ಮೈಸೂರು ಜಿ.ಪಂ ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ: ಸ್ಥಳೀಯ ಜೆಡಿಎಸ್ ನಾಯಕರಿಗೆ ಸೆಡ್ಡು ಹೊಡೆದ ಸಿದ್ದರಾಮಯ್ಯ
ಮೈಸೂರು,ಫೆ.23: ರಾಜಕೀಯ ದೊಂಬರಾಟಕ್ಕೆ ಸಾಕ್ಷಿಯಾಗಿದ್ದ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಕೊನೆಗೂ ಕಾಂಗ್ರೆಸ್-ಜೆಡಿಎಸ್ ಪಾಲಾಗುವ ಮೂಲಕ ಜೆಡಿಎಸ್ ಸ್ಥಳೀಯ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಡ್ಡು ಹೊಡೆದಿದ್ದಾರೆ.
ಒಟ್ಟು 49 ಸ್ಥಾನಗಳ ಬಲವಿರುವ ಜಿಲ್ಲಾ ಪಂಚಾಯತ್‍ನಲ್ಲಿ ಕಾಂಗ್ರೆಸ್ 21, ಜೆಡಿಎಸ್ 19, ಬಿಜೆಪಿ 8 ಮತ್ತು ಪಕ್ಷೇತರ 1 ಸ್ಥಾನ ಪಡೆದಿತ್ತು. ಈ ಹಿಂದೆ ಐದು ವರ್ಷಗಳ ಅವಧಿಗೆ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಅಧ್ಯಕ್ಷರಾಗಿ ಜೆಡಿಎಸ್‍ನ ನಯೀಮಾ ಸುಲ್ತಾನಾ ನಜೀರ್ ಅಹಮದ್, ಉಪಾಧ್ಯಕ್ಷರಾಗಿ ಬಿಜೆಪಿಯ ಕೈಯಂಬಳ್ಳಿ ನಟರಾಜ್ ಆಯ್ಕೆಯಾಗಿದ್ದರು. ಜೆಡಿಎಸ್ ಪಕ್ಷದ ಒಪ್ಪಂದದಂತೆ ಒಂದು ಅವಧಿಗೆ ನಯೀಮಾ ಸುಲ್ತಾನ್ ನಜೀರ್ ಅಹಮದ್ ಮತ್ತೊಂದು ಅವಧಿಗೆ ಪರಿಮಳ ಶ್ಯಾಮ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಲು ತೀರ್ಮಾನಿಸಲಾಗಿತ್ತು. ಇನ್ನು, ಉಪಾಧ್ಯಕ್ಷರ ಸ್ಥಾನ ಬಿಜೆಪಿಯವರಿಗೆ ಬಿಟ್ಟಿದ್ದು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಅದರಂತೆ ತೆರವಾಗಿದ್ದ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಜೆಡಿಎಸ್ ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ ಮಹೇಶ್ ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸಿಕೊಳ್ಳಲು ತೀರ್ಮಾನಿಸಿ, ಜೆಡಿಎಸ್ ಮತ್ತು ಬಿಜೆಪಿ ಜಿ.ಪಂ ಸದಸ್ಯರನ್ನು ರೆಸಾರ್ಟ್‍ಗೂ ಕಳುಹಿಸಿದ್ದರು ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವಾರಗಳ ಹಿಂದೆ ಮೈಸೂರಿಗೆ ಆಗಮಿಸಿದ್ದ ವೇಳೆ ಜಿ.ಪಂ ನಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಮಾಡಿಕೊಂಡು ಅಧಿಕಾರ ನಡೆಸುವಂತೆ ಸಂಸದ ಆರ್.ಧ್ರುವನಾರಾಯಣ ಮತ್ತು ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಂಸದ ಆರ್.ಧ್ರುವನಾರಾಯಣ ಬುಧವಾರ ಕಾಂಗ್ರೆಸ್ ಪಕ್ಷದ ಜಿ.ಪಂ ಸದಸ್ಯರ ಸಭೆ ನಡೆಸಿ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಸೂಚಿಸಿದ್ದರು. ಅದಕ್ಕೆ ಎಲ್ಲಾ ಸದಸ್ಯರೂ ಒಪ್ಪಿಗೆಯನ್ನು ನೀಡಿದ್ದರು. ಅಲ್ಲದೇ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖಚಿತ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದ್ದರು. ಇದರ ಬೆನ್ನಲ್ಲೇ ಗುರುವಾರ ಜಲದರ್ಶಿನಿ ಅತಿಥಿ ಗೃಹದಲ್ಲಿ ಜೆಡಿಎಸ್ ಸಚಿವರಾದ ಸಾ.ರಾ ಮಹೇಶ್, ಜಿ.ಟಿ ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಜಿ.ಪಂ ಸದಸ್ಯರು ಸಭೆ ನಡೆಸಿ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದ್ದರು. ಶುಕ್ರವಾರ ಸಚಿವರು ಮೈಸೂರು ಜಿ.ಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಯಾವುದೇ ಕಾರಣಕ್ಕೂ ಬದಲಿಸಲು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನೂ ನೀಡಿದ್ದರು.
ಆದರೆ, ರಾಜಕೀಯ ಚದುರಂಗದಾಟದಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶುಕ್ರವಾರ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮೈಸೂರು ಜಿ.ಪಂ ನಲ್ಲಿ ಬಿಜೆಪಿಯೊಡನೆ ಮೈತ್ರಿ ಮುಂದುವರೆಸುವುದಾದರೆ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನೆಯಾಗಲಿದೆ. ಇದರ ಹೊಣೆಯನ್ನು ಜೆಡಿಎಸ್ ಪಕ್ಷವೇ ವಹಿಸಬೇಕಾಗುತ್ತದೆ ಎಂದು ಹೇಳಿದ್ದರು. ಇದಕ್ಕೆ ಸ್ಪಂದಿಸಿದ ಎಚ್.ಡಿ.ದೇವೇಗೌಡ ಕೂಡಲೇ ಜೆಡಿಎಸ್ ಪಕ್ಷದ ಸ್ಥಳೀಯ ನಾಯಕರಿಗೆ ಕಾಂಗ್ರೆಸ್‍ನೊಂದಿಗೆ ಒಪ್ಪಂದ ಮಾಡಿಕೊಂಡು ಅಧಿಕಾರ ನಡೆಸುವಂತೆ ಸೂಚಿಸಿದರು ಎಂದು ತಿಳಿದು ಬಂದಿದೆ.
ದೇವೇಗೌಡರ ಸೂಚನೆಯಂತೆ ಯೂ ಟರ್ನ್ ಹೊಡೆದ ಸಚಿವ ಸಾ.ರಾ ಮಹೇಶ್, ಶುಕ್ರವಾರ ತಡರಾತ್ರಿ ಹುಣಸೂರು ಕ್ಷೇತ್ರದ ಮಾಜಿ ಶಾಸಕ ಎಚ್.ಪಿ ಮಂಜುನಾಥ್ ಜೊತೆಯಾಗಿ ನಗರದ ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವರಿಷ್ಠರ ಸೂಚನೆಯಂತೆ ಪಕ್ಷದ ತತ್ವ ಸಿದ್ಧಾಂತಗಳಿಗೆ ಬೆಲೆ ಕೊಟ್ಟು ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳವುದಾಗಿ ಘೋಷಿಸಿದರು.
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಯ್ಕೆಯಲ್ಲೂ ಸಚಿವರಾದ ಸಾ.ರಾ ಮಹೇಶ್ ಮತ್ತು ಜಿ.ಟಿ ದೇವೇಗೌಡ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಆದರೆ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಜೊತೆಗೆ ಕೈಜೋಡಿಸಿದರೆ ಮುಂಬರುವ ಲೋಕಸಭಾ ಚುನಾವಣೆಗೆ ಹೊಡೆತ ಬೀಳಲಿದೆ ಎಂಬುದನ್ನು ಅರಿತ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಕೊನೇ ಗಳಿಗೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುವಂತೆ ಸೂಚಿಸಿದರು ಎನ್ನಲಾಗಿದೆ.
ಒಟ್ಟಿನಲ್ಲಿ ಸಚಿವ ಸಾ.ರಾ ಮಹೇಶ್ ಮತ್ತು ಜಿ.ಟಿ ದೇವೇಗೌಡರಿಗೆ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಇಷ್ಟವಿಲ್ಲದಿದ್ದರೂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಕಿದ ದಾಳಕ್ಕೆ ಉದುರಿ ಬೀಳಲೇ ಬೇಕಾಯಿತು. ದೇವೇಗೌಡರ ಆದೇಶಕ್ಕೆ ತಲೆಬಾಗಿ ಮೈತ್ರಿಗೆ ಒಪ್ಪಿಕೊಳ್ಳಲಾಯಿತು.