ಕಾಫಿ ಹೌಸ್‍ನಲ್ಲಿ ಕಂಡ ಬದುಕು
ಈ ಹೊತ್ತಿನ ಹೊತ್ತಿಗೆ
ಕೆ. ನಲ್ಲತಂಬಿ ಅವರು ವಿಶಿಷ್ಟ ಕಾವ್ಯ ಪ್ರಯೋಗ ಕೋಶಿ’ಸ್ -ಕವಿತೆಗಳು’ ಕಾಫಿ ಟೇಬಲ್‌ನಲ್ಲಿ ದಕ್ಕಿದ ಸತ್ಯಗಳು ಎಂದು ಈ ಹನಿಸಾಲುಗಳನ್ನು ಅವರು ಕರೆದಿದ್ದಾರೆ. ಸಾಧಾರಣವಾಗಿ ಕವಿತೆ ಏಕಾಂತದಲ್ಲಿ ಹುಟ್ಟುತ್ತದೆ. ತತ್ವಗಳು ಹೊಳೆಯುವುದು ಜ್ಞಾನಿಗಳ ಜೊತೆಗೆ ಸಂವಹನ ಮಾಡುವ ಮೂಲಕ ಎನ್ನುವ ಸಿದ್ಧ ತತ್ವವನ್ನು ವ್ಯಂಗ್ಯ ಮಾಡುವಂತೆ, ಕಾಫಿಶಾಫ್‌ನಲ್ಲಿ ವೇಯ್ಟರ್ ವಿನ್ಸೆಂಟ್ ಬಾಯಲ್ಲಿ ಬದುಕಿನ ತತ್ವ ಜ್ಞಾನವನ್ನು ಹೊರಡಿಸುತ್ತಾರೆ. ನಗರ ಬದುಕಿನ ಕೇಂದ್ರವಾಗಿರುವ ಕಾಫಿಹೌಸ್‌ನಲ್ಲಿ ಹುಟ್ಟಿದ ಝಲಕ್‌ಗಳೇ ಇಲ್ಲಿರುವ ಹನಿ ಕವಿತೆಗಳ ಸಾಲುಗಳು.
ಕಾಫಿಯ ಜೊತೆ ಜೊತೆಗೆ ಹುಟ್ಟಿದ ಚಿಂತನೆಗಳು ಇವು. ಕೋಶಿ ಸ್ ಅನ್ನೋ ಕಾಫಿ ಹೌಸ್‌ಗೆ ಹೋಗಿ ಕಿಟಕಿ ಪಕ್ಕದ ಟೇಬಲ್‌ನಲ್ಲಿ ಕೂತು ಯಾರದೋ ನಿರೀಕ್ಷೆಯಲ್ಲಿ ಕಾಫಿಗೆ ಆರ್ಡರ್ ಮಾಡಿ, ಹೊರ ನೋಡುತ್ತಾ ಇದ್ದಾಗ, ಕಾಫಿ ತಂದಿಡುವ ವೆಯ್ಟರ್ ವಿನ್ಸೆಂಟ್ ಹೇಳುವ ಒಂದೊಂದು ಮಾತೇ ಕೋಶಿಸ್ ಸರಣಿ. ಕಾಫಿ ಮತ್ತು ಬದುಕು ಹೇಗೆ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ ಎನ್ನುವುದನ್ನು ಕವಿ ತಮ್ಮ ಸಾಲುಗಳಲ್ಲಿ ಹೊಳೆಯಿಸುತ್ತಾರೆ. ಲೇಖಕರು ಈ ವಿಭಿನ್ನ ಪ್ರಯೋಗದ ಕುರಿತಂತೆ ಹೀಗೆ ಹೇಳುತ್ತಾರೆ ‘‘ಪ್ರಾಣಿಗಳು ತಮ್ಮ ಭಾವನೆಗಳನ್ನು ತಮ್ಮದೇ ವರ್ತನೆಯಿಂದ, ಕ್ರಿಯೆಯಿಂದ, ಧ್ವನಿಯಿಂದ ವ್ಯಕ್ತಗೊಳಿಸುತ್ತವೆ. ಮನುಷ್ಯನೋ ಭಾಷೆಯಿಂದ ಅವನ ನಲಿವು-ನೋವು, ಸಂತಸ, ದುಃಖ, ಕೋಪ-ತಾಪ, ಪ್ರೀತಿ ಪ್ರೇಮ ಎಲ್ಲವನ್ನು ಪ್ರಕಟಗೊಳಿಸುತ್ತಾನೆ. ಆಗ ಮಾತುಗಳು ಕೆಲವೊಮ್ಮೆ ಕತೆಯಾಗಿ, ಕವಿತೆಯಾಗಿ ರೂಪುಗೊಳ್ಳುತ್ತವೆ. ಹಾಗೆ ಹುಟ್ಟಿಕೊಂಡ ನೋವನ್ನು ನೇರವಾಗಿ ತಿಳಿಸಲಾಗದೇ ಇದ್ದಾಗ ಮೊರೆಹೋದದ್ದೇ ಕೋಶಿಸ್.
‘‘ಕಾಫಿ ಕುಡಿಯುತ್ತಾ ಕುಳಿತಿದ್ದೆ/ ವಿನ್ಸೆಂಟ್ ಬಂದು/ ‘ಚಿಂತೆ ಬಿಡಿ ಸಾರ್, ಪವಾಡವಾಗುತ್ತೆ/ ಹಾರೆಯ ಪೆಟ್ಟಿಗೆ/ ಸೀಳದ ಬಂಡೆ/ ಬೀಜದ ಮೊಳಕೆಗೆ /ಬಿರಿಯುತ್ತೆ’ ಎಂದ’’ ಇಂತಹ ಥಕ್ ಎನ್ನುವ ಸಾಲುಗಳು ಬೇಕಾದಷ್ಟಿವೆ. ಕೆಲವೊಂದು ಸವಕಲು ಸಾಲುಗಳು ನುಸುಳಿವೆ. ಮಾತು, ವೌನಗಳೆಲ್ಲ ಈಗಾಗಲೇ ಬಳಸಿ ಕ್ಲೀಷೆಯಾದವುಗಳು. ಹಲವು ಸಾಲುಗಳು ಹೌದಲ್ಲ ಎನ್ನಿಸಿ ನಮ್ಮಿಳಗೆ ಇಳಿದು ಬೆಳೆಯುತ್ತವೆ.
ಬಹುರೂಪಿ ಬೆಂಗಳೂರು ಹೊರತಂದಿರುವ ಈ ಪುಟ್ಟ ಕೃತಿಯ ಒಟ್ಟು ಪುಟಗಳು 40. ಮುಖಬೆಲೆ 40 ರೂ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.