varthabharthi


ಭೀಮ ಚಿಂತನೆ

ನಿಮ್ಮ ಗುಡಿಸಲು ಜೀವಂತವಾಗಿದ್ದರೆ ಮಾತ್ರ ಜನರು ನಿಮ್ಮ ಆಶ್ರಯಕ್ಕೆ ಬರುತ್ತಾರೆ

ವಾರ್ತಾ ಭಾರತಿ : 8 Feb, 2019

ದಿನಾಂಕ 26-27ನೆಯ ಅಕ್ಟೋಬರ್ 1945ರಂದು ಮುಂಬೈ ಪ್ರದೇಶ ಅಖಿಲ ಭಾರತೀಯ ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫೆಡರೇಶನ್‌ನ ಅಧಿವೇಶನವು ಮುಂಬೈಯಲ್ಲಿನ ಪುರಂದರೆ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿತ್ತು. ಮೊದಲ ದಿನ ಡಾ. ಬಾಬಾಸಾಹೇಬ ಅಂಬೇಡ್ಕರ್ ಸಮ್ಮೇಳನದಲ್ಲಿ ಹಾಜರಾಗಿದ್ದು, ಕಾರ್ಯಕರ್ತರಿಗೆಲ್ಲ ಮಾರ್ಗದರ್ಶನ ಮಾಡಿದರು. ಅದೇ ದಿನ ಆರ್.ಡಿ.ಭಂಡಾರೆ ಅವರು ‘ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫೆಡರೇಶನ್‌ನ ಕಾರ್ಯಕಾರಿಣಿ ಮತ್ತು ಶಾಖೆಗಳನ್ನು ವಿಸರ್ಜನೆ ಮಾಡಿ ಹೊಸ ಚುನಾವಣೆ ಮಾಡಬೇಕು’ ಎಂಬ ಗೊತ್ತುವಳಿಯನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮುಂದೆ ಸಮಿತಿಯು ಮಂಡಿಸಿತು. ಆ ನಿರ್ಧಾರವನ್ನು ಪುಣೆಯ ಆರ್.ಆರ್.ಭೋಳೆ ಅವರು ಬೆಂಬಲಿಸಿದರು. ಸದರಿ ಗೊತ್ತುವಳಿಯು ಬಹುಮತದಿಂದ ಮತ್ತು ಚಪ್ಪಾಳೆಗಳ ಸುರಿಮಳೆಯ ಮೂಲಕ ಪಾಸು ಮಾಡಲಾಯಿತು. ಈ ಗೊತ್ತುವಳಿಯಿಂದಾಗಿ ಫೆಡರೇಶನ್‌ನ ಕಾರ್ಯಕರ್ತರಲ್ಲಿ ಇದ್ದ ಅಸಂತೋಷವು ಕಡಿಮೆಯಾಯಿತು ಎಂಬುದರಲ್ಲಿ ಎಳ್ಳಷ್ಟೂ ಶಂಕೆಯಿಲ್ಲ. ಕಾರಣ ಸದ್ಯದ ಪದಾಧಿಕಾರಿಗಳೆಲ್ಲರೂ 1945ರಲ್ಲಿ ನೇಮಿಸಲ್ಪಟ್ಟವರಾಗಿದ್ದರು. ಆವಾಗಿನಿಂದಲೂ ಅವರು ಜಾಗವನ್ನು ಆಕ್ರಮಿಸಿ ಕುಳಿತುಕೊಂಡುದರಿಂದ ಇತರೆ ಕಾರ್ಯಕರ್ತರು ಕೋಪಗೊಂಡಿದ್ದರು. ಹೊಸ ಚುನಾವಣೆಯು ಆರು ತಿಂಗಳುಗಳ ಒಳಗೆ ನಡೆಯಬೇಕು.

ಮೊದಲ ದಿನ ಅಂದರೆ ದಿನಾಂಕ 26ನೆಯ ಅಕ್ಟೋಬರ್ 1945ರಂದು ಪರಿಷತ್ತಿಗೆ ಮಾರ್ಗದರ್ಶನ ಮಾಡುತ್ತಾ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿದರು.
ಮಿತ್ರರೇ,

ಯಾವ ಕಾರ್ಯಕ್ಕಾಗಿ ನಾವು ಈ ಸಭೆಯನ್ನು ಸೇರಿಸಬೇಕೆಂದು ನಿರ್ಧರಿಸಿದ್ದೆವೋ ಆ ಉದ್ದೇಶವನ್ನು ಸಂಚಾಲಕರು ಪೂರ್ಣವಾಗಿ ತಿಳಿದುಕೊಂಡಿರುವಂತೆ ಕಾಣಿಸುವುದಿಲ್ಲ. ಇಲ್ಲದೆ ಇದ್ದರೆ, ಬಹಿರಂಗವಾದ ಈ ಸಭೆಯು ಎಲ್ಲಿಯಾದರೂ ಗುಪ್ತವಾಗಿ ಸೇರುತ್ತಿತ್ತು. ನನಗೆ ಕಾರ್ಯಕರ್ತರನ್ನು ಉದ್ದೇಶಿಸಿ ಬಹಳಷ್ಟನ್ನು ಹೇಳುವುದಿತ್ತು. ಆದರೆ ಅದನ್ನು ರಹಸ್ಯವಾಗಿ ಹೇಳಬೇಕಾಗಿದೆ. ಹಾಗಾಗಿ ನಾನು ಈಗ ಏನು ಹೇಳುತ್ತಿರುವೆನೋ ಅದನ್ನು ಸ್ಪಷ್ಟವಾಗಿ ಹೇಳುವುದಿಲ್ಲ. ಅದರ ಮತಿತಾರ್ಥವನ್ನಷ್ಟೇ ಹೇಳುತ್ತೇನೆ. ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫೆಡರೇಶನ್‌ನಲ್ಲಿ ಯಾವ ಹೊಲಸು ತುಂಬಿತ್ತೋ ಅದನ್ನೆಲ್ಲ ಎಳೆಯುವುದು ನನ್ನ ಉದ್ದೇಶ ವಾಗಿತ್ತು. ಮುನ್ಸಿಪಾಲಿಟಿಯ ಚರಂಡಿಗಳನ್ನು ಸ್ವಚ್ಛ ಮಾಡಿದಾಗ ಎಂಥ ಹೊಲಸು ವಾಸನೆಯು ಬರುತ್ತದೆಯೋ ಹಾಗೆ ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫೆಡರೇಶನ್‌ನಲ್ಲಿಯೂ ಹೊಲಸು ನಿರ್ಮಾಣವಾಗಿದೆ. ಆ ಹೊಲಸನ್ನು ಗುಪ್ತವಾಗಿ ತೆಗೆಯಬೇಕಾಗಿತ್ತು. ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫೆಡ ರೇಶನ್‌ನ ರಾಜಕಾರಣವು 1919ರಿಂದಲೇ ಆರಂಭವಾಯಿತು. ಅದಕ್ಕಿಂತಲೂ ಮುಂಚೆಯಿಂದಲೂ ಕೂಡಾ ಅಸ್ಪಶ್ಯ ಚಳವಳಿಯು ನಡೆದೇ ಇತ್ತು. ಅಂದರೆ ಈ ಸಂಸ್ಥೆಯು ಇಂದು ನಿನ್ನೆಯದ್ದಲ್ಲ. ಅದು ಕಾಂಗ್ರೆಸ್‌ಗಿಂತಲೂ ಹಿಂದಿನದಾಗಿದೆ. ಕಾಂಗ್ರೆಸ್‌ನ ಜೀವನದ ಆರಂಭವು ಗಾಂಧೀಜಿಯವರ ಕಾಲದಿಂದ ಆಯಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆ ಕಾಲವೂ ಕೂಡಾ 1919 ಎಂಬುದು ಗಮನಾರ್ಹ.

ದುರ್ದೈವ ಸಂಗತಿ ಎಂದರೆ, ಆ ವರ್ಷದಿಂದಲೇ ನಾವು ಕಾಂಗ್ರೆಸನ್ನು ವಿರೋಧ ಮಾಡಿಕೊಂಡು ಬರಬೇಕಾಯಿತು. ಆಗಲೂ ಕಾಂಗ್ರೆಸನ್ನು ವಿರೋಧಿಸುವುದಕ್ಕೆ ಇದೇ ಕಾರ್ಯದ ಮೂಲಕ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಅವರ ಕಾರಣದಿಂದಾಗಿ ನಮ್ಮ ಹಕ್ಕುಗಳು ಕಾಲ್ತುಳಿತಕ್ಕೆ ಒಳಗಾಗುತ್ತಿದ್ದವು. ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫೆಡರೇಶನ್ ಆ ಕಾಲದಿಂದಲೇ ಹುಟ್ಟಿಕೊಂಡು ಇಲ್ಲಿಯವರೆಗೆ ಬಂದಿದೆ. ಹಾಗಾಗಿ ಕ್ಯಾಸ್ಟ್ಸ್ ಫೆಡರೇಶನ್ ಕಲ್ಲಿನ ಒಂದು ಬಲಿಷ್ಠ ಕೋಟೆಯಾಗಿದೆ. ಕಾಂಗ್ರೆಸ್‌ನ ಕೋಟೆಯು ಹಣದ ಮೇಲೆ ನಿಂತಿರುವುದಾಗಿದೆ. ಲೋಕಮಾನ್ಯ ತಿಲಕ್ ಫಂಡ್ ಮತ್ತು ಗುಜರಾತಿ ಬಂಧುಗಳ ಥೈಲಿಗಳ ಸಹಾಯದ ಮೇಲೆಯೇ ಈ ಕೋಟೆಯು ನಿಂತಿರುವುದು. ಆದರೆ ಕ್ಯಾಸ್ಟ್ಸ್ ಫೆಡರೇಶನ್‌ನ ಕೋಟೆಯು ಅಸ್ಪಶ್ಯ ಜನತೆಯ ಭಾವನೆಗಳ ಮೇಲೆ ನಿಂತಿರುವಂಥದು. ಹಾಗಾಗಿ ಈ ಕೋಟೆಯು ನಾಶವಾಗಬಾರದು ಎಂಬುದು ನನ್ನ ಪೂರ್ಣ ಆಶಯವಾಗಿದೆ. ನಾನು ಕಳೆದ ಹತ್ತು ವರ್ಷಗಳ ಕಾಲ ಕ್ಯಾಸ್ಟ್ಸ್ ಫೆಡರೇಶನ್‌ನ ಕಡೆಗೆ ದುರ್ಲಕ್ಷ ತೋರಿಸಿದ್ದೆ. ಆ ಹತ್ತು ವರ್ಷಗಳ ನನ್ನ ಗೈರು ಹಾಜರಿಯಲ್ಲಿ ಕ್ಯಾಸ್ಟ್ಸ್ ಫೆಡರೇಶನ್‌ನಲ್ಲಿ ಸಾಕಷ್ಟು ಮತಭೇದಗಳು ನಿರ್ಮಾಣವಾಗಿವೆ. ಅದಕ್ಕೆ ಮೊದಲು ಅಂತಹ ಮತಭೇದಗಳಾವುವೂ ಇರಲಿಲ್ಲ. ಪ್ರತಿಯೊಬ್ಬ ಮನುಷ್ಯನೂ ಫೆಡರೇಶನ್‌ನಲ್ಲಿ ತನ್ನ ರಾಜಕೀಯವನ್ನು ಆರಂಭಿಸಿದ್ದಾನೆ. ಅಲ್ಲದೆ ಪ್ರತಿಯೊಬ್ಬರೂ ತಂತಮ್ಮ ಗುಂಪುಗಳನ್ನು ನಿರ್ಮಿಸಿಕೊಂಡಿದ್ದಾರೆ. ಒಬ್ಬರ ಪ್ರಭಾವ ಮತ್ತೊಬ್ಬರಿಗೆ ಬೇಕಾಗಿಲ್ಲ. ಹಾಗಾಗಿ ನಮ್ಮ ಜನರು ಇಂದಿಗೂ ರಾಜಕಾರಣದಲ್ಲಿ ಸರಿಯಾಗಿ ಪಳಗುವುದಕ್ಕೆ ಸಾಧ್ಯವಾಗಿಲ್ಲ.

ರಾಜಕಾರಣ ಎಂದರೇನು ಎಂಬುದರ ಬಗೆಗೆ ಅವರಲ್ಲಿ ಪೂರ್ಣವಾದ ಅರಿವು ಇಲ್ಲ. ನಮ್ಮ ಸಮಾಜದಲ್ಲಿ ನಮ್ಮ ನಮ್ಮೆಳಗೆ ಬಹಳಷ್ಟು ಮತಭೇದಗಳಿವೆ. ಆ ಮತಭೇದಗಳು ಅಷ್ಟು ಬೇಗನೆ ನಾಶವಾಗುವಂಥವಲ್ಲ. ಆ ಮತಭೇದಗಳ ವೃಕ್ಷವು ಅವರ ಮಕ್ಕಳ ಹೊಟ್ಟೆಯಲ್ಲಿಯೂ ಬೆಳೆಯುತ್ತವೆ. ಈ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಲಿವೆ ಈ ಮತ ಭೇದಗಳು. ಈ ಗುಣಧರ್ಮವು ನಮ್ಮ ಜನರಲ್ಲಿ ಹೆಚ್ಚು ಪ್ರಮಾಣದಲ್ಲಿಯೇ ಇದೆ. ಕಾಂಗೆಸ್‌ನಂತಹ ಪಕ್ಷದಲ್ಲಿ ಕೂಡಾ ಭಿನ್ನಾಭಿಪ್ರಾಯಗಳಿವೆ ನಿಜ. ಆದರೆ ಅವುಗಳ ಜೊತೆಗೆ ಅವರಲ್ಲಿ ಕೆಲವಾರು ಸದ್ಗುಣಗಳೂ ಇವೆ ಎಂಬುದನ್ನು ಅನುಭವದಿಂದ ಹೇಳಬಹುದಾಗಿದೆ. ಅವರ ಒಂದು ಬಹಳ ಮುಖ್ಯವಾದ ಗುಣವೆಂದರೆ, ಬಹುಮತದಿಂದ ನಿರ್ಧಾರ ಕೈಗೊಂಡುದನ್ನು ಅವರೆಲ್ಲರೂ ಮಾನ್ಯ ಮಾಡುತ್ತಾರೆ. ಅಂದರೆ, ಆ ವಿಚಾರದ ವಿರೋಧಕರೂ ಕೂಡಾ ಆ ಸುಳ್ಳನ್ನು ಸಮರ್ಥಿಸಲು ಆರಂಭಿಸುತ್ತಾರೆ. ಈ ಪ್ರವೃತ್ತಿಯು ರಾಜಕಾರಣದಲ್ಲಿ ಬಹಳ ಆವಶ್ಯಕವಾದುದಾಗಿದೆ. ನನ್ನ ಅಭಿಪ್ರಾಯದಲ್ಲಿ ಏನಾದರೂ ಕಾರ್ಯಭಾರಗಳು ನಡೆಯುತ್ತಿದ್ದರೆ ಮಾತ್ರ ನಾನು ಈ ಸಂಸ್ಥೆಯಲ್ಲಿ ಇರುತ್ತೇನೆ ಎಂಬ ಪ್ರವೃತ್ತಿಯು ಬಹಳ ಕೆಟ್ಟದ್ದು. ನಾವು ಮಾಡುವುದಕ್ಕೆ ಕಾಯ್ದೆಯು ಬೇಕಾಗಿಲ್ಲ.

ಸಂಸ್ಥೆಯಲ್ಲಿ ಯಾರು ದೊಡ್ಡವರು? ಡಾ. ಅಂಬೇಡ್ಕರ್ ಅವರ ಕೆಳಗೆ ಯಾರು? ಇತ್ಯಾದಿ ಮತಭೇದಗಳು ಬಹಳಷ್ಟು ಬೆಳೆದಿವೆ. ದಲಿತ ಫೆಡರೇಶನ್‌ನ ಪರಿಷತ್ತುಗಳು ಸೇರುತ್ತಿಲ್ಲ, ಚುನಾವಣೆಯನ್ನು ನಡೆಸುತ್ತಿಲ್ಲ ಎಂಬ ನಿತ್ಯದ ಭಿನ್ನ ಭಿನ್ನ ಸಂಗತಿಗಳನ್ನು ನಾನು ದಿನದಿನವೂ ಕೇಳುತ್ತಲೇ ಇರುತ್ತೇನೆ. ಇವುಗಳೆಲ್ಲವೂ ನಿಜವಾಗಿದ್ದರೆ ಅದರ ಬಗೆಗೆ ಅವರು ವಿಚಾರ ಮಾಡಿದ್ದಾರೆಯೇ? ಈ ವಿಚಾರಗಳನ್ನು ಅನುಷ್ಠಾನಗೊಳಿಸಲು ಬೇಕಾಗಿರುವಷ್ಟು ಹಣವು ನಮ್ಮ ಹತ್ತಿರದಲ್ಲಿ ಇಲ್ಲ. ಹಾಯಾಗಿ ಸಮಾವೇಶಗಳನ್ನು ಕರೆಯುವುದು, ಚುನಾವಣೆ ನಡೆಸುವುದು ನಮಗೆ ಸಾಧ್ಯವಾಗುತ್ತಿಲ್ಲ. ಭೋಳೆಯವರು ನಮಗೆ ಹಣವನ್ನು ಪೊರೈಸಿದರೆ ವರ್ಷಕ್ಕೆ ಏಕೆ ಆರು ತಿಂಗಳುಗಳಿಗೆ ಒಮ್ಮೆ ನಾವು ಸಮಾವೇಶಗಳನ್ನು ಮಾಡೊಣ. ಹಾಗೆ ಹಣವನ್ನು ಕೊಟ್ಟು ಭೋಳೆ ಅವರು ಪುಣೆಯಲ್ಲಿ ಸಮಾವೇಶ ಕರೆಯಬೇಕು. ಕಾಂಗ್ರೆಸ್‌ನಂತಹ ಸಂಸ್ಥೆಯಲ್ಲಿ ಹಣವಿದೆ. ನಮಗೆ ಹಣದ ಆವಶ್ಯಕತೆ ಇದೆ. ಕೆಲವಾರು ಜನರು ಹೇಳುತ್ತಾರೆ, ನಾವು ಸರಕಾರದ ಬಗೆಗೆ ಟೀಕೆಗಳನ್ನು ಮಾಡಬಾರದು, ಬದಲಾಗಿ ಅವರಿಗೆ ಸಹಕರಿಸಬೇಕು. ನಮ್ಮ ಹಕ್ಕುಗಳನ್ನು ನಮ್ಮ ಸೆರಗಿನಲ್ಲಿ ಬೀಳಿಸುವುದೇ ನಮ್ಮ ಮೊದಲ ಕೆಲಸವಾಗಿದೆ. ಆ ಹಕ್ಕುಗಳು ನಮ್ಮ ಸೆರಗಿನಲ್ಲಿ ಬೀಳದೆ ಹೋದರೆ ನಾವು ಟೀಕೆ ಮಾಡುವವರೇ.

ಸರಕಾರದ ಬಗೆಗೆ ಟೀಕೆಗಳೇ ಇಲ್ಲವೆಂದರೆ ದಲಿತ ಫೆಡರೇಶನ್‌ನ ಆವಶ್ಯಕತೆಯಾದರೂ ಏನು? ಸರಕಾರವೇ ಏನು, ಸ್ವತಃ ದೇವರೇ ಬಂದರೂ ಸರಿ ಅವನನ್ನೂ ನಾವು ಟೀಕಿಸುವವರೇ. ಯಾರಿಗೆ ಏನು ಒಪ್ಪಿಗೆ ಇಲ್ಲವೋ ಅಂಥವರು ದಲಿತ ಫೆಡರೇಶನ್ ಬಿಟ್ಟು ಹೋಗಬಹುದು. ನಾವು ಸರಕಾರಕ್ಕೆ ಸಹಕಾರ ನೀಡಿರಲಿಲ್ಲವೇ? ನಾನು ನಾಲ್ಕು ವರ್ಷಗಳ ಕಾಲ ಅವರೊಂದಿಗೆ ಇದ್ದಿರಲಿಲ್ಲವೇ? ನಾವು ಕಾಲಕಾಲಕ್ಕೆ ಸಹಕಾರ ನಿಡುತ್ತಲೇ ಬಂದಿದ್ದೇವೆ. ಸರಕಾರವು ನಮ್ಮ ವಿಷಯದಲ್ಲಿ ಏನನ್ನೂ ಮಾಡದೆ ಹೋದರೆ ನಾವು ಸದುದ್ದೇಶದಿಂದಲೇ ಟೀಕೆ ಮಾಡೋಣ. ನಾವು ಸುಮ್ಮನಾದರೂ ಏಕೆ ಕುಳಿತುಕೊಳ್ಳಬೇಕು.
ಜನರು ಹೇಳುತ್ತಾರೆ. ದಲಿತ ಫೆಡರೇಶನ್ ಆಕ್ರಮಣಶಾಲಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆಕ್ರಮಣ ಎಂದರೆ ಏನು? ಈ ಆಕ್ರಮಣಕಾರಿ ರಾಜಕಾರಣವು ನಮಗೆ ಪಚನಕಾರಿಯಾದುದೇ? ಅಲ್ಲದೆ ನಾವು ಆಕ್ರಮಣಶೀಲ ಪ್ರವೃತ್ತಿಯಿಂದ ಹೊರಟರೆ ಅದರಿಂದ ನಿಮಗೇ ತೊಂದರೆಯಾಗುತ್ತದೆ. ನಾವು ಸೆರೆಮನೆಯಲ್ಲಿ ಹೋಗಿ ಕುಳಿತರೆ ಜನರು ನಿಮ್ಮನ್ನೇ ಹಿಂಸಿಸುತ್ತಾರೆ. ನೀವು ಅಂಬೇಡ್ಕರ್ ಅವರಿಗೆ ಸಹಾಯ ಮಾಡುತ್ತೀರೇನೋ ಮಕ್ಕಳಾ? ನಿಮ್ಮದನ್ನು ನೀವು ನೋಡಿಕೊಳ್ಳಿ, ಎಂಬುದಾಗಿ ಹೇಳಿ ನಿಮಗೆ ತೊಂದರೆ ಕೊಡುತ್ತಾರೆ.

ಇದಕ್ಕಿಂತಲೂ ನೀವು ಕಷ್ಟಪಡುವುದೇ ಒಳ್ಳೆಯದು. ಹಾಗೆ ಕಷ್ಟ ಪಡುವುದು ನನ್ನ ಧರ್ಮವೇ ಆಗಿ ಕುಳಿತುಕೊಂಡುಬಿಟ್ಟಿದೆ. ನನಗೆ ಇನ್ನೂ ವಿಶ್ರಾಂತಿ ಎಂಬುದು ಸಿಕ್ಕಿಲ್ಲ. ಅಲ್ಲದೆ ನಾನು ವಿಶ್ರಾಂತಿಯನ್ನು ತೆಗೆದುಕೊಳ್ಳುವುದೂ ಇಲ್ಲ. ಮತ್ತೊಂದು ವಿಚಾರವೆಂದರೆ, ಮನಸ್ಸು ನಿರ್ಮಲವಾಗಿರಬೇಕು. ಇದರಿಂದಾಗಿ ನಮ್ಮ ನಮ್ಮೊಳಗಿನ ಮತಭೇದಗಳು ಇಲ್ಲವಾಗುತ್ತದೆ. ದಲಿತ ಫೆಡರೇಶನ್‌ನಲ್ಲಿ ಈಗ ಅತ್ಯಂತ ಮುಖ್ಯವಾಗಿ ಇರುವ ವಾದವೇನೆಂದರೆ, ಅಂಬೇಡ್ಕರ್‌ರ ನಂತರ ಯಾರು? ಎಂಬುದು. ಆದರೆ ಇದರ ಅರ್ಥವೇ ನನಗೆ ಸ್ಪಷ್ಟವಾಗಿಲ್ಲ. ಆಶ್ವರ್ಯವೆಂದರೆ ನಾನು ಸಾಯುವುದಕ್ಕು ಮೊದಲೇ ಈ ವಾದವು ನಿರ್ಮಾಣವಾಗಿದೆ. ಅಂದರೆ ನಾನು ಬೇಗನೇ ಸಾಯಬೇಕೋ ಇಲ್ಲವೇ ಬದುಕಬೇಕೋ ಎಂಬ ಪ್ರಶ್ನೆಯು ನನಗೆ ಮುಖ್ಯವಾಗಿ ಕಾಡುತ್ತಿದೆ. ಸರಿ ಈ ವಾದವನ್ನು ನಾವು ಇಲ್ಲವಾಗಿಸಲೇಬೇಕು. ಕಾರಣ ಇದರ ಬಗೆಗೆ ನಾನು ಒಂದು ಉಪಾಯವನ್ನು ಶೋಧಿಸಿದ್ದೇನೆ.

ಈ ವಾದವನ್ನು ಮುಗಿಸಿಬಿಡುವುದಕ್ಕಿಂತಲೂ ದಲಿತ ಫೆಡರೇಶನ್‌ನ ನೇತಾರರ ಚುನಾವಣೆ ನಡೆಯಬೇಕು. ಹಾಗಾದರಷ್ಟೇ ಈ ವಾದವು ಕೊನೆಗೊಳ್ಳುತ್ತದೆ. ಯಾರು ಕೆಲಸವನ್ನು ಮಾಡುತ್ತಾರೋ ಅವರೇ ನಿಜವಾದ ನೇತಾರರು. ಜನರಿಗೆ ಗೊತ್ತಿದೆ, ನಮ್ಮ ನಿಜವಾದ ನೇತಾರ ಯಾರು? ಎಂಬುದು. ಕೆಲಸ ಮಾಡುವುದರಿಂದಲೇ ಜನರು ತಮ್ಮ ನಿಜವಾದ ನೇತಾರರು ಯಾರು ಎಂಬುದನ್ನು ತಿಳಿದುಕೊಳ್ಳುತ್ತಾರೆ. ಈ ಪದ್ಧತಿಯನ್ನು ಅಮಲಿನಲ್ಲಿ ಜಾರಿಗೆ ತರುವುದಕ್ಕಿಂತಲೂ, ಈಗ ಸ್ವೀಕರಿಸುತ್ತಿರುವ ನಾಲ್ಕು ಆಣೆಯ ವಂತಿಗೆಯು ನಮಗೆ ಬೇಡ. ದಲಿತ ಫೆಡರೇಶನ್‌ನಲ್ಲಿ ಹಣವನ್ನು ತಿನ್ನುವ ಪ್ರವೃತ್ತಿಯು ಬಹಳಷ್ಟು ಪ್ರಮಾಣದಲ್ಲಿ ತಲೆಹಾಕಿದೆ. ಹಾಗಾಗಿಯೇ ಕಾಂಗ್ರೆಸ್‌ನ ರೀತಿಯ ನಾಲ್ಕಾಣೆಯ ಬಂಧನವು ನಮಗೆ ಬೇಕಾಗಿಲ್ಲ. ಪ್ರತಿಯೊಬ್ಬ ಅಸ್ಪಶ್ಯ ವ್ಯಕ್ತಿಯೂ ಈ ದಲಿತ ಫೆಡರೇಶನ್‌ನ ಸದಸ್ಯನಾಗಿರುತ್ತಾನೆ. ಆತ ಒಂದೊಮ್ಮೆ ಹಾಗೆ ಹೇಳದೇ ಇದ್ದರೂ ನಾವು ಹಾಗೇ ತಿಳಿದುಕೊಳ್ಳುವವರೇ. ಈ ರೀತಿಯಲ್ಲಿ ಪ್ರತಿಯೊಂದು ಊರಿನ ಜನರು ತಮ್ಮ ಊರಿನ ಐದು ಜನರನ್ನು ಆರಿಸಿ ಕಳುಹಿಸಬೇಕು. ಅಂದರೆ ಎಲ್ಲಾ ತಾಲೂಕುಗಳಲ್ಲಿ ಬರುವ ಪ್ರತಿಯೊಂದು ಊರುಗಳಿಂದ ಐದೈದು ಜನರು ತಮ್ಮ ಅಧ್ಯಕ್ಷ, ಸೆಕ್ರಟರಿಗಳನ್ನು ಆರಿಸಿಕೊಳ್ಳಬೇಕು. ಆಗ ತಕರಾರು ಮಾಡುವುದಕ್ಕೆ ಯಾವುದೇ ಕಾರಣಗಳು ಇರುವುದಿಲ್ಲ. ಈ ಚುಣೆವಾಣೆಯು ಎಲ್ಲರಿಗೂ ಬಂಧನಕಾರವೇ ಆಗಿರುತ್ತದೆ. ಸಂಗ್ರಹವಾದ ಹಣವನ್ನೆಲ್ಲ ಬ್ಯಾಂಕಿನಲ್ಲಿ ಇಡುವುದಕ್ಕೆ ಬರುತ್ತದೆ.

 ಜನರಿಗಾಗಿ ಯಾರು ಹೋರಾಡುತ್ತಾರೆಯೋ ಅವರೇ ನೇತಾರರು. ಜನರು ಇದನ್ನು ನೋಡುತ್ತಿರುತ್ತಾರೆ ಎಂಬುದರಿಂದಲೇ ಕೆಲಸ ಮಾಡಬೇಕಾಗಿದೆ. ನಾನು ಇನ್ನು ರಾಜಕಾರಣದಿಂದ ಹೊರಗಡೆ ಬೀಳುವವನಿದ್ದೇನೆ. ಇನ್ನು ಮುಂದೆ ನಾನು ಕೇವಲ ಸಲಹೆ ಸೂಚನೆಗಳನ್ನಷ್ಟೆ ನೀಡುತ್ತೇನೆ. ಸಲಹೆ ನೀಡುವುದಕ್ಕೆ ನಾನು ಸದಾ ತಯಾರಾಗಿಯೇ ಇರುತ್ತೇನೆ. ನಾನು ಒಂದೊಮ್ಮೆ ಫೆಡರೇಶನ್‌ನಿಂದ ಹೊರಗಡೆ ಬಿದ್ದರೂ ಫೆಡರೇಶನ್‌ನ್ನು ಜೀವಂತವಾಗಿ ಇಡಬೇಕು ಎಂಬುದು ನನ್ನ ಇಚ್ಛೆಯಾಗಿದೆ. ಚುನಾವಣೆಯಲ್ಲಿ ನಮಗೆ ಗೌರವವಿಲ್ಲ ಎಂದು ಯಾರೂ ಭಾವಿಸಬಾರದು. ಚುನಾವಣೆಯಲ್ಲಿ ನಾವು ಗೆದ್ದೇ ತೀರಬೇಕು ಎಂಬುದಾಗಿಯೂ ತಿಳಿಯಬಾರದು. ಕಿದ್ವಾಯಿ ಎಂಬಾತನೊಬ್ಬ ನನ್ನ ಗೆಳೆಯನಿದ್ದ. ಮಾತ್ರವಲ್ಲ ಆತ ಕಾಂಗ್ರೆಸ್‌ನ ಪ್ರಾಣವೂ ಆಗಿದ್ದ. ಅವನ ಹಿಂದೆ ಕಾಂಗ್ರೆಸ್ ತಬ್ಬಲಿಯಂತೆ ಆಗಿತ್ತು. ಹಾಗೆಯೇ ಜವಾಹರಲಾಲ್ ನೆಹರೂ ಕೂಡಾ ಕಾಂಗ್ರೆಸ್‌ನ ಪ್ರಾಣವಾಗಿದ್ದಾರೆ. ಆನಂತರ ಕಾಂಗ್ರೆಸ್ ಉಳಿಯುವುದಿಲ್ಲ. ಜನತೆ ನಿಮ್ಮವರ ಮುಂದೆಯೇ ಬರುವವರಿದ್ದಾರೆ. ಬೇರೆಯವರ ಮನೆಗಳು ಮುರಿದರೂ ನಮ್ಮ ನಮ್ಮ ಗುಡಿಸಲುಗಳನ್ನು ಹಾಗೆಯೇ ಇಟ್ಟುಕೊಂಡಿರಿ.

ಕಾರಣ ಜನರು ಕೊನೆಗೆ ನಿಮ್ಮ ಜೋಪಡಿಯ ಆಶ್ರಯಕ್ಕೆ ಬರುತ್ತಾರೆ. ನಿಮ್ಮ ಜೋಪಡಿಗಳು ಜೀವಂತವಾಗಿದ್ದರೆ ಮಾತ್ರವೇ ನಿಮಗೆ ಜಯ ಖಂಡಿತವಾಗಿಯೂ ಬರುತ್ತದೆ. ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫೆಡರೇಶನ್‌ನ ಕೋಟೆಯೂ ಈ ಅಸ್ಪಶ್ಯ ಜನರ ಭಾವನೆಗಳ ಮೇಲೆಯೇ ನಿಂತಿರುವುದಾಗಿದೆ. ಅದನ್ನು ಮುರಿದು ಹಾಕುವಂತಹ ಕೆಲಸವಾಗಬಾರದು. ಈ ಸಮಾಜವು ಬ್ರಾಹ್ಮಣೇತರ ಪಕ್ಷಗಳ ಸರಕಾರದಿಂದಲೇ ನಡೆಯುತ್ತಿರುವುದಾಗಿದೆ. ನಾವು ಜ್ಯೋತಿಬಾ ಫುಲೆಯವರ ಶಿಷ್ಯರಾಗಿದ್ದೇವೆ. ಅವರೊಂದಿಗೆ ನಾವು ಸಹಕಾರ್ಯ ಮಾಡಿದ್ದೆವು, ಆದರೆ ಅವರು ನಂತರ ಕಾಂಗ್ರೆಸ್‌ಗೆ ಹೋಗಿ ಸೇರಿಕೊಂಡರು. ನಾವು ನಮ್ಮ ಧ್ಯೇಯ ಪ್ರಾಪ್ತಿಗಾಗಿ ಸಾಧ್ಯವಾದಮಟ್ಟಿಗೆ ಇತರರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಬೇಕಾಗಿರುತ್ತದೆ. ಯಾರ ಜೊತೆಗೆ ಸಂಬಂಧವನ್ನು ಇಟ್ಟುಕೊಳ್ಳಬಹುದು ಎಂಬುದರ ಬಗೆಗೆ ನಾನು ನಿಮಗೆ ಆನಂತರದಲ್ಲಿ ಹೇಳುತ್ತೇನೆ. ಯಾವ ಜನರು ನಮಗೆ ಒಳ್ಳೆಯದನ್ನು ಮಾಡುತ್ತಾರೆಯೋ ಆ ಪಕ್ಷದವರು ನಮಗೆ ಮಿತ್ರರಾಗಿರುತ್ತಾರೆ. ರಾಜಕಾರಣದಲ್ಲಿ ಸಂಘರ್ಷಗಳು ಆಗುತ್ತಿರುತ್ತವೆ, ಅವುಗಳನ್ನು ಮರೆತುಬಿಡುವುದನ್ನು ರೂಢಿ ಮಾಡಿಕೊಳ್ಳಬೇಕು. ಇಲ್ಲದೆ ಇದ್ದರೆ ಈ ಸಂಘರ್ಷದ ಮರವು ಮನಸ್ಸಿನಲ್ಲಿ ಬೆಳೆಯುತ್ತದೆ. ಈ ಸ್ವಭಾವವು ಒಳ್ಳೆಯದಲ್ಲ. ನನ್ನ ಹೃದಯವು ನಿರ್ಮಲವಾಗಿದೆ. ನನಗೂ ಇತರರೊಂದಿಗೆ ಮತಭೇದಗಳಿವೆ. ಆದರೆ ನಾನು ಅವನ್ನೆಲ್ಲ ಬಹಳ ಬೇಗನೇ ಮರೆತುಬಿಡುತ್ತೇನೆ. ಮನುಷ್ಯರ ಮನಸ್ಸು ಹೂವಿನ ಹಾಗೆ ನಮ್ಮ ಧೋರಣೆಗಳನ್ನು ಇಟ್ಟುಕೊಂಡಿರಬೇಕಾಗುತ್ತದೆ. ತಮ್ಮ ಧ್ಯೇಯವನ್ನು ಸಾಧಿಸುವುದಕ್ಕೆ ಕೆಲವು ಬಾರಿ ಮೀಸೆಯನ್ನು ಮೇಲೆ ಮಾಡಿಕೊಳ್ಳುವುದು, ಮತ್ತೆ ಕೆಲವು ಬಾರಿ ಮೀಸೆಯನ್ನು ಕೆಳಗೆ ಮಾಡಿಕೊಳ್ಳುವುದು ಮಾರವಾಡಿಗಳ ಸಾಮಾನ್ಯ ಸ್ಥಿತಿಯಾಗಿರುತ್ತದೆ. ಹಾಗೆಯೇ ನಮ್ಮ ಧೋರಣೆಗಳನ್ನು ನಿರ್ಧರಿಸಬೇಕಾಗುತ್ತದೆ. ಇಷ್ಟು ಹೇಳಿ ನಾನು ಇನ್ನು ವಿರಮಿಸುತ್ತೇನೆ.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)