ಭಿಕ್ಷಾಟನೆ
ಭಾರತದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು
ಭಾರತೀಯ ಸಮಾಜದಲ್ಲಿ, ವಿಶೇಷವಾಗಿ ಹಿಂದೂ ಜಾತಿಗಳಲ್ಲಿ ದಲಿತ ಮತ್ತು ಕೆಳಜಾತಿಯ ಭಿಕ್ಷುಕರನ್ನು ನಡೆಸಿಕೊಳ್ಳುವುದಕ್ಕಿಂತ ಭಿನ್ನವಾಗಿ ಬ್ರಾಹ್ಮಣ ಜಾತಿಗೆ ಸೇರಿದ ಭಿಕ್ಷುಕರನ್ನು ನಡೆಸಿಕೊಳ್ಳಲಾಗುತ್ತದೆ (ಭಿಕ್ಷೆ/ದಾನ ಬೇಡುವ ಬ್ರಾಹ್ಮಣ) ಯಾಚಕರಿಗೆ, ಜನರು ಪುಣ್ಯ ಸಂಪಾದನೆಗಾಗಿ, ಆಹಾರ ಮತ್ತು ಹಣ ನೀಡುತ್ತಾರೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ದಲಿತ ಭಿಕ್ಷುಕರನ್ನು ಬೈದು ಬರಿಗೈಯಲ್ಲಿ ಕಳುಹಿಸಲಾಗುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷುಕರು ಎದುರಾಗಿ ಕೈಚಾಚಿದಾಗ ಒಂದೋ ಅವರನ್ನು ಬೈಯಲಾಗುತ್ತದೆ ಅಥವಾ ಅವರೆಡೆಗೆ ಕೆಲವು ನಾಣ್ಯಗಳನ್ನು ಎಸೆಯಲಾಗುತ್ತದೆ. ಇವರು ಕೂಡ ಮನುಷ್ಯರು, ನಮ್ಮ ಹಾಗೆಯೇ ಸ್ವಾಭಿಮಾನ ಇರುವ ಹಾಗೂ ಉತ್ತಮ ಬದುಕಿಗೆ ಹಾತೊರೆಯುವ ಮಾನವರು ಎಂದು ತಿಳಿಯುವವರು ಅಪರೂಪ.
ಭಿಕ್ಷುಕರ ಸಂಖ್ಯೆ
2011ರ ಸರಕಾರಿ ದತ್ತಾಂಶಗಳ ಪ್ರಕಾರ ನಮ್ಮ ದೇಶದಲ್ಲಿ 3.7ಲಕ್ಷಕ್ಕಿಂತ ಹೆಚ್ಚು ಭಿಕ್ಷುಕರಿದ್ದಾರೆ. ಇವರಲ್ಲಿ ಸುಮಾರು ಶೇ. 25 ಮಂದಿ ಮುಸ್ಲಿಮರು. ‘ನಾನ್-ವರ್ಕರ್ಸ್’ (ಕೆಲಸಗಾರರಲ್ಲದವರು) ಎಂದು ಪರಿಗಣಿಸಲಾದವರ ಧಾರ್ಮಿಕ ಹಿನ್ನೆಲೆಯನ್ನು ಆಧರಿಸಿ ಸಿದ್ಧಪಡಿಸಲಾದ ದತ್ತಾಂಶ ಅದು. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಸುಮಾರು ಶೇ.14.23ರಷ್ಟು ಇದ್ದಾರೆ. ಆದರೆ ತುಲನಾತ್ಮಕವಾಗಿ ಮುಸ್ಲಿಂ ಭಿಕ್ಷುಕರ ಸಂಖ್ಯೆ ಇತರರಿಗಿಂತ ಹೆಚ್ಚು ಇದೆ. ಯಾವುದೇ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿರದವರನ್ನು ‘ನಾನ್ ವರ್ಕರ್ಸ್’ ಎಂದು ವರ್ಗೀಕರಿಸಲಾಗಿದೆ. 2011ರ ಜನಗಣತಿಯು 72.89 ಕೋಟಿ ಮಂದಿಯನ್ನು ‘ನಾನ್ ವರ್ಕರ್ಸ್’ ಎಂದು ಪರಿಗಣಿಸಿದೆ. ಇವರಲ್ಲಿ 3.7 ಲಕ್ಷ ಮಂದಿ ಭಿಕ್ಷುಕರು. ಇವರಲ್ಲಿ 92,760 ಮಂದಿ ಮುಸ್ಲಿಮರು. ದೇಶದ ಒಟ್ಟು ಜನಸಂಖ್ಯೆಯ ಶೇ. 79.8ರಷ್ಟು ಇರುವ ಹಿಂದೂಗಳಲ್ಲಿ 2.68 ಲಕ್ಷ ಮಂದಿ ಭಿಕ್ಷುಕರು. (ಅಂದರೆ ಒಟ್ಟು ಭಿಕ್ಷುಕರಲ್ಲಿ 72.22%).
ರಾಜ್ಯಸಭೆಯಲ್ಲಿ ಸಾಮಾಜಿಕ ನ್ಯಾಯ ಸಚಿವರು ನೀಡಿದ ಲಿಖಿತ ಉತ್ತರದ ಪ್ರಕಾರ ದೇಶದಲ್ಲಿ (2011ರಲ್ಲಿ) ಒಟ್ಟು 4,13,670 ಮಂದಿ ಭಿಕ್ಷುಕರಿದ್ದರು. ಇವರಲ್ಲಿ 2.2 ಲಕ್ಷ ಪುರುಷರು ಮತ್ತು 1.91 ಲಕ್ಷ ಮಹಿಳೆಯರು. ಹೀಗೆ ಬದುಕಲು ಬೇರೆ ದಾರಿಯೇ ಇಲ್ಲದ ಆಯ್ಕೆಯೇ ಇಲ್ಲದ ಗಣನೀಯ ಸಂಖ್ಯೆಯ ಭಿಕ್ಷುಕರು ಇದ್ದಾರೆ. ಭಿಕ್ಷಾಟನೆಯ ಸಮಸ್ಯೆಗೂ ಬಡತನ ಹಾಗೂ ನಿರುದ್ಯೋಗದ ಸಮಸ್ಯೆಗೂ ಸಂಬಂಧವಿದೆ. ಹೀಗಾಗಿ 1991ರ ನಂತರದ ಒಂದು ದಶಕದಲ್ಲಿ ಭಾರತದಲ್ಲಿ ಭಿಕ್ಷುಕರ ಸಂಖ್ಯೆ ಭಾರೀ ಹೆಚ್ಚಳ ಕಂಡಿದೆ. ದಿಲ್ಲಿಯಲ್ಲಿ 60,000 ಮುಂಬೈಯಲ್ಲಿ ಮೂರು ಲಕ್ಷಕ್ಕಿಂತಲೂ ಹೆಚ್ಚು ಮತ್ತು ಕೋಲ್ಕತಾದಲ್ಲಿ 75,000 ಮಂದಿ ಭಿಕ್ಷುಕರಿದ್ದಾರೆ. ಹೈದರಾಬಾದ್ನಲ್ಲಿ ಪ್ರತೀ 354 ಮಂದಿಯಲ್ಲಿ ಒಬ್ಬ ಭಿಕ್ಷುಕ ಎನ್ನುತ್ತದೆ ಕೌನ್ಸಿಲ್ ಆಫ್ ಹ್ಯೂಮನ್ ವೆಲ್ಫೇರ್.
ಮಾನಸಿಕ ಹಾಗೂ ದೈಹಿಕ ಕಾಯಿಲೆ
ಭಿಕ್ಷುಕರು ತುಂಬ ಸಂತೋಷಿಗಳು ಅವರಿಗೆ ಸಮಸ್ಯೆಗಳಿಲ್ಲ ಎಂದು ಹಲವರು ತಿಳಿಯುತ್ತಾರೆ. ಆದರೆ ಅಧ್ಯಯನವೊಂದರ ಪ್ರಕಾರ ಗುಜರಾತ್ನ ಬರೋಡಾ ಜಿಲ್ಲೆಯಲ್ಲಿ ಸಮೀಕ್ಷೆಗೊಳಪಟ್ಟ 49 ಭಿಕ್ಷುಕರ ಪೈಕಿ ಶೇ.39ರಷ್ಟು ಮಂದಿ ಒಂದಲ್ಲ ಒಂದು ರೀತಿಯ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೇ ವೇಳೆ, ಭಿಕ್ಷುಕಿಯರ ಹಾಗೂ ಭಿಕ್ಷೆ ಬೇಡುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. 1931ರ ಜನಗಣತಿಯ ಪ್ರಕಾರ ಶೇ.16 ಮಂದಿ ಭಿಕ್ಷುಕಿಯರಿದ್ದರು. 2001ರ ವೇಳೆಗೆ ಇವರ ಸಂಖ್ಯೆ ಶೇ.49ಕ್ಕೆ ಏರಿತು. ದೇಶದಲ್ಲಿ ಸುಮಾರು ಹತ್ತು ಮಿಲಿಯ ಬೀದಿ ಮಕ್ಕಳಿದ್ದಾರೆ. ಇವರಲ್ಲಿ ಹಲವಾರು ಮಕ್ಕಳು ಜೀವನೋಪಾಯಕ್ಕಾಗಿ ಭಿಕ್ಷಾಟನೆಗೆ ಇಳಿದಿದ್ದಾರೆ. 2009ರಲ್ಲಿ ಉತ್ತರ ಪ್ರದೇಶದ ಅಲಿಗಡ ಜಿಲ್ಲೆಯಲ್ಲಿ ನಡೆಸಿದ ಒಂದು ಸಂಶೋಧನಾ ಅಧ್ಯಯನದ ಪ್ರಕಾರ ಭಿಕ್ಷಾಟನೆಗೆ ಮುಖ್ಯ ಕಾರಣಗಳು
ಬಡತನ, ನಿರಕ್ಷರತೆ, ಜಾತಿ, ಅಂಗ ವೈಕಲ್ಯ, ಕಾಯಿಲೆಗಳು, ಮುದಿತನ ಹಾಗೂ ಪೋಷಕರ ಸಾವು, ಇವಗಳಲ್ಲಿ ಬಡತನ ಅತಿ ಮುಖ್ಯವಾದ ಕಾರಣವಾಗಿದೆ. ಅಧ್ಯಯನದಲ್ಲಿ ಒಳಗೊಂಡ ಭಿಕ್ಷುಕರ ಪೈಕಿ ಶೇ.50 ಮಂದಿ ಬಡತನದಿಂದಾಗಿಯೇ ಭಿಕ್ಷಾಟನೆಗೆ ಇಳಿದವರು. ಇವರು ಬಡವರಲ್ಲೇ ಅತಿ ಬಡವರು ಮತ್ತು ಇವರ ಮುಖ್ಯ ಗುರಿ ಬದುಕಲು ಅತ್ಯವಶ್ಯಕವಾದ ಆಹಾರ ಸಂಪಾದನೆ. ಇತರ ಆವಶ್ಯಕತೆಗಳು (ವಸತಿ ಮತ್ತು ಬಟ್ಟೆ) ತುಂಬ ದೂರದ ಆವಶ್ಯಕತೆಗಳಾಗಿವೆ. ಆರೋಗ್ಯ ಮತ್ತು ಶಿಕ್ಷಣ ಇವರ ಪಾಲಿಗೆ ಕೇವಲ ಕನಸಾಗಿ ಉಳಿದಿದೆ. ದೋಷಪೂರಿತ ಕಾರ್ಯಾಚರಣೆ
ಹಲವು ಸರಕಾರಗಳು ಭಿಕ್ಷಾಟನೆಯನ್ನು ‘ನಿಷೇಧಿಸಿವೆ.’ ಭಿಕ್ಷಾಟನೆಯನ್ನು ಆ ಸರಕಾರಗಳು ಅನಪೇಕ್ಷಿತ, ಕಾನೂನು ಬಾಹಿರ ಕೃತ್ಯವೆಂದು ಪರಿಗಣಿಸಿವೆ. ಕೇಂದ್ರ ಸರಕಾರ ಕೂಡ ಭಿಕ್ಷಾಟನೆ ಸಮಸ್ಯೆಯ ಬಗ್ಗೆ ಅಸಡ್ಡೆ ತೋರಿದೆ. ಭಿಕ್ಷುಕರ ಪುನರ್ವಸತಿ ಮತ್ತು ಸಾಮಾಜಿಕ ಸುಧಾರಣೆಗೆ ಕ್ಷಮಗಳನ್ನು ತೆಗೆದುಕೊಳ್ಳುವ ಬದಲಾಗಿ, ಭಿಕ್ಷಾಟನೆಯನ್ನು ನಿಷೇಧಿಸುವುದರಿಂದ ನಿರೀಕ್ಷಿತ ಫಲಿತಾಂಶ ಸಿಗಲಾರದು. ಭಿಕ್ಷಾಟನೆಯ ಸಮಸ್ಯೆ ಪರಿಹಾರವಾಗಬೇಕಾದರೆ ಅದಕ್ಕೆ ಅರ್ಥಪೂರ್ಣವಾದ ಒಂದು ನಿರ್ಧಾರದ ಆವಶ್ಯಕತೆ ಇದೆ. ಅದನ್ನು ನಿಷೇಧಿಸುವುದು ಶಿಕ್ಷಿಸುವ ಉದ್ದೇಶದ ಒಂದು ಕ್ರಮವೇ ಹೊರತು ಪರಿಹಾರದ ಮಾರ್ಗವಲ್ಲ. ಅದನ್ನು ಸರಕಾರದ ಮತ್ತು ಸರಕಾರೇತರ ಮಟ್ಟದ ಸಂಘಟನೆಗಳ ಮಟ್ಟದಲ್ಲಿ ಎದುರಿಸಬೇಕಾಗಿದೆ. ಸಮಸ್ಯೆಯ ಮೂಲವನ್ನು ವಿಶ್ಲೇಷಿಸಿ ಸೂಕ್ತ ಪರಿಹಾರ ಕಂಡುಹಿಡಿಯಬೇಕು. ತೀರ ಬಡತನ ಮತ್ತು ನಿರ್ಗತಿಕ ಸ್ಥಿತಿಯ ಪರಿಣಾಮವಾಗಿರುವ ಲಾಗಾಯತಿನ ಒಂದು ಸಮಸ್ಯೆಗೆ ಕಾನೂನುಗಳು ಪರಿಹಾರವಲ್ಲ.
ಭಾರತೀಯ ಸಮಾಜದಲ್ಲಿ, ವಿಶೇಷವಾಗಿ ಹಿಂದೂ ಜಾತಿಗಳಲ್ಲಿ ದಲಿತ ಮತ್ತು ಕೆಳಜಾತಿಯ ಭಿಕ್ಷುಕರನ್ನು ನಡೆಸಿಕೊಳ್ಳುವುದಕ್ಕಿಂತ ಭಿನ್ನವಾಗಿ ಬ್ರಾಹ್ಮಣ ಜಾತಿಗೆ ಸೇರಿದ ಭಿಕ್ಷುಕರನ್ನು ನಡೆಸಿಕೊಳ್ಳಲಾಗುತ್ತದೆ (ಭಿಕ್ಷೆ/ದಾನ ಬೇಡುವ ಬ್ರಾಹ್ಮಣ) ಯಾಚಕರಿಗೆ, ಜನರು ಪುಣ್ಯ ಸಂಪಾದನೆಗಾಗಿ, ಆಹಾರ ಮತ್ತು ಹಣ ನೀಡುತ್ತಾರೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ದಲಿತ ಭಿಕ್ಷುಕರನ್ನು ಬೈದು ಬರಿಗೈಯಲ್ಲಿ ಕಳುಹಿಸಲಾಗುತ್ತದೆ. ಈ ತಾರತಮ್ಯವನ್ನೂ ಗಮನಿಸಬೇಕಾಗಿದೆ; ಇಂತಹ ಕೆಟ್ಟ ನಡವಳಿಕೆಯನ್ನು ಕೊನೆಗೊಳಿಸಬೇಕಾಗಿದೆ. ದಲಿತರು ಮತ್ತು ಕೆಳಜಾತಿಗಳು ಮೇಲ್ಜಾತಿಗಳಿಗಿಂತ ಹೆಚ್ಚು ಇರುವುದರಿಂದ, ಭಿಕ್ಷಾಟನೆ ಸಮಸ್ಯೆಯನ್ನು ಜಾತಿಯ ದೃಷ್ಟಿಯಿಂದ ಕೂಡ ಎದುರಿಸಬೇಕಾಗಿದೆ. ಸಮಾಜದಲ್ಲಿ ಭಿಕ್ಷುಕರ ಏಳಿಗೆಯ ಜೊತೆ ಜಾತಿ ನಿರ್ಮೂಲನ ಕೂಡ ಆಗಬೇಕಾಗಿದೆ.