ಮಾಲಕನ ಮೇಲೆ ಹಲ್ಲೆ: ಆರೋಪಿಗಳ ಬಂಧನ
ಬೆಂಗಳೂರು, ಫೆ.7: ಕೆಲಸದಿಂದ ತೆಗೆದರು ಎಂಬ ಕಾರಣಕ್ಕೆ ಮಾಲಕನನ್ನು ತಲವಾರಿನಿಂದ ಹಲ್ಲೆ ಮಾಡಿ ಪರಾರಿಯಾಗಿಯಾಗಿದ್ದ ರೌಡಿ ಮದನ್ ಹಾಗೂ ಆತನ ಸಹಚರರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
ಬೇಗೂರಿನ ಗಾರ್ವೆಬಾಪಾಳ್ಯದಲ್ಲಿ ಆನಂದ್ ಎಂಬುವವರು ಕಳೆದ 15 ವರ್ಷಗಳಿಂದ ತಿರುಮಲ ವಾಟರ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಅವರ ಬಳಿ 40 ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದು, ಮದನ್ ಸಹ ಕೆಲಸ ಕೇಳಿಕೊಂಡು ಬಂದಿದ್ದ. ಆತನ ಸ್ಥಿತಿ ಕಂಡು ಕಾರು ಚಾಲಕನಾಗಿ ಕೆಲಸ ಮಾಡುವಂತೆ ತಿಳಿಸಿದ್ದರು. ಆದರೆ ಆತ ಕೆಲಸಕ್ಕೆ ಸೇರಿದ ಬಳಿಕ ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಕೆಲಸದ ಬಳಿಯೇ ಗಾಂಜಾ ಸೇದುವುದು ಮಾಡುತ್ತಿದ್ದನು.
ಈ ವಿಚಾರವಾಗಿ ಮಾಲಕ ಆನಂದ್ ವೇತನ ನೀಡಿ ಮದನ್ನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಕೋಪಗೊಂಡ ಮದನ್ ಸಹಚರರೊಂದಿಗೆ ತಲವಾರು ಹಿಡಿದು ಫ್ಯಾಕ್ಟರಿಗೆ ನುಗ್ಗಿ ಆನಂದ್ ಮೇಲೆ ಜ.30ರಂದು ಹಲ್ಲೆ ಮಾಡಿದ್ದ. ಅಷ್ಟೇ ಅಲ್ಲದೆ ವಾಟರ್ ಫ್ಯಾಕ್ಟರಿಯಲ್ಲಿದ್ದ ವಸ್ತುಗಳನ್ನು ಒಡೆದು, ಆನಂದ್ಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ.
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮದನ್ ಹಾಗೂ ಆತನ ಸಹಚರರ ಕೃತ್ಯ ಸೆರೆಯಾಗಿತ್ತು. ಈ ಕುರಿತು ಆನಂದ್ ಬೇಗೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿ ರೌಡಿ ಮದನ್ ಮತ್ತವರ ಸಹಚರ ಕಿರಣ್ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಹಲ್ಲೆಗೊಳಗಾಗಿದ್ದ ಆನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನಂದ್ ಮೇಲೆ ಹಲ್ಲೆ ಮಾಡಿದ ಬಳಿಕ ಮದನ್ ಹಾಗೂ ಕಿರಣ್ ಪಾಂಡಿಚೇರಿಗೆ ಪರಾರಿಯಾಗಿ ಅಡಗಿದ್ದ ಜಾಗವನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.