ಮಂಗಳೂರು ವಿವಿ ಪದವಿ ಪಠ್ಯ ಪುಸ್ತಕಗಳಲ್ಲಿ ಬ್ಯಾರಿ ಕವನಗಳು
ಮಂಗಳೂರು, ಫೆ.21: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಮೂರು ಬ್ಯಾರಿ ಕವನಗಳು ಪಠ್ಯವಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯು ಹತ್ತಾರು ಆಡು ಭಾಷೆಗಳ ತವರೂರು ಮತ್ತು ಇಲ್ಲಿನ ಎಲ್ಲಾ ಆಡು ಭಾಷೆಗಳಿಗೆ ಅವುಗಳದ್ದೇ ಆದ ವೈಶಿಷ್ಟ್ಯತೆಗಳಿವೆ. ಸ್ಥಳೀಯ ಭಾಷೆಗಳಲ್ಲಿ ಸಾಹಿತ್ಯ ಬೆಳವಣಿಗೆಯ ದೃಷ್ಟಿಯಲ್ಲಿ ಇದೊಂದು ಮಹತ್ವದ ಅಂಶವಾಗಿದೆ.
''ದಕ್ಷಿಣ ಕನ್ನಡ ಜಿಲ್ಲೆಯು ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದರೂ ಜಿಲ್ಲೆಯಲ್ಲಿ ಕನ್ನಡ ಮಾತೃಭಾಷಿಕರಿಗಿಂತ ಹೆಚ್ಚಾಗಿ ಇತರ ಭಾಷಿಕರೇ ಇರುವುದು ಇಲ್ಲಿನ ವೈಶಿಷ್ಟ್ಯ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿ, ಹವ್ಯಕ, ಅರೆಬಾಸೆ ಮತ್ತು ಕೊಡವ ಭಾಷೆಯನ್ನು ಪಠ್ಯಗಳಲ್ಲಿ ಅಳವಡಿಸಿ ಅವುಗಳಿಗೆ ಮಹತ್ವ ನೀಡುವಂತಹ ಕಾರ್ಯವನ್ನು ವಿಶ್ವವಿದ್ಯಾನಿಲಯ ಪಠ್ಯ ಪುಸ್ತಕ ಮಂಡಳಿ ಎತ್ತಿಕೊಂಡಿದೆ. ಈ ನಿಟ್ಟಿನಲ್ಲಿ ವಿವಿಧ ಪಠ್ಯಪುಸ್ತಕಗಳಲ್ಲಿ ವಿವಿಧ ಭಾಷೆಯ ಸಾಹಿತ್ಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ'' ಎಂದು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ.ಎ.ಎಂ.ಖಾನ್ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಬ್ಯಾರಿ ಎಂದು ಕರೆಸಿಕೊಳ್ಳಲು ಹಿಂಜರಿಯುತ್ತಿದ್ದ ಬ್ಯಾರಿಗಳು ಇಂದು ಎಲ್ಲಾ ಹಿಂಜರಿಕೆಗಳನ್ನು ಒಗೆದೆಸೆದು ಬ್ಯಾರಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಪ್ರಾರಂಭಿಸಿದ್ದರ ಪರಿಣಾಮವಾಗಿ ಕರ್ನಾಟಕ ಸರಕಾರವು ಬ್ಯಾರಿ ಸಾಹಿತ್ಯ ಅಕಾಡಮಿ, ಬ್ಯಾರಿ ಅಧ್ಯಯನ ಪೀಠ ಮತ್ತು ವಿಶ್ವವಿದ್ಯಾನಿಲಯದ ಪಠ್ಯಗಳಲ್ಲಿ ಬ್ಯಾರಿ ಭಾಷೆಗೆ ಪ್ರಾತಿನಿಧ್ಯ ನೀಡುವಂತಾಗಿದೆ ಎಂದು ಬ್ಯಾರಿ ಆಂದೋಲನದ ಪ್ರಮುಖರಲ್ಲೊಬ್ಬರೂ 'ಮೇಲ್ತೆನೆ' ಬ್ಯಾರಿ ಲೇಖಕ ಮತ್ತು ಕಲಾವಿದರ ಕೂಟದ ಗೌರವಾಧ್ಯಕ್ಷ ಅಲಿಕುಂಞಿ ಪಾರೆ ತಿಳಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದ ಬಿ.ಎ. ಪದವಿಯ ನಾಲ್ಕನೇ ಚಾತುರ್ಮಾಸದ 'ನುಡಿಮಾಲೆ' ಎಂಬ ಕನ್ನಡ ಪಠ್ಯಪುಸ್ತಕದಲ್ಲಿ ಹಿರಿಯ ಬ್ಯಾರಿ ಕವಿ ಹುಸೈನ್ ಕಾಟಿಪಳ್ಳರವರ ಕವನ "ಬ್ಯಾರಿಙ ನಙ ಬ್ಯಾರಿಙ"(ಬ್ಯಾರಿಗಳು ನಾವು ಬ್ಯಾರಿಗಳು) ಎಂಬ ಬ್ಯಾರಿ ಸಮುದಾಯದ ವೈಶಿಷ್ಟ್ಯ ಸಾರುವ ಕವನವಿದೆ.
ಬಿ.ಕಾಂ. ಪದವಿಯ ನಾಲ್ಕನೇ ಚಾತುರ್ಮಾಸದ 'ನುಡಿಮಂತ್ರ' ಎಂಬ ಪಠ್ಯಪುಸ್ತಕದಲ್ಲಿ ಬ್ಯಾರಿ, ತುಳು ಮತ್ತು ಕನ್ನಡ ಲೇಖಕ, ಕತೆಗಾರ ಹಂಝ ಮಲಾರ್ ಅವರ "ಮಳೆ ನಿನ್ನೈಲ್ ಪಿನ್ನೆ" (ಮಳೆ ನಿಂತ ಮೇಲೆ) ಎಂಬ ಮಳೆಯ ಲೀಲೆ ಮತ್ತು ಜನರ ಪ್ರತಿಕ್ರಿಯೆಯನ್ನು ವರ್ಣಿಸುವ ಕವನವಿದೆ.
ಬಿ.ಎಸ್ಸಿ, ಬಿ.ಎಚ್. ಆರ್.ಡಿ. (ಮಾನವ ಸಂಪನ್ಮೂಲ ಅಭಿವೃದ್ಧಿ) ಮತ್ತು ಬಿ.ಎಫ್.ಎನ್.ಡಿ.(ಫುಡ್ ನ್ಯೂಟ್ರಿಷನ್ ಮತ್ತು ಡಯಟಿಕ್ಸ್) ಪದವಿಯ ನಾಲ್ಕನೇ ಚಾತುರ್ಮಾಸದ 'ನುಡಿದೀಪ' ಎಂಬ ಪಠ್ಯ ಪುಸ್ತಕದಲ್ಲಿ ಯುವ ಬ್ಯಾರಿ ಮತ್ತು ಕನ್ನಡ ಕವಯತ್ರಿ ಮಿಸ್ರಿಯಾ ಐ.ಪಜೀರ್ ಅವರ "ನೊಂಬಲ" (ಹೆಣ್ಣೊಬ್ಬಳ ಸ್ವಗತಃ) ಎಂಬ ಸ್ತ್ರೀವಾದಿ ನೆಲೆಯ ಕವನವಿದೆ. ಈ ಕವನದಲ್ಲಿ ಬ್ಯಾರಿ ಸಮುದಾಯದ ಬಡ ಹೆಣ್ಣುಮಕ್ಕಳ ಬದುಕಿನ ಬವಣೆಯ ಚಿತ್ರಣವಿದೆ.
ಈ ಮೂರೂ ಕವಿಗಳು ತಮ್ಮ ಕವನಗಳನ್ನು ಕನ್ನಡದಲ್ಲೂ ಬರೆದಿರುವುದರಿಂದ ಅದನ್ನು ಬ್ಯಾರಿಯೇತರ ಭಾಷಿಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅರ್ಥೈಸಲು ಸುಲಭವಾಗುತ್ತದೆ. ಒಂದು ಪುಟದಲ್ಲಿ ಮೂಲ ಬ್ಯಾರಿ ಕವನವನ್ನು ಪ್ರಕಟಿಸಲಾಗಿದ್ದರೆ, ಮುಂದಿನ ಪುಟದಲ್ಲಿ ಅದೇ ಕವನದ ಕನ್ನಡ ಅನುವಾದವಿದೆ. ಸದ್ರಿ ಕವನಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಕನ್ನಡದಲ್ಲೇ ಇವೆ.