ಪಟೇಲ್ ಆಯಿತು, ಈಗ ನೇತಾಜಿ ಸರದಿ!
ಪಟೇಲ್ ಮತ್ತು ನೇತಾಜಿಯವರನ್ನು ಮುನ್ನೆಲೆಗೆ ತರುತ್ತಿರುವುದು ಮತ್ತೆ ಅಧಿಕಾರ ಪಡೆಯಲು ಆರೆಸ್ಸೆಸ್-ಬಿಜೆಪಿ ನಡೆಸುತ್ತಿರುವ ಚುನಾವಣಾ ಷಡ್ಯಂತ್ರವಾಗಿದೆ!
ಬ್ರಿಟಿಷ್ ವಿರೋಧಿ ಚಟುವಟಿಕೆಗಳಿಗಾಗಿ ಬೋಸ್‌ರ ಐಎನ್‌ಎಯ ವಿಚಾರಣೆ ನಡೆಯುತ್ತಿದ್ದಾಗ, ಐಎನ್‌ಎಯನ್ನು ಸಮರ್ಥಿಸಿದವರು ನೆಹರೂರಂತಹ ನಾಯಕರೇ ಹೊರತು, ಹಿಂದೂ ರಾಷ್ಟ್ರೀಯವಾಗಿ ಕ್ಯಾಂಪ್‌ನ ಯಾವನೇ ಒಬ್ಬ ಕೂಡ ಅಲ್ಲ. ಈಗ ಚುನಾವಣಾ ಕಾರಣಗಳಿಗಾಗಿ ಆರೆಸ್ಸೆಸ್- ಬಿಜೆಪಿ, ಪಟೇಲ್ ಮತ್ತು ಬೋಸ್‌ರಂತಹವರೊಡನೆ ತಮ್ಮನ್ನು ಸಮೀಕರಿಸಲು ಪ್ರಯತ್ನಿಸುತ್ತಿವೆ.
ಜನವರಿ 23ರಂದು ಬಿಜೆಪಿ-ಆರೆಸ್ಸೆಸ್, ಸುಭಾಷ್‌ಚಂದ್ರ ಬೋಸ್‌ರನ್ನು ಗೌರವಿಸಲು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಿತು. ಆದರೆ ಇಂತಹ ಒಂದು ಕಾರ್ಯಕ್ರಮದಲ್ಲಿ ಘರ್ಷಣೆ ನಡೆದು ಒಡಿಶಾದ ಕೇಂದ್ರದಲ್ಲಿ ಕರ್ಪ್ಯೂ ಘೋಷಿಸಬೇಕಾಯಿತು. ಬಿಜೆಪಿ ಆರೆಸ್ಸ್‌ಸ್ ಸಂಘಟಿಸಿದ ಹಲವು ಸಭೆಗಳಲ್ಲಿ ಬೋಸ್ ಮತ್ತು ಸಾವರ್ಕರ್ ನಡುವೆ, ಬೋಸ್ ಮತ್ತು ಆರೆಸ್ಸ್‌ಸ್ ನಡುವಿನ ಸಮಾನಾಂಶಗಳಿವೆ ಎಂದು ಸಾಬೀತುಪಡಿಸುವ ಪ್ರಯತ್ನಗಳು ನಡೆದವು. ಆಕ್ಸಿಸ್ ಶಕ್ತಿಗಳೊಂದಿಗೆ (ಜರ್ಮನಿ ಮತ್ತು ಜಪಾನ್‌ಗಳೊಂದಿಗೆ) ಕೈಜೋಡಿಸಲು ಬೋಸ್ ನಿರ್ಧರಿಸದ್ದು ಸಾವರ್ಕರ್‌ರ ಸೂಚನೆಯ ಮೇರೆಗೇ ಎಂದು ತೋರಿಸುವ ಪ್ರಚಾರ ಈಗ ಬಿರುಸಿನಿಂದ ನಡೆಯುತ್ತಿದೆ. ಆರೆಸ್ಸೆಸ್ ಮತ್ತು ಐಎನ್‌ವಿ (ಆಜಾದ್ ಹಿಂದ್ ಫೌಜ್) ನಡುವೆ ಹೋಲಿಕೆಗಳನ್ನು ಮಾಡಲಾಗುತ್ತಿದೆ; ಇವೆರಡರ ನಡುವೆ ಇಲ್ಲದ ಸಾಮ್ಯಗಳನ್ನು ಇವೆ ಎಂದು ಸಾಬೀತುಪಡಿಸುವ ಪ್ರಯತ್ನಗಳು ನಡೆಯುತ್ತಿವೆ.
ಬೋಸ್‌ರವರ ರಾಷ್ಟ್ರೀಯತೆಯ ಸಾವರ್ಕರ್-ಆರೆಸ್ಸೆಸ್‌ನ ರಾಷ್ಟ್ರೀಯತೆಯ ಪರಿಕಲ್ಪನೆಗೆ ಹತ್ತಿರವಾಗಿದೆ ಎಂದು ತೋರಿಸಲು ಪ್ರಯತ್ನಗಳು ನಡೆಯುತ್ತಲೇ ಇವೆ.
ರಾಷ್ಟ್ರೀಯ ಐಕಾನ್‌ಗಳೊಂದಿಗೆ ತಮ್ಮ ಸಂಘಟನೆಯನ್ನು ಗುರುತಿಸಿಕೊಳ್ಳುವ, ಸಮೀಕರಿಸುವ ಪ್ರಯತ್ನಗಳು ಕಳೆದ ಕೆಲವು ವರ್ಷಗಳ ಹಿಂದೆಯಷ್ಟೆ ಆರಂಭವಾದವು. ಸರ್ದಾರ್ ಪಟೇಲ್‌ರ ವಿಷಯದಲ್ಲಿ ಮಂಡಿಸಲಾಗುತ್ತಿರುವ ವಾದ ಇದು: ‘‘ಪಟೇಲರು ಭಾರತದ ಪ್ರಥಮ ಪ್ರಧಾನಿಯಾಗಿರುತ್ತಿದ್ದಲ್ಲಿ ನಮಗೆ ಈಗ ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ.’’ ಈ ವಿಷಯದಲ್ಲಿ ಸತ್ಯಸಂಗತಿ ಏನೆಂದರೆ ಪಟೇಲ್ ಮತ್ತು ನೆಹರೂ ಇಬ್ಬರೂ ಅಂದಿನ ಭಾರತದ ಸಚಿವ ಸಂಪುಟದ ಭದ್ರ ಆಧಾರಸ್ತಂಭಗಳಾಗಿದ್ದರು; ಅವರು ಭಾರತದ ಗಣರಾಜ್ಯಕ್ಕೆ ಭದ್ರಬುನಾದಿ ಹಾಕಿಕೊಟ್ಟವರು.
ಅವರ ನಡುವಿನ ಭಿನ್ನಾಭಿಪ್ರಾಯ ತೀರ ಚಿಕ್ಕಮಟ್ಟದ್ದಾಗಿತ್ತು ಮತ್ತು ನೆಹರೂರವರಿಗೆ ಪಟೇಲ್ ಅತ್ಯಂತ ವಿಶ್ವಾಸಾರ್ಹರಾದ ಸಚಿವ ಸಂಪುಟದ ಸಹೋದ್ಯೋಗಿಯಾಗಿದ್ದರು.
ನೇತಾಜಿ ಸುಭಾಷ್‌ಚಂದ್ರ ಬೋಸ್ ಭಾರತದ ಅಗ್ರಗಣ್ಯ ಸ್ವಾತಂತ್ರ ಹೋರಾಟಗಾರರಲ್ಲಿ ಒಬ್ಬರೆಂದು ನಮಗೆಲ್ಲ ತಿಳಿದೇ ಇದೆ. ಅವರ ಜೀವಿತದ ಅವಧಿಯ ಬಹುಪಾಲಿನವರೆಗೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಒಂದು ಭಾಗವಾಗಿದ್ದರು. ಸಮಾಜವಾದ, ಜಾತ್ಯತೀತತೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿ ಅವರ ಮತ್ತು ನೆಹರೂರವರ ವಿಚಾರಗಳಲ್ಲಿ ಸಹಮತವಿತ್ತು, ಸಾಮ್ಯ ಇತ್ತು.
ಗಾಂಧಿ ನೇತೃತ್ವದ ಕಾಂಗ್ರೆಸ್ ಅಹಿಂಸಾ ಮಾರ್ಗವನ್ನು ಬಳಸಲೂ ಬಯಸಿತ್ತು. ಈ ವಿಷಯದಲ್ಲಿ ನೇತಾಜಿ ಭಿನ್ನಾಭಿಪ್ರಾಯ ಹೊಂದಿದ್ದರು. ದ್ವಿತೀಯ ಮಹಾಯುದ್ಧದ ವೇಳೆ ನೇತಾಜಿ, ಬ್ರಿಟಿಷರ ವಿರುದ್ಧ ಸಶಸ್ತ್ರ ಮಿಲಿಟರಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದ್ದರು.
ಆದರೆ ಅಹಿಂಸಾ ಮಾರ್ಗದಲ್ಲಿ ಮುನ್ನಡೆಯುವ ದೃಢ ನಿರ್ಧಾರ ತಳೆದಿದ್ದ ಕಾಂಗ್ರೆಸ್ ಗಾಂಧೀಜಿಯವರ ನೇತೃತ್ವದಲ್ಲಿ ‘ಕ್ವಿಟ್ ಇಂಡಿಯಾ’ ಚಳವಳಿ ಆರಂಭಿಸಿತು. ಆ ವೇಳೆ ನೇತಾಜಿಯವರು ಫ್ಯಾಶಿಸ್ಟ್ ಜರ್ಮನಿ ಮತ್ತು ಅವರ ಮಿತ್ರ ರಾಷ್ಟ್ರವಾದ ಜಪಾನ್ ಜತೆ ಸಖ್ಯ ಬೆಳೆಸಿದರು. ಆಗ ಆರೆಸ್ಸೆಸ್ ಮತ್ತು ಹಿಂದೂ ರಾಷ್ಟ್ರೀಯವಾದಿಗಳು ಏನು ಮಾಡುತ್ತಿದ್ದರು! ಹಿಂದುತ್ವ ಸಿದ್ಧಾಂತಿ ಮತ್ತು ಹಿಂದೂರಾಷ್ಟ್ರ ಪ್ರತಿಪಾದಕ ಸಾವರ್ಕರ್ ಜಪಾನ್ ಮತ್ತು ಜರ್ಮನಿಯ ವಿರುದ್ಧ ಯುದ್ಧ ಸಾರಿರುವ ಬ್ರಿಟಿಷರಿಗೆ ಸಹಾಯಮಾಡಬೇಕೆಂದು ಹಿಂದೂ ರಾಷ್ಟ್ರೀಯವಾದಿಗಳಿಗೆ ಕರೆ ನೀಡಿದರು. ಹಾಗೆಯೇ, ಬ್ರಿಟಿಷರಿಗೆ ಕಿರಿಕಿರಿಯಾಗುವಂತಹ ಏನನ್ನೂ ಮಾಡಬಾರದು ಎಂದು ಆರೆಸ್ಸೆಸ್ ಸರಸಂಘ ಚಾಲಕ ಎಂ. ಎಸ್. ಗೋಳ್ವಾಲ್ಕರ್ ಆರೆಸ್ಸೆಸ್‌ನ ಎಲ್ಲ ಶಾಖೆಗಳಿಗೆ ಸೂಚನೆ ನೀಡಿದರಲ್ಲದೆ, ಸ್ವತಃ ತಾನು ಬ್ರಿಟಿಷ್ ವಿರೋಧಿ ಹೋರಾಟದಿಂದ ದೂರ ಉಳಿದರು. ಅಲ್ಲದೆ ಬ್ರಿಟಿಷ್ ಸೇನೆಗೆ ಸೇರಿಕೊಳ್ಳುವಂತೆ ಹಿಂದೂ ಯುವಕರಿಗೆ ಕರೆ ನೀಡಿ ಬ್ರಿಟಿಷರಿಗೆ ನೆರವಾದರು. ಆದ್ದರಿಂದ ಒಂದೆಡೆ ಹಿಂದೂ ರಾಷ್ಟ್ರೀಯವಾದಿಗಳು (ಸಾವರ್ಕರ್) ಬ್ರಿಟಿಷರಿಗೆ ನೆರವು ನೀಡುತ್ತಿದ್ದರು ಅಥವಾ ಸ್ವಾತಂತ್ರ ಹೋರಾಟದಿಂದ ದೂರ ಉಳಿಯುತ್ತಿದ್ದರು (ಗೋಳ್ವಾಲ್ಕರ್-ಆರೆಸ್ಸೆಸ್); ಇನ್ನೊಂದೆಡೆ ಈಗ ಅದೇ ಜನ ನೇತಾಜಿಯವರನ್ನು ಅವರ ಬ್ರಿಟಿಷ್ ವಿರೋಧಿ ಐಎನ್‌ಎಗಾಗಿ ಹಾಡಿ ಹೊಗಳುತ್ತಿದ್ದಾರೆ!
ನೇತಾಜಿಯವರು, ನೆಹರೂರವರ ವಿಚಾರಗಳಿಗೆ ಸಮೀಪವಾಗಿದ್ದ, ಸಮಾಜವಾದಿ ಚಿಂತನಾಧಾರೆಯನ್ನು ಹೊಂದಿದ ಸಮಾಜವಾದಿಯಾಗಿದ್ದರೆ, ಕಮ್ಯುನಿಸ್ಟರು ಹಿಂದೂರಾಷ್ಟ್ರಕ್ಕೆ ಒಂದು ಆಂತರಿಕ ಬೆದರಿಕೆ ಎಂದು ಗೋಳ್ವಾಲ್ಕರ್ ಬರೆದರು. ಬಿಜೆಪಿ ರಚನೆಯ ವೇಳೆ ಅದು ‘ಗಾಂಧಿಯನ್ ಸಮಾಜವಾದ’ ಎಂಬ ಪದಗಳನ್ನು ಬಳಸಿತಾದರೂ, ಅದೊಂದು ಕೇವಲ ಚುನಾವಣಾ ಜುಮ್ಲಾ (ಗಿಮಿಕ್) ಆಗಿತ್ತು. ನೇತಾಜಿಯವರ ವಿಚಾರ/ಸಿದ್ಧಾಂತ ಮತ್ತು ಕ್ರಿಯೆಗಳು ಹಿಂದೂ ರಾಷ್ಟ್ರೀಯವಾದಿಗಳ-ಆರೆಸ್ಸೆಸ್‌ನ ಸಿದ್ಧಾಂತ ಮತ್ತು ಕ್ರಿಯೆಗಳಿಗೆ ತದ್ವಿರುದ್ಧವಾಗಿದ್ದವು; ಉತ್ತರಧ್ರುವ-ದಕ್ಷಿಣದ್ರುವದಂತೆ ಇದ್ದವು. ಮೂಲತಃ ಆರೆಸ್ಸೆಸ್ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸದೆ ಇದ್ದದ್ದರಿಂದ ಅದಕ್ಕೆ ಯಾವನೇ ರಾಷ್ಟ್ರೀಯ ಹೀರೊ, ಯಾವುದೇ ರಾಷ್ಟ್ರೀಯ ಐಕಾನ್ ಇಲ್ಲ. ಆಗ ಓರ್ವ ಕಾಲೇಜು ವಿದ್ಯಾರ್ಥಿಯಾಗಿದ್ದ ಆರೆಸ್ಸೆಸ್‌ನ ಅಟಲ್ ಬಿಹಾರಿ ವಾಜಪೇಯಿಯವರನ್ನು ಕ್ವಿಟ್ ಇಂಡಿಯಾ ಚಳವಳಿಯ ವೇಳೆ ತಪ್ಪಾಗಿ ಬಂಧಿಸಲಾಗಿತ್ತು. ಅವರು ಕ್ಷಮಾಪಣಾ ಪತ್ರ ಬರೆದು ಕೊಟ್ಟು ಜೈಲಿನಿಂದ ಬಿಡುಗಡೆಗೊಂಡಿದ್ದರು. ಅಂಡಮಾನ್ ಜೈಲಿನಲ್ಲಿ ಬಂಧಿಸಿ ಇಡಲ್ಪಡುವ ಮೊದಲು ಸಾವರ್ಕರ್ ಬ್ರಿಟಿಷ್ ವಿರೋಧಿಯಾಗಿದ್ದರಿಂದ, ಅವರ ಹೆಸರಿನ ಹಿಂದೆ ‘ವೀರ್’ ಎಂಬ ಪದವನ್ನು ಸೇರಿಸಿ ಅವರನ್ನು ವೈಭವೀಕರಿಸಲಾಗುತ್ತಿದೆ. ಅವರು ಕೂಡ ಬ್ರಿಟಿಷ್‌ರಿಗೆ ತಪ್ಪೊಪ್ಪಿಗೆ ಪತ್ರ ಬರೆದು, ಕ್ಷಮೆಕೋರಿ ಜೈಲಿನಿಂದ ಬಿಡುಗಡೆಗೊಂಡಿದ್ದರು. ಹೆಚ್ಚಾಗಿ, ಕೋಮುವಾದಿ ರಾಷ್ಟ್ರೀಯವಾದಿಗಳು, ಮುಸ್ಲಿಂ ಲೀಗ್-ಹಿಂದೂ ಮಹಾ ಸಭಾ-ಆರೆಸ್ಸ್‌ಸ್ ಎಂದೂ ಬ್ರಿಟಿಷ್ ವಿರೋಧಿ ನಿಲುವು ತೆಗೆದುಕೊಳ್ಳಲಿಲ್ಲ. ಆದರೆ ಕಾಂಗ್ರೆಸ್ ಮತ್ತು ಬೋಸ್ ಸಂಪೂರ್ಣವಾಗಿ ಬ್ರಟಿಷ್ ವಿರೋಧಿಗಳಾಗಿದ್ದರು.
ಬ್ರಿಟಿಷ್ ವಿರೋಧಿ ಚಟುವಟಿಕೆಗಳಿಗಾಗಿ ಬೋಸ್‌ರ ಐಎನ್‌ಎಯ ವಿಚಾರಣೆ ನಡೆಯುತ್ತಿದ್ದಾಗ, ಐಎನ್‌ಎಯನ್ನು ಸಮರ್ಥಿಸಿದವರು ನೆಹರೂರಂತಹ ನಾಯಕರೇ ಹೊರತು, ಹಿಂದೂ ರಾಷ್ಟ್ರೀಯವಾಗಿ ಕ್ಯಾಂಪ್‌ನ ಯಾವನೇ ಒಬ್ಬ ಕೂಡ ಅಲ್ಲ. ಈಗ ಚುನಾವಣಾ ಕಾರಣಗಳಿಗಾಗಿ ಆರೆಸ್ಸೆಸ್- ಬಿಜೆಪಿ, ಪಟೇಲ್ ಮತ್ತು ಬೋಸ್‌ರಂತಹವರೊಡನೆ ತಮ್ಮನ್ನು ಸಮೀಕರಿಸಲು ಪ್ರಯತ್ನಿಸುತ್ತಿವೆ. ಇಷ್ಟರವರೆಗೆ ಪಟೇಲ್‌ರನ್ನು ಮುಂದುಮಾಡಿದ್ದಾಯಿತು; ಈಗ ಬೋಸ್‌ರ ಸರದಿ. ಪಟೇಲ್ ಮತ್ತು ನೇತಾಜಿಯವರನ್ನು ಈಗ ಮುನ್ನೆಲೆಗೆ ತಂದು ಅವರನ್ನು ವೈಭವೀಕರಿಸಿ ಹಾಡಿಹೊಗಳುತ್ತಿರುವುದು ಇನ್ನಷ್ಟು ಅಧಿಕಾರ ಪಡೆಯಲು ಆರೆಸ್ಸೆಸ್-ಬಿಜೆಪಿ ನಡೆಸುತ್ತಿರುವ ಚುನಾವಣಾ ಷಡ್ಯಂತ್ರಗಳಲ್ಲದೆ ಬೇರೆ ಏನೂ ಅಲ್ಲ!