ದೇವದಾಸಿ ಪದ್ಧತಿ: ದೇವರ ಹೆಸರಿನಲ್ಲಿ ಶೋಷಣೆ
ಭಾಗ 2
ಫ್ರಂಟ್‌ಲೈನ್ ಪತ್ರಿಕೆಯ ವರದಿಗಾರ ತಾನು ಸಂದರ್ಶಿಸಿದ ಎಲ್ಲಾ ದೇವದಾಸಿಯರಿಗೂ, ಅವರು ಯಾಕೆ ತಮ್ಮ ಕೊರಳಲ್ಲಿನ ಮಣಿಸರವನ್ನು ತೆಗೆದುಹಾಕಿಲ್ಲ ಹಾಗೂ ದೇವದಾಸಿಯಾಗಿರುವುದನ್ನು ಯಾಕೆ ನಿಲ್ಲಿಸಿಲ್ಲವೆಂದು ಪ್ರಶ್ನಿಸಿದಾಗ ಅವರು ತಬ್ಬಿಬ್ಬುಗೊಂಡಿದ್ದರು. ‘‘ಒಂದು ವೇಳೆ ನಮ್ಮ ‘ಮುತ್ತನ್ನು’ ತೆಗೆದುಹಾಕಿದಲ್ಲಿ, ಎಲ್ಲಮ್ಮ ದೇವಿ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ’’ ಎಂಬುದು ಅವರ ಸಿದ್ಧ ಉತ್ತರವಾಗಿತ್ತು. ಆದರೆ ಕಾಂತಮ್ಮ ಮಾತ್ರ ಅವರೆಲ್ಲರಿಗಿಂತ ವಿಭಿನ್ನವಾಗಿದ್ದಳು.
ದೇವದಾಸಿ ದೀಕ್ಷೆಯ ವಿಧಿವಿಧಾನಗಳು ಭರತ ಹುಣ್ಣಿಮೆಯಂತಹ ಪವಿತ್ರ ದಿನಗಳಲ್ಲಿ (ಮಾರ್ಗಶಿರ ತಿಂಗಳಿನ ಹುಣ್ಣಿಮೆ)ನಡೆಯುತ್ತದೆ. ಆಗ ದೇವದಾಸಿಯಾಗಿ ಒಪ್ಪಿಸಲು ನಿರ್ಧರಿಸಲಾದ ಬಾಲಕಿ ಅಥವಾ ಯುವತಿಯನ್ನು ಆ ಪ್ರದೇಶದಲ್ಲಿರುವ ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಚಿಕ್ಕೋಡಿಯಲ್ಲಿ ಸವದತ್ತಿಯ ಎಲ್ಲಮ್ಮನ ದೇವಾಲಯದಲ್ಲಿ ಇದು ಪ್ರಚಲಿತದಲ್ಲಿತ್ತು. ಕಾಂತಮ್ಮಳನ್ನು ಬಲವಂತವಾಗಿ ಕುಷ್ಟಗಿ ತಾಲೂಕಿನ ಹುಲಿಗೆಮ್ಮ ದೇವಿ ದೇವಾಲಯಕ್ಕೆ ಕೊಂಡೊಯ್ಯಲಾಗಿತ್ತು. ದೇವದಾಸಿಯನ್ನು ಆಕೆ ಕುತ್ತಿಗೆಯಲ್ಲಿ ಧರಿಸುವ ಕೆಂಪು ಹಾಗೂ ಬಿಳಿ ಬಣ್ಣದ ಮಣಿಗಳಿಂದ ಗುರುತಿಸಬಹುದಾಗಿದೆ. ಆಕೆಯು ದೇವತೆಯನ್ನು ವಿವಾಹವಾಗಿದ್ದಾಳೆಂದು ಇದರ ಅರ್ಥವಾಗಿದೆ. ಈ ಮಣಿಸರವನ್ನು ಕುತ್ತಿಗೆಗೆ ಕಟ್ಟುವುದು ಈ ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ. ಈ ವಿಧಿಯನ್ನು ಸಾಮಾನ್ಯವಾಗಿ ದೇಗುಲದ ಅರ್ಚಕರು ಅಥವಾ ಜೋಗಪ್ಪಗಳು (ಯಲ್ಲಮ್ಮ ದೇವತೆಯ ಲಿಂಗಾಂತರಿ ಅನುಯಾಯಿಗಳು) ನೆರವೇರಿಸುತ್ತಾರೆ. ಈ ಸಂದರ್ಭದಲ್ಲಿ ದೇವದಾಸಿಯರ ಕೈಗೆ ಹಚ್ಚೆಯನ್ನು ಹಾಕುವ ಮೂಲಕ ಅವರನ್ನು ಇತರರಿಂದ ಪ್ರತ್ಯೇಕವಾಗಿ ಗುರುತಿಸುವಂತೆ ಮಾಡಲಾಗುತ್ತದೆ.
ಹೊಸದಾಗಿ ದೇವದಾಸಿಯರಾದವರು ತಮ್ಮ ಕುಟುಂಬದೊಂದಿಗೆ ಜೀವಿಸುವುದನ್ನು ಮುಂದುವರಿಸುತ್ತಾರೆ. ಆದರೆ ಕೆಲವರು ವಯಸ್ಸಾದಾಗ ತಮ್ಮ ಕುಟುಂಬದಿಂದ ದೂರಸರಿಯುತ್ತಾರೆ. ದೇವದಾಸಿಯರು ಲೈಂಗಿಕ ವೃತ್ತಿಯನ್ನು ನಡೆಸುತ್ತಾರೆಂಬ ಸಾಮಾನ್ಯವಾಗಿ ಬೇರೂರಿರುವ ನಂಬಿಕೆಗೆ ವ್ಯತಿರಿಕ್ತವಾಗಿ, ಫ್ರಂಟ್‌ಲೈನ್ ವರದಿಗಾರನೊಂದಿಗೆ ಮಾತನಾಡಿದ ಹಲವಾರು ದೇವದಾಸಿಯರು ತಮ್ಮನ್ನು ನೋಡಿಕೊಳ್ಳುವ ಒಬ್ಬನೇ ವ್ಯಕ್ತಿಯ ಜೊತೆ ಮಾತ್ರವೇ ಸಂಬಂಧವನ್ನು ಹೊಂದಿದವರಾಗಿದ್ದರು. ನಿಂಗವ್ವ ಎಂಬ ಮಾದಿಗ ಸಮುದಾಯದ ದೇವದಾಸಿಯು ಲಿಂಗಾಯತ ಸಮುದಾಯದ ವಿವಾಹಿತನೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ಈ ರೀತಿಯ ಸಂಬಂಧಗಳಲ್ಲಿ, ದೇವದಾಸಿಯನ್ನು ನೋಡಿಕೊಳ್ಳುವ ವ್ಯಕ್ತಿಯು ಸಾಮಾನ್ಯವಾಗಿ ವಿವಾಹಿತನಾಗಿದ್ದಾನೆ. ಆತ ಆಗಾಗ್ಗೆ ದೇವದಾಸಿಯನ್ನು ಭೇಟಿಯಾಗುತ್ತಿರುತ್ತಾನೆ. ಆಕೆಯ ಬಗ್ಗೆ ಆತನಲ್ಲಿ ಆಸಕ್ತಿ ಇರುವವರೆಗೆ ಆಕೆ ಆತನ ಸೊತ್ತಾಗಿ ಉಳಿದಿರುತ್ತಾಳೆ. ‘‘ನನ್ನ ಯೌವನ ಕಳೆದುಹೋದ ಬಳಿಕ ನನ್ನ ‘ಯಜಮಾನ’ ನನ್ನನ್ನು ಭೇಟಿಯಾಗುವುದನ್ನು ನಿಲ್ಲಿಸಿಬಿಟ್ಟ’’ ಎಂದು ದೇವದಾಸಿ ರೇಖಾ ಮಲ್ಲಪ್ಪ ವಿವರಿಸುತ್ತಾಳೆ.
ದೇವದಾಸಿಯರ ಮಕ್ಕಳು
ಹೆಚ್ಚುಕಮ್ಮಿ ಎಲ್ಲಾ ದೇವದಾಸಿಯರು, ತಮ್ಮ ಆಶ್ರಯದಾತರಿಂದ ಮಕ್ಕಳನ್ನು ಹೊಂದಿರುತ್ತಾರೆ. ಆದರೆ ಈ ಮಕ್ಕಳು ತಮ್ಮದೆಂಬುದನ್ನು ಆಶ್ರಯದಾತರು ಒಪ್ಪಿಕೊಳ್ಳುವುದು ತೀರಾ ಅಪರೂಪ. ಇಂತಹ ಮಕ್ಕಳು ಸಾಮಾನ್ಯವಾಗಿ ಅಧಿಕೃತ ಗುರುತು ಚೀಟಿಗಳು ಹಾಗೂ ಶಾಲಾ ದಾಖಲಾತಿಗಳಲ್ಲಿ ತಮ್ಮ ತಾಯಿಯ ಹೆಸರನ್ನು ಮಾತ್ರ ನಮೂದಿಸುತ್ತಾರೆ. ಚಿಕ್ಕೋಡಿಯ 27 ವರ್ಷ ವಯಸ್ಸಿನ ಯುವಕ ಕೆಂಪಣ್ಣ ಹರಿಜನ ತನ್ನ ಪ್ಯಾನ್ ಕಾರ್ಡ್‌ನಲ್ಲಿ ತಾಯಿಯ ಹೆಸರನ್ನು ನಮೂದಿಸಿದ್ದಾನೆ. ದೇವದಾಸಿ ಮಾಲಿವಯ್ಯ ಹರಿಜನಳ ಪುತ್ರಿಯಾದ 28 ವರ್ಷ ವಯಸ್ಸಿನ ಕಮಲಾ ಪಿಯುಸಿ ಶಿಕ್ಷಣ ಪಡೆದಿದ್ದಾಳೆ. ‘‘ನನ್ನ ತಂದೆ ಯಾರೆಂದು ನನಗೆ ಗೊತ್ತಿದೆ. ಆದರೆ ನನಗೆ ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ’’ ಎಂದಾಕೆ ಹೇಳುತ್ತಾಳೆ. ಊರಿನ ಜಾತ್ರೆಗಳಲ್ಲಿ ಹಾರ್ಮೋನಿಯಂ ನುಡಿಸುವ ಕುಷ್ಟಗಿ ತಾಲೂಕಿನ ಕಲ್ಲಗೊನಲ್ ಗ್ರಾಮದ ವೀರಣ್ಣ ಮಾದರ್ ಜೊತೆ ಆತನ ತಂದೆಯ ಬಗ್ಗೆ ವಿಚಾರಿಸಿದಾಗ, ‘‘ನನ್ನಪ್ಪ ಕಣ್ಣ ಮುಂದೆ ಇದ್ದರೂ, ಸತ್ತಂಗೆ ಇದ್ದಾನಪ್ಪ’’ ಎಂದು ವಿಷಾದಭಾವದಿಂದ ನುಡಿಯುತ್ತಾನೆ.
ಕಾಂತಮ್ಮಳ ಕತೆಯು, ಕಳೆದ ಕೆಲವು ದಶಕಗಳಲ್ಲಿ ಬದಲಾದ ದೇವದಾಸಿ ವ್ಯವಸ್ಥೆಯ ಸ್ವರೂಪವನ್ನು ತೋರಿಸುತ್ತದೆ. ಸಾಮಾಜಿಕ ಹೊರಗಿಡುವಿಕೆ ಹಾಗೂ ಒಳಪಡಿಸುವಿಕೆ ನೀತಿ ಕುರಿತ ಅಧ್ಯಯನ ಕೇಂದ್ರದ ಸಹಾಯಕ ಪ್ರೊಫೆಸರ್ ಪ್ರದೀಪ್ ರಾಮಾವತ್ ಹೀಗೆ ಹೇಳುತ್ತಾರೆ. ‘‘ಹಳ್ಳಿಯ ಪ್ರಬಲ ಸಮುದಾಯಗಳು ಮಹಿಳೆಯೊಬ್ಬಳನ್ನು ಬಳಸಿಕೊಂಡು, ಆಕೆಯನ್ನು ಬಲವಂತದಿಂದ ದೇವದಾಸಿಯಾಗಿ ಮಾಡುವ ಪ್ರವೃತ್ತಿಯನ್ನು ನಾವೀಗ ಕಾಣುತ್ತಿದ್ದೇವೆ. ಒಮ್ಮೆ ಯುವತಿಯು ದೇವದಾಸಿಯಾದ ಬಳಿಕ ಆಕೆ ಮದುವೆಯಾಗಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಈ ವ್ಯಕ್ತಿಗಳಿಗೆ ಆಕೆಯನ್ನು ಭೇಟಿಯಾಗುವುದನ್ನು ಮುಂದುವರಿಸಲು ಸುಲಭವಾಗುತ್ತದೆ’’.
ದೇವದಾಸಿ ಪದ್ಧತಿಯ ಮುಂದುವರಿಕೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದರೆ ಈ ಪ್ರಯತ್ನಗಳು ಸಮರ್ಪಕವಾಗಿಲ್ಲ ಮತ್ತು ಸರಕಾರಿ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವಿನ ಕೊರತೆಯ ಹಿನ್ನೆಲೆಯಲ್ಲಿ ಅವು ಹೆಚ್ಚಿನ ಸಂಖ್ಯೆಯ ದೇವದಾಸಿಯರನ್ನು ತಲುಪಿಲ್ಲವೆಂದು ದೇವದಾಸಿಯರು ಹಾಗೂ ಸಂಶೋಧಕರು ಹೇಳುತ್ತಾರೆ. ಸರಕಾರವು ದೇವದಾಸಿಯರಿಗೆ ಒದಗಿಸುತ್ತಿರುವ ನೆರವಿನ ಯೋಜನೆಗಳಲ್ಲಿ ಸಬ್ಸಿಡಿ ಸಾಲ ಹಾಗೂ 45 ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ದೇವದಾಸಿಯರಿಗೆ 1,500 ರೂ. ಪಿಂಚಣಿ ಕೂಡಾ ಒಳಗೊಂಡಿವೆ. ದೇವದಾಸಿಯರ ಕುರಿತಾದ ಸರಕಾರದ ನೀತಿಯಲ್ಲಿ ಬದಲಾವಣೆಯನ್ನು ತರುವುದಕ್ಕಾಗಿ, ದೇವದಾಸಿ ವ್ಯವಸ್ಥೆಗೆ ಸಂಬಂಧಿಸಿ ಐತಿಹಾಸಿಕ ಹಾಗೂ ಸಾಮಾಜಿಕ ಅಂಶಗಳ ಬಗ್ಗೆ ಗಣನೀಯ ಪ್ರಮಾಣದಲ್ಲಿ ಸಂಶೋಧನಾ ಕಾರ್ಯಗಳನ್ನು ನಡೆಸಲಾಗಿದೆ. ಈ ಸಂಶೋಧನಾ ತಂತ್ರ ವಿಧಾನದ ಬಗ್ಗೆ ಅಸಮಾಧಾನಗೊಂಡ ರಮಾವತ್ ಹಾಗೂ ಸಿಎಸ್‌ಎಸ್‌ಇಐಪಿ, ಎನ್‌ಎಲ್‌ಎಸ್‌ಐಯುನ ಸಹಾಯಕ ಪ್ರೊಫೆಸರ್ ಕೂಡಾ ಆಗಿರುವ ಆರ್.ವಿ. ಚಂದ್ರಶೇಖರ್ ರಾಮೇನಹಳ್ಳಿ ಅವರು 9 ಮಂದಿ ದೇವದಾಸಿ ಮಕ್ಕಳನ್ನು ಗುರುತಿಸಿ ಅವರಿಗೆ ಸಂಶೋಧನಾ ವಿಧಾನಗಳಲ್ಲಿ ತರಬೇತಿ ನೀಡಿದರು. ಆ ಮೂಲಕ ಅವರು ತಾವಾಗಿಯೇ ದೇವದಾಸಿಯರು ಹಾಗೂ ಅವರ ಮಕ್ಕಳ ಸ್ಥಿತಿಗತಿಗಳ ಬಗ್ಗೆ ವರದಿಯನ್ನು ತಯಾರಿಸುವಂತೆ ಮಾಡಿದರು.
ಮರುಸಮೀಕ್ಷೆ ಅಗತ್ಯ
ದೇವದಾಸಿಯರ ಮಕ್ಕಳು ಸಿದ್ಧಪಡಿಸಿದ ವರದಿಯ ಪ್ರಕಾರ, ದೇವದಾಸಿಯರ ಬಗ್ಗೆ ಸಮಾಜದಲ್ಲಿ ವ್ಯಾಪಕವಾಗಿ ತಾರತಮ್ಯ ನಡೆಸಲಾಗುತ್ತಿದೆ ಹಾಗೂ ವಿಶೇಷವಾಗಿ ಗಂಡನಿಲ್ಲದಿರುವುದರಿಂದ ಅವರನ್ನು ಕೀಳಾಗಿ ಕಾಣಲಾಗುತ್ತಿದೆ. ತಮ್ಮ ಕಲ್ಯಾಣ ಹಾಗೂ ಪುನರ್ವಸತಿಯ ಕುರಿತಾದ ಸರಕಾರದ ನೀತಿಗಳ ಬಗ್ಗೆ ಅನೇಕ ದೇವದಾಸಿಯರು ಅಸಮಾಧಾನ ಹೊಂದಿದ್ದು, ಅವು ಸಮರ್ಪಕವಾಗಿಲ್ಲವೆಂದು ಅವರು ಭಾವಿಸಿದ್ದಾರೆ.
ತಮಗೆ ಕೃಷಿ ಜಮೀನಿನ ಅಗತ್ಯವಿದ್ದು, ಆ ಮೂಲಕ ತಾವು ಸ್ವತಂತ್ರವಾದ ಬದುಕನ್ನು ಸಾಗಿಸಬಹುದೆಂದು ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಅನೇಕ ದೇವದಾಸಿಯರು ಉತ್ತರಿಸಿದ್ದಾರೆ. ತಮ್ಮ ಮಕ್ಕಳ ಯಾತನಾಮಯ ಬದುಕಿನ ಬಗ್ಗೆಯೂ ಅವರು ಖಿನ್ನರಾಗಿದ್ದಾರೆ. ತಮ್ಮ ಮಕ್ಕಳು ಶಾಲೆಗಳಲ್ಲಿ ಹಾಗೂ ಸಮಾಜದಲ್ಲಿ ತಾರತಮ್ಯವನ್ನು ಅನುಭವಿಸುತ್ತಿದ್ದಾರೆಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಉತ್ತರಿಸಿದ್ದಾರೆ.
ಈ ಮೊದಲು ನಡೆಸಿದ ಸಮೀಕ್ಷೆಯು ನಿಖರವಾಗಿಲ್ಲದಿರುವುದ ರಿಂದ ದೇವದಾಸಿಯರ ಕುರಿತಾಗಿ ಮರುಸಮೀಕ್ಷೆ ನಡೆಸಬೇಕೆಂದು ಬಹುತೇಕ ದೇವದಾಸಿಯರು ಆಗ್ರಹಿಸುತ್ತಿದ್ದಾರೆ ‘‘ಈ ಸಮೀಕ್ಷೆಯನ್ನು ಆಧರಿಸಿದ ನಮ್ಮ ಅಂದಾಜಿನ ಪ್ರಕಾರ, ರಾಜ್ಯದಾದ್ಯಂತ ಸುಮಾರು 2 ಲಕ್ಷ ಮಂದಿ ದೇವದಾಸಿಯರಿದ್ದಾರೆ. ದೇವದಾಸಿಯರ ಸಂಖ್ಯೆಯನ್ನು ಸರಿಯಾಗಿ ದೃಢಪಡಿಸಲು ಮರು ಸಮೀಕ್ಷೆಯ ಅಗತ್ಯವಿದೆ’’ ಎಂದು ಚಂದ್ರಶೇಖರ್ ರಮೇನಹಳ್ಳಿ ಹೇಳುತ್ತಾರೆ.
ಮಾದರಿ ಕರಡು ಮಸೂದೆ
ಈ ವರದಿಯಿಂದ ಲಭ್ಯವಾದ ಮಾಹಿತಿಗಳನ್ನು ಪರಿಗಣಿಸಿ ಎನ್‌ಎಲ್‌ಎಸ್‌ಎಸ್‌ಐಯುನ ಸಂಶೋಧಕರು ಮಾದರಿ ಕರಡು ಮಸೂದೆಯೊಂದನ್ನು ರಚಿಸಿದ್ದಾರೆ. ದೇವದಾಸಿ ಪದ್ಧತಿಯ ನಿರ್ಮೂಲನೆ ಹಾಗೂ ದೇವದಾಸಿಯರು ಮತ್ತು ಅವರ ಮಕ್ಕಳ ಧಾರುಣ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶವನ್ನು ಈ ವರದಿಯು ಹೊಂದಿದೆ. 1982ರ ಕಾಯ್ದೆಯು ಈ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ವಿಫಲವಾಗಿರುವುದರಿಂದ ನೂತನ ಕಾಯ್ದೆಯನ್ನು ಜಾರಿಗೆ ತರುವ ಅಗತ್ಯವಿದೆ.
‘ಕರ್ನಾಟಕ ದೇವದಾಸಿ ವಿಧೇಯಕ, 2018’ (ತಡೆ, ನಿಷೇಧ, ಪರಿಹಾರ ಹಾಗೂ ಪುನರ್ವಸತಿ) ಎಂದು ತಾತ್ಕಾಲಿಕವಾಗಿ ಹೆಸರಿಸ ಲಾದ ಈ ಮಾದರಿ ಮಸೂದೆಯು, ದೇವದಾಸಿಯ ಪದ್ಧತಿಯನ್ನು ಉತ್ತೇಜಿಸುವವರಿಗೆ (ದೇವದಾಸಿಯಾಗಲು ಮಹಿಳೆಗೆ ಬೆದರಿಕೆ ಹಾಕುವ ವ್ಯಕ್ತಿ) ಕಠಿಣ ಶಿಕ್ಷೆ ವಿಧಿಸಬೇಕೆಂದು ಪ್ರತಿಪಾದಿಸುತ್ತದೆ. ದೇವದಾಸಿಯ ಪದ್ಧತಿಯ ತಡೆಗಾಗಿ ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಒಳಗೊಂಡಿರುವ ಜಾಗೃತಿ ಹಾಗೂ ಅನುಷ್ಠಾನ ಕುರಿತ ರಾಜ್ಯ ಸಮಿತಿಯ ಸ್ಥಾಪನೆಯನ್ನು ಹಾಗೂ ದೇವದಾಸಿ ಪದ್ಧತಿಯ ನಿಷೇಧ ಹಾಗೂ ದೇವದಾಸಿಯರ ಪುನರ್ವಸತಿ ಕ್ರಮಗಳನ್ನು ಜಾರಿಗೊಳಿಸಲು ಪ್ರತಿಯೊಂದು ತಾಲೂಕಿಗೂ ಓರ್ವ ಜಾಗೃತದಳದ ಅಧಿಕಾರಿಯ ನೇಮಕವನ್ನು ವಿಧೇಯಕವು ಪ್ರಸ್ತಾವಿಸಿದೆ. ದೇವದಾಸಿಯರಿಗೆ ಕಡ್ಡಾಯವಾಗಿ ಭೂಮಿ ಹಂಚಿಕೆ ಮಾಡುವ ಬಗ್ಗೆಯೂ ಅದು ಪ್ರಸ್ತಾವವನ್ನು ಸಲ್ಲಿಸಿದೆ. ದೇವದಾಸಿಯ ಮಗುವಿಗೆ ತನ್ನ ತಂದೆಯನ್ನು ಗುರುತಿಸುವ ಹಾಗೂ ಆತನ ಆಸ್ತಿಯಲ್ಲಿ ತನ್ನ ಪಾಲನ್ನು ಕೇಳಲು ಹಕ್ಕನ್ನು ನೀಡುವ ಉಪವಾಕ್ಯ (clause)ವನ್ನು ಅದು ಒಳಗೊಂಡಿದೆ. ಶೀಘ್ರದಲ್ಲೇ ಈ ವಿಧೇಯಕವು ವಿಧಾನಸಭೆಯಲ್ಲಿ ಮಂಡನೆಯಾಗಲಿದೆಯೆಂಬ ಆಶಾವಾದವನ್ನು ದೇವದಾಸಿಯರ ಜೊತೆ ನಿಕಟವಾಗಿ ಕೆಲಸ ಮಾಡಿರುವ ರಮಾವತ್ ಹಾಗೂ ರಾಮೇನಹಳ್ಳಿ ಹೊಂದಿದ್ದಾರೆ.
‘‘ಆಸ್ತಿ ಹಾಗೂ ಜೀವನೋಪಾಯದ ಅವಕಾಶಗಳನ್ನು ಲಭ್ಯವಾಗಿಸುವ ಮೂಲಕ ದೇವದಾಸಿಯರು ಹಾಗೂ ಅವರ ಮಕ್ಕಳು, ಮೊಮ್ಮಕ್ಕಳನ್ನು ಸಬಲೀಕರಣಗೊಳಿಸುವ ಮೂಲಕ ಈ ಸ್ವರೂಪದ ಶೋಷಣೆಯನ್ನು ನಿಮೂರ್ಲನೆಗೊಳಿಸುವುದೇ ಈ ಮಸೂದೆಯ ಉದ್ದೇಶವಾಗಿದೆ’’ ಎಂದು ಎನ್‌ಎಲ್‌ಎಸ್‌ಐಯುನ ಸಾರ್ವಜನಿಕ ನೀತಿ ಕಾರ್ಯಕ್ರಮದ ಪ್ರೊಫೆಸರ್ ಹಾಗೂ ಅಧ್ಯಕ್ಷರಾದ ಬಾಬು ಮ್ಯಾಥ್ಯೂ ಅವರು ಹೇಳುತ್ತಾರೆ.
ಭವಿಷ್ಯದ ಬಗ್ಗೆ ಆಶಾವಾದ
ದೇವದಾಸಿಯರ ಬಗೆಗಿನ ಅಭಿಪ್ರಾಯಗಳು ನಿಧಾನವಾಗಿ ಬದಲಾಗ ತೊಡಗಿದ್ದು, ಭವಿಷ್ಯದ ಬಗ್ಗೆ ಭರವಸೆಯಿರುವುದನ್ನು ಸೂಚಿಸುತ್ತದೆ. ತಮಗೆ ಸಣ್ಣ ಹಿಡುವಳಿ ಜಮೀನನ್ನು ನೀಡುವಂತೆ ತಾವು ನಿರಂತರವಾಗಿ ಮಾಡಿದ ಮನವಿಯನ್ನು ಜಿಲ್ಲಾಡಳಿತವು ಕಡೆಗಣಿಸಿರುವುದರಿಂದ ಚಿಕ್ಕೋಡಿ ತಾಲೂಕಿನ ಜೋಡುಕುರಳಿ ಗ್ರಾಮದ ಹತ್ತು ಮಂದಿ ದೇವದಾಸಿಯರು ಹತಾಶಗೊಂಡಿದ್ದಾರೆ. ಆನಂತರ ಅವರು ಒಟ್ಟುಗೂಡಿ, ತಮ್ಮ ಗ್ರಾಮದ ಹೊರವಲಯದಲ್ಲಿರುವ, 18 ಎಕರೆ ವಿಸ್ತೀರ್ಣದ ಪಾಳು ಜಮೀನೊಂದನ್ನು ‘ಸ್ವಾಧೀನ’ಪಡಿಸಿಕೊಂಡರು. ತಾವೇ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಆ ಜಮೀನಿನಲ್ಲಿ ಸೂರ್ಯಕಾಂತಿ, ತೊಗರಿ, ನೆಲಗಡಲೆ ಹಾಗೂ ಮೆಕ್ಕೆಜೋಳವನ್ನು ಬೆಳೆದರು. ಹಲವಾರು ಕಿ.ಮೀ.ಗಳ ತನಕ ಮಣ್ಣಿನ ರಸ್ತೆಯಲ್ಲಿ ಪ್ರಯಾಣಿಸಿದ ಬಳಿಕವೇ ತಲುಪಬಹುದಾದ ಈ ಜಮೀನಿನ ದಿಬ್ಬದ ಮೇಲೆ ನಿಂತುಕೊಂಡಿದ್ದ ದೇವದಾಸಿ ಮಾಯವ್ವ ಮಾಲಕಾರ್ ಡಾಂಗೆ, ‘‘ಈ ಜಮೀನನ್ನು ನಮಗೆ ಔಪಚಾರಿಕವಾಗಿ ಸರಕಾರವು ನೀಡಬೇಕೆಂದು, ಆ ಮೂಲಕ ನಾವು ಘನತೆಯ ಬದುಕನ್ನು ನಡೆಸಬಹುದೆಂಬ ಆಶಾವಾದವನ್ನು ಹೊಂದಿದ್ದೇವೆ’’ ಎಂಬುದಾಗಿ ಹೇಳುತ್ತಾರೆ.
ತನಗೆ ಎದುರಾದ ಪರಿಸ್ಥಿತಿಯನ್ನು ಕಾಂತಮ್ಮ ಎದುರಿಸಿದ ರೀತಿ ಕೂಡಾ ಅತ್ಯಂತ ಹೃದಯಸ್ಪರ್ಶಿಯಾಗಿದೆ. ಫ್ರಂಟ್‌ಲೈನ್ ಪತ್ರಿಕೆಯ ವರದಿಗಾರ ತಾನು ಸಂದರ್ಶಿಸಿದ ಎಲ್ಲಾ ದೇವದಾಸಿಯರಿಗೂ, ಅವರು ಯಾಕೆ ತಮ್ಮ ಕೊರಳಲ್ಲಿನ ಮಣಿಸರವನ್ನು ತೆಗೆದುಹಾಕಿಲ್ಲ ಹಾಗೂ ದೇವದಾಸಿಯಾಗಿರುವುದನ್ನು ಯಾಕೆ ನಿಲ್ಲಿಸಿಲ್ಲವೆಂದು ಪ್ರಶ್ನಿಸಿದಾಗ ಅವರು ತಬ್ಬಿಬ್ಬುಗೊಂಡಿದ್ದರು. ‘‘ಒಂದು ವೇಳೆ ನಮ್ಮ ‘ಮುತ್ತನ್ನು’ ತೆಗೆದುಹಾಕಿದಲ್ಲಿ, ಎಲ್ಲಮ್ಮ ದೇವಿ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ’’ ಎಂಬುದು ಅವರ ಸಿದ್ಧ ಉತ್ತರವಾಗಿತ್ತು.
ಆದರೆ ಕಾಂತಮ್ಮ ಮಾತ್ರ ಅವರೆಲ್ಲರಿಗಿಂತ ವಿಭಿನ್ನವಾಗಿದ್ದಳು. ದೇವದಾಸಿಯಾಗಿಯೇ ಉಳಿದು ಕೊಳ್ಳುತ್ತೀಯಾ ಎಂದು ಆಕೆಯನ್ನು ಪ್ರಶ್ನಿಸಿದಾಗ, ಆಕೆ ರೋಷದಿಂದ ಇಲ್ಲವೆನ್ನುವಂತೆ ತಲೆಯಾಡಿಸಿದಳು. ‘‘ಚಂದಪ್ಪನಿಗೆ ಶಿಕ್ಷೆಯಾಗಬೇಕಿದೆ ಹಾಗೂ ನನಗೆ ಮೋಸ ಮಾಡಿದ್ದಕ್ಕಾಗಿ ಆತನಿಂದ ಪರಿಹಾರ ದೊರೆಯಬೇಕಾಗಿದೆ. ಈ ಹಣವನ್ನು ನಾನು ತೆಗೆದುಕೊಂಡು, ಬೇರೊಬ್ಬನ ಜೊತೆ ವಿವಾಹವಾಗುವೆ’’ ಎಂದ ಆಕೆಯ ಮಾತಿನಲ್ಲಿ ಆತ್ಮವಿಶ್ವಾಸ ಎದ್ದುಕಾಣುತ್ತಿತ್ತು.
ಕೃಪೆ: ಫ್ರಂಟ್‌ಲೈನ್