ಸಂವಿಧಾನ ರಕ್ಷಣೆ ಮತ್ತು ಅಂಬೇಡ್ಕರ್‌ರ ಎಚ್ಚರಿಕೆಯ ನುಡಿಗಳು
‘‘ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಾಧಿಸಲು ನಾವು ಸಾಂವಿಧಾನಿಕ ಮಾರ್ಗಗಳನ್ನು ಅನುಸರಿಸಬೇಕು. ಯಾವುದೇ ಕಾರಣಕ್ಕೂ ಸತ್ಯಾಗ್ರಹ, ಅಸಹಕಾರ ಮತ್ತು ನಾಗರಿಕ ಅವಿಧೇಯತೆಯನ್ನು ವ್ಯಕ್ತಪಡಿಸಬಾರದು. ಯಾಕೆಂದರೆ ಸಾಂವಿಧಾನಿಕ ಮಾರ್ಗಗಳು ಮುಕ್ತವಾಗಿರುವಾಗ ಅಸಾಂವಿಧಾನಿಕ ಮಾರ್ಗಗಳನ್ನು ಅನುಸರಿಸಿದರೆ ಅದು ಅರಾಜಕತೆಗೆ ಕಾರಣವಾಗುತ್ತದೆ’’ ಎನ್ನುತ್ತಾರೆ ಅಂಬೇಡ್ಕರ್.
ಭಾರತದ ಸಂವಿಧಾನ ಜಾರಿಯಾಗಿ 69 ವರ್ಷಗಳು ತುಂಬಿವೆ. ಆದರೆ ವಾಸ್ತವವೆಂದರೆ ವರ್ಷಗಳು ತುಂಬಿವೆ ಆದರೆ ಭಾರತೀಯರು ಅದೇ ಏಕತೆಯ, ಅನ್ಯೋನ್ಯತೆಯ, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಮಗ್ರ ದೇಶಪ್ರೇಮದ ಹಿನ್ನೆಲೆಯಲ್ಲಿ ಬದುಕುತ್ತಿದ್ದಾರೆಯೇ? ಅಂತಹ ಮನಸ್ಥಿತಿ ಬೆಳೆಸಿಕೊಂಡಿದ್ದಾರೆಯೇ? ಆತ್ಮಾವಲೋಕನ ಮಾಡಿಕೊಂಡರೆ ದಯನೀಯ ಪರಿಸ್ಥಿತಿಯೇ ನಮ್ಮ ಕಣ್ಣ ಮುಂದೆ ತೆರೆದುಬಿಡುತ್ತದೆ. ಜಾತಿವ್ಯವಸ್ಥೆ ಗಟ್ಟಿಗೊಳ್ಳುತ್ತಿರುವುದು, ಕೋಮುವಾದ ಘನೀಭವಿಸುತ್ತಿರುವುದು, ಯಾವ ಘನ ಉದ್ದೇಶ ಇಟ್ಟುಕೊಂಡು ಈ ದೇಶ ಸ್ವಾತಂತ್ರ್ಯ ಪಡೆಯಿತೋ, ತನ್ನದೇ ಸಂವಿಧಾನ ರಚಿಸಿಕೊಂಡಿತೋ, ಇಡೀ ವಿಶ್ವದಲ್ಲಿ ತನ್ನದೇ ಸ್ವಂತ ಅಸ್ತಿತ್ವ ಹೊಂದಿತೋ ಅದೆಲ್ಲ ಅದೆಷ್ಟು ಈಡೇರಿದೆ? ಅಕ್ಷರಶಃ ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಿದು. ಅಂದಹಾಗೆ ಸಂವಿಧಾನ ನಿರ್ಮಾತೃಗಳಿಗೆ ವಿಶೇಷವಾಗಿ ಬಾಬಾಸಾಹೇಬ್ ಡಾ.ಅಂಬೇಡ್ಕರ್‌ರಿಗೆ ಇಂತಹ ಮುಂದೊದಗಬಹುದಾದ ಪರಿಸ್ಥಿತಿಗಳ ಪರಿಕಲ್ಪನೆ ಇರಲಿಲ್ಲವೇ? ಖಂಡಿತ ಬಾಬಾಸಾಹೇಬರಿಗೆ ಅಂತಹ ಸ್ಪಷ್ಟತೆ ಇತ್ತು.
ಆ ಕಾರಣಕ್ಕೆ ಅವರು ಆ ಕಾಲದಲ್ಲಿ ಅಂದರೆ ಸುಮಾರು 70 ವರ್ಷಗಳ ಹಿಂದೆಯೇ ತಮ್ಮ ಆತಂಕ ತೋಡಿಕೊಂಡಿದ್ದಾರೆ ಕೂಡ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್‌ರ ಅಂತಹ ಆತಂಕದ ನುಡಿಗಳನ್ನು ತಿಳಿದುಕೊಳ್ಳುವುದಾದರೆ ಸಂವಿಧಾನಸಭೆಯಲ್ಲಿ 1949 ನವೆಂಬರ್ 25ರಂದು ಅಂಬೇಡ್ಕರ್‌ರವರು ಹೇಳುವುದು ‘‘ಜನವರಿ 26, 1950ರಂದು ಭಾರತ ಸ್ವತಂತ್ರ ದೇಶವಾಗಲಿದೆ. ಆದರೆ ಆಕೆಯ ಸ್ವಾತಂತ್ರ್ಯಕ್ಕೆ ಏನಾಗಲಿದೆ? ಆಕೆ ತನ್ನ ಸ್ವಾತಂತ್ರ್ಯ ಉಳಿಸಿಕೊಳ್ಳುವಳೇ? ಅಥವಾ ಆಕೆ ಮತ್ತೆ ಕಳೆದುಕೊಳ್ಳುವಳೇ?’’ ಅಂಬೇಡ್ಕರ್‌ರು ಆತಂಕದಿಂದ ಪ್ರಶ್ನಿಸುತ್ತಾರೆ. (ಇಲ್ಲಿ ಅವರು ಆಕೆ ಪದ ಬಳಸುತ್ತಾರೆ. ಇದರರ್ಥ ಭಾರತವನ್ನು ಅವರು ಭಾರತಮಾತೆ ಎಂಬ ಅರ್ಥದಲ್ಲಿ ಹೇಳಿದ್ದಾರೆ ಎಂಬುದು). ಮುಂದುವರಿದು ಅವರು ‘‘ಇನ್ನು ನನಗೆ ಆತಂಕ ತರುವ ವಿಚಾರವೆಂದರೆ ಹಿಂದೆ ಭಾರತ ಸ್ವಾತಂತ್ರ್ಯ ಕಳೆದುಕೊಂಡಿತ್ತು ಎಂಬ ವಿಚಾರವಲ್ಲ. ಬದಲಿಗೆ ತನ್ನದೇ ಪ್ರಜೆಗಳ ಕೆಲವರ ರಾಜದ್ರೋಹ ಮತ್ತು ವಿಶ್ವಾಸಘಾತುಕತನದ ಕಾರಣದಿಂದ ಅದು ಸ್ವಾತಂತ್ರ್ಯ ಕಳೆದುಕೊಂಡಿತ್ತು ಎಂಬುದು.
ಉದಾಹರಣೆಗೆ ಸಿಂಧ್ ಪ್ರಾಂತವನ್ನು ಮುಹಮ್ಮದ್ ಬಿನ್ ಖಾಸಿಂ ಆಕ್ರಮಿಸಿದಾಗ ಸಿಂಧ್ ಪ್ರಾಂತದ ಅಂದಿನ ರಾಜ ದಾಹರ್‌ನ ಸೇನಾಧಿಪತಿ ಮಹಮ್ಮದ್ ಬಿನ್ ಖಾಸಿಂನಿಂದ ಲಂಚ ಪಡೆದು ಸ್ವಂತ ತನ್ನ ರಾಜ ದಾಹರ್‌ನ ಪರ ಹೋರಾಡಲು ಹಿಂದೆ ಸರಿದ. ಹಾಗೆಯೇ ರಾಜ ಪೃಥ್ವಿರಾಜ್ ಚೌಹಾಣ್ ವಿರುದ್ಧ ಯುದ್ಧ ಮಾಡುವಂತೆ ಮಹಮ್ಮದ್ ಘೋರಿಯನ್ನು ಸ್ವತಃ ರಾಜ ಜಯಚಂದ್ರ ಆಹ್ವಾನಿಸಿದ ಮತ್ತು ಮುಹಮ್ಮದ್ ಘೋರಿಗೆ ಆತ ಸಂಪೂರ್ಣ ನೆರವಾದ. ಇನ್ನು ಇತ್ತ ಶಿವಾಜಿ ಮೊಗಲರ ವಿರುದ್ಧ ಹೋರಾಡುತ್ತಿದ್ದರೆ ಅತ್ತ ಮಹಾರಾಷ್ಟ್ರದ ಇತರ ವ್ಯಕ್ತಿಗಳು ಮತ್ತು ರಜಪೂತ ದೊರೆಗಳು ಮೊಗಲರ ಪರ ವಹಿಸಿದ್ದರು! ಹಾಗೆಯೇ ಬ್ರಿಟಿಷರು ಸಿಖ್ಖರ ವಿರುದ್ಧ ಯುದ್ಧ ಮಾಡುತ್ತಿದ್ದರೆ ಅದೇ ಸಿಖ್ ಸೈನ್ಯದ ಮುಖ್ಯ ಕಮಾಂಡರ್ ಗುಲಾಬ್ ಸಿಂಗ್ ಮೌನ ವಹಿಸಿದ್ದ! ಇನ್ನು 1857ರಲ್ಲಿ ಇಡೀ ದೇಶವೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಯುದ್ಧ ಸಾರಿದ್ದರೆ ಆ ಸಂದರ್ಭದಲ್ಲಿ ಸಿಖ್ಖರು ಆ ಸ್ವಾತಂತ್ರ್ಯ ಯುದ್ಧವನ್ನು ಬೆಂಬಲಿಸದೆ ಮೌನವಾಗಿ ನೋಡುತ್ತಾ ಕುಳಿತಿದ್ದರು...!’’ ಅಂಬೇಡ್ಕರ್‌ರು ಹೇಳುತ್ತಾ ಹೋಗುತ್ತಾರೆ. (ಅಂಬೇಡ್ಕರ್ ಬರಹಗಳು ಭಾಷಣಗಳು, ಇಂಗ್ಲಿಷ್ ಸಂ.1214). ಆ ಮೂಲಕ ಭಾರತ ಯಾಕೆ ಸ್ವಾತಂತ್ರ್ಯ ಕಳೆದುಕೊಂಡಿತು ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡುತ್ತಾರೆ. ಮುಂದುವರಿದು ಅವರು ‘‘ಆದ್ದರಿಂದ ಇತಿಹಾಸ ಪುನರಾವರ್ತನೆಯಾಗಲಿದೆಯೇ? ಈ ಆತಂಕವೇ ನನ್ನ ಮನಸ್ಸನ್ನು ಈಗ ಬಹುವಾಗಿ ಕಾಡುತ್ತಿರುವುದು’’ ಎಂದು ಸ್ಪಷ್ಟ ನುಡಿಗಳಲ್ಲಿ ತಮ್ಮ ಆತಂಕ ಹೊರಹಾಕುತ್ತಾರೆ.
ಈ ಹಿನ್ನೆಲೆಯಲ್ಲಿ ಇದಕ್ಕೆ ಅವರು ಕೊಡುವ ಕಾರಣ, ‘‘ಭಾರತ ಜಾತಿ ಮತ್ತು ಪಂಥಗಳೆಂಬ ತನ್ನ ಹಳೆಯ ಶತ್ರುಗಳ ಜೊತೆ ವಿವಿಧ ಧಾರ್ಮಿಕ ಗುಂಪುಗಳನ್ನು ಪ್ರತಿನಿಧಿಸುವಂತಹ ವೈವಿಧ್ಯಮಯ ರಾಜಕೀಯ ಪಕ್ಷಗಳನ್ನೂ ಪಡೆಯಲಿದೆ. ಈ ನಿಟ್ಟಿನಲ್ಲಿ ಭಾರತೀಯರು ತಮ್ಮ ಧಾರ್ಮಿಕ ನಂಬಿಕೆಗಿಂತ ದೇಶವನ್ನು ಎತ್ತಿಹಿಡಿಯುವರೇ? ಖಂಡಿತ ನನಗದು ಸ್ಪಷ್ಟವಾಗುತ್ತಿಲ್ಲ. ಆದರೆ ಒಂದಂತೂ ಸ್ಪಷ್ಟ, ಭಾರತೀಯರು ಈ ದೇಶಕ್ಕಿಂತ ತಮ್ಮ ಧಾರ್ಮಿಕ ನಂಬಿಕೆಗಳನ್ನೇ ಎತ್ತಿ ಹಿಡಿದರೆ ಖಂಡಿತ ನಮ್ಮ ಸ್ವಾತಂತ್ರ್ಯ ಮತ್ತೊಮ್ಮೆ ಗಂಡಾಂತರಕ್ಕೆ ಸಿಲುಕಲಿದೆ. ಎರಡನೆಯ ಬಾರಿಗೆ, ಬಹುಶಃ ಕಟ್ಟಕಡೆಯ ಬಾರಿಗೆ ನಾವು ಸ್ವಾತಂತ್ರ್ಯವನ್ನು ಎಂದೆಂದಿಗೂ ಕಳೆದುಕೊಳ್ಳಲಿದ್ದೇವೆ. ಆದ್ದರಿಂದ ಇಂತಹ (ಸಂಭವನೀಯ) ಘಟನೆಗೆ ಸಂಬಂಧಿಸಿದಂತೆ ನಾವು ಸದಾ ಎಚ್ಚರದಿಂದಿರಬೇಕು. ನಮ್ಮ ದೇಹದ ರಕ್ತದ ಕೊನೆಯ ಹನಿ ಇರುವವರೆಗೂ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ನಾವು ದೃಢ ಸಂಕಲ್ಪಮಾಡಬೇಕು’’ ಎಂದು ಅಂಬೇಡ್ಕರ್‌ರು ಹೇಳುತ್ತಾ ಹೋಗುತ್ತಾರೆ. ಆ ಮೂಲಕ ಅಂಬೇಡ್ಕರ್‌ರು ಈ ದೇಶದ ಸ್ವಾತಂತ್ರ್ಯದ ಭವಿಷ್ಯದ ಬಗ್ಗೆ ತಮ್ಮ ಆತಂಕವನ್ನು ಹೊರಹಾಕುತ್ತಾರೆ.
ಇನ್ನು ಮುಂದುವರಿದು ಅವರು ಹೇಳುವುದು 1950 ಜನವರಿ 26 ರಿಂದ ಜಾರಿಗೆ ಬರುವ ಪ್ರಜಾಪ್ರಭುತ್ವದ ಬಗ್ಗೆ ಮತ್ತು ಈ ದಿಸೆಯಲ್ಲಿ ಅವರು ಆತಂಕ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವ ಸರ್ವಾಧಿಕಾರಕ್ಕೆಡೆಮಾಡಿಕೊಡುವುದರ ಬಗ್ಗೆ. ಹಾಗಿದ್ದರೆ ಇದಕ್ಕೆ ಅವರು ಸೂಚಿಸಿರುವ ಪರಿಹಾರ? ಅವುಗಳನ್ನು ದಾಖಲಿಸುವುದಾದರೆ, ಮೊದಲನೆಯದಾಗಿ ಅಂಬೇಡ್ಕರ್‌ರು ಹೇಳುವುದು, ‘‘ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಾಧಿಸಲು ನಾವು ಸಾಂವಿಧಾನಿಕ ಮಾರ್ಗಗಳನ್ನು ಅನುಸರಿಸಬೇಕು. ಯಾವುದೇ ಕಾರಣಕ್ಕೂ ಸತ್ಯಾಗ್ರಹ, ಅಸಹಕಾರ ಮತ್ತು ನಾಗರಿಕ ಅವಿಧೇಯತೆಯನ್ನು ವ್ಯಕ್ತಪಡಿಸಬಾರದು. ಯಾಕೆಂದರೆ ಸಂವಿಧಾನಿಕ ಮಾರ್ಗಗಳು ಮುಕ್ತವಾಗಿರುವಾಗ ಅಸಾಂವಿಧಾನಿಕ ಮಾರ್ಗಗಳನ್ನು ಅನುಸರಿಸಿದರೆ ಅದು ಅರಾಜಕತೆಗೆ ಕಾರಣವಾಗುತ್ತದೆ’’ ಎಂಬುದು. ಇನ್ನು ಎರಡನೆಯ ಅಂಶ ಅಂಬೇಡ್ಕರ್ ಹೇಳುವುದು ‘‘ಜನತೆ ತಮ್ಮ ಎಲ್ಲಾ ಸ್ವಾತಂತ್ರ್ಯಗಳನ್ನು ಯಾವುದೋ ಒಬ್ಬ ವ್ಯಕ್ತಿಯ ಪಾದದಡಿಯಲ್ಲಿ ಇಡಬಾರದು’’ ಎಂದು. ಇದಕ್ಕೆ ಅವರು ಕೊಡುವ ಕಾರಣ ‘‘ಬೇರೆಲ್ಲಾ ದೇಶಗಳಿಗಿಂತ ಭಾರತದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆ ರಾಜಕೀಯ ಕ್ಷೇತ್ರದಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ. ಈ ನಿಟ್ಟಿನಲ್ಲಿ ಯಾವುದಾದರೊಂದು ಧರ್ಮದಲ್ಲಿ ಭಕ್ತಿ ಇಟ್ಟುಕೊಂಡರೆ ಅದು ಮುಕ್ತಿ ನೀಡುತ್ತದೆ. ಆದರೆ ರಾಜಕಾರಣದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆ ಅದು ಇಡೀ ವ್ಯವಸ್ಥೆಯನ್ನು ತಳಮಟ್ಟಕ್ಕೆ ತಳ್ಳಲಿಕ್ಕೆ ದಾರಿಯಾಗಲಿದೆ. ಪರಿಣಾಮ ಅದು ಸರ್ವಾಧಿಕಾರಕ್ಕೆ ದಾರಿಮಾಡಿಕೊಡಲಿದೆ.’’
ಖಂಡಿತ, ಅಂಬೇಡ್ಕರ್‌ರ ಅಂದಿನ ನುಡಿಗಳನ್ನು ದೇಶದ ಇಂದಿನ ರಾಜಕಾಣಕ್ಕೆ ಯಾರಾದರೂ ಹೋಲಿಸಬಹುದು ಮತ್ತು ಈ ಹಿನ್ನೆಲೆಯಲ್ಲಿ ಅಂಬೇಡ್ಕರ್‌ರ ನುಡಿಗಳು ಅದೆಷ್ಟು ಸಾರ್ವಕಾಲಿಕ ಸತ್ಯ ಎಂಬುದನ್ನು ಎಂಥಹವರಾದರೂ ಅರ್ಥಮಾಡಿಕೊಳ್ಳಬಹುದು. ಅಂದಹಾಗೆ ಈ ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನ ಉಳಿಸಿಕೊಳ್ಳಲು ಕೊನೆಯ ಅಥವಾ ಮೂರನೆಯ ಪರಿಹಾರ ಅಂಬೇಡ್ಕರ್ ಸೂಚಿಸುವುದು, ‘‘ನಾವು ರಾಜಕೀಯ ಪ್ರಜಾಪ್ರಭುತ್ವಕ್ಕಷ್ಟೆ ತೃಪ್ತರಾಗದೆ ಸಾಮಾಜಿಕ ಪ್ರಜಾಪ್ರಭುತ್ವಕ್ಕೂ ಒತ್ತುಕೊಡಬೇಕು, ಒಟ್ಟಾರೆ ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿ ರೂಪಿಸಬೇಕು’’ ಎಂದು. ಹಾಗಿದ್ದರೆ ಸಾಮಾಜಿಕ ಪ್ರಜಾಪ್ರಭುತ್ವ ಹಾಗೆಂದರೇನು? ಅಂಬೇಡ್ಕರ್ ನೀಡುವ ಉತ್ತರ, ‘‘ಅದೊಂದು ಜೀವನ ಮಾರ್ಗ. ಆ ಜೀವನ ಮಾರ್ಗ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯನ್ನು ತನ್ನ ಜೀವನ ತತ್ವಗಳಾಗಿ ಇಟ್ಟುಕೊಂಡಿದೆ’’ ಎಂಬುದು. ಏಕೆಂದರೆ ಭಾರತದಲ್ಲಿರುವುದು ಶ್ರೇಣಿ ಮಾದರಿಯ ಅಸಮಾನತೆಯ ವ್ಯವಸ್ಥೆ ಮತ್ತು ಅಂತಹ ಶ್ರೇಣಿ ಮಾದರಿ ಅಸಮಾನತೆಗೆ ಕಾರಣ ಸಹೋದರತೆ ಇಲ್ಲದಿರುವುದು ಎಂಬುದು ಅಂಬೇಡ್ಕರ್‌ಗೆ ತಿಳಿದಿತ್ತು. ಆದ್ದರಿಂದ ಬರೀ ಸ್ವಾತಂತ್ರ್ಯ ಇದ್ದರೆ ಸಾಲದು ಅಲ್ಲಿ ಸಮಾನತೆಯೂ ಇರಬೇಕು. ಸಹೋದರತೆಯೂ ಇರಬೇಕು. ಇವು ಮೂರು ಜೊತೆಜೊತೆಯಾಗಿದ್ದರಷ್ಟೆ 1950 ಜನವರಿ 26ರಂದು ಗಳಿಸಿದ ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವವಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಂಬೇಡ್ಕರ್‌ರು ಹೇಳಿರುವ ಮೇಲ್ಕಂಡ ಮಾದರಿಯ ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪಿತವಾದರೆ ಖಂಡಿತ ಭಾರತದ ಸಂವಿಧಾನ ಬಹುಕಾಲದವರೆಗೆ ಬಾಳಲಿದೆ. ಆ ಮೂಲಕ ದೇಶದ ಸ್ವಾತಂತ್ರ್ಯ ಚಿರಕಾಲದವರೆಗೆ ಇರಲಿದೆ ಎಂಬುದು ಸ್ಪಷ್ಟ.