ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಸಂಚಾರಕ್ಕೆ ಮುಕ್ತವಾಗದ ಸೇತುವೆ
ಶಿವಮೊಗ್ಗ, ಫೆ.11: ಸರ್ಕಾರಿ ಕಾಮಗಾರಿಗಳು ವಿಳಂಬಗತಿಯಲ್ಲಿ ಸಾಗುತ್ತವೆ. ನಿಗದಿತ ಅವದಿಗೆ ಪೂರ್ಣಗೊಳ್ಳುವುದಿಲ್ಲವೆಂಬ ಆರೋಪ ಸರ್ವೇಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ ಶಿವಮೊಗ್ಗ ನಗರದಲ್ಲಿ ಮಾತ್ರ ಇದಕ್ಕೆ ತದ್ವಿರುದ್ದ ಸ್ಥಿತಿ ! ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಂಡು ವರ್ಷವೇ ಕಳೆದರೂ ಇಲ್ಲಿಯವರೆಗೂ ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಿಲ್ಲ.
ಈಗಾಗಲೇ ಸಾರ್ವಜನಿಕರು ಜಿಲ್ಲಾಡಳಿತದ ಗಮನಕ್ಕೂ ಈ ವಿಷಯ ತಂದಿದ್ದಾರೆ. ಮನವಿ ಅರ್ಪಿಸಿದ್ದಾರೆ. ಇದರ ಫಲವಾಗಿ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಸಂಪರ್ಕ ರಸ್ತೆ ನಿರ್ಮಾಣ ಕಾರ್ಯ ಕೂಡ ಪೂರ್ಣಗೊಂಡಿದೆ. ಆದಾಗ್ಯೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ. ಸೇತುವೆ ನಿರ್ಮಾಣಕ್ಕೆ ವ್ಯಯಿಸಿದ ಕೋಟ್ಯಾಂತರ ರೂ. ವ್ಯರ್ಥವಾಗುವಂತಾಗಿದೆ.
ಮಹಾನಗರ ಪಾಲಿಕೆ 1 ನೇ ವಾರ್ಡ್ ವ್ಯಾಪ್ತಿಯ ಸಹ್ಯಾದ್ರಿ ನಗರದ ಬಳಿ ಹಾದು ಹೋಗಿರುವ ಶಿವಮೊಗ್ಗ-ರಾಮನಗರ ಜಿಲ್ಲಾ ಹೆದ್ದಾರಿಯಲ್ಲಿರುವ ಸೇತುವೆ ಕಿರಿದಾಗಿದೆ. ರಸ್ತೆ ಕೂಡ ವಾಹನ ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ಸ್ಥಳದಲ್ಲಿ ಅಪಘಾತಗಳು ನಡೆದು ಸಾವು-ನೋವು ಸಂಭವಿಸಿತ್ತು. ಈ ಕಾರಣದಿಂದ ಈ ಸ್ಥಳದಲ್ಲಿ ವಾಹನ ದಟ್ಟಣೆಗೆ ಅನುಗುಣವಾಗಿ ಸೇತುವೆ ನಿರ್ಮಿಸಬೇಕು, ರಸ್ತೆ ಅಭಿವೃದ್ದಿಪಡಿಸಬೇಕು ಎಂದು ಆಗ್ರಹಿಸಿ ನಾಗರಿಕರು ಕಳೆದ ಕೆಲ ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದರು.
ಆದರೆ ಜನಪ್ರತಿನಿಧಿಗಳು ನಾಗರಿಕರ ಬೇಡಿಕೆಗೆ ಸ್ಪಂದಿಸುವ ಕಾರ್ಯ ನಡೆಸಿರಲಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರು. ಈ ನಡುವೆ ಶಿವಮೊಗ್ಗ ವೃತ್ತದ ಪಿಡಬ್ಲ್ಯೂಡಿ ಅಧೀಕ್ಷಕ ಎಂಜಿನಿಯರ್ ಆಗಿ ಆಗಮಿಸಿದ, ದಕ್ಷ ಅಧಿಕಾರಿ ಬಿ.ಎಸ್.ಬಾಲಕೃಷ್ಣರವರಿಗೆ ನಾಗರಿಕರು ಅಹವಾಲು ಸಲ್ಲಿಸಿದ್ದರು.
ನಾಗರಿಕರ ಬೇಡಿಕೆಗೆ ತ್ವರಿತಗತಿಯಲ್ಲಿ ಸ್ಪಂದಿಸಿದ್ದ ಬಿ.ಎಸ್.ಬಾಲಕೃಷ್ಣರವರು, ಹೊಸ ಸೇತುವೆ ನಿರ್ಮಿಸಲು ಅನುಮೋದನೆ ನೀಡಿದ್ದರು. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಅನುದಾನ ಕೂಡ ಬಿಡುಗಡೆ ಮಾಡಿಸಿದ್ದರು. ಗುತ್ತಿಗೆದಾರ ಕೂಡ ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಿದ್ದರು. ಸಂಪರ್ಕ ರಸ್ತೆ ನಿರ್ಮಿಸಿ ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಬೇಕಾಗಿತ್ತು.
ಜಾಗದ ವಿವಾದ: ಆದರೆ ಬಿ.ಎಸ್.ಬಾಲಕೃಷ್ಣ ನಂತರ, ಈ ಸೇತುವೆಯ ಬಗ್ಗೆ ಅಧಿಕಾರಿಗಳಿಗೆ ಆಸಕ್ತಿಯಿಲ್ಲದಂತಾಗಿತ್ತು. ಕಳೆದ ಮೂರು ತಿಂಗಳ ಹಿಂದೆ ನಾಗರಿಕರ ತಂಡವು ಅಪರ ಜಿಲ್ಲಾಧಿಕಾರಿ ಜಿ.ಅನುರಾಧರವರಿಗೆ ಮನವಿ ಅರ್ಪಿಸಿತ್ತು. ಅವರು ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆದು, ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.
ಇದರ ಫಲವಾಗಿ ಪಿಡಬ್ಲ್ಯೂಡಿ ಇಲಾಖೆಯು ಸಂಪರ್ಕ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿತ್ತು. ಅಷ್ಟರಲ್ಲಿಯೇ ಲೇಔಟ್ ಮಾಲಕರೋರ್ವರು ಸೇತುವೆ ನಿರ್ಮಾಣವಾಗಿರುವ ಜಾಗ ತನ್ನದಾಗಿದ್ದು, ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲವೆಂದಿದ್ದರು. ಪಿಡಬ್ಲ್ಯೂಡಿ ಇಲಾಖೆ ವಿರುದ್ಧ ಪೊಲೀಸರಿಗೂ ದೂರು ನೀಡಿದ್ದರು. ಈ ನಡುವೆ ಪಿಡಬ್ಲ್ಯೂಡಿ ಎಂಜಿನಿಯರ್ ಗಳು ಜಾಗದ ವಿವಾದವನ್ನು ಜಿಲ್ಲಾಧಿಕಾರಿ ಕೆ.ಎ ದಯಾನಂದ್‍ರವರ ಗಮನಕ್ಕೆ ತಂದಿದ್ದರು.
ಜಿಲ್ಲಾಧಿಕಾರಿಗಳು ಸೇತುವೆ ನಿರ್ಮಾಣವಾಗಿರುವ ಜಾಗದ ಮಾಲಕತ್ವದ ಬಗ್ಗೆ ಜಂಟಿ ಸಮೀಕ್ಷೆಗೆ ಆದೇಶಿಸಿದ್ದರು. ಸರ್ವೇ, ಪ್ರಾಧಿಕಾರ ಹಾಗೂ ಪಿಡಬ್ಲ್ಯೂಡಿ ಇಲಾಖಾಧಿಕಾರಿಗಳು ಈಗಾಗಲೇ ಜಂಟಿ ಸರ್ವೇ ನಡೆಸಿದ್ದಾರೆ. ಜಿಲ್ಲಾಡಳಿತಕ್ಕೆ ವರದಿ ಕೂಡ ಸಲ್ಲಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ ಸೇತುವೆಯಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿಲ್ಲ.
ಈಗಾಗಲೇ ಸೇತುವೆ ಕಾಮಗಾರಿ ಪೂರ್ಣಗೊಂಡು 1 ವರ್ಷವೇ ಉರುಳಿದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನಹರಿಸಬೇಕು. ವಾಹನ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸುವ ಕಾರ್ಯ ನಡೆಸಬೇಕು ಎಂಬುವುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.
ಜಿಲ್ಲಾಧಿಕಾರಿಗಳು ಗಮನಹರಿಸಲಿ
ಸೇತುವೆ ಕೆಲ ಮೀಟರ್ ದೂರದವರೆಗೆ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯ ನಡೆಸಲಾಗಿದೆ. ಆದರೆ ಈ ಜಾಗವು ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ್ದೆಂದು ಹೇಳಲಾಗುತ್ತಿದೆ. ಈ ಕುರಿತಂತೆ ಜಾಗದ ಮಾಲಕರ ಜೊತೆ ಸಮಾಲೋಚನೆ ನಡೆಸಬೇಕಾಗಿದೆ. ಸಾಧ್ಯವಾದರೆ ಭೂ ಸ್ವಾದೀನ ಪ್ರಕ್ರಿಯೆ ನಡೆಸಿ ಸಂಪರ್ಕ ರಸ್ತೆ ನಿರ್ಮಿಸಬೇಕಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಕೆ.ಎ ದಯಾನಂದ್ ರವರು ಗಮನಹರಿಸಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ, ವಾಹನ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಬೇಕಾಗಿದೆ ಎಂಬುವುದು ಸ್ಥಳೀಯರ ಆಗ್ರಹವಾಗಿದೆ.
"ಜಾಗದ ಸಮಸ್ಯೆಯಿದೆ"
'ಸೇತುವೆ ನಿರ್ಮಾಣವಾಗಿರುವ ಜಾಗಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದವಿಲ್ಲ. ಆದರೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ 8 ಗುಂಟೆ ಜಾಗದ ಮಾಲಕತ್ವದ ಬಗ್ಗೆ ತಕರಾರಿದೆ. ಖಾಸಗಿ ವ್ಯಕ್ತಿಯೋರ್ವರಿಗೆ ಈ ಜಾಗ ಸೇರಿದ್ದೆಂದು ಸರ್ವೇ ವರದಿಯಲ್ಲಿ ಹೇಳಲಾಗಿದೆ. ಈ ಕಾರಣದಿಂದ ಕಾನೂನು ರೀತಿಯ ಭೂ ಸ್ವಾಧಿನ ಪ್ರಕ್ರಿಯೆ ನಡೆಸಿ ಜಾಗ ಸ್ವಾದೀನ ಪಡಿಸಿಕೊಳ್ಳಬೇಕಾಗಿದೆ. ಈಗಾಗಲೇ ಈ ಕುರಿತಂತೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಆದಷ್ಟು ಶೀಘ್ರವಾಗಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು' ಎಂದು ಪಿಡಬ್ಲ್ಯೂಡಿ ವಿಶೇಷ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಎಸ್.ಎಂ.ಹರೀಶ್‍ರವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.