ಗದ್ಯಂ ಹೃದ್ಯಂ- ಹೃದಯದಿಂದ ಹೃದಯಕ್ಕೆ
ಈ ಹೊತ್ತಿನ ಹೊತ್ತಿಗೆ
ಗದ್ಯವನ್ನು ಹೃದ್ಯವಾಗಿಸಿದವರ ಸಾಲಿನಲ್ಲಿ ಮುದ್ದಣ ಮಾತ್ರವಲ್ಲ, ಆಧುನಿಕ ಸಾಹಿತ್ಯವಲಯದಲ್ಲಿ ಹಲವು ಹೆಸರುಗಳಿವೆ. ಗೋರೂರು, ಎ. ಎನ್. ಮೂರ್ತಿರಾವ್, ಕುವೆಂಪು ಅವರಿಂದ ಹಿಡಿದು ಆಲೂರು, ನಾಗತಿಹಳ್ಳಿ ಮೊದಲಾದವರೆಲ್ಲ ಗದ್ಯ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ದೊಡ್ಡದು. ಹಲವು ಖ್ಯಾತ ಲೇಖಕರು ತಮ್ಮ ಅಂಕಣ ಬರಹಗಳ ಮೂಲಕವೇ ಗುರುತಿಸಲ್ಪಟ್ಟಿದ್ದಾರೆ. ಅವರಲ್ಲಿ ಅಶೋಕ್ ಶೆಟ್ಟರ್ ಕೂಡ ಒಬ್ಬರು. ಸೃಜನ ಮತ್ತು ಸೃಜನೇತರ ಪ್ರಕಾರಗಳೆರಡರಲ್ಲೂ ಗುರುತಿಸಿಕೊಂಡಿರುವ ಅಶೋಕ್ ಶೆಟ್ಟರ್ ಅವರ ಅಂಕಣ ಬರಹಗಳ ಸಂಗ್ರಹ ‘ಗದ್ಯಂ ಹೃದ್ಯಂ’ ಈ ನಿಟ್ಟಿನಲ್ಲಿ ಎರಡೂ ಕಾರಣಗಳಿಗಾಗಿ ನಮ್ಮನ್ನು ಸೆಳೆಯುತ್ತದೆ.
ಅಂಕಣಬರಹಗಳು ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ಮತ್ತು ಅದರ ನಿರೂಪಣಾ ಶೈಲಿಗಳನ್ನು ಬದಲಿಸುತ್ತಾ ಹೋಗುತ್ತವೆ. ಕೆಲವೊಮ್ಮೆ ಖಾಸಗಿಯಾದ ಆತ್ಮೀಯ ಕ್ಷಣಗಳನ್ನು ತೆರೆದುಕೊಂಡರೆ, ಕೆಲವೊಮ್ಮೆ ಹೊರಗಿನ ವ್ಯಕ್ತ್ತಿತ್ವಗಳನ್ನು ಅಂಕಣಕಾರ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾನೆ. ಜೊತೆ ಜೊತೆಗೆ ಸಮಕಾಲೀನ ಸಂದರ್ಭಗಳನ್ನು ಚರ್ಚಿಸುವ ಅನಿವಾರ್ಯವೂ ಅವನಿಗಿರುತ್ತದೆ. ಇಲ್ಲಿರುವ 52 ಲೇಖನಗಳು ಅಂತಹ ವಿಷಯ ವೈವಿಧ್ಯತೆಗಳಿಂದ ಕೂಡಿವೆ.
ಅಪ್ಪ ಅವ್ವನ ನೆನಪಿನ ಸುರುಳಿಯ ಮೂಲಕ ಕೃತಿ ಬಿಚ್ಚಿಕೊಳ್ಳುತ್ತದೆ. ಮೂರು ಬರಹಗಳು ಅಪ್ಪ ಅಮ್ಮನನ್ನು ನೆನೆಯುವುದಕ್ಕಾಗಿಯೇ ಮೀಸಲಾಗಿದೆ. ತಂದೆ ತಾಯಿಗಳನ್ನು ನಿರೂಪಿಸುತ್ತಲೇ ಅಂದಿನ ಕಾಲದ ಮಾನವ ಸಂಬಂಧಗಳನ್ನು ಹಂಚಿಕೊಳ್ಳುತ್ತಾರೆ. ಒಬ್ಬ ಬರಹಗಾರನ ಮೂಲ ಸೆಲೆ ಎಲ್ಲಿದೆ ಎನ್ನುವುದನ್ನು ಈ ಸರಣಿಯ ಮೂಲಕ ನಾವು ತಿಳಿದುಕೊಳ್ಳಬಹುದು. ಉಳಿದಂತೆ ಅವರ ಸಾಹಿತ್ಯದ ಬೇರುಗಳು ಹರಡಿಕೊಂಡಿರುವ ಧಾರವಾಡವನ್ನು ಆತ್ಮೀಯವಾಗಿ ಕಟ್ಟಿಕೊಡುತ್ತಾರೆ. ಆ ನೆನಪುಗಳೇ ಒಂದು ನಾದದ ನದಿ. ಬೇಂದ್ರೆ, ಕುಳಕುಂದ ಶಿವರಾಯ, ಕಿ. ರಂ. ನಾಗರಾಜ್, ಏಣಗಿ ನಟರಾಜ್, ಸಾಕೇತ್ ರಾಜನ್, ಸಿ. ಬಸವಲಿಂಗಯ್ಯ ಅವರ ಕುರಿತ ವ್ಯಕ್ತಿ ಚಿತ್ರಗಳು ನಮ್ಮನ್ನು ಮತ್ತೊಮ್ಮೆ ಅವರನ್ನು ಓದುವ ಆಸಕ್ತಿಯನ್ನು ಹುಟ್ಟಿಸುತ್ತದೆ. ಇದು ಆತ್ಮಕತೆಯೂ ಹೌದು, ಪ್ರವಾಸ ಕತೆಯೂ ಹೌದು, ಲಲಿತ ಪ್ರಬಂಧವೂ ಹೌದು. ಹೂವಿನಂತಹ ಭಾಷೆಯಲ್ಲಿ ಕಂಡುಂಡ ವಿಷಯಗಳನ್ನು ನಿರೂಪಿಸುತ್ತಾ ಹೋಗುವ ಶೆಟ್ಟರ್ ಬರಹಗಳು ನಿಜಕ್ಕೂ ಹೃದ್ಯವಾದುದೇ ಸರಿ. ಅದು ಹೃದಯದಿಂದ ಹುಟ್ಟಿ ಹೃದ್ಯಕ್ಕೆ ಸೇರುವಂತಹದು. ಇತಿಹಾಸ ಕಲಿಸುವ ಮೇಷ್ಟ್ರಾಗಿರುವ ಶೆಟ್ಟರ್, ವರ್ತಮಾನವನ್ನು ಮೇಷ್ಟ್ರ ಅಧಿಕಾರದಲ್ಲಿ ನೋಡದೆ, ಅದರೊಳಗೆ ಒಂದಾದ ಒಬ್ಬ ವಿದ್ಯಾರ್ಥಿಯಾಗಿ ಮಾತನಾಡುತ್ತಾರೆ. ಗದ್ಯವಿಲ್ಲಿ ಕಾವ್ಯದ ಸೊಡಗನ್ನು ತನ್ನದಾಗಿಸಿಕೊಡಿದೆ.
ಗೀತಾಂಜಲಿ ಪುಸ್ತಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 288. ಮುಖಬೆಲೆ 230 ರೂಪಾಯಿ. ಆಸಕ್ತರು 94498 86390 ದೂರವಾಣಿಯನ್ನು ಸಂಪರ್ಕಿಸಬಹುದು.