ಸಂರಕ್ಷಣೆಗೆ ಕಾಯುತ್ತಿವೆ ನೆಹರೂ, ಶೇಕ್ಸ್‌ಪಿಯರ್‌ಗೆ ಸಂಬಂಧಿಸಿದ ಅಪರೂಪದ ದಾಖಲೆಗಳು
ರೂರ್ಕೆಲಾ, ಫೆ. 5: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹಿಂದಿ, ಇಂಗ್ಲಿಷ್ ಮತ್ತು ಉರ್ದು ಹಸ್ತಾಕ್ಷರ, ಖ್ಯಾತ ಇಂಗ್ಲಿಷ್ ಕವಿ ವಿಲಿಯಂ ಶೇಕ್ಸ್‌ಪಿಯರ್ ಅವರ ಸಮಗ್ರ ಸಾಹಿತ್ಯದ ಸಂಪುಟ (1623ರಲ್ಲಿ ಪ್ರಕಟಿತ) ಸೇರಿದಂತೆ ಸಾವಿರಾರು ಐತಿಹಾಸಿಕ ಹಸ್ತಪ್ರತಿಗಳು ಹಾಗೂ ಯಾರೂ ಇದುವರೆಗೆ ನೋಡಿರದ ಅಪರೂಪದ ಫೋಟೊಗಳ ಸಂಗ್ರಹ ಇಲ್ಲಿನ ಐಐಟಿಯ ಗ್ರಂಥಾಲಯದಲ್ಲಿ ಸೂಕ್ತ ಸಂರಕ್ಷಣೆಗಾಗಿ ಕಾಯುತ್ತಿವೆ.
ಐಐಟಿಯ ಮಹಾತ್ಮಗಾಂಧಿ ಕೇಂದ್ರೀಯ ಗ್ರಂಥಾಲಯದಲ್ಲಿ ಇರಿಸಿರುವ ಸಂದರ್ಶಕರ ಟಿಪ್ಪಣಿ ಪುಸ್ತಕದಲ್ಲಿ, ನೆಹರೂ ಮೂರು ಭಾಷೆಗಳಲ್ಲಿ ಸಹಿ ಮಾಡಿದ್ದಾರೆ. ಜತೆಗೆ 25ನೇ ನವೆಂಬರ್ 1949 ಎಂದು ದಿನಾಂಕವನ್ನೂ ನಮೂದಿಸಿದ್ದಾರೆ. ಹಿಂದಿಯಲ್ಲಿ ತಮ್ಮ ಹೆಸರು ಬರೆಯುವ ವೇಳೆ ತಿದ್ದಿ ಸರಿಪಡಿಸಿರುವ ಅಂಶವೂ ದಾಖಲಾಗಿದೆ ಎಂದು ಗ್ರಂಥಪಾಲಕ ಡಾ.ಸಿ.ಜಯಕುಮಾರ್ ಹೇಳುತ್ತಾರೆ.
ಬ್ರಿಟಿಷರ ಕಾಲದಿಂದಲೂ ಈ ಗ್ರಂಥಾಲಯ ಪ್ರಾಚ್ಯ ದಾಖಲೆಗಳ ಅಪೂರ್ವ ಸಂಗ್ರಹ ಹೊಂದಿದೆ ಎಂದು ಅವರು ಹೇಳುತ್ತಾರೆ. ಆದಾಗ್ಯೂ ಇದೀಗ ಹಸ್ತಪ್ರತಿಗಳು ಹಾಗೂ ಫೋಟೊಗಳನ್ನು ಮೂಲಸ್ಥಿತಿಯಲ್ಲೇ ಸಂರಕ್ಷಿಸಲಾಗುತ್ತಿದೆ. 1950ರ ಘಟಿಕೋತ್ಸವದ ಆಲ್ಬಂ ಸೇರಿದಂತೆ ಹಲವು ಮಹತ್ವದ ಫೋಟೊಗಳನ್ನು ಲೇಬಲ್ ಕೂಡಾ ಇಲ್ಲದೇ ಸಂಗ್ರಹಿಸಿ ಇಡಲಾಗಿದೆ ಎಂದು ವಿವರಿಸುತ್ತಾರೆ.
"ವಿಲಿಯಂ ಶೇಕ್ಸ್‌ಪಿಯರ್‌ನ ಸಂಪಾದಿತ ಕೃತಿಗಳ ತೀರಾ ಹಳೆಯ ಮುದ್ರಿತ ಪ್ರತಿ ನಮ್ಮಲ್ಲಿದೆ. ಜತೆಗೆ ಇದೀಗ ಮುದ್ರಣವಾಗದೇ ಇರುವ 10 ಸಾವಿರ ಸಂಪುಟಗಳೂ ಇವೆ" ಎಂದು ಹೇಳುತ್ತಾರೆ. ಕೆಲ ಪುಸ್ತಕಗಳ ಹಾಳೆಗಳು ಕಿತ್ತುಕೊಂಡಿದ್ದು, ಇವುಗಳನ್ನು ಜತನದಿಂದ ಕಪಾಟಿನಲ್ಲಿ ಸಂಗ್ರಹಿಸಿದ್ದಾರೆ.
ಬಾರ್ಡ್ ಸಂಪಾದಿತ ಶೇಕ್ಸ್‌ಪಿಯರ್‌ನ ಸಮಗ್ರ ಕೃತಿ ಸಂಪುಟ ಇಲ್ಲಿದ್ದು, 1623ರಲ್ಲಿ ಇದು ಪ್ರಕಟವಾಗಿದೆ. "ಮಿಸ್ಟರ್ ವಿಲಿಯಂ ಶೇಕ್ಸ್‌ಪಿಯರ್ಸ್ ಕಾಮಿಡೀಸ್, ಹಿಸ್ಟರೀಸ್ ಆ್ಯಂಡ್ ಟ್ರ್ಯಾಜಡೀಸ್" ಎಂಬ ಶೀರ್ಷಿಕೆಯ ಈ ಕೃತಿ ಶ್ರೇಣಿ ಶೇಕ್ಸ್‌ಪಿಯರ್‌ನ ಮೊಟ್ಟಮೊದಲ ಮುದ್ರಿತ ಕೃತಿಯಾಗಿದೆ. ಆಧುನಿಕ ಚಿಂತಕನ ಮೊಟ್ಟಮೊದಲ ಮುದ್ರಿತ ಕೃತಿ ಇದಾಗಿದ್ದು, ವಿಶ್ವದಲ್ಲೇ ಅತ್ಯಮೂಲ್ಯ ಮುದ್ರಿತ ಪುಸ್ತಕ. 2001ರಲ್ಲಿ ಈ ಸಂಪುಟದ ಒಂದು ಪ್ರತಿ ನ್ಯೂಯಾರ್ಕ್‌ನಲ್ಲಿ 6.16 ದಶಲಕ್ಷ ಡಾಲರ್‌ಗೆ ಮಾರಾಟವಾಗಿತ್ತು!
ಈ ಐತಿಹಾಸಿಕ ದಾಖಲೆಗಳು ಎನಿಸಿದ ಫೋಟೊಗಳ ಬಗ್ಗೆ ವಿವರಣೆ ಕೇಳಿದರೆ ಜಯಪ್ರಕಾಶ್ ಉತ್ಸಾಹದಿಂದ ವಿವರಿಸುತ್ತಾರೆ. ಆದರೆ ಇದನ್ನು ವರ್ಗೀಕರಿಸಿ ಸಂರಕ್ಷಿಸುವ ಕೆಲಸ ಆಗಿಲ್ಲ. ಸೂಕ್ತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಇದು ದೂಳುಪಾಲಾಗುವ ಸಾಧ್ಯತೆ ಇದೆ ಎಂದಿದ್ದಾರೆ.