ಜಾದೂ ರಾಜಕಾರಣಕ್ಕೆ ಮುಖಾಮುಖಿಯಾಗಿ
ಜನರನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು ಚುನಾವಣೆಯ ಚರ್ಚಾ ವಿಷಯವಾಗಿಸಬೇಕಾಗಿದೆ. ಜಾತಿ, ಮತ ಮತ್ತು ಭಾಷೆ ಮುಂತಾದ ಭಾವನಾತ್ಮಕ ಉದ್ರೇಕಕಾರಿ ವಿಷಯಗಳಿಗೆ ಬಲಿಯಾಗದೆ ಉಳಿಯಬೇಕಾಗಿದೆ. ಈ ಹೊಣೆಗಾರಿಕೆ ಯುವಜನತೆಯ ಮೇಲಿದೆ. ಜನರನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು 2019ರ ಚುನಾವಣೆಯಲ್ಲಿ ರಾಜಕಾರಣಕ್ಕೆ ಮುಖಾಮುಖಿ ಮಾಡಲೋಸಗ ರಾಷ್ಟ್ರೀಯ ಮಟ್ಟದಲ್ಲಿ I CAN ಹಬ್ಬುತ್ತಿದೆ- ಪಕ್ಷಾತೀತವಾಗಿ, ಸಮುದಾಯದ ಧ್ವನಿಯಾಗಿ. ಇದೇ ಕರ್ನಾಟಕದಲ್ಲಿ ‘ದೇಶಕ್ಕಾಗಿ ನಾವು’ ಹೆಸರಲ್ಲಿ ಚಿಗುರತೊಡಗಿದೆ. ಎಲ್ಲರೂ, ಮುಖ್ಯವಾಗಿ ನಾಳೆ ಬಾಳಿ ಬದುಕ ಬೇಕಾದ ಯುವಜನತೆ ‘ದೇಶಕ್ಕಾಗಿ ನಾವು’ ಜೊತೆ ಹೆಜ್ಜೆ ಹಾಕಬೇಕಾಗಿದೆ.
ಮುಖಾಮುಖಿಯಾಗುವ ಮೊದಲಿಗೆ ರೈತ ಸಂಘದ ಆರಂಭದ ಕಾಲ ನೆನಪಿಸಿಕೊಳ್ಳುವೆ. ಆ ಕಾಲಘಟ್ಟದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ವೈಚಾರಿಕ ಪ್ರಖರತೆ ಎದ್ದು ಕಾಣುತ್ತಿತ್ತು. ಸ್ಥಳೀಯ ಸಮಸ್ಯೆಗಳನ್ನು ಜಾಗತಿಕ ವಿದ್ಯಮಾನದೊಡನೆ ಥಳಕು ಹಾಕಿ ಒಂದರೊಳಗೊಂದು ಇರುವ ಸಂಬಂಧವನ್ನು ಕಾಣುವ ಗ್ರಹಿಕೆ ಅವರಿಗಿತ್ತು. ಆ ಗ್ರಹಿಕೆಗೆ ಕ್ರಿಯೆಗಳನ್ನು ಹುಟ್ಟುಹಾಕುವ ಕ್ರಿಯಾಶೀಲತೆಯೂ ಅವರಿಗಿತ್ತು. ಅವರ ಮಾತುಗಳು ಹಳ್ಳಿಗಾಡಿನ ಮಾತಾಗಿಬಿಡುತ್ತಿತ್ತು. ಅವರೊಂದು ರೀತಿ ಮೇಷ್ಟ್ರಾಗಿದ್ದರು. ಇಷ್ಟೇ ಆಗಿದ್ದರೆ ಏನು ಆಗ್ತಿತ್ತೊ ಗೊತ್ತಿಲ್ಲ. ಆದರೆ, ಇವರೊಡನೆ ತಾಯಿ ಕರುಳಿನ ಹೃದಯವಂತಿಕೆಯ ಸುಂದರೇಶ್ ಪುಟ್ಟಣ್ಣಯ್ಯ ಇದ್ದರು. ಈ ಗುಣಗಳೆಲ್ಲ ಜೊತೆಗೂಡಿ ರೈತ ಸಂಘ ಒಂದು ವ್ಯಕ್ತಿತ್ವ ಪಡೆಯಿತು ಅನ್ನಿಸುತ್ತದೆ. ಜೊತೆಗೆ, ರೈತ ಸಂಘದ ವ್ಯವಸ್ಥೆ ವಿರೋಧಿ ನಿಲುವು, ಹಾಗೇ ರಾಜಿಯಾಗದ ಕಠೋರ ನಿಷ್ಠುರತೆ ಅದಕ್ಕೊಂದು ವರ್ಚಸ್ಸನ್ನು ತಂದುಕೊಡುತ್ತದೆ. ಇದರೊಡನೆ ಸರಳ ಮದುವೆ, ಅಂತರ್ಜಾತಿ ಮದುವೆಗೆ ಒತ್ತಾಸೆಯಾಗುವ ಮೂಲಕ ಸಾಂಸ್ಕೃತಿಕ ಆಯಾಮವನ್ನು ರೈತ ಸಂಘ ಪಡೆದು ಕೊಳ್ಳುತ್ತಿರುತ್ತದೆ. ಇದರಿಂದ ರೈತ ಸಂಘಕ್ಕೆ ಒಂದು ಘನತೆಯೂ ಬರುತ್ತದೆ. ಹಾಗಾಗೇ ರೈತ ಸಂಘದೊಳಗೆ ಎಷ್ಟೋ ತಪ್ಪುಗಳಾ ಗಿದ್ದರೂ, ಎಷ್ಟೋ ಎಡವಟ್ಟುಗಳು ಆಗಿದ್ದರೂ ಅವು ಎದ್ದು ಕಾಣುತ್ತಿರಲಿಲ್ಲ.
ಈಗ ಆ ನೆನಪುಗಳು ನಮ್ಮ ನಡುವೆ ಇವೆ. ಇದನ್ನು ನೆನಪು ಮಾಡಿಕೊಳ್ಳುತ್ತಲೇ ನಾವು ಮನಗಾಣಬೇಕಾಗಿದೆ- ಆ ಕಾಲವೇ ಬೇರೆ, ಈ ಕಾಲವೇ ಬೇರೆ. ಆ ಕಾಲದಲ್ಲಿ ಜಾಗತೀಕರಣ ಬಲೆ ಹೆಣೆಯುತ್ತಿತ್ತು. ಈಗ ಬಲೆ ಹಾಕಿದೆ. ಹಣ ಆಳ್ವಿಕೆ ನಡೆಸುತ್ತಿದೆ. ನಮ್ಮ ಪ್ರಧಾನಿಯಾದಿಯಾಗಿ ಜನ ಸೇವಕರು ಬಂಡವಾಳ ಕಂಪೆನಿಗಳ ಸೇವಕರಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸರಕಾರ ರೂಪಿಸುತ್ತಿರುವ ಯೋಜನೆಗಳ ನಾಡಿ ಹಿಡಿದು ನೋಡಿದರೆ ಸಾಕು. ಉದಾಹರಣೆಗೆ ಪಿ.ಸಾಯಿನಾಥ್ ನೀಡಿರುವ ‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ’ಯ ಒಂದು ತುಣುಕು ನೋಡಿ- ಮಹಾರಾಷ್ಟ್ರದ ಒಂದು ಜಿಲ್ಲೆಯಲ್ಲಿ ಸುಮಾರು 2 ಲಕ್ಷ 80 ಸಾವಿರ ರೈತರು 19 ಕೋಟಿಗಳಷ್ಟು ಹಣವನ್ನು ಸೋಯಾ ಬೆಳೆಗೆ ವಿಮೆ ಮಾಡುತ್ತಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮ ಬಾಬ್ತು ತಲಾ 77 ಕೋಟಿಯಂತೆ ಒಟ್ಟು 154 ಕೋಟಿ ರೂಪಾಯಿಗಳನ್ನು ವಿಮಾ ಕಂಪೆನಿಗೆ ಕಟ್ಟುತ್ತದೆ. ರೈತರ ವಿಮೆ ಕಂತು ಹಾಗೂ ಸರಕಾರದ ಬಾಬ್ತು ಸೇರಿ 173 ಕೋಟಿ ರೂಪಾಯಿಗಳನ್ನು ರಿಲಯನ್ಸ್ ಕಂಪೆನಿಯ ವಿಮಾ ಸಂಸ್ಥೆಗೆ ಕಟ್ಟಿದಂತಾಗುತ್ತದೆ.
ಸೋಯಾ ಬೆಳೆ ನಷ್ಟವಾಗುತ್ತದೆ. ಪರಿಹಾರವಾಗಿ ರಿಲೆಯನ್ಸ್ ವಿಮೆ ಕಂಪೆನಿ 30 ಕೋಟಿ ರೂ.ಗಳಷ್ಟನ್ನು ಮಾತ್ರ ನೀಡುತ್ತದೆ. ಈ ವ್ಯವಹಾರದಲ್ಲಿ ಕಂಪೆನಿಗೆ ಲಾಭ-ರೂ. 143 ಕೋಟಿ! ಇದು ಒಂದು ಬೆಳೆಗೆ ಒಂದು ಜಿಲ್ಲೆಯಲ್ಲಿ. ಒಂದು ಬೆಳೆಗೆ ಒಂದು ಜಿಲ್ಲೆಯಲ್ಲಿ ಇಷ್ಟೊಂದು ಲೂಟಿಯಾಗುವುದಾದರೆ ದೇಶದ ಎಲ್ಲಾ ಜಿಲ್ಲೆಗಳ ಎಲ್ಲಾ ಬೆಳೆ ಹೆಸರಲ್ಲಿ ಕಂಪೆನಿ ಲೂಟಿ ಎಷ್ಟಾಗಬಹುದು? ನನಗೆ ಲೆಕ್ಕಾಚಾರ ಬರುವುದಿಲ್ಲ. ದಯವಿಟ್ಟು ನೀವೇ ಲೆಕ್ಕ ಮಾಡಿಕೊಳ್ಳಿ. ಮೇಲ್ನೋಟಕ್ಕೆ ಇದು ರೈತರ ಉದ್ಧಾರ. ಆದರೆ ಜರುಗುತ್ತಿರುವುದು ಏನು? ಸರಕಾರದ ಯೋಜನೆಗಳು ನಾಜೂಕಾಗಿ ಬಂಡವಾಳಿಗರ ಬಂಡವಾಳವನ್ನು ಕೊಬ್ಬಿಸುವ ಯೋಜನೆಗಳಾಗಿವೆ. ಇದು ಯಾರ ಹಿತವನ್ನು ಕಾಪಾಡಿ ದಂತಾಗುತ್ತದೆ? ರಕ್ತ ಹೀನತೆಯಿಂದ ಬಳಲುತ್ತಿರುವ ರೈತನಿಂದಲೇ ಒಂದು ಬಾಟಲ್ ರಕ್ತ ತೆಗೆದು ಅದನ್ನು ರಿಲಯನ್ಸ್ ಕಂಪೆನಿಗೆ ಸರಬರಾಜು ಮಾಡಿದಂತಲ್ಲವೆ ಇದು? ಇಂದಿನ ಯುಗ ಹೇಳಿಕೇಳಿ ವ್ಯಾಪಾರಿ ಯುಗ. ಇದಕ್ಕೆ ಥಳಕು ಹೆಚ್ಚು. ನಕಲಿ ಹೆಚ್ಚು. ನೇರ ನೇರ ಇರುವುದಿಲ್ಲ. ಬ್ರಿಟಿಷ್ ಕಂಪೆನಿ ಸರಕಾರ ಮಾಡುತ್ತಿದ್ದ ಸುಲಿಗೆಯಂತಲ್ಲ ಇಂದಿನ ಜಾಗತೀಕರಣದ ಕಂಪೆನಿಗಳ ಸಾಮ್ರಾಜ್ಯದ ಸುಲಿಗೆ. ಜಾಗತೀಕರಣದ ಕಂಪೆನಿ ಸುಲಿಗೆಗಳು ಅಗೋಚರವಾಗಿರುತ್ತದೆ.
ಹೇಗೆಂದರೆ, ಜಿಗಣೆ, ಇಂಬಳ ಅಂತಾರಲ್ಲ ಅದು ದೇಹಕ್ಕೆ ಅಂಟುಕೊಂಡರೆ ಅದು ದೇಹಕ್ಕೆ ಗೊತ್ತಾಗುವುದಿಲ್ಲ. ಅದು ರಕ್ತ ಹೀರುವುದೂ ಗೊತ್ತಾಗುವುದಿಲ್ಲ. ಈ ರೀತಿ ಅರಿವಿಗೆ ಬಾರದಂತೆ ರಕ್ತ ಹೀರುವಿಕೆ ಈ ಕಾಲದ ಸುಲಿಗೆಯ ಚಹರೆ. ಇದಕ್ಕೆ ಚಾಣಕ್ಷತನ ಎಂದು ಬೀಗುತ್ತಾರೆ. ಜಾದೂ ಅಂತಲೂ ಕರೆಯುತ್ತಾರೆ. ಹೌದು ಮಹಾನ್ ಜಾದೂ ಇದು. ಜಾದೂ ಅಂದರೇನೆ ಸಮ್ಮೋಹನ ವಿದ್ಯೆ. ಜಾದೂನಲ್ಲಿ ಏನೇನಾಗುತ್ತೆ? ಏನೇನು ಆಗಲ್ಲ? ಎಲ್ಲಾ ಆಗುತ್ತೆ. ಕೆಲವು ಜಾದೂಗಾರರು ವಿಮಾನವನ್ನು ಮಾಯ ಮಾಡ್ತಾರಂತೆ. ಖಾಲಿ ಪಾತ್ರೆಗೆ ಕೈಯಾಡಿಸಿ ಮೃಷ್ಟಾನ್ನ ಸೃಷ್ಟಿಸುತ್ತಾರಂತೆ. ಇಲ್ಲದ್ದನ್ನು ಸೃಷ್ಟಿಸುತ್ತಾರೆ. ಇರುವುದನ್ನು ಮಾಯ ಮಾಡುತ್ತಾರೆ. ನೋಡುಗರು ಮರುಳಾಗುತ್ತಾರೆ.
ಇಂದಿನ ರಾಜಕಾರಣವೂ ಕೂಡ ಒಂದು ರೀತಿ ಜಾದೂವೇನೊ ಅನ್ನಿಸಿಬಿಡುತ್ತದೆ. ಜಾದೂವಿನಲ್ಲಾದರೆ ಆ ಜಾದೂ ಮನರಂಜನೆ ಆಗುತ್ತದೆ. ಆದರೆ ಅದೇ ಜಾದು ರಾಜಕಾರಣದಲ್ಲಾದರೆ? ಅದು ಬದುಕನ್ನು ನರಕವನ್ನಾಗಿಸಿಬಿಡುತ್ತದೆ. ವಾಸ್ತವದೊಡನೆ ಮುಖಾಮುಖಿ ಯಾಗಬೇಕಾದ ರಾಜಕಾರಣ ಜನರ ಕಷ್ಟಸುಖಕ್ಕೆ ಭ್ರಮೆಯ ಸಂತೃಪ್ತಿ ಉಂಟುಮಾಡಿಬಿಡುತ್ತದೆ. ಇದು ಮಹಾದ್ರೋಹ. ಮಹಾವಂಚನೆ.
‘ಕಿಡಿನುಡಿ’ ಅಥವಾ ‘ನುಡಿಕಿಡಿ’ ಎಂಬ ಪತ್ರಿಕೆ ಮೋದಿಯವರನ್ನು ‘ಜಾದೂಗಾರ’ ಎಂದು ಕರೆದಿತ್ತು. ಬಿಜೆಪಿಯ ಡಿ.ಎಸ್.ವೀರಯ್ಯನವರ ಪತ್ರಿಕೆ ಅದು. ಅಲ್ಲಿ ತುಂಬಾ ಅಭಿಮಾನದಿಂದ ಮೋದಿಯವರನ್ನು ‘ಜಾದೂಗಾರ’ ಎಂದು ಬರೆದಿದ್ದರು. ಕನ್ನಡದಲ್ಲಿ ಜಾದೂಗೆ ‘ಮೋಡಿ’ ವಿದ್ಯೆ ಎಂದೂ ಕರೆಯುತ್ತಾರೆ. ಹೆಸರಿನ ಸಾಮ್ಯತೆ ನೋಡಿ ಅವರು ಹಾಗೆ ಬರೆದರೇನೊ. ನಿಜ, ಮೋದಿಯವರು ಜಾದೂಗಾರ ಎಂದು ನನಗೂ ಅನ್ನಿಸಿಬಿಟ್ಟಿತು. ಯಾಕೆಂದರೆ ಮೋದಿಯವರು ಚುನಾವಣೆಗೆ ನಿಲ್ಲುವ ಮೊದಲು ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ಎಲ್ಲರ ಅಕೌಂಟ್‌ಗೂ ರೂ. 15 ಲಕ್ಷ ಹಾಕುತ್ತೇನೆ ಎಂದು ಬಿಂಬಿಸಿದ್ದರು. ಅಕೌಂಟ್‌ದಾರರೆಲ್ಲ ತಂತಮ್ಮ ಅಕೌಂಟ್‌ಗೆ ಬೀಳುವ 15 ಲಕ್ಷದಲ್ಲಿ ಏನೇನು ಮಾಡಬಹುದು ಎತ್ತ ಎಂದು ಕನಸು ಕಂಡಿರುತ್ತಾರೆ. ಆದರೆ ಅಕೌಂಟ್‌ಗೆ ಪೈಸೆಯೂ ಬೀಳುವುದಿಲ್ಲ. ಆದರೂ ಸಪ್ನ ಸುಖ ಮಾತ್ರ ಸಿಗುತ್ತದೆ. ಇದು ಜಾದೂ ಅಲ್ಲವೇ? ಇದೇ ರೀತಿ ಮೋದಿಯವರು ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಮಂಕು ಬೂದಿ ಎರಚಿ ಗೆದ್ದು ಪ್ರಧಾನಮಂತ್ರಿಯೂ ಆದರು.
ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಿರಲಿ, ಯಥಾಸ್ಥಿತಿಯನ್ನು ಕಾಪಾಡಿ ಕೊಳ್ಳುವುದಕ್ಕೂ ಅವರಿಗಾಗಲಿಲ್ಲ. ಈ ಬಗ್ಗೆ ಒಂದು ಎಳೆ ವಿಷಾದವೂ ಅವರ ಹಣೆ ಗೆರೆಗಳಲ್ಲಿ ಕಾಣಲಿಲ್ಲ. ಅವರೀಗ ಅಂಕಿ ಅಂಶಗಳನ್ನು ತಿರುಚುತ್ತಾ ಕೂತಿದ್ದಾರೆ. ಸಾಲದೆಂಬಂತೆ ತಮ್ಮ ಅಧಿಕಾರದ ಕೊನೆ ಮೂರು ತಿಂಗಳಷ್ಟೆ ಇರುವಾಗ ಮಂಡಿಸಿದ ಮುಂಬರುವ ಚುನಾವಣಾ ಪೂರ್ವ ಬಜೆಟ್‌ನಲ್ಲಿ ಮತ್ತೆ ಮತ್ತೆ ಅದೇ ಅದೇ ಕಾಮನ ಬಿಲ್ಲಿನ ಕಣ್ಕಟ್ಟನ್ನು ತೋರಿಸುತ್ತಿದ್ದಾರೆ. ಮರಳುಗಾಡಲ್ಲಿ ಮರೀಚಿಕೆಯಂತೆ.
ಇಲ್ಲಿಗೆ ಬಂದು ನಿಂತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವ ಪಾರ್ಲಿಮೆಂಟ್ ಚುನಾವಣೆ ಎದುರಾಗಲಿದೆ. ರಾಜಕೀಯ ಪಕ್ಷಗಳು ಮಾತಲ್ಲೆ ಮನೆ ಕಟ್ಟುತ್ತಾರೆ. ಮಂಪರಲ್ಲೆ ಮೃಷ್ಟಾನ ಭೋಜನ ಮಾಡಿಸುತ್ತಾರೆ. ಹೆಂಡದ ಹೊಳೆ ಹರಿಸಿ ಜನರು ಕೊಚ್ಚಿಹೋಗುವಂತೆ ಮಾಡುತ್ತಾರೆ.
ಈಗ ಏನು ಮಾಡೋಣ? ಎಲ್ಲಾ ಜನಪರ ಹೋರಾಟ ಸಂಘಟನೆಗಳಿಗೆ ಇಂದು ಒಂದು ವಿವೇಕ ತುರ್ತಾಗಿ ಬೇಕಾಗಿದೆ. ತಾನಷ್ಟೆ ಸಾಲದು, ಎಲ್ಲಾ ಜನಪರ ಹೋರಾಟಗಳೂ ಜೊತೆಗೂಡಿ ಮುನ್ನಡೆಯಾಗಬೇಕು ಎಂಬ ವಿವೇಕ ಬೇಕಾಗಿದೆ. ಜನರನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು ಚುನಾವಣೆಯ ಚರ್ಚಾ ವಿಷಯವಾಗಿಸಬೇಕಾಗಿದೆ. ಜಾತಿ, ಮತ ಮತ್ತು ಭಾಷೆ ಮುಂತಾದ ಭಾವನಾತ್ಮಕ ಉದ್ರೇಕಕಾರಿ ವಿಷಯಗಳಿಗೆ ಬಲಿಯಾಗದೆ ಉಳಿಯಬೇಕಾಗಿದೆ. ಈ ಹೊಣೆಗಾರಿಕೆ ಯುವಜನತೆಯ ಮೇಲಿದೆ. ಜನರನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು 2019ರ ಚುನಾವಣೆಯಲ್ಲಿ ರಾಜಕಾರಣಕ್ಕೆ ಮುಖಾಮುಖಿ ಮಾಡಲೋಸಗ ರಾಷ್ಟ್ರೀಯ ಮಟ್ಟದಲ್ಲಿ I CAN ಹಬ್ಬುತ್ತಿದೆ- ಪಕ್ಷಾತೀತ ವಾಗಿ, ಸಮುದಾಯದ ಧ್ವನಿಯಾಗಿ. ಇದೇ ಕರ್ನಾಟಕದಲ್ಲಿ ‘ದೇಶಕ್ಕಾಗಿ ನಾವು’ ಹೆಸರಲ್ಲಿ ಚಿಗುರತೊಡಗಿದೆ. ಎಲ್ಲರೂ, ಮುಖ್ಯವಾಗಿ ನಾಳೆ ಬಾಳಿ ಬದುಕ ಬೇಕಾದ ಯುವಜನತೆ ‘ದೇಶಕ್ಕಾಗಿ ನಾವು’ ಜೊತೆ ಹೆಜ್ಜೆ ಹಾಕಬೇಕಾಗಿದೆ.