varthabharthi


ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 24 Feb, 2019

ವ್ಯಸ್ತವಾಗಿರುವ ರೂಡಿ

ನರೇಂದ್ರ ಮೋದಿ ಸಂಪುಟದಿಂದ ಕೈಬಿಟ್ಟ ಸುಮಾರು ಒಂದು ವರ್ಷದ ನಂತರ ರಾಜೀವ್ ಪ್ರತಾಪ್ ರೂಡಿಯವರನ್ನು ಕಳೆದ ಡಿಸೆಂಬರ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿತ್ತು. ಕೆಲವರಂತೂ ಈ ನೇಮಕದಿಂದ ಪಕ್ಷದ ಇನ್ನೋರ್ವ ವಕ್ತಾರ ತೀಕ್ಷ್ಣ ಮಾತುಗಳ ಸಂಬೀತ್ ಪಾತ್ರಾ ಅವರ ಪಕ್ಷದಲ್ಲಿನ ಪಾತ್ರಕ್ಕೆ ಕಡಿವಾಣ ಬೀಳಲಿದೆ ಎಂದೂ ಭಾವಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ರಾಷ್ಟ್ರೀಯ ಜನತಾದಳದ ಅಭ್ಯರ್ಥಿ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿದೇವಿಯನ್ನು ಸೋಲಿಸಿದ್ದ ರೂಡಿಗೆ ಪ್ರಧಾನಿ ನರೇಂದ್ರ ಮೋದಿ ಕೌಶಲ್ಯಾಭಿವೃದ್ಧಿ ಸಚಿವಾಲಯದ ಸ್ವತಂತ್ರ ಖಾತೆಯನ್ನು ನೀಡಿದ್ದರು. ಆದರೆ ಸಂಪುಟ ಪುನರ್‌ರಚನೆಯ ಸಮಯದಲ್ಲಿ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದರು. ಆದರೆ ಕೆಲವು ಸಮಯದಿಂದ ರೂಡಿ ಎಲ್ಲೋ ಕಳೆದು ಹೋಗಿದ್ದಾರೆ ಮತ್ತು ಅವರು ಸುದ್ದಿ ವಾಹಿನಿಗಳ ಚರ್ಚೆಗಳಲ್ಲೂ ಕಾಣಲು ಸಿಗುತ್ತಿಲ್ಲ. ಅವರನ್ನು ಇನ್ನಾವುದೋ ಕಾರಣಕ್ಕೆ ಪುನಃ ಕೈಬಿಡಲಾಗಿದೆಯೇ ಎಂಬ ಅನುಮಾನವನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ರೂಡಿ ಸದ್ಯ ತನ್ನ ಕುಟುಂಬ ವ್ಯವಹಾರದಲ್ಲಿ ವ್ಯಸ್ತವಾಗಿದ್ದು ಅದಕ್ಕೂ ರಾಜಕೀಯದ ಜೊತೆ ನಂಟಿದೆ ಎನ್ನುವುದು ತಿಳಿದುಬಂದಿದೆ. ಅಸಲಿಗೆ ರೂಡಿಯವರ ಪುತ್ರಿ ಮತ್ತು ಜೆಡಿ(ಯು)ನ ಕೆ.ಸಿ ತ್ಯಾಗಿ ಪರಸ್ಪರ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಈ ಸಮಾರಂಭದ ಸಿದ್ಧತೆಯಲ್ಲಿ ರೂಡಿ ವ್ಯಸ್ತವಾಗಿದ್ದಾರೆ. ನಿಶ್ಚಿತಾರ್ಥ ಸಮಾರಂಭದ ಆಮಂತ್ರಣ ಪತ್ರಗಳನ್ನು ಈಗಾಗಲೇ ಹಂಚಲಾಗುತ್ತಿದೆ. ಅದು ನಿರೀಕ್ಷಿತವೂ ಆಗಿದೆ. ಚುನಾವಣೆಗಳ ಈ ಸಮಯದಲ್ಲಿ ಸ್ನೇಹಿತರನ್ನು ಹೆಚ್ಚಿಸುವುದು ಮತ್ತು ಸಂಬಂಧಗಳನ್ನು ಬೆಳೆಸುವುದು ಒಳ್ಳೆಯದೆ. ರೂಡಿ ಆದಷ್ಟು ಬೇಗ ಸಕ್ರಿಯ ರಾಜಕೀಯಕ್ಕೆ ಮರಳಬಹುದು.


ನೇಮಕಾತಿಯಲ್ಲಿ ವ್ಯಸ್ತವಾಗಿರುವ ಜಾವಡೇಕರ್

ವರದಿಗಳ ಪ್ರಕಾರ, ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿದರೂ ಚುನಾವಣಾ ಆಯೋಗ ಮಾರ್ಚ್ 5,2019ರಂದು ಲೋಕಸಭಾ ಚುನಾವಣೆಯ ದಿನಾಂಕವನ್ನು ಘೋಷಿಸಲಿದೆ. ಹಾಗಾಗಿ, ನೀವು ಪತ್ರಿಕೆಗಳ ಮೇಲೆ ಕಣ್ಣಾಯಿಸಿದರೆ ಸರಕಾರಿ ಜಾಹೀರಾತುಗಳಲ್ಲಿ ಆಗಿರುವ ಏರಿಕೆಯ ಬಗ್ಗೆ ನಿಮಗೆ ಅರಿವಾಗುತ್ತದೆ. ದೂರದರ್ಶನದಲ್ಲೂ ಬಹಳಷ್ಟು ಸರಕಾರಿ ಜಾಹೀರಾತುಗಳು ಪ್ರಸಾರವಾಗುತ್ತಿವೆ. ಎಲ್ಲ ಸಚಿವರೂ ಸಮಯಕ್ಕಿಂತ ಹೆಚ್ಚು ದುಡಿಯುತ್ತಿದ್ದಾರೆ. ಚುನಾವಣಾ ನೀತಿಸಂಹಿತೆ ಜಾರಿಯಾಗುವ ಮೊದಲೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಮುಖ ನೇಮಕಗಳನ್ನು ಮಾಡುವ ಉದ್ದೇಶದಿಂದ ಪ್ರಕಾಶ್ ಜಾವಡೇಕರ್ ನೇತೃತ್ವದ ಮಾನವ ಸಂಪನ್ಮೂಲ ಸಚಿವಾಲಯ ನೇಮಕಾತಿ ಸಂಬಂಧಿತ ಕಡತಗಳನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಿದೆ ಎಂದು ವರದಿಗಳು ತಿಳಿಸಿವೆ. ಈ ಪೈಕಿ ಕೆಲವು ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳ ನೇಮಕವೂ ಸೇರಿದೆ. ಮುಂದಿನ ವಾರದ ಒಳಗಾಗಿ ಸರಕಾರ ದೊಡ್ಡ ಮಟ್ಟದಲ್ಲಿ ನೇಮಕಾತಿಗಳನ್ನು ಘೋಷಿಸುವ ನಿರೀಕ್ಷೆಯಿದೆ. ವಿವಿಧ ಜಾತಿ ಸಮುದಾಯಗಳನ್ನು ಮತ್ತು ರಾಜಕೀಯ ಪಕ್ಷಗಳನ್ನು ಸಂತುಷ್ಟಗೊಳಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಬಹುಶಃ, ಚುನಾವಣಾ ನೀತಿಸಂಹಿತೆ ಜಾರಿಯಾಗುವುದಕ್ಕೂ ಮೊದಲು ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಬಾಣಗಳನ್ನು ಉಪಯೋಗಿಸಲು ಮೋದಿ ಸರಕಾರ ಯೋಚಿಸಿದಂತಿದೆ. ಈ ನಿಟ್ಟಿನಲ್ಲಿ ಜಾವಡೇಕರ್, ಕನಿಷ್ಠಪಕ್ಷ ತಮ್ಮ ನಾಯಕರ ದೃಷ್ಟಿಯಲ್ಲಿ, ಉತ್ತಮ ಕೆಲಸವನ್ನೇ ಮಾಡುತ್ತಿದ್ದಾರೆ.


ಪ್ರಿಯಾಂಕಾ ಪರಿಣಾಮ

ಪಿ.ವಿ. ನರಸಿಂಹ ರಾವ್ ಸರಕಾರದಲ್ಲಿ ಸಚಿವರಾಗಿದ್ದ ರಾಮ್ ಲಾಲ್ ರಹಿ ಕೆಲವು ಸಮಯದ ಹಿಂದೆ ಬಿಜೆಪಿ ಸೇರಿದ್ದರು. ಅವರ ಮಗ ಕೂಡಾ ಉತ್ತರ ಪ್ರದೇಶ ಬಿಜೆಪಿ ಸಂಸದರಾಗಿದ್ದಾರೆ. ಆದರೆ ಇತ್ತೀಚೆಗೆ ಸಂಸತ್‌ನ ಕೇಂದ್ರ ಸಭಾಭವನದಲ್ಲಿ ರಹಿಯವರು ಬಿಜೆಪಿಯನ್ನು ಟೀಕಿಸಿದ್ದರು. ಇಂದಿನ ನಾಯಕರು ಜವಾಹರ ಲಾಲ್ ನೆಹರೂ ಅವರನ್ನು ಅವಹೇಳನ ಮಾಡುವಾಗ ನನಗೆ ರೋಷ ಉಕ್ಕುತ್ತದೆ. ನೆಹರೂ ಅವರ ಹೆಸರನ್ನು ಹೇಳಲೂ ಅವರಿಗೆ ಯೋಗ್ಯತೆಯಿಲ್ಲ ಎಂದು ಬಿಜೆಪಿಯತ್ತ ಬೆಟ್ಟು ಮಾಡುತ್ತಾ ರಹಿ ಹೇಳಿದ್ದರು. ಪ್ರಿಯಾಂಕಾ ಗಾಂಧಿಯ ಪರಿಣಾಮದ ಬಗ್ಗೆ ಕೇಳಿದಾಗ, ರಾಜಕೀಯದ ಮೇಲೆ ಆಕೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದ್ದಾರೆ ಮತ್ತು ಆಕೆಯ ನಾಯಕತ್ವದಡಿಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದ್ದಾರೆ. ಓರ್ವ ಬಿಜೆಪಿ ನಾಯಕನಾಗಿ ರಹಿ ಅಷ್ಟೊಂದು ಆತ್ಮವಿಶ್ವಾಸದಿಂದ ಪ್ರಿಯಾಂಕಾ ಗಾಂಧಿ ಬಗ್ಗೆ ಮಾತನಾಡಿದ್ದಾದರೂ ಹೇಗೆ?.

ಈ ರಹಸ್ಯ ಬಯಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಕೆಲವೇ ದಿನಗಳಲ್ಲಿ ರಹಿ ಪ್ರಿಯಾಂಕಾ ಪಕ್ಕದಲ್ಲಿ ನಿಂತಿದ್ದು ಕಾಂಗ್ರೆಸ್‌ಗೆ ಮರುಸೇರ್ಪಡೆಗೊಳ್ಳಲು ಸಿದ್ಧರಾಗಿದ್ದರು. ಸದ್ಯ ಪ್ರಿಯಾಂಕಾ ಹಳೆ ಕಾಂಗ್ರೆಸ್ ತಲೆಗಳನ್ನು ಪಕ್ಷಕ್ಕೆ ಮರು ಕರೆತರಲು ಯಶಸ್ವಿಯಾಗುತ್ತಿದ್ದರೂ, ಇದರಿಂದ ಪಕ್ಷಕ್ಕೆ ವಾಸ್ತವದಲ್ಲಿ ಯಾವುದೇ ಲಾಭವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಪ್ರಿಯಾಂಕಾ ಕಾಂಗ್ರೆಸ್ ಸೇರಿರುವುದರಿಂದ ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡಿದ್ದ ಹಳೆ ನಾಯಕರಿಗೆ ಕಾಂಗ್ರೆಸ್ ಮೇಲೆ ಮತ್ತೆ ನಂಬಿಕೆ ಬರುವಂತೆ ಮಾಡಿರುವುದರಲ್ಲಿ ಸಂಶಯವಿಲ್ಲ.


ರಾಹುಲ್ ಹೊಸ ಶೈಲಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯ ಚುನಾವಣಾ ನಾಗಾಲೋಟಕ್ಕೆ ಕಡಿವಾಣ ಹಾಕುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಷ್ಟೇ. ಆದರೆ ರಾಹುಲ್ ಸದ್ಯ ಒಂದು ಯುದ್ಧವನ್ನಂತೂ ಗೆದ್ದಿದ್ದಾರೆ. ರಾಹುಲ್ ಗಾಂಧಿ ಚಳಿಗಾಲದಲ್ಲಿ ಬಿಳಿ ಕುರ್ತಾ-ಪೈಜಾಮಾ ಮತ್ತು ಅದರ ಮೇಲೆ ಜ್ಯಾಕೆಟ್ ಧರಿಸಿ ಎಲ್ಲೆಡೆ ಕಾಣಿಸಿಕೊಂಡಿದ್ದರು. ಸದ್ಯ ಈ ಶೈಲಿ ಕಾಂಗ್ರೆಸ್‌ನಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಕಾಂಗ್ರೆಸ್ ಮಂದಿ ಸಾಂಪ್ರದಾಯಿಕ ನೆಹರೂ ಜ್ಯಾಕೆಟ್ ಅನ್ನು ತೊರೆದು ರಾಹುಲ್ ಶೈಲಿಯ ತೋಳಿಲ್ಲದ ಜ್ಯಾಕೆಟ್ ಧರಿಸಲು ಆರಂಭಿಸಿದ್ದರೆ ಇತ್ತ ಕಡೆ ಬಿಜೆಪಿಗರೂ ಈ ಶೈಲಿಯನ್ನು ಅನುಸರಿಸುತ್ತಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್, ಜಿತಿನ್ ಪ್ರಸಾದ್ ಮುಂತಾದ ಯುವನಾಯಕರು ಈ ಶೈಲಿಯನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಸೇರ್ಪಡೆ ವಿತ್ತ ಸಚಿವ ಅರುಣ್ ಜೇಟ್ಲಿ. ಈ ಶೈಲಿಯನ್ನು ಪರಿಚಯಿಸಿದ ಹೊಗಳಿಕೆಯನ್ನು ರಾಹುಲ್ ಒಬ್ಬರೇ ತೆಗೆದುಕೊಳ್ಳಲು ಸಾಧ್ಯವಿರದಿರಬಹುದು, ಆದರೆ ಈ ಶೈಲಿ ಸದ್ಯ ಜನಪ್ರಿಯವಾಗಿರುವುದಂತೂ ನಿಜ. ಸದ್ಯ ಮೋದಿ ತಮ್ಮ ಮೋದಿ ಜ್ಯಾಕೆಟನ್ನು ತಮ್ಮಲ್ಲೇ ಇಟ್ಟುಕೊಳ್ಳಬಹುದು, ಯಾಕೆಂದರೆ ನೆಹರೂ ಅವರ ವಂಶಸ್ಥರೂ ಅವರ ಟ್ರೇಡ್‌ಮಾರ್ಕ್ ಜ್ಯಾಕೆಟನ್ನು ಧರಿಸುತ್ತಿಲ್ಲ.


ಪರ್ಫೆಕ್ಷನಿಸ್ಟ್ ರಾಥೋಡ್

ಕಳೆದ ವಾರ ಹುತಾತ್ಮ ಸಿಆರ್‌ಪಿಎಫ್ ಯೋಧರಿಗೆ ಪ್ರಧಾನಿ ಮೋದಿ ಪಾಲಮ್ ವಾಯುನೆಲೆಯಲ್ಲಿ ಅಂತಿಮ ನಮನ ಸಲ್ಲಿಸುವ ಸಂದರ್ಭದಲ್ಲಿ ರಕ್ಷಣಾ ಸಂಬಂಧಿ ಸಚಿವಾಲಯಗಳ ಉಸ್ತುವಾರಿ ವಹಿಸಿದ್ದ ಸಚಿವರುಗಳ ಹೊರತಾಗಿ ಹಾಜರಿದ್ದ ಏಕೈಕ ಸಚಿವರೆಂದರೆ ಮಾಹಿತಿ ಮತ್ತು ಪ್ರಸಾರ ಸಚಿವ ರಾಜವರ್ಧನ ರಾಥೋಡ್ ಅವರು. ಸಮಯಕ್ಕಿಂತ ಬೇಗ ಆಗಮಿಸಿದ್ದ ರಾಥೋಡ್ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಂತರ ನಿಂತಿದ್ದರು. ವಿವಿಧ ಕೇಂದ್ರ ಸಚಿವರು ಯೋಧರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಹೊಣೆಯನ್ನು ರಾಥೋಡ್‌ಗೆ ನೀಡಲಾಗಿತ್ತು. ಎಲ್ಲವೂ ಸುಗಮವಾಗಿ ನಡೆಯುವಂತೆ ಮತ್ತು ಸಚಿವರು ಶಿಷ್ಟಾಚಾರಗಳನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಭಾರತದ ಶೂಟಿಂಗ್ ದಂತಕತೆ ಮತ್ತು ನಿವೃತ್ತ ಕರ್ನಲ್ ಕೂಡಾ ಆಗಿರುವ ರಾಥೋಡ್ ನೋಡಿಕೊಂಡರು.

ತನ್ನ ಕೆಲಸವನ್ನು ಮಾಡುವಲ್ಲಿ ರಾಥೋಡ್ ನಿಯಮಗಳನ್ನು ಯಥಾವತ್ತಾಗಿ ಪಾಲಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಜನರು ದುಃಖಿತರಾಗಿದ್ದ ಸಮಯದಲ್ಲಿ ಅತ್ಯಂತ ಪ್ರಮುಖ ಕೆಲಸವನ್ನು ಪ್ರಧಾನಿ ಮೋದಿ ರಾಥೋಡ್ ಅವರಿಗೆ ನೀಡಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ರಾಥೋಡ್ ಕೂಡಾ ಉತ್ತಮ ಕೆಲಸವನ್ನೇ ಮಾಡಿದ್ದಾರೆ ಎನ್ನುವುದು ಸ್ಪಷ್ಟ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)