‘ಹಿಂದುತ್ವ’ದ ಹುಡುಕಾಟದಲ್ಲಿ...
ಭಾಗ-7
ಹಿಂದುತ್ವದ ಮೂಲ ಕರ್ತೃ ಸಾವರ್ಕರ್ರು ನಾಸ್ತಿಕ, ಚಾರ್ವಾಕ. ಅವರಿಗೆ ಬ್ರಹ್ಮ, ಈಶ್ವರ, ದೇವರು ದಿಂಡರು ಎಂಬುದರಲ್ಲಿ ಸುತರಾಂ ನಂಬಿಕೆಯೇ ಇರಲಿಲ್ಲ. ಅಂಥವರಿಗೆ ಹಿಂದುತ್ವದ ರಕ್ಷಣೆ, ಉದ್ಧಾರ, ಪ್ರಚಾರ ಎಂಬುದರ ಕಡೆ ಗಮನವೇ ಇರಲಿಲ್ಲ. ‘ಹಿಂದುತ್ವ’ ಸಿದ್ಧಾಂತದ ತಳಹದಿಯ ಮೇಲೆಯೇ ಡಾ. ಗೋಳ್ವಾಲ್ಕರ್ ಸ್ಥಾಪಿಸಿದ ಆರೆಸ್ಸೆಸ್ ಅದನ್ನು ವೃದ್ಧಿಪಡಿಸಿದ ಡಾ.ಹೆಡಗೇವಾರ್ ಅವರ ಬರವಣಿಗೆಯಲ್ಲಿ ಉಪನಿಷತ್, ಗೀತೆ, ಬ್ರಹ್ಮಸೂತ್ರ ಪ್ರತಿಪಾದಿತ ತನಿಯಾದ ಹಿಂದೂ ಧರ್ಮದ ಪ್ರಸ್ತಾಪವೇ ಇಲ್ಲ.
(ಬುಧವಾರದ ಸಂಚಿಕೆಯಿಂದ)
ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ 1944ರಲ್ಲಿ ಸಾವರ್ಕರ್ರ ಆದೇಶ ಮತ್ತು ಸಹಾಯದಿಂದ ‘ಅಗ್ರಣಿ’ ಎಂಬ ಮರಾಠಿ ವಾರಪತ್ರಿಕೆಯೊಂದನ್ನು ಪ್ರಾರಂಭಿಸಿದ್ದರು. ಅದರ ಪ್ರಮುಖ ಧ್ಯೇಯೋದ್ದೇಶ ಆರೆಸ್ಸೆಸ್ ಮುಖವಾಣಿಯಾಗಿ ‘ಹಿಂದುತ್ವ’ದ ಸಂದೇಶವನ್ನು ಪ್ರಚುರಪಡಿಸುವುದು. ‘ಹಿಂದುತ್ವ’ ಎಂದರೇನು? ಹಿಂದು ಧರ್ಮಕ್ಕೂ ಈ ಹಿಂದುತ್ವಕ್ಕೂ ಏನೂ ಸಂಬಂಧವಿಲ್ಲ. ಉಪನಿಷತ್, ಗೀತೆ, ಬ್ರಹ್ಮಸೂತ್ರಗಳಲ್ಲಿ ಪ್ರತಿಪಾದಿಸುವ ಈಶ್ವರ, ಜೀವ ಜಗತ್ತುಗಳ ಪರಸ್ಪರ ಸಂಬಂಧಗಳ ವಿಚಾರವಾಗಲಿ, ಸೃಷ್ಟಿಯ ವಿಸ್ಮಯದ ರಹಸ್ಯವಾಗಲಿ ಹಿಂದುತ್ವದಲ್ಲಿ ಎಳ್ಳಷ್ಟೂ ಇಲ್ಲ. ಹಿಂದೂ ಧರ್ಮದ ತಿರುಳು-‘ಸರ್ವಂ ಖಲ್ವಿದಂ ಬ್ರಹ್ಮ’ ಎಂಬ ಮೂಲ ಸತ್ಯವಾಗಲಿ, ‘ಆತ್ಮವತ್ ಸರ್ವಭೂತಾನಾಂ, ಮಮಾತ್ಮ ಸರ್ವಭೂತಾತ್ಮ’, ‘ಸಹನಾವತು, ಸಹನೌ ಭುನಕ್ತು’ ಎಂಬ ಸರ್ವಸಮಾನತೆಯ ಉನ್ನತೋನ್ನತ ತತ್ವ ಮೀಮಾಂಸೆಯಾಗಲೀ ಸಾವರ್ಕರ್ ಪ್ರಣೀತ ಹಿಂದುತ್ವದಲ್ಲಿ ರವರೇಣು ಪ್ರಸ್ತಾಪವಿಲ್ಲ. ಹಿಂದೂ ಧರ್ಮದ ಮುಕುಟಮಣಿ, ಸತ್ಯ ಶಿಖರವಾದ ‘ಏಕಂ ಸತ್ ವಿಪ್ರಾಃ ಬಹುದಾ ವದಂತಿ’ ಎಂಬ ಸರ್ವಧರ್ಮ ಸಮನ್ವಯ, ಸರಿಸಮಾನ ಸಿದ್ಧಾಂತವಾಗಲಿ- ಅನೇಕ ನದಿಗಳು ಬೇರೆ ಬೇರೆ ಬೆಟ್ಟ ಗುಡ್ಡಗಳಲ್ಲಿ ಹುಟ್ಟಿ ಋಜು ಕುಟಿಲ ಪಾತ್ರವನ್ನು ಅನುಸರಿಸಿ ಹರಿದು ಕೊನೆಗೆ ಒಂದೇ ಮಹಾಸಾಗರದಲ್ಲಿ ಬಂದು ಸೇರುವಂತೆ ವಿವಿಧ ಮತಾವಲಂಬಿಗಳು ಭಿನ್ನಭಿನ್ನ ಧರ್ಮಮಾರ್ಗಗಳನ್ನು ಅನುಸರಿಸಿ ಅಂತ್ಯದಲ್ಲಿ ಏಕಮೇವ - ಅದ್ವಿತೀಯ ಪರಮ ಪದವನ್ನು ಪಡೆಯುವರು ಎಂಬ ಸರ್ವಧರ್ಮಗಳ ಸಾರ ಈ ಹಿಂದುತ್ವದಲ್ಲಿ ಕಿಂಚಿತ್ತೂ ಇಲ್ಲ. ಹಿಂದುತ್ವದ ಮೂಲ ಕರ್ತೃ ಸಾವರ್ಕರ್ರು ನಾಸ್ತಿಕ, ಚಾರ್ವಾಕ. ಅವರಿಗೆ ಬ್ರಹ್ಮ, ಈಶ್ವರ, ದೇವರು ದಿಂಡರು ಎಂಬುದರಲ್ಲಿ ಸುತರಾಂ ನಂಬಿಕೆಯೇ ಇರಲಿಲ್ಲ. ಅಂಥವರಿಗೆ ಹಿಂದುತ್ವದ ರಕ್ಷಣೆ, ಉದ್ಧಾರ, ಪ್ರಚಾರ ಎಂಬುದರ ಕಡೆ ಗಮನವೇ ಇರಲಿಲ್ಲ. ‘ಹಿಂದುತ್ವ’ ಸಿದ್ಧಾಂತದ ತಳಹದಿಯ ಮೇಲೆಯೇ ಡಾ. ಗೋಳ್ವಾಲ್ಕರ್ ಸ್ಥಾಪಿಸಿದ ಆರೆಸ್ಸೆಸ್ ಅದನ್ನು ವೃದ್ಧಿಪಡಿಸಿದ ಡಾ.ಹೆಡಗೇವಾರ್ ಅವರ ಬರವಣಿಗೆಯಲ್ಲಿ ಉಪನಿಷತ್, ಗೀತೆ, ಬ್ರಹ್ಮಸೂತ್ರ ಪ್ರತಿಪಾದಿತ ತನಿಯಾದ ಹಿಂದೂ ಧರ್ಮದ ಪ್ರಸ್ತಾಪವೇ ಇಲ್ಲ.
ಹಾಗಾದರೆ ಈ ‘ಹಿಂದುತ್ವ’ ಎಂದರೇನು? ಹಿಂದುತ್ವದ ಸಾರಸರ್ವಸ್ವ, ಅದರ ಜೀವ ಜೀವಾಳ: ‘‘ವಿದೇಶೀಯರೂ ಪರಕೀಯರೂ ಆದ ಮುಸ್ಲಿಮರು ಭಾರತವನ್ನು ಬಲಾತ್ಕಾರವಾಗಿ ಆಕ್ರಮಿಸಿಕೊಂಡು ಸಾವಿರಾರು ವರ್ಷಗಳಿಂದ ದುರಾಡಳಿತ ನಡೆಸಿದರು. ಇಲ್ಲಿಯ ಬಹು ಸಂಖ್ಯಾತ ಶೇ. 85ರಷ್ಟಿರುವ ಹಿಂದೂಗಳನ್ನು ದೌರ್ಜನ್ಯದಿಂದ ಆಳಿದರು. ಹಿಂದೂಗಳನ್ನು ಖಡ್ಗದಿಂದ ಬಲಾತ್ಕಾರವಾಗಿ ಮುಸ್ಲಿಮರನ್ನಾಗಿ ಮತಾಂತರ ಮಾಡಿದರು. ಹಿಂದೂಗಳ ಪೂಜಾರ್ಹ ಪ್ರಾಣಿ ಗೋಮಾತೆಯನ್ನು ವಧಿಸಿ ತಮ್ಮ ಆಹಾರವನ್ನಾಗಿ ಮಾಡಿ ಹಿಂದೂ ಧರ್ಮದ ಮೇಲೆ ಮಾಡಿದ, ಈಗಲೂ ಮಾಡುತ್ತಿರುವ ಈ ಘನಘೋರ ಅತ್ಯಾಚಾರ, ದುರಾಕ್ರಮಣವನ್ನು ವಿರೋಧಿಸುವುದು, ರಕ್ಷಣೆ ಮಾಡುವುದು ಹಿಂದೂಗಳ ಧರ್ಮ. ಆ ಪ್ರಯತ್ನ ಘಜನಿ ಮುಹಮ್ಮದನ ದಾಳಿಯಿಂದ ಇಲ್ಲಿಯವರೆಗೆ -ಮೊಘಲ್ ಆಳ್ವಿಕೆಯ ಅಂತ್ಯದವರೆಗೆ ಮಾತ್ರವಲ್ಲ, ಮುಸ್ಲಿಮರನ್ನು ತೃಪ್ತಿಪಡಿಸಿದ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿಯೇ ಮಾತ್ರವಲ್ಲ, ಬ್ರಿಟಿಷರು ತೊಲಗಿದ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತಿತರ ಆಳ್ವಿಕೆಯ ಈ ಕಾಲದಲ್ಲೂ ಮುಸ್ಲಿಮರನ್ನು ಪುಸಲಾಯಿಸುವ ನೀಚ ಧೋರಣೆಯಿಂದ ಹಿಂದೂ ಧರ್ಮದ ಮೇಲೆ ಅವ್ಯಾಹತ ದಾಳಿ ನಡೆಯುತ್ತಿದೆ! ಮುಸ್ಲಿಮರ ಈ ದುರಾಕ್ರಮಣ ದುರಾಡಳಿತ, ದೌರ್ಜನ್ಯ ಮತ್ತು ಅತ್ಯಾಚಾರವನ್ನು ಎದುರಿಸಿ ವೀರಾವೇಶದಿಂದ ಹೋರಾಡುವುದೇ ಹಿಂದುತ್ವದ ಘನ ಉದ್ದೇಶ ! ಇದೇ ಹಿಂದುತ್ವದ ಸಾರಸರ್ವಸ್ವ.’’
ಹಿಂದುತ್ವದ ಈ ಘನೋದ್ದೇಶವನ್ನು ಈಡೇರಿಸುವ ಬಗೆ ಯಾವುದು? ಒಂದೇ ಮಾತಿನಲ್ಲಿ ಹೇಳುವುದಾದರೆ ಭಾರತದಲ್ಲಿ ವಾಸಿಸುವ ಎಲ್ಲರೂ -ತತ್ರಾಪಿ ಹಿಂದೂ ‘ಧರ್ಮ’ ದ್ವೇಷಿಗಳಾದ ಮುಸ್ಲಿಮರು ಇಲ್ಲಿರುವ ಬಹುಸಂಖ್ಯಾತ ಹಿಂದೂಗಳ ಧರ್ಮ, ನಡವಳಿಕೆ (ಸಂಸ್ಕೃತಿ) ಜೀವನ ಪದ್ಧತಿಯನ್ನು ಅಂಗೀಕರಿಸಬೇಕು, ಇಲ್ಲವೇ ಅವರು ಇಲ್ಲಿಂದ ತೊಲಗಬೇಕು. ಇಲ್ಲವೇ ಅವರನ್ನು ನಿರ್ನಾಮ ಮಾಡಬೇಕು. ಉದಾಹರಣೆಗೆ, ಗೋವು ಬಹುಸಂಖ್ಯಾತ ಹಿಂದೂಗಳ ಪೂಜಾರ್ಹ ಪ್ರಾಣಿ. ಅದನ್ನು ಇಲ್ಲಿರುವ ಎಲ್ಲರೂ ಪೂಜಿಸಬೇಕು. ಗೋವಧೆ ಮಾಡಬಾರದು; ಗೋಮಾಂಸ ತಿನ್ನಬಾರದು. ಹಾಗೆ ಗೋಮಾಂಸ ತಿನ್ನುವುದಾದರೆ ಅದರಿಂದ ತನಿಯಾದ ಹಿಂದೂಗಳಿಗೆ ನೋವಾಗುತ್ತದೆ. ಅವರ ಮನಸ್ಸಿಗೆ ನೋವಾಗುವುದರಿಂದ ಹಿಂದೂ ಧರ್ಮದ ಮೇಲೆ ದಾಳಿ ಮಾಡಿದಂತೆ!! ಅದರಿಂದ ಆರೆಸ್ಸೆಸ್ಗೆ ಸೇರಿದ ಉಚ್ಚವರ್ಣದವರಿಗೆ ನೋವಾಗುವುದರಿಂದ ಅವರೂ ತಿನ್ನಬಾರದು. ಇದು ಹಿಂದುತ್ವದ ತರ್ಕ ! ಧರ್ಮಸಿದ್ಧಾಂತ!!
ಈ ಹಿಂದುತ್ವ ಸಿದ್ಧಾಂತದ ಇನ್ನೊಂದು ಮುಖವೆಂದರೆ - ಹಿಂದೂ ದೇಶದಲ್ಲಿ ಮುಸ್ಲಿಮರು ತಮ್ಮ ಧಾರ್ಮಿಕ ರೀತಿ ನೀತಿ ಪದ್ಧತಿಯಂತೆ ಪ್ರತ್ಯೇಕವಾಗಿ ಬಾಳಕೂಡದು. ಅವರು ಬಹುಸಂಖ್ಯಾತರಂತೆ ಜೀವನ ನಡೆಸಬೇಕು. ಎರಡು ಪ್ರತ್ಯೇಕ ಜನಾಂಗಗಳು ಎಂದೆಂದಿಗೂ ಒಂದಾಗಿ ಬಾಳಲಾರವು. ಆದ್ದರಿಂದ ಇಲ್ಲಿರುವ ಅನ್ಯ ಕೋಮಿನವರನ್ನು ತತ್ರಾಪಿ ಮುಸ್ಲಿಮರನ್ನು ಶುದ್ಧಿಗೊಳಿಸಿ ವರ್ಜಿಸ (purge) ಬೇಕು. ಹಿಟ್ಲರ್ ಜರ್ಮನಿಯಲ್ಲಿ ತಮ್ಮ ಜನಾಂಗೀಯ (racial) ಪಾವಿತ್ರವನ್ನು ಉಳಿಸಿಕೊಳ್ಳಲು, ಕಾಪಾಡಲು ಜ್ಯೂ ಜನರನ್ನು ನಿರ್ನಾಮ ಮಾಡಿದಂತೆ ಪವಿತ್ರ ಹಿಂದೂ ಜನಾಂಗದ ಔನ್ನತ್ಯವನ್ನು ಪಾವಿತ್ರವನ್ನು ರಕ್ಷಿಸುವುದಕ್ಕಾಗಿ ಅನ್ಯ ಜಾತಿ ಜನಾಂಗವನ್ನು ವರ್ಜಿಸಬೇಕು. ಸಾವರ್ಕರ್ರ ಪರಿಕಲ್ಪನೆಯ ಈ ಹಿಂದುತ್ವವನ್ನು ಗುರೂಜಿ ಗೋಳ್ವಾಲ್ಕರ್ ತಮ್ಮ ಸಿದ್ಧಾಂತದ ಆಧಾರ ಗ್ರಂಥ (we or our nationhood defined)ದಲ್ಲಿ ಹೀಗೆ ಪ್ರತಿಪಾದಿಸಿದ್ದಾರೆ:
‘‘ಜರ್ಮನಿ ತನ್ನ ಜನಾಂಗೀಯ/ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಪರಿಶುದ್ಧತೆಯನ್ನು ಕಾಪಾಡಲು /ಉಳಿಸಿಕೊಳ್ಳಲು ತಮ್ಮ ದೇಶದಿಂದ ಸೆಮೆಟಿಕ್ ಜನಾಂಗವನ್ನು ವರ್ಜಿಸುವ ಮೂಲಕ ಜಗತ್ತನ್ನು ತಲ್ಲಣಗೊಳಿಸಿತು. ಇಲ್ಲಿ ಜನಾಂಗೀಯ ಹೆಮ್ಮೆಯ ಉಚ್ಛ್ರಾಯವು ವ್ಯಕ್ತವಾಯಿತು. ಭಿನ್ನ ಭಿನ್ನ ಜನಾಂಗಗಳು, ಭಿನ್ನ ಭಿನ್ನ ಸಂಸ್ಕೃತಿಯ ಜನರು ಎಂದೆಂದಿಗೂ ಒಂದಾಗಿ ಬಾಳುವುದು ಅಸಾಧ್ಯ ಎಂಬುದನ್ನು ಜರ್ಮನಿ ತೋರಿಸಿಕೊಟ್ಟಿದೆ. ಒಬ್ಬರು ಇನ್ನೊಬ್ಬರ ಸಂಸ್ಕೃತಿಯನ್ನು ಜೀರ್ಣಿಸಿಕೊಂಡು ಅಂತರ್ಗತಮಾಡಿ ಒಂದು ಏಕೈಕ ಪೂರ್ಣತ್ವವನ್ನು ಸಾಧಿಸಬೇಕೆಂಬುದಕ್ಕೆ ಹಿಂದೂಸ್ಥಾನ ಜರ್ಮನಿಯಿಂದ ಉತ್ತಮ ಪಾಠ ಕಲಿತು ಲಾಭ ಪಡೆಯಬಹುದು...’’
ಈ ಮೂಲಭೂತ ತತ್ವ ನಿರೂಪಣೆ ಮಾಡಿದ ಮೇಲೆ ಗುರೂಜಿ ಗೋಳ್ವಾಲ್ಕರ್ ಭಾರತ ದೇಶ ಹೇಗೆ ಸಹಸ್ರಾರು ವರ್ಷ ಹಿಂದೂ ಧರ್ಮರಕ್ಷಣೆ ಮಾಡಿಕೊಂಡು ಬಂದಿದೆ ಎಂಬುದನ್ನು ಉದ್ಘೋಷಿಸಿ ಕೊನೆಗೆ ಹೇಳುತ್ತಾರೆ:
‘‘ಇದರ ಅರ್ಥ : ಇಲ್ಲಿ (ಭಾರತದಲ್ಲಿ) ಕೇವಲ ಹಿಂದೂ ಮಾತ್ರ ಈ ಮಣ್ಣಿನ ಮಗನಾಗಿ ಬದುಕಿದ್ದಾನೆ.’’
ಹಾಗಾದರೆ ಮುಸ್ಲಿಮರು ಕ್ರಿಶ್ಚಿಯನ್ನರು ಯಾರು? ಎಂಬ ಪ್ರಶ್ನೆಗೆ ಗುರೂಜಿ ಹೀಗೆ ಉತ್ತರ ಕೊಡುತ್ತಾರೆ: ‘‘ಅವರು ಈ ದೇಶದಲ್ಲಿ ಜನಿಸಿದ್ದಾರೆಂಬುದರಲ್ಲಿ ಸಂಶಯವಿಲ್ಲ. ಆದರೆ ಅವರು ಇಲ್ಲಿ ತಿಂದ ಉಪ್ಪಿಗೆ ನಿಜವಾಗಿಯೂ ಋಣಿಗಳಾಗಿ ದ್ದಾರೆಯೇ? ಇಲ್ಲ -ಅವರು (ಹಿಂದೂ) ಧರ್ಮ ಬದಲಾಯಿಸಿದಾಗಲೇ, ಅದರೊಡನೆಯೇ ಈ ರಾಷ್ಟ್ರಪ್ರೇಮ ಮತ್ತು ರಾಷ್ಟ್ರಭಕ್ತಿಯೂ ಹೊರಟುಹೋಯಿತು.’’ ರಾಷ್ಟ್ರಭಕ್ತಿ ಎಂಬುದರ ಏಕಮಾತ್ರ ಗುರುತು ಆ ದೇಶದ ಧರ್ಮಾವಲಂಬನೆ ಎಂಬುದು ಗುರೂಜಿಯವರ ಸಿದ್ಧಾಂತ!! ಅಂದರೆ, ಹಿಂದೂ ಅಲ್ಲದವನು ದೇಶಪ್ರೇಮಿಯೂ ರಾಷ್ಟ್ರಪ್ರೇಮಿಯೂ ಆಗಲಾರ !! ಆದ್ದರಿಂದ ಈ ದೇಶದಲ್ಲಿ ಹುಟ್ಟಿದವರೆಲ್ಲ ಹಿಂದೂ ಧರ್ಮವನ್ನು, ಸಂಸ್ಕೃತಿಯನ್ನು ನಡವಳಿಕೆಯನ್ನು ಒಪ್ಪಿಕೊಳ್ಳಬೇಕು. ಹಿಂದೂಗಳಲ್ಲದವರನ್ನು ಹಿಂದೂಗಳನ್ನಾಗಿ ಜೀರ್ಣಿಸಿಕೊಳ್ಳಬೇಕು; ಸಜಾತೀಕರಣ (assimilate) ಮಾಡಬೇಕು! ಇದು ಸಾವರ್ಕರ್ ಪ್ರಣೀತ ರಾಷ್ಟ್ರಭಕ್ತಿಯ ಲಕ್ಷಣ. ಆ ಭಕ್ತಿ ದೇಶದ ಭೂಭಾಗದ (territorial) ಆಧಾರದ ಮೇಲೆ ಅವಲಂಬಿಸಿರಬಾರದು; ಭಿನ್ನ ಭಿನ್ನ ಧರ್ಮಾವಲಂಬಿಗಳು ಒಂದಾಗಿ ಬಾಳುವುದು ಮಾನವ ಸ್ವಭಾವದಲ್ಲಿ ಇಲ್ಲದ ಕಾರಣ ಒಂದು ದೇಶದಲ್ಲಿರುವವರೆಲ್ಲ ಒಂದೇ ಧರ್ಮಾವಲಂಬಿಗಳು, ಕನಿಷ್ಠ ಒಂದೇ ಸಂಸ್ಕೃತಿಯನ್ನು ಅಂಗೀಕರಿಸಬೇಕು. ಇಲ್ಲದಿದ್ದರೆ ಅವರನ್ನು ಸಜಾತೀಕರಣ (assimilate) ಮಾಡಬೇಕು. ಅಡಾಲ್ಫ್ ಹಿಟ್ಲರ್ ಮಾಡಿದಂತೆ! ಆ ಮಹಾಸಾಹಸ, ಮಹತ್ಕಾರ್ಯ ಸಿದ್ಧಿಗೆ ದೈಹಿಕವಾಗಿ ಬಲಾಢ್ಯರೂ, ಮಾನಸಿಕವಾಗಿ ಚತುರರೂ, ಕುಶಲಮತಿಗಳೂ ಆಗಿರಬೇಕು. ಅಂಥ ಮಕ್ಕಳನ್ನು ಹಿಂದೂ ಮಹಿಳೆಯರು -ಅರ್ಥಾತ್ ಆರ್ಯ ಸಂತತಿಯ ಉಚ್ಚವರ್ಣದವರು ಹೇರಬೇಕು!! ಈ ಮೂಲ ಸಿದ್ಧಾಂತವನ್ನು ಅನುಷ್ಠಾನದಲ್ಲಿ ತರುವುದಕ್ಕಾಗಿ ಚಿಕ್ಕಂದಿನಿಂದಲೇ ಮಕ್ಕಳನ್ನು ದೇಶಭಕ್ತರನ್ನಾಗಿ ಮಾಡಬೇಕು. ದೇಹದಾರ್ಢ್ಯ ಬೆಳೆಸಲು ಕವಾಯತು ಮಾಡಿಸಬೇಕು. ಆಯುಧಗಳನ್ನು ಬಳಸಲು, ದಂಡಪ್ರಯೋಗ ಮಾಡಲು ತರಬೇತಿ ಕೊಡಬೇಕು! ಕಾಲಾನುಕಾಲಕ್ಕೆ ಅವರದೊಂದು ದೊಡ್ಡ ಸೈನ್ಯವೇ ಬೆಳೆಯಬೇಕು! ಇದು ಆರೆಸ್ಸೆಸ್ ಗುರಿ.
ಈ ರಾಜಕೀಯ ಸಿದ್ಧಾಂತವನ್ನು ‘ಕಂಡುಹಿಡಿದು ರೂಪಿಸಿದ ಮೇಲೆ’ ಈ ದೇಶದಲ್ಲಿ ಒಂದು ರಾಜಕೀಯ ಮಹಾಕ್ರಾಂತಿಯೇ ಆಗುತ್ತದೆ ಎಂದು ಸಾವರ್ಕರ್ರು ಭಾವಿಸಿದ್ದರು. ಡಾ. ಹೆಡಗೆವಾರ್, ಗುರೂಜಿ ಗೋಳ್ವಾಲ್ಕರ್ ಅದೇ ಕನಸು ಕಂಡಿದ್ದರು.
(ಬುಧವಾರದ ಸಂಚಿಕೆಗೆ)