ಬೆಳೆ ವಿಮೆ ಎಂಬ ದುರಂತ ನಾಟಕ
ಭಾಗ-1
ಈ ಊರುಗಳಲ್ಲೆಲ್ಲ ಎಷ್ಟು ಮಂದಿ ರೈತರನ್ನು ಮಾತಾಡಿಸಿದರೂ ಒಂದೇ ಕಥೆ: ಎಲ್ಲರೂ ಹತ್ತು ವರ್ಷ, ಹದಿನೈದು ವರ್ಷಗಳಿಂದಲೂ ವಿಮೆ ಪ್ರೀಮಿಯಂ ಕಟ್ಟುತ್ತ ಬಂದಿದ್ದಾರೆ. ಮೊದಲ ಒಂದು ವರ್ಷ ಅಥವಾ ಎರಡು ವರ್ಷ, ಹೆಚ್ಚೆಂದರೆ ಮತ್ತೊಂದೆರಡು ವರ್ಷ ಅಷ್ಟೋ ಇಷ್ಟೋ ವಿಮೆ ಹಣ ಕೈ ಸೇರಿದೆ. ಅಂದರೆ ಮೊದಲ ವರ್ಷ ಹೆಚ್ಚೆಂದರೆ ಮೂರು ಸಾವಿರ, ನಾಲ್ಕು ಸಾವಿರ ಬಂದಿದೆ. ಮುಂದಕ್ಕೆ ವರ್ಷಕ್ಕೆ 700, 800 ರೂಪಾಯಿ- ಹೀಗೆ!
‘‘ಹಿಂದೂಸ್ಥಾನದಲ್ಲೇ ಮೊತ್ತಮೊದಲ ಬಾರಿ...’’ -ಅವರ ಭಾಷಣದ ವೈಖರಿಯೇ ಹಾಗಲ್ಲವೇ?- ‘‘ಹಿಂದೂಸ್ಥಾನದಲ್ಲೇ ಮೊತ್ತಮೊದಲ ಬಾರಿ ರೈತರ ಹಿತಸಾಧನೆಗಾಗಿ ಇಷ್ಟು ದೊಡ್ಡ ಯೋಜನೆ ತರಲಾಗಿದೆ’’ ಎಂದು ಘೋಷಿಸಿದರು ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರದೇಶದ ಬೃಹತ್ ಬಹಿರಂಗ ಸಭೆಯಲ್ಲಿ. (2016ರ ಫೆಬ್ರವರಿ 22). ಅವರು ರೈತರ ಹಿತಸಾಧನೆಗಾಗಿ ತಂದ ಆ ‘ದೊಡ್ಡ ಯೋಜನೆ’ಯ ಹೆಸರು- ಫಸಲ್ ಬಿಮಾ ಯೋಜನೆ. ಅಂದರೆ ಬೆಳೆ ವಿಮೆ.
ಹಿಂದೂಸ್ಥಾನದಲ್ಲೇ ಮೊತ್ತಮೊದಲ ಬಾರಿ ಎಂದರಲ್ಲ, ಹಾಗಾದರೆ ಅದುವರೆಗೆ- 2016ವರೆಗೆ- ದೇಶದಲ್ಲಿ ಬೆಳೆ ವಿಮೆಯ ಸೊಲ್ಲೇ ಇರಲಿಲ್ಲವೇ? ಇದು ಶುದ್ಧಾಂಗ ಸುಳ್ಳು. ಯಾಕೆಂದರೆ 1991ರಿಂದಲೇ, ದೇಶಾದ್ಯಂತ ಎಲ್ಲ ಬೆಳೆಗಳಿಗೂ ಅನ್ವಯಿಸುವಂಥ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಜಾರಿಯಲ್ಲಿದ್ದೇ ಇದೆ. ಅದಿರಲಿ. ‘‘ಈ ಫಸಲ್ ಬಿಮಾ ಯೋಜನೆ ರೈತರ ಸಕಲ ಸಂಕಷ್ಟಗಳಿಗೆ ಪರಿಹಾರ. ರೈತ ಒಮ್ಮೆ ಈ ಯೋಜನೆಯಡಿ ಬಂದುಬಿಟ್ಟರೆ ಸಾಕು, ಮುಂಬರುವ ದಿನಗಳಲ್ಲಿ ಯಾವ ಪ್ರಕೃತಿ ವಿಕೋಪವೂ ಅವನನ್ನು ಅಲ್ಲಾಡಿಸಲು ಸಾಧ್ಯವಿಲ್ಲ, ಹೆದರಿಸಲು ಸಾಧ್ಯವಿಲ್ಲ. ಸರಕಾರ ಅವನ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ....’’ ಎಂಬ ಭರವಸೆ ಕೊಟ್ಟರು ಮೋದಿ. ಇದಕ್ಕಿಂತ ಒಳ್ಳೆಯ ಸುದ್ದಿ ಉಂಟೇ? ರೈತರ ಸಕಲ ಸಂಕಷ್ಟಗಳಿಗೆ ಪರಿಹಾರ ಸಿಕ್ಕರೆ ಅದಕ್ಕಿಂತ ಘನವಾದ ಸಾಧನೆ ಇನ್ನೇನಿದೆ? ಆದರೆ ಈ ಘೋಷಣೆಯ ಅಸಲಿ ಹಿಕ್ಮತ್ತೇನು ಎಂದು ನೋಡುವ ಮುನ್ನ ಫಸಲ್ ಬಿಮಾ ಯೋಜನೆಗೂ, ಮುಂಚಿನ ರಾಷ್ಟ್ರೀಯ ಕೃಷಿ ವಿಮಾ ಯೋಜನೆಗೂ ಏನು ವ್ಯತ್ಯಾಸ ಎಂಬುದನ್ನು ಗಮನಿಸುವುದು ಒಳ್ಳೆಯದು.
ಮುಂಚಿನ ವ್ಯವಸ್ಥೆಯಲ್ಲಿ ಬೆಳೆ ವಿಮೆಗಳ ಸಂಪೂರ್ಣ ನಿರ್ವಹಣೆ ಸರಕಾರಿ ವಿಮಾ ಸಂಸ್ಥೆಯ ಕೈಯಲ್ಲಿತ್ತು. ಅಲ್ಲಿ ಯಾವ ಖಾಸಗಿ ಕುಳಗಳಿಗೂ ಪ್ರವೇಶವಿರಲಿಲ್ಲ. 1985ರಿಂದಲೇ ಸರಕಾರ ಹಲವು ಬಗೆಯ ವಿಮಾ ಯೋಜನೆಗಳನ್ನು ಜಾರಿಗೆ ತಂದು ಪ್ರಯೋಗ ಮಾಡಿಯಾದ ಮೇಲೆ, 1999-2000ದ ಸಾಲಿನಿಂದ ಎಲ್ಲ ಬೆಳೆಗಳಿಗೂ ಅನ್ವಯವಾಗುವ ಮತ್ತು ಎಲ್ಲ ಬಗೆಯ ವಿಕೋಪಗಳಿಗೂ ಪರಿಹಾರ ಒದಗಿಸುವ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಅನುಷ್ಠಾನಕ್ಕೆ ಬಂತು. ಈಗ ಮೋದಿಯವರ ನೇತೃತ್ವದಲ್ಲಿ 2016ರಿಂದ ಜಾರಿಗೆ ಬಂದ ಫಸಲ್ ಬಿಮಾ ಯೋಜನೆಯಲ್ಲಿ ಕಾಣುವ ಮೊತ್ತಮೊದಲ ಗುರುತರ ಬದಲಾವಣೆ ಎಂದರೆ ಬೆಳೆ ವಿಮೆ ಕ್ಷೇತ್ರಕ್ಕೆ ಕಾರ್ಪೊರೇಟ್ ವಲಯ ಕಾಲಿಟ್ಟಿದ್ದು. ವಿಮೆ ಪರಿಹಾರ ಒದಗಿಸುವ ಹೊಣೆ ಈಗ ಖಾಸಗಿ ಸಂಸ್ಥೆಗಳ ಪಾಲಾಗಿದೆ. ಈ ಯೋಜನೆಯಡಿ ಹಾಲಿ ಹನ್ನೊಂದು ಬೇರೆ ಬೇರೆ ವಿಮಾ ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆ. ಆ ಪೈಕಿ ಸರಕಾರಿ ಸಂಸ್ಥೆ ಒಂದೇ ಒಂದು. ಮಿಕ್ಕಂತೆ ಸರಕಾರಿ- ಖಾಸಗಿ ಪಾಲುದಾರಿಕೆಯದೊಂದು ಸಂಸ್ಥೆ. ಉಳಿದವೆಲ್ಲ ಖಾಸಗಿ ಕಂಪೆನಿಗಳು ಮತ್ತು ಆ ಪಟ್ಟಿಯಲ್ಲಿ ಮೊದಲ ಹೆಸರೇ ಅಂಬಾನಿಯವರ ‘ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್’....
ಈ ವಿಮಾ ಸಂಸ್ಥೆಗಳ ಪೈಕಿ ಯಾವ ಯಾವ ಸಂಸ್ಥೆ ಯಾವ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬೇಕು, ಯಾವ ಯಾವ ಬೆಳೆಗಳಿಗೆ ವಿಮೆ ಮಾಡಬಹುದು ಅನ್ನುವುದನ್ನು ಹರಾಜಿನ ಮೂಲಕ ನಿಶ್ಚಯಗೊಳಿಸಲಾಗುವುದು. ಅಂದರೆ ಯೋಜನೆಯ ಎರಡನೇ ಗುರುತರ ಬದಲಾವಣೆ ಇದೇ- ಇನ್ನು ಮುಂದಕ್ಕೆ ಮುಂಚಿನಂತೆ ಎಲ್ಲ ಬೆಳೆಗಳಿಗೂ ವಿಮಾ ಸೌಲಭ್ಯ ಇರುವುದಿಲ್ಲ. ಆಯಾ ಪ್ರದೇಶದಲ್ಲಿ ಆಯಾ ವಿಮಾ ಸಂಸ್ಥೆಗಳು ನಿರ್ಣಯಿಸಿದ ಬೆಳೆಗಳಿಗೆ ಮಾತ್ರ ವಿಮೆ.
ಬೇಸಾಯ ಎಂಬುದೇ ಇಂದು ಸಾವಿನ ಸೂತಕದ ಮನೆ. 1995ರಿಂದ 2015ರವರೆಗಿನ ಇಪ್ಪತ್ತು ವರ್ಷಗಳಲ್ಲಿ ದೇಶದಲ್ಲಿ ಒಟ್ಟು ಮೂರು ಲಕ್ಷದ ಹತ್ತು ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. (2015ರಿಂದಾಚೆಗಿನ ಅಂಕಿ ಅಂಶಗಳು ಲಭ್ಯವಿಲ್ಲ. ಆ ವಿವರ ನೀಡಬಾರ ದೆಂದು ‘ನ್ಯಾಷನಲ್ ಬ್ಯೂರೋ ಆಫ್ ಕ್ರೈಂ ರೆಕಾರ್ಡ್ಸ್’ಗೆ ಆಣತಿಯಾಗಿದೆ! ಆತ್ಮಹತ್ಯೆ ತಡೆಯಲಾಗದಿದ್ದರೆ ಏನಂತೆ? ಅಂಕಿ ಆಂಶ ತಡೆಯಬಹುದಲ್ಲ?!) ಇಂಥ ದಾರುಣ ಪರಿಸ್ಥಿತಿಯಲ್ಲಿ ರೈತ ಯಾವುದೇ ಕಾರಣಕ್ಕೆ ಬೆಳೆ ಕಳೆದುಕೊಂಡಾಗ ಕಿಂಚಿತ್ತಾದರೂ ಆಸರೆ ಯಾಗಲೆಂದೇ ಬೆಳೆ ವಿಮೆ ಜಾರಿಗೆ ಬಂದಿದ್ದು. ಮುಳುಗುವವನಿಗೆ ಒದಗಿಬರುವ ಹುಲ್ಲು ಕಡ್ಡಿ.
ನಮ್ಮ ರಾಜ್ಯದಲ್ಲೇ ಈ ಬೆಳೆ ವಿಮೆ ಯೋಜನೆಯ ಹಣೆಬರಹ ಏನಾಗಿದೆ, ಮೊದಲಿದ್ದ ಯೋಜನೆ, ಈಗ ಬಂದಿರುವ ಯೋಜನೆ ಇವೆರಡರ ಪರಿಣಾಮ ರೈತನ ಬದುಕಿನ ಮೇಲೆ ಏನಾಗಿದೆ ಎಂದು ಎರಡು ವರ್ಷಗಳ ಹಿಂದೆ 2017ರ ಫೆಬ್ರವರಿಯಲ್ಲಿ ನಾನೇ ಒಂದು ಪುಟ್ಟ ಸಮೀಕ್ಷೆ ಮಾಡಿದ್ದೆ- ‘ಸುದ್ದಿ ಟಿವಿ’ವಾಹಿನಿಗಾಗಿ ರೈತರ ಆತ್ಮಹತ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಗ್ರಾಮೀಣ ಬಿಕ್ಕಟ್ಟುಗಳನ್ನು ಶೋಧಿಸುವ ‘ರೈತ ಬಲಿ’ ಸಾಕ್ಷ್ಯಚಿತ್ರ ಸರಣಿಯ ಅಂಗವಾಗಿ. (‘ರೈತ ಬಲಿ’ ಇಡೀ ಸರಣಿ ನೋಡಲು: https://www.youtube.com/results?search_query=raitha+bali).
ನನ್ನ ಸಮೀಕ್ಷೆಗೆ ಕೃಷಿ ಇಲಾಖೆ ಸೂಚಿಸಿದ್ದು ತುಮಕೂರು ಜಿಲ್ಲೆಯ ಶಿರಾ ತಾಲೂಕನ್ನು. ಇಲಾಖೆ ಪ್ರಕಾರ, ನಮ್ಮ ರಾಜ್ಯದಲ್ಲಿ ಬೆಳೆ ವಿಮೆ ಪರಿಣಾಮಕಾರಿಯಾಗಿ ರೈತರ ನೆರವಿಗೆ ಬಂದ ಪ್ರದೇಶಗಳಲ್ಲಿ ಇದೂ ಒಂದು. ಶಿರಾ- ಆಂಧ್ರ ಗಡಿಗೆ ಹೊಂದಿಕೊಂಡ ತಾಲೂಕು. ಜಿಲ್ಲೆಯಲ್ಲಿ ಪಾವಗಡ ಮತ್ತು ಮಧುಗಿರಿ ನಂತರ ಅತ್ಯಂತ ಬರಪೀಡಿತ ತಾಲೂಕಿದು. ಇಲ್ಲೆಲ್ಲ, ಅದೇಕೋ ಗೊತ್ತಿಲ್ಲ, ಶೇಂಗಾ ಬೆಳೆ ಕಡ್ಡಾಯ! ಅದು ಬಿಟ್ಟರೆ ರಾಗಿ, ತೊಗರಿ, ಹೆಸರು ಮುಂತಾದುವು ವಾಡಿಕೆ ಬೆಳೆಗಳು. ಇಲ್ಲೆಲ್ಲ ಪರಿಸ್ಥಿತಿ ಹೇಗಿದೆಯೆಂದು ತೋರಿಸಲು ಶಿರಾ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್. ನಾಗರಾಜು ನಮ್ಮ ತಂಡದ ಜೊತೆಗೇ ಅಡ್ಡಾಡಿದರು. ಅವರು ಕರೆದೊಯ್ದ ಹಳ್ಳಿಗಳು- ಚಿರತಹಳ್ಳಿ, ಕರಿದಾಸರಹಳ್ಳಿ ಮತ್ತು ಲಕ್ಕನಹಳ್ಳಿ. ಮೂರೂ ಗಡಿಗೆ ಅಂಟಿಕೊಂಡ ಊರುಗಳು. ಲಕ್ಕನಹಳ್ಳಿಯಂತೂ ಮುಖ್ಯರಸ್ತೆಯ ಆ ಬದಿ ಆಂಧ್ರ, ಈ ಬದಿ ಕರ್ನಾಟಕ. ಇಲ್ಲೆಲ್ಲ ಎದ್ದು ಕಾಣುವ ಬರದ ಛಾಯೆ. ರಸ್ತೆ ಬದಿ ಸಾರ್ವಜನಿಕ ನಲ್ಲಿಯಲ್ಲಿ ನೀರು ಹಿಡಿದು ಪ್ಲಾಸ್ಟಿಕ್ ಬಿಂದಿಗೆ ತುಳುಕದಂತೆ ಹುಷಾರಾಗಿ ಒಯ್ಯುವ ಹೆಣ್ಣುಮಕ್ಕಳು, ಬಸ್‌ಸ್ಟಾಪ್ ಹತ್ತಿರ ತಟ್ಟಿ ಅಂಗಡಿಯಲ್ಲಿ ಟೀ ಹೀರುತ್ತ ಎಲ್ಲೋ ದಿಟ್ಟಿಸುತ್ತ ಕೂತ ಹಿರಿಯ, ಶಾಲೆ ಮುಗಿಸಿ ಓಡಿ ಬರುವ ಮಕ್ಕಳು, ಊರು ಯಜಮಾನರ ಮನೆ ಅಂಗಳದಲ್ಲಿ ಹುಣಿಸೆಕಾಯಿ ಬಿಡಿಸುತ್ತ ಕೂತ ಗುಂಪು... ಬದುಕು ನಡೆಯುತ್ತಿದೆ, ನಿಜ. ಆದರೆ ನಿಧಾನಗೊಂಡ ಗಡಿಯಾರದಂತೆ ತೆವಳುತ್ತಿದೆ. ಏದುಸಿರು ಬಿಡುತ್ತಿದೆ.
ಈ ಊರುಗಳಲ್ಲೆಲ್ಲ ಎಷ್ಟು ಮಂದಿ ರೈತರನ್ನು ಮಾತಾಡಿಸಿದರೂ ಒಂದೇ ಕಥೆ: ಎಲ್ಲರೂ ಹತ್ತು ವರ್ಷ, ಹದಿನೈದು ವರ್ಷಗಳಿಂದಲೂ ವಿಮೆ ಪ್ರೀಮಿಯಂ ಕಟ್ಟುತ್ತ ಬಂದಿದ್ದಾರೆ. ಮೊದಲ ಒಂದು ವರ್ಷ ಅಥವಾ ಎರಡು ವರ್ಷ, ಹೆಚ್ಚೆಂದರೆ ಮತ್ತೊಂದೆರಡು ವರ್ಷ ಅಷ್ಟೋ ಇಷ್ಟೋ ವಿಮೆ ಹಣ ಕೈ ಸೇರಿದೆ. ಅಂದರೆ ಮೊದಲ ವರ್ಷ ಹೆಚ್ಚೆಂದರೆ ಮೂರು ಸಾವಿರ, ನಾಲ್ಕು ಸಾವಿರ ಬಂದಿದೆ. ಮುಂದಕ್ಕೆ ವರ್ಷಕ್ಕೆ 700, 800 ರೂಪಾಯಿ- ಹೀಗೆ! (ಬೆಳೆ ವಿಮೆ ಪರಿಸ್ಥಿತಿ ಶೋಧಿಸುವ ಈ ಚಿತ್ರ ನೋಡಲು: https://www.youtube.com/watch?v=YepVOP1uM0w.) ಈರಣ್ಣ, ಲಕ್ಕನಹಳ್ಳಿ ಹೇಳುತ್ತಾರೆ: ‘‘ನಂದು ನಾಲ್ಕು ಎಕರೆ ಜಮೀನು. 8-9 ವರ್ಷ ದಿಂದ ಇನ್ಶೂರೆನ್ಸ್ಸ್ ಕಟ್ತಾ ಬಂದಿದೀನಿ. ಒಂದ್ಸಲ ಮಾತ್ರ ನಾಲ್ಕು ಸಾವಿರ ಚಿಲ್ರೆ ಬಂದಿತ್ತು. ಆಮೇಲೆ ನೂರು ರೂಪಾಯಿನೂ ಬಂದಿಲ್ಲ. ಪ್ರೀಮಿಯಂ ಕಟ್ಟಕ್ಕೂ ಸಾಲ, ವ್ಯವಸಾಯಕ್ಕೂ ಸಾಲ, ಕಡಲೆಕಾಯಿಗೂ ಸಾಲ, ಎಲ್ಲ ಸಾಲ...’’
‘‘ರೈತರು ಬಿತ್ತನೆ ಬೀಜಕ್ಕೂ ಸಾಲ ಮಾಡ್ತಾರೆ, ಇನ್ಶೂರೆನ್ಸ್ಸ್ ಕಟ್ಟಕ್ಕೂ ಸಾಲ ಮಾಡ್ತಾರೆ, ಜೀವನ ನಡೆಸಕ್ಕೂ ಸಾಲ ಮಾಡ್ತಾರೆ. ಪ್ರತಿಯೊಂದಕ್ಕೂ ಸಾಲ ಮಾಡಿ ಮಾಡಿ ಊರು ಬಿಡೋ ಪರಿಸ್ಥಿತಿ... ಅಮೌಂಟ್ ಕಟ್ಟಿಸ್ಕತ್ತಾರಲ್ಲ ಸಾರ್ ಪ್ರೀಮಿಯಮ್ಮು, ಆ ದುಡ್ಡೂ ರಿಟರ್ನ್ ಬರದಿಲ್ಲ ರೈತರಿಗೆ’’ ಎನ್ನುತ್ತಾರೆ ಕಡತಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಿ. ಮಂಜುನಾಥ.
‘‘ಆರು ವರ್ಷ ಕಟ್ಟಿ ಒಂದು ವರ್ಷನೂ ಇನ್ಶೂರೆನ್ಸ್ಸ್ ದುಡ್ಡು ಬರಲಿಲ್ಲ ಸಾರ್. ಅಂದ ಮೇಲೆ ಮತ್ತೆ ಏಳನೇ ವರ್ಷ ಮತ್ಯಾಕೆ ಕಟ್ಟದು ಅಂತ ಕಟ್ಟಲಿಲ್ಲ. ಕೇಳಿದರೆ ಸರಕಾರದಿಂದ ಬಂದರೇನು ಮನಿಗೆ ತಗಂಡು ಹೋಯ್ತೀವೇನಪ್ಪ? ನಿನಿಗೇ ಕೊಡ್ತೀವಿ, ಕರೆಕರೆದು ಕೊಡ್ತೀವಿ ಅಂತಾರೆ...’’ ಹೀಗೆನ್ನುವವರು ಸಿ.ಎಂ. ಈಶ್ವರ, ಚಿರತಹಳ್ಳಿ.
‘‘ಬೆಳೆ ವಿಮೆ ನಾಲ್ಕು ಎಕರೆಗೂ ಕಟ್ಟಿದ್ವಿ. ಒಂದು ವರ್ಷ ಬಂತು, ಮತ್ತೆ ಬರಲೇ ಇಲ್ಲ. ಈ ಮೂರು ವರ್ಷ ಕಟ್ಟಿದೀವಿ, ಬಂದೇ ಇಲ್ಲ. ಏನಂತರೆ, ಬಂದಿಲ್ಲಪ್ಪ, ನಿಂದು ಲಿಸ್ಟಿಗೇ ಬಂದಿಲ್ಲ. ಏನ್ಮಾಡದು? ಬಂದಿದ್ರೆ ನಾವು ಕೊಡ್ತಿರಲಿಲ್ವಾ? ಅಂತಿದಾರೆ ಸಾರ್...’’ ಎನ್ನುತ್ತಾರೆ ಹನುಮಂತರಾಯಪ್ಪ, ಚಿರತಹಳ್ಳಿ.
ಚಿರತಹಳ್ಳಿಯ ಶ್ರೀನಿವಾಸ್, ಲಕ್ಕನಹಳ್ಳಿಯ ಕುಮಾರ್, ಕರಿದಾಸರಹಳ್ಳಿಯ ಎಂ. ದೊಡ್ಡಯ್ಯ... ಇನ್ನೂ ಯಾರನ್ನು ಕೇಳಿದರೂ ಇದೊಂದೇ ಹಾಡು. ಕರಿದಾಸರಹಳ್ಳಿಯ ರಾಮಕೃಷ್ಣಪ್ಪ ಇನ್ನೂ ಒಂದು ಗುಟ್ಟು ಹೊರಗೆಡಹಿದರು. ಅವರಿಗೆ ಒಂಬತ್ತು ಎಕರೆ ಜಮೀನಿದೆ. 9 ಎಕರೆಗೂ ವಿಮೆ ಕಂತು ಕಟ್ಟಬೇಕಂತೆ. ಆದರೆ ವಿಮೆ ಹಣ ಕೊಡುವುದು ಐದು ಎಕರೆಗೆ ಮಾತ್ರ! ಅದೂ ಅಧಿಕಾರಿಗಳು ಕೃಪಾಕಟಾಕ್ಷ ತೋರಿದಾಗ!
ವಿಮೆ ಹೆಸರಿನ ಈ ಕಣ್ಣಮುಚ್ಚಾಲೆ ಕಂಡು ಕಂಡು ಬೇಸತ್ತ ಎಂ. ದೊಡ್ಡಯ್ಯನವರು ತಮ್ಮ ಸಿಟ್ಟು ಮುಚ್ಚಿಡುವ ಪ್ರಯತ್ನವನ್ನೂ ಮಾಡುವುದಿಲ್ಲ:
‘‘2001- 02ರಲ್ಲಿ ಎಕರೆಗೆ 4030 ರೂಪಾಯಿ ಕೊಟ್ರು. ಅದೇ ಫಸ್ಟು. ತಿರಗಾ ಕಟ್ಟಿದೀವಿ. ನಾವು ಕಟ್ಟಿದ ದುಡ್ಡಿಗೆ 900 ರೂಪಾಯಿ ಬಂದೈತೆ. ನಾವು ಕಟ್ಟಿದ್ದೇ 450 ರೂಪಾಯಿ; 900 ರೂಪಾಯಿ ಯಾಕೆ ತಗಬೇಕ್ರೀ? 450ಕ್ಕೆ ಇಂಟ್ರೆಸ್ಟ್ ಕೊಟ್ಟಂಗಾಯ್ತು. ಬೇರೆ ಯಾರಿಗಾದ್ರೂ ಕೊಟ್ಟಿದ್ರೆ ಬಡ್ಡಿ ಕೊಟ್ಟಿರೋರು...’’
ಮೇಲೆ ವಿಮೆ ಎಂಬ ದೊಡ್ಡ ಹೆಸರು. ಆದರೆ ನಡೆಯುವುದೆಲ್ಲ ಇಂಥ ಚಿಲ್ಲರೆ ಕೆಲಸಗಳೇ! ಇದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ಸ್ವತಃ ಸಹಾಯಕ ಕೃಷಿ ಅಧಿಕಾರಿ ಎಚ್. ನಾಗರಾಜ್ ನೀಡುವ ಅಂಕಿ ಅಂಶಗಳನ್ನೇ ನೋಡಿ: ‘‘ಪ್ರತಿ ವರ್ಷ (ಶಿರಾ ತಾಲೂಕಿನಲ್ಲಿ) ಮುಂಗಾರು ಹಂಗಾಮಿನಲ್ಲಿ 4,800ರಿಂದ 5,800 ಮಂದಿ ರೈತರು ಬೆಳೆ ವಿಮೆಗೆ ನೊಂದಾಯಿಸಿಕೊಳ್ಳುತ್ತಾರೆ. 2013ರಲ್ಲಿ ಹತ್ತು ಜನ ಕ್ಲೇಮ್ ಆಗಿತ್ತು. 2014ರಲ್ಲಿ 24 ಜನ ಕ್ಲೇಮ್ ಬಂದಿತ್ತು. 2015ರಲ್ಲಿ 23 ಜನ....’’
ಅಂದರೆ ವಿಮೆ ಪ್ರೀಮಿಯಂ ಕಟ್ಟುವವರು ಸಾವಿರಾರು ಜನ. ಬ್ಯಾಂಕಿನಿಂದ ಸಾಲ ಪಡೆದವರಂತೂ ಕಡ್ಡಾಯವಾಗಿ ವಿಮೆ ಕಂತು ಕಟ್ಟಲೇಬೇಕು. ಅಷ್ಟಾದರೂ ಒಂದು ಹಂಗಾಮಿಗೆ ವಿಮೆ ಸೌಲಭ್ಯ ಸಿಗುವುದು 10 ಜನ, 24 ಜನ, 23 ಜನ... ಇಷ್ಟು ಜನಕ್ಕೆ ಮಾತ್ರ! ಇದಕ್ಕಿಂತ ವಿಕಟ ಪ್ರಹಸನವಿರಲು ಸಾಧ್ಯವೇ?
ಇದು ‘ವಿಮಾ ಯೋಜನೆ ಅತ್ಯಂತ ಪರಿಣಾಮಕಾರಿ ಯಾಗಿ ಜಾರಿಯಾದ ಪ್ರದೇಶ’ದ ಪಾಡು...!
ಹೋಗಲಿ, ಇವರಿಗೆ ಬರುವ ಪರಿಹಾರ ಮೊತ್ತವಾ ದರೂ ಎಷ್ಟು? ನೋಡಿದೆವಲ್ಲ? ‘‘ನಾವು ಕಟ್ಟಿದ ದುಡ್ಡಿಗೆ 900 ರೂಪಾಯಿ ಬಂದೈತೆ. ನಾವು ಕಟ್ಟಿದ್ದೇ 450 ರೂಪಾಯಿ; 900 ರೂಪಾಯಿ ಯಾಕೆ ತಗಬೇಕ್ರೀ?...’’
ಈ ಲೆಕ್ಕಾಚಾರ ಹೇಗೆ? ಅದೇಕೆ ಬೆಳೆ ನಷ್ಟಕ್ಕೂ, ಪರಿಹಾರಕ್ಕೂ ತಾಳ ಮೇಳವೇ ಇಲ್ಲದಂಥ ನಿಕೃಷ್ಟ ಮೊತ್ತದ ಪರಿಹಾರ?
ಹುಡುಕಿದರೆ, ಈ ಪರಿಹಾರ ಮೊತ್ತ ಲೆಕ್ಕ ಹಾಕುವುದೇ ಒಂದು ನಿಗೂಢ ಲೇವಾದೇವಿ ಇದ್ದಂತಿದೆ. ತುಮಕೂರಿನ ಜಂಟಿ ಕೃಷಿ ನಿರ್ದೇಶಕಿ ಎ.ಡಿ. ರೂಪಾದೇವಿಯವರ ವಿವರಣೆ ನೋಡಿ:
indemnity ‘‘...ಈ ವರ್ಷ ಅಂದ್ರೆ ಈಗ ವಾಸ್ತವಿಕ ಇಳುವರಿ ನೆಲಗಡಲೆ ತಗೊಂಡ್ರೆ ಎಕರೆಗೆ ಐದು ಕ್ವಿಂಟಲ್ ಬಂತು ಅಂತ ಇಟ್ಕಳಿ. ಈಗ ಪ್ರಾರಂಭಿಕ ಇಳುವರಿ ತಗೋತೀವಿ. ನಾನು ಆಗಲೇ ಹೇಳಿದಂಗೆ ಏಳು ವರ್ಷಗಳ ಸರಾಸರಿ- ಏಳು ವರ್ಷದಲ್ಲಿ ಎರಡು ವರ್ಷ ಬರ ತೆಗೆದ್ರೆ, ಇನ್ನು ಐದು ವರ್ಷಗಳ ಸರಾಸರಿ ತಗೋತೀವಿ. ಬೆಳೆ ನಷ್ಟ ಅಂತ ಮೊತ್ತ ಅಂತ ಇನ್ಶೂರೆನ್ಸ್ಸ್ ಸಂಸ್ಥೆಯವರೇ ಫಿಕ್ಸ್ ಮಾಡಿರ್ತಾರೆ. ನೀರಾವರಿಯಾದರೆ ಶೇ. 90, ಮಳೆಯಾಶ್ರಿತ ಆದ್ರೆ ಶೇ. 80 ಅವರೇ ಫಿಕ್ಸ್ ಮಾಡಿರ್ತಾರೆ. ಇದಕ್ಕೆ ಇಂಡೆಮ್ನಿಟಿ ಮೊತ್ತ 0.8 ಪರ್ಸೆಂಟ್ ಗುಣಿಸಿಕೊಳ್ಳುತ್ತಾರೆ. ಗುಣಿಸಿಬಿಟ್ಟು ಇವೆರಡೂ ಡಿಫರೆನ್ಸ್ ತಗೊಂಬಿಟ್ಟು ಪ್ರಾರಂಭಿಕ ಇಳುವರಿಯಿಂದ ಮತ್ತೆ ಭಾಗಿಸುತ್ತಾರೆ. ಭಾಗಿಸಿ, ಟೆಂಡರ್ ಕರೆದಾಗ ಏನು ಮೊತ್ತಕ್ಕೆ ಹಾಕಿರ್ತಾರೋ, ಅದರಿಂದ ಗುಣಿಸುತ್ತಾರೆ. ಅದನ್ನು ಗುಣಿಸಿದಾಗ ನಿಜವಾಗಿ ರೈತರಿಗೆ ಎಷ್ಟು ಬೆಳೆ ನಷ್ಟ ಆಗಿದೆ ಅಂತ ಲೆಕ್ಕ ಮಾಡಿ ಇನ್ಶೂರೆನ್ಸ್ಸ್ ಸಂಸ್ಥೆಯವರು ಪರಿಹಾರ ಕೊಡ್ತಾರೆ...’’
ನಿಮಗೇನಾದರೂ ಅರ್ಥವಾಯಿತೇ? ನನಗಂತೂ ಈ ಒಗಟಿನ ಗೂಢ ಭೇದಿಸಿ ಒಡೆಯುವ ಧೈರ್ಯವೂ ಇಲ್ಲ, ಸಾಮರ್ಥ್ಯವೂ ಇಲ್ಲ!....