ನಿಮ್ಮ ಪರಿಸರದಲ್ಲಿ ಕ್ಯಾನ್ಸರ್ ಹೆಚ್ಚುತ್ತಿರುವುದು ಯಾಕೆ?
ಉತ್ತರ ಇಲ್ಲಿದೆ
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಕ್ಯಾನ್ಸರ್ ರೋಗದ ಪ್ರಮಾಣವನ್ನು ಅಮೆರಿಕದಂತಹ ಅಧಿಕ ಆದಾಯದ ದೇಶದ ಜೊತೆಗೆ ಹೋಲಿಸುವುದು ಈ ಕುರಿತ ಚರ್ಚೆಗೆ ಒಂದು ಉಪಯುಕ್ತ ಆರಂಭಿಕ ಹಂತವಾಗಿದೆ. 2015ರಲ್ಲಿ ಅಮೆರಿಕದಲ್ಲಿ ಅಂದಾಜು ಪ್ರತಿ ಮೂವರು ವ್ಯಕ್ತಿಗಳ ಪೈಕಿ ಒಬ್ಬರಿಗೆ ಅವರ ಜೀವಿತಾವಧಿಯಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗಿದೆಯೆಂದು ಅಂದಾಜಿಸಲಾಗಿದೆ. ಈ ಪ್ರಮಾಣವು ಭಾರತದಲ್ಲಿ ತುಂಬಾ ಕಡಿಮೆಯಾಗಿದೆ. 130 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಭಾರತದಲ್ಲಿ ಒಂದು ವರ್ಷದಲ್ಲಿ 10 ಲಕ್ಷ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ.
‘‘ಪಿಝಾ ಹಾಗೂ ಬರ್ಗರ್‌ಗಳಂತಹ ಪಾಶ್ಚಾತ್ಯ ಆಹಾರ ಹಾಗೂ ಮಾಲಿನ್ಯವು ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ’’ ಎಂದು ನನ್ನ ಚಿಕ್ಕಪ್ಪ, ನನ್ನ ಉತ್ತರಕ್ಕೆ ಕಾಯದೆ ಹೇಳಿದರು. ಇತ್ತೀಚಿನ ದಿನಗಳಲ್ಲಿ ಅವರ ಸುತ್ತಮುತ್ತಲಿನ ಅನೇಕರು ಕ್ಯಾನ್ಸರ್ ಪೀಡಿತರಾಗುತ್ತಿದ್ದಾರೆಂಬುದಾಗಿ ನನ್ನಲ್ಲಿ ಹೇಳಿದ್ದರು. ‘‘ನೀವು ಸಂಶೋಧಕರು, ಆ ರೋಗವನ್ನು ಗುಣಪಡಿಸುವ ಂತಹ ಸಂಶೋಧನೆಯ ಸಮೀಪಕ್ಕೆ ಬಂದಿದ್ದೀರಾ?’’ ಎಂಬುದಾಗಿಯೂ ಅವರು ನನ್ನನ್ನು ಪ್ರಶ್ನಿಸಿದರು.
ಇದಕ್ಕಾಗಿ ನಾನು ಅವರನ್ನು ದೂರುವುದಿಲ್ಲ. ಅವರ ಸಹೋದರಿ, ನನ್ನ ಅಮ್ಮ, ಈಗಷ್ಟೇ ಕಿಮೋಥೆರಪಿಯ ಅಂತಿಮ ಸುತ್ತನ್ನು ಪೂರ್ತಿಗೊಳಿಸಿದ್ದರು. ಇಂತಹ ಪ್ರಶ್ನೆಗಳನ್ನು ಕೇಳಲು ಅವರಿಗೆ ಈ ಸನ್ನಿವೇಶವು ಅವಕಾಶ ದೊರಕಿಸಿಕೊಟ್ಟಿತ್ತು.
ಭಾರತದಲ್ಲಿ ಬೆಳೆದಿರುವ ನಾವೆಲ್ಲರೂ ಮಲೇರಿಯಾ ಹಾಗೂ ಡೆಂಗ್‌ನಂತಹ ಸೋಂಕು ರೋಗಗಳ ಕುರಿತು ಶಾಲೆಯಲ್ಲಿ ಕಲಿತಿದ್ದೇವೆ ಮತ್ತು ಪ್ರತಿಯೊಬ್ಬರಿಗೂ ಹೃದಯಾಘಾತಗಳ ಬಗ್ಗೆಯೂ ಗೊತ್ತಿದೆ. ಕ್ಯಾನ್ಸರ್ ಆಗ ಕೆಲವೇ ಮಂದಿಯನ್ನು ಬಾಧಿಸುತ್ತಿದ್ದಂತಹ ಒಂದು ಗುಪ್ತವಾದ ಕಾಯಿಲೆಯಾಗಿತ್ತು.
1990ರ ದಶಕದಲ್ಲಿ ನಮಗೆ ಆತಂಕಪಡಲು ಇದಕ್ಕಿಂತಲೂ ದೊಡ್ಡದಾದ ವಿಷಯಗಳಿದ್ದವು. ಪೋಲಿಯೊದಂತಹ ಸೋಂಕು ರೋಗಗಳು ಸಾವಿಗೆ ಪ್ರಮುಖ ಕಾರಣವಾಗುತ್ತಿದ್ದವು. ಈ ರೋಗ ಬೆದರಿಕೆಗಳ ಬಗ್ಗೆ ಭಾರತದ ಸಾರ್ವಜನಿಕ ಆರೋಗ್ಯ ನೀತಿಗಳು ಸರಿಯಾಗಿ ಗಮನಹರಿಸಿದ್ದವು. ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ನನ್ನ ದೂರದ ಸಂಬಂಧಿ ಅಥವಾ ನಮ್ಮ ಕುಟುಂಬಕ್ಕೆ ಪರಿಚಯವಿದ್ದವರೊಬ್ಬರಿಗೆ ಕ್ಯಾನ್ಸರ್ ತಗಲಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾದುದು ನನಗೆ ನೆನಪಿದೆ. ಆದರೆ ಕಳೆದ ದಶಕದಲ್ಲಿ ಹೆಚ್ಚು ಹೆಚ್ಚು ಜನರಿಗೆ ಕ್ಯಾನ್ಸರ್ ತಗಲಿರುವಂತೆ ಕಾಣುತ್ತಿದೆ. ಆನಂತರ, ಕಳೆದ ವರ್ಷದ ಒಂದು ದಿನದಂದು ನನ್ನ ತಾಯಿಗೆ ಅಂಡಾಶಯದ ಕ್ಯಾನ್ಸರ್ ತಗಲಿದೆಯೆಂಬ ಆಘಾತಕಾರಿ ಸುದ್ದಿ ನನಗೆ ಬರಸಿಡಿಲಿನಂತೆ ಬಡಿಯಿತು.
ನಾನು ಆಕೆಯನ್ನು ಭೇಟಿಯಾದಾಗ, ನನ್ನ ಸ್ನೇಹಿತರು ಹಾಗೂ ಕುಟುಂಬದಿಂದ ಪ್ರಶ್ನೆಗಳ ಸುರಿಮಳೆಯೇ ಹರಿದುಬಂದಿತು (ನಾನು ಅಮೆರಿಕ ರಾಷ್ಟ್ರೀಯ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಸಂಶೋಧಕನಾಗಿದ್ದೆ). ಇಂತಹ ಪ್ರಶ್ನೆ ಕೇಳಿದ್ದು, ನನ್ನ ಚಿಕ್ಕಪ್ಪ ಒಬ್ಪರೇನಲ್ಲ. ಅಮೆರಿಕದಲ್ಲಿಯೂ ನಾನು ಇಂತಹದ್ದೇ ಸನ್ನಿವೇಶವನ್ನು ಎದುರಿಸಿದ್ದೆ. ಅಲ್ಲಿಯೂ ತಮಗೆ ಹತ್ತಿರದವರುಹಲವರು ಈ ರೋಗದೊಂದಿಗೆ ಹೋರಾಡುತ್ತಿದ್ದಾರೆಂಬುದು ತಿಳಿದಿದೆ.
ಇದು ನಿಜವೇ?. ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್ ರೋಗದ ಪ್ರಕರಣಗಳು ಪತ್ತೆಯಾಗುತ್ತಿವೆಯೇ?. ಅಥವಾ ಇದು ವೈದ್ಯಕೀಯ ರೋಗನಿದಾನ ಪರೀಕ್ಷೆಯಲ್ಲಿ ಸುಧಾರಣೆ ಅಥವಾ ಜನರ ಆರ್ಥಿಕ ಸಶಕ್ತತೆಯ ಫಲಿತಾಂಶ ಇದಾಗಿದೆಯೇ?.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಕ್ಯಾನ್ಸರ್ ರೋಗದ ಪ್ರಮಾಣವನ್ನು ಅಮೆರಿಕದಂತಹ ಅಧಿಕ ಆದಾಯದ ದೇಶದ ಜೊತೆಗೆ ಹೋಲಿಸುವುದು ಈ ಕುರಿತ ಚರ್ಚೆಗೆ ಒಂದು ಉಪಯುಕ್ತ ಆರಂಭಿಕ ಹಂತವಾಗಿದೆ. 2015ರಲ್ಲಿ ಅಮೆರಿಕದಲ್ಲಿ ಅಂದಾಜು ಪ್ರತಿ ಮೂವರು ವ್ಯಕ್ತಿಗಳ ಪೈಕಿ ಒಬ್ಬರಿಗೆ ಅವರ ಜೀವಿತಾವಧಿಯಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗಿದೆಯೆಂದು ಅಂದಾಜಿಸಲಾಗಿದೆ. ಈ ಪ್ರಮಾಣವು ಭಾರತದಲ್ಲಿ ತುಂಬಾ ಕಡಿಮೆಯಾಗಿದೆ. 130 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಭಾರತದಲ್ಲಿ ಒಂದು ವರ್ಷದಲ್ಲಿ 10 ಲಕ್ಷ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ.
ಆದಾಗ್ಯೂ, 1990 ಹಾಗೂ 2016ರ ನಡುವಿನ ದತ್ತಾಂಶವನ್ನು ಗಮನಿಸಿ ಹಾಗೂ ಅದನ್ನು ಎರಡು ದೇಶಗಳ ನಡುವೆ ಹೋಲಿಸಿದರೆ. ಭಾರತದಲ್ಲಿ ಜನರ ಸಾವಿನ ಕಾರಣಗಳ ಪಟ್ಟಿಯಲ್ಲಿ ಕ್ಯಾನ್ಸರ್ ಮೂರು ಸ್ಥಾನಗಳಷ್ಟು ಮೇಲಕ್ಕೆ ಜಿಗಿದಿದೆ. ಆದರೂ, ಅಮೆರಿಕದ ಪಟ್ಟಿಯನ್ನು ಅದು ಮೀರಿಲ್ಲ. ಆದರೂ ನಮ್ಮ ಅಂತಃಪ್ರಜ್ಞೆಗೆ ಗೋಚರಿಸಿದ್ದ ಸಂಗತಿ ಈಗ ನಿಜವಾಗತೊಡಗಿದೆ. ಭಾರತದಲ್ಲಿ ಕ್ಯಾನ್ಸರ್ ರೋಗದ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ.
ಆದರೆ, ಇದು ಸಂಪೂರ್ಣ ಚಿತ್ರಣವೇನಲ್ಲ. ನನ್ನ ಚಿಕ್ಕಪ್ಪ ಹೇಳಿಕೊಳ್ಳುತ್ತಿರುವ ಹಾಗೆ ಪಾಶ್ಚಾತ್ಯ ಆಹಾರವು, ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳ ಏರಿಕೆ ಹಾಗೂ ಜನರ ಸಾವಿಗೆ ಕಾರಣವಲ್ಲ. ಭಾರತದಲ್ಲಿ ಪ್ರಾಣಿಜನ್ಯ ಮಾಂಸಾಹಾರ ಸೇವಿಸಿದ ಕಾರಣಕ್ಕಿಂತಲೂ ಧೂಮಪಾನದಂತಹ ಜೀವನಶೈಲಿಯ ಆಯ್ಕೆಯಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ.
ಕ್ಯಾನ್ಸರ್ ಮೂಲಭೂತವಾಗಿ ಒಂದು ವಂಶವಾಹಿ ಕಣಗಳಿಗೆ ಆಗುವ ಹಾನಿಯಿಂದಾಗಿ ಉಂಟಾಗುವ ಕಾಯಿಲೆಯಾಗಿದೆ. ನಮ್ಮ ಜೀವಿತಾವಧಿಯಲ್ಲಿ, ನಮ್ಮ ದೇಹದ ಅಂಗಾಂಗಗಳ ಜೀವಕೋಶಗಳು ಹಾಗೂ ಅಂಗಾಂಶಗಳು ನಶಿಸಿದಂತೆ, ಅವು ನಿರಂತರವಾಗಿ ಪುನರ್‌ಭರ್ತಿಗೊಳ್ಳುತ್ತಾ ಇರುತ್ತವೆ. ಜೀವಕೋಶಗಳು ತಿರುತಿರುಗಿ ವಿಭಜನೆಗೊಂಡು, ತಮ್ಮ ಡಿಎನ್‌ಎ ಸೇರಿದಂತೆ ತಮ್ಮ ಪ್ರತಿಗಳನ್ನು ತಾವಾಗಿಯೇ ಸೃಷ್ಟಿಸುವುದರಿಂದ ಇದು ಸಾಧ್ಯವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅದು ತಪ್ಪು ಡಿಎನ್‌ಎಯನ್ನು ಒಳಪಡಿಸಿಕೊಂಡ ದೋಷಪೂರಿತ ವಂಶವಾಹಿಗಳನ್ನು ಸೃಷ್ಟಿಸುವ ಸಾಧ್ಯತೆಯಿರುತ್ತದೆ. ಇದನ್ನು ವಂಶವಾಹಿಗಳ ರೂಪಾಂತರ ಎಂದು ಕರೆಯಲಾಗುತ್ತದೆ.
ಹೆಚ್ಚಿನ ಸಂದರ್ಭಗಳಲ್ಲಿ ಜೀವಕೋಶಗಳ ಈ ರೂಪಾಂತರವು ಅಪಾಯಕಾರಿಯಾಗಿರುವುದಿಲ್ಲ. ಆದರೆ ಕೆಲವೊಮ್ಮೆ, ಈ ರೂಪಾಂತರವು ನಿಯಂತ್ರಣರಹಿತವಾಗಿ ವಿಭಜನೆಗೊಳ್ಳುತ್ತವೆ ಹಾಗೂ ಅವು ಎಂದಿಗೂ ಸಾಯಲಾರವು. ಈ ಜೀವಕೋಶಗಳು ಕ್ಯಾನ್ಸರ್ ಕಣಗಳಾಗಿ ಪರಿವರ್ತಿತವಾಗುತ್ತವೆ. ಕ್ಯಾನ್ಸರ್ ಕೋಶಗಳ ಅನಿಯಂತ್ರಿತ ವಿಭಜನೆಯು, ನಮ್ಮ ಅಂಗಾಂಗಗಳಿಗೆ ಅತಿ ಹೆಚ್ಚು ದೊರೆಯುವ ಎಲ್ಲಾ ಸಂಪನ್ಮೂಲಗಳನ್ನು ಅವು ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಅದರ ಸಾಮಾನ್ಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತವೆ ಹಾಗೂ ಅದು ವಿಫಲಗೊಳ್ಳುವಂತೆ ಮಾಡುತ್ತದೆ ಹಾಗೂ ಈ ಕ್ಯಾನ್ಸರ್ ಕಣಗಳು ದೇಹದ ಇತರ ಭಾಗಗಳಿಗೂ ಹರಡುತ್ತವೆ. ಸ್ವಾರ್ಥಪರ ಕ್ಯಾನ್ಸರ್ ಕಣವು ತಾನಿರುವ ಜೀವಿಯನ್ನು ಮೀರಿ ಅನಶ್ವರವಾಗಿರುವುದನ್ನು ಬಯಸುತ್ತದೆ. ಜೀವಿಯೊಂದು ಎಷ್ಟು ದೀರ್ಘಕಾಲ ಜೀವಿಸುತ್ತದೋ, ಅದರ ವಂಶವಾಹಿ ಕಣಗಳು ಹಾನಿಗೊಳಗಾಗುವ ಹಾಗೂ ನಮ್ಮ ಕೆಲವು ಜೀವಕೋಶಗಳಲ್ಲಿ ಕ್ಯಾನ್ಸರ್‌ಕಾರಕವಾದ ರೂಪಾಂತರಗಳು ನಡೆಯುವ ಸಾಧ್ಯತೆಗಳು ಅತಿ ಹೆಚ್ಚಾಗಿದೆ. ನಮ್ಮ ದೇಹದಲ್ಲಿರುವ ಸಂಪೂರ್ಣ ಜೀವಕೋಶಗಳ ಸಂಖ್ಯೆ (37 ಟ್ರಿಲಿಯನ್)ಯನ್ನು ಗಣನೆಗೆ ತೆಗೆದುಕೊಂಡರೆ, ವಯಸ್ಸು ಹೆಚ್ಚಿದಂತೆ ಕ್ಯಾನ್ಸರ್ ರೋಗ ಬಾಧಿಸುವ ಸಾಧ್ಯತೆಯು ಕೂಡಾ ನಾಟಕೀಯವಾಗಿ ಅಧಿಕವಾಗುತ್ತದೆ. ಇದೇನು ಕ್ರಾಂತಿಕಾರಿಯಾದ ಅಥವಾ ಹೊಸ ಚಿಂತನೆಯೇನೂ ಅಲ್ಲ. 1950ರ ದಶಕದಿಂದಲೇ ಈ ವಿಚಾರ ನಮಗೆ ಅರಿವಿತ್ತು. ಆದಾಗ್ಯೂ, ಭಾರತದಲ್ಲಿ ಈ ಪರಿಣಾಮವನ್ನು ನಾವೀಗ ಕಾಣುತ್ತಿದ್ದೇವೆ.
1990 ಹಾಗೂ 2016ರ ನಡುವೆ ಭಾರತದ ಜನತೆಯ ಸರಾಸರಿ ನಿರೀಕ್ಷಿತ ಜೀವಿತಾವಧಿಯಲ್ಲಿ ನಾಟಕೀಯವಾದ ಏರಿಕೆಯಾಗಿದೆ. 50ರ ದಶಕದ ಕೊನೆಯಿಂದ ಹಿಡಿದು, 70ರ ದಶಕದ ಮಧ್ಯದವರೆಗೂ ಅದರಲ್ಲಿ ಭಾರೀ ಹೆಚ್ಚಳವಾಗಿದೆ. ಸೋಂಕು ರೋಗಗಳ ಕಾರಣಗಳಿಂದಾಗಿ ಜನರ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಲು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದುದು, ನವಜಾತ ಶಿಶುಗಳ ಪಾಲನಾ ಕ್ರಮದಲ್ಲಿ ಸುಧಾರಣೆ, ಉತ್ತಮ ಆರೋಗ್ಯ ಹಾಗೂ ನೈರ್ಮಲೀಕರಣ ವ್ಯವಸ್ಥೆ ಹಾಗೂ ಪೋಲಿಯೊ ಸೇರಿದಂತೆ ವಿವಿಧ ರೋಗಗಳ ವಿರುದ್ಧ ಯಶಸ್ವಿ ಲಸಿಕೆ ಅಭಿಯಾನ ಇದಕ್ಕೆ ಕಾರಣವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜನರ ಜೀವಿತಾವಧಿಯಲ್ಲಿ ಸರಾಸರಿ ಹೆಚ್ಚಳವಾಗಿರುವುದು ಇದಕ್ಕೆ ಪ್ರಮುಖ ಕಾರಣ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜೀವಿಗಳಾದ ನಾವು, ದೀರ್ಘಾಯುಷಿಗಳಾಗಿ ಬದುಕುವುದಕ್ಕಾಗಿ ಈ ಬೆಲೆಯನ್ನು ತೆರುತ್ತಿದ್ದೇವೆ.
ಕ್ಯಾನ್ಸರ್ ರೋಗದ ಸಂಶೋಧನೆ ಹಾಗೂ ಚಿಕಿತ್ಸೆಗೆ ಭಾರತವು, ಅಪಾರವಾಗಿ ಹೂಡಿಕೆ ಮಾಡುವುದನ್ನು ಆರಂಭಿಸುವ ತನಕ, ನಾವು ಮುಂದಿನ ದಶಕದಲ್ಲಿ ಕ್ಯಾನ್ಸರ್ ರೋಗದ ಪ್ರಕರಣಗಳಲ್ಲಿ ಏರಿಕೆಯನ್ನು ಕಾಣುತ್ತಲೇ ಇರುವೆವು. ಕ್ಯಾನ್ಸರ್ ರೋಗಪತ್ತೆ ವಿಧಾನ ಹಾಗೂ ಚಿಕಿತ್ಸೆಯಲ್ಲಿ ಇನ್ನಷ್ಟು ಸುಧಾರಣೆಗಳಾಗುವವರೆಗೂ ಈ ಪ್ರವೃತ್ತಿಯು ಮುಂದುವರಿಯಲಿದೆ.
ಒಂದು ವೇಳೆ ನಮಗೆ ಭವಿಷ್ಯದಲ್ಲಿ ಇದಕ್ಕಾಗಿ ಭಾರೀ ದೊಡ್ಡ ಬೆಲೆ ತೆರುವುದು ಬೇಡವಾಗಿದ್ದಲ್ಲಿ, ಈ ಕ್ಯಾನ್ಸರ್ ರೋಗವೆಂಬ ಭಯಾನಕ ತಿರುವನ್ನು ದಾಟಿ ಮುಂದೆ ಸಾಗಲು ದೊರೆಯುವ ಅವಕಾಶವನ್ನು ಬಳಸಿಕೊಳ್ಳಬೇಕಾಗಿದೆ. ಪಶ್ಚಿಮದ ದೇಶಗಳಲ್ಲಿ ಕ್ಯಾನ್ಸರ್ ರೋಗದ ಪ್ರಕರಣಗಳ ಪ್ರಮಾಣವು ಯಥಾಸ್ಥಿತಿಯಲ್ಲಿದೆ. ಕಳೆದ 25 ವರ್ಷಗಳಲ್ಲಿ ಕ್ಯಾನ್ಸರ್ ರೋಗದಿಂದ ಬದುಕುಳಿದವರ ಪ್ರಮಾಣದಲ್ಲಿ ಬಹುತೇಕ ಶೇ. 20ರಷ್ಟು ಏರಿಕೆಯಾಗಿದೆ. ಮುಖ್ಯವಾಗಿ ಕ್ಯಾನ್ಸರ್ ರೋಗದ ಪತ್ತೆ ಹಾಗೂ ಚಿಕಿತ್ಸೆಯಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿರುವುದರಿಂದಾಗಿ ಇದು ಸಾಧ್ಯವಾಗಿದೆ.
ಒಂದು ವೇಳೆ ಭಾರತವು ಕ್ಯಾನ್ಸರ್ ಚಿಕಿತ್ಸೆಗಳಿಗೆ ಸಕ್ರಿಯವಾಗಿ ಹೂಡಿಕೆ ಮಾಡಿದಲ್ಲಿ (ಚೀನಾದ ಹಾಗೆ), ಎಚ್‌ಪಿವಿಯಂತಹ ತಡೆಗಟ್ಟಬಹುದಾದ ಕ್ಯಾನ್ಸರ್ ರೋಗಗಳಿಗೆ (ಈ ನಿಟ್ಟಿನಲ್ಲಿ ನಾವು ವಿಷಾದನೀಯವಾಗಿ ಹಿಂದುಳಿದಿದ್ದೇವೆ) ಲಸಿಕೆ ನೀಡಿಕೆ ಪ್ರಮಾಣಗನ್ನು ಹಾಗೂ ತ್ವರಿತವಾಗಿ ಕ್ಯಾನ್ಸರ್ ಪತ್ತೆ ಕಾರ್ಯಕ್ರಮಗಳಿಗೆ ಹೂಡಿಕೆಯನ್ನು ಹೆಚ್ಚಿಸಿದಲ್ಲಿ ಮುಂದಿನ ದಶಕದಲ್ಲಿ ನಾವು ಅಸಂಖ್ಯಾತ ಜೀವಗಳನ್ನು ಉಳಿಸಬಲ್ಲೆವು. ದಿನದಿಂದ ದಿನಕ್ಕೆ ಕ್ಯಾನ್ಸರ್ ಚಿಕಿತ್ಸೆ ದುಬಾರಿಯಾಗಿ ಪರಿಣಮಿಸುತ್ತ್ತಿರುವಾಗ, ಭಾರತವು ಕೋಟ್ಯಂತರ ಮಂದಿ ತೆರಿಗೆ ಪಾವತಿದಾರರ ಹಣವನ್ನು ಕೂಡಾ ಈ ರೀತಿಯಾಗಿಯೂ ಉಳಿಸಬಹುದಾಗಿದೆ.
ನನ್ನ ತಾಯಿಗೆ ಒಂದನೇ ಹಂತದ ಅಂಡಾಶಯ ಕ್ಯಾನ್ಸರ್ ತಗಲಿರುವುದು ಪತ್ತೆಯಾಗಿತ್ತು. ಅಂಡಾಶಯದ ಕ್ಯಾನ್ಸರ್ ತೀರಾ ಅಪರೂಪವಾಗಿದೆ. ಆದರೆ ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದಲ್ಲಿ ಅದನ್ನು ಗುಣಪಡಿಸಲು ಸಾಧ್ಯವಿದೆ. ಶಸ್ತ್ರಕ್ರಿಯೆ ಹಾಗೂ ಕಿಮೋಥೆರಪಿಯ ಬಳಿಕ ಸುಮಾರು ಒಂದು ವರ್ಷದಿಂದ ಆಕೆ ಕ್ಯಾನ್ಸರ್‌ಮುಕ್ತಳಾಗಿದ್ದಾಳೆ. ಭಾರತದಲ್ಲಿನ ಅನೇಕರಿಗೆ ದುಬಾರಿಯಾಗಿರುವಂತಹ ಖಾಸಗಿ ಆರೋಗ್ಯಪಾಲನಾ ಸೌಲಭ್ಯವನ್ನು ಪಡೆಯಲು ನಾವು ಶಕ್ತರಾಗಿದ್ದೆವು. ಭಾರತದ ಆರೋಗ್ಯ ಹಾಗೂ ಕಲ್ಯಾಣ ಸಚಿವಾಲಯ ಮತ್ತು ನಮ್ಮ ವಿಜ್ಞಾನಿಗಳು ಮುಂದಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಹೊರೆಯನ್ನು ಹತ್ತಿಕ್ಕುವ ಸವಾಲನ್ನು ಸ್ವೀಕರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಇದು ಸಕಾಲವಾಗಿದೆ.
ಕೃಪೆ: thewire.in