ರಾಜಕೀಯದಿಂದ ದೂರವಿರಿ: ಪಾಕ್ ಸೇನೆಗೆ ಸುಪ್ರೀಂ ಕೋರ್ಟ್ ಆದೇಶ
ಇಸ್ಲಾಮಾಬಾದ್, ಫೆ. 6: ರಾಜಕೀಯದಿಂದ ದೂರವಿರುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಬುಧವಾರ ದೇಶದ ಸೇನೆ ಮತ್ತು ಗುಪ್ತಚರ ಸಂಸ್ಥೆಗಳಿಗೆ ಆದೇಶ ನೀಡಿದೆ.
2017ರಲ್ಲಿ ರಾಜಧಾನಿ ಇಸ್ಲಾಮಾಬಾದನ್ನು ಹಲವಾರು ವಾರಗಳ ಕಾಲ ಸ್ಥಗಿತಗೊಳಿಸಿದ ದೇವನಿಂದನೆ ವಿರೋಧಿ ಪ್ರತಿಭಟನೆಗಳಲ್ಲಿ ಗುಪ್ತಚರ ಸಂಸ್ಥೆಗಳ ಪಾತ್ರವನ್ನು ಟೀಕಿಸಿ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಈ ಕಟು ಮಾತುಗಳನ್ನು ಆಡಿದೆ.
‘‘ಸಶಸ್ತ್ರ ಪಡೆಗಳ ಯಾವುದೇ ಸಿಬ್ಬಂದಿ ಯಾವುದೇ ರೀತಿಯ ರಾಜಕೀಯದಲ್ಲಿ ತೊಡಗಿದರೆ ಅಥವಾ ಮಾಧ್ಯಮಗಳಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿದರೆ, ಅವರು ಸಶಸ್ತ್ರ ಪಡೆಗಳ ಪ್ರಾಮಾಣಿಕತೆ ಮತ್ತು ವೃತ್ತಿಪರತೆಯನ್ನು ಕಡೆಗಣಿಸಿದಂತಾಗುತ್ತದೆ’’ ಎಂದು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಹಾಕಿದ ತೀರ್ಪಿನಲ್ಲಿ ಹೇಳಲಾಗಿದೆ.
ಸಶಸ್ತ್ರ ಪಡೆಗಳು ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದನ್ನು ಪಾಕಿಸ್ತಾನದ ಸಂವಿಧಾನವು ಸ್ಪಷ್ಟವಾಗಿ ನಿಷೇಧಿಸಿದೆ ಎಂದು ಹೇಳಿರುವ ತೀರ್ಪು, ಸಂವಿಧಾನವನ್ನು ಎತ್ತಿಹಿಡಿಯುವ ತಮ್ಮ ಪ್ರಮಾಣಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರಕಾರ ಹಾಗೂ ಭೂ, ನೌಕಾ ಹಾಗೂ ವಾಯು ಪಡೆಗಳ ಮುಖ್ಯಸ್ಥರಿಗೆ ಆದೇಶಿಸಿದೆ.