ಇನ್ನೆಷ್ಟು ದಿನ ಕಾಯೋಣ, ಈ ಕಳಂಕಗಳು ತೊಲಗಲು?
ಎರಡು ವರ್ಷಗಳ ಹಿಂದೆ ಒಂದು ಸುದ್ದಿ ಲೀಕ್ ಆಗಿ ಬಹುತೇಕ ಎಲ್ಲ ಅಂತರ್‌ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಒಪ್ಪೊತ್ತು ಊಟಕ್ಕಾಗಲಿ ಪ್ರಾಥಮಿಕ ಶಿಕ್ಷಣಕ್ಕಾಗಲಿ ಆವಶ್ಯಕ ಔಷಧಿಗಳಿಗಾಗಲಿ ಗತಿ ಇಲ್ಲದೆ ಪಾಡು ಪಡುತ್ತಿರುವ ಈ ಜಗತ್ತಿನ ಲಕ್ಷಾಂತರ ಮಂದಿ ಇದನ್ನು ಗಮನಿಸಿದ್ದರು. ಆಗ ಈ ಯುವರಾಜನ ಅಪ್ಪ83ರ ಹರೆಯದ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಇಂಡೋನೇಶಿಯಾದ ಭೇಟಿಗೆ ಹೊರಟಿದ್ದರು. ಆಗ ಅವರ ಅನುಕೂಲಕ್ಕಾಗಿ ಪೂರ್ವಭಾವಿಯಾಗಿ ಕಳಿಸಲಾಗಿದ್ದ ಲಗ್ಗೇಜು ಎಷ್ಟು ಗೊತ್ತೇ? ಕನಿಷ್ಠ 500ಟನ್. ಈ ಬೃಹತ್ ಲಗ್ಗೇಜನ್ನು ನಿರ್ವಹಿಸುವ ಹೊಣೆಯನ್ನು ಖಾಸಗಿ ಏರ್ ಫ್ರೈಟ್ ಕಂಪೆನಿಯೊಂದಕ್ಕೆ ವಹಿಸಲಾಗಿತ್ತು. ಆ ಕಂಪೆನಿಯು 572 ಸಿಬ್ಬಂದಿಯನ್ನು ನೇಮಿಸಿ ತನ್ನ ಕೆಲಸ ನಿರ್ವಹಿಸಿತು. ಖಾಲಿ ಕೈಯಲ್ಲಿ ಗೋರಿ ಸೇರಬೇಕಾದವರು ಇಷ್ಟೆಲ್ಲಾ ಹೊರೆ ಹೊತ್ತು ನಡೆಯುವ ಧೈರ್ಯ ಬೆಳೆಸಿಕೊಳ್ಳುವುದಾದರೂ ಹೇಗೆ?
ರಾಜಾಳ್ವಿಕೆ ಎಂದರೆ, ಲಕ್ಷಾಂತರ, ಕೋಟ್ಯಂತರ ಜನರುಳ್ಳ ನಾಡಿನ ಮೇಲೆ ಒಬ್ಬ ವ್ಯಕ್ತಿ ಮತ್ತು ಅವನ ಕುಟುಂಬದ ಸರ್ವಾಧಿಕಾರ. ಅಲ್ಲಿ ಸಂವಿಧಾನ, ಕಾನೂನು, ಕೋರ್ಟುಗಳೆಲ್ಲ ಇರುತ್ತವೆ. ಆದರೆ ಎಲ್ಲವೂ ಕೇವಲ ನಾಮಮಾತ್ರಕ್ಕೆ. ರಾಜನ ಮರ್ಜಿಯೇ ಅಂತಿಮ. ಅದರ ಮುಂದೆ ಯಾವ ನ್ಯಾಯವೂ ಇಲ್ಲ, ಯಾವ ನ್ಯಾಯಾಲಯವೂ ಇಲ್ಲ. ಸಾರ್ವಜನಿಕರಿಗೆ ಯಾವ ಹಕ್ಕು, ಅಧಿಕಾರಗಳೂ ಇರುವುದಿಲ್ಲ. ಅವರ ಜೀವಗಳಿಗೂ ಯಾವುದೇ ಭದ್ರತೆ ಇರುವುದಿಲ್ಲ. ನಾಡಿನ ಸರ್ವಸ್ವವೂ ರಾಜ ಕುಟುಂಬದ ಖಾಸಗಿ ಸಂಪತ್ತಾಗಿರುತ್ತದೆ. ಜನರ ಪಾಲಿಗೆ ಬದುಕು ಅನುಕ್ಷಣವೂ ಅಸ್ಥಿರ ಹಾಗೂ ಅಭದ್ರವಾಗಿರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೊರೆಗಳ ಬೂಟಿನಡಿಯಲ್ಲಿ ಹುಡುಕಬೇಕಾಗುತ್ತದೆ. ರಾಜ ತುಂಬಾ ಒಳ್ಳೆಯವನಾಗಿದ್ದರೆ ಅವನ ದಬ್ಬಾಳಿಕೆ ತುಸು ನಾಜೂಕು ಸ್ವರೂಪದಲ್ಲಿರುತ್ತದೆ. ಅನ್ಯಥಾ ಅಕ್ರಮ ಅನ್ಯಾಯಗಳೆಲ್ಲ ಅತ್ಯಂತ ಒರಟಾದ ಸ್ವರೂಪದಲ್ಲಿ ಎಲ್ಲೆಂದರಲ್ಲಿ ಕ್ಷಣ ಕ್ಷಣವೂ ಮೆರೆಯುತ್ತಲೇ ಇರುತ್ತವೆ. ಒಬ್ಬ ರಕ್ಕಸ ದೊರೆ ಸತ್ತರೂ ಜನರಿಗೆ ಮುಕ್ತಿ ಸಿಗುವುದಿಲ್ಲ. ಅವನ ವಂಶದ ನೂರಾರು ರಕ್ಕಸರು ರಾಜರಾಗಲು ಕಾದಿರುತ್ತಾರೆ. ಅವನ ಜಾಗದಲ್ಲಿ ಅವನದೇ ವಂಶದ ಇನ್ನೊಬ್ಬ ದುಷ್ಟ ರಕ್ಕಸ ರಾಜನಾಗಿ ಬಿಡುತ್ತಾನೆ. ಅವನು ಅಕ್ರಮ, ದಬ್ಬಾಳಿಕೆ, ಕ್ರೌರ್ಯ ಮತ್ತು ದೌರ್ಜನ್ಯಗಳ ತನ್ನದೇ ಆವೃತ್ತಿಯನ್ನು ನಾಡಿಗೆ ಪರಿಚಯಿಸತೊಡಗುತ್ತಾನೆ.
ಈ ಕಾರಣಕ್ಕಾಗಿಯೇ, ಜಗತ್ತಿನ ಎಲ್ಲೆಡೆ ಜನರು ರಾಜಾಳ್ವಿಕೆಯ ವಿರುದ್ಧ ದಂಗೆ ಎದ್ದಿದ್ದಾರೆ. ರಾಜರು ಮತ್ತವರ ಮನೆತನಗಳನ್ನು ಒದ್ದೋಡಿಸಿದ್ದಾರೆ. ಇಪ್ಪತ್ತನೇ ಶತಮಾನದ ಅಂತ್ಯಕ್ಕೆ ಮುನ್ನವೇ ಜಗತ್ತಿನ ಹೆಚ್ಚಿನೆಲ್ಲ ಭಾಗಗಳು ರಾಜಾಳ್ವಿಕೆಯ ಕಳಂಕದಿಂದ ಮುಕ್ತವಾಗಿವೆ. ಕೆಲವೆಡೆ ಉಳಿದಿದ್ದರೂ ಕೇವಲ ಆಲಂಕಾರಿಕವಾಗಿ ಮಾತ್ರ. ಆದರೆ ಸೌದಿ ಅರೇಬಿಯಾ, ಕುವೈತ್, ಖತರ್, ಯು.ಎ.ಇ., ಬಹರೈನ್, ಒಮಾನ್ ಮುಂತಾದ ಕೆಲವು ಕೊಲ್ಲಿ ದೇಶಗಳಲ್ಲಿ ಜನರ ಪಾಲಿಗೆ ಸ್ವಾತಂತ್ರ್ಯ ಎಂಬುದು ಇನ್ನೂ ಕೇವಲ ಕನಸಾಗಿ ಉಳಿದಿದೆ. ಇವು ಮುಸ್ಲಿಂ ಬಾಹುಳ್ಯದ ದೇಶಗಳಾದ್ದರಿಂದ ಮತ್ತು ಈ ದೇಶಗಳ ದೊರೆಗಳು ಭಾರೀ ಧಾರ್ಮಿಕತೆ ನಟಿಸುವುದರಿಂದ ಇವರ ರಾಜಾಳ್ವಿಕೆ ಕೂಡಾ ಇಸ್ಲಾಂ ಧರ್ಮದ ಭಾಗವೆಂದು ಹಲವರು ನಂಬಿದ್ದಾರೆ. ನಿಜವಾಗಿ ಧರ್ಮ ಎಂಬುದು ಇವರ ಕೈಯಲ್ಲೊಂದು ಆಟಿಕೆ ಮಾತ್ರ. ಇವರ ಕೈಯಲ್ಲಿ ಧರ್ಮವು ಇವರ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಇವರ ಎಲ್ಲ ಅಕ್ರಮಗಳಿಗೆ ಸಮಾಜದಲ್ಲಿ ಮಾನ್ಯತೆ ದೊರಕಿಸುವ ಸಾಧನವಾಗಿ ಮಾತ್ರ ಉಳಿಯುತ್ತದೆ. ಇವರ ಢಂಬಾಚಾರದ ಧಾರ್ಮಿಕತೆ ಇವರ ಅಮಾನುಷ ಕ್ರೌರ್ಯಗಳನ್ನು ಮುಚ್ಚಿಡುವ ತೆರೆಯಾಗಿ ಬಿಡುತ್ತದೆ. ಸರಕಾರೀ ಬೊಕ್ಕಸವನ್ನು ದೋಚಿ, ಎಲ್ಲ ಬಗೆಯ ದುಬಾರಿ ಭೋಗ, ಅಪವ್ಯಯಗಳಲ್ಲಿ ತಲ್ಲೀನರಾಗಿರುವುದನ್ನು ತಮ್ಮ ಮೂಲಭೂತ ಹಕ್ಕೆಂದು ಹೇಳಿಕೊಳ್ಳುವ ಈ ದೊರೆಗಳು ಮತ್ತವರ ಬಂಧುಗಳು ಜನತೆಯ ಮೂಲಭೂತ ಮಾನವೀಯ ಹಕ್ಕುಗಳನ್ನೇ ತಮ್ಮ ಪರಮ ಶತ್ರುವಾಗಿ ಕಾಣುತ್ತಾರೆ. ಇವರ ಅನ್ಯಾಯ ದಬ್ಬಾಳಿಕೆಗಳ ವಿರುದ್ಧ ಯಾರಾದರೂ ಒಂದಕ್ಷರ ಮಾತನಾಡಿದರೆ ಸಾಕು, ಅವರು ಧಾರ್ಮಿಕ ವಿದ್ವಾಂಸರಾಗಿರಲಿ, ಪತ್ರಕರ್ತರಾಗಿರಲಿ, ಬುದ್ಧಿಜೀವಿಗಳಾಗಿರಲಿ- ಯಾವ ವಿಚಾರಣೆಯೂ ಇಲ್ಲದೆ ಅವರನ್ನು ಒಂದೋ ಅನಿರ್ದಿಷ್ಟಾವಧಿ ಬಂಧನ ಅಥವಾ ಗೃಹ ಬಂಧನಕ್ಕೆ ಒಳಪಡಿಸಲಾಗುತ್ತದೆ ಅಥವಾ ಅವರು ನಿಗೂಢವಾಗಿ ಕಣ್ಮರೆಯಾಗಿ ಬಿಡುತ್ತಾರೆ. ಇವರು ತಮ್ಮ ನಿಷ್ಠಾವಂತ ಪುರೋಹಿತರ ಮೂಲಕ, ತೀರಾ ಕ್ಷುಲ್ಲಕವಾದ ಧರ್ಮ ಸೂಕ್ಷ್ಮ್ಮಗಳ ಬಗ್ಗೆ ಮಾತ್ರ ಜನರು ಚರ್ಚಿಸುವಂತೆ ಹಾಗೂ ನೈಜ ಸಮಸ್ಯೆಗಳ ಬಗ್ಗೆ ಸಮಾಜದಲ್ಲಿ ಯಾವುದೇ ಸಂವಾದ ನಡೆಯದಂತೆ ನೋಡಿಕೊಳ್ಳುತ್ತಾರೆ. ಧರ್ಮವನ್ನು ಉಪದೇಶಿಸುವವರು ಸರಕಾರದ ಧೋರಣೆಗಳನ್ನು ವಿಮರ್ಶಿಸುವಂತಿಲ್ಲ. ರಾಜರು ಅನುಮತಿಸಿದಷ್ಟನ್ನು ಮಾತ್ರ ಉಪದೇಶಿಸಬೇಕು. ರಾಜರ ಶ್ರೇಯೋಭಿವೃದ್ಧಿಗಾಗಿ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಿರಬೇಕು, ಪತ್ರಿಕೆಗಳು ಮತ್ತು ಟಿವಿ ಚ್ಯಾನೆಲ್‌ಗಳೂ ಅಷ್ಟೇ, ದೊರೆ ಮಹಾರಾಯರನ್ನು ವೈಭವೀಕರಿಸುತ್ತಿರಬೇಕು, ಅವರ ಇಚ್ಛೆಗೆ ಅನುಗುಣವಾದುದನ್ನು ಮಾತ್ರ ಬರೆಯಬೇಕು, ಪ್ರಸಾರ ಮಾಡಬೇಕು. ಈ ಬಗೆಯ ಸರ್ವಾಧಿ ಕಾರಿಗಳು ಸ್ವತಃ ತಮ್ಮ ನಾಡಿನ ಜನರನ್ನು ಪ್ರತಿನಿಧಿಸುವುದಿಲ್ಲ ವೆಂದಮೇಲೆ, ಯಾವುದಾದರೂ ಧರ್ಮ ಅಥವಾ ಸಮುದಾಯದ ಪ್ರತಿನಿಧಿಗಳಾಗಲು ಹೇಗೆ ತಾನೇ ಸಾಧ್ಯ?
ಸೌದಿ ರಾಜ ಕುಟುಂಬದ ವಿರುದ್ಧ ಬರೆದಿದ್ದ ಜಮಾಲ್ ಖಶೋಗಿ ಎಂಬ ಪತ್ರಕರ್ತನನ್ನು ಸೌದಿ ಸರಕಾರವು ಅಮಾನುಷವಾಗಿ ಸಂಹರಿಸಿದ ಪ್ರಸಂಗ ಇಂದು ಕೂಡಾ ಚರ್ಚೆಯಲ್ಲಿದೆ. ನಿಜವಾಗಿ ಜಮಾಲ್ ಖಶೋಗಿ ತುಸು ಭಾಗ್ಯವಂತ. ಸೌದಿ ಸರಕಾರದ ಕ್ರೌರ್ಯಕ್ಕೆ ತುತ್ತಾಗಿ ತಮ್ಮ ಸರ್ವ ಸ್ವಾತಂತ್ರ್ಯಗಳನ್ನು ಕಳೆದುಕೊಂಡಿರುವ ಮಾತ್ರವಲ್ಲ, ತಮ್ಮ ಜೀವ ಮತ್ತು ತಮ್ಮ ಕುಟುಂಬಗಳ ಜೀವ ಕಳೆದುಕೊಂಡ ಇತರ ಸಾವಿರಾರು ಮಂದಿಗೆ ಈ ರೀತಿ ಸುದ್ದಿಯಾಗುವ ಭಾಗ್ಯ ಕೂಡ ಸಿಗಲಿಲ್ಲ. ಸೌದಿ ರಾಜಕುಟುಂಬ ತಾನು ಬಯಸಿದ್ದನ್ನು ಮಾತ್ರ ಸುದ್ದಿಯಾಗಲು ಅನುಮತಿಸುತ್ತದೆ.
ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಶೀಘ್ರವೇ ಪಾಕಿಸ್ತಾನವನ್ನು ಸಂದರ್ಶಿಸಲಿದ್ದಾರೆ. ಈ ಸಂದರ್ಶನದ ವೇಳೆ ಯುವರಾಜನಿಗೆ ಹಲವು ಬಗೆಯ ಸವಲತ್ತು, ಸಲಕರಣೆಗಳೆಲ್ಲ ಬೇಕು. ಅದಕ್ಕಾಗಿ 5 ಬೃಹತ್ ಟ್ರಕ್ಕು ತುಂಬಾ ಸಾಧನಗಳು ಈಗಾಗಲೇ ಪಾಕಿಸ್ತಾನ ತಲುಪಿವೆ ಎಂಬ ಖಚಿತ ಸುದ್ದಿ ಬಂದಿದೆ. ಇನ್ನೆಷ್ಟು ಟ್ರಕ್ಕು ಮತ್ತು ವಿಮಾನಗಳಲ್ಲಿ ಸಾಧನಗಳು ಹೋಗಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ. ಯುವರಾಜನ ಕಡೆಯವರು ಮನಸ್ಸು ಮಾಡಿದರೆ ಅವರ ಇತರ ಅನೇಕ ಅಪರಾಧಗಳಂತೆ ಈ ಕೊಳಕು ಸುದ್ದಿಯನ್ನು ಗುಟ್ಟಾಗಿಡಲು ಸಾಧ್ಯವಿತ್ತು. ಆದರೆ ಲಜ್ಜೆಗೇಡಿಗಳು ತಮ್ಮ ಲಜ್ಜಾಸ್ಪದ ಕೃತ್ಯಗಳಿಗೂ ಪ್ರಚಾರ ಬಯಸುತ್ತಾರೆ. ಈ ರೀತಿ ತಮ್ಮ ವಿಲಾಸ ವೈಭೋಗಗಳ ಸುದ್ದಿ ಜಗತ್ತಿಗೆ ತಲುಪುತ್ತಲಿದ್ದರೆ ತಮ್ಮ ಪ್ರತಿಷ್ಠೆ ಹೆಚ್ಚುತ್ತದೆಂದು ಬಹುಶಃ ಈ ಮಂದಿ ನಂಬಿರಬೇಕು. ಆದ್ದರಿಂದಲೇ ಈ ಸುದ್ದಿ ಲೀಕ್ ಆಗಿದೆ.
s ಎರಡು ವರ್ಷಗಳ ಹಿಂದೆಯೂ ಇಂತಹದೇ ಒಂದು ಸುದ್ದಿ ಲೀಕ್ ಆಗಿ ಬಹುತೇಕ ಎಲ್ಲ ಅಂತರ್‌ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಒಪ್ಪೊತ್ತು ಊಟಕ್ಕಾಗಲಿ ಪ್ರಾಥಮಿಕ ಶಿಕ್ಷಣಕ್ಕಾಗಲಿ ಆವಶ್ಯಕ ಔಷಧಿಗಳಿಗಾಗಲಿ ಗತಿ ಇಲ್ಲದೆ ಪಾಡು ಪಡುತ್ತಿರುವ ಈ ಜಗತ್ತಿನ ಲಕ್ಷಾಂತರ ಮಂದಿ ಇದನ್ನು ಗಮನಿಸಿದ್ದರು. ಆಗ ಈ ಯುವರಾಜನ ಅಪ್ಪ83ರ ಹರೆಯದ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಇಂಡೋನೇಶಿಯಾದ ಭೇಟಿಗೆ ಹೊರಟಿದ್ದರು. ಆಗ ಅವರ ಅನುಕೂಲಕ್ಕಾಗಿ ಪೂರ್ವಭಾವಿಯಾಗಿ ಕಳಿಸಲಾಗಿದ್ದ ಲಗ್ಗೇಜು ಎಷ್ಟು ಗೊತ್ತೇ? ಕನಿಷ್ಠ 500ಟನ್. ಈ ಬೃಹತ್ ಲಗ್ಗೇಜನ್ನು ನಿರ್ವಹಿಸುವ ಹೊಣೆಯನ್ನು ಖಾಸಗಿ ಏರ್ ಫ್ರೈಟ್ ಕಂಪೆನಿಯೊಂದಕ್ಕೆ ವಹಿಸಲಾಗಿತ್ತು. ಆ ಕಂಪೆನಿಯು 572 ಸಿಬ್ಬಂದಿಯನ್ನು ನೇಮಿಸಿ ತನ್ನ ಕೆಲಸ ನಿರ್ವಹಿಸಿತು. ಖಾಲಿ ಕೈಯಲ್ಲಿ ಗೋರಿ ಸೇರಬೇಕಾದವರು ಇಷ್ಟೆಲ್ಲಾ ಹೊರೆ ಹೊತ್ತು ನಡೆಯುವ ಧೈರ್ಯ ಬೆಳೆಸಿಕೊಳ್ಳುವುದಾದರೂ ಹೇಗೆ? ಲಕ್ಷಾಂತರ ಮಂದಿ ಹೊಟ್ಟೆಗಿಲ್ಲದೆ ಸಾಯುತ್ತಿರುವ ಜಗತ್ತಿನಲ್ಲಿ ಬಹಿರಂಗವಾಗಿ ಇಂತಹ ವೈಭೋಗದಲ್ಲಿ ನಿರತರಾಗಬೇಕಾದರೆ ಅವರಲ್ಲಿ ಅಪಾರ ಧೈರ್ಯ ಮಾತ್ರವಲ್ಲ ಅಪಾರ ನಿರ್ಲಜ್ಜೆಯೂ ಇರಬೇಕಾಗುತ್ತದೆ. ಆತ್ಮ ಸಾಕ್ಷಿ, ಮಾನವೀಯ ಸಂವೇದನೆ ಸಂಪೂರ್ಣ ಸತ್ತಿರಬೇಕಾಗುತ್ತದೆ. ಬಂಡವಾಳಶಾಹಿಯಲ್ಲದ ದೇವರೊಬ್ಬ ಇದ್ದಾನೆಂಬುದನ್ನು ಮರೆಯಬೇಕಾಗುತ್ತದೆ. ನಮ್ಮ ಬಳಿ ನಿಮಗಾಗಿ ಎಲ್ಲ ಸವಲತ್ತುಗಳಿವೆ, ನೀವು ನಿಮ್ಮಲ್ಲಿಂದ ಏನನ್ನೂ ತರಬೇಕಾಗಿಲ್ಲ ಎಂದು ಇಂಡೋನೇಶಿಯಾದ ಅಧಿಕಾರಿಗಳು ಎಷ್ಟು ಅಲವತ್ತುಕೊಂಡರೂ ದೊರೆಯ ಕಡೆಯವರು ಕಿವಿಗೊಡಲಿಲ್ಲ. ‘‘ನಮ್ಮ ದೊರೆ ತಮ್ಮ ವಿಮಾನದಿಂದ ಇಳಿಯುವುದಕ್ಕೆ ತಮ್ಮ ಖಾಸಗಿ ಸ್ವರ್ಣ ಲೇಪಿತ ಎಸ್ಕಲೇಟರ್ ಅನ್ನೇ ಬಳಸ ಬಯಸುತ್ತಾರೆ, ಅವರು ತಾವು ತರುವ ಲಿಫ್ಟ್ ಗಳನ್ನು ಮಾತ್ರ ಉಪಯೋಗಿಸ ಬಯಸುತ್ತಾರೆ ಮತ್ತು ಇಂಡೋನೇಶಿಯಾದೊಳಗೆ, ತಾವು ತಂದಿರುವ ದುಬಾರಿ ಮರ್ಸಿಡಿಸ್ ಬೆಂಜ್ 600 ಲಿಮೋಸಿನ್ ಕಾರುಗಳಲ್ಲೇ ಪ್ರಯಾಣಿಸ ಬಯಸುತ್ತಾರೆ’’ ಎಂದು ಸೌದಿಯ ಆಸ್ಥಾನ ಭಟ್ಟಂಗಿಗಳು ಹಠ ಹಿಡಿದರು. ದೊರೆಯ ಜೊತೆ 800 ಮಂದಿ ಅಧಿಕೃತ ಸರಕಾರೀ ಪ್ರತಿನಿಧಿಗಳು ಮಾತ್ರವಲ್ಲ 620 ಮಂದಿ ಸಿಬ್ಬಂದಿಯೂ ಬಂದಿದ್ದರು. ಈ ಸಂತೆಯನ್ನು ಜಕಾರ್ತಾಗೆ ತಲುಪಿಸಲು 27 ಬೃಹತ್ ವಿಶೇಷ ವಿಮಾನಗಳು ಬಳಕೆಯಾದವು. ಅಲ್ಲಿಂದ ಬಾಲಿಗೆ ಹೋಗುವುದಕ್ಕೆ 10 ಹೆಚ್ಚುವರಿ ವಿಮಾನಗಳು ಬೇಕಾದವು. 2015ರಲ್ಲಿ ಇದೇ ಮುದಿ ದೊರೆ ಅಮೆರಿಕಕ್ಕೆ ಭೇಟಿ ನೀಡಿದಾಗಲೂ ಅವರ ದುಬಾರಿ ಆಡಂಬರ ಸಾಕಷ್ಟು ಚರ್ಚೆಯಾಗಿತ್ತು. ಭೇಟಿಯ ಹಲವು ವಾರಗಳ ಮುನ್ನವೇ ಜಾರ್ಜ್ ಟೌನ್‌ನಲ್ಲಿ, 222 ಅತಿದುಬಾರಿ ಕೋಣೆಗಳಿರುವ ಫೋರ್ ಸೀಝನ್ಸ್ ಹೊಟೇಲ್ ಸಮುಚ್ಚಯವನ್ನೇ ಹಲವು ತಿಂಗಳುಗಳಿಗೆ ಬುಕ್ ಮಾಡಲಾಗಿತ್ತು. ಮೊದಲೇ ಅಲ್ಲಿ ವಾಸವಿದ್ದ ಅಥವಾ ಬುಕಿಂಗ್ ಮಾಡಿದ್ದ ಅತಿಥಿಗಳನ್ನು ಇತರ ದುಬಾರಿ ಹೊಟೇಲುಗಳಿಗೆ ವರ್ಗಾಯಿಸಲಾಯಿತು. ಹಲವು ಮಿಲಿಯನ್ ಡಾಲರ್‌ಗಳನ್ನು ವ್ಯಯಿಸಿ ಹೊಟೇಲನ್ನು ಸಂಪೂರ್ಣ ನವೀಕರಿಸಲಾಯಿತು. ಶೂ ಸ್ಟಾಂಡ್‌ಗಳ ಸಮೇತ ಬಹುತೇಕ ಎಲ್ಲವನ್ನೂ ಸ್ವರ್ಣ ಲೇಪಿತಗೊಳಿಸಲಾಯಿತು.
ವಿವೇಕವಿರುವ ಯಾರನ್ನಾದರೂ ಹುಚ್ಚೆಬ್ಬಿಸುವ ಈ ವಿಪರೀತ ಭೋಗವಿಲಾಸಗಳ ವೃತ್ತಾಂತದ ಹಿಂದೆ ವೈಪರೀತ್ಯ ಮತ್ತು ವೈರುಧ್ಯಗಳ ಸರಮಾಲೆಯೇ ಇದೆ. ಸೌದಿ ದೊರೆಗಳು ಮತ್ತು ಅಲ್ಲಿನ ಸರಕಾರ ಅನುಸರಿಸುತ್ತಿರುವ ಅಮಾನುಷ ಧೋರಣೆಗಳನ್ನೇ, ತುಸು ಭಿನ್ನ ಪ್ರಮಾಣದಲ್ಲಿ ಕೊಲ್ಲಿಯ ಇತರ ಕೆಲವು ಅರಬ್ ದೇಶಗಳಲ್ಲಿನ ರಾಜ ವಂಶಗಳು ಮತ್ತು ನಿರಂಕುಶ ಸರಕಾರಗಳು ಅನುಸರಿಸುತ್ತಿವೆ. ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಆ ಎಲ್ಲ ಸರಕಾರಗಳು ದಮನಿಸುತ್ತಿವೆ. ಒಂದು ಕಡೆ ಅವರು ತಮ್ಮನ್ನು ಇಸ್ಲಾಮ್ ಧರ್ಮ ಮತ್ತು ಮುಸ್ಲಿಂ ಸಮಾಜದ ಪ್ರತಿನಿಧಿಗಳೆಂಬಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಇನ್ನೊಂದು ಕಡೆ ಇಸ್ಲಾಮ್ ಧರ್ಮ ಮತ್ತು ಮುಸ್ಲಿಂ ಸಮಾಜವು ನಾಚಿ ತಲೆ ತಗ್ಗಿಸಬೇಕಾದ ಧೋರಣೆಗಳನ್ನು ಅನುಸರಿಸುತ್ತಾರೆ. ಇವರ ಸಂಸ್ಕಾರಗಳಿಗೆ ಇಸ್ಲಾಮ್ ಧರ್ಮ ಅಥವಾ ಸಮುದಾಯದ ಜೊತೆ ದೂರದ ನಂಟೂ ಇಲ್ಲ ಎಂಬುದು ಮುಸ್ಲಿಂ ಪರಂಪರೆಯ ಪ್ರಾಥಮಿಕ ಜ್ಞಾನವಾದರೂ ಇರುವ ಯಾರಿಗಾದರೂ ಅರ್ಥವಾಗುತ್ತದೆ. ಮುಸ್ಲಿಮರ ಪಾಲಿಗೆ ನೈಜ ಆದರ್ಶವಾಗಿರುವ ಪ್ರವಾದಿ ಮುಹಮ್ಮದ್(ಸ) ಆಡಳಿತಗಾರರಾಗಿದ್ದರು. ಆದರೆ ದೊರೆಯಾಗಿರಲಿಲ್ಲ. ಅವರ ಬಳಿ ಆಡಳಿತ ಕೇಂದ್ರವಿತ್ತು, ಆದರೆ ಅರಮನೆ ಇರಲಿಲ್ಲ. ರಾಜ ಮಹಾರಾಜ ಎಂಬಿತ್ಯಾದಿ ಬಿರುದು ಬಾವಲಿಗಳಿರಲಿಲ್ಲ. ಅವರೆಂದೂ ಸಿಂಹಾಸನದಲ್ಲಿ ಕೂರಲಿಲ್ಲ. ಎಂದೂ ಕಿರೀಟ ಧರಿಸಲಿಲ್ಲ. ಭಟ್ಟಂಗಿಗಳನ್ನು ಸಾಕಲಿಲ್ಲ. ಅವರು ವಿರಾಗಿಯೋ ಸನ್ಯಾಸಿಯೋ ಆಗಿರಲಿಲ್ಲ. ಅವರಿಗೂ ಕುಟುಂಬ ಸಂಸಾರವೆಲ್ಲಾ ಇತ್ತು. ಆದರೂ ಅವರು ತಮ್ಮ ಕೊನೆಯುಸಿರಿನ ತನಕವೂ ಗುಡಿಸಲ ವಾಸಿಯಾಗಿದ್ದರು. ಆಡಳಿತಗಾರರಾಗಿದ್ದಾಗಲೂ ಹರಿದ ವಸ್ತ್ರವನ್ನು ತೇಪೆ ಹಾಕಿ ಧರಿಸುತ್ತಿದ್ದರು. ಒಂದು ದಿನದ ಆಹಾರವನ್ನು ಕೂಡಾ ಅವರು ಸಂಗ್ರಹಿಸಿಟ್ಟಿರಲಿಲ್ಲ. ಒಂದು ಹನಿ ನೀರಿನ ಅಪವ್ಯಯ ಅವರಿಗೆ ಸಹ್ಯವಾಗಿರಲಿಲ್ಲ. ಅವರು ಯಾವ ರೂಪದಲ್ಲೂ ವಂಶಾಡಳಿತವನ್ನಾಗಲಿ, ಸರ್ವಾಧಿಕಾರವನ್ನಾಗಲಿ ಅನುಮತಿಸಲಿಲ್ಲ. ಯಾರಾದರೂ ಬಲವಂತವಾಗಿ ತಮ್ಮನ್ನು ಜನತೆಯ ಮೇಲೆ ಹೇರಿಕೊಳ್ಳುವುದಕ್ಕೆ ಅವರ ಸಮ್ಮತಿ ಇರಲಿಲ್ಲ. ಜನತೆಯ ಮನ್ನಣೆ ಇದ್ದವರೇ ಆಳಬೇಕು ಮತ್ತು ಪ್ರಜೆಗಳಿಗೆ ತಮ್ಮ ಆಡಳಿತಗಾರರನ್ನು ಪ್ರಶ್ನಿಸುವ ಹಾಗೂ ವಿಮರ್ಶಿಸುವ ಅಧಿಕಾರ ವಿರಬೇಕು ಎಂಬುದನ್ನು ಪ್ರತಿಪಾದಿಸಿದವರು ಅವರು. ಅವರ ಬಳಿಕ, ಒಬ್ಬರ ನಂತರ ಒಬ್ಬರಂತೆ ಅವರ ಉತ್ತರಾಧಿಕಾರಿಗಳಾದ ನಾಲ್ಕು ಮಂದಿ ಖಲೀಫಾಗಳಲ್ಲಿ ಕೂಡಾ ಯಾರೊಬ್ಬರೂ ದೊರೆಗಳಾಗಿರಲಿಲ್ಲ. ಅರಮನೆವಾಸಿಗಳಾಗಿರಲಿಲ್ಲ. ಅವರಲ್ಲಿ ಯಾರೂ ತಮ್ಮ ಸಂತತಿಗಳನ್ನು ತಮ್ಮ ಉತ್ತರಾಧಿಕಾರಿಗಳಾಗಿ ನೇಮಿಸಿರಲಿಲ್ಲ. ಪ್ರವಾದಿಯ ಮತ್ತು ಆ ಬಳಿಕ ನಾಲ್ಕು ಖಲೀಫಾಗಳ ಕಾಲದಲ್ಲಿ ಮುಸ್ಲಿಂ ಸಮಾಜವು ರಾಜಾಳ್ವಿಕೆ, ವಂಶಾಡಳಿತ, ಸರ್ವಾಧಿಕಾರ, ದಬ್ಬಾಳಿಕೆ ಇತ್ಯಾದಿಗಳಿಂದ ಸಂಪೂರ್ಣ ಮುಕ್ತವಾಗಿತ್ತು. ನಾಗರಿಕ ಹಕ್ಕುಗಳಿಗೆ ಹಾಗೂ ಮಾನವ ಹಕ್ಕುಗಳಿಗೆ ವ್ಯಾಪಕ ಗೌರವ ಮತ್ತು ಮನ್ನಣೆ ಇತ್ತು. ಮುಸ್ಲಿಂ ಸಮಾಜದಲ್ಲಿ ರಾಜಾಳ್ವಿಕೆಯ ಕೊಳಕು ಸಂಸ್ಕೃತಿ ನುಸುಳಿಕೊಂಡದ್ದೇ ನಾಲ್ಕನೇ ಖಲೀಫಾರ ನಿರ್ಗಮನದ ಬಳಿಕ. ಆಗಲೂ ಅದರ ವಿರುದ್ಧ ತೀವ್ರ ಪ್ರತಿರೋಧ ಪ್ರಕಟವಾಗಿತ್ತು. ರಾಜಾಳ್ವಿಕೆಗೆ ಮನ್ನಣೆ ನೀಡಲು ನಿರಾಕರಿಸಿದ ಪ್ರವಾದಿವರ್ಯರ ಮೊಮ್ಮಗ ಇಮಾಮ್ ಹುಸೈನ್ ಮತ್ತು ಹಲವಾರು ಮಂದಿ ತಮ್ಮ ಪ್ರಾಣ ತ್ಯಾಗ ಮಾಡಬೇಕಾಗಿ ಬಂದಾಗಲೂ ತಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಇಂತಹ ಸಂಪನ್ನ ಪರಂಪರೆ ಇರುವ ಮುಸ್ಲಿಂ ಸಮಾಜದ ಪ್ರತಿನಿಧಿಗಳು ತಾವೆಂದು ಹೇಳಿಕೊಳ್ಳುವ ಯಾವ ಅಧಿಕಾರವೂ ಈ ಮುಸ್ಲಿಂ ನಾಮಧಾರಿ ಸರ್ವಾಧಿಕಾರಿಗಳಿಗಿಲ್ಲ.
ಸೌದಿಯಂತಹ ದೇಶದಲ್ಲಿ ಪ್ರತಿವರ್ಷ ರಾಜಕುಟುಂಬದ ಆಂತರಿಕ ಜಗಳಗಳಲ್ಲಿ ಎಷ್ಟು ಮಂದಿ ಹತರಾಗುತ್ತಾರೆ ಎಂಬ ಲೆಕ್ಕ ಯಾರ ಬಳಿಯೂ ಇಲ್ಲ. ಅರಮನೆವಾಸಿಗಳ ಸ್ಥಿತಿ ಹೀಗಿರುವಾಗ ಇತರರು ಅಲ್ಲಿ ಎಷ್ಟು ಸುರಕ್ಷಿತರಾಗಿರಬಹುದು.? ಕೊಲ್ಲಿಯ ಸರಕಾರಗಳು ಅಮೆರಿಕದಂತಹ ತಮ್ಮ ಮಾಲಕ ದೇಶಗಳನ್ನು ಮೆಚ್ಚಿಸುವುದಕ್ಕಾಗಿ ಪ್ರತಿವರ್ಷ ಸಹಸ್ರಾರು ಕೋಟಿ ಡಾಲರ್ ಮೌಲ್ಯದ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಖರೀದಿಸಿ, ಸಂಗ್ರಹಿಸಿಟ್ಟು ತಮ್ಮದೇ ಅಕ್ಕಪಕ್ಕದವರ ವಿರುದ್ಧ ಯುದ್ಧ ಸಾರುತ್ತಿರುತ್ತಾರೆ. ಅಕ್ರಮವಾಗಿ ಅರಬ್ ನೆಲವನ್ನು ಆಕ್ರಮಿಸಿಕೊಂಡು, ಸಹಸ್ರಾರು ಫೆಲೆಸ್ತೀನ್ ಪ್ರಜೆಗಳನ್ನು ಕೊಂದು, ಅವರನ್ನು ಅವರದೇ ನಾಡಿನಲ್ಲಿ ಅಕ್ರಮ ವಾಸಿಗಳಾಗಿಯೂ, ಕೈದಿಗಳಾಗಿಯೂ ನಿರಾಶ್ರಿತರಾಗಿಯೂ ಮಾರ್ಪಡಿಸಿರುವ ಇಸ್ರೇಲ್ ಜೊತೆ ಅವರಿಗೆ ಯಾವ ಮನಸ್ತಾಪವೂ ಇಲ್ಲ. ಇರಾನ್‌ನ್ನು ಮುಗಿಸಲು ಹತ್ತು ವರ್ಷ ಸದ್ದಾಮ್ ಹುಸೈನ್‌ನನ್ನು ಸಾಕಿದರು. ಮುಂದೆ ಸದ್ದಾಮ್ ಹುಸೈನ್‌ನನ್ನು ಮುಗಿಸುವ ಹೆಸರಲ್ಲಿ ಇರಾಕ್ ಅನ್ನೇ ಮುಗಿಸಿಬಿಟ್ಟರು. ಇದೀಗ ಕೆಲವು ವರ್ಷಗಳಿಂದ ನೆರೆಯ ಕಡು ಬಡ ದೇಶ ಯಮನ್ ಮೇಲೆ ಯುದ್ಧ ಸಾರಿ ವ್ಯಾಪಕ ವಿನಾಶ ಮೆರೆಯುತ್ತಿದ್ದಾರೆ. ಇತ್ತೀಚೆಗೆ ಇವರು ಖತರ್ ಎಂಬ ತಮ್ಮದೇ ಪಾಳಯದ ಇನ್ನೊಂದು ಸರ್ವಾಧಿಕಾರಿ ದೇಶದ ವಿರುದ್ಧ ದಿಗ್ಬಂಧನ ಹೇರಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಅಲ್ ಖಾಯಿದಾ ಮತ್ತು ಐಸಿಸ್‌ಗಳಿಗೆ ಜನ್ಮನೀಡಿದವರೆಂಬ ಕಳಂಕ ಮೊದಲೇ ಇವರ ತಲೆ ಮೇಲಿದೆ. ಕ್ರೂರ ತಮಾಷೆ ಏನೆಂದರೆ ಜಗತ್ತಿಗೆಲ್ಲ ಪ್ರಜಾಪ್ರಭುತ್ವದ ಪಾಠ ಹೇಳುವ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಸ್ಥಾಪನೆಗಾಗಿ ನಾವು ಯಾವುದೇ ದೇಶಕ್ಕೆ ಮಿಲಿಟರಿ ಕಳಿಸಿ ಯುದ್ಧ ಮಾಡುವುದಕ್ಕೆ ಸಿದ್ಧರಿದ್ದೇವೆ ಎನ್ನುವ ಅಮೆರಿಕ ಮತ್ತು ಯೂರೋಪಿನ ದೇಶಗಳು ಕೊಲ್ಲಿಯ ಪ್ರಸ್ತುತ ಸರ್ವಾಧಿಕಾರಿ ಸರಕಾರಗಳಿಗೆ ‘ಪರಮಾಪ್ತ’ ಸ್ಥಾನಮಾನ ನೀಡಿವೆ. ಅಲ್ಲಿನ ರಾಜರುಗಳ ಅಮಾನುಷ ದಬ್ಬಾಳಿಕೆಯಡಿಯಲ್ಲಿ ನರಳುತ್ತಿರುವ ಕೋಟ್ಯಂತರ ನಾಗರಿಕರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಪರವಾಗಿ ಆ ದೇಶಗಳು ಒಂದಕ್ಷರ ಮಾತನಾಡುತ್ತಿಲ್ಲ, ಮಾತ್ರವಲ್ಲ, ಅವು ಬೇಹುಗಾರಿಕೆ, ತಂತ್ರಜ್ಞಾನ ಇತ್ಯಾದಿ ವಿವಿಧ ವಿಧಾನಗಳ ಮೂಲಕ ಪ್ರಸ್ತುತ ಸರ್ವಾಧಿಕಾರಿಗಳಿಗೆ, ತಮ್ಮ ಪ್ರಜೆಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಬೇಕಾದ ಸಕಲ ಸವಲತ್ತುಗಳನ್ನೂ ಒದಗಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಖಶೋಗಿಯನ್ನು ಕೊಲ್ಲುವುದಕ್ಕೆ ಇಸ್ರೇಲಿ ಮಾಹಿತಿ ತಂತ್ರಜ್ಞಾನವು ಸೌದಿ ಸರಕಾರಕ್ಕೆ ನೆರವಾಗಿತ್ತೆಂಬ ಮಾಹಿತಿ ಮತ್ತು ಜಮಾಲ್ ಖಶೋಗಿ ಎಂಬ ತನ್ನದೇ ಪ್ರಜೆಯ ಹತ್ಯೆಪ್ರಕರಣದಲ್ಲಿ ಟ್ರಂಪ್ ಸರಕಾರವು ತಾಳಿರುವ ಮೌನವು ಬಹಳ ಗಮನಾರ್ಹವಾಗಿದೆ.