ಖಗೋಳ ಶಾಸ್ತ್ರಜ್ಞ ಮೊದಲನೆಯ ಆರ್ಯಭಟ
ಇಂಗ್ಲಿಷ್ ಮೂಲ: ಬಿ. ವಿ. ಸುಬ್ಬರಾಯಪ್ಪ, ಕನ್ನಡಕ್ಕೆ: ಲಕ್ಷ್ಮೀಕಾಂತ ಹೆಗಡೆ
ರಾಜಕಾರಣಿಗಳು ತಮ್ಮ ಅಸಂಬದ್ಧ ಹೇಳಿಕೆಗಳ ಮೂಲಕ ಭಾರತೀಯ ವಿಜ್ಞಾನವನ್ನು ತಮಾಷೆಗೀಡು ಮಾಡಿದ್ದಾರೆ. ಮಹಾಭಾರತ ಸೇರಿದಂತೆ ಪುರಾಣ ಕತೆಗಳ ಉದಾಹರಣೆಕೊಟ್ಟು ಭಾರತದಲ್ಲಿ ಪ್ಲಾಸ್ಟಿಕ್ ಸರ್ಜರಿ, ಪ್ರನಾಳ ಶಿಶು, ವಿಮಾನ ತಂತ್ರಜ್ಞಾನ ಇತ್ಯಾದಿಗಳು ಇತ್ತು ಎಂದು ಹೇಳುತ್ತಾ ಭಾರತದ ವೈಜ್ಞಾನಿಕ ಇತಿಹಾಸಕ್ಕೆ ಕಳಂಕ ತರುತ್ತಿದ್ದಾರೆ. ಇದು ಭಾರತದ ವಿಜ್ಞಾನದ ಪ್ರಾಚೀನತೆಯನ್ನೇ ಸಂಶಯಿಸುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಾಚೀನ ಭಾರತದ ನಿಜ ವಿಜ್ಞಾನವನ್ನು, ವಿಜ್ಞಾನಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಅಂಕಣವನ್ನು ಆರಂಭಿಸಲಾಗಿದೆ. ಭಾ
ರತೀಯ ಖಗೋಳಶಾಸ್ತ್ರದ ಇತಿಹಾಸದಲ್ಲಿ, ಆರ್ಯಭಟ ಪ್ರಪ್ರಥಮ ಮತ್ತು ಅತ್ಯಂತ ಪ್ರಸಿದ್ಧ ಖಗೋಳಶಾಸ್ತ್ರಜ್ಞ ಮತ್ತು ಪರಿಣತ ಗಣಿತ ತಜ್ಞನೆಂದು ಪರಿಗಣಿಸಲ್ಪಟ್ಟಿದ್ದಾನೆ. ಸಾಮಾನ್ಯವಾಗಿ ಭಾರತೀಯ ಖಗೋಳಶಾಸ್ತ್ರಜ್ಞರು ಸಮರ್ಥ ಗಣಿತ ತಜ್ಞರೂ ಆಗಿದ್ದರು (ಮುಂದಿನ ಅಧ್ಯಾಯ ನೋಡಿ). ಈ ಆರ್ಯಭಟನನ್ನು ಮೊದಲನೆಯ ಆರ್ಯಭಟ (ಆರ್ಯಭಟ 1) ಎಂದು ಕರೆಯುವುದೂ ಉಂಟು. ಏಕೆಂದರೆ, ಹತ್ತನೆಯ ಶತಮಾನದಲ್ಲಿ ಅದೇ ಹೆಸರಿನ ಇನ್ನೊಬ್ಬ ಪ್ರಸಿದ್ಧ, ಖಗೋಳಶಾಸ್ತ್ರಜ್ಞ ಆಗಿ ಹೋದನು. ಅವನನ್ನು ಎರಡನೆಯ ಆರ್ಯಭಟ (ಆರ್ಯಭಟ 2) ಎಂದು ಕರೆಯುತ್ತಾರೆ. ಮೊದಲನೆಯ ಆರ್ಯಭಟನು ತನ್ನ ಕೃತಿಯನ್ನು ‘ಆರ್ಯಭಟೀಯ’ ಎಂದು ಕರೆದನು ಮತ್ತು ‘ಆರ್ಯಭಟೀಯ’ ಎಂದು ಹೆಸರು ಉಳ್ಳ ಈ ಕೃತಿ, ಪ್ರಾಚೀನ ‘ಸ್ವಾಯಂಭುವ’ವೇ ಆಗಿದೆ (ಅಂದರೆ ಸ್ವಯಂಭು ಅರ್ಥಾತ್ ಬ್ರಹ್ಮನಿಂದ ಪ್ರಕಟಗೊಳಿಸಲ್ಪಟ್ಟಿದ್ದು) ಮತ್ತು ಇದು ನಿತಾಂತ ಸತ್ಯ ಎಂದು ಹೇಳುತ್ತಾನೆ. ಅಲ್ಲದೆ ಇದನ್ನು ಅನುಕರಿಸುವವನು ಅಥವಾ ಕೃತಿ ಚೌರ್ಯ ಮಾಡುವವನು ತನ್ನ ಎಲ್ಲ ಪುಣ್ಯ ಸಂಚಯವನ್ನೂ, ಸಂತತಿಯನ್ನೂ ಕಳೆದುಕೊಳ್ಳುತ್ತಾನೆ ಎಂದು ಎಚ್ಚರಿಸುತ್ತಾನೆ. ಭಾರತದ ಪ್ರಥಮ ಉಪಗ್ರಹವನ್ನು ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್ (ISRO) 19ನೇ ಎಪ್ರಿಲ್ 1979ರಂದು ಬಾಹ್ಯಾಕಾಶದ ಕಕ್ಷೆಗೆ ತಳ್ಳಿದಾಗ ಅದಕ್ಕೆ ‘ಆರ್ಯಭಟ’ ಎಂಬ ಹೆಸರನ್ನಿಟ್ಟಿರುವುದು ಅರ್ಥಪೂರ್ಣವಾಗಿದೆ.
ಪದಮಿತವ್ಯಯ ಮತ್ತು ನಿಖರತೆಗೆ ಪ್ರಸಿದ್ಧವಾದ ಅಸಾಧಾರಣ ಕೃತಿ ‘ಆರ್ಯ ಭಟೀಯ’ವು ‘ಆರ್ಯ’ ಛಂದಸ್ಸಿನ 121 ಶ್ಲೋಕಗಳನ್ನು ಹೊಂದಿದೆ. ಕೇವಲ ಹತ್ತು ಶ್ಲೋಕಗಳು ಮಾತ್ರ ‘ಗೀತಿಕಾ’ ಛಂದಸ್ಸಿನಲ್ಲಿವೆ. ಗಣತೀಯ ಖಗೋಳಶಾಸ್ತ್ರದ ‘ಹರಿಕಾರ’ ಎನ್ನಬಹುದಾದ ಈ ಗ್ರಂಥದಲ್ಲಿ ನಾಲ್ಕು ಅಧ್ಯಾಯಗಳುಂಟು. (1) ಗೀತಿಕಾ, (2) ಗಣಿತಪಾದ, (3) ಕಾಲ ಕ್ರಿಯಾಪಾದ ಮತ್ತು (4) ಗೋಲಪಾದ. ‘ದಶಗೀತಿಕಾ’ (10+3) ಮತ್ತು ‘ಆರ್ಯಾಷ್ಟಶತ’ (108)ಗಳು ಆನಂತರದ ಖಗೋಳಶಾಸ್ತ್ರಜ್ಞರಾದ ಮೊದಲನೆಯ ಭಾಸ್ಕರ ಮತ್ತು ಬ್ರಹ್ಮಗುಪ್ತರು ಎತ್ತಿ ತೋರಿಸಿದಂತೆ ಈ ಗ್ರಂಥದ ಎರಡು ಆಯಾಮಗಳಾಗಿವೆ. ಆರಂಭಿಕರಿಗೆ ಅಗತ್ಯ ಸೂಚನೆಗಳನ್ನು ಕೊಡುವುದು ಮತ್ತು ವಿವಿಧ ಖಗೋಳಶಾಸ್ತ್ರೀಯ ವಿಷಯ ವಸ್ತುಗಳನ್ನು ಅರ್ಥ ಮಾಡಿಕೊಳ್ಳಲು ಅವರನ್ನು ಶಕ್ತರನ್ನಾಗಿ ಮಾಡುವುದು ‘ದಶಗೀತಿಕಾ’ದ ಉದ್ದೇಶವಾಗಿದೆ ಹಾಗೂ ‘ಆರ್ಯಾಷ್ಟಶತ’ವು ಗಣಿತ ಮತ್ತು ಖಗೋಳ ಶಾಸ್ತ್ರವನ್ನು ಚರ್ಚಿಸುತ್ತದೆ. ಅದನ್ನು ಗಣಿತದಲ್ಲಿ ಪರಿಣತಿ ಹೊಂದಿದವರು ಮಾತ್ರವೇ ಅರ್ಥ ಮಾಡಿಕೊಳ್ಳಲು ಸಾಧ್ಯ. ‘ದಶಗೀತಿಕಾ’ ಆ ಹೆಸರೇ ಸೂಚಿಸುವಂತೆ ಹತ್ತು ಶ್ಲೋಕಗಳನಷ್ಟೇ ಹೊಂದಿರಬೇಕಿತ್ತು. ಆದರೆ, ಒಂದು ಪ್ರಾರ್ಥನಾಶ್ಲೋಕ, ಇನ್ನೊಂದು ಆರ್ಯಭಟನ ನವೀನ ಅಕ್ಷರಾಧಾರಿತ ಸಂಖ್ಯಾ ಪದ್ಧತಿಯನ್ನು ವಿವರಿಸಲು ಮತ್ತು ಮೂರನೆಯದು ಗ್ರಂಥದ ‘ಪ್ರಯೋಜನ’ವನ್ನು ವಿಶದಪಡಿಸುವಂಥದಿದ್ದು, ಒಟ್ಟು ಹದಿಮೂರು ಶ್ಲೋಕಗಳನ್ನೊಳಗೊಂಡಿದೆ.
ಕೃಪೆ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ