ನಮ್ಮ ಜಮೀನನ್ನು ನಮಗೆ ಮರಳಿ ಕೊಡಿ...
ಅದಾನಿ ವಿದ್ಯುತ್ ಸ್ಥಾವರಕ್ಕಾಗಿ ವಶಪಡಿಸಿಕೊಂಡ ಜಮೀನನ್ನು ಮರಳಿ ಪಡೆಯಲು ಜಾರ್ಖಂಡ್ ಆದಿವಾಸಿ, ದಲಿತ ಹಳ್ಳಿಗರಿಂದ ನ್ಯಾಯಾಲಯಕ್ಕೆ ಮೊರೆ
ಭಾಗ-2
ಕಳೆದ ಅಕ್ಟೋಬರ್‌ನಲ್ಲಿ ಮೋತಿಯಾ ಹಳ್ಳಿಯ ಒಬ್ಬಳು ರೈತ ಮಹಿಳೆ ಸುಮಿತ್ರಾದೇವಿ ತನ್ನ ಜಮೀನು ಅದಾನಿ ಗ್ರೂಪ್‌ನ ವಶದಲ್ಲಿದೆ ಎಂದು ಇಂಡಿಯಾ ಸ್ಪೆಂಡ್‌ನೊಡನೆ ಹೇಳುವಾಗ ದುಃಖದಿಂದ ಕುಸಿದುಬಿದ್ದಳು. ಅವಳ ಜಮೀನನ್ನು 2018ರ ಫೆಬ್ರವರಿಯಲ್ಲಿ ಸರಕಾರ ಬಲವಂತವಾಗಿ ವಶಪಡಿಸಿಕೊಂಡಿತ್ತು. ಇಂಡಿಯಾ ಸ್ಪೆಂಡ್‌ಗೆ ಸಂದರ್ಶನ ನೀಡಿದ ಬಳಿಕ ಕಲವೇ ದಿನಗಳಲ್ಲಿ ಅವಳು ತೀರಿಕೊಂಡಳು, ಅವಳ ಗಂಡ ರಾಮ್‌ಜೀವನ್ ಪಾಸ್ವಾನ್ ಈಗ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದವರಲ್ಲಿ ಒಬ್ಬನಾಗಿದ್ದಾನೆ. ಅವನು ಹೇಳುವಂತೆ ‘‘ಭೂ ಸ್ವಾಧೀನ ಪ್ರಕ್ರಿಯೆಗಳಲ್ಲಿ ಘೋರ್ಜರಿ, ಸುಳ್ಳುಗಳು, ಮತ್ತು ಬೆದರಿಕೆಯನ್ನು ಬಳಸಿಕೊಳ್ಳಲಾಗಿದೆ.’’
ಅರ್ಜಿದಾರರು ತಮ್ಮಿಂದ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳ ಲಾಗಿರುವ ಜಮೀನನ್ನು ಮರಳಿಸು ವಂತೆ ಹೈಕೋರ್ಟ್, ಸರಕಾರದ ಆಜ್ಞೆಯನ್ನು ರದ್ದುಪಡಿಸಬೇಕೆಂದು ವಿನಂತಿಸಿಕೊಂಡಿದ್ದಾರೆ. ಅವರನ್ನು ಪ್ರತಿನಿಧಿಸುತ್ತಿರುವ ವಕೀಲ ಸೋನಾಲ್ ತಿವಾರಿ, ‘‘ಅದಾನಿ ಕಂಪೆನಿಯು ಹಳ್ಳಿಗರನ್ನು ನೇರವಾಗಿ ಸಂಪರ್ಕಿಸಬೇಕಾಗಿತ್ತು, ಆಗ ಅವರು ತಮ್ಮ ಜಮೀನನ್ನು ಮಾರಬೇಕೋ ಬೇಡವೋ ಎಂದು ತಾವೇ ನಿರ್ಧರಿಸುತ್ತಿದ್ದರು.’’ ಎಂದಿದ್ದಾರೆ. ಅದಾನಿ ಗುಂಪಿಗೆ ಲಾಭ ಮಾಡಿಕೊಡುವುದಕ್ಕಾಗಿ ಸರಕಾರವು 2013ರ ಭೂಸ್ವಾಧೀನ ಕಾಯ್ದೆಯನ್ನು ‘ದುರುಪಯೋಗ’ ಪಡಿಸಿಕೊಂಡಿದೆ ಎನ್ನುತ್ತಾರೆ ಇವರು.
ಹಸಿರು ನಿಶಾನೆ ಕೂಡ ಪ್ರಶ್ನಾರ್ಹ
ವಿದ್ಯುತ್ ಸ್ಥಾವರಕ್ಕೆ ಬೇಕಾಗುವ ವಾರ್ಷಿಕ 36 ಮಿಲಿಯ ಘನ ಮೀಟರ್ ನೀರನ್ನು ಗೊಡ್ಡಾದ ಚಿರ್ ನದಿಯಿಂದ ಪಡೆಯಲಾಗುತ್ತದೆಂದು ಹೇಳಿ ಅದಾನಿ ಗ್ರೂಪ್ ಪರಿಸರ ಇಲಾಖೆಯಿಂದ ಸ್ಥಾವರದ ಸ್ಥಾಪನೆಗೆ ಹಸಿರು ನಿಶಾನೆ ಪಡೆದಿದೆ.
ಆದರೆ ಈಗ ಅದು, ಸಾಹಿಬ್‌ಗನ್ ಜಿಲ್ಲೆಗೆ ತಾಗಿಕೊಂಡಿರುವ ಗಂಗಾನದಿಯಿಂದ ತನ್ನ ಸ್ಥಾವರಕ್ಕೆ ಬೇಕಾಗುವ ಜಲಸಂಪನ್ಮೂಲವನ್ನು ಪಡೆದುಕೊಳ್ಳುವುದಾಗಿ ಹೇಳುತ್ತ್ತಿದೆ. ಇಷ್ಟೇ ಅಲ್ಲದೆ ಸ್ಥಾವರಕ್ಕೆ ನೀರು ಸಾಗಿಸಲು 92 ಕಿ.ಮೀ. ಪೈಪ್‌ಲೈನ್ ಅಳವಡಿಸುವುದಕ್ಕಾಗಿ 460 ಎಕರೆ ಜಮೀನಿನ ಮೇಲೆ ಹಕ್ಕುಗಳನ್ನು (ಸಬ್ ಸರ್ಫೇಸ್ ರೈಟ್ಸ್) ತನಗೆ ನೀಡಬೇಕೆಂದೂ ಹೇಳುತ್ತಿದೆ. ಗಂಗಾನದಿಯಿಂದ ನೀರು ಪಡೆಯುವುದಕ್ಕಾಗಿ ಪರಿಸರ ಪರಿಣಾಮ ಅಧ್ಯಯನದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ ಅಥವಾ ಸಾರ್ವಜನಿಕರ ಜೊತೆ ನಡೆಸಿದ ಸಭೆಯಲ್ಲೂ ಹೇಳಿಲ್ಲ ಎಂದು ವಿಜ್ಞಾನಿ ಶ್ರೀಧರ್‌ರವರ ಅರ್ಜಿಯಲ್ಲಿ ಬರೆಯಲಾಗಿದೆ. ಗೊಡ್ಡಾದ ಚಿರ್ ನದಿಯಲ್ಲಿ ಸಾಕಷ್ಟು ನೀರು ಇದೆ ಎಂದು ತೋರಿಸಲು ಅದಾನಿ ಕಂಪೆನಿಯು ‘ತಪ್ಪು ದತ್ತಾಂಶ’ಗಳನ್ನು ನೀಡಿದೆ. ತನ್ನ ಯೋಜನೆಗೆ ಬೇಗನೆ ಅಂಗೀಕಾರ ದೊರಕಬೇಕೆಂದು ಅದು ಹೀಗೆ ಮಾಡಿದೆ. ಈ ತಪ್ಪು ದತ್ತಾಂಶಗಳನ್ನು ವಿಶ್ಲೇಷಿಸಲು ಸಂಬಂಧಪಟ್ಟವರು ವಿಫಲರಾಗಿದ್ದಾರೆ. ಆದ್ದರಿಂದ ಸ್ಥಾವರದ ಸ್ಥಾಪನೆಗೆ ನೀಡಲಾಗಿರುವ ಪರಿಸರ ಇಲಾಖೆಯ ಹಸಿರು ನಿಶಾನೆ ಆಜ್ಞೆಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಸುಳ್ಳು ಅಥವಾ ತಪ್ಪು ಹಾದಿಗೆಳೆಯುವ ಮಾಹಿತಿಗಳನ್ನು ಮುಚ್ಚಿಡುವುದರ ವಿರುದ್ಧ ಪರಿಸರ ಇಲಾಖೆ ಈ ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ವಿದ್ಯುತ್ ಸ್ಥಾವರವನ್ನು ಯಾಕೆ ಸ್ಥಾಪಿಸಕೂಡದು ಎಂಬುದಕ್ಕೆ ಅರ್ಜಿಯಲ್ಲಿ ಇತರ ಕೆಲವು ಕಾರಣಗಳನ್ನು ನೀಡಲಾಗಿದೆ. ಎಷ್ಟು ವಿದ್ಯುತ್ ಸ್ಥಾವರಗಳನ್ನು ಎಲ್ಲಿ ಸ್ಥಾಪಿಸಬಹುದು ಎಂಬ ಕುರಿತು ಸರಕಾರವೇ ರೂಪಿಸುವ ಮಾರ್ಗದರ್ಶಿ ನಿಯಮಗಳ ಉಲ್ಲಂಘನೆ ಇವುಗಳಲ್ಲಿ ಮುಖ್ಯವಾದ ಒಂದು ಕಾರಣವಾಗಿದೆ. ಯಾವುದೇ ಮುಖ್ಯ ಕೃಷಿ ಜಮೀನನ್ನು ಒಂದು ಕೈಗಾರಿಕಾ ನಿವೇಶನವನ್ನಾಗಿ ಮಾಡಕೂಡದೆಂದು ಈ ಮಾರ್ಗದರ್ಶಿ ಸೂತ್ರಗಳೇ ಹೇಳುತ್ತವೆ.
ಗೊಡ್ಡಾದಲ್ಲಿ ವಿದ್ಯುತ್ ಸ್ಥಾವರವು ಫಲವತ್ತಾದ ಒಂದು ಬಹುಬೆಳೆಗಳು ಬೆಳೆಯುವ ಜಮೀನುಗಳಿರುವ ಜಾಗದಲ್ಲಿ ನಿರ್ಮಾಣವಾಗುತ್ತಿದೆೆ. ಇಲ್ಲಿ ವಾಸಿಸುತ್ತಿರುವ ಶೇ. 97 ಹಳ್ಳಿಗರು ತಮ್ಮ ಹೊಟ್ಟೆಪಾಡಿಗಾಗಿ ಇಡೀ ವರ್ಷ ನಡೆಯುವ ಬೇಸಾಯ ಬೆಳೆಗಳ ಕೃಷಿಯನ್ನು ಅವಲಂಬಿಸಿದ್ದಾರೆ. ಸ್ಥಳೀಯ ಸಮುದಾಯಗಳ ಮೇಲೆ ಮತ್ತು ಕೃಷಿ ಉತ್ಪಾದನೆ ಮೇಲೆ ವಿದ್ಯುತ್ ಸ್ಥಾವರದ ಸ್ಥಾಪನೆಯಿಂದ ಆಗುವ ಪರಿಣಾಮಗಳ ಬಗ್ಗೆ ಪರಿಸರ ಪರಿಣಾಮ ಸಮೀಕ್ಷಾ ವರದಿ (ಎನ್ವಿರಾನ್‌ಮೆಂಟಲ್ ಇಂಪ್ಯಾಕ್ಟ್ ಆಸೆಸ್‌ಮೆಂಟ್ ರಿಪೋರ್ಟ್) ವೌನತಾಳಿದೆ. ಅಲ್ಲದೆ ವಾಯುಮಾಲಿನ್ಯ ವಿದ್ಯುತ್ ಸ್ಥಾವರದಿಂದ ಹೊರಬರುವ ಹೊಗೆ ಉಗುಳುವಿಕೆಗಳು, ಭೂಮಿಯ ಒಳಗಿನ ನೀರಿನ ಮಟ್ಟ ಮತ್ತು ಹಾರುಬೂದಿಯ ಸಂಗ್ರಹ ಹಾಗೂ ನಂತರ ಅದರ ವಿಲೇವಾರಿ ಇತ್ಯಾದಿಗಳನ್ನು, ಇವುಗಳನ್ನು, ಪರಿಸರದ ಮೇಲೆ ಬೀರುವ ಪರಿಣಾಮಗಳನ್ನು ಸೂಕ್ತವಾಗಿ ವಿಶ್ಲೇಷಿಸಲು ಈ ವರದಿ ವಿಫಲವಾಗಿದೆ ಎಂದೂ ಅರ್ಜಿದಾರರು ವಾದಿಸಿದ್ದಾರೆ.
ಅಲ್ಲದೆ, ಉಷ್ಣ ವಿದ್ಯುತ್ ಸ್ಥಾವರ ಯೋಜನೆಗೆ ಸಂಬಂಧಿಸಿದ ಇತರ ಹಲವಾರು ಪರಿಸರದ ಸಂಬಂಧಿಯಾದ ಪರಿಣಾಮಗಳ ಬಗ್ಗೆ ಕೂಡ ಅರ್ಜಿಯಲ್ಲಿ ವಿವರಿಸಲಾಗಿದೆ. ಪರಿಸರ ಪರಿಣಾಮ ಅಧ್ಯಯನ ವರದಿಯು ಕಡೆಗಣಿಸಿರುವ ಅಂಶಗಳಲ್ಲಿ ಈ ಕಳಗಿನವುಗಳು ಸೇರಿವೆ:
♦ ವಿದ್ಯುತ್ ಸ್ಥಾವರದಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಸಾಗಿಸಲು 120 ಕಿ.ಮೀ. ಉದ್ದದ ಟ್ರಾನ್ಸ್‌ಮಿಶನ್ ಲೈನ್ ನಿರ್ಮಿಸಬೇಕಾಗುತ್ತದೆ. ಇದು ದಟ್ಟವಾದ ಅರಣ್ಯ ಪ್ರದೇಶದ ಮೂಲಕ ಹಾದು ಹೋಗಲಿರುವುದರಿಂದ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ.
♦ ಈಗ ಅಸ್ತಿತ್ವದಲ್ಲಿರುವ ರೈಲು ಮಾರ್ಗಜಾಲದಿಂದ ಸ್ಥಾವರಕ್ಕಾಗಿ ಕಲ್ಲಿದ್ದಲು ಸಾಗಿಸಲು 45 ಕಿ.ಮೀ. ಉದ್ದದ ರೈಲುಮಾರ್ಗವನ್ನು ನಿರ್ಮಿಸಬೇಕಾಗುತ್ತದೆ.
♦ ಸ್ಥಾವರಕ್ಕೆ ಕಲ್ಲಿದ್ದಲು ಸಾಗಿಸಲು ರೈಲು ಮಾರ್ಗದಿಂದ 10 ಕಿ.ಮೀ. ಉದ್ದದ ರಸ್ತೆಯ ನಿರ್ಮಾಣವಾಗಬೇಕಾಗುತ್ತದೆ.
ಕಳೆದ ವರ್ಷದಿಂದ ನಡೆಯುತ್ತಿರುವ ಸ್ಥಾವರ ನಿರ್ಮಾಣದ ಕಾರ್ಯದಿಂದಾಗಿ ಆ ಪ್ರದೇಶದಲ್ಲಿರುವ ಅಂತರ್ಜಲ ಮಟ್ಟ ಈಗಾಗಲೇ ಕೆಳಕ್ಕೆ ಹೋಗಿದೆ ಮತ್ತು ತಮ್ಮ ನೀರು ಪೂರೈಕೆ ಮೂಲಗಳು ಬರಿದಾಗುತ್ತಿವೆ ಎಂದು ಹಳ್ಳಿಗರು ಇಂಡಿಯಾ ಸ್ಪೆಂಡ್ ಜತೆ ಹೇಳಿದ್ದಾರೆ. ಪರಿಸರ ಸಚಿವಾಲಯದ (ಪರಿಣಾಮ ಅಧ್ಯಯನ ವಿಭಾಗದ) ನಿರ್ದೇಶಕರಾಗಿರುವ ಎಸ್ ಕೆರ್ಕೆಟ್ಟಾರವರನ್ನು ಈ ಕುರಿತು ಸಂಪರ್ಕಿಸಲಿಕ್ಕಾಗಿ ಅವರಿಗೆ ಇಂಡಿಯಾ ಸ್ಪೆಂಡ್ ಹಲವಾರು ಬಾರಿ ದೂರವಾಣಿ ಕರೆ ಮಾಡಿತು. ಆದರೆ ಅವರು ದೂರವಾಣಿಯಲ್ಲಿ ಲಭ್ಯರಿರಲಿಲ್ಲ.
ಕೃಪೆ: ಇಂಡಿಯಾಸ್ಪೆಂಡ್.ಕಾಮ್