ಸ್ವಾಭಿಮಾನದ ಸ್ತ್ರೀ ಆನಂದಿ ಗೋಪಾಲ್
ವೈದ್ಯಕೀಯ ವ್ಯಾಸಂಗ ಪಡೆದ ಪ್ರಪ್ರಥಮ ಭಾರತೀಯ ಮಹಿಳೆಯ ಬದುಕು ಬೆಳ್ಳಿತೆರೆಯಲ್ಲಿ ಅನಾವರಣ
ತನ್ನ ಗಂಡುಮಗು ಹುಟ್ಟಿದ ಸ್ವಲ್ಪ ಸಮಯದಲ್ಲೇ ಮೃತಪಟ್ಟ ಬಳಿಕ ಅವರಿಗೆ ತಾನು ವೈದ್ಯೆಯಾಗಬೇಕೆಂಬ ಯೋಚನೆ ಆನಂದಿ ಗೋಪಾಲ್ಗೆ ಹೊಳೆದಿತ್ತು. ದೇಶದಲ್ಲಿನ ಮಹಿಳಾ ವೈದ್ಯೆಯರ ಕೊರತೆಯಿದ್ದುದು, ಆಕೆಯ ಈ ಆಕಾಂಕ್ಷೆಗೆ ಪ್ರೇರಕ ಶಕ್ತಿಯಾಗಿತ್ತು. ಪುರುಷ ವೈದ್ಯರಿಂದ ವೈದ್ಯಕೀಯ ತಪಾಸಣೆಗೊಳಗಾಗುವುದು ಎಷ್ಟು ಕಷ್ಟವೆಂಬುದನ್ನು ಆನಂದಿ ಗರ್ಭಿಣಿಯಾಗಿದ್ದಾಗ ಅರಿತುಕೊಂಡಿದ್ದರು. ಆದಾಗ್ಯೂ ವೈದ್ಯಕೀಯ ವೃತ್ತಿಯಲ್ಲಿ ನೆಲೆ ಕಂಡುಕೊಳ್ಳುವ ಮೊದಲೇ ಆಕೆ ಕೊನೆಯುಸಿರೆಳೆದರು.
ಯಾರೀಕೆ ಆನಂದಿ ಗೋಪಾಲ್ ಜೋಶಿ?. ಅಮೆರಿಕದಲ್ಲಿ ವೈದ್ಯಕೀಯ ವ್ಯಾಸಂಗ ನಡೆಸಿದ ಪ್ರಪ್ರಥಮ ಭಾರತೀಯ ಮಹಿಳೆ ಅವರೆಂಬ ವಿಷಯ ಹಲವರಿಗೆ ತಿಳಿದಿದೆ. 1886ರಲ್ಲಿ ಪೆನ್ಸಿಲ್ವೇನಿಯದ ಮಹಿಳಾ ಮೆಡಿಕಲ್ ಕಾಲೇಜ್ನಲ್ಲಿ ಅವರು ಪದವಿ ಪಡೆದಿದ್ದರು. ಆದಾಗ್ಯೂ, ಇದನ್ನು ಹೊರತುಪಡಿಸಿದ ಅವರ ಕುರಿತ ಇತರ ವಿಷಯಗಳನ್ನು ತಿಳಿದಿರುವವರು ಬಹಳ ಕಡಿಮೆ.
ಜೋಶಿಯವರ ಏಕಾಂಗಿ ಹಾಗೂ ಐತಿಹಾಸಿಕ ಪ್ರಯಾಣದ ಕುರಿತು ಮಾಹಿತಿಯ ಕೊರತೆಯ ಅಂತರವನ್ನು ನೂತನ ಚಿತ್ರವೊಂದು ತುಂಬಲಿದೆಯೆಂಬ ಆಶಾವಾದ ಈಗ ಮೂಡಿದೆ. ಸಮೀರ್ ವಿದ್ವಾನ್ ನಿರ್ದೇಶನದ ‘ಆನಂದಿ ಗೋಪಾಲ್’ ಚಿತ್ರವನ್ನು ಝೀ ಸ್ಟುಡಿಯೋಸ್ ಫೆಬ್ರವರಿ 15ರಂದು ಬಿಡುಗಡೆ ಗೊಳಿಸಿದೆ. ಮರಾಠಿ ಭಾಷೆಯ ಈ ಬಯೋಪಿಕ್ನಲ್ಲಿ ಭಾಗ್ಯಶ್ರೀ ಮಿಲಿಂದ್ ಅವರು ಆನಂದಿ ಗೋಪಾಲ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪತಿ ಗೋಪಾಲ್ರಾವ್ ಜೋಶಿಯಾಗಿ, ಲಲಿತ್ ಪ್ರಭಾಕರ್ ಅಭಿನಯಿಸಿದ್ದಾರೆ. ಆನಂದಿ ಗೋಪಾಲ್ ಅವರ ಬದುಕಿನ ಪಥವನ್ನು ಅವರ ಪತಿ ಗೋಪಾಲ್ರಾವ್ ರೂಪಿಸಿದ್ದರು. 9 ವರ್ಷದ ಬಾಲಕಿಯಾಗಿದ್ದಾಗ ಆನಂದಿ ಅವರನ್ನು ಗೋಪಾಲ್ರಾವ್ ಜೊತೆ ಮದುವೆ ಮಾಡಲಾಗಿತ್ತು. ಆನಂದಿ ಅವರಿಗಿಂತ ವಯಸ್ಸಿನಲ್ಲಿ 20 ವರ್ಷ ಹಿರಿಯರಾಗಿದ್ದ ಗೋಪಾಲ್ ರಾವ್ ಜೋಶಿ ಅವರು ಮಹಿಳಾ ಶಿಕ್ಷಣದ ಪ್ರಬಲ ಪ್ರತಿಪಾದಕರಾಗಿದ್ದರು. ಆನಂದಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಹಾಗೂ ಇಂಗ್ಲಿಷ್ ಭಾಷೆಯನ್ನು ಕಲಿತುಕೊಳ್ಳಬೇಕೆಂಬುದು ಅವರ ಷರತ್ತಾಗಿತ್ತು. ಆನಂದಿ ಕಲಿಯುವುದಕ್ಕೆ ನಿರಾಸಕ್ತಿ ತೋರಿಸಿದಾಗ ಗೋಪಾಲ್ ಅವರು ಆಕೆಯನ್ನು ಗದರಿಸುತ್ತಿದ್ದರು ಹಾಗೂ ಒಮ್ಮಿಮ್ಮೆ ಹೊಡೆಯುತ್ತಿದ್ದರು, ಆಕೆಯತ್ತ ಕುರ್ಚಿಗಳನ್ನು ಹಾಗೂ ಪುಸ್ತಕಗಳನ್ನು ಎಸೆಯುತ್ತಿದ್ದರೆಂದು ಆನಂದಿ ಅಮೆರಿಕದಿಂದ ಬರೆದ ಪತ್ರಗಳನ್ನು ಓದಿದಾಗ ತಿಳಿಯುತ್ತದೆ.
ಆದಾಗ್ಯೂ, ವೈದ್ಯೆಯಾಗಬೇಕೆಂಬ ನಿರ್ಧಾರ ಮಾತ್ರ ಆಕೆಯದ್ದಾಗಿತ್ತು. ತನ್ನ ಗಂಡುಮಗು ಹುಟ್ಟಿದ ಸ್ವಲ್ಪ ಸಮಯದಲ್ಲೇ ಮೃತಪಟ್ಟ ಬಳಿಕ ಅವರಿಗೆ ತಾನು ವೈದ್ಯೆಯಾಗಬೇಕೆಂಬ ಯೋಚನೆ ಹೊಳೆದಿತ್ತು. ದೇಶದಲ್ಲಿನ ಮಹಿಳಾ ವೈದ್ಯೆಯರ ಕೊರತೆಯಿದ್ದುದು, ಆಕೆಯ ಈ ಆಕಾಂಕ್ಷೆಗೆ ಪ್ರೇರಕ ಶಕ್ತಿಯಾಗಿತ್ತು. ಪುರುಷ ವೈದ್ಯರಿಂದ ವೈದ್ಯಕೀಯ ತಪಾಸಣೆಗೊಳಗಾಗುವುದು ಎಷ್ಟು ಕಷ್ಟವೆಂಬುದನ್ನು ಆನಂದಿ ಗರ್ಭಿಣಿಯಾಗಿದ್ದಾಗ ಅರಿತುಕೊಂಡಿದ್ದರು. ಆದಾಗ್ಯೂ ವೈದ್ಯಕೀಯ ವೃತ್ತಿಯಲ್ಲಿ ನೆಲೆ ಕಂಡುಕೊಳ್ಳುವ ಮೊದಲೇ ಆಕೆ ಕೊನೆಯುಸಿರೆಳೆದರು. 1887ರಲ್ಲಿ ಆನಂದಿ ಅಮೆರಿಕದಿಂದ ಭಾರತಕ್ಕೆ ವಾಪಸಾದ ಕೆಲವೇ ಸಮಯದ ಬಳಿಕ ಕ್ಷಯ ರೋಗ ಅವರನ್ನು ಬಲಿತೆಗೆದುಕೊಂಡಿತ್ತು. ಆಗ ಅವರಿಗೆ 21 ವರ್ಷ ವಯಸ್ಸಾಗಿತ್ತು.
‘‘ಆದಾಗ್ಯೂ, ಆಕೆಯ ಮಹತ್ವಾಕಾಂಕ್ಷೆ ಹಾಗೂ ಅಲ್ಪಕಾಲದ ಯಶಸ್ಸು, ಮುಂದಿನ ತಲೆಮಾರಿನ ಭಾರತೀಯ ಮಹಿಳಾ ವೈದ್ಯೆಯರಿಗೆ ದಾರಿದೀಪವಾಯಿತು’’ ಎಂದು ಸ್ಮಿತ್ಸೊನಿಯನ್ ವೆಬ್ಸೈಟ್ನಲ್ಲಿ ಪ್ರಕಟವಾದ ಲೇಖನವೊಂದು ಸ್ಮರಿಸಿದೆ. ಆಕೆಯ ಸಾಧನೆಯಿಂದ ಪ್ರೇರಿತರಾಗಿ, ಅನೇಕ ವೈದ್ಯಕೀಯ ಮನೋಭಾವದ ಭಾರತೀಯ ಮಹಿಳೆಯರು ಆಕೆಯ ಹೆಜ್ಜೆಗಳನ್ನು ಅನುಸರಿಸಿದರು’’.
ತನ್ನ ಗುರಿಯನ್ನು ಸಾಧಿಸುವಲ್ಲಿ ಆನಂದಿ ಎದುರಿಸಿದ ತೊಡಕುಗಳ ಬಗ್ಗೆ ಬೆಳಕು ಚೆಲ್ಲುವುದೇ ನಿರ್ದೇಶಕ ವಿದ್ವಾನ್ ಅವರ ಮಹತ್ವಾಕಾಂಕ್ಷೆಯಾಗಿದೆ.
ವೈದ್ಯೆಯಾಗಬೇಕೆಂಬ ಆನಂದಿಯವರ ಹಂಬಲಕ್ಕೆ ನೆರೆಹೊರೆಯಲ್ಲಿನ ಹಿಂದೂ ಸಮುದಾಯದವರ ವಿರೋಧವಿದ್ದರೆ, ಇನ್ನೊಂದೆಡೆ ಆಕೆ ವಿದೇಶಕ್ಕೆ ತೆರಳಲು ಅನುಕೂಲ ಮಾಡಿಕೊಡಲು ದಂಪತಿಯು ಕ್ರೈಸ್ತ ಮಿಶನರಿಗಳನ್ನು ಸಂಪರ್ಕಿಸಿದಾಗ ಅವರು ಕ್ರೈಸ್ತಧರ್ಮಕ್ಕೆ ಮತಾಂತರಗೊಳ್ಳಬೇಕೆಂದು ಒತ್ತಾಯಿಸಿದರು.
ಅಂತಿಮವಾಗಿ, ಅಮೆರಿಕಕ್ಕೆ ಆಗಮಿಸಲು ದಂಪತಿ ನಡೆಸಿದ ಪ್ರಯತ್ನಗಳನ್ನು ಸ್ಥಳೀಯ ಪ್ರಿನ್ಸ್ಟನ್ ಮಿಶನರಿ ರೀವ್ಯೆವ್ ಪತ್ರಿಕೆಯಲ್ಲಿ ಓದಿದ ಥಿಯೊಡಿಸಿಯಾ ಕಾರ್ಪೆಂಟರ್ ಅವರು ಮುಂದೆಬಂದು, ಸಹಾಯಹಸ್ತ ಚಾಚಿದರು. ‘‘ಆ ಯುಗದಲ್ಲಿ ದಂಪತಿಯ ಸುತ್ತಮುತ್ತ ಏನೆಲ್ಲಾ ನಡೆಯಿತೆಂಬುದನ್ನು ಈ ಚಿತ್ರದಲ್ಲಿ ಅನಾವರಣಗೊಳಿಸಲು ನಾನು ಬಯಸಿದ್ದೇನೆ’’ ಎಂದು ವಿದ್ವಾನ್ ಸ್ಕ್ರೊಲ್.ಇನ್ ಆನ್ಲೈನ್ ಪತ್ರಿಕೆಗೆ ತಿಳಿಸಿದ್ದಾರೆ. ‘‘ಆನಂದಿ ದಂಪತಿಯ ಬಾಹ್ಯ ಹೋರಾಟಗಳ ಬಗ್ಗೆ ಜನರಿಗೆ ತಿಳಿದಿದೆಯೇ ಹೊರತು ಅವರ ಆಂತರಿಕ ತುಮುಲಗಳ ಬಗ್ಗೆ ಅವರಿಗೆ ಅರಿವಿಲ್ಲ. ಕೇವಲ ಮಹಾರಾಷ್ಟ್ರ ಮಾತ್ರವಲ್ಲ ಇಡೀ ಭಾರತದ ಜನತೆ ತಿಳಿಯಲೇಬೇಕಾದ ಕತೆ ಇದಾಗಿದೆ’’ ಎಂದವರು ಹೇಳಿದ್ದಾರೆ.
ವಿದ್ವಾನ್ ಅವರು ಡಬಲ್ಸೀಟ್ (2015) ಹಾಗೂ ಟೈಮ್ ಪ್ಲೀಸ್ (2013) ಎಂಬ ರೋಮ್ಯಾಂಟಿಕ್ ಚಿತ್ರಗಳನ್ನು ಹಾಗೂ ಕೌಟುಂಬಿಕ ಕಥಾವಸ್ತುವಿನ ಮಾಲಾ ಕಹಿಚ್ ಪ್ರಾಬ್ಲೆಮ್ ನಹೀ (2017) ಚಿತ್ರವನ್ನು ನಿರ್ದೇಶಿಸಿದ್ದರು. ಆನಂದಿ ಅವರ ಜೀವನಕಥೆಯು ವಿದ್ವಾನ್ ಅವರನ್ನು ಗಾಢವಾಗಿ ಸ್ಪಂದಿಸಿತ್ತು. ಯಾಕೆಂದರೆ ಸಾರ್ವಜನಿಕ ಹಾಗೂ ಖಾಸಗಿ ಬದುಕಿನಲ್ಲಿ ಪುರುಷನಷ್ಟೇ ಸಮಾನ ಅವಕಾಶಗಳನ್ನು ಪಡೆಯಲು ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿಗೆ ಅಪಾರವಾದ ಕಾಳಜಿಯಿತ್ತು.
‘‘ಈ ಕಥೆಯನ್ನು ಈಗಿನ ಯುಗದಲ್ಲಿ ಚಿತ್ರವಾಗಿ ಯಾಕೆ ಮಾಡಬೇಕು?. ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡಿದ್ದೂ ಇದೆ’’ ಎಂದು ವಿದ್ವಾನ್ ಹೇಳುತ್ತಾರೆ. ‘‘ಇಂದು ಕೂಡಾ ಶಬರಿಮಲೆಯಾಗಲಿ ಅಥವಾ ಶನಿ ಶಿಂಗಾಪುರವಾಗಲಿ (ಈ ಎರಡೂ ದೇವಾಲಯಗಳಲ್ಲಿ ಇತ್ತೀಚೆಗೆ ಸುಪ್ರೀಂಕೋರ್ಟ್ನ ತೀರ್ಪಿನ ಹಿನ್ನೆಲೆಯಲ್ಲಿ ಮಹಿಳಾ ಭಕ್ತಾದಿಗಳ ಪ್ರವೇಶಕ್ಕೆ ಅನುಮತಿ ದೊರೆತಿದೆ. ಆದರೆ ಆ ದೇಗುಲಗಳನ್ನು ಪ್ರವೇಶಿಸಲು ಈಗಲೂ ಮಹಿಳೆಯರು ತೊಂದರೆಗಳನ್ನು ಎದುರಿಸುತ್ತಿದ್ದಾರೆ), ಮಹಿಳೆಯರ ಬಗ್ಗೆ ಈಗಲೂ ತಾರತಮ್ಯ ನಡೆಯುತ್ತಿದೆ. ಆದರೆ ಸುಮಾರು 140 ವರ್ಷಗಳ ಹಿಂದೆ ಮಹಿಳೆಯರಿಗೆ ಶಿಕ್ಷಣ ಪಡೆಯಲೂ ಅವಕಾಶವಿಲ್ಲದಂತಹ ಆ ಕಾಲದಲ್ಲಿ ಓರ್ವ ವ್ಯಕ್ತಿಯು, ಮಹಿಳೆಯು ಕಲಿಯಬೇಕೆಂಬುದಾಗಿ ದೃಢಸಂಕಲ್ಪ ತೊಟ್ಟರು. ಹೀಗಾಗಿ, ಆ ಕಥೆಯನ್ನು ನಾನು ಹೇಳಲೇಬೇಕೆಂದು ನಿರ್ಧರಿಸಿದೆ’’ ಎಂದು ವಿದ್ವಾನ್ ತಿಳಿಸಿದರು.
ಆನಂದಿ ಗೋಪಾಲ್ನ ಚಿತ್ರಕಥೆಯನ್ನು ಕರಣ್ ಸಿದ್ಧಾಂತ್ ಶರ್ಮಾ ಅವರು ಹಿಂದಿಯಲ್ಲಿ ಬರೆದಿದ್ದು, ಅದನ್ನು ವಿದ್ವಾನ್ ಅವರು ಖ್ಯಾತ ಮರಾಠಿ, ಹಿಂದಿ ಹಾಗೂ ಇಂಗ್ಲಿಷ್ ರಂಗಸಾಹಿತಿ ಹಾಗೂ ಸಾಹಿತ್ಯ ಅಕಾಡಮಿ ಯುವ ಪುರಸ್ಕಾರ ವಿಜೇತೆ ಇರಾವತಿ ಕಾರ್ಣಿಕ್ ಅವರಿಂದ ಮರಾಠಿಗೆ ಅನುವಾದಿಸಿದ್ದಾರೆ. ವಿದ್ವಾನ್ಗೆ ಅವರ ರಂಗಭೂಮಿಯ ದಿನಗಳಿಂದಲೇ ಇರಾವತಿ ಅವರ ಪರಿಚಯವಿತ್ತು. ‘‘ಆನಂದಿಯ ಆಂತರಿಕ ಜಗತ್ತಿನ ಬಗ್ಗೆ ಹೆಚ್ಚಿನ ಮಾಹಿತಿಯೇನೂ ತಿಳಿದಿರಲಿಲ್ಲ. ಇದಕ್ಕೋಸ್ಕರ ಅದನ್ನು ಸೃಷ್ಟಿಸಲು ನಾನು ಈ ಪ್ರಾಜೆಕ್ಟ್ನಲ್ಲಿ ಮಹಿಳೆಯೊಬ್ಬರು ಭಾಗಿಯಾಗಬೇಕೆಂದು ಬಯಸಿದ್ದೆೆ. ಆಗ ನನಗೆ ಇರಾ ಅವರ ನೆನಪಾಯಿತು. ಅವರ ಕೆಲಸವನ್ನು ನಾನು ನೋಡಿದ್ದೇನೆ ಹಾಗೂ ಅವರಿಗೆ ಉತ್ತಮವಾದ ಸಂಭಾಷಣಾ ಪ್ರಜ್ಞೆಯಿದೆ ಹಾಗೂ ಅತ್ಯಂತ ಸೂಕ್ಷ್ಮ ಗ್ರಹಿಕೆಯುಳ್ಳವರು. ಹೀಗೆ ನಾವು ಮೂವರು ಚಿತ್ರಕಥೆಯನ್ನು ಮರಾಠಿಗೆ ಅಳವಡಿಸುವ ಕಾರ್ಯದಲ್ಲಿ ತೊಡಗಿದೆವು. ಇರಾ ಅವರು ಸಂಭಾಷಣೆಯನ್ನು ಬರೆದರು’’ ಎಂದು ವಿದ್ವಾನ್ ತಿಳಿಸಿದರು.
ಮರಾಠಿ ಚಿತ್ರಗಳಾದ ಎಕುಲ್ತಿ ಏಕ್ (2013) ಹಾಗೂ ಮನ್ ಪಖಾರು ಪಖಾರು (2008)ಗೂ ಸಂಭಾಷಣೆಯನ್ನು ಬರೆದಿರುವ ಕಾರ್ಣಿಕ್, ಪರಿ ಹೂ ಮೇ (2018) ಚಿತ್ರಕ್ಕೆ ಮೂಲಕಥೆಯನ್ನು ಕೂಡಾ ಬರೆದಿದ್ದರು. ಪತಿಯ ಜೊತೆ ಆನಂದಿಯ ಬಾಂಧವ್ಯವನ್ನು ನಿರೂಪಿಸುವುದು ಕಾರ್ಣಿಕ್ ಅವರ ಮುಂದಿದ್ದ ಅತಿ ದೊಡ್ಡ ಸವಾಲಾಗಿತ್ತು. ಆನಂದಿ ಪತಿಯ ಪಾತ್ರವು ಅತ್ಯಂತ ಮಹತ್ವದ, ಆದರೆ ಆಕೆಯನ್ನು ಕಲಿಯಲು ಹಿಂಸಾತ್ಮಕ ಬಲಪ್ರಯೋಗ ಮಾಡುವಂತಹ ಅಷ್ಟೇ ಪ್ರಕ್ಷುಬ್ಧವಾದ ಮನಸ್ಥಿತಿಯಿರುವಂತಹದ್ದಾಗಿತ್ತು. ‘‘ಆನಂದಿ ಕಲಿತು, ವೈದ್ಯೆಯಾದರೂ, ಅದರ ಹಿಂದಿರುವ ಬಹುತೇಕ ಪ್ರೇರಕ ಶಕ್ತಿ ಆಕೆಯ ಪತಿ ಗೋಪಾಲ್ ಎಂಬುದೇ ಈ ಕಥೆಯ ಕುತೂಹಲಕಾರಿ ಅಂಶವಾಗಿದೆ’’ಯೆಂದವರು ತಿಳಿಸಿದ್ದಾರೆ.
‘‘ಗೋಪಾಲ್ ಓರ್ವ ಜಾಗರೂಕತೆಯೊಂದಿಗೆ ನಿರ್ಧಾರಗಳನ್ನು ಕೈಗೊಳ್ಳುವಂತಹ ವ್ಯಕ್ತಿಯಾಗಿದ್ದರು. ಮಹಿಳೆಯರು ಸುಶಿಕ್ಷಿತರಾಗಬೇಕೆಂಬ ಅಭಿಪ್ರಾಯವನ್ನು ಅವರು ಹೊಂದಿದ್ದರು. ಬ್ರಾಹ್ಮಣ್ಯದ ವ್ಯವಸ್ಥೆಯು ಸಮಸ್ಯೆಗಳಿಗೆ ಕಾರಣವಾಗುತ್ತದೆ ಹಾಗೂ ಧರ್ಮವು ವೈಚಾರಿಕತೆಯನ್ನು ಹೇಗೆ ಮಟ್ಟಹಾಕುತ್ತದೆ’’ ಎಂಬ ಬಗ್ಗೆಯೂ ಆತ ಚಿಂತಿಸಿದ್ದರು ಎಂದು ಕಾರ್ಣಿಕ್ ಹೇಳುತ್ತಾರೆ. ಆನಂದಿಯ ಸ್ವಂತಿಕೆಯನ್ನು ಚಿತ್ರದಲ್ಲಿ ಮೂಡಿಸಲು ಹಾಗೂ ವಾಸ್ತವಾಂಶಗಳಿಗೆ ನಿಷ್ಠೆಯನ್ನು ಕಾಯ್ದುಕೊಳ್ಳಲು ಇರಾವತಿ ಕಾರ್ಣಿಕ್ ದಾರಿಯೊಂದನ್ನು ಹುಡುಕಿದ್ದರು. ‘‘ಆನಂದಿಯ ಜೀವನದ ಪಯಣ ಹೇಗಿತ್ತು. ಆಕೆಯ ಆಯ್ಕೆಗಳು ಏನಿದ್ದವು, ಅವಕಾಶಗಳು ಆಕೆಯ ಬಳಿಗೆ ಬಂದ ಕ್ಷಣಗಳು, ಪತಿಯೊಂದಿಗಿನ ಆಕೆಯ ಭಿನ್ನಾಭಿಪ್ರಾಯಗಳು ಇತ್ಯಾದಿ ಅಂಶಗಳನ್ನು ಗುರುತಿಸಲು ನಾನು ಶ್ರಮಿಸಬೇಕಾಯಿತು’’ ಎಂದು ಇರಾವತಿ ಹೇಳುತ್ತಾರೆ. ‘‘ಗೋಪಾಲ್, ತಾನು ಹೇಳಿದ್ದೇ ಆಗಬೇಕೆಂಬ ಮನೋಭಾವನೆಯನ್ನು ಹೊಂದಿದ್ದರೆ, ಇರಾವತಿ ತನ್ನ ವೈಯಕ್ತಿಕ ಸಮಸ್ಯೆಗಳನ್ನು ಮೀರಿ, ಸಮಾಜಕ್ಕಾಗಿ, ಮಹಿಳೆಯರಿಗಾಗಿ ಹಾಗೂ ವಿಶಾಲವಾದ ಆದರ್ಶ ಗಳಿಗಾಗಿ ಬದುಕನ್ನು ಮೀಸಲಿಟ್ಟರು’’ ಎಂದರು.
ಆನಂದಿ ಅವರ ಆಂತರಿಕ ಜಗತ್ತನ್ನು ಅರಿತು ಕೊಳ್ಳಲು ಕಾರ್ಣಿಕ್ ಅವರು ಅಂಜಲಿ ಕೀರ್ತನ್ ಅವರ ಡಾ. ಆನಂದಿಬಾಯಿ ಜೋಶಿ ಕಲ್ ಅನಿ ಕರ್ತೃತ್ವ, ಕಾಶಿಬಾಯಿ ಕಾನಿಟ್ಕರ್ ಅವರ ಆತ್ಮಕತೆ ಹಾಗೂ ಎಸ್.ಜೆ. ಜೋಶಿಯವರ ಕಾದಂಬರಿ ಆನಂದಿ ಗೋಪಾಲ್ ಮತ್ತಿತರ ಕೃತಿಗಳ ಅಧ್ಯಯನ ನಡೆಸಿದ್ದರು. ಆನಂದಿ ಅವರಿಗೆ ಅತ್ಯಂತ ಗಾಢವಾಗಿ ಗಮನಿಸುವ ಮನೋಭಾವವಿರುವು ದನ್ನು ನಾವು ಕಂಡುಕೊಂಡೆವೆಂದು ಕಾರ್ಣಿಕ್ ತಿಳಿಸಿದರು. ‘‘ಆಕೆ ಪ್ರಶ್ನೆಗಳನ್ನು ಕೇಳುತ್ತಾಳೆ. ಆಕೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಿರಲಿಲ್ಲ. ಇದೇ ವೇಳೆ, ತನ್ನ ಮನಸ್ಸಿನಲ್ಲಿದ್ದುದೆಲ್ಲವನ್ನೂ ಹೇಳಿಕೊಳ್ಳುತ್ತಲೂ ಇರಲಿಲ್ಲ. ಅಗತ್ಯವೆಂದು ತೋಚಿದ್ದನ್ನು ಮಾತ್ರವೇ ಆಕೆ ಹೇಳುತ್ತಿದ್ದರು. ಆಕೆಗೆ ಹೋಲಿಸಿದರೆ, ಗೋಪಾಲ್ ಅತ್ಯಂತ ಆಕ್ರಮಣಕಾರಿ, ಬಿಚ್ಚುಮಾತಿನ ವ್ಯಕ್ತಿತ್ವವುಳ್ಳವರಾಗಿದ್ದರು.
ಜನರನ್ನು ಪ್ರಚೋದಿಸುವುದು ಹಾಗೂ ಗೊಂದಲಕ್ಕೀಡುಮಾಡುವುದು ಹಾಗೂ ಪ್ರಚಲಿತ ವ್ಯವಸ್ಥೆಗೆ ಸವಾಲು ಎಸೆಯುವುದೇ ತನ್ನ ಧ್ಯೇಯವೆಂದು ಆತ ಭಾವಿಸಿದ್ದರು. ಚಿತ್ರದಲ್ಲಿ 1800ರ ದಶಕಗಳ ವಾತಾವರಣವನ್ನು ಮರುಸೃಷ್ಟಿಸುವ ಕೆಲಸವೂ ಅತ್ಯಂತ ಶ್ರಮದಾಯಕವಾದುದಾಗಿತ್ತು. ಚಿತ್ರೀಕರಣಕ್ಕಾಗಿ ಸಾಧ್ಯವಿದಷ್ಟು ಮಟ್ಟಿಗೆ ನೈಜ ತಾಣಗಳನ್ನು ಬಳಸಿಕೊಳ್ಳಲು ವಿದ್ವಾನ್ ಬಯಸಿದ್ದರು. ಇದಕ್ಕಾಗಿ ಚಿತ್ರತಂಡವು ಚಿತ್ರೀಕರಣಕ್ಕಾಗಿ ಪುರಾತನ ಮನೆಗಳು ಹಾಗೂ ಪರಂಪರಾಗತ ಪ್ರದೇಶಗಳಿಗಾಗಿ ಶೋಧ ನಡೆಸಿದರು. ಚಿತ್ರದ ಬಹುತೇಕ ಸನ್ನಿವೇಶಗಳು ಮಹಾರಾಷ್ಟ್ರದಲ್ಲಿ ಚಿತ್ರೀಕರಣಗೊಂಡಿವೆ. ಆನಂದಿಯ ವೈದ್ಯಕೀಯ ವಿದ್ಯಾಭ್ಯಾಸ ಕೈಗೊಂಡಿದ್ದ ನಗರವಾದ ಪೆನ್ಸಿಲ್ವೆನಿಯಾದ ದೃಶ್ಯಗಳನ್ನು ಜಾರ್ಜಿಯಾದಲ್ಲಿ ಚಿತ್ರೀಕರಿಸಲಾಗಿದೆ.
‘‘ನಾವು ಕನಿಷ್ಠ ನೂರು ವರ್ಷ ಹಳೆಯದಾದ ಮನೆಗಳ ಹುಡುಕಾಟದಲ್ಲಿ ತೊಡಗಿದ್ದೆವು’’ ಎಂದು ವಿದ್ವಾನ್ ತಿಳಿಸಿದ್ದಾರೆ. ‘‘ಅಂತಹ ಮನೆಗಳ ವಿನ್ಯಾಸಗಳನ್ನು ಸೆಟ್ಗಳಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಅಷ್ಟೊಂದು ದೊಡ್ಡ ಮಟ್ಟದ ಸೆಟ್ಗಳನ್ನು ನಿರ್ಮಿಸಲು ಭಾರೀ ಬಜೆಟ್ ಅಗತ್ಯವಿದ್ದು, ಮರಾಠಿ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಅದು ಸಾಧ್ಯವಿಲ್ಲ. ಚಿತ್ರದಲ್ಲಿ ತೋರಿಸಲಾದ ಪುರಾತನ ಮನೆಗಳಲ್ಲಿ ಯಾವುದೇ ಅಧುನಿಕ ವಿನ್ಯಾಸಗಳ ಸೇರ್ಪಡೆಯಿದ್ದಲ್ಲಿ ನಾವು ಅದನ್ನು ಅಡಗಿಸಲು ಯತ್ನಿಸಿದ್ದೇವೆ ಅಥವಾ ಅವುಗಳನ್ನು ವಿಶುವಲ್ ಎಫೆಕ್ಟ್ (ದೃಶ್ಯ ಪರಿಣಾಮ)ಗಳ ಮೂಲಕ ಸ್ಕ್ರೀನ್ನಲ್ಲಿ ತೆಗೆದುಹಾಕಿದ್ದೇವೆ ಎಂದರು.
ಕಲಾ ಹಾಗೂ ವಸ್ತ್ರಾಲಂಕಾರ ವಿಭಾಗಗಳೂ ಕೂಡಾ 18ನೇ ಶತಮಾನದ ಕುರಿತಾದ ಮಾಹಿತಿಗಳನ್ನು ಕಲೆ ಹಾಕಿದ್ದವು. ಸಾಮಾನ್ಯವಾಗಿ ಆ ಕಾಲದಲ್ಲಿ ಬಳಕೆಯಾಗುತ್ತಿದ್ದ ಪೀಠೋಪಕರಣಗಳು, ದೀಪಾಲಂಕಾರ, ಉಡುಪುಗಳು ಹಾಗೂ ಚಿತ್ರಕಲೆಯ ಬಗ್ಗೆ ಅವು ಸಮಗ್ರ ಅಧ್ಯಯನ ನಡೆಸಿದ್ದವು.