ಇಂದಿನ ಭಾರತವೂ ಅಂದಿನ ಇಟಲಿ, ಜರ್ಮನಿಗಳೂ
ಭಾಗ-1
2014ರ ಮೇನಲ್ಲಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ತೀವ್ರಗಾಮಿ ಬಲಪಂಥೀಯ ಶಕ್ತಿಗಳು ಮೊದಲ ದಿನದಿಂದಲೇ ತಮ್ಮ ಪೂರ್ವಯೋಜಿತ ಕಾರ್ಯಕ್ರಮಗಳಿಗೆ ಚಾಲನೆ ನೀಡಿವೆ. ಮಣ್ಣನ್ನು ಹದಗೊಳಿಸಿದ ನಂತರ ಅವು ಬಿತ್ತಿರುವ ಪ್ರಗತಿಪರ ವಿರೋಧಿ, ದಲಿತ ದಮನಿತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ವಾಕ್‌ಸ್ವಾತಂತ್ರ ವಿರೋಧಿ, ಭಿನ್ನಮತ ವಿರೋಧಿ ವಾತಾವರಣದ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.
ಮೊನ್ನೆ ಫೆಬ್ರವರಿ 14ರಂದು ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಸಂಭವಿಸಿದ ಘನಘೋರ ಆತ್ಮಾಹುತಿ ದಾಳಿಗೆ ಕೇಂದ್ರೀಯ ಮೀಸಲು ಪಡೆಯ 40ಕ್ಕೂ ಅಧಿಕ ಸಿಪಾಯಿಗಳು ಬಲಿಯಾಗಿದ್ದಾರೆ. 2001ರಲ್ಲಿ ಜಮ್ಮುಕಾಶ್ಮೀರದ ವಿಧಾನಸೌಧದ ಮೇಲೆ ನಡೆದಿದ್ದ ಇಂತಹುದೇ ಕಾರು ಬಾಂಬ್ ದಾಳಿಯಲ್ಲಿ ಕನಿಷ್ಠ 38 ಜನ ಸಾವನ್ನಪ್ಪಿದ್ದರು. ಇಂದಿನ ಮತ್ತು ಅಂದಿನ ದಾಳಿಗಳೆರಡನ್ನೂ ಆಯೋಜಿಸಿರುವುದು ತಾನೇ ಎಂದು ವೌಲಾನಾ ಮಸೂದ್ ಅಝರ್ ನೇತೃತ್ವದ ಜೈಶೆ-ಎ-ಮುಹಮ್ಮದ್ ಘೋಷಿಸಿದೆ. ಈ ಹೇಯ, ಕ್ರೂರ, ಬರ್ಬರ ಮಾರಣಹೋಮವನ್ನು ಒಕ್ಕೊರಲಲ್ಲಿ ಖಂಡಿಸಿರುವ ಭಾರತದ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಸಂಸ್ಥೆಗಳು ಕೇಂದ್ರ ಸರಕಾರಕ್ಕೆ ತಮ್ಮ ಸಂಪೂರ್ಣ ಸಹಕಾರವನ್ನು ಘೋಷಿಸಿವೆ. ಅದೇ ವೇಳೆ ತಮ್ಮ ಭಾವನೆಗಳನ್ನು ಸಾರ್ವಜನಿಕವಾಗಿ ಹೊರಗೆಡಹುವ ಅವಕಾಶವಿಲ್ಲದ ಕೋಟ್ಯಂತರ ಭಾರತೀಯ ಪ್ರಜೆಗಳೆಲ್ಲರೂ ಇದಕ್ಕೆ ತಮ್ಮ ದನಿಗೂಡಿಸುತ್ತಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಆದರೆ ಇಂದು ಕೇಳಿಬರುತ್ತಿರುವಂತಹ ಮಾತುಕತೆಗಳ ಕಾಲ ಕಳೆದಿದೆ, ಸೇಡು ತೀರಿಸಲೇಬೇಕು, ನೂರಾರು ಶತ್ರುಗಳ ರುಂಡಗಳನ್ನು ಚೆಂಡಾಡಬೇಕು ಎಂಬಿತ್ಯಾದಿ ಮುಗಿಲುಮುಟ್ಟುವ ಕೂಗುಗಳು ಜನಸಾಮಾನ್ಯರನ್ನು ಆತಂಕಕ್ಕೀಡುಮಾಡುತ್ತಿವೆೆೆ. ದೇಶದ ಪ್ರಧಾನಿಯ ಸ್ಥಾನದಲ್ಲಿರುವವರೇ ಮೇಲ್ಪಂಕ್ತಿ ಹಾಕಿಕೊಡುತ್ತಿದ್ದಾರೆಂದ ಮೇಲೆ ತಳಮಟ್ಟದ ಗಣಗಳನ್ನು ಹೇಳುಕೇಳುವರ್ಯಾರು? ಹೀಗಾಗಿ ಉಭಯ ದೇಶಗಳ ಮಧ್ಯೆ ಶಾಂತಿ ಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಪ್ರತಿಪಾದಿಸುವವರನ್ನು; ಕೊನೆಯೆಂಬುದಿಲ್ಲದ ಕ್ರಿಯೆ, ಪ್ರತಿಕ್ರಿಯೆಗಳ ವರ್ತುಲವು ದ್ವೇಷ, ಪ್ರತೀಕಾರಗಳ ಕಿಚ್ಚು ನಿರಂತರವಾಗಿ ಉರಿಯುತ್ತಿರುವಂತೆ ನೋಡಿಕೊಳ್ಳುತ್ತದೆ ಎನ್ನುವವರನ್ನು; ರಾಜಕೀಯ, ಆರ್ಥಿಕ, ಸಾಮಾಜಿಕ ಒತ್ತಡಗಳೊಂದಿಗೆ ಅಹಿಂಸೆ ಮತ್ತು ಮಾತುಕತೆಗಳ ಮೂಲಕವೇ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ಸಲಹೆ ಮಾಡುವವರನ್ನು; ಕೆಲವು ಉಗ್ರಗಾಮಿಗಳು ಎಸಗುವ ದುಷ್ಕೃತ್ಯಗಳಿಗೆ ಇಡೀ ದೇಶದ ಜನತೆಯನ್ನು ಹೊಣೆ ಮಾಡುವುದು ಸರಿಯಲ್ಲ ಎನ್ನುವವರನ್ನು ಮತ್ತು ಪ್ರಗತಿಪರ ಪತ್ರಕರ್ತರನ್ನು ದೇಶದ್ರೋಹಿಗಳೆಂದು ಜರೆದು ಅವರ ವಿರುದ್ಧ ವಿಷಕಾರುವುದರೊಂದಿಗೆ ಬಂಧನಕ್ಕೆ ಒತ್ತಾಯಿಸುವ ಕಳವಳಕಾರಿ ಬೆಳವಣಿಗೆ ಉತ್ತುಂಗಕ್ಕೆ ಏರಿದೆ. ಒಟ್ಟಿನಲ್ಲಿ ದೇಶದಾದ್ಯಂತ ಒಂದು ಸಮೂಹಸನ್ನಿಯ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ.
2019ರ ಮಹಾಚುನಾವಣೆಗಳು ಸಮೀಪಿಸುತ್ತಿರುವ ಕಾಲದಲ್ಲಿ ಸಂಭವಿಸಿದ ಪುಲ್ವಾಮ ದುರ್ಘಟನೆ ದಿಲ್ಲಿ ಸಿಂಹಾಸನವನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕೆಂದು ಪಣ ತೊಟ್ಟಿರುವ ಪ್ರತಿಗಾಮಿ ಶಕ್ತಿಗಳ ಪಾಲಿಗೆ ವರದಾನದಂತೆ ಬಂದಿರುವಂತಿದೆ........... ಅಂದಿನ ಗೋಧ್ರಾ ದುರಂತ ಮತ್ತು ಉಗ್ರರ ಜೀವಬೆದರಿಕೆಗಳ ಹಾಗೆ; ಅದಕ್ಕೂ ಹಿಂದಿನ ಸಂಸತ್ತಿನ ಮೇಲಿನ ದಾಳಿಯ ಹಾಗೆ. ಅಂದ ಹಾಗೆ 1999ರ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣದ ಸೂತ್ರಧಾರಿಯಾಗಿದ್ದವನೂ ಇದೇ ಮಸೂದ್ ಅಝರ್. 1994ರಿಂದ ಭಾರತದ ಜೈಲಿನಲ್ಲಿ ಕೊಳೆಯುತ್ತಿದ್ದ ಈತನನ್ನು ಪ್ರಯಾಣಿಕರಿಗೆ ಬದಲಾಗಿ ಬಿಡುಗಡೆ ಮಾಡಿದ್ದು ವಾಜಪೇಯಿ ಸರಕಾರ. 2001ರಲ್ಲಿ ವಾಜಪೇಯಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ದೇಶದ ನಾನಾ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ ಸಂಸತ್ತಿನ ಮೇಲೆ ನಡೆದ ಮಾರಕ ದಾಳಿಯ ಮಾಸ್ಟರ್‌ಮೈಂಡ್ ಕೂಡ ಇದೇ ಮಸೂದ್ ಅಝರ್.......... ಕಾಕತಾಳೀಯ? ರೋಗಿ ಬಯಸಿದ್ದೂ ಹಾಲು ವೈದ್ಯ(ನಲ್ಲಿ) ಹೇಳಿ(ಸಿ)ದ್ದೂ ಹಾಲು? ಕಾಲವೇ ಹೇಳಬೇಕು. ಅತ್ತ ಕಡೆ ಸತ್ತ ಯೋಧರ ನೆತ್ತರು ಇನ್ನೂ ಹಸಿಯಾಗಿರುವಾಗಲೇ ಇತ್ತ ಕಡೆ ಧೂರ್ತ, ಮಹತ್ವಾಕಾಂಕ್ಷಿ ರಾಜಕಾರಣಿಗಳು ಈ ವರದಾನವನ್ನು ಬಳಸಿಕೊಂಡು ಜನಸಾಮಾನ್ಯರ ಗಮನವನ್ನು ಆಳುವ ಸರಕಾರದ ಹುಳುಕುಗಳು, ಹಗರಣಗಳು, ದೌರ್ಬಲ್ಯಗಳು, ಆರ್ಥಿಕ ವೈಫಲ್ಯಗಳು, ಜನವಿರೋಧಿ ನೀತಿಗಳು, ಭ್ರಷ್ಟಾಚಾರ ಇತ್ಯಾದಿ ಇತ್ಯಾದಿಗಳಿಂದ ಆಚೆ ಸರಿಸಿ ಚುನಾವಣಾ ಲಾಭ ಪಡೆಯಲು ಹೊರಟೂ ಆಗಿದೆ. ಸರ್ವೋಚ್ಚ ನಾಯಕರೇ ಹೃದಯದಲ್ಲಿ ಬೆಂಕಿಯ ಜ್ವಾಲೆ ಧಗಧಗಿಸುತ್ತಿದೆ ಎನ್ನುತ್ತ ಅದರೊಂದಿಗೆ ಪರೋಕ್ಷವಾಗಿ ಮತಯಾಚನೆ ಮಾಡುವ ತುಚ್ಛ ಮಟ್ಟಕ್ಕಿಳಿದಿರುವುದು ಹಿಂಬಾಲಕರಿಗೆ ಕೊಟ್ಟಿರುವ ಸನ್ನೆಯೋ ಎಂಬಂತೆ ದುಷ್ಟ ಘಟ್‌ಬಂಧನ್ (ಪ್ರತಿಪಕ್ಷಗಳ ಒಕ್ಕೂಟ) ದೇಶಕ್ಕೆ ಬೇಡ ಮೊದಲಾದ ನೇರ ಹೇಳಿಕೆಗಳೊಂದಿಗೆ ಆರಂಭವಾಗಿರುವ ಮತದಾರರನ್ನು ಪ್ರಭಾವಿಸುವ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ವೇಗ ಪಡೆದುಕೊಳ್ಳಲಿರುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆೆ.
2014ರ ಮೇನಲ್ಲಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ತೀವ್ರಗಾಮಿ ಬಲಪಂಥೀಯ ಶಕ್ತಿಗಳು ಮೊದಲ ದಿನದಿಂದಲೇ ತಮ್ಮ ಪೂರ್ವಯೋಜಿತ ಕಾರ್ಯಕ್ರಮಗಳಿಗೆ ಚಾಲನೆ ನೀಡಿವೆ. ಮಣ್ಣನ್ನು ಹದಗೊಳಿಸಿದ ನಂತರ ಅವು ಬಿತ್ತಿರುವ ಪ್ರಗತಿಪರ ವಿರೋಧಿ, ದಲಿತ ದಮನಿತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ವಾಕ್‌ಸ್ವಾತಂತ್ರ ವಿರೋಧಿ, ಭಿನ್ನಮತ ವಿರೋಧಿ ವಾತಾವರಣದ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕಳೆದ ಸುಮಾರು 57 ತಿಂಗಳುಗಳ ಅವಧಿಯಲ್ಲಿ ಕದನಶೀಲ ದೇಶಭಕ್ತರು, ಧರ್ಮರಕ್ಷಕರು, ಜಾತಿರಕ್ಷಕರು, ನೀತಿರಕ್ಷಕರು, ಗೋರಕ್ಷಕರೇ ಮುಂತಾದ ಉಗ್ರ ದಾಳಿಕೋರ ಪಡೆಗಳ ಹಾವಳಿ ಮಿತಿಮೀರಿದೆ. ಸಾವಿರಾರು ಸರಕಾರೇತರ ಸಮಾಜಸೇವಾ ಸಂಸ್ಥೆಗಳನ್ನು ಒಂದಿಲ್ಲೊಂದು ನೆಪವೊಡ್ಡಿ ಬಲವಂತವಾಗಿ ಮುಚ್ಚಿಸಲಾಗಿದೆ. ಸಾಂವಿಧಾನಿಕ ಹಾಗೂ ಮಾನವಹಕ್ಕುಗಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಹೋರಾಟಗಾರರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಒಬ್ಬೊಬ್ಬರನ್ನಾಗಿಯೇ ಜೈಲಿಗೆ ತಳ್ಳಲಾಗುತ್ತಿದೆ. ಪ್ರಗತಿಪರ ಚಿಂತಕರು, ಲೇಖಕರು, ಪತ್ರಕರ್ತರು, ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರು ಬೆದರಿಕೆ ಎದುರಿಸುತ್ತಿರುವುದಷ್ಟೆ ಅಲ್ಲ, ಹತ್ಯೆಗೂ ಈಡಾಗುತ್ತಿದ್ದಾರೆ. ಈ ರೀತಿಯಾಗಿ ದೇಶದಲ್ಲಿ ಒಂದು ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗುವಂತೆ ನೋಡಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ನಾವೆಲ್ಲರೂ ದಾರ್ಶನಿಕ ಜಾರ್ಜ್ ಸಂತಾಯನನ ಇತಿಹಾಸವನ್ನು ಸ್ಮರಿಸಲಾಗದವರು ಅದರ ಪುನರಾವರ್ತನೆಗೆ ಪಕ್ಕಾಗುತ್ತಾರೆ (Those who cannot remember the past are condemned to repeat it.) ಎಂಬ ಎಚ್ಚರಿಕೆಯನ್ನು ಪರಿಗಣಿಸಿ ಜಗತ್ತಿನ ಇತಿಹಾಸವನ್ನು ತುರ್ತಾಗಿ ನೆನಪಿಸಿಕೊಳ್ಳಬೇಕಾಗಿದೆ. ಹಾಗೆ ಚರಿತ್ರೆಯನ್ನು ಒಂದಿಷ್ಟು ಕೆದಕಿದಾಗ 19ನೆ ಶತಮಾನದ ಇಟಲಿ ಮತ್ತು ಜರ್ಮನಿಗಳಲ್ಲೂ ಹೆಚ್ಚುಕಮ್ಮಿ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬ ಬೆಚ್ಚಿಬೀಳಿಸುವ ಸತ್ಯ ಇದಿರಾಗುತ್ತದೆ.
ಇಟಲಿಯ ವಿದ್ಯಮಾನಗಳು
1914ರಲ್ಲಿ ಪ್ರಥಮ ಮಹಾಯುದ್ಧ ಆರಂಭವಾದಾಗ ಇಟಲಿಯಲ್ಲಿ ಫ್ಯಾಶಿಯೊ ದಅಜಿಯೋನ್ ರಿವೊಲೂಜನರಿಯಾ ಇಂಟರ್‌ನ್ಯಾಷನಲಿಸ್ತಾ (Fascio d'Azione Rivoluzionaria Internazionalista) ಹೆಸರಿನ ಗುಂಪಿಗೆ ಸೇರಿಕೊಂಡವರಲ್ಲಿ ಬೆನಿಟೊ ಮುಸಲೋನಿ ಎಂಬ ಮಹತ್ವಾಕಾಂಕ್ಷಿ ರಾಜಕಾರಣಿಯೂ ಒಬ್ಬ. ಯುದ್ಧ ಕೊನೆಗೊಳ್ಳುತ್ತಿದ್ದಂತೆ ಎಲ್ಲೆಡೆ ಜನರ ಹಾಹಾಕಾರ ಮುಗಿಲು ಮುಟ್ಟತೊಡಗಿದ್ದ ಸಂದರ್ಭದಲ್ಲಿ ಫ್ಯಾಶಿಯೊಗಳ ಫ್ಯಾಶಿವಾದ (ಫ್ಯಾಶಿಸಂ) ಒಂದು ಸಂಘಟಿತ ಚಳವಳಿಯಾಯಿತು. ಅದು ಏಕಕಾಲಕ್ಕೆ ಒಂದು ಚಳವಳಿಯೂ, ಚಾರಿತ್ರಿಕ ವಿದ್ಯಮಾನವೂ ಆಗಿತ್ತು. ಫ್ಯಾಶಿಸಂ ಚಳವಳಿಯ ಹುಟ್ಟಿಗೆ ಪ್ರಧಾನ ಕಾರಣವಾಗಿದ್ದುದು ಹಣಕಾಸು ನೀತಿಯಲ್ಲಿ ಸರಕಾರದ ತಾಟಸ್ಥ್ಯ ಧೋರಣೆಯ ವೈಫಲ್ಯ ಮತ್ತು ಕಮ್ಯೂನಿಸಂ ಕುರಿತಾದ ಭೀತಿಯ ಭಾವನೆ. ಒಂದೆಡೆ ಯುದ್ಧಾನಂತರದ ಆರ್ಥಿಕ ಹಿಂಜರಿತವನ್ನು ಇನ್ನೊಂದೆಡೆ ಟ್ರೇಡ್ ಯೂನಿಯನ್ ಚಳವಳಿ, ಸಮಾಜವಾದ, ಕಮ್ಯೂನಿಸಂಗಳು ಕಾರ್ಮಿಕ ವರ್ಗಗಳ ನಡುವೆ ಬಲಿಷ್ಠಗೊಳ್ಳುತ್ತಿದ್ದುದನ್ನು ಕಂಡ ಉದ್ಯಮಿಗಳು, ಭೂಮಾಲಕರು ಮತ್ತು ಮಧ್ಯಮವರ್ಗಗಳಲ್ಲಿ ಹುಟ್ಟಿಕೊಂಡ ಭಯ, ಆತಂಕಗಳು ಫ್ಯಾಶಿಸಂನ ಬೆಳವಣಿಗೆಗೆ ಅನುಕೂಲ ವಾತಾವರಣ ಕಲ್ಪಿಸಿಕೊಟ್ಟವು. ಫ್ಯಾಶಿವಾದವು (1)ಸರ್ವಾಧಿಕಾರ; (2)ರಾಷ್ಟ್ರೀಯತಾವಾದ ಮತ್ತು (3)ಮಾರ್ಕ್ಸ್ಸ್‌ವಾದ, ಉದಾರವಾದಗಳಿಗೆ ಪ್ರತಿರೋಧಗಳನ್ನು ಕಾರ್ಪೊರೇಟ್ ಸಿದ್ಧಾಂತದ ಅಡಿಯಲ್ಲಿ ಒಂದುಗೂಡಿಸುವ ಒಂದು ರಾಜಕೀಯ ಸಾಮಾಜಿಕ ವ್ಯವಸ್ಥೆಯಾಗಿ ಪರಿಣಮಿಸಿತು.
(ಮುಂದುವರಿಯುವುದು)