ಹವಾಮಾನ ಬದಲಾವಣೆ ಮತ್ತು ಬಡವರು
ಕೂಡಲೇ ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಹವಾಮಾನ ಬದಲಾವಣೆಯು ಹಲವು ದಶಕಗಳಿಂದ ಅಭಿವೃದ್ಧಿಶೀಲ ದೇಶಗಳು ಕಾಣುತ್ತಿದ್ದ ಅಭಿವೃದ್ಧಿಯನ್ನು ಕುಸಿಯುವಂತೆ ಮಾಡಬಹುದು.
ಜಗತ್ತಿನ ಬಡ ಮತ್ತು ಅಭಿವೃದ್ಧಿಶೀಲ ದೇಶಗಳು ಇಂದಿನ ಹವಾಮಾನ ಬಿಕ್ಕಟ್ಟಿಗೆ ಕಿಂಚಿತ್ತೂ ಹೊಣೆಗಾರರಲ್ಲವಾದರೂ ಅದರ ದುಷ್ಪರಿಣಾಮಗಳಿಗೆ ಮಾತ್ರ ಅತಿ ಹೆಚ್ಚು ಗುರಿಯಾಗುತ್ತಿವೆ. ಈ ದೇಶಗಳು ಅಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಹೇರಿರುವ ಹೊಂದಾಣಿಕೆಗಳೆರಡನ್ನೂ ಸಾಧಿಸಲು ಹರಸಾಹಸ ಪಡುತ್ತಾ ಎರಡೂ ಗುರಿಗಳಲ್ಲೂ ಹಿಂದೆಬೀಳುವಂತಾಗಿದೆ. ಹೀಗಾಗಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ದಶಕಗಳಿಂದ ಸಾಧಿಸಿರುವ ಅಭಿವೃದ್ಧಿ ಮತ್ತು ಬೆಳವಣಿಗೆಗಳು ಜಾಗತಿಕವಾಗಿ ಮತ್ತು ನಿರ್ದಿಷ್ಟವಾಗಿ ಭಾರತದಲ್ಲಿ ಹಿನ್ನಡೆಗೆ ಗುರಿಯಾಗುತ್ತವೆ. ಈಗಾಗಲೇ ಎಚ್ಚರಿಕೆಯ ಗಂಟೆಗಳು ಬಾರಿಸತೊಡಗಿವೆ.
ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ಪ್ರಾಣಿಗಳನ್ನೂ ಒಳಗೊಂಡಂತೆ ಎಲ್ಲಾ ಜೀವಸಂಕುಲಗಳಿಗೆೆ ಒಂದಲ್ಲ ಒಂದು ಮಟ್ಟದ ಪ್ರಭಾವವನ್ನು ಬೀರುತ್ತಿದೆ. ಆದರೂ, ಅದು ಬಡವರ ಮೇಲೆ ಅದರಲ್ಲೂ ಹೆಚ್ಚಾಗಿ ಅಭಿವೃದ್ಧಿಶೀಲ ದೇಶಗಳ ಬಡವರ ಮೇಲೆ ಎಲ್ಲರಿಗಿಂತ ಹೆಚ್ಚಿನ ದುಷ್ಪರಿಣಾಮವನ್ನು ಬೀರುತ್ತಿದೆ. ಹಿಂದೆ ಹವಾಮಾನ ಬದಲಾವಣೆಯೆಂಬುದು ನಿಧಾನಗತಿಯಲ್ಲಿ ಘಟಿಸುತ್ತಿರುವ ವಿದ್ಯಮಾನವೆಂದು ಭಾವಿಸಲಾಗಿತ್ತು. ಆದರೆ ಹವಾಮಾನ ಬದಲಾವಣೆಯ ಅಧ್ಯಯನವನ್ನು ನಡೆಸುತ್ತಿರುವ ವಿಶ್ವಸಂಸ್ಥೆಯ ಬಹುಸರಕಾರಗಳ ತಂಡವು 2018ರ ಅಕ್ಟೋಬರ್ನಲ್ಲಿ ಕೊಟ್ಟ ಗ್ಲೋಬಲ್ ವಾರ್ಮಿಂಗ್ ಆಫ್ 1.5 ಡಿಗ್ರಿ ಸೆಂಟಿಗ್ರೇಡ್ (1.5 ಡಿಗ್ರಿ ಸೆಂಟಿಗ್ರೇಡಿನಷ್ಟು ಏರುತ್ತಿರುವ ಜಾಗತಿಕ ತಾಪಮಾನ) ಎಂಬ ವರದಿಯು ಈ ಗ್ರಹಿಕೆಯನ್ನು ತಲೆಕೆಳಗಾಗಿಸಿದೆ. ಆ ವರದಿಯ ಪ್ರಕಾರ ಜಾಗತಿಕ ತಾಪಮಾನದಲ್ಲಿ ಆಗಬಹುದಾದ 1.5 ಡಿಗ್ರಿ ಸೆಂಟಿಗ್ರೇಡಿನಷ್ಟು ಏರಿಕೆಯೂ ಸಹ ಜಾಗತಿಕವಾಗಿ ಹಲವಾರು ಕೋಟಿ ಜನರನ್ನು ಬಡತನಕ್ಕೆ ದೂಡಬಹುದು.
ಹವಾಮಾನ ಬದಲಾವಣೆಯು ಹೇಗೆ ಬಡವರ ಮೇಲೆ ಇತರರಿಗಿಂತ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಈಗ ಸಾಕಷ್ಟು ಅಧ್ಯಯನಗಳು ಸಾಬೀತುಪಡಿಸಿವೆ. ಹವಾಮಾನ ಬದಲಾವಣೆಯ ಕಾರಣದಿಂದಾಗಿ ಆಹಾರ ಮತ್ತು ನೀರಿನ ಲಭ್ಯತೆಯಲ್ಲಿ ಕೊರತೆಯುಂಟಾಗಲಿದ್ದು ಅತ್ಯವಶ್ಯಕ ಸರಕುಗಳನ್ನು ಪಡೆದುಕೊಳ್ಳಲು ತೀವ್ರ ಸ್ಪರ್ಧೆಯನ್ನು ಹುಟ್ಟುಹಾಕಲಿದೆ. ಇದು ಈಗಾಗಲೇ ನಡೆಯುತ್ತಿರುವ ಸಂಘರ್ಷಗಳನ್ನು ತೀವ್ರಗೊಳಿಸುವುದಲ್ಲದೆ ಹಲವಾರು ಹೊಸ ಸಂಘರ್ಷಗಳ ಹುಟ್ಟಿಗೂ ಕಾರಣವಾಗಲಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿ 2015ರಿಂದ ನೀರಿನ ಬಿಕ್ಕಟ್ಟು ಪ್ರಾರಂಭವಾಯಿತು. ಮತ್ತು ಆ ನಗರವು ಜಗತ್ತಿನಲ್ಲೇ ಪ್ರಪ್ರಥಮ ನೀರಿಲ್ಲದ ನಗರವಾಗುವ ಆತಂಕವನ್ನೆದುರಿಸುತ್ತಿದೆ. ಆದರೆ ಆ ನಗರದ ಬಡವರು ವಾಸ ಮಾಡುತ್ತಿರುವ ಪ್ರದೇಶಗಳು ಹಲವಾರು ವರ್ಷಗಳ ಹಿಂದಿನಿಂದಲೂ ನೀರಿನ ಕೊರತೆಯನ್ನು ಅನುಭವಿಸುತ್ತಿದ್ದು ಈ ಬಿಕ್ಕಟ್ಟಿನಿಂದಾಗಿ ಇನ್ನೂ ಹೆಚ್ಚಿನ ಸಂಕಷ್ಟಕ್ಕೆ ಗುರಿಯಾಗಿದೆ. ಕಾಂಗೋ ಪ್ರಜಾತಾಂತ್ರಿಕ ಗಣರಾಜ್ಯದಲ್ಲಿ ಮಳೆಸುರಿಯುತ್ತಿದ್ದ ರೀತಿ ಮತ್ತು ಕಾಲಾವಧಿಗಳಲ್ಲಿ ಏರುಪೇರು ಸಂಭವಿಸಿರುವುದರಿಂದ ಆಹಾರ ಉತ್ಪಾದನೆಯಲ್ಲಿ ಕುಸಿತವಾಗಿ ಉಳುವಯೋಗ್ಯ ಭೂಪ್ರದೇಶಕ್ಕಾಗಿನ ಸ್ಪರ್ಧೆಯನ್ನು ತೀವ್ರವಾಗಿ ಹೆಚ್ಚಿಸಿದೆ. ಅದು ದೇಶದಲ್ಲಿನ ಜನಾಂಗೀಯ ಘರ್ಷಣೆ ಮತ್ತು ತಳಮಳಗಳು ಹೆಚ್ಚಾಗುವುದಕ್ಕೂ ಕಾರಣವಾಗಿವೆ.
ಅಂಥ ಘರ್ಷಣೆಗಳು ಬಡವರ ಮೇಲೆಯೇ ಹೆಚ್ಚಿನ ಪರಿಣಾಮವನ್ನು ಬೀರಲಿದ್ದು ಇನ್ನೂ ಹೆಚ್ಚಿನ ಬಡತನ ಮತ್ತು ಸ್ಥಳಾಂತರಗೊಳ್ಳುವಂಥ ವಿಷಚಕ್ರಕ್ಕೆ ಈಡುಮಾಡಿದೆ. ಹವಾಮಾನ ಬದಲಾವಣೆಯಿಂದ ಪದೇಪದೇ ಸಂಭವಿಸುವ ನೆರೆ ಮತ್ತು ಬರಗಳು ಆಹಾರ ಕೊರತೆಗಳಿಗೂ ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆಗೂ ಕಾರಣವಾಗುತ್ತವೆ. ಇದು ಹಸಿವು ಮತ್ತು ಅಪೌಷ್ಟಿಕತೆಗಳಿಗೆ ದಾರಿಮಾಡಲಿದ್ದು ಅದರ ಪರಿಣಾಮವನ್ನೂ ಸಹ ಹೆಚ್ಚಾಗಿ ಅನುಭವಿಸಲಿರುವವರು ಬಡವರೇ ಆಗಿರುತ್ತಾರೆ. ಅಹಾರ ಬಿಕ್ಕಟ್ಟಿನ ಬಗ್ಗೆ ವರ್ಲ್ಡ್ ಫುಡ್ ಪ್ರೊಗ್ರಾಮ್ನ 2018ರ ವರದಿಯ ಪ್ರಕಾರ ಹವಾಮಾನ ಸಂಬಂಧೀ ವಿಪತ್ತುಗಳು ಜಗತ್ತಿನ ಅದರಲ್ಲೂ ಪ್ರಮುಖವಾಗಿ ಆಫ್ರಿಕಾದ 23 ದೇಶಗಳಲ್ಲಿ ಆಹಾರ ಬಿಕ್ಕಟ್ಟನ್ನು ಹುಟ್ಟುಹಾಕಿದ್ದು ಕನಿಷ್ಠ 39 ದಶಲಕ್ಷ ಜನರಿಗೆ ತುರ್ತು ಸಹಾಯ ಒದಗಿಸಬೇಕಾದ ಅಗತ್ಯವನ್ನು ಸೃಷ್ಟಿಸಿದೆ.
ಹಾಗೆಯೇ 2018ರ ಗ್ಲೋಬಲ್ ರಿಪೋರ್ಟ್ ಆನ್ ಇಂಟರ್ನಲ್ ಡಿಸ್ಪ್ಲೇಸ್ಮೆಂಟ್ (ಆಂತರಿಕ ಸ್ಥಳಾಂತರದ ಬಗೆಗಿನ ಜಾಗತಿಕ ವರದಿ)ಯ ಪ್ರಕಾರ 2017ರಲ್ಲಿ 143 ದೇಶಗಳು ಮತ್ತು ಭೂಭಾಗಗಳಲ್ಲಿ ಅಂತರಿಕ ಸಂಘರ್ಷ ಮತ್ತು ವಿಪತ್ತುಗಳಿಗೆ ಗುರಿಯಾಗಿ ಹೊಸದಾಗಿ 3.6 ಕೋಟಿ ಜನ ಆಂತರಿಕವಾಗಿ ಸ್ಥಳಾಂತರಗೊಳ್ಳಬೇಕಾಯಿತು. ಇದರ ಅರ್ಥ ಪ್ರತಿದಿನ ಅಂದಾಜು 80,000 ಜನ ಸ್ಥಳಾಂತರಗೊಳ್ಳುತ್ತಿದ್ದಾರೆ. ಆ ವರದಿಯ ಪ್ರಕಾರ ಚಂಡಮಾರುತಗಳು ಮತ್ತು ಪ್ರವಾಹಗಳು ಈ ಸ್ಥಳಾಂತರಗಳಿಗೆ ಪ್ರಧಾನ ಕಾರಣವಾಗಿದ್ದು ಅನುಕ್ರಮವಾಗಿ 75 ಲಕ್ಷ ಮತ್ತು 86 ಲಕ್ಷ ಜನರ ಸ್ಥಳಾಂತರಗಳಿಗೆ ಕಾರಣವಾಗಿವೆ. ಢಾಕಾದ ಕರಾವಳಿಯಲ್ಲುಂಟಾದ ಪ್ರವಾಹದಿಂದಾಗಿ, ಪೊರ್ಟೊರಿಕೋದ ಮಾರಿಯಾದ ಚಂಡಮಾರುತದಿಂದಾಗಿ ಅಥವಾ ಪಶ್ಚಿಮ ಆಫ್ರಿಕಾದ ಚಾಡ್ ಸರೋವರವು ಮರುಭೂಮಿಯಾಗಿ ಪರಿವರ್ತನೆಯಾದ ಕಾರಣದಿಂದಾಗಿ ಇಂದು ಜಗತ್ತಿನೆಲ್ಲೆಡೆ ಹವಾಮಾನ ನಿರಾಶ್ರಿತರನ್ನು ಕಾಣಬಹುದಾಗಿದೆ. ಒಂದು ಅಂದಾಜಿನ ಪ್ರಕಾರ 2100ರ ವೇಳೆಗೆ ಹವಾಮಾನ ಬದಲಾವಣೆಯಿಂದಾಗಿ ಐರೋಪ್ಯ ಒಕ್ಕೂಟದ ದೇಶಗಳಿಗೆ ವಲಸೆ ಬರುವವರ ಪ್ರಮಾಣ ಶೇ.28ರಷ್ಟು ಹೆಚ್ಚಬಹುದು.
ಹವಾಮಾನ ಬದಲಾವಣೆಯಿಂದಾಗಿ ನಷ್ಟಕ್ಕೊಳಗಾದ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಭಾರತ ದೇಶದ ಸುಮಾರು 80 ಕೋಟಿ ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದು ಕೃಷಿ ಮತ್ತು ಪ್ರಾಕೃತಿಕ ಸಂಪನ್ಮೂಲಗಳನ್ನು ಆಧರಿಸಿಯೇ ಬದುಕುತ್ತಿದ್ದಾರೆ. ದೇಶದ ಶೇ.50ರಷ್ಟು ಕೃಷಿ ಭೂಮಿ ಮಳೆಯಾಶ್ರಿತವಾಗಿದ್ದು ಮಾನ್ಸೂನ್ ಮಾರುತಗಳಲ್ಲಿ ಆಗುವ ಏರುಪೇರುಗಳು ಅವರ ಜೀವನಗಳ ಮೇಲೆ ತೀವ್ರವಾದ ಪರಿಣಾಮವನ್ನುಂಟು ಮಾಡುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಗೋಧಿಯ ಉತ್ಪಾದನೆ ಇಳಿಮುಖವಾಗಿದ್ದು ಕಾರ್ಮಿಕರ ಉತ್ಪಾದಕತೆಯನ್ನು ಕಡಿಮೆ ಮಾಡಿದೆಯೆಂದು ತಳಮಟ್ಟದ ಪುರಾವೆಗಳು ನುಡಿಯುತ್ತಿವೆ. ಅಧ್ಯಯನಗಳ ಪ್ರಕಾರ ಗೋಧಿ ಉತ್ಪಾದನೆಯಲ್ಲಿ ಬರುತ್ತಿರುವ ದೀರ್ಘಕಾಲೀನ ಬದಲಾವಣೆಗಳ ಬಗ್ಗೆ ಸಣ್ಣ ರೈತರಿಗೆ ಅರಿವಿದ್ದು ಬದಲಾದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಿಗೆ ತಕ್ಕಂತೆ ಅವರೂ ಸಹ ತಮ್ಮ ಕೃಷಿ ಅಭ್ಯಾಸಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ. ಸಣ್ಣರೈತರಿಗೆ ಸಾಲ ಮತ್ತು ವಿಮೆಯ ಸೌಲಭ್ಯಗಳು ಎಟಕುವುದೂ ಕಷ್ಟವಿದ್ದು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಸುಲಭದ ತುತ್ತಾಗುತ್ತಾರೆ. ಹೀಗಾಗಿ ಹವಾಮಾನ ಬದಲಾವಣೆಯು ಹಾಲಿ ಇರುವ ಬಡತನ, ಅಪೌಷ್ಟಿಕತೆ ಮತ್ತು ರೈತರ ಆತ್ಮಹತ್ಯೆಯ ಸಂದರ್ಭವನ್ನು ಮತ್ತಷ್ಟು ಬಿಗಡಾಯಿಸಲಿದೆ.
ಅಭಿವೃದ್ಧಿ ಹೊಂದಿದ ದೇಶಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಬೇಕಾದ ಹಣಕಾಸು ಬೆಂಬಲವನ್ನು ಅಭಿವೃದ್ಧಿಶೀಲ ದೇಶಗಳಿಗೆ ಒದಗಿಸದೆ ದ್ರೋಹವೆಸೆಗುತ್ತಿವೆಯೆಂದು ಭಾರತವು ಕೆಟೊವಿಸ್ನಲ್ಲಿ 2018ರಲ್ಲಿ ನಡೆದ ಹವಾಮಾನ ಸಮ್ಮೇಳನದಲ್ಲಿ ಆರೋಪ ಹೊರಿಸಿತ್ತು. ಜಗತ್ತಿನ ಬಡ ಮತ್ತು ಅಭಿವೃದ್ಧಿಶೀಲ ದೇಶಗಳು ಇಂದಿನ ಹವಾಮಾನ ಬಿಕ್ಕಟ್ಟಿಗೆ ಕಿಂಚಿತ್ತೂ ಹೊಣೆಗಾರರಲ್ಲವಾದರೂ ಅದರ ದುಷ್ಪರಿಣಾಮಗಳಿಗೆ ಮಾತ್ರ ಅತಿ ಹೆಚ್ಚು ಗುರಿಯಾಗುತ್ತಿವೆ. ಈ ದೇಶಗಳು ಅಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಹೇರಿರುವ ಹೊಂದಾಣಿಕೆಗಳೆರಡನ್ನೂ ಸಾಧಿಸಲು ಹರಸಾಹಸ ಪಡುತ್ತಾ ಎರಡೂ ಗುರಿಗಳಲ್ಲೂ ಹಿಂದೆಬೀಳುವಂತಾಗಿದೆ. ಹೀಗಾಗಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ದಶಕಗಳಿಂದ ಸಾಧಿಸಿರುವ ಅಭಿವೃದ್ಧಿ ಮತ್ತು ಬೆಳವಣಿಗೆಗಳು ಜಾಗತಿಕವಾಗಿ ಮತ್ತು ನಿರ್ದಿಷ್ಟವಾಗಿ ಭಾರತದಲ್ಲಿ ಹಿನ್ನಡೆಗೆ ಗುರಿಯಾಗುತ್ತವೆ. ಈಗಾಗಲೇ ಎಚ್ಚರಿಕೆಯ ಗಂಟೆಗಳು ಬಾರಿಸತೊಡಗಿವೆ. ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳಿಂದಾಗಿ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳ ನಡುವೆ, ಶ್ರೀಮಂತ ಮತ್ತು ಬಡವರ ನಡುವೆ ಮತ್ತು ಜಾಗತಿಕ ಉತ್ತರ ಮತ್ತು ಜಾಗತಿಕ ದಕ್ಷಿಣ ದೇಶಗಳ ನಡುವಿನ ಅಂತರವಂತೂ ಅಗಾಧವಾಗುತ್ತಿದೆ.