ಎಂದು ಎರಡೂ ಕಡೆಯವರು ಹೇಳುತ್ತಿದ್ದರು. ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಅತೀತನಾದ, ಯಾವ ಸೀಮೆಗಳೂ ಇಲ್ಲದ, ಬೌದ್ಧ ಬಿಕ್ಕುವಿನಂತಿದ್ದ ಮುಖೇಶ ಮಾತ್ರ ತಿಂಡಿ, ಊಟಕ್ಕಿಂತಲೂ ಹೆಚ್ಚು ಸಂತುಷ್ಟನಾಗುತ್ತಿದ್ದುದು ಮೋಟು ಬೀಡಿ ಸಿಕ್ಕಿದಾಗ. ಮಂತ್ರವೊಂದನ್ನು ಜಪಿಸುತ್ತಿರುವಂತೆ, ಪ್ರಪಂಚದ ಆದಿ ಮತ್ತು ಅಂತ್ಯದ ಎಲ್ಲಾ ಕಥೆಗಳೂ ಗೊತ್ತಿರುವಂತೆ ಸದಾ ಚಲಿಸುವ ಅವನ ತುಟಿಗಳು ಯಾರಾದರೂ ಬೀಡಿ ಕೊಟ್ಟರೆ ಇಷ್ಟಗಲ ಅರಳುತ್ತಿತ್ತು. ಮುಖೇಶನ ಬಗ್ಗೆ ದಿನಕ್ಕೊಂದರಂತೆ ಕಥೆಗಳು ಹುಟ್ಟಿ ಊರು ತುಂಬಾ ಹಾರಾಡುತ್ತಿದ್ದವು. ಆಗಿನ್ನೂ ಮಕ್ಕಳೇ ಆಗಿದ್ದ ನಮಗೆ ಅವೆಲ್ಲವನ್ನೂ ಹೆಕ್ಕಿ ಒಂದು ಕಡೆ ರಾಶಿ ಹಾಕಿ, ಊಟದ ವಿರಾಮಕ್ಕೆಂದು ಮನೆ ಕಡೆ ಬರುವಾಗಲೋ ಅಥವಾ ಆಟಕ್ಕೆಂದು ಮೀಸಲಿಟ್ಟ ಕೊನೆಯ ಪಿರಿಯಡ್ನಲ್ಲೋ ಆ ರಾಶಿಯಲ್ಲಿನ ಒಂದೊಂದು ಕಥೆಗಳನ್ನೂ ಆರಿಸಿ ಹೇಳುವ, ಕೇಳಿಸಿಕೊಳ್ಳುವ ಹುಚ್ಚು. ಅವನು ದೊಡ್ಡ ಜ್ಞಾನಿಯಂತೆ, ದಿಲ್ಲಿಯ ಯಾವುದೋ ಒಂದು ವೈಜ್ಞಾನಿಕ ಸಂಸ್ಥೆಯಲ್ಲಿ ಉದ್ಯೋಗಕ್ಕಿದ್ದನಂತೆ, ನಾಲ್ಕು ಫಾರಿನ್ ಭಾಷೆಗಳನ್ನು ಮಾತಾಡ ಬಲ್ಲನಂತೆ, ಓದಿನ ಗೀಳು ಹೆಚ್ಚಾಗಿ ಕೊನೆಗೆ ಈ ಸ್ಥಿತಿ ತಲುಪಿದ್ದಾನಂತೆ ಅಂತೆಲ್ಲಾ ಒಂದು ಕಡೆ ಗುಲ್ಲೆದ್ದರೆ, ಮತ್ತೊಂದು ಕಡೆ ಅವನೊಬ್ಬ ದೊಡ್ಡ ಶ್ರೀಮಂತ, ಶೋಕಿಲಾಲ. ಆಸ್ತಿಗಾಗಿ ಅಣ್ಣ ತಮ್ಮಂದಿರೇ ಅವನಿಗೆ ಯಾವುದೋ ಮೆಡಿಸಿನ್ ಕೊಟ್ಟು ಹುಚ್ಚನನ್ನಾಗಿ ಮಾಡಿದ್ದಾರೆ ಅನ್ನುವ ಕಥೆಯೂ ಇತ್ತು. ಮುಂಬೈಯಲ್ಲಿ ಯಾವುದೋ ಒಂದು ಖಾಸಗಿ ಶಾಲೆಯ ಬಸ್ ಡ್ರೈವರ್ ಆಗಿದ್ದ, ಆ ಬಸ್ ಆಕ್ಸಿಡೆಂಟ್ ಆದ ಮೇಲೆ ಹೀಗಾಗಿದ್ದಾನೆ ಅನ್ನುವ ಕಥೆಗಳೂ ಓಡಾಡುತ್ತಿದ್ದವು. ಇವೆಲ್ಲಕ್ಕಿಂತಲೂ ಹೆಚ್ಚು ಇಂಟರೆಸ್ಟಿಂಗ್ ಅಂತ ನಮಗನ್ನಿಸಿದ ಸಂಗತಿಯೇನೆಂದರೆ, ಆತ ಭಾರತ ಸರಕಾರವೇ ನೇಮಿಸಿ ಪಾಕಿಸ್ತಾನಕ್ಕೆ ಕಳುಹಿಸಿದ್ದ ಗೂಢಚಾರಿ, ಗೂಢಚಾರಿಕೆ ಮಾಡಿ ಮಾಡಿ ಈ ಸ್ಥಿತಿ ತಲುಪಿದ ಅನ್ನುವುದು.
ಬೆಳ್ಳಂಬೆಳಗ್ಗೆ ಯಾರದಾದರೂ ಮನೆಯ ಮುಂದೆ ಬಿದ್ದಿದ್ದ ಇಂಗ್ಲಿಷ್ ಪೇಪರ್ ಕಾಣೆಯಾಗಿದ್ದರೆ ಅದು ರಾಜಾರೋಷವಾಗಿ ಮುಖೇಶನ ಕಂಕುಳಲ್ಲಿದ್ದು ಕೊಂಡು ಊರು ಸುತ್ತುತ್ತಿದ್ದುದು ಅವನು ಓದಿರುವವನು ಅನ್ನುವ ಮಾತಿಗೆ ಪೂರಕ ಸಾಕ್ಷಿ ಒದಗಿಸುತ್ತಿದ್ದರೆ, ಪಾರ್ಕಿಂಗ್ ಮಾಡಿರುತ್ತಿದ್ದ ಲಾರಿ ಹತ್ತಿ ಸಲೀಸಾಗಿ ಸ್ಟೇರಿಂಗ್ ತಿರುಗಿಸುವ ಅವನ ಗತ್ತು ನೋಡಿದರೆ ಡ್ರೈವರೇ ಏನೋ ಅನ್ನಿಸಿಬಿಡುತ್ತಿತ್ತು.
ಆದರೆ ಮುಖೇಶ ನಿಜಕ್ಕೂ ಏನಾಗಿದ್ದ? ಜ್ಞಾನಿಯೋ, ಅರೆಹುಚ್ಚನೋ, ಮಾಜಿ ಗೂಢಚಾರಿಯೋ? ಅಥವಾ ಜಗದ ಯಾವ ಜಂಜಡವೂ ಬೇಡ ಎಂದು ಪ್ರತೀ ಮಾತಿನ ತುತ್ತ ತುದಿಯಲ್ಲಿ ಉಳಿದು ಬಿಡುವ ಮೌನವನ್ನಷ್ಟೇ ಹೆಕ್ಕಿಕೊಂಡು ಬದುಕಿಬಿಡುತ್ತೇನೆ ಎಂದು ನಿರ್ಧರಿಸಿಕೊಂಡ ಧ್ಯಾನಿಯೇ? ಅವನ ಧ್ಯಾನವನ್ನೂ, ಕಾಷ್ಠಮೌನವನ್ನೂ, ಅಸಂಖ್ಯ ತಿರುವುಗಳಲ್ಲೂ ನಿಲ್ಲದ ಬದುಕಿನ ವೇಗವನ್ನೂ, ನಿರಂತರತೆಯನ್ನೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದ ನಿಜದ ಹುಚ್ಚರನ್ನೇ ತುಂಬಿಕೊಂಡಿರುವ ಈ ಜಗತ್ತು ಅವನಿಗೆ ಹುಚ್ಚನ ಪಟ್ಟ ಕಟ್ಟಿ ತನ್ನ ಕೀಳರಿಮೆಯನ್ನೂ ಅಹಂಕಾರವನ್ನೂ ಸಂತೈಸಿಕೊಂಡಿತೇ? ಈ ಪ್ರಪಂಚದ ಎಲ್ಲಾ ಓರೆಕೋರೆಗಳನ್ನು ಮೀರಿದ ಶುದ್ಧ ಜಾಗೃತಿಯ ಸ್ಥಿತಿಯೊಂದನ್ನು ಆತ ಸಿದ್ಧಿಸಿಕೊಂಡಿದ್ದನೇ? ಆ ಕಾರಣಕ್ಕಾಗಿಯೇ ಎಲ್ಲ ಬಂಧನಗಳನ್ನು ಕಳಚಿ ಬಂದು ಹುಚ್ಚನಂತೆ, ವಿರಾಗಿಯಂತೆ ವೇಷ ತೊಟ್ಟನೇ? ಊಹೂಂ, ಗೊತ್ತಿಲ್ಲ.
ಇವತ್ತಿಗೂ ಒಂದು ದೊಡ್ಡ ಮಿಸ್ಟರಿಯಂತೆ ಕಾಡುವ ಮುಖೇಶ ಒಂದು ದಿನ ಸರಕಾರಿ ಶಾಲೆಯ ಮೈದಾನದಲ್ಲಿ ಆಟ ಆಡಿಕೊಳ್ಳುತ್ತಿದ್ದ ಮಕ್ಕಳ ಮುಂದೆ ಮಲಯಾಳಂ ಹಾಡೊಂದನ್ನು ತುಂಬ ಅಚ್ಚುಕಟ್ಟಾಗಿ ಹಾಡಿದ್ದ. ಅದು ಅವನ ಅಸ್ತ್ತಿತ್ವದ ಬಗ್ಗೆ ಮತ್ತೊಂದು ಹೊಳಹನ್ನು ನೀಡಿತ್ತು. ಮುಂಬೈಯವನೋ ದಿಲ್ಲಿಯವನೋ ಆಗಿದ್ದರೆ ಅವನು ಹಿಂದಿ ಹಾಡಬೇಕಿತ್ತು, ಮಲಯಾಳಂ ಹಾಡಿದ್ದಾನೆ ಅಂದ ಮೇಲೆ ಅವನಿಗೂ ಪಕ್ಕದ ಕೇರಳಕ್ಕೂ ಏನೋ ಸಂಬಂಧವಿರಬೇಕು ಎಂದು ಊರ ಕೆಲವರು ಕೇರಳದ ಪತ್ರಿಕೆಗಳಲ್ಲಿ ಅವನ ಬಗ್ಗೆ ಜಾಹೀರಾತು ಕೊಟ್ಟರು. ಮತ್ತೊಂದಿಷ್ಟು ಮಂದಿ ಒಂದು ಹೆಜ್ಜೆ ಮುಂದೆ ಹೋಗಿ ಅವನು ಊರು ಸೇರಿದ್ದ ಸಮಯದ ಮಲಯಾಳಂ ಪತ್ರಿಕೆಗಳ ‘ಕಾಣೆಯಾಗಿದ್ದಾರೆ’ ಕಾಲಂನಲ್ಲಿ ಅವನ ಬಗ್ಗೆ ವಿವರಗಳು ಏನಾದರೂ ಇವೆಯಾ ಎಂದು ಹುಡುಕಿದರು. ಆದರೆ ಅವನ ಪೂರ್ವಾಶ್ರಮವನ್ನು ಪತ್ತೆ ಹಚ್ಚುವಲ್ಲಿ ಅವು ಯಾವ ನೆರವನ್ನೂ ನೀಡಲಿಲ್ಲ. ಆಗಲೂ ಮುಖೇಶ ಯಾವುದರ ಪರಿವೆಯೂ ಇಲ್ಲದೆ ಏನನ್ನೋ ಹುಡುಕಾಡುವವನಂತೆ ಅಲ್ಲಿಂದ ಇಲ್ಲಿಗೂ ಇಲ್ಲಿಂದ ಅಲ್ಲಿಗೂ ಎಂದಿನಂತೆ ನಡೆಯುತ್ತಲೇ ಇದ್ದ.
ಸದಾ ಕೋಮು ಸೌಹಾರ್ದ ಕೆಡಿಸಿಕೊಂಡು ಸುದ್ದಿಯಲ್ಲಿರುವ ನಮ್ಮೂರು ಮುಖೇಶನನ್ನು ಮಾತ್ರ ಶುದ್ಧ ಮಾನವೀಯತೆಯಿಂದ ನಡೆಸಿಕೊಳ್ಳುತ್ತಿತ್ತು. ಕೆಲ ಯುವಕರು ಅವನನ್ನು ವರ್ಷಕ್ಕೊಂದು ಬಾರಿ ಇಷ್ಟಿಷ್ಟು ಉದ್ದ ಇರುತ್ತಿದ್ದ ಉಗುರು ಕತ್ತರಿಸಿ, ಒಪ್ಪವಾಗಿ ಕೂದಲಿಗೆ ಕತ್ತರಿಯಾಡಿಸಿ, ಮೀಯಿಸಿ, ಹೊಸ ಬಟ್ಟೆ ತೊಡಿಸುತ್ತಿದ್ದರು. ಆಗೆಲ್ಲಾ ಅವನ ಮುಖದಲ್ಲಿ ರಾಜಕಳೆ. ಊರ ಕೆಲ ಹಿರಿಯರು ಅವನನ್ನು ಮಾನಸಿಕ ಚಿಕಿತ್ಸಾಲಯಗಳಿಗೂ ಸೇರಿಸಿದ್ದರು. ಆದರೆ ಅವನು ಅದು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಮತ್ತೆ ಇಲ್ಲಿಗೇ ಬಂದು ಬಿಡುತ್ತಿದ್ದ. ಹೀಗೆ ಪ್ರತಿಯೊಬ್ಬರ ಬದುಕಲ್ಲೂ ಒಂದು ಅವ್ಯಕ್ತ ಪಾತ್ರ ನಿಭಾಯಿಸಿದ್ದ ಮುಖೇಶ ಒಂದು ದಿನ ಹಠಾತ್ತಾಗಿ ಕಾಣೆಯಾದ. ಇಲ್ಲೇ ಎಲ್ಲೋ ಹೋಗಿರುತ್ತಾನೆ, ಬಂದೇ ಬರುತ್ತಾನೆ ಅಂತಲೇ ಎಲ್ಲರೂ ಭಾವಿಸಿದ್ದರು. ಒಂದು, ಎರಡು, ಮೂರು ದಿನಗಳೇ ಕಳೆದರೂ ಆತ ಬರದೇ ಇದ್ದಾಗ ಅವನ ಬಗ್ಗೆ ಮತ್ತಷ್ಟು ಪುಕಾರುಗಳೆದ್ದವು. ಮಸೀದಿಯ ಕಾಣಿಕೆ ಡಬ್ಬಿಯ ದುಡ್ಡನ್ನು ಕದಿಯುತ್ತಿದ್ದ, ಅದಕ್ಕೇ ಅವನನ್ನು ಯಾವುದೋ ಲಾರಿ ಹತ್ತಿಸಿ ಕಳುಹಿಸಿಬಿಟ್ಟಿದ್ದಾರೆ, ಭಜನಾ ಮಂದಿರದ ದುಡ್ಡು ಕದ್ದು ಅಲ್ಲೇ ಕೂತು ಎಣಿಸುತ್ತಿದ್ದ, ಅದನ್ನು ನೋಡಿದ ಯಾರೋ ಅವನನ್ನು ದೂರ ಎಲ್ಲೋ ಬಿಟ್ಟು ಬಂದಿದ್ದಾರೆ, ರಾತ್ರಿ ಊರಿಗೇ ನಿದ್ರೆ ಕವಿದ ಮೇಲೆ ಚೆಂದದ ಡ್ರೆಸ್ ಮಾಡಿಕೊಂಡು ಅವನೇ ಮುಂಬೈ ಬಸ್ ಹತ್ತಿ ಹೊರಟು ಹೋಗಿದ್ದಾನೆ ಅಂತೆಲ್ಲಾ ವಾದಗಳಿತ್ತು. ಕಣ್ಣ ಮುಂದೆಯೇ ಪರ್ಸ್ ಬಿದ್ದು ಸಿಕ್ಕರೂ ವಿಸಿಟಿಂಗ್ ಕಾರ್ಡ್ಗಳನ್ನು ಮಾತ್ರ ಕಿಸೆಯೊಳಗೆ ಸೇರಿಸಿಕೊಂಡು ಪರ್ಸ್ ಬಿಸುಟು ಹೋಗುತ್ತಿದ್ದ, ನಿಂತಿರೋ ಲಾರಿಗಳಿಗೆ ಹತ್ತಿ ಬೀಡಿ ಮಾತ್ರ ಕೈಗೆತ್ತಿಕೊಂಡು ಇಳಿಯುತ್ತಿದ್ದ ಮುಖೇಶ ದುಡ್ಡು ಕದ್ದಿದ್ದಾನೆ ಅನ್ನುವ ವಾದವನ್ನು ಇವತ್ತಿನವರೆಗೂ ಯಾರೂ ಒಪ್ಪಿಕೊಂಡಿಲ್ಲ. ಅವನನ್ನು ಯಾರಾದರೂ ದೂರ ಕಳುಹಿಸಿದರೋ ಅಥವಾ ಎಲ್ಲಾ ನೆನಪುಗಳು ಮರುಕಳಿಸಿ ಅವನಾಗಿಯೇ ಮರಳಿ ಹೋದನೋ? ಗೊತ್ತಿಲ್ಲ. ಒಂದಿಷ್ಟು ವರ್ಷಗಳ ಕಾಲ ವೈರಾಗಿಯಂತೆ ಬದುಕಿ, ಪ್ರಶ್ನೆಗಳನ್ನೂ ಉತ್ತರಗಳನ್ನೂ ಉಳಿಸಿಹೋದ ಮುಖೇಶ ಈಗಲೂ ಊರಿಗೆ ಹೋದಾಗೆಲ್ಲಾ ಕಾಡುತ್ತಾನೆ, ಕಣ್ಣುಗಳು ಅನಪೇಕ್ಷಿತ ವಾಗಿ ಅವನನ್ನು ಹುಡುಕುತ್ತವೆ. ಎಲ್ಲಾ ಇದ್ದು ನೆನಪಿಸಿಕೊಳ್ಳಲು ಒಂದು ಹಿಡಿಯಷ್ಟೂ ನೆನಪುಗಳನ್ನು ಉಳಿಸದವರ ನಡುವೆ ಏನೂ ಇಲ್ಲದೆ ಒಂದು ತಲೆಮಾರಲ್ಲಿ ಅಸ್ತಿತ್ವದ ಕುರುಹನ್ನು ಉಳಿಸಿಹೋದ ಮುಖೇಶ ಸಾಧಕ ಅನಿಸುತ್ತಾನೆ.