ಮಲೆನಾಡಿನಲ್ಲಿ ಏರುತ್ತಿರುವ ಬಿಸಿಲ ಧಗೆ: ಮೇವು - ನೀರಿಗೆ ಮೂಕ ಪ್ರಾಣಿಗಳ ಅಲೆದಾಟ !
ಶಿವಮೊಗ್ಗ, ಫೆ. 25: ಮಲೆನಾಡಿನಲ್ಲಿ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಏರುತ್ತಿದೆ. ಅಂತರ್ಜಲ ಕುಸಿಯುತ್ತಿದೆ. ಕೆರೆಕಟ್ಟೆಗಳು ಬರಿದಾಗುತ್ತಿವೆ. ಇದರ ನೇರ ಪರಿಣಾಮ ಮೂಕ ಪ್ರಾಣಿಗಳ ಮೇಲೆ ಬೀರಲಾರಂಭಿಸಿದೆ. ಮೇವು, ಕುಡಿಯುವ ನೀರಿಗಾಗಿ ಜಾನುವಾರು, ಪಶು-ಪಕ್ಷಿಗಳು ಪರಿತಪಿಸುವಂತಾಗಿವೆ.
ಹೌದು. ಈ ಬಾರಿ ಬಿಸಿಲ ಆರ್ಭಟ ಜೋರಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿಯೂ ಪ್ರಸ್ತುತ 35 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ತಾಪಮಾನದ ತೀವ್ರತೆಗೆ ಅಂತರ್ಜಲ ಕುಸಿಯುತ್ತಿದೆ. ನದಿ, ಕೆರೆಗಳಂತಹ ಜಲಮೂಲಗಳಲ್ಲಿ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ.
ಈಗಾಗಲೇ ಮೂಕಪ್ರಾಣಿಗಳ ದಾಹ ತಣಿಸುವ ತಾಣವಾಗಿದ್ದ ಹಲವು ಕೆರೆಕಟ್ಟೆಗಳು ನೀರಿಲ್ಲದೆ ತಳ ಕಾಣುತ್ತಿವೆ. ಹಾಗೆಯೇ ಜಾನುವಾರುಗಳ ಹಸಿವು ಇಂಗಿಸುವ ಹಸಿರು ಕೂಡ ಒಣಗಿ ಹೋಗಿದೆ. ಮೇವು, ನೀರಿಗಾಗಿ ಜಾನುವಾರುಗಳು ಒಂದೆಡೆಯಿಂದ ಮತ್ತೊಂದೆಡೆ ಅಲೆದಾಡುತ್ತಿವೆ. ದಾಹ-ಹಸಿವು ನೀಗಿಸಿಕೊಳ್ಳಲು ಮೂಕಪ್ರಾಣಿಗಳು ಪಡುತ್ತಿರುವ ಪರಿತಾಪ ಹೇಳತೀರದಾಗಿದೆ.
ಚಳಿಗಾಲದವರೆಗೂ ದಷ್ಟಪುಷ್ಠವಾಗಿ ಕಂಗೊಳ್ಳಿಸುತ್ತಿದ್ದ ಜಾನುವಾರುಗಳು, ಇದೀಗ ಬಡಕಲಾಗುತ್ತಿವೆ. ಮೈಮೂಳೆಗಳು ಕಾಣಲಾರಂಭಿಸಿವೆ. ನಿಶ್ಯಕ್ತಿ ಸೇರಿದಂತೆ ನಾನಾ ರೋಗ-ರುಜಿನಗಳಿಗೂ ತುತ್ತಾಗುವಂತಾಗಿದೆ. ಸೂಕ್ತ ಆರೈಕೆ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಕೆಲ ಪಶುಪಾಲಕರು, ಜಾನುವಾರುಗಳ ದೈನೇಸಿ ಸ್ಥಿತಿ ಗಮನಿಸಿ ಮಾರಾಟ ಮಾಡುತ್ತಿರುವ ಮಾಹಿತಿಗಳು ಕೂಡ ಕೇಳಿಬರುತ್ತಿವೆ.
ಪ್ಲಾಸ್ಟಿಕ್ ಆಹಾರ: 'ಪ್ರಸ್ತುತ ಬಿಸಿಲ ಬೇಗೆಗೆ ಹಸಿರು ಹುಲ್ಲು ಒಣಗಿ ಹೋಗಿದೆ. ಇದರಿಂದ ಹಸಿವು ಇಂಗಿಸಿಕೊಳ್ಳಲು ಜಾನುವಾರುಗಳು ಪ್ಲಾಸ್ಟಿಕ್, ಪೇಪರ್ ನಂತಹ ವಸ್ತುಗಳನ್ನು ತಿನ್ನುತ್ತಿರುವ ದಾರುಣ ದೃಶ್ಯಗಳು ನಗರ-ಪಟ್ಟಣ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಭಾಗಗಳಲ್ಲಿಯೂ ಕಂಡುಬರುತ್ತಿದೆ' ಎಂದು ಪರಿಸರ ಹೋರಾಟಗಾರ ಪರಿಸರ ಸಿ. ರಮೇಶ್ ರವರು ಹೇಳುತ್ತಾರೆ.
ಒತ್ತಾಯ: ಗ್ರಾಮೀಣ ಭಾಗಗಳಲ್ಲಿ ಜಾನುವಾರು ಹಾಗೂ ಪಶು-ಪಕ್ಷಿಗಳ ದಾಹ ಇಂಗಿಸಲು ಈಗಾಗಲೇ ಹಲವೆಡೆ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಆದರೆ ಈ ತೊಟ್ಟಿಗಳಿಗೆ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಮತ್ತೆ ಹಲವೆಡೆ ಜಾನುವಾರು ತೊಟ್ಟಿಗಳ ನಿರ್ಮಾಣಕ್ಕೆ ಬೇಡಿಕೆ ವ್ಯಕ್ತವಾಗುತ್ತಿದೆ.
'ತಮ್ಮ ಬಡಾವಣೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಂಖ್ಯೆಯ ಎಮ್ಮೆ, ದನಗಳು ಬರುತ್ತವೆ. ಸುತ್ತಮುತ್ತಲಿನ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಹಾಗೆಯೇ ಹಸಿರು ಕೂಡ ಒಣಗಿ ಹೋಗಿದೆ. ಇದರಿಂದ ಜಾನುವಾರುಗಳ ಪಾಡು ಹೇಳತೀರದಾಗಿದೆ. ಪ್ಲಾಸ್ಟಿಕ್, ಪೇಪರ್, ಕಸಕಡ್ಡಿಯನ್ನೇ ತಿನ್ನುತ್ತಿವೆ. ನೀರಿಗಾಗಿ ಅಲೆದಾಡುತ್ತಿವೆ. ತಮ್ಮ ಬಡಾವಣೆಯು ಅಬ್ಬಲಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರ್ಪಡೆಯಾಗುತ್ತದೆ. ಈ ಕೂಡಲೇ ಜಿಲ್ಲಾ ಪಂಚಾಯತ್ ಆಡಳಿತವು ತಮ್ಮ ಬಡಾವಣೆ ಉದ್ಯಾನವನದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿ, ನೀರು ಪೂರೈಸಬೇಕು. ಹಾಗೆಯೇ ಸೂಕ್ತ ಹುಲ್ಲಿನ ವ್ಯವಸ್ಥೆ ಮಾಡಿದರೆ ನೂರಾರು ಜಾನುವಾರುಗಳಿಗೆ ಅನುಕೂಲವಾಗಲಿದೆ' ಎಂದು ಶಿವಮೊಗ್ಗ ತಾಲೂಕು ಬಸವನಗಂಗೂರು ಗ್ರಾಮದ ಕೆ.ಹೆಚ್.ಬಿ. ಕಾಲೋನಿಯ ನಿವಾಸಿ ನಾಗರತ್ನ ಎಂಬ ಗೃಹಿಣಿ ಅಭಿಪ್ರಾಯಪಡುತ್ತಾರೆ.
ಗಮನಹರಿಸಲಿ: ಈಗಾಗಲೇ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಲಾಗಿದೆ. ಹಾಗೆಯೇ ಅಪಾರ ಪ್ರಮಾಣದ ಮೇವು ದಾಸ್ತಾನು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹೇಳುತ್ತಾರೆ. ಆದರೆ ಜಾನುವಾರುಗಳಿಗೆ ಸಕಾಲದಲ್ಲಿ ಮೇವು ದೊರಕದಿರುವುದೇಕೆ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಈ ಕುರಿತಂತೆ ಹಿರಿಯ ಅಧಿಕಾರಿಗಳು ಗಮನಹರಿಸಿ, ಮೂಕಪ್ರಾಣಿಗಳಿಗೆ ನೆರವಾಗುವ ಮಾನವೀಯ ಕಾರ್ಯಕ್ಕೆ ಮುಂದಾಗಬೇಕು ಎಂದು ಗ್ರಾಮೀಣ ಭಾಗದ ಜನತೆ ಒತ್ತಾಯಿಸುತ್ತಾರೆ.
ನರೇಗಾದಲ್ಲಿ ತೊಟ್ಟಿ ನಿರ್ಮಾಣಕ್ಕೆ ಅವಕಾಶ: ತಾ.ಪಂ. ಇಓ ಅತೀಕ್ ಪಾಷ
ಉದ್ಯೋಗ ಖಾತ್ರಿ ಯೋಜನೆಯಡಿ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಸೂಕ್ತ ತೊಟ್ಟಿ ನಿರ್ಮಾಣ ಮಾಡಲು ಅವಕಾಶವಿದೆ. ಈಗಾಗಲೇ ತಾಲೂಕಿನ ಅಗತ್ಯವಿರುವ ಬಹುತೇಕ ಗ್ರಾಮಗಳಲ್ಲಿ, ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತಗಳ ಮೂಲಕ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿದೆ. ಬೇಡಿಕೆಯಿರುವೆಡೆ ತೊಟ್ಟಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಹಾಗೆಯೇ ಈ ತೊಟ್ಟಿಗಳಿಗೆ ಸಮರ್ಪಕ ನೀರು ಪೂರೈಕೆ ಮಾಡುವಂತೆಯೂ ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗುವುದು ಎಂದು ಶಿವಮೊಗ್ಗ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ (ಇ.ಓ.) ಅತೀಕ್ ಪಾಷರವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
4 ತಾಲೂಕು ಬರ ಪೀಡಿತ
ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲೂಕು, ಸೊರಬ, ಶಿಕಾರಿಪುರ ಹಾಗೂ ಭದ್ರಾವತಿ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಬರ ಎದುರಿಸಲು ಈಗಾಗಲೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ವ್ಯಾಪಕ ಸಿದ್ದತೆ ಮಾಡಿಕೊಂಡಿವೆ. ಬರ ಪೀಡಿತ ತಾಲೂಕುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗದ ದಿನಗಳನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಜಾನುವಾರುಗಳಿಗೆ ಅಗತ್ಯ ಮೇವು ಕೂಡ ದಾಸ್ತಾನಿದೆ. ಕುಡಿಯುವ ನೀರು ಪೂರೈಕೆಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಆಡಳಿತ ಮೂಲಗಳು ಮಾಹಿತಿ ನೀಡುತ್ತವೆ.