ಪುನರ್ಜನ್ಮ ಒಂದು ಆತ್ಮಾವಲೋಕನ
ಕ್ಯಾನ್ಸರ್ ಎಷ್ಟು ಋಣಾತ್ಮಕ ಪದ. ಯಾವುದೇ ಕೋನದಿಂದ ನೋಡಿದರೂ ಮಾನಸಿಕವಾಗಿ ದೈಹಿಕವಾಗಿ ಹಿಂಡಿ ಹಿಪ್ಪೆ ಮಾಡಿ ಕುಗ್ಗಿಸುವ ಮಾರಕವಾದ ನೋವು. ಬಲವಾದ ನಂಬಿಕೆ, ಬದುಕಿ ಸಾಧಿಸುವೆ ಎಂಬ ಛಲ, ಆತ್ಮ ಸ್ಥೈರ್ಯ, ವೈದ್ಯೋ ನಾರಾಯಣೋ ಹರಿಃ ಎಂಬ ಶರಣಾಗತಿ ಭಾವನೆ ಇದ್ದರೆ ಮಾತ್ರ ಜಯಿಸಿ ಬರಲು ಸಾಧ್ಯ ಎಂಬ ನಿರ್ಧಾರದಲ್ಲಿ ಬದುಕಿ ಉಳಿದವಳು ನಾನು.
ಸಣ್ಣ ವಯಸ್ಸಿನಲ್ಲಿ, ಕ್ಯಾನ್ಸರ್ ಎಂದರೆ ಏನು ಎಂದು ತಿಳಿಯದ ವಯಸ್ಸಿನಲ್ಲಿ, ಅಹಾ! ಈ ರೀತಿಯ ಕಾಯಿಲೆ ಬಂದರೆ ಎಲ್ಲರೂ ನನಗೆ ಪ್ರೀತಿ ತೋರುತ್ತಾರೆ, ಎಲ್ಲರಿಂದ ಆದರಿಸುವವಳಾಗುತ್ತೇನೆ ಎಂಬ ಕನಸು ಕಂಡದ್ದು ನಿಜ. ಆದರೆ ಅದು ಇಷ್ಟು ಮಾರಣಾಂತಿಕ ಎಂಬ ಕಲ್ಪನೆ ಕೂಡ ನನಗಿರಲಿಲ್ಲ. ಸಿನೆಮಾಗಳಲ್ಲಿ ಚಿತ್ರಿಸುವಂತೆ ಕ್ಯಾನ್ಸರ್ ಬಂದರೆ ಸಾವು ಎಂದು ತಿಳಿದಿತ್ತೇ ವಿನಃ ಇಷ್ಟು ನೋವಿನಿಂದ ಕೂಡಿರುತ್ತದೆ ಎಂಬ ಕಲ್ಪನೆ ಕೂಡ ನನಗಿರಲಿಲ್ಲ.
ಎಂಎಸ್ಆರ್ ಆಸ್ಪತ್ರೆಯಲ್ಲಿ ಎಲ್ಲಾ ಮೂಲ ಪರೀಕ್ಷೆಗಳ ನಂತರ ಎರಡನೆಯ ಹಂತದ ಸ್ತನದ ಅರ್ಬುದ ಕಾಯಿಲೆ ಎಂದು ತಿಳಿದಾಗ ಆದ ಆಘಾತ, ಅದನ್ನು ಜೀರ್ಣಿಸಿಕೊಳ್ಳಲು ಪಟ್ಟ ಪಾಡು, ಅನುಭವಿಸುವ ದೈಹಿಕ ನೋವು ಯಾವ ಶತ್ರುಗಳಿಗೂ ಬೇಡ ಎನ್ನಿಸದ ದಿನವಿಲ್ಲ
ಹೆತ್ತ ತಾಯಿ, ಒಡ ಹುಟ್ಟಿದವರೊಂದಿಗೆ ಸಂಪರ್ಕ ಕಳೆದುಕೊಂಡು ದಶಕಗಳೇ ಕಳೆದಿದ್ದವು. ಯಾರನ್ನೂ ನೋಡದೆ ಸತ್ತು ಹೋಗುವೆನೆಂಬ ಮಾನಸಿಕ ಯಾತನೆ ನನ್ನನ್ನು ಬಹಳ ಕುಗ್ಗಿಸಿತ್ತು. ಇದರೊಂದಿಗೆ ನನ್ನ ಮಗಳು ಇನ್ನೂ ಓದುತ್ತಿದ್ದಳು, ನನ್ನ ಪತಿರಾಯರ ಮುಂದಿನ ಪರಿಸ್ಥಿತಿ ಹೇಗೆ ಎಂಬ ನೋವು ನನ್ನನ್ನು ಹಗಲು ಇರುಳು ಕಾಡಲು ಶುರು ಮಾಡಿತ್ತು. ಎಷ್ಟೋ ರಾತ್ರಿಗಳು ನಿದ್ದೆ ಬರುತ್ತಿರಲಿಲ್ಲ. ನಿದ್ದೆ ಬಂದಾಗ ಉಸಿರಾಟ ಸ್ತಬ್ಧವಾದಂತಾಗಿ ಏಳಲಾಗದೆ ಮಲಗಲಾಗದೆ ನರಳಿದ ದಿನಗಳಿಗೆ ಲೆಕ್ಕವಿಲ್ಲ. ಅಳಲು ಕಣ್ಣೀರು ಬತ್ತಿತ್ತು. ತಾಯಿ ಮಡಿಲಿಗೆ ಹೋಗಲು ದಾರಿ ತಿಳಿದಿರಲಿಲ್ಲ. ಇಷ್ಟೆಲ್ಲದರ ಮಧ್ಯೆ ನನ್ನ ಹತ್ತಿರ ಇದ್ದ ರಾಶಿ ರಾಶಿ ಒಳ್ಳೆಯ ಬಟ್ಟೆಗಳನ್ನು ಹಾಕಿಕೊಳ್ಳದೆ ಸತ್ತು ಹೋಗುವೆನೆಂಬ ಸಂಕಟ ಕೂಡ ಕಾಡಿದ್ದು ನಿಜ!!!
ಒಂದು ಪ್ರಯೋಗಾತ್ಮಕ ನಿರ್ಧಾರದಲ್ಲಿ ನನ್ನನ್ನು ನೋಡುತ್ತಿದ್ದ ವೈದ್ಯರು ಮುಂಬೈಯ ಟಾಟಾ ಮೆಮೋರಿಯಲ್ಗೆ ಹೋಗಲು ಸಲಹೆ ನೀಡಿದರು. ಅದರ ಪ್ರಕಾರ ಶಸ್ತ್ರಚಿಕಿತ್ಸೆ ಇಲ್ಲದೆಯೇ ಬರಿಯ ಔಷಧಿಯಿಂದ ಗುಣ ಪಡಿಸುವ ವಿಧಾನ. ಆದರೆ ಅದು ಶಸ್ತ್ರಚಿಕಿತ್ಸೆಗಿಂತ ಹತ್ತು ಪಟ್ಟು ನೋವು. ಗಂಟಲಿನಿಂದ ಟ್ಯೂಬ್ ಹಾಕಿ ಔಷಧಿ ಕೊಡುತ್ತಾರೆ. ವಿವರಿಸಲಾಗದಷ್ಟು ಯಾತನೆ. ಅದು ಮುಗಿದ ಎರಡು ದಿನ ಮಾತನಾಡಲು ಆಗುವುದಿಲ್ಲ.
ಆ ನೋವನ್ನು ಸಹಿಸಿಕೊಂಡೆ, ಯಾಕೆಂದರೆ ನನಗೆ ಒಂದು ಗುರಿ ಇತ್ತು. ನನ್ನ ಬಾಲ್ಯದ ಗೆಳೆಯ ಎಲ್ಲಿ ಇದ್ದಾನೆ, ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ ಒಂದೂ ತಿಳಿಯದ ದಿನಗಳವು. ಅವನನ್ನು ಭೇಟಿ ಮಾಡಲೇಬೇಕೆಂಬ ಛಲ, ಅದೇ ನನ್ನ ಗುರಿಯಾಗಿತ್ತು. ಮೊದಲ ದಿನಗಳಲ್ಲಿ ನಾನು ಕಠಿಣವಾಗಿರಲಿಲ್ಲ, ಬಹಳ ದುರ್ಬಲಳಾಗಿದ್ದೆ. ಧ್ಯಾನ, ಪ್ರಾಣಾಯಾಮ ಸ್ವ ಸಮ್ಮೋಹನ ಕ್ರಿಯೆಗೆ ನನ್ನನ್ನು ನಾನೇ ಒಗ್ಗಿಸಿಕೊಂಡೆ. ಮೂರು ವರ್ಷಗಳ ತಪಸ್ಸು, ಇದರೊಂದಿಗೆ ವೈನಾಡಿನ ಆಯುರ್ವೇದ ಔಷಧಿಯ ಪರಿಣಾಮ ರಾಕ್ಷಸ ರೋಗದಿಂದ ಹೊರ ಬರಲು ಸಹಾಯ ಮಾಡಿತು. ಔಷಧಗಳಿಂದ ಆದ ಅಡ್ಡ ಪರಿಣಾಮಗಳು ನನ್ನ ಕೂದಲಿನ ಮೇಲೆ ತೋರಿಸಿತ್ತು. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ನನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ನಿರ್ಧಾರ ಮಾಡಿದೆ. ಮುಂದೆ ನಾನು ಬದುಕನ್ನು ಅಳವಡಿಸಿಕೊಳ್ಳಲು ತೆಗೆದುಕೊಂಡ ನಿರ್ಧಾರಕ್ಕೆ ಅದು ಸಾಧಕವಾಗಿತ್ತು.
seeunoit ಇನ್ನೊಂದು ಅದ್ಭುತವೆಂದರೆ, ಆಕಸ್ಮಿಕವೋ, ಪವಾಡವೋ ತಿಳಿಯದು. ಮುಂಬೈಯ ಕಡೆಯ ತಪಾಸಣೆ ಮುಗಿಸಿ ಬೆಂಗಳೂರಿಗೆ ಬಂದರೆ ಫೇಸ್ಬುಕ್ನಲ್ಲಿ ಒಂದು ಫ್ರೆಂಡ್ ರಿಕ್ವೆಸ್ಟ್ ಎಂದು. ಬಹಳ ಅನುಮಾನದಿಂದಲೇ ಅದನ್ನು ಸ್ವೀಕರಿಸಿದೆ, ಹಿಡಿಸಲಾರದ ಸಂತೋಷ ಅದು ನನ್ನ ಗೆಳೆಯನಾಗಿದ್ದ. ನನ್ನ ಆಸೆಯ ಮೊದಲ ಗುರಿ ಮುಗಿದಿತ್ತು.
ನಂತರ ಶುರುವಾಗಿದ್ದು ಆತ್ಮಾವಲೋಕನ. ನನ್ನ ಆತ್ಮವನ್ನು ತೃಪ್ತಿ ಪಡಿಸಬೇಕಿತ್ತು. ಆ ಭಗವಂತ ನನಗೆ ಪುನರ್ಜನ್ಮ ಕರುಣಿಸಿದ್ದಾನೆ, ಅದನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಬೇಕೆಂಬ ನಿರ್ಧಾರಕ್ಕೆ ಬಂದೆ. ಆ ನಿಟ್ಟಿನಲ್ಲಿ ನನ್ನ ಸಹಾಯಕ್ಕೆ ಬಂದದ್ದು ನಾನು ಕಲಿತ ಕೌನ್ಸಿಲಿಂಗ್ ವಿದ್ಯೆ.
ಇಂದು ನಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಬೆಳವಣಿಗೆಯಾಗಲೂ ಪೂರಕವಾಗಿ ನಿಂತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಎಷ್ಟೋ ಏಳು ಬೀಳುಗಳಿದ್ದರೂ ಕೂಡ ಕಡೆಯದಾಗಿ ಆ ಮಕ್ಕಳ ಮೊಗದಲ್ಲಿ ಕಾಣುವ ಕಿರುನಗೆ ನನಗೆ ಆತ್ಮ ತೃಪ್ತಿ ತಂದು ಕೊಟ್ಟಿದೆ.