ಟಿ.ಪಿ.ಅಶೋಕರ ಪುಸ್ತಕ ಪ್ರೀತಿ
ಕಲೆ-ಸಾಹಿತ್ಯಗಳ ವಿಮರ್ಶೆಯ ಮಾನದಂಡಗಳು ಆಯಾ ಕೃತಿಯೊಳಗೇ ಅಂತರ್ಗತವಾಗಿರುತ್ತವೆ ಎನ್ನುವುದು ನವ್ಯ ಸಾಹಿತ್ಯ ವಿಮರ್ಶೆಯ ಸೂತ್ರಗಳಲ್ಲೊಂದು. ಈ ಮಾನದಂಡಗಳನ್ನು ಗುರುತಿಸಲು ವಿಮರ್ಶಕ ಕೃತಿಯ ಒಳಹೊಕ್ಕಾಗ, ಪ್ರಜ್ಞಾ-ಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಕೃತಿ ಪುನರ್‌ಸೃಷ್ಟಿಯಲ್ಲಿ ತೊಡಗಿರುತ್ತಾನೆ. ಈ ಪುನರ್‌ಸೃಷ್ಟಿಯಲ್ಲೇ ಅದರ ವಿಮರ್ಶೆ ಅಡಗಿರುತ್ತದೆ. ಅಶೋಕರ ವಿಮರ್ಶೆಯ ಮಾರ್ಗ ಈ ತೆರನದು.
ಮೌನದಿಂ ಬಿರಿವ ಮಲ್ಲಿಗೆಯಂತೆ ತಮ್ಮ ಸೃಜನಶೀಲತೆಯಿಂದ ಹಾಗೂ ವಿಮರ್ಶಾವಿವೇಕ ಸಂಪನ್ನತೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಕವಿ ಜಿ.ಎಸ್. ಶಿವರುದ್ರಪ್ಪನವರು. ಕವಿಯಾಗಿ, ವಿಮರ್ಶಕರಾಗಿ, ನಲ್ಮೆಯ ಮೇಷ್ಟ್ರಾಗಿ ಹೊಸತಲೆಮಾರಿನ ಲೇಖಕರನ್ನೂ ಸಾಹಿತ್ಯಾಸಕ್ತರನ್ನೂ ಬೆಳೆಸಿದ ಕೀರ್ತಿಯೂ ಅವರದಾಗಿದೆ. ಜಿ.ಎಸ್.ಎಸ್. ಟ್ರಸ್ಟ್ ಅವರ ಜನ್ಮದಿನದಂದು ಸಾಹಿತ್ಯ ಸಾಧಕರಿಗೆ ‘ಜಿಎಸ್ಸೆಸ್ ಪ್ರಶಸ್ತಿ’ ನೀಡುವ ಸಾಂಸ್ಕೃತಿಕ ಕಾಯಕವನ್ನು ಕಳೆದ ಹದಿನೆಂಟು ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ಸ್ತುತ್ಯಾರ್ಹವಾಗಿದೆ. ವಿಮರ್ಶೆಗೆ ಮೀಸಲಾದ ಜಿಎಸ್ಸೆಸ್ ಪ್ರಶಸ್ತಿ ಈ ವರ್ಷ ಕನ್ನಡದ ಬಹುಶೃತ ವಿಮರ್ಶಕರಾದ ಟಿ.ಪಿ.ಅಶೋಕ ಅವರಿಗೆ ಸಂದಿರುವುದು ‘ಪಾತ್ರೋ’ಚಿತವಾಗಿದೆ.
ಅಶೋಕ ‘ಸ್ವಯಂಸೇವೆಯ ಗಿಳಿಗಳ’ ಚಾಳಿನ ವಿಮರ್ಶಕರಲ್ಲ.ಸ್ವಪ್ರಶಂಸೆಯ ತುತ್ತೂರಿಯನ್ನು ಬದಿಗಿಟ್ಟು ಅನ್ಯರ ಅನನ್ಯತೆ, ಸಾಧನೆಗಳತ್ತ ದೃಷ್ಟಿಹರಿಸುವ ಸಹೃದಯ ವಿಮರ್ಶಕರು. ಎತ್ತರದ ಆಳು. ವಿಮರ್ಶೆಯಲ್ಲೂ ಎತ್ತರ ಸಾಧಿಸುವ ಮಹತ್ವಾಕಾಂಕ್ಷಿ. ಕಂಪಾಸ್‌ನಲ್ಲಿ ಸುಲಭವಾಗಿ ಆಕೃತಿಸಬಹುದಾದಂಥ ದುಂಡು ಮುಖ. ಭಾವನೆಗಳ ಚರ್ಯೆಯನ್ನು ಸುಲಭವಾಗಿ ಬಿಟ್ಟುಕೊಡಂತೆ ಮುಖದ ತುಂಬಾ ಆವರಿಸಿರುವ ಗಡ್ಡ. ಎದ್ದುಕಾಣುವ ನಿರಭ್ರ ದೃಷ್ಟಿಯ ಶೋಧಕ ಕಣ್ಣುಗಳು.ಜಗತ್ತಿನ ಎಲ್ಲ ಸಾಹಿತ್ಯವನ್ನೂ ತನ್ನ ಕಣ್ಣಳತೆಯೊಳಕ್ಕೆ ತಂದುಕೊಳ್ಳುವ ಶೋಧಕ ನೋಟ.ವಿಮರ್ಶೆಗೆ ರೂಪಕವಾಗಬಲ್ಲಂಥ ವ್ಯಕ್ತಿತ್ವ. ಅಶೋಕರ ‘ಪುಸ್ತಕ ಪ್ರಿಯತೆ’ಯ ಆಳ-ಎತ್ತರಗಳನ್ನು ಅರಿಯಬೇಕಾದರೆ ಅವರು ಓದಿರುವ ಪುಸ್ತಕಗಳನ್ನು ಅವರ ಪಕ್ಕ ಪೇರಿಸಿಯೇ ಅಳೆಯಬೇಕು. ಪೇರಿಸುವ ಪುಸ್ತಕಗಳ ಏರು ಅವರ ಎತ್ತರವನ್ನೂ ಮೀರಿಸಿ ನಭೋಮುಖವಾಗಿ ಬೆಳೆದರೆ ಆಶ್ಚರ್ಯಪಡಬೇಕಾಗಿಲ್ಲ. ಹೀಗೆ ಬೆಳೆದ ಎತ್ತರದ ಪುಸ್ತಕಗಳು ಅಶೋಕರ ಗುರುತ್ವಾಕರ್ಷಣೆಯಿಂದ ಅವರ ಸುತ್ತ ಹುತ್ತಗಟ್ಟಿದ ಗ್ರಂಥರಾಶಿಯೂ ಆಗಬಹುದು. ಹುತ್ತಗಟ್ಟದೆ ಚಿತ್ತ ಕೆತ್ತೀತೆ......
ಅಶೋಕ ಓದಿದ್ದು ಸಾಹಿತ್ಯ-ಕಲೆಗಳಲ್ಲಿ ಆಸಕ್ತಿ, ಅಭಿರುಚಿಗಳು ಮೊಳೆಯಲು ಹದವಾದ ನೆಲವಾದ ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ. ಅಧ್ಯಾಪನ ವೃತ್ತಿ ಸಾಗರದವರೆಗೆ ಎಳೆಯಿತು. ಅಲ್ಲೇ ಮನೋರಮೆಯೊಬ್ಬಳ ಕೈಹಿಡಿದು ಚತುರ್ಭುಜರಾದರು.ಕೈಹಿಡಿದ ಸಂಗಾತಿಗೂ ಸಾಹಿತ್ಯ ಕಲೆಗಳಲ್ಲಿ ಅತೀವ ಆಸಕ್ತಿ.ಇನ್ನೇನು ಬೇಕು ಬರವಣಿಗೆ ದಾಂಗುಡಿ ಇಡಲು.ಜೊತೆಗೆ ಸಮೀಪದ ಕೆ.ವಿ.ಸುಬ್ಬಣ್ಣನವರ ‘ಮುಕ್ತ ವಿಶ್ವವಿದ್ಯಾನಿಲಯ’ ನೀನಾಸಂ ಸೆಳೆಯಿತು. ಅಧ್ಯಯನ,ವಿಮರ್ಶೆಯ ಒಲವು ಸಾಹಿತ್ಯದ ಜೊತೆಗೆ ರಂಗಭೂಮಿ, ಸಂಗೀತ ಇತ್ಯಾದಿ ಆಯಾಮಗಳಿಗೂ ಚಾಚಿಕೊಂಡಿತು. ಅಶೋಕರ ವಿಮರ್ಶೆ ‘ಸಾಗರೋ’ಲ್ಲಂಘನ ಮಾಡಿ ಕರ್ನಾಟಕದಾದ್ಯಂತ ಪಸರಿಸಿತು. ಅಶೋಕರ ಸಾಹಿತ್ಯ ಪ್ರೇಮದ ಈ ವರಸೆ ನೋಡಿ: ಪುಸ್ತಕ ಪ್ರೀತಿ:, ಪುಸ್ತಕ ಸನ್ನಿಧಿ, ಪುಸ್ತಕ ಸಮಯ ಕಥನ ಪ್ರೀತಿ- ಈ ಪರಿಯ ಪುಸ್ತಕ ಪ್ರೀತಿ ಮೂವತ್ತಕ್ಕೂ ಹೆಚ್ಚು ಗ್ರಂಥಗಳಲ್ಲಿ ಅಭಿವ್ಯಕ್ತಿ ಪಡೆದಿದೆ.ಹದಿನೆಂಟಕ್ಕೂ ಹೆಚ್ಚು ವಿಮರ್ಶೆಯ ಸಂಕಲನಗಳು, ಫಾದರ್ ಸೆರ್ಗಿಯಸ್, ಓವರ್‌ಕೋಟ್, ರಿಕ್ತ ರಂಗಭೂಮಿ ಮೊದಲಾದ ಅನುವಾದಗಳೂ ಸೇರಿದಂತೆ ಹತ್ತರಹತ್ತಿರ ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಅಶೋಕ್ ಪ್ರಕಟಿಸಿದ್ದಾರೆ.
ಅಶೋಕರ ವಿಮರ್ಶೆ, ‘ಮಿತಿ’ ಮತ್ತು ‘ಅತಿ’ಗಳ ಎರಡು ರೀತಿನೀತಿಗಳಲ್ಲಿ ಪ್ರಕಾಶಗೊಂಡಿರುವುದನ್ನು ನಾವು ಅವರ ಸಂಕಲನಗಳ ಅಧ್ಯಯನದಿಂದ ಗಮನಿಸಬಹುದಾಗಿದೆ. ಪತ್ರಿಕೆಯೊಂದರ ಅಂಕಣಕ್ಕೆ ಬರೆಯುವಾಗ ಸಹಜವಾಗಿಯೇ ಸಂಪಾದಕರು ಗೊತ್ತುಪಡಿಸಿರುವ ಪುಟಗಳ ಮಿತಿ ಹಾಗೂ ಅದರ ಓದುಗ ಬಳಗ, ಅವರ ನಿರೀಕ್ಷೆ,ಅವರ ಜೀರ್ಣಶಕ್ತಿ ಇತ್ಯಾದಿಗಳನ್ನು ಗಮನದಲ್ಲ್ಲಿಟ್ಟುಕೊಂಡು ಬರೆಯಬೇಕಾಗುತ್ತದೆ. ಸಹೃದಯ ಓದುಗರನ್ನು ಬೆಳೆಸಬೇಕಾಗುತ್ತದೆ. ಇಂಥ ಇಕ್ಕಟ್ಟಿನಲ್ಲಿ ಕೆಲವೊಮ್ಮೆ ವಿಮರ್ಶೆ ಪುಸ್ತಕ ಪರಿಚಯದ ಹಂತದಲ್ಲೇ ತೃಪ್ತಿಪಟ್ಟುಕೊಳ್ಳ ಬೇಕಾಗಬಹುದು. ಅಶೋಕರ ‘ಪುಸ್ತಕ ಪ್ರೀತಿ’,‘ಪುಸ್ತಕ ಸಮಯ’ ಮತ್ತು ‘ಪುಸ್ತಕ ಸನ್ನಿಧಿ’ ಈ ಮಾದರಿಯ ಲೇಖನಗಳ ಸಂಕಲನಗಳು. ಪತ್ರಿಕೆಗಳಿಗೆ ಬರೆದ ಅಂಕಣ ಬರಹಗಳು. ‘ಪುಸ್ತಕ ಪ್ರೀತಿ’ಯಲ್ಲಿ ಎಂಬತ್ತೇಳು,‘ಪುಸ್ತಕ ಸಮಯ’ದಲ್ಲಿ ತೊಂಬತ್ತು,‘ಪುಸ್ತಕ ಸನ್ನಿಧಿ’ಯಲ್ಲಿ ಇಪ್ಪತ್ನಾಲ್ಕು ಲೇಖನಗಳಿವೆ.
‘ಪುಸ್ತಕ ಪ್ರೀತಿ’ಯಲ್ಲಿ ಸಾಹಿತ್ಯವಲ್ಲದೆ ಮಾನವಿಕಕ್ಕೆ ಸಂಬಂಧಿಸಿದ ‘ಅರಣ್ಯ ಮತ್ತು ಸಮಾಜ’,‘ಮಕ್ಕಳ ಬುದ್ಧಿಶಕ್ತಿ ಮತ್ತು ಪರಿಸರ’,‘ಅಂಬೇಡ್ಕರ್ ಸಮಗ್ರ ಚಿಂತನೆ’‘ಇರುವುದೊಂದೇ ಭೂಮಿ’,‘ಒಡೆಯರಲ್ಲ ಸೇವಕರು’,‘ಪರಿಸರದ ಕತೆ’ ಇಂಥ ಪುಸ್ತಕಗಳನ್ನು ಕುರಿತ ಲೇಖನಗಳೂ ಇವೆ.ಇಂಥ ಕೃತಿಗಳ ವಿಮರ್ಶೆಯಲ್ಲಿ ಅಶೋಕರ ಬರವಣಿಗೆ ಸಾಹಿತ್ಯ ವಿಮರ್ಶೆಯ ಮಾನದಂಡಗಳಿಂದ ದೂರವಾಗಿ ಪರಿಚಯಾತ್ಮಕವೂ ಚರ್ಚಾತ್ಮಕವೂ ಆಗುತ್ತದೆ.ಈ ಬಗೆಯ ಲೇಖನಗಳು ನಮ್ಮ ಇಂದಿನ ಸಂದರ್ಭದಲ್ಲಿ ಅರ್ಥ-ಪೂರ್ಣ ಚರ್ಚೆಗೆ ಮೀಟುಗೋಲಾಗುವ ಪರಿಯದಾಗಿದೆ. ಕಳೆದ ಶತಮಾನದ ತೊಂಬತ್ತರ ದಶಕದಲ್ಲಿ ಬರೆದ ‘ಪುಸ್ತಕ ಪ್ರೀತಿ’ಯಲೇಖನಗಳಿಗೆ ಈ ಮಾತು ಹೆಚ್ಚಾಗಿ ಅನ್ವಯಿಸುತ್ತದೆ. ಅಶೋಕ ಅವರು ಈಲೇಖನಗಳನ್ನು ‘ಅವಲೋಕನ’ ಎಂದು ಕರೆದಿದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ. 2011ರಲ್ಲಿ ಪ್ರಕಟವಾದ ‘ಪುಸ್ತಕ ಸಮಯ’ ಮತ್ತು 2013ರಲ್ಲಿ ಪ್ರಕಟವಾಗಿರುವ ‘ಪುಸ್ತಕ ಸನ್ನಿಧಿ’ಯ ಬರಹಗಳು ಕಥೆ/ಕಾವ್ಯ/ಕಾದಂಬರಿ/ಲಲಿತ ಪ್ರಬಂಧದಂಥ ಸಾಹಿತ್ಯ ಕೃತಿಗಳನ್ನು ಕುರಿತ ಲೇಖನಗಳಾಗಿದ್ದು ಇವೂ ಅಂಕಣ ಬರಹಗಳಾಗಿದ್ದರೂ ಪರಿಚಯಾತ್ಮಕತೆಯ ಎಲ್ಲೆ ಮೀರಿ, ಹೆಚ್ಚು ವಿಮರ್ಶಾತ್ಮಕವೂ, ವೌಲ್ಯ ನಿರ್ಣಯದಂಥ ಸಾಹಿತ್ಯ ಸಂವಾದಕ್ಕೆ ಪುಟಕೊಡುವ ರೀತಿಯದೂ ಆಗಿವೆ.
ಸಾಮಾನ್ಯ ಓದುಗರ ಅಭಿರುಚಿ-ಸಾಹಿತ್ಯಾಸಕ್ತಿ ಹುಟ್ಟಿಸುವಂಥ ಸೀಮಿತ ಆಶಯ ಮತ್ತು ಪತ್ರಿಕಾ ಅಂಕಣದ ಇತಿಮಿತಿಗಳನ್ನು ಗಮನದಲ್ಲ್ಲಿಟ್ಟುಕೊಂಡು ಬರೆದ ಈ ಲೇಖನಗಳು ಅಶೋಕರ ಒಂದು ಮಿತಿಯಾದರೆ, ಕಾರಂತ, ಅನಂತ ಮೂರ್ತಿ, ಕಂಬಾರ, ಡಿ.ಆರ್.ನಾಗರಾಜ, ಕೆ.ವಿ.ಸುಬ್ಬಣ್ಣ, ತೇಜಸ್ವಿ, ವೈದೇಹಿ ಮೊದಲಾದ ಕನ್ನಡದ ಮಹತ್ವದ ಲೇಖಕರ ಪ್ರಮುಖ ಕೃತಿಗಳನ್ನು ವಿಮರ್ಶೆಯ ಮಾನದಂಡಗಳಿಗೆ ಒರೆಹಚ್ಚಿ, ಅವರನ್ನು ಲೇಖಕರಾಗಿ ಇಡಿಯಾಗಿ ಗ್ರಹಿಸುವ ಅಕಡಮಿಕ್ ಅಧ್ಯಯನದ ಮಾದರಿಯ ಲೇಖನಗಳಲ್ಲಿ ವಿಮರ್ಶಕ ಅಶೋಕರ ‘ಅತಿ’ಯನ್ನು ಕಾಣುತ್ತೇವೆ. ಇಂಥ ಕೃತಿಗಳನ್ನು ಪರಾಮರ್ಶಿಸುವ ಮುನ್ನ ಅಶೋಕರ ವಿಮರ್ಶೆಯ ಸ್ವರೂಪ ಮತ್ತು ಅವರ ನಿಲುವು,ಆಶಯಗಳ ಸ್ಪಷ್ಟ ಗ್ರಹಿಕೆ ಅಗತ್ಯವಾಗುತ್ತದೆ. ಸಾಹಿತ್ಯ ವಿಮರ್ಶೆ ‘ಲೈಪ್ ಗಿವಿಂಗ್’ ಆಗಿರಬೇಕು ಎನ್ನುತ್ತಾನೆ ಪಶ್ಚಿಮದ ಸುಪ್ರಸಿದ್ಧ ವಿಮರ್ಶಕ ಎಫ್.ಆರ್.ಲೀವಿಸ್. ಅಂದರೆ ವಿಮರ್ಶೆ ಜೀವದಾಯಿಯಾಗಿರಬೇಕು, ಜೀವಪೋಷಣ ದ್ರವ್ಯವಾಗಿರಬೇಕು. ಇದು ಭಾರತೀಯ ಕಾವ್ಯ ಮೀಮಾಂಸೆಯ ಸಹೃದಯ ವಿಮರ್ಶೆಗೆ ಹತ್ತಿರವಾದ ಪರಿಕಲ್ಪನೆ. ಅಶೋಕರ ವಿಮರ್ಶೆಯ ಆಶಯವೂ ಸಾಹಿತ್ಯ ಕೃತಿಗಳ ಪರಾಮರ್ಶೆ ಮೂಲಕ ಬದುಕನ್ನು ಅರ್ಥೈಸುವುದು, ಬದುಕಿನ ತಾಳಿಕೆ-ಬಾಳಿಕೆಗೆ ಅಗತ್ಯವಾದ ಪೂರಕ ಪೋಷಣೆಯನ್ನು ಒದಗಿಸುವುದೇ ಆಗಿದೆ.ಬದುಕನ್ನು ಸಾಹಿತ್ಯ ಕೃತಿಗಳಲ್ಲಿ ಅದು ಪಡಿಮೂಡಿದಂತೆ ಅರ್ಥೈಸುವ ಅಶೋಕರ ರೀತಿ ನೀತಿಗಳನ್ನು ಗ್ರಹಿಸಲು ಅವರ ವಿಮರ್ಶೆಯ ಕ್ರಮ ಸಹಾಯಕವಾಗುತ್ತದೆ.
ಕಲೆ-ಸಾಹಿತ್ಯಗಳ ವಿಮರ್ಶೆಯ ಮಾನದಂಡಗಳು ಆಯಾ ಕೃತಿಯೊಳಗೇ ಅಂತರ್ಗತವಾಗಿರುತ್ತವೆ ಎನ್ನುವುದು ನವ್ಯ ಸಾಹಿತ್ಯ ವಿಮರ್ಶೆಯ ಸೂತ್ರಗಳಲ್ಲೊಂದು. ಈ ಮಾನದಂಡಗಳನ್ನು ಗುರುತಿಸಲು ವಿಮರ್ಶಕ ಕೃತಿಯ ಒಳಹೊಕ್ಕಾಗ, ಪ್ರಜ್ಞಾ-ಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಕೃತಿ ಪುನರ್‌ಸೃಷ್ಟಿಯಲ್ಲಿ ತೊಡಗಿರುತ್ತಾನೆ. ಈ ಪುನರ್‌ಸೃಷ್ಟಿಯಲ್ಲೇ ಅದರ ವಿಮರ್ಶೆ ಅಡಗಿರುತ್ತದೆ. ಅಶೋಕರ ವಿಮರ್ಶೆಯ ಮಾರ್ಗ ಈ ತೆರನದು. ಅವರು, ಕಥೆಯಿರಲಿ/ಕಾವ್ಯವಿರಲಿ, ಅದರ ನಾಭಿಮೂಲದಿಂದ ಹೊರಟು, ಹೃದಯವನ್ನು ಮುಟ್ಟಿ ಸರ್ವಾಂಗ ವಿಶ್ಲೇಷಿಸುತ್ತ, ಪುನರ್ರಚಿಸುವ ವಿಮರ್ಶನ ಕ್ರಮದಲ್ಲಿ ಅದರ ಆಂತರ್ಯವನ್ನು ನಿಮ್ಮ ಮುಂದೆ ಅನಾವರಣಗೊಳಿಸುತ್ತಾರೆ. ಅವರ ವಿಮರ್ಶೆಯ ಭಾಷೆಯೂ ಕೃತಿಯೊಂದರ ಪುನರ್ರಚನೆಯ ಪ್ರಕ್ರಿಯೆಯಲ್ಲಿ ಸೃಜನಶೀಲವಾಗುತ್ತದೆ. ಅಶೋಕರದು ಅಬ್ಬರದ ದನಿಯಲ್ಲ. ಮಾತು,ಮಾತನಾಡಿಸಿದವರಿಗೆ ಮಾತ್ರ ಕೇಳಿಸಬೇಕು ಎನ್ನುವಷ್ಟು ಮೆಲುದನಿಯಲ್ಲಿ, ಆಪ್ತದನಿಯಲ್ಲಿ ಅವರು ಕೃತಿಯೊಂದಿಗೆ, ಅದರ ಪಾತ್ರಗಳೊಂದಿಗೆ ಅನುಸಂಧಾನ ನಡೆಸುತ್ತಾರೆ. ಆದರೆ ‘ಮೃದು-ಮೆಲು’ಗಳಲ್ಲೂ ವಸ್ತುನಿಷ್ಠ ನಿಷ್ಠುರತೆಯುಂಟು, ರಸನಿಶ್ಪತ್ತಿಯುಂಟು.
ಮೇಲಿನ ಮಾತುಗಳಿಗೆ ನಿದರ್ಶನವಾಗಿ ಕಾರಂತರು-ಕುವೆಂಪು-ಕಂಬಾರರ ಕಾದಂಬರಿಗಳ ಆಧ್ಯಯನ, ತೇಜಸ್ವಿ ಕಥನ, ವೈದೇಹಿ ಕಥನ, ಕಥನ ಪ್ರೀತಿ, ಕಥನ ಭಾರತಿ ಮೊದಲಾದ ಕೃತಿಗಳನ್ನು ವಿಶೇಷವಾಗಿ ಗಮನಿಸ ಬಹುದು.ಕಾರಂತರ ಬಹುತೇಕ ಕಾದಂಬರಿಗಳಲ್ಲಿ ಮನುಷ್ಯ ಸಂಬಂಧಗಳಂತೆ ಗಂಡು-ಹೆಣ್ಣನ ಪ್ರೇಮ-ಕಾಮ ಸಂಬಂಧಗಳೂ ತೀವ್ರ ಸಂವೇದನೆಯಿಂದ ಅಭಿವ್ಯಕ್ತಿ ಪಡೆದಿರುವುದನ್ನು ನಾವು ಗಮನಿಸಬಹುದು. ಪ್ರೇಮ-ಕಾಮ ಸಂಬಂಧಕೇಂದ್ರಿತವಾದ ‘ಕನ್ಯಾಬಲಿ’, ‘ಒಡಹುಟ್ಟಿದವರು’,‘ಕೇವಲ ಮನುಷ್ಯರು’,‘ಮೈಮನಗಳ ಸುಳಿಯಲ್ಲಿ’ ಕಾದಂಬರಿಗಳಲ್ಲಿ ಕಾರಂತರು ಮಾನವನ ಈ ಮೂಲಪ್ರವೃತ್ತಿಯನ್ನು ಪಾತ್ರಗಳ ಅಂತರಂಗದ ಕಾಮನೆಗಳನ್ನು ಅದರೆಲ್ಲ ಮುಖಗಳೊಂದಿಗೆ ಅಭಿವ್ಯಕ್ತಿಸುವ ಮೂಲಕ ಗಂಡು-ಹೆಣ್ಣುಗಳ ಈ ಸಂಬಂಧವನ್ನು ತಾತ್ವಿಕ ಪಾತಳಿಯಲ್ಲಿ ನೋಡುವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನ ಹೆಚ್ಚು ಪ್ರಬುದ್ಧವೂ ತಾತ್ವಿಕವೂ ಆಗಿ ಓದುಗರ ಮನಂಬಗುವುದು ‘ಮೈಮನಗಳ ಸುಳಿಯಲ್ಲಿ’. ಇಲ್ಲಿ ವೇಶ್ಯಾವೃತಿಗೆ ಸೇರಿದ ಎರಡು ಮೂರು ತಲೆಮಾರುಗಳ ಪ್ರಾತಿನಿಧಿಕ ಪಾತ್ರಗಳ ಮೂಲಕ ಕಾರಂತರು ಜೀವನ ವೌಲ್ಯಗಳಾಗಿ ಪ್ರೇಮ-ಕಾಮ ಸಂಬಂಧಗಳನ್ನು ಶೋಧಿಸುತ್ತಾರೆ, ತುಲನಾತ್ಮಕವಾಗಿ ಕಾಣಿಸುತ್ತಾರೆ.
ಮಂಜುಳ-ಶಾರದ-ಚಂದ್ರಿ ವೇಶ್ಯಾ ಕುಟುಂಬದ ಈ ಮೂವರ ಮನಸ್ಸಿನಲ್ಲಿ ನಡೆಯುವ ಪ್ರೀತಿ-ಪ್ರಣಯಗಳ ತಾಕಲಾಟಗಳಲ್ಲಿ ಕಾರಂತರು ಪ್ರೇಮ-ಕಾಮ ಸಂಬಂಧಳಿಗೆ ಒಂದು ತಾತ್ವಿಕ ಧಾತುವನ್ನು ಒದಗಿಸುತ್ತಾರೆ. ಇದು ಲೋಕರೂಢಿಯಲ್ಲಿ ಎಷ್ಟು ಸಾಧು ಎಂಬುದು ಚರ್ಚಾರ್ಹ. ಎಂದೇ ಪ್ರಣಯ ಸಂಬಂಧಗಳನ್ನು ಕುರಿತ ಮಂಜುಳೆಯ ಆಲೋಚನೆಗಳು ಆದರ್ಶ ಎನ್ನಿಸಿದರೆ, ಯುವಪೀಳಿಗೆಯ ಚಂದ್ರಿಯ ಆಲೋಚನೆಗಳು ಹೆಚ್ಚು ಕಾರ್ಯಸಾಧುವಾದುದು ಎನ್ನಿಸುತ್ತದೆ. ಅಶೋಕರ ಅಧ್ಯಯನದಲ್ಲೂ,‘ಕನ್ಯಾಬಲಿ’ಯಿಂದ ‘ಮೈಮನಗಳ ಸುಳಿಯಲ್ಲಿ’ವರೆಗೆ, ಕಾರಂತರ ಪ್ರೇಮ-ಕಾಮ ಮೀಮಾಂಸೆಯ ತೌಲನಿಕ ಓದನ್ನು ನಾಮ ಗಮನಿಸಬಹುದು. ಎಂದೇ ‘ಕಾರಂತರ ಕಾದಂಬರಿಗಳಲ್ಲಿನ ಗಂಡು-ಹೆಣು’್ಣ-ಶೀರ್ಷಿಕೆಯೂ ಯಥೋಚಿತವಾಗಿದೆ. ಇದರ ಪರಿಷ್ಕೃತ ರೂಪವಾಗಿ ಕಾಣಿಸುವ ‘ಶಿವರಾಮ ಕಾರಂತ -ಎರಡು ಅಧ್ಯಯನಗಳು’ಕೃತಿಯ ಕೊನೆಯಲ್ಲಿ ಅನುಬಂಧವಾಗಿ ಬಂದಿರುವ ‘ಮೂಕಜ್ಜಿಯ ಕನಸುಗಳು’ ಲೇಖನದಲ್ಲಿ ಮನುಷ್ಯನ ಇತಿಹಾಸ, ಪುರಾಣಗಳಲ್ಲಿ ಕಾಮದ ನೆಲೆಯುನ್ನು ಶೋಧಿಸುವ ಕಾರಂತರು ಪ್ರೇಮ-ಕಾಮ ಮೀಮಾಂಸೆಯ ಇನ್ನೊಂದು ಮಜಲನ್ನು ಚರ್ಚಿಸಿದ್ದಾರೆ.
‘ತೇಜಸ್ವಿಕಥನ’ ಮತ್ತು ‘ವೈದೇಹಿ ಕಥನ’ -ನವೋದಯದ ನಂತರದ ಪೀಳಿಗೆಯ ಇಬ್ಬರು ಪ್ರಮುಖ ಲೇಖಕರ ವೈಚಾರಿಕತೆ, ನೀತಿ-ನಿಲುವುಗಳು ಮತ್ತು ಸೃಜನಶೀಲತೆಯ ಹಾಸು-ಬೀಸುಗಳನ್ನು ಅವರ ಪ್ರಮುಖ ಕೃತಿಗಳ ಅಧ್ಯಯನದ ಮೂಲಕ ಇಡಿಯಾಗಿ ಗ್ರಹಿಸುವ ಪ್ರಯತ್ನವಿದೆ. ‘ಕಥನ ಪ್ರೀತಿ’ಯಲ್ಲಿ ಕನ್ನಡದ ಒಂದು ನೂರು ಸಣ್ಣ ಕಥೆಗಳ ವಿಶ್ಲೇಷಣೆಯಾದರೆ ‘ಕಥನ ಭಾರತಿ’ ಆಧುನಿಕ ಭಾರತದ ಸಂಕಥನ. ‘ಕಥನ ಪ್ರೀತಿ’ಯಲ್ಲಿನ ಕಥೆಗಳ/ಲೇಖಕರ ಆಯ್ಕೆ ಚರ್ಚಾರ್ಹವೆನಿಸಿದರೂ ಒಂದು ಸಂಪುಟದಲ್ಲಿ ನೂರು ಕತೆಗಾರರನ್ನು ವಿಶ್ಲೇಷಿಸಿರುವುದನ್ನು ಓದಿದಾಗ ಕನ್ನಡ ಸಣ್ಣ ಕಥೆಯ ಇತಿಹಾಸವನ್ನು ಹಾದು ಬಂದಂತೆಯೇ ಭಾಸವಾಗುವುದು. ರವೀಂದ್ರನಾಥ ಟಾಗೋರ್, ಗಾಂಧಿ, ಪ್ರೇಮಚಂದ್‌ರಿಂದ ಹಿಡಿದು ಗಿರೀಶ್ ಕರ್ನಾಡರ ವರೆಗೆ ವಿವಿಧ ಭಾರತೀಯ ಭಾಷೆಗಳ ಪ್ರಾತಿನಿಧಿಕ ಕಥೆಗಾರರ ಪ್ರಮುಖ ಕಥೆಗಳನ್ನು ವಿಮರ್ಶಾತ್ಮಕವಾಗಿ ಪರಿಚಯಿಸುವ ಈ ಕೃತಿ ಭಾರತೀಯ ಕಥಾಸಾಹಿತ್ಯದ ವ್ಯಚಾರಿಕತೆ ಮತ್ತು ಸೃಜನಶೀಲತೆಯ ಹರಹು-ವಿಸ್ತಾರಗಳ ಜೊತೆಗೆ ಹಲವು ಕಾಲಘಟ್ಟಗಳ ಭಾರತೀಯ ಸಂವೇದನೆಯನ್ನು ಬಿಂಬಿಸುವ ಯಶಸ್ವೀ ಪ್ರಯತ್ನವಾಗಿದೆ.
ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ವಿಮರ್ಶೆಯ ವ್ರತದಲ್ಲಿ ತೊಡಗಿಕೊಂಡಿರುವ ಟಿ.ಪಿ. ಅಶೋಕ ಅವರ ಸಾಧನೆ ಗಣನೀಯವಾದುದು. ಒಂದು ಸಾಹಿತ್ಯ ಕೃತಿಯ ವೌಲ್ಯಮಾಪನವನ್ನು ಕೃತಿಯ ಕಾಲದಲ್ಲೇ, ಕೃತಿಕಾರರ ಸಮಕಾಲೀನ ವಿಮರ್ಶಕರಿಂದ ಬಯಸುವುದು ಅತಿಯಾದ ನಿರೀಕ್ಷೆಯಾದೀತು. ಇವತ್ತಿನ ಕಾಲಮಾನದಿಂದ ನೋಡಿದಲ್ಲಿ, ಮನುಷ್ಯಮಾತ್ರರಾದವರು ಯಾರಿಂದಲೂ ಯಾವ ಕ್ಷೇತ್ರದಲ್ಲೂ ವಸ್ತುನಿಷ್ಠ ವಿಮರ್ಶೆ, ವೌಲ್ಯಮಾಪನ ಅಸಾಧ್ಯ ಎನ್ನುವಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸಾಹಿತ್ಯವೂ ಇದಕ್ಕೆ ಹೊರತಲ್ಲ. ಸತ್ವಶಾಲಿ ಕೃತಿಯೊಂದರ ವೌಲ್ಯಮಾಪನ ಭವಿಷ್ಯತ್ಕಾಲದಲ್ಲೇ ಸಾಧ್ಯ. ಪಂಪ ರನ್ನರ ಮಾತೇಕೆ ಬೇಂದ್ರೆ, ಕುವೆಂಪು ಅವರ ಬಗ್ಗೆ ಈಗೀಗ ಮಾತ್ರ ಪೂರ್ವಾಗ್ರಹಮುಕ್ತವಾದ ವಸ್ತುನಿಷ್ಠ ವೌಲ್ಯಮಾಪನ ಸಾಧ್ಯ ಎಂಬ ನಿರ್ಮಮಕಾರದ ಸುಳಿವು ಸಿಗುತ್ತಿದೆ. ಹೀಗಿರುವಾಗ, ಒಂದು ಯೋಗ್ಯ ಕೃತಿಯನ್ನು ರಸಿಕರಿಗೆ ಪರಿಚಯಿಸುವ ಸಹೃದಯ ವಿಮರ್ಶೆಯನ್ನು ಲೇಖಕರು ತಮ್ಮ ಕಾಲದಲ್ಲಿ ಬಯಸಿದರೆ ಅದು ಅತಿಯಾದ ನಿರೀಕ್ಷೆಯಾಗದು.ಅಶೋಕರು ಅಂಥ ಸಹೃದಯ ವಿಮರ್ಶೆಯಿಂದ ಸಾಹಿತ್ಯಾಸಕ್ತರ ಮನ ಗೆದ್ದಿದ್ದಾರೆ ಎಂದು ಹೇಳಲು ಸಂತೋಷವಾಗುತ್ತದೆ. ಹಲವಾರು ಪ್ರಶಸ್ತಿಗಳ ಜೊತೆಗೆ ಕಳೆದ ವರ್ಷ ಕೇಂದ್ರ ಸಾಹಿತ್ಯ ಅಕಾಡಮಿ, ಈ ವರ್ಷ ಜಿಎಸ್ಸೆಸ್ ಪ್ರಶಸ್ತಿಗಳಿಗೆ ಭಾಜನರಾಗಿರುವ ಅಶೋಕರಿಗೆ ಹೇಳೋಣ
ಸ್ವಸ್ತಿ-ಸ್ವಸ್ತಿ-ಸ್ವಸ್ತಿ.