ಓ ಮೆಣಸೇ…
ಕರ್ನಾಟಕ ಸಮ್ಮಿಶ್ರ ಸರಕಾರದ ನಾಟಕ ನೋಡಿ ಇಡೀ ದೇಶವೇ ನಗುತ್ತಿದೆ. - ನರೇಂದ್ರ ಮೋದಿ, ಪ್ರಧಾನಿ
ಸದ್ಯಕ್ಕೆ ನಿಮ್ಮ ನಿಷ್ಕ್ರಿಯತೆಯಿಂದ ಇಡೀ ಭಾರತ ಅಳುವಂತಾಗಿದೆ.
---------------------
ಫೇಲ್ ಆದ ವ್ಯಕ್ತಿ (ರಾಹುಲ್ ಗಾಂಧಿ) ಎಂದಿಗೂ ಟಾಪರ್ (ನರೇಂದ್ರ ಮೋದಿ)ನ್ನು ವಿರೋಧಿಸುತ್ತಾನೆ.
- ಅರುಣ್ ಜೇಟ್ಲಿ, ಕೇಂದ್ರ ಸಚಿವ
ಯಾವುದರಲ್ಲಿ ಟಾಪರ್ ಎನ್ನುವುದನ್ನೂ ಹೇಳಿ ಬಿಡಿ.
---------------------
ಹಿಂದೂಗಳಿಂದಲೇ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ
- ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಸಂಸ್ಥಾಪಕ
ಈವರೆಗೆ ಹಿಂದೂಧರ್ಮಕ್ಕೆ ನೀವು ಮಾಡಿದ ಅನ್ಯಾಯ ಗಮನಿಸುತ್ತಿರುವಾಗ ಇದು ನಿಜ.
---------------------
ಒಪ್ಪಿಗೆ ನೀಡಿದಲ್ಲಿ ಭಾರತದ ಮುಸ್ಲಿಮರೇ ಸೇರಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತಾರೆ
- ಝಮೀರ್ ಅಹ್ಮದ್, ಸಚಿವ
ಅದು ಮುಸ್ಲಿಮರು ನೀಡಬೇಕಾದ ಹೇಳಿಕೆ.
---------------------
ವಿಧಾನ ಸೌಧ ದನದ ಜಾತ್ರೆಯಂತೆ ಕಾಣುತ್ತಿದೆ
- ಎಚ್. ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
ದೇವೇಗೌಡರನ್ನು ದನಕಾಯುವವನು ಎಂದು ಹೇಳುತ್ತಿದ್ದೀರಾ?
---------------------
ರಫೇಲ್ ಒಪ್ಪಂದ ಮನೆಯಲ್ಲಿಯೇ ನಡೆಸಿದ ಲೂಟಿಯಂತೆ
- ವೀರಪ್ಪ ಮೊಯ್ಲಿ, ಸಂಸದ
ನೀವು 70 ವರ್ಷದಲ್ಲಿ ನಡೆಸಿದ್ದನ್ನು ಬರೇ ಐದು ವರ್ಷದಲ್ಲಿ ನಡೆಸಲು ಯತ್ನಿಸುತ್ತಿದ್ದಾರೆ.
---------------------
ಬಿಜೆಪಿ ನಿಧಿ ಸಂಗ್ರಹಣೆಗೆ ಧನಿಕರನ್ನು ಅವಲಂಬಿಸುವುದು ಬೇಡ
- ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಅಂದರೆ ಬಡವರನ್ನೇ ಸುಲಿಯೋಣ ಅಂತ ಇರಬೇಕು.
---------------------
ಇತ್ತೀಚಿನ ಬೆಳವಣಿಗೆಗಳಿಂದ ಜನರು ನಮ್ಮನ್ನು ಕಳ್ಳರು, ಕಳ್ಳರು ಎಂದು ಕರೆಯುವಂತಾಗಿದೆ
- ಡಿ.ಕೆ. ಶಿವಕುಮಾರ್, ಸಚಿವ
ಕಳ್ಳರನ್ನು ಕಳ್ಳರು ಎಂದು ಕರೆಯುವುದು ತಪ್ಪೇ?
---------------------
ಸಮ್ಮಿಶ್ರ ಸರಕಾರಗಳೂ ಉತ್ತಮ ಆಡಳಿತ ನೀಡಲು ಸಾಧ್ಯ
- ದೇವೇ ಗೌಡ, ಮಾಜಿ ಪ್ರಧಾನಿ
ಮತ್ತೇಕೆ ನೀಡುತ್ತಿಲ್ಲ?
---------------------
ಹಿಂದೂ ಧರ್ಮ ನಪುಂಸಕತನ ಬೋಧಿಸುವುದಿಲ್ಲ
- ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ
ಮತ್ತೇಕೆ ಹಾಗೆ ವರ್ತಿಸುತ್ತಿದ್ದೀರಿ?
---------------------
ರಾಜಕೀಯ ನಾಯಕರ ನಡವಳಿಕೆಯಿಂದ ಯಾವುದೇ ಮಗು ಕೂಡಾ ತಾನು ರಾಜಕಾರಣಿಯಾಗುತ್ತೇನೆಂದು ಹೇಳುವುದಿಲ್ಲ
- ಪ್ರಿಯಾಂಕ್ ಖರ್ಗೆ, ಸಚಿವ
ನೀವೂ ರಾಜಕೀಯ ನಾಯಕರ ಮಗನೇ ಅಲ್ಲವೇ?
---------------------
ನಾವು ವಿಜ್ಞಾನದ ದಾಸರಾಗದೆ ವಿಜ್ಞಾನ ನಮ್ಮ ದಾಸ ಆಗಬೇಕು
- ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ
ಒಟ್ಟಿನಲ್ಲಿ ವಿಜ್ಞಾನ ಖಾವಂದರ ಪಾದ ಬುಡದಲ್ಲಿರಬೇಕು.
---------------------
ನನ್ನಲ್ಲೀಗ ಅತ್ಯಾಚಾರಕ್ಕೆ ಒಳಗಾದ ಭಾವನೆ ಕಾಡುತ್ತಿದೆ
- ಕೆ.ಆರ್. ರಮೇಶ್ ಕುಮಾರ್, ಸ್ಪೀಕರ್
ನಮ್ಮಲ್ಲಿ ಅದರ ಸಿಡಿ ಇದೆ ಎಂದರಂತೆ ಅತ್ಯಾಚಾರಗೈದ ಯಡಿಯೂರಪ್ಪ ತಂಡ.
---------------------
(ಇಂದಿನ ರಾಜಕೀಯದಿಂದ) ನಮ್ಮ ಪತ್ನಿ, ಮಕ್ಕಳೇ ನಮ್ಮನ್ನು ಸಂಶಯದಿಂದ ನೋಡುವ ಸ್ಥಿತಿ ಬಂದಿದೆ
- ಶಿವಲಿಂಗೇ ಗೌಡ, ಶಾಸಕ ಕಳ್ಳತನ ಮನೆಯಲ್ಲೂ ಶುರು ಮಾಡಿದ ಹಾಗಿದೆ.
---------------------
ದೇಶ ಎದುರಿಸುತ್ತಿರುವ ಕೆಲವು ಸಮಸ್ಯೆಗಳಿಗೆ ಪ್ರಧಾನಿ ಮೋದಿಯೇ ಮದ್ದು
- ರಾಜನಾಥ್ ಸಿಂಗ್, ಕೇಂದ್ರ ಸಚಿವ
ಸದ್ಯಕ್ಕೆ ದೇಶದ ಪಾಲಿಗೆ ಅವರು ಗುದ್ದು.
---------------------
ಪ್ರಧಾನಿ ನರೇಂದ್ರ ಮೋದಿ ಪಾಕ್ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ
- ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ಮುಂದಿನ ಬಾರಿ ಪಾಕಿಸ್ತಾನದಲ್ಲಿ ಚುನಾವಣೆಗೆ ನಿಲ್ಲುವ ಆಲೋಚನೆಯಿರಬೇಕು.
---------------------
ಮಹಿಳೆ ಪುರುಷರಿಗೆ ಸಮಾನಳಲ್ಲ
- ಭಾರತಿ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ
ಮಹಿಳೆ ಪುರುಷರಿಗಿಂತಲೂ ಹೆಚ್ಚು ಶಕ್ತಿವಂತಳು.
---------------------
ನಮಗೆ ಇಡೀ ದೇಶವೇ ಒಂದು ಪರಿವಾರ
- ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಇಡೀ ದೇಶವೇ ನಮ್ಮ ಬಾಳೆಯೆಲೆ ಎನ್ನಲಿಲ್ಲ ಪುಣ್ಯಕ್ಕೆ.
---------------------
ಪರಿಸ್ಥಿತಿಗೆ ಅನುಗುಣವಾಗಿ ರಾಜಕೀಯ ವಿದ್ಯಮಾನಗಳನ್ನು ನಿರ್ವಹಿಸುವ ಶಕ್ತಿ ನನಗಿದೆ
- ಕುಮಾರಸ್ವಾಮಿ, ಮುಖ್ಯಮಂತ್ರಿ
ಆ ಶಕ್ತಿ ನಿಮ್ಮ ಕಣ್ಣೀರಿನಲ್ಲಿದೆ.
---------------------
ನರೇಂದ್ರ ಮೋದಿಯವರೇ ಮುಂದಿನ ಬಾರಿಯೂ ಪ್ರಧಾನಿಯಾಗಲಿ
- ಮುಲಾಯಂಸಿಂಗ್ ಯಾದವ್, ಎಸ್ಪಿ ನಾಯಕ
ಮುಂದಿನ ರಾಷ್ಟ್ರಪತಿಯಾಗುವುದಕ್ಕೆ ಹಾಕಿದ ದಾಳವೇ?
---------------------
ಯಾವುದು ಹೇಗಿರಬೇಕೋ, ಹಾಗೆಯೇ ಇರಬೇಕಾದ್ದು ನಿಜವಾದ ಧರ್ಮ
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಮಹಿಳೆಯ ಕುರಿತಂತೆ ನೀಡಿದ ಹೇಳಿಕೆ.
---------------------
ಮೋದಿ ಸರಕಾರದ ಕಾರ್ಯ ನಿರ್ವಹಣೆಗೆ ‘ಟ್ರೈನ್ 18 ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ಅತ್ಯುತ್ತಮ ಉದಾಹರಣೆ
- ಸೀತಾರಾಮ್ ಯೆಚೂರಿ, ಸಿಪಿಎಂ ನಾಯಕ
ಒಟ್ಟಿನಲ್ಲಿ ದೇಶವೇ ಹಳಿ ತಪ್ಪಿ ಬಿದ್ದಿದೆ.
---------------------