ದಿಲ್ಲಿ ದರ್ಬಾರ್
ಗಾಂಧಿ ಅಥವಾ ವಾದ್ರಾ?
ನೆಹರೂ-ಗಾಂಧಿ ಕುಟುಂಬ ಕೇಸರಿ ಪಾಳಯದಲ್ಲಿ ಭೀತಿ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಿಯಾಂಕಾ ಗಾಂಧಿಯವರು ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಅಚ್ಚರಿಯ ಘೋಷಣೆ ಮಾಡಿದ ದಿನ ಬಿಜೆಪಿ ಮುಖಂಡರ ಮುಖದಲ್ಲಿ ಭೀತಿ ಎದ್ದುಕಾಣುತ್ತಿತ್ತು. ಪ್ರಿಯಾಂಕಾ ಗಾಂಧಿ ವಿಚಾರದ ಬಗ್ಗೆ ಪತ್ರಕರ್ತರು ಪ್ರತಿಕ್ರಿಯೆ ಕೇಳಿದಾಗಲೆಲ್ಲ ಕೇಸರಿ ಪಕ್ಷದ ಮುಖಂಡರು ವ್ಯಗ್ರರಾಗುತ್ತಾರೆ. ‘‘ಪ್ರಿಯಾಂಕಾ ವಾದ್ರಾ ಎಂದು ಹೇಳಿ; ಗಾಂಧಿ ಅಲ್ಲ. ಏಕೆಂದರೆ ಆಕೆ ರಾಬರ್ಟ್ ವಾದ್ರಾ ಅವರ ಪತ್ನಿ’’ ಎಂದು ಸಿಡಿಮಿಡಿಗೊಳ್ಳುತ್ತಾರೆ. ಇಂದಿಗೂ ನೀವು ಬಿಜೆಪಿ ನಾಯಕರು ಮಾತನಾಡುವುದು ಕೇಳಿಸಿಕೊಂಡರೆ, ಆಕೆಯನ್ನು ಪ್ರಿಯಾಂಕಾ ಗಾಂಧಿ ಎಂದು ಸಂಬೋಧಿಸುವುದಿಲ್ಲ. ಪ್ರಿಯಾಂಕಾ ಗಾಂಧಿಯನ್ನು ಪ್ರಿಯಾಂಕಾ ವಾದ್ರಾ ಎಂದೇ ಕರೆಯಬೇಕು ಎಂದು ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಿದಂತಿದೆ. ಅವರನ್ನು ಮಿಸೆಸ್ ವಾದ್ರಾ ಎಂದೇ ಸಂಬೋಧಿಸುವಂತೆ ಎಲ್ಲ ಬಿಜೆಪಿ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆಯೂ ಹೋಗಿದೆ. ಪ್ರಿಯಾಂಕಾ ತಮ್ಮಿಂದಿಗೆ ತರುತ್ತಿರುವ ಪರಂಪರೆ ಮತ್ತು ಅವರ ವೈಯಕ್ತಿಕ ವರ್ಚಸ್ಸಿನ ಅಂಶವನ್ನು ಬಿಜೆಪಿ ಮುಖಂಡರು ಪ್ರಜ್ಞಾಪೂರ್ವಕವಾಗಿ ಮನಗಂಡಂತಿದೆ. ಆದರೆ ಇದು ಮತದಾರರಲ್ಲಿ ಮಾರ್ದನಿಸುತ್ತದೆಯೇ ಅಥವಾ ಅವರು ಗಾಂಧಿಯಾಗಿಯೇ ಅದರಲ್ಲೂ ಮುಖ್ಯವಾಗಿ ಇಂದಿರಾ ಗಾಂಧಿಯಂತೆಯೇ ಭಾವಿಸುತ್ತಾರೆಯೇ ಎನ್ನುವುದನ್ನು ಕಾದುನೋಡಬೇಕು.
ಪಾಸ್ವಾನ್ ಹೊಸ ಭೀತಿ!
ಕೇಂದ್ರ ಸಚಿವ ಹಾಗೂ ಎಲ್‌ಜೆಪಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ತಮ್ಮ ಮಗ ಚಿರಾಗ್ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಭಡ್ತಿ ನೀಡಲು ಬಯಸಿದ್ದಾರೆ. ‘ಮಿಲೇ ನಾ ಮಿಲೇ’ ಚಿತ್ರದಲ್ಲಿ ಕಂಗನಾ ರಾಣಾವುತ್ ಜತೆಗೆ ನಟಿಸಿದ್ದ ಈ ಮಾಜಿ ಉದಯೋನ್ಮುಖ ನಟ ಚಿರಾಗ್ ಇದೀಗ ಪೂರ್ಣಾವಧಿ ರಾಜಕಾರಣಿ. ಸೂಪರ್ ಫ್ಲಾಫ್ ಆಗಿದ್ದ ಅವರ ಚಿತ್ರಕ್ಕೆ ವಿರುದ್ಧವಾಗಿ ಅವರು 2014ರ ಲೋಕಸಭಾ ಚುನಾವಣೆ ಗೆದ್ದ ಬಳಿಕ ಯಶಸ್ವಿ ರಾಜಕಾರಣಿ ಎನಿಸಿಕೊಂಡಿದ್ದಾರೆ. ಈಗ ಚಿರಾಗ್ ಅವರು ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ ಬಿಜೆಪಿ ಜತೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವ ಬಗೆಗಿನ ನಿರ್ಧಾರ ಸೇರಿದಂತೆ ಪಕ್ಷಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. 2014ರ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ರೂಪಿಸಲು ಸಾಧ್ಯವಾದದ್ದು, ಆರು ಸ್ಥಾನಗಳನ್ನು ಗೆಲ್ಲುವಂಥಾದದ್ದು ಮತ್ತು ಮುಂದಿನ ಚುನಾವಣೆಗೆ ಮೈತ್ರಿ ಏರ್ಪಟ್ಟಿರುವುದು ಚಿರಾಗ್ ಅವರಿಂದಾಗಿಯೇ ಎಂದು ಪಾಸ್ವಾನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದು ರಾಜಕೀಯದ ಬಗ್ಗೆ. ಆದರೆ ಪಾಸ್ವಾನ್ ಅವರಿಗೆ ಬೇಸರ ತರುವ ಅಥವಾ ಅವರು ಉತ್ತರಿಸಲು ತಡಕಾಡುವ ವಿಚಾರವೆಂದರೆ ಮಗನ ವಿವಾಹಕ್ಕೆ ಸಂಬಂಧಿಸಿದ್ದು. ಇತ್ತೀಚೆಗೆ ಕೆಲ ಪತ್ರಕರ್ತರ ಜತೆ ಅನೌಪಚಾರಿಕ ಚರ್ಚೆ ನಡೆದಾಗ ಕೂಡಾ ಈ ವಿಷಯ ಧುತ್ತೆಂದು ಕಾಣಿಸಿಕೊಂಡಿತು. ಈ ವಿಷಯ ಬಂದಾಗ, ಚಿರಾಗ್ ಬ್ಯುಸಿಯಾಗಿದ್ದಾರೆ ಹಾಗೂ ಅವರು 2014ರಲ್ಲೇ ವಿವಾಹವಾಗಬೇಕಿತ್ತಾದರೂ, ಸಾಧ್ಯವಾಗಲಿಲ್ಲ. ಆ ಮೇಲೆ ಅವಕಾಶ ಸಿಕ್ಕಲಿಲ್ಲ ಎಂದು ಥಟ್ಟನೇ ಹೇಳಿದರು. ಆದರೆ 2019ರಲ್ಲಿ ಖಂಡಿತವಾಗಿಯೂ ಆತ ವಿವಾಹವಾಗುತ್ತಾನೆ ಎಂದು ಸ್ಪಷ್ಟಪಡಿಸಿದರು. ಬಹುಶಃ 2019ರ ಲೋಕಸಭಾ ಚುನಾವಣೆಯ ಬಳಿಕ ಸಚಿವ ಚಿರಾಗ್ ಪಾಸ್ವಾನ್ ವಿವಾಹವಾಗುತ್ತಾರೆಯೇ ಅಥವಾ ಇಲ್ಲವೇ ಎನ್ನುವುದು ಚುನಾವಣೆಯ ಬಳಿಕವಷ್ಟೇ ಗೊತ್ತಾಗಬೇಕು.
ರಾಹುಲ್ ಸೂಚನೆ!
ಕಾಂಗ್ರೆಸ್ ವಕ್ತಾರರು ರಾಮಮಂದಿರ ಚರ್ಚೆಗೆ ಸಂಬಂಧಿಸಿದಂತೆ ಯಾವ ಟಿವಿ ಚಾನೆಲ್‌ಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ; ಬಹುಶಃ ಇದು ಪೂರ್ವನಿರ್ಧರಿತ ಯೋಜನೆಯ ಒಂದು ಭಾಗ. ಪಕ್ಷವು ಈ ಸಂಬಂಧ ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಂಡಿದ್ದು, ಎರಡು ಅಲುಗಿನ ಖಡ್ಗ ಎನಿಸಿದ ಈ ವಿಷಯದ ಕುರಿತ ಚರ್ಚೆಗೆ ನಾಯಕರನ್ನು ಕಳುಹಿಸುತ್ತಿಲ್ಲ. ಬಿಜೆಪಿ ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಲನ್ ಆಗಿ ಬಿಂಬಿಸಲು ಪ್ರಯತ್ನಿಸುತ್ತಿದೆ ಎನ್ನುವುದು ಕಾಂಗ್ರೆಸ್ ಭಾವನೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಹುತೇಕ ಬಿಜೆಪಿ ಮುಖಂಡರು, ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಿಯಾಗಿದೆ ಎಂಬ ಆರೋಪವನ್ನು ಮಾಡಿದ್ದಾರೆ ಎನ್ನುವುದು ಕಾಂಗ್ರೆಸ್ ನಾಯಕರ ವಾದ. ಹೀಗೆ ವಕ್ತಾರರನ್ನು ಟಿವಿ ಚರ್ಚೆಗಳಿಗೆ ಕಳುಹಿಸದಿರುವುದು ಇದೇ ಮೊದಲಲ್ಲ. ಇತ್ತೀಚಿನ ದಿನಗಳಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಅಥವಾ ಜನರ ಧ್ರುವೀಕರಣಕ್ಕೆ ಕಾರಣವಾಗುವ ವಿಚಾರಗಳಿಗೆ ಕಾಂಗ್ರೆಸ್ ಪಕ್ಷ ತನ್ನ ವಕ್ತಾರರನ್ನು ಟಿವಿ ಚರ್ಚೆಗೆ ಕಳುಹಿಸುತ್ತಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ಸುದ್ದಿವಾಹಿನಿಯೊಂದು ‘ಕಾಂಗ್ರೆಸ್‌ಅಗನೆಸ್ಟ್ ಹಿಂದೂಸ್’ ಎಂಬ ಹ್ಯಾಶ್‌ಟ್ಯಾಗ್ ನಿರ್ವಹಿಸುತ್ತಿದೆ. ಇದು ಕೆಲ ಕಾಲದಿಂದ ಟ್ರೆಂಡಿಂಗ್ ಆಗುತ್ತಿದೆ. ಆದ್ದರಿಂದ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ಇಲ್ಲ ಎಂಬ ಅರ್ಥದಲ್ಲಿ ಕಾಂಗ್ರೆಸ್ ವಕ್ತಾರರು ಮಾತನಾಡಿದರೆ, ಇದನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬ ಭೀತಿ ರಾಹುಲ್‌ಗಾಂಧಿಯವರದ್ದು. ಆದ್ದರಿಂದ ಈ ವಿಷಯದ ಕುರಿತ ಯಾವುದೇ ಚರ್ಚೆಗಳಲ್ಲ್ಲಿ ಭಾಗವಹಿಸದಂತೆ ಸೂಚನೆ ನೀಡಿದ್ದಾರೆ. ಈ ನಡೆಯನ್ನು ಕೆಲ ಕಾಂಗ್ರೆಸ್ ಮುಖಂಡರು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಏನೂ ಮಾತನಾಡದಿರುವುದೇ ಒಳಿತು ಎಂಬ ಭಾವನೆ ಅವರದ್ದು. ಮಾತು ಬೆಳ್ಳಿ- ಮೌನ ಬಂಗಾರ.
ಮೋದಿ ವಿರುದ್ಧ ಶತ್ರುಘ್ನ?
ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ಕಣಕ್ಕೆ ಇಳಿಸಲು ವಿರೋಧ ಪಕ್ಷಗಳ ಮುಖಂಡರು ಪ್ರತಿದಿನವೂ ಹೊಸ ಹೆಸರುಗಳನ್ನು ಪಠಿಸುತ್ತಿದ್ದಾರೆ. ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಒಮ್ಮತದ ಅಭ್ಯರ್ಥಿಯನ್ನು ಮೋದಿ ವಿರುದ್ಧ ಕಣಕ್ಕಿಳಿಸಲು ಬಹುತೇಕ ಒಪ್ಪಿಕೊಂಡಿದ್ದಾರೆ. ಆದರೆ ಆ ಅಭ್ಯರ್ಥಿ ಆಯ್ಕೆ ಬಗ್ಗೆ ಇನ್ನೂ ಒಮ್ಮತ ಮೂಡಿಲ್ಲ. ಪ್ರಿಯಾಂಕಾ ಗಾಂಧಿಯವರ ಹೆಸರು ಕೇಳಿಬರುತ್ತಿದೆಯಾದರೂ, ಈ ಸಾಧ್ಯತೆ ವಿರಳ. ಬಹುತೇಕ ಮುಖಂಡರು ಬಿಜೆಪಿ ಬಂಡುಕೋರ ಸಂಸದ ಶತ್ರುಘ್ನ ಸಿನ್ಹಾ ಅವರ ಹೆಸರನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದುವರೆಗೆ ತಾವು ಪ್ರತಿನಿಧಿಸುತ್ತಿದ್ದ ಪಾಟ್ನಾ ಕ್ಷೇತ್ರದಿಂದಲೇ ಸ್ಪರ್ಧಿಸುವ ಇಂಗಿತವನ್ನು ಶತ್ರುಘ್ನ ಸಿನ್ಹಾ ವ್ಯಕ್ತಪಡಿಸಿದ್ದರೂ, ವಿರೋಧ ಪಕ್ಷಗಳ ಮುಖಂಡರು ಅವರನ್ನು ವಾರಣಾಸಿಯಲ್ಲಿ ಮೋದಿ ವಿರುದ್ಧ ಕಣಕ್ಕೆ ಇಳಿಸಲು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಅವರ ಬಂಡಾಯ ಮನಸ್ಥಿತಿಯ ಜತೆಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಬೆಂಬಲ ಎಲ್ಲವೂ ಜತೆ ಸೇರಿ, ಸಿನ್ಹಾ ಮೋದಿಗೆ ಪ್ರಬಲ ಸ್ಪರ್ಧೆ ಒಡ್ಡಬಲ್ಲರು. ಆದರೆ ಪಾಟ್ನಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಬೇಕೇ ಅಥವಾ ರಾಷ್ಟ್ರೀಯ ಜನತಾದಳ ಟಿಕೆಟ್‌ನಲ್ಲಿ ಸ್ಪರ್ಧಿಸಬೇಕೇ, ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್ ಹಾಗೂ ಆರ್‌ಜೆಡಿ ಬೆಂಬಲ ಪಡೆಯಬೇಕೇ ಎನ್ನುವುದನ್ನು ಸಿನ್ಹಾ ಇನ್ನೂ ನಿರ್ಧರಿಸಿಲ್ಲ. ವಾರಣಾಸಿ ಚಾಲೆಂಜ್ ಸ್ವೀಕರಿಸುವ ಬಗ್ಗೆಯೂ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಒಂದು ವೇಳೆ ಅವರು ವಾರಣಾಸಿಯಿಂದ ಅಭ್ಯರ್ಥಿಯಾದರೆ, ವಾರಣಾಸಿ ಅಂತರ್‌ರಾಷ್ಟ್ರೀಯ ಗಮನ ಸೆಳೆಯಲಿದೆ. ಏಕೆಂದರೆ ಈ ಬಿಹಾರಿ ಬಾಬೂ, ತಮ್ಮ ಆಕರ್ಷಕ ಚರಿಷ್ಮಾದಿಂದ ಮೋದಿ ವೈಫಲ್ಯಗಳ ಬಗ್ಗೆ ಗಮನ ಸೆಳೆಯಬಲ್ಲರು.
ಹೆಚ್ಚುತ್ತಿರುವ ಸಿಂಧಿಯಾ ಪ್ರಭಾವಳಿ
ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ ವಿಷಯವನ್ನು ಪದೇ ಪದೇ ಬಿತ್ತರಿಸಿದ ಟಿವಿ ವಾಹಿನಿಯೊಂದು, ‘‘ಸಿಂಧಿಯಾ ಬಿಜೆಪಿ ಸೇರುವ ಸಾಧ್ಯತೆ ಇದೆ’’ ಎಂದು ಹೇಳಿದೆ. ಈ ಬಗ್ಗೆ ಮಾತುಕತೆ ಅಂತಿಮಪಡಿಸಲು ಚೌಹಾಣ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿತ್ತು. ಮುಖ್ಯಮಂತ್ರಿ ಕಮಲ್‌ನಾಥ್ ಅವರು ದಾವೋಸ್‌ನಲ್ಲಿ ಇದ್ದ ಅವಧಿಯಲ್ಲಿ ಈ ಇಬ್ಬರು ಮುಖಂಡರು ಭೇಟಿ ಮಾಡಿದ್ದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಸಿಂಧಿಯಾ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಈ ವದಂತಿಗೆ ಸ್ಪಷ್ಟನೆ ನೀಡಿ, ಇದು ಕೇವಲ ಸೌಜನ್ಯದ ಭೇಟಿ ಎಂದು ಹೇಳಿದ್ದಾರೆ. ಆದರೆ ಟಿವಿ ವಾಹಿನಿಯ ನೇತೃತ್ವದಲ್ಲಿ ಹರಡುತ್ತಿರುವ ವದಂತಿಗೆ ಇದು ಸಮವಲ್ಲ. ಆದರೆ ಆ ಬಳಿಕ ಬಂದ ಸುದ್ದಿಯೆಂದರೆ, ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಅವರು ಪ್ರಿಯಾಂಕಾ ಗಾಂಧಿ ಜತೆ ಸೇರಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎನ್ನುವುದು. ಆದರೆ ಈ ವದಂತಿ ಅಲ್ಪಕಾಲದಲ್ಲೇ ಸಹಜ ಸಾವು ಕಂಡಿತು. ಕಾರಣವೇನೆಂದರೆ, ರಾಹುಲ್ ಹಾಗೂ ಸಿಂಧ್ಯಾ ನಡುವಿನ ನಿಕಟ ಸಂಬಂಧ ಬಹುತೇಕ ಎಲ್ಲ ಪತ್ರಕರ್ತರಿಗೆ ತಿಳಿದಿರುವಂಥದ್ದು; ರಾಹುಲ್ ಸಾಮಾನ್ಯವಾಗಿ ಸಿಂಧ್ಯಾ ಅವರನ್ನು ಆಪ್ತಸ್ನೇಹಿತ ಎಂದು ರಾಹುಲ್ ಸಂಬೋಧಿಸಿದಾಗ, ರಾಹುಲ್ ಅವರಿಂದ ಜವಾಬ್ದಾರಿ ಪಡೆದುಕೊಳ್ಳುವಷ್ಟರ ಮಟ್ಟಿಗೆ ಸಿಂಧ್ಯಾ ಹೇಗೆ ಕ್ಷಿಪ್ರವಾಗಿ ಬೆಳೆದಿದ್ದಾರೆ ಎಂಬ ಸುದ್ದಿ ಪ್ರಸಾರ ಮಾಡಿತು. ಈ ಸುದ್ದಿ ಮಾಧ್ಯಮಮಂದಿಗೆ ನಿಕಟ ಎನಿಸಿದರೂ, ಅವರ ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ.