ಪರೀಕ್ಷಾ ಪರ್ವ: ವಿದ್ಯಾರ್ಥಿಗಳಿಗೆ ಕಿವಿಮಾತು
ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿವೆ. ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮಾರ್ಚ್ 1ರಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಚ್ 21ರಿಂದ ಅಂತಿಮ ಪರೀಕ್ಷೆಗಳು ಆರಂಭವಾಗಲಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮಾರ್ಚ್‌ನಲ್ಲಿಯೂ, ಪದವಿ ವಿದ್ಯಾರ್ಥಿಗಳು ಎಪ್ರಿಲ್-ಮೇನಲ್ಲಿಯೂ ತಮ್ಮ ಸೆಮಿಸ್ಟರ್ ಪರೀಕ್ಷೆಗಳನ್ನು ಎದುರಿಸಲಿದ್ದಾರೆ. ಒಟ್ಟಿನಲ್ಲಿ ಫೆಬ್ರವರಿಯಿಂದ ಮೇ ತಿಂಗಳವರೆಗೂ ಪರೀಕ್ಷೆಗಳ ಪರ್ವ. ಹೆತ್ತವರಿಗೆ ಮಕ್ಕಳನ್ನು ಬೆಳಗ್ಗೆ ಎಬ್ಬಿಸುವ ಕೆಲಸ. ಅದಕ್ಕಾಗಿ ಬೆಳಗ್ಗೆ ಏಳುವ ಮೊದಲೇ ಮಕ್ಕಳಿಗೆ ತಾಯಂದಿರಿಂದ ಗದರಿಕೆಯ ಮಾತು. ತಾವಾಗಿಯೇ ಎದ್ದು ತಮ್ಮ ಪಾಡಿಗೆ ತಾವೇ ಓದಿ ಬರೆಯುವ ವಿದ್ಯಾರ್ಥಿಗಳು ಕಡಿಮೆ. ಅವರನ್ನು ಸದಾ ಬೆನ್ನತ್ತುವ ಪಾಲಕರಿಗೆ ತಮ್ಮ ಮಕ್ಕಳು ಬೆಳಗ್ಗೆ ಏಳುತ್ತಿಲ್ಲ, ಓದುತ್ತಿಲ್ಲ, ನನ್ನ ಮಾತು ಕೇಳುತ್ತಿಲ್ಲ ಎಂಬ ಚಿಂತೆಯೇ ಹೆಚ್ಚು. ಹೆತ್ತವರಿಗೂ ಮಕ್ಕಳಿಗೂ ಸದಾ ಸಂಘರ್ಷವಾಗುವ ಸಮಯವೂ ಇದೆ. ಅಂತಿಮ ಕ್ಷಣದಲ್ಲಿ ಒತ್ತಡ ಹೆಚ್ಚಿ ಏನನ್ನೂ ಓದದೇ ಹಿಮ್ಮ್ಮುಖವಾಗುವ ವಿದ್ಯಾರ್ಥಿಗಳಿಗೂ ಕಡಿಮೆಯಿಲ್ಲ. ಅಧ್ಯಾಪಕರಿಗೂ ಬಿಡುವಿಲ್ಲ. ಬೆಳಗ್ಗೆ - ಸಂಜೆ ವಿಶೇಷ ತರಗತಿ, ಮನೆಗೆ ಬಂದ ಮೇಲೆ ಟ್ಯೂಷನ್, ವಸತಿ ಶಾಲೆಯಲ್ಲಿ ರಾತ್ರಿ 10 ರಿಂದ 11 ರವರೆಗೂ ಓದು, ಮೊಬೈಲ್ ವೀಕ್ಷಣೆಗೆ ಕಡಿವಾಣ, ಆಟಗಳಿಗೆ ವಿದಾಯ, ಟಿ.ವಿ.ಗೆ ಕರೆನ್ಸಿ ಹಾಕದ ಹೆತ್ತವರು, ದೂರದಲ್ಲಿರುವ ತಂದೆಯಿಂದ ಪದೇ ಪದೇ ಮಕ್ಕಳ ಬಗ್ಗೆ ವಿಚಾರಣೆ, ಶಾಲಾ ಕಾಲೇಜುಗಳಲ್ಲಿಯೂ ಹೆತ್ತವರ ಸಭೆ, ಅಭಿವೃದ್ಧಿ ಪತ್ರ ಹಿಡಿದುಕೊಂಡೇ ಮನೆಗೆ ದೌಡಾಯಿಸುತ್ತಿರುವ ಪಾಲಕರು, ಇದ್ಯಾವುದರ ರಗಳೆಯೇ ಬೇಡವೆಂದು ತಾವೇ ಸಹಿ ಹಾಕಿ ಅಭಿವೃದ್ಧಿ ಪತ್ರ ಒಪ್ಪಿಸುವ ಕೆಲವು ವಿದ್ಯಾರ್ಥಿಗಳು. ಇವೆಲ್ಲದಕ್ಕೂ ಕೇಂದ್ರ ಬಿಂದು ಪರೀಕ್ಷೆಯೇ ಆಗಿದೆ. ಪರೀಕ್ಷೆಯ ಬಗೆಗಿನ ಆತಂಕ, ನಿರ್ಲಕ್ಷ್ಯ ಕೂಡಾ ಈ ಚಿತ್ರಣಗಳಿಗೆ ಕಾರಣ ಆಗಿದೆ.
ವಿದ್ಯಾರ್ಥಿಗಳೇ ಪರೀಕ್ಷೆಯ ಬಗ್ಗೆ ಆತಂಕ ಬೇಡ ಅದನ್ನು ಆಸ್ವಾದಿಸಿ. ಪರೀಕ್ಷೆಯ ಬಗ್ಗೆ ನಿರ್ಲಕ್ಷ್ಯ ಬೇಡ ಅದನ್ನು ಪ್ರೀತಿಸಿ. ಇಷ್ಟವಿಲ್ಲದಿದ್ದರೂ ಕಷ್ಟವಾದರೂ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಗಳನ್ನು ಬರೆಯುವುದು ಅನಿವಾರ್ಯ. ಯಾವುದು ಅನಿವಾರ್ಯವೋ ಅದನ್ನು ದೂರ ಮಾಡುವ ಬದಲು ಹತ್ತಿರವಾಗಿಸುವುದು ಹೆಚ್ಚು ಉತ್ತಮವಾಗಿದೆ. ಆದುದರಿಂದ ವಿದ್ಯಾರ್ಥಿಗಳೇ ಪರೀಕ್ಷೆಯ ಬಗೆಗಿನ ನಿಮ್ಮ ತಲ್ಲಣಗಳನ್ನು ಒಂದಿಷ್ಟು ದೂರ ಮಾಡಲು ಪಠ್ಯದಿಂದಾಚೆಗಿನ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗುತ್ತದೆ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರದೆ ಪಾಲಕರಿಗೂ ಅನ್ವಯಿಸಲಿದೆ.
1.ಸಮಯವೇ ಸಂಪತ್ತು
ಶಾಲಾ ಕಾಲೇಜುಗಳ ಅಂತಿಮ ತರಗತಿಯ ವಿದ್ಯಾರ್ಥಿಗಳ ಆಟೋಗಾಫ್‌ನಲ್ಲಿ ಬಹುತೇಕ ವಿದ್ಯಾರ್ಥಿ ಪ್ರಿಯ ಬರಹವೊಂದು ಭಾರೀ ಹಿಂದಿನಿಂದಲೂ ಕಾಣಿಸಿಕೊಳ್ಳುತ್ತಿದೆ.. ಅದು ಈಗಲೂ ಮುಂದುವರಿದಿದೆ ಎನ್ನುವುದೂ ಕೂಡಾ ಗಮನಾರ್ಹ. ‘‘ಪರೀಕ್ಷೆಯೆಂಬ ರಣರಂಗದಲ್ಲಿ ಪೆನ್ನೆಂಬ ಖಡ್ಗ ಹಿಡಿದು ಶಾಯಿಯೆಂಬ ರಕ್ತ ಸುರಿಸಿ ನೀನು ವಿಜಯಿಯಾಗು’’ ಇದು ಆ ಒಕ್ಕಣೆ. ಇದನ್ನು ಬರೆಯದವರೂ, ಓದದವರೂ ಕಡಿಮೆ. ಹಿರಿಯರ ಹಳೆಯ ಆಟೋಗ್ರಾಫ್ ತೆಗೆದು ನೋಡಿದರೂ ಈ ವಾಕ್ಯಗಳು ಕಾಣಸಿಗುತ್ತವೆ. ಈಗಿನ ವಿದ್ಯಾರ್ಥಿಗಳು ಆ ಪದವನ್ನು ಹಿರಿಯರಿಂದ ಬಂದ ಬಳುವಳಿ ಎಂಬಂತೆ ಸ್ವೀಕರಿಸಿ ಮುಂದುವರಿಸುತ್ತಿದ್ದಾರೆ.
ವಿದ್ಯಾರ್ಥಿಗಳೇ ಪರೀಕ್ಷೆ ಎನ್ನುವುದು ರಣರಂಗ ಅಲ್ಲವೇ ಅಲ್ಲ. ಶಾಯಿಯಂತು ರಕ್ತವೂ ಅಲ್ಲ. ಆದರೆ ಪೆನ್ನು ಖಡ್ಗಕ್ಕಿಂತಲೂ ಹರಿತವಾದುದು ಎಂಬ ಮಾತಿದೆ. ಆದರೆ ಸದ್ಯಕ್ಕೆ ಪೆನ್ನನ್ನು ಖಡ್ಗ ಎಂಬುದಾಗಿ ತಿಳಿದು ಕೊಳ್ಳದೆ ಪೆನ್ನನ್ನು ಪೆನ್ನಾಗಿಯೇ ನೀವು ಬಳಸಿದರೆ ಸಾಕು. ಇಂತಹ ಮಾತನ್ನು ಬರೆದು ಬರೆದೇ ಪರೀಕ್ಷೆಯೆಂದರೆ ಯುದ್ಧವೆಂಬ ಭಾವನೆ ಬಂತೇನೋ? ನಿಜವಾಗಿಯೂ ಪರೀಕ್ಷೆ ಭಯ ಪಡುವಂತಹದ್ದಲ್ಲ. ಪ್ರೀತಿಸುವಂತಹದ್ದು. ನೀವು ಪರೀಕ್ಷೆಯನ್ನು ಶಿಕ್ಷಣದ ಒಂದು ಅಂಗವೆಂದು ಪರಿಗಣಿಸಿ. ನಾವು ಬೆಳಗ್ಗೆ ಎದ್ದು ಸ್ವಚ್ಛವಾಗುವುದು, ಉಪಾಹಾರ ಸೇವಿಸುವುದು, ಬಟ್ಟೆ ಬರೆ ತೊಳೆಯುವುದು, ನೀರು ಕುಡಿಯುವುದು, ನಿದ್ರಿಸುವುದು ಹೇಗೆ ಅನಿವಾರ್ಯವೋ ಹಾಗೇನೆ ಪರೀಕ್ಷೆಯೂ ಕೂಡಾ. ಕೆಲವರಿಗೆ ಬೆಳಗ್ಗೆ ಏಳುವುದು ಕಷ್ಟ ಔದಾಸೀನ್ಯ, ಇಷ್ಟವಲ್ಲದ ವಿಷಯ. ಆದರೆ ತಡವಾಗಿಯಾದರೂ ಏಳಲೇಬೇಕು. ಹಾಗಾದರೆ ಸ್ವಲ್ಪಬೇಗನೆ ನಿಯಮಿತವಾಗಿ ಎದ್ದರೆ ಒಂದಷ್ಟು ಹಗಲು ಹೆಚ್ಚು ಲಭಿಸುತ್ತದೆ. ದಿನಂಪ್ರತಿ 1 ಗಂಟೆ ಬೇಗ ಎದ್ದರೆ ತಿಂಗಳಿಗೆ 30 ಗಂಟೆ ಲಾಭ. ತಿಂಗಳಲ್ಲಿ ಒಂದು ದಿನ ಹೆಚ್ಚುವರಿ ಲಭಿಸುತ್ತದೆ. ಎಲ್ಲರೂ ಹೆಚ್ಚು ಸಮಯ ಬೇಕು ಎಂದು ಆಶಿಸುತ್ತಾರೆ. ಆದರೆ ದಿನಕ್ಕೆ 24 ಗಂಟೆಗಿಂತ ಹೆಚ್ಚು ಯಾರಿಗೂ ಇಲ್ಲ. ವಿದ್ಯಾರ್ಥಿಗಳಿಗೆ ಬೇಗನೇ ಏಳುವ ಪರಿಪಾಠ ಮನೆಯಲ್ಲಿ ಕಲಿಸಿದರೆ ಅವರಿಗೆ ಕಲಿಕೆಗೂ ಪರೀಕ್ಷೆಗೂ ಸಿದ್ಧರಾಗಲು ಸಹಕಾರಿ. ತಡವಾಗಿ ಎದ್ದರೆ ಆ ದಿನ ಹಾಳು. ಅದು ಜಡತ್ವದ ದಿನ. ಯಾವುದರಲ್ಲೂ ಆಸಕ್ತಿಯಿರುವುದಿಲ್ಲ. ನಿಯಮಿತವಾಗಿ ನಿದ್ರಿಸಿ ಬೆಳಗ್ಗೆ ಬೇಗನೆ ಏಳುವ ಪರಿಪಾಠ ಬೆಳೆಸಿಕೊಳ್ಳಿ. ಮುಂಜಾನೆಯೇ ತಮ್ಮ ತಮ್ಮ ಆಹಾರ ಅರಸಿ ಹೋಗುವ ಹಕ್ಕಿಗಳ ಸಾಲನ್ನೊಮ್ಮೆ ನೋಡಿ ಯಾವುದೇ ತರಬೇತಿ, ಶಿಕ್ಷಣ, ವಿಶೇಷ ಬುದ್ಧಿವಂತಿಕೆ ಮಾತು ಇಲ್ಲದೆ ಪ್ರಾಣಿ ಪಕ್ಷಿಗಳೂ ಕೂಡಾ ತಮ್ಮ ತಮ್ಮ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡುವಾಗ ನಾವೇಕೆ ನಿಯಮಿತವಾಗಿ ಬದುಕುವ ಪರಿಪಾಠ ಬೆಳೆಸಿಕೊಳ್ಳಬಾರದು.