ಟರ್ಕಿಯ ರಾಜಕೀಯ ತಲ್ಲಣಗಳನ್ನು ಸೆರೆ ಹಿಡಿವ ಹಿಮ
ಪುಸ್ತಕ ಪರಿಮಳ
ಅನುವಾದಕಿ: ಕೆ.ಎಸ್. ವೈಶಾಲಿ
‘ಸೂಜಿಯಿಂದ ಬಾವಿ ತೋಡುವುದು’ ಇದು ಟರ್ಕಿಶ್ ನುಡಿಗಟ್ಟು. ಒಬ್ಬ ಲೇಖಕನಲ್ಲಿರುವ ವಿಸ್ಮಯಕಾರಿ ಅಂಶವೆಂದರೆ ಸೂಜಿಯಿಂದ ಬಾವಿ ತೋಡುವ ಅವನ ತಾಳ್ಮೆ ಎಂದು ಟರ್ಕಿಷ್ ಲೇಖಕ ಪಾಮುಕ್ ಅಭಿಪ್ರಾಯ ಪಡುತ್ತಾನೆ. ಬಹುಶಃ ಹುತ್ತಗಟ್ಟದೆ ಚಿತ್ತ...ಎನ್ನುವ ಸಾಲನ್ನು ಅಡಿಗರು ಈ ಹಿನ್ನೆಲೆಯಲ್ಲೇ ಬರೆದಿರಬೇಕು. ನೊಬೆಲ್ ಪ್ರಶಸ್ತಿ ವಿಜೇತ ಟರ್ಕಿಷ್ ಲೇಖಕ ಒರ್ಹಾನ್ ಪಾಮುಕ್ ಬರಹಗಳೂ ಈ ತಾಳ್ಮೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಪಾಮುಕ್ರವರ ಕಾದಂಬರಿಗಳು ಜಗತ್ತಿನ 61 ಭಾಷೆಗಳಲ್ಲಿ ಅನುವಾದಗೊಂಡಿವೆ ಎನ್ನುವುದೇ ಅವರ ಬರಹದ ಹಿರಿಮೆಯನ್ನು ಹೇಳುತ್ತದೆ. ಇದೇ ಮೊದಲ ಬಾರಿಗೆ ಅವರ ‘ಸ್ನೋ’ ಕಾದಂಬರಿ ಕನ್ನಡಕ್ಕೆ ಅನುವಾದಗೊಂಡಿದೆ. ಖ್ಯಾತ ಸಂಗೀತ ಕಲಾವಿದೆ, ಲೇಖಕಿ ಕೆ. ಎಸ್. ವೈಶಾಲಿ ಈ ಮಹಾ ಕಾದಂಬರಿಯನ್ನು ‘ಸ್ನೋ’ ಹೆಸರಿನಲ್ಲಿ ಕನ್ನಡಕ್ಕೆ ಇಳಿಸಿದ್ದಾರೆ. ಸುಮಾರು 600 ಪುಟಗಳ ಈ ಮಹಾ ಕಾದಂಬರಿಯ ಅನುವಾದ ದೊಡ್ಡ ಸವಾಲೆಂದರೆ ಒಂದು ಸಂಸ್ಕತಿಯನ್ನು ಇನ್ನೊಂದು ಸಂಸ್ಕೃತಿಯ ಚಜೊತೆ ಸಮನ್ವಯ ಗೊಳಿಸುವುದು. ಇದೊಂದು ರಾಜಕೀಯ ಕಾದಂಬರಿಯೂ ಆಗಿರುವುದರಿಂದ, ಮಧ್ಯಪ್ರಾಚ್ಯದ ವರ್ತಮಾನವನ್ನು ಅರ್ಥೈಸಿಕೊಳ್ಳದೆ ಕಾದಂಬರಿಯನ್ನು ನಮ್ಮದಾಗಿಸಲು ಸಾಧ್ಯವಿಲ್ಲ. ಅನುವಾದಕಿ ಭಾರತದ ವರ್ತಮಾನ ರಾಜಕೀಯಕ್ಕೆ ಅನ್ವಯವಾಗುವಂತೆ ಯಶಸ್ವಿಯಾಗಿ ಹಿಮ ಕಾದಂಬರಿಯನ್ನು ಅನುವಾದಿಸಿದ್ದಾರೆ. ಕಾದಂಬರಿ ಓದಿ ಮುಗಿಸಿದಾಗ ಟರ್ಕಿಯಲ್ಲಿ ಏನು ನಡೆಯುತ್ತಿದೆಯೋ ಆ ಅಸ್ಮಿತೆಯ ಸವಾಲುಗಳು ಭಾರತವನ್ನು ಕಾಡುತ್ತಿರುವುದು ಮತ್ತು ರಾಜಕೀಯವಾಗಿ ಅದು ತನ್ನ ದುಷ್ಪರಿಣಾಮಗಳನ್ನು ಬೀರುತ್ತಿರುವುದು ನಮ್ಮ ಅರಿವಿಗೆ ಬರುತ್ತದೆ. ‘ಹಿಮ’ ಕಾದಂಬರಿ ಒರ್ಹಾನ್ ಪಾಮುಕ್ ಅವರ ಏಕೈಕ ರಾಜಕೀಯ ಕಾದಂಬರಿ. 2002ರಲ್ಲಿ ಇದು ಪ್ರಕಟಗೊಂಡಿತು. ಟರ್ಕಿಯ ರಾಜಕೀಯ ಬೆಳವಣಿಗೆಗಳಿಗೆ ಒಬ್ಬ ಬರಹಗಾರನಾಗಿ ಕಾಲ ಕಾಲಕ್ಕೆ ಪ್ರತಿಕ್ರಿಯಿಸುತ್ತಾ ಬಂದವರು ಪಾಮುಕ್. ಈ ಕಾದಂಬರಿಯ ಹುಟ್ಟಿಗೆ ಕಾರಣವನ್ನೂ ಅವರು ಸ್ಪಷ್ಟ ಪಡಿಸಿದ್ದಾರೆ ‘‘ಈ ಕಾದಂಬರಿ ನಾನು ಉದ್ದೇಶಪೂರ್ವಕವಾಗಿ ಬರೆದ ಮೊದಲ ಹಾಗೂ ಕೊನೆಯ ರಾಜಕೀಯ ಕಾದಂಬರಿ. ನನ್ನ ರಾಜಕೀಯ ನಿಲುವುಗಳನ್ನು ನಾನು ಪ್ರಕಟಿಸುತ್ತಲೇ ಬಂದಿದ್ದೇನೆ. ಒಂದು ಹಂತದಲ್ಲಿ ನನಗೆ ನಾನೇಕೆ ನನ್ನೆಲ್ಲ ರಾಜಕೀಯ ಚಿಂತನೆಗಳನ್ನು ಒಂದು ಕಾದಂಬರಿಯೊಳಗೆ ಸೇರಿಸಿ ನಿರಾಳವಾಗಿ ಬಿಡಬಾರದು? ಎನ್ನಿಸಿತು. ಆಗ ಹುಟ್ಟಿದ್ದೇ ಹಿಮ....’’ ಎಂದು ಅವರು ಒಂದೆಡೆ ಬರೆಯುತ್ತಾರೆ. ತನ್ನ ರಾಜಕೀಯ ಹೇಳಿಕೆಗಳಿಗಾಗಿ ಹಲವು ಬಾರಿ ವಿವಾದಕ್ಕೊಳಗಾದವರು. ಟರ್ಕಿ ಎದುರಿಸುತ್ತಿರುವ ವಿವಿಧ ರಾಜಕೀಯ ಸವಾಲುಗಳನ್ನು ಅವರು ಸೂಕ್ಷ್ಮವಾಗಿ ಗ್ರಹಿಸಿದ್ದಾರೆ. ಒಂದೆಡೆ ಉಗ್ರವಾದ, ಇನ್ನೊಂದೆಡೆ ಪ್ರಜಾಪ್ರಭುತ್ವ ಮತ್ತು ಅದರ ಆಷಾಢಭೂತಿತನ, ಮಗದೊಂದೆಡೆ ಸವಕಲಾಗಿ ಜನರನ್ನು ತಲುಪಲು ವಿಫಲವಾಗುತ್ತಿರುವ ಎಡಪಂಥೀಯ ಚಿಂತನೆ. ಇವೆಲ್ಲವುಗಳು ಟರ್ಕಿಯ ಮೇಲೆ ಮಾಡುತ್ತಿರುವ ಪರಿಣಾಮಗಳನ್ನು ಕಾದಂಬರಿ ಚರ್ಚಿಸುತ್ತದೆ. ಸ್ವಿಸ್ ಪತ್ರಿಕೆಯೊಂದಕ್ಕೆ ಪಾಮುಕ್ ನೀಡಿದ ಸಂದರ್ಶನದಲ್ಲಿ ಟರ್ಕಿಯಲ್ಲಿ ನಡೆದ ಆಂತರಿಕ ಬಂಡಾಯಗಳು, ಆಟೋಮನ್ನರ ಪ್ರಭುತ್ವದಲ್ಲಿ ನಡೆದ ಆರ್ಮೇನಿಯನ್ನರ ಸಾಮೂಹಿಕ ಹತ್ಯಾಕಾಂಡಗಳನ್ನು ಅವರು ಪ್ರಸ್ತಾಪ ಮಾಡುತ್ತಾರೆ. ಇದು ಅವರನ್ನು ಟರ್ಕಿಯಲ್ಲಿ ವಿವಾದಿತ ವ್ಯಕ್ತಿಯನ್ನಾಗಿಸಿತು. ಟರ್ಕಿಶ್ ಕಾನೂನಿನ ಅನುಚ್ಛೇದ 301ರ ಪ್ರಕಾರ ಟರ್ಕಿಷ್ ಸಂಸ್ಕೃತಿಯನ್ನು ಹೀಗಳೆದಿದ್ದಾರೆನ್ನುವ ಆರೋಪದ ಮೇರೆಗೆ ಅವರ ಮೇಲೆ ಕ್ರಮ ಜರುಗಿಸಲಾಯಿತು. ಇದು ಪಾಮುಕ್ ಎಂದಲ್ಲ, ಇನ್ನೂ ಹಲವು ಲೇಖಕರು ಸರಕಾರದಿಂದ ಇಂತಹ ಕಾನೂನು ಕ್ರಮ ಎದುರಿಸಿದ್ದಾರೆ. ಮೂಲಭೂತವಾದಿಗಳು ಮತ್ತು ಉಗ್ರ ರಾಷ್ಟ್ರೀಯತಾವಾದಿಗಳು ಹೇಗೆ ಟರ್ಕಿಯ ಪ್ರಜಾಪ್ರಭುತ್ವವನ್ನು ನಿಯಂತ್ರಿಸುತ್ತಿದ್ದಾರೆ ಎನ್ನುವುದನ್ನು ಇದು ಹೇಳುತ್ತದೆ. ಈ ರಾಜಕೀಯ ಹಿನ್ನೆಲೆಯಲ್ಲಿಯೇ ಹಿಮ ಕಾದಂಬರಿ ತೆರೆದುಕೊಳ್ಳುತ್ತದೆ. ಅಸಹಿಷ್ಣುತೆ, ಜನಾಂಗೀಯ ದ್ವೇಷ, ಹಿಂಸೆ ಕಗ್ಗೊಲೆಗಳೇ ಕಾದಂಬರಿಯ ಕೇಂದ್ರ ಬಿಂದು. ಬಹುಶಃ ಟರ್ಕಿಯ ಆ ಅಸಹಿಷ್ಣುತೆಯ ಆದಿಯಲ್ಲಿ ಭಾರತ ಬಂದು ನಿಂತಿದೆ. ಟರ್ಕಿಯ ಹಾದಿಯಲ್ಲೇ ಭಾರತ ಹೆಜ್ಜೆಯಿಡುತ್ತಿದೆ. ಆದುದರಿಂದಲೇ ಪಾಮುಕ್ ಕಾದಂಬರಿ ಭಾರತೀಯ ಭಾಷೆಗಳಿಗೆ ಹೆಚ್ಚು ಹೆಚ್ಚು ಅನುವಾದಗೊಳ್ಳುವ ಅಗತ್ಯವಿದೆ.
ಈ ಕಾದಂಬರಿ ಕಾರ್ಸ್ ಎನ್ನುವ ನಗರವನ್ನು ಕೇಂದ್ರವಾಗಿ ಸುತ್ತುತ್ತದೆ. ಕಾರ್ಸ್ ಪದದ ಅರ್ಥ ಹಿಮ. ಟರ್ಕಿಯನ್ನು ಆವರಿಸಿಕೊಂಡ ರಾಜಕೀಯ ಮಬ್ಬಿಗೆ ಈ ಹಿಮ ರೂಪಕವೂ ಹೌದು. ಒಂದು ಕಾಲದಲ್ಲಿ ವಾಣಿಜ್ಯವಾಗಿ ಉತ್ಕರ್ಷವನ್ನು ಕಂಡಿದ್ದ ಕಾರ್ಸ್ ನಗರ ಇದೀಗ ಬಡತನ ಕ್ಷೋಭೆಯಿಂದ ನರಳುತ್ತಿರುವ ಅತ್ಯಂತ ಹಿಂದುಳಿದ ನಗರ. ರಾಜಕೀಯ ಗೊಂದಲಗಳು, ಧಾರ್ಮಿಕತೆಯ ಪ್ರಭಾವಗಳು ಕಾರ್ಸ್ ನ್ನು ಚಿಂದಿಯಾಗಿಸಿವೆ. ಇಂತಹ ಸಂದರ್ಭದಲ್ಲಿ ಕಾದಂಬರಿಯ ನಾಯಕ ಕರೀಂ ಅಲಕುಸೋಗ್ಲು ಯಾನೆ ಕ ನಗರಕ್ಕೆ ಬರುತ್ತಾನೆ. ಕರೀಂ ರಾಜಕೀಯ ಕೈದಿಯಾಗಿ ಟರ್ಕಿಯಿಂದ ಗಡಿಪಾರಾದವನು. ತನ್ನ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲೆಂದು ಆತ ಬಂದಿದ್ದಾನೆ. ಇದೇ ಸಂದರ್ಭದಲ್ಲಿ ಕಾರ್ಸ್ ನಗರದ ನಗರಸಭಾ ಚುನಾವಣೆಯನ್ನು ಪತ್ರಿಕೆಯೊಂದಕ್ಕೆ ವರದಿ ಮಾಡುವ ಹೊಣೆಗಾರಿಕೆಯೂ ಅವನ ಮೇಲೆ ಬೀಳುತ್ತದೆ. ಇದಲ್ಲದೆ ರಾಜಕೀಯೇತರವಾದ ಒಂದು ಮಧುರ ಉದ್ದೇಶವೂ ಅವನಲ್ಲಿ ಇತ್ತು. ಅದು ತನ್ನ ಸಹಪಾಠಿ ಐಪೆಕ್ಳನ್ನು ಸಂದಿಸಿ ತನ್ನ ಪ್ರೇಮವನ್ನು ನಿವೇದಿಸಿ ಆಕೆಯನ್ನು ವಿವಾಹವಾಗುವುದು. ಕಥಾನಾಯಕ ‘ಕ’ ಇಲ್ಲಿ ಪ್ರಜಾಸತ್ತೆಯ ಹೆಸರಿನಲ್ಲಿ ಪ್ರಭುತ್ವ ಮತ್ತು ಉಗ್ರವಾದಿಗಳನ್ನು ಜೊತೆ ಜೊತೆಯಾಗಿ ಎದುರಿಸಬೇಕಾಗುತ್ತದೆ. ರಾಜಕೀಯ ಕಾದಂಬರಿ ಇದಾಗಿದ್ದರೂ ಎಲ್ಲೂ ಘಟನೆಗಳನ್ನು, ವ್ಯಕ್ತಿಗಳನ್ನು ಆತ ಕಪ್ಪು ಬಿಳುಪಾಗಿ ನೋಡಿಲ್ಲ. ಉಗ್ರವಾದಿಯ ಪಾತ್ರವನ್ನು ಚಿತ್ರಿಸುವಾಗಲೂ ಅವರ ಒಳಗಿನ ತಳಮಳಗಳನ್ನು ಕಟ್ಟಿಕೊಡಲು ಕಾದಂಬರಿ ಪ್ರಯತ್ನಿಸುತ್ತದೆ. ಪಾಶ್ಚಿಮಾತ್ಯರ ಹೇರಿಕೆ ಹೇಗೆ ಟರ್ಕಿಯೊಳಗೆ ಅಭದ್ರತೆಯನ್ನು ಸೃಷ್ಟಿಸಿದೆ ಮತ್ತು ಆ ಕಾರಣದಿಂದಲೇ ಟರ್ಕಿಯೊಳಗೆ ಉಗ್ರವಾದ ಬೆಳೆಯುತ್ತಿದೆ ಎನ್ನುವುದನ್ನು ಕಾದಂಬರಿ ವಿವರಿಸುತ್ತದೆ. ಇಲ್ಲಿ ಉಗ್ರ ಧಾರ್ಮಿಕವಾದಿ ಬ್ಲೂ ಕೂಡ ಟರ್ಕಿಯ ಕುರಿತಂತೆ, ಅದರ ಸಾಂಸ್ಕೃತಿಕ ಅಸ್ಮಿತೆಯ ಕುರಿತಂತೆ ಕಾಳಜಿಯನ್ನು ಹೊಂದಿದ್ದಾನೆ. ಬ್ಲೂ ಒಬ್ಬ ಕವಿ ಹೃದಯಿ. ಫಿರ್ದೌಸಿಯ ಶಾ ನಾಮೆ ಕಾವ್ಯ ಆತನಿಗೆ ಬಹಳ ಇಷ್ಟ. ಇಂತಹ ಕಾವ್ಯದ ಮೂಲಕ ಟರ್ಕಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ಬದಲು, ಪಾಶ್ಚಾತ್ಯರು ಹೇರುತ್ತಿರುವ ಈಡಿಪಸ್, ಮ್ಯಾಕ್ಬೆತ್ ಸಾಹಿತ್ಯದಲ್ಲಿ ಟರ್ಕಿ ಕಳೆದು ಹೋಗುತ್ತಿದೆ ಎನ್ನುವ ಆತಂಕ ಅವನಿಗಿದೆ. ಟರ್ಕಿ ರಾಜಕೀಯವಾಗಿ ಯಾವ ನಿಲುವನ್ನು ತಾಳಬೇಕು ಎನ್ನುವುದನ್ನು ಹೇಳುವುದರಲ್ಲಿ ಪಾಮುಕ್ ಈ ಕಾದಂಬರಿಯಲ್ಲಿ ಯಶಸ್ವಿಯಾಗಿದ್ದಾರೆ. ಉಗ್ರಗಾಮಿಗಳ ಹಾದಿಯನ್ನು ವಿಶ್ಲೇಷಣಾ ಕಣ್ಣಿನಿಂದ ಕಾದಂಬರಿ ನೋಡಿದೆ. ಇದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವವರ ಆಷಾಢಭೂತಿತನವನ್ನು ಖಂಡಿಸುತ್ತಲೇ, ಅದರ ಜೊತೆಗೆ ಸಮನ್ವಯ ಸಾಧಿಸುವ ದಾರಿಯನ್ನು ಪಾಮುಕ್ ಹುಡುಕುತ್ತಾರೆ. ಆದುದರಿಂದಲೇ ಪಾಮುಕ್ ಟರ್ಕಿ ಯುರೋಪಿಯನ್ ಒಕ್ಕೂಟದ ಭಾಗವಾಗುವುದನ್ನು ಬೆಂಬಲಿಸುತ್ತಾರೆ. ತೀವ್ರವಾದವನ್ನು ಬೆಂಬಲಿಸದ, ಧಾರ್ಮಿಕ ಮತ್ತು ಶಾಂತಿಪ್ರಿಯ ಪ್ರಜಾಪ್ರಭುತ್ವವಾದಿ ಮುಸ್ಲಿಮರ ಟರ್ಕಿಯನ್ನು ಈ ಕಾದಂಬರಿಯಲ್ಲಿ ಪಾಮುಕ್ ಎತ್ತಿ ಹಿಡಿಯುತ್ತಿದ್ದಾರೆ.
ಭಾರತದಲ್ಲಿ ತಲೆಯೆತ್ತಿರುವ ರಾಷ್ಟ್ರೀಯವಾದ ಹೇಗೆ ಚಿಂತಕರು ಮತ್ತು ಬರಹಗಾರರ ಮೇಲೆ ದಾಳಿ ನಡೆಸತೊಡಗಿದೆ ಎನ್ನುವುದನ್ನು ನೋಡುವಾಗ ಕಾರ್ಸ್ ಎನ್ನುವುದು ಭಾರತದ ಯಾವುದೋ ಒಂದು ಭಾಗವೇ ಆಗಿದೆ ಎನ್ನುವುದು ಹೊಳೆಯುತ್ತದೆ. ಟರ್ಕಿಯಲ್ಲಿ ಸಂಭವಿಸುತ್ತಿರುವುದು ಭಾರತದಲ್ಲಿ ಘಟಿಸತೊಡಗಿವೆ. ಜಾಗತಿಕವಾಗಿ ಇಂತಹದೊಂದು ಉಗ್ರವಾದಿ ರಾಷ್ಟ್ರೀಯವಾದ ನಿಧಾನಕ್ಕೆ ವಿಸ್ತರಿಸಿಕೊಳ್ಳುತ್ತಾ ಇರುವುದರಿಂದ ಹಿಮ ಒಂದು ಸಾರ್ವಕಾಲಿಕ ಕಾದಂಬರಿಯಾಗಿದೆ. ಟರ್ಕಿಷ್ ಭಾಷೆಯಲ್ಲಿರುವ ಈ ಕಾದಂಬರಿಯನ್ನು ಅವರ ಸಹಪಾಠಿ ವೌರೀನ್ ಫ್ರೀಲಿ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಇಂಗ್ಲಿಷ್ನಿಂದ ಅಷ್ಟೇ ನಾಜೂಕಾಗಿ, ಸೂಕ್ಷ್ಮ ಕೆಡದಂತೆ ವೈಶಾಲಿ ಅವರು ಕನ್ನಡಕ್ಕಿಳಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಅವರಿಗಿರುವ ಹಿಡಿತ ಮಾತ್ರವಲ್ಲ, ಸ್ವತಃ ಸಂಗೀತ ಕಲಾವಿದೆಯೂ ಆಗಿರುವುದರಿಂದ ಟರ್ಕಿಯ ಜನರ ಎದೆಯ ನಾದವನ್ನು ಎದೆಯೊಳಗಿಸಿ, ಬಳಿಕ ಕನ್ನಡಕ್ಕಿಳಿಸಿದ್ದಾರೆ. ಸೃಷ್ಟಿ ಪಬ್ಲಿಕೇಶನ್ ಈ ಮಹಾಕಾದಂಬರಿಯನ್ನು ಹೊರತಂದಿದೆ. ಒಟ್ಟು 600 ಪುಟಗಳ ಈ ಕೃತಿಯ ಮುಖಬೆಲೆ 550 ರೂ. ಆಸಕ್ತರು 98450 96668 ದೂರವಾಣಿಯನ್ನು ಸಂಪರ್ಕಿಸಬಹುದು.