ಉಳಿಯ ನಿವಾಸಿಗಳಿಗೆ ಮರೀಚಿಕೆಯಾದ ಶಾಶ್ವತ ಸೇತುವೆ
ದುಷ್ಕರ್ಮಿಗಳಿಂದ ಹಾನಿಗೀಡಾದ ತಾತ್ಕಾಲಿಕ ಸೇತುವೆ
ಮಂಗಳೂರು, ಫೆ.4: ನಮ್ಮನ್ನು ನಮ್ಮಷ್ಟಕ್ಕೆ ಬದುಕಲು ಬಿಡಿ. ನಮಗೆ ಯಾರ ಸಹಾಯವೂ ಬೇಕಾ ಗಿಲ್ಲ. ನಾವಾಗಿಯೇ ಸಂಪರ್ಕಕ್ಕೊಂದು ಸೇತುವೆ ನಿರ್ಮಿಸಿದರೆ ಅದನ್ನೂ ಹಾಳುಗೆಡವುದು ಎಷ್ಟು ಸರಿ?. ದಲಿತ ಕುಟುಂಬವೊಂದನ್ನು ಬಿಟ್ಟರೆ ಕ್ರೈಸ್ತರೇ ಇಲ್ಲಿ ಬಹುಸಂಖ್ಯಾತರಾಗಿರುವುದು ತಪ್ಪೇ? ಇದು ನೇತ್ರಾವತಿ ನದಿಯ ದ್ವೀಪ ಪ್ರದೇಶವಾದ ಪಾವೂರು ಉಳಿಯ ನಿವಾಸಿಗಳ ಪ್ರಶ್ನೆಗಳು.
ಫೆ.10ರಂದು ಪಾವೂರು ಉಳಿಯದ ಇನ್ಫೆಂಟ್ ಜೀಸಸ್ ಚರ್ಚ್ನ ವಾರ್ಷಿಕ ಹಬ್ಬವಿದ್ದು, ಪರವೂರಿನ ಸಾವಿರಕ್ಕೂ ಅಧಿಕ ಮಂದಿ ವಷಂಪ್ರತಿ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿ ಅವರೆಲ್ಲರೂ ಹೊಸ ಸೇತುವೆಯಲ್ಲಿ ಬರುವ ಆಶೆ ವ್ಯಕ್ತಪಡಿಸಿದ್ದು, ಅದಕ್ಕೂ ಮೊದಲು ಸೇತುವೆಗೆ ಹಾನಿಗೈದ ದುಷ್ಕರ್ಮಿಗಳು, ದಡದಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಹಾನಿಗೈದರು.
ಮೊದಲು ಇಲ್ಲಿ 50ಕ್ಕೂ ಅಧಿಕ ಕುಟುಂಬಗಳಿತ್ತು. ಕಾರಣಾಂತರಗಳಿಂದ ಕೆಲವರು ಊರು ಬಿಟ್ಟು ಹೋದರು. ಇದೀಗ 33 ಕುಟುಂಬಗ ಇಲ್ಲಿ ನೆಲೆಸಿವೆ.
ಎಲ್ಲದಕ್ಕೂ ರಾ.ಹೆ.75ರ ಅಡ್ಯಾರ್ ಹತ್ತಿರವಾಗುವ ಕಾರಣದಿಂದ ನಾವು ಮೊದಲಿನಿಂದಲೂ ಈ ನದಿಯಲ್ಲಿ ನಡೆದುಕೊಂಡು ಅಥವಾ ಈಜಿ ಹೋಗು ತ್ತಿದ್ದೆವು. ಬಳಿಕ ಗೋಣಿಚೀಲದಲ್ಲಿ ಮರಳು ತುಂಬಿ ನದಿಗೆ ಅಡ್ಡ ಹಾಕಿ, ಬಿದಿರು ಅಥವಾ ಹಲಗೆ ಹಾಕಿ ಸಂಪರ್ಕ ಸಾಧಿಸುತ್ತಿದ್ದೆವು. ಪ್ರತೀ ವರ್ಷ 70 ಸಾವಿರ ರೂ. ಖರ್ಚು ಮಾಡುತ್ತಿದ್ದೆವು. ಆದರೆ, ಅದು ಶಾಶ್ವತ ಪರಿಹಾರವಲ್ಲದ ಕಾರಣ ಹಲವು ಸಮಸ್ಯೆ ಎದುರಿಸಬೇಕಾಗುತ್ತಿತ್ತು. ಆದಾಗ್ಯೂ ನಾವು ನಮ್ಮದೇ ಕೆಲಸ ಮಾಡಿಕೊಂಡು ನೆಮ್ಮದಿಯ ಬದುಕು ಕಟ್ಟುತ್ತಿ ದ್ದೆವು. ಕೆಲವರು ಹೊಳೆಯಲ್ಲಿ ಮೀನು ಹಿಡಿದು ಬದುಕು ಸಾಗಿಸುತ್ತಿದ್ದರೆ, ಇನ್ನು ಕೆಲವರು ಬೀಡಿ ಕಟ್ಟಿ ಅಥವಾ ಆಡು ಸಾಕಿ ಬದುಕುತ್ತಿದ್ದೆವು.
ನಮಗೆ ಶಾಶ್ವತ ಸೇತುವೆ ನಿರ್ಮಿಸಿ ಕೊಡಿ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಮನವಿ ಮಾಡಿದೆವು. ಎಲ್ಲರೂ ಆಶ್ವಾಸನೆ ನೀಡಿದರೇ ವಿನಃ ಅದನ್ನು ಈಡೇರಿಸಲಿಲ್ಲ. ಸಚಿವ ಯು.ಟಿ.ಖಾದರ್ ಮಲೆನಾಡು ಅಭಿವೃದ್ಧಿ ಯೋಜನೆಯಡಿ 1.5 ಕೋ.ರೂ. ತಾತ್ಕಾಲಿಕ ಸೇತುವೆ ನಿರ್ಮಾಣಕ್ಕಾಗಿ ಮಂಜೂರುಗೊಳಿಸಿದರೂ ತಾಂತ್ರಿಕ ಕಾರಣದಿಂದ ಆ ಹಣ ಬಿಡುಗಡೆಯಾಗಲಿಲ್ಲ. ಚರ್ಚ್ನ ಫಾದರ್ ಜೆರಾಲ್ಡ್ ನಮ್ಮ ಸಂಕ ಷ್ಟವನ್ನು ಅರಿತು 800 ಮೀಟರ್ ಉದ್ದದ ತಾತ್ಕಾಲಿಕ ಸೇತುವೆಯನ್ನು ದಾನಿಗಳ ನೆರವಿನಿಂದ ನಿರ್ಮಿಸಿ ಕೊಟ್ಟರು. ಅದಕ್ಕೆ ಸುಮಾರು 18 ಲಕ್ಷ ರೂ. ಖರ್ಚಾಗಿತ್ತು. ಇಲ್ಲಿ ಮರಳುಗಾರಿಕೆ ಶುರುವಾದ ಅಂ ದಿನಿಂದ ನಮ್ಮ ಬದುಕು ಅತಂತ್ರವಾಯಿತು. ಹಿಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಇಲ್ಲಿ ಮರಳುಗಾರಿಕೆ ನಿಷೇಧಿಸಿದ್ದರು. ಆದರೆ ಇತ್ತೀಚೆಗೆ ಇಲ್ಲಿ ಮತ್ತೆ ಮರಳುಗಾರಿಕೆ ಆರಂಭವಾಗಿದೆ. ಇತ್ತೀಚೆಗೆ ಮಂಗಳೂರು ಸಹಾಯಕ ಆಯುಕ್ತರ ನೇತೃತ್ವದ ಅಧಿಕಾರಿಗಳ ತಂಡ ಮರಳು ಅಡ್ಡೆಗೆ ದಾಳಿ ಮಾಡುವಾಗ ನಮ್ಮಿಂದ ದೋಣಿಯ ನೆರವು ಕೇಳಿದ್ದರು. ನಾವು ದೋಣಿ ನೀಡಿದ ಸಿಟ್ಟಿನಿಂದ ಮರುದಿನ ರಾತ್ರಿ ಸೇತುವೆಗೆ ಹಾನಿ ಎಸಗಿದ್ದಾರೆ. ಇದು ನ್ಯಾಯವೇ ಎಂದು ಪ್ರಶ್ನಿಸುತ್ತಾರೆ.
ನಮಗಿನ್ನು ತಾತ್ಕಾಲಿಕ ಸೇತುವೆ ಬೇಡ. ಏನಿದ್ದರೂ ಶಾಶ್ವತ ಸೇತುವೆ ನಿರ್ಮಿಸಿಕೊಡಲಿ. ಹಾಗಾದರೆ ಇಲ್ಲಿಂದ ಗುಳೇ ಹೊರಟವರು ಮತ್ತೆ ವಾಪಸ್ ಬರಲಿದ್ದಾರೆ ಎನ್ನುವ ಇಲ್ಲಿನ ನಿವಾಸಿಗಳು, ಈ ಸೇತುವೆಯಿಂದ ಪಾವೂರು ಉಳಿಯದಿಂದ ಅಡ್ಯಾರ್ಗೆ ಮಾತ್ರ ಸಂಪರ್ಕ ಕಲ್ಪಿಸಲು ಸಾಧ್ಯವಿದ್ದು, ಉಳಿಯದಿಂದ ಪಾವೂರು ಗಾಡಿಗದ್ದೆಯನ್ನು ಸಂಪರ್ಕಿಸಲು ನಮಗೆ ದೋಣಿಯೇ ಆಸರೆ. ದೋಣಿ ದಾಟಿದ ಬಳಿಕ ಗಾಡಿಗದ್ದೆಯಿಂದ ಮತ್ತೆ ಬಾಡಿಗೆ ರಿಕ್ಷಾ ಮೂಲಕ ಹೋಗಬೇಕಾಗಿದೆ. ಒಟ್ಟಿನಲ್ಲಿ ಹೊರ ಊರ ಸಂಪರ್ಕ ಸಾಧಿಸಲು ನಾವು ಹರಸಾಹಸ ಪಡಬೇಕಾಗಿದೆ ಎಂದು ಹೇಳುತ್ತಾರೆ.
ಇಲ್ಲಿ ಎಲ್ಲಾ ಸಮುದಾಯದವರು ಇದ್ದಿದ್ದರೆ ಎಲ್ಲಾ ಕಡೆಯಿಂದಲೂ ಒತ್ತಡ ಬಿದ್ದು ಯಾವತ್ತೋ ಇಲ್ಲೊಂದು ಶಾಶ್ವತ ಸೇತುವೆ ನಿರ್ಮಾಣ ಆಗುತ್ತಿತ್ತು ಎಂದು ಹೇಳುವ ಸ್ಥಳೀಯರು, ಸರಕಾರ ಇನ್ನಾದರು ಎಚ್ಚೆತ್ತುಕೊಳ್ಳಲಿ, ನಮ್ಮತ್ತ ಕಣ್ಣು ಹಾಯಿಸಲಿ ಎಂದು ಆಗ್ರಹಿಸಿದ್ದಾರೆ.
ಪಾಳುಬಿದ್ದ ಶಾಲೆ: ಇಲ್ಲಿಯ ಶಾಲೆ ಕೂಡ ಇದೀಗ ಪಾಳು ಬಿದ್ದಿದ್ದು, 1ರಿಂದ 5ನೇ ತರಗತಿವರೆಗೆ ಇಲ್ಲಿನ ನೂರಾರು ಮಕ್ಕಳು ಇಲ್ಲೇ ಕಲಿಯುತ್ತಿದ್ದರು. ಐದಾರು ವರ್ಷಗಳ ಹಿಂದೆ ಈ ಶಾಲೆಗೆ ಬೀಗ ಜಡಿಯಲಾಗಿದ್ದು, ಇದೀಗ ಶಾಲೆಯ ಸುತ್ತಮುತ್ತ ಗಿಡಗಂಟಿ ಬೆಳೆದಿದೆ. ಹೆಂಚು ಬಿದ್ದಿವೆ. ಕಟ್ಟಡ ಭಾಗಶಃ ಕುಸಿಯುವ ಭೀತಿಯಲ್ಲಿದೆ. ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ.
ಸಚಿವರ ಸಭೆ
ಪಾವೂರು ಉಳಿಯದ ಈ ಸೇತುವೆಗೆ ಹಾನಿಗೈದ ಹಿನ್ನಲೆಯಲ್ಲಿ ರವಿವಾರ ಸರ್ಕ್ಯೂಟ್ ಹೌಸ್ನಲ್ಲಿ ಸಚಿವ ಯು.ಟಿ.ಖಾದರ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹಾಗೂ ಸ್ಥಳೀಯ ಪ್ರಮುಖರ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲೂ ಉಳಿಯ ನಿವಾಸಿಗಳು ಅಳಲು ತೋಡಿಕೊಂಡಿದ್ದು, ಮರಳು ಮಾಫಿಯಾದಿಂದ ರಕ್ಷಣೆ ಕೋರಿದ್ದಾರೆ.