ಪರೀಕ್ಷಾ ಪರ್ವ: ಬರೆದು ಕಲಿ - ಬಿಡಿಸಿ ನೋಡು
ವಿದ್ಯಾರ್ಥಿಗಳು ವ್ಯಾಪಕವಾಗಿ ಕೇಳುವ ಒಂದು ಪ್ರಶ್ನೆ ಏನೆಂದರೆ ಕಲಿತದ್ದು ನೆನಪಿನಲ್ಲಿ ಉಳಿಯುವುದಿಲ್ಲ. ಇದಕ್ಕೇನು ಪರಿಹಾರ ಎಂದು. ಎಲ್ಲವನ್ನು ಚಾಚೂ ತಪ್ಪದೆ ಓದುತ್ತೇನೆ ಆದರೆ ಪರೀಕ್ಷಾ ಕೊಠಡಿಗೆ ತೆರಳಿದಾಗ, ಪ್ರಶ್ನೆ ಪತ್ರಿಕೆ ನೋಡಿದಾಗ ಎಲ್ಲವೂ ಮನ್ಮರೆ (ಮನಸ್ಸಿನಿಂದ ಮರೆ) ಯಾಗುತ್ತದೆ ಎಂದು. ಓದುವ, ಬರೆಯುವ, ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ಭಿನ್ನ ಭಿನ್ನವಾಗಿರುತ್ತದೆ. ಆದಾಗ್ಯೂ ಒಬ್ಬ ವಿದ್ಯಾರ್ಥಿಗೆ ಕನಿಷ್ಠ ಉತ್ತೀರ್ಣವಾಗಲು ಬೇಕಾದ ಶೇಕಡಾವಾರು ಅಂಕ ಪಡೆಯುವುದು ಅಸಾಧ್ಯವಾದುದಲ್ಲ. ಕಲಿಕೆಯನ್ನು ಸುಲಭ, ಸರಳ ಹಾಗೂ ಹೆಚ್ಚು ಉಪಯುಕ್ತ ಮಾಡಲು ನೀವು ಮಾಡಬೇಕಾದುದು ಕೆಲವು ಬದಲಾವಣೆಗಳನ್ನು ಮಾತ್ರ. ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಸು ನಿಮಗೆ ನಿಮ್ಮ ವಿದ್ಯಾರ್ಥಿ ದೆಸೆಯಿಂದಲೇ ಬರಬೇಕು.
ಓದುತ್ತಾ ಓದುತ್ತಾ ಬರೆಯುವುದು ಇದಕ್ಕಿರುವ ಒಂದು ಪರಿಹಾರ. ಬರೆಯುವುದೆಂದರೆ ಇಡೀ ಪಠ್ಯವನ್ನಲ್ಲ ಬದಲಾಗಿ ನೀವು ಓದುವ ಕಿರು ಉತ್ತರದ ಕಿರು ಪ್ರಶ್ನೆಗಳಿಗೆ ಉತ್ತರವನ್ನು ಓದುತ್ತಾ ಬರೆಯುತ್ತಾ ಕಲಿಯಬೇಕು. ಎರಡು ಅಂಕದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ಕಲಿಯುವುದು ಸೂಕ್ತ. ಸುದೀರ್ಘ ಉತ್ತರದ ಪ್ರಶ್ನೆಗಳಿಗೆ ಉತ್ತರಗಳ ಮುಖ್ಯ ಅಂಶಗಳನ್ನು ಬರೆದು ಕಲಿಯುವುದು ಸೂಕ್ತವಾಗಿದೆ. ಗಣಿತದ ರೇಖಾ ಚಿತ್ರಗಳನ್ನು, ಗ್ರಾಫ್ಗಳನ್ನು ಬಿಡಿಸಿಯೇ ಕಲಿಯಬೇಕು. ವಿಜ್ಞಾನದ ಚಿತ್ರಗಳನ್ನು ಬಿಡಿಸಿ ಭಾಗಗಳನ್ನು ಹೆಸರಿಸಿ ಕಲಿಯಬೇಕು. ಅವಲೋಕನದ ಸಂದರ್ಭದಲ್ಲಿ ಮನಸ್ಸಿನಲ್ಲಿ ಚಿತ್ರ, ರೇಖಾಚಿತ್ರ ಬಿಡಿಸಿ ಭಾಗಗಳನ್ನು ಗುರುತಿಸಬಹುದು. ಈ ರೀತಿ ಕಲಿತಾಗ ಆ ಚಿತ್ರಗಳು ಉತ್ತರಗಳು, ನಕ್ಷೆಗಳು ನಿಮ್ಮ ಮನಸ್ಸಿನ ಮುಂದೆ ಪ್ರತ್ಯಕ್ಷವಾಗುತ್ತದೆ. ಒಳಗಣ್ಣಿನಿಂದ ನೀವು ಅದನ್ನು ಯಾವಾಗಲೂ ನೋಡಬಹುದು. ನಿಮ್ಮ ತಂದೆ-ತಾಯಿ-ಮಿತ್ರರು-ಗುರುಗಳ ಚಿತ್ರ ಹೇಗೆ ನಿಮ್ಮ ಕಲ್ಪನೆಗೆ ಹತ್ತಿರವಾಗಿದೆಯೋ ಹಾಗೆಯೇ ನಿಮ್ಮ ಉತ್ತರಗಳನ್ನು ಕೂಡ ಮನಸ್ಸಿನ ಮುಂದೆ ಬೇಕಾದಾಗಲೆಲ್ಲ ನೋಡಬಹುದು. ಅದಕ್ಕಾಗಿ ಕೇವಲ ಬಾಯಿ ಮಾತಿನ ಓದಿಗೆ ಸೀಮಿತವಾಗದೆ ಬರೆದು, ಬಿಡಿಸಿ ಕಲಿಯುವ ಚಟುವಟಿಕೆಗೆ ಮರಳಬೇಕು. ಭಾಷಾ ವಿಷಯಗಳ ಪದ್ಯಗಳನ್ನು ಬರೆದೇ ಕಲಿಯಬೇಕು. ಪದ್ಯ ಕಂಠ ಪಾಠ ಹೇಳುವುದು ಬೇರೆ, ಪದ್ಯವನ್ನು ಬರೆಯುವುದು ಬೇರೆ ಹಾಗಾಗಿ ಕಂಠಪಾಠವೇ ಅಂತಿಮವಲ್ಲ, ಬರೆಯುವುದು ಮುಖ್ಯ.