ಕೋ.ಚೆ. ಮತ್ತು ಟಿಪ್ಪು
ಈ ಶೀರ್ಷಿಕೆ ನಿಮಗೆ ವಿಚಿತ್ರವೆನಿಸಬಹುದು. ಅದಾಗ್ಯೂ ಇದೊಂದು ಅರ್ಥಗರ್ಬಿತ ಶೀರ್ಷಿಕೆ ಎಂದು ನಾನು ನಂಬಿದ್ದೇನೆ. ಇದಕ್ಕೆ ಕಾರಣವಿಲ್ಲದಿಲ್ಲ. ಮೊನ್ನೆ ನಮ್ಮನ್ನಗಲಿದ ಕನ್ನಡದ ಸಾಕ್ಷಿಪ್ರಜ್ಞೆ ಕೋ.ಚೆನ್ನಬಸಪ್ಪನವರು ಸುಮಾರು ಎಂಬತ್ತರಷ್ಟು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವೆಲ್ಲಾ ಬೃಹತ್ ಗ್ರಂಥಗಳು. ಕೋ.ಚೆಯವರು ಟಿಪ್ಪು ಕುರಿತಂತೆ ಪಾಂಡಿತ್ಯಪೂರ್ಣವಾದ ಹತ್ತಾರು ಸಂಶೋಧನಾ ಲೇಖನಗಳನ್ನೂ ಬರೆದಿದ್ದಾರೆ. ಅವರ ಎಂಬತ್ತು ಕೃತಿಗಳಲ್ಲಿ ಅತ್ಯಂತ ಚಿಕ್ಕ ಕೃತಿ 'ಹಿಂದೂ ಧರ್ಮ ರಕ್ಷಕ: ಟೀಪೂ ಸುಲ್ತಾನ್' ಮಾತ್ರವಲ್ಲ ಟಿಪ್ಪು ಕುರಿತಂತೆ ಈವರೆಗೆ ಬಂದ ಕೃತಿಗಳಲ್ಲೇ ಅತ್ಯಂತ ಚಿಕ್ಕ ಕೃತಿಯಿದು. ಇದು ಕೋ.ಚೆಯವರ ಸ್ವತಂತ್ರ ಕೃತಿಯೂ ಅಲ್ಲ. ಇದೊಂದು ಸಂಪಾದಿತ ಕೃತಿ. ಇದನ್ನು ಕೃತಿಯೆನ್ನುವುದಕ್ಕಿಂತ ಬುಕ್ ಲೆಟ್ ಎನ್ನುವುದೇ ಹೆಚ್ಚು ಸೂಕ್ತ. ಆದರೆ ಇದು ಟಿಪ್ಪುವಿನ ಕುರಿತಂತೆ ಪಂಡಿತ ಮತ್ತು ಪಾಮರ ಈ ಎರಡೂ ವರ್ಗಗಳಲ್ಲಿ ಇದ್ದ ತಪ್ಪು ಕಲ್ಪನೆಯನ್ನು ದೂರೀಕರಿಸಲು ಮಹತ್ವದ ಕೊಡುಗೆ ನೀಡಿದ ಕೃತಿ. ಕೋ.ಚೆ.ಯವರು ತಿರುಮಲೆ ತಾತಾಚಾರ್ಯ ಶರ್ಮರ 'ಮೈಸೂರು ಇತಿಹಾಸದ ಹಳೆಯ ಪುಟಗಳು' ಎಂಬ ಅತ್ಯಂತ ವಸ್ತುನಿಷ್ಠ ಇತಿಹಾಸ ಗ್ರಂಥದಿಂದ ಆಯ್ದು ಈ ಕೃತಿಯನ್ನು ಸಂಪಾದಿಸಿದ್ದರು.
ಈ ಕೃತಿಯ ಅತೀ ದೊಡ್ಡ ಲಾಭಗಳೇನೆಂದರೆ
-ಅದರ ಮುಖಬೆಲೆ ಕೇವಲ ಐದು ರೂಪಾಯಿಗಳಷ್ಟೇ. ಇದು ಓದುವ ಆಸಕ್ತಿ ಇರುವ ಹೈಸ್ಕೂಲ್ ವಿದ್ಯಾರ್ಥಿಗಳೂ ಖರೀದಿಸಬಲ್ಲಷ್ಟು ಎಟಕುವ ದರ. ಮತ್ತು ಓದಿನ ದೊಡ್ಡ ಆಸಕ್ತಿಯಿಲ್ಲದವರೂ ಇದನ್ನು ಕಂಡಾಗ ಬೆಲೆ ನೋಡಿ ಯಾವುದಕ್ಕೂ ಇರಲಿ ನೋಡೋಣ ಎಂದು ಖರೀದಿಸಬಲ್ಲರು.
-ಕೃತಿಯು ಅತ್ಯಂತ ಚಿಕ್ಕದಿರುವುದರಿಂದ ಸುಮ್ಮನೆ ದಿನಪತ್ರಿಕೆ ಓದಿದಂತೆ ಓದಲು ಹಿಡಿದರೂ ಓದಿಸುವಂತಹ ಗುಣ ಕೋ.ಚೆ.ಯವರ ಬರಹದಲ್ಲಿದೆ.
ಇತ್ತೀಚಿನ ವರ್ಷಗಳಲ್ಲಿ ಟಿಪ್ಪು ಎಂದರೆ ಹಿಂದೂ ವಿರೋಧಿಯೆಂಬ ಸುಳ್ಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತಿದೆ. ಈ ಕೃತಿಯ ಶೀರ್ಷಿಕೆ ನೋಡಿದಾಗ ಇದೇನು ಹೀಗೆ... ಎಂದೂ ಕುತೂಹಲದಿಂದ ಜನ ಖರೀದಿಸತೊಡಗಿದ್ದರು. ಹೀಗೆ ಕುತೂಹಲದಿಂದ ಖರೀದಿಸಿ ಓದಿದವರಿಗೆ ಟಿಪ್ಪುವಿನ ನೈಜ ವ್ಯಕ್ತಿತ್ವದ ಅರಿವಾಗಿರುತ್ತದೆ.
ಟಿಪ್ಪುವಿನ ಕುರಿತಂತೆ ನಕಾರಾತ್ಮಕ ಅಭಿಪ್ರಾಯ ತಾಳಿದ ಕೃತಿಗಳೆಲ್ಲವೂ ಒಂದೋ ವಸಾಹತು ಕಾಲದ ಬ್ರಿಟಿಷ್ ಇತಿಹಾಸಕಾರರು ರಚಿಸಿದ್ದು ಅಥವಾ ವಸಾಹತೋತ್ತರ ಭಾರತದಲ್ಲಿ ಟಿಪ್ಪುವಿನ ಕುರಿತ ನಕಾರಾತ್ಮಕ ಅಭಿಪ್ರಾಯ ಹೊಂದಿದ ಕೃತಿಗಳು. ಇವು ಅದೇ ವಸಾಹತುಶಾಹಿ ಇತಿಹಾಸಕಾರರ ಕೃತಿಗಳ ಆಧಾರದಲ್ಲಿ ರಚಿಸಲ್ಪಟ್ಟವು.
ಉಪಖಂಡದ ಇತಿಹಾಸದಲ್ಲಿ ಬ್ರಿಟಿಷರು ಟಿಪ್ಪುವನ್ನು ಧ್ವೇಷಿಸಿದಷ್ಟು ಯಾವುದೇ ರಾಜನನ್ನೂ ಧ್ವೇಷಿಸಿಲ್ಲ. ಅದಕ್ಕೆ ಮುಖ್ಯ ಕಾರಣ ಉಪಖಂಡದ ಇತರ ಯಾವುದೇ ರಾಜರೂ ಬ್ರಿಟಿಷರನ್ನು ಧ್ವೇಷಿಸಿದ್ದರೆ ಅದರ ಹಿಂದೆ ಅವರ ಸಾಮ್ರಾಜ್ಯ ಉಳಿಸುವ ಕಾರ್ಯಸೂಚಿ ಅಡಗಿತ್ತು. ಆದರೆ ಟಿಪ್ಪು ಹಾಗಲ್ಲ. ಟಿಪ್ಪುವಿನ ಏಕಮಾತ್ರ ಅಜೆಂಡಾ ಬ್ರಿಟಿಷರನ್ನು ಉಪಖಂಡದಿಂದ ಓಡಿಸುದಾಗಿತ್ತು. ಯಾಕೆಂದರೆ ಅವರು ಹೊರಗಿಂದ ಬಂದು ನಮ್ಮ ಸ್ವತ್ತು, ವಿತ್ತಗಳನ್ನು ದೋಚಿಕೊಂಡು ಹೋಗುವುದಲ್ಲದೇ ನಮ್ಮ ಜನರನ್ನು ಅವರ ಅಡಿಯಾಳಾಗಿಸುತ್ತಾರೆ. ಈ ಕಾರಣದಿಂದಲೇ ಟಿಪ್ಪು ತನ್ನನ್ನು ದ್ವೇಷಿಸುತ್ತಿದ್ದ ಮರಾಠಾ ಪೇಶ್ವೆಗಳೊಂದಿಗೂ ರಾಜಿಗೆ ಮುಂದಾಗಿದ್ದ. ಟಿಪ್ಪು ಬ್ರಿಟಿಷರ ಹೊರತಾಗಿ ಯಾರನ್ನೂ ತನ್ನ ಶಾಶ್ವತ ಶತ್ರುಗಳೆಂದು ಪರಿಗಣಿಸಿರಲಿಲ್ಲ ಎಂಬುದಕ್ಕೆ ಆತ ಮರಾಠರಿಗೆ ಬರೆದ ಪತ್ರಗಳೇ ಸಾಕ್ಷಿ. ಅವನ್ನೂ ಕೂಡಾ ಕೋ.ಚೆ.ಯವರು ತನ್ನ ಕೃತಿಯಲ್ಲಿ ಪ್ರಕಟಿಸಿದ್ದಾರೆ.
ಟಿಪ್ಪು ಶೃಂಗೇರಿಯ ಮಠದೊಂದಿಗೆ ಹೊಂದಿದ್ದ ಹಾಲು-ಜೇನಿನಂತಹ ಸಂಬಂಧವು ದೊಡ್ಡ ದೊಡ್ಡ ಗ್ರಂಥಗಳಲ್ಲಿ ದಾಖಲಾಗಿದ್ದರೂ ಅವು ಜನಸಾಮಾನ್ಯರ ಕೈಗೆಟಕುತ್ತಿರಲಿಲ್ಲ. ಕೋ.ಚೆ.ಯವರು ಅದನ್ನು ಜನಸಾಮಾನ್ಯರಿಗೆ ತಲುಪಿಸಿದರು. ಅವರು ತನ್ನ ಕೃತಿಯಲ್ಲಿ ಟಿಪ್ಪು ಶೃಂಗೇರಿ ಸ್ವಾಮೀಜಿಗೆ ಬರೆದ ಅಷ್ಟೂ ಪತ್ರಗಳನ್ನು ಪ್ರಕಟಿಸಿ ಜನಸಾಮಾನ್ಯರಿಗೆ ತಲುಪಿಸಿದರು. ಮಾತ್ರವಲ್ಲದೇ ಟಿಪ್ಪು ಹಿಂದೂ ದೇವಾಲಯಗಳಿಗೆ ನೀಡಿದ್ದ ಕೊಡುಗೆಗಳ ಕುರಿತಂತೆಯೂ ವಿವರಿಸಿ ಜನಸಾಮಾನ್ಯರಿಗೆ ತಲುಪಿಸಿದರು.
ನವಕರ್ನಾಟಕ ಪ್ರಕಾಶನ ಪ್ರಕಟಿಸಿದ ಈ ಕೃತಿ ಟಿಪ್ಪುವಿನ ಬಗೆಗಿದ್ದ ತಪ್ಪು ಕಲ್ಪನೆ ನೀಗಿಸಿದಷ್ಟು ಬಹುಶಃ ಕನ್ನಡದ ಯಾವ ಕೃತಿಯೂ ನೀಗಿಸಿರಲಾರದು.
ಸಿದ್ಧರಾಮಯ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಘೋಷಿಸಿದ ಮೊದಲ ವರ್ಷ ರಾಜ್ಯದ ವಿವಿಧೆಡೆ ಅತ್ಯಂತ ಸಂಭ್ರಮದಲ್ಲಿ ಜನ ಟಿಪ್ಪು ಜಯಂತಿ ಆಚರಿಸಿದರು. ನನ್ನ ಹಳ್ಳಿ ಪಜೀರಿನಲ್ಲೂ ನಾವು ಟಿಪ್ಪು ಜಯಂತಿ ಆಚರಿಸಿದ್ದೆವು. ಆ ವರ್ಷ ನಾವು ಒಂದು ವಾರ ಮುಂಚಿತವಾಗಿಯೇ ಮಂಗಳೂರಿನ ನವಕರ್ನಾಟಕ ಪುಸ್ತಕಾಲಯಕ್ಕೆ ಆರ್ಡರ್ ಕೊಟ್ಟು 'ಹಿಂದೂ ಧರ್ಮ ರಕ್ಷಕ ಟೀಪೂ ಸುಲ್ತಾನ್' ಕೃತಿಯ ಇನ್ನೂರೈವತ್ತು ಪ್ರತಿಗಳನ್ನು ಖರೀದಿಸಿ ಸಭಿಕರಿಗೆ ಹಂಚಿದ್ದೆವು.
ಕನ್ನಡದ ಇತರ ಯಾವುದೇ ಕೃತಿ ಮಾಡದಂತಹ ಕೆಲಸವನ್ನು ಆ ಕೃತಿ ಮಾಡಿದೆ. ನವಕರ್ನಾಟಕ ಸಂಸ್ಥೆಯ ಅತೀ ಹೆಚ್ಚು ಮುದ್ರಣ ಕಂಡ ಕೃತಿ ಎಂಬ ಹೆಗ್ಗಳಿಕೆಯೂ ಕೋ.ಚೆ.ಯವರ ಆ ಕೃತಿಗೆ ಸಲ್ಲುತ್ತದೆ.
ಕೋ.ಚೆ. ದೀರ್ಘ ಬದುಕು ಬಾಳಿ ನಮ್ಮಿಂದ ಕಣ್ಮರೆಯಾಗಿದ್ದಾರೆ. ಆದರೆ ಅವರಿಲ್ಲದ ನಿರ್ಯಾತವನ್ನು ಅವರ ಬರಹಗಳು ಸ್ವಲ್ಪ ಮಟ್ಟಿಗಾದರೂ ನೀಗಿಸಬಲ್ಲವು ಎಂಬ ವಿಶ್ವಾಸ ನನಗಿದೆ. ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಈ ನೆಲದಲ್ಲಿ ಶಾಂತಿ ಸೌಹಾರ್ದ ಬಯಸುವ ಪ್ರಜ್ಞಾವಂತ ಕನ್ನಡಿಗರ ಮನದಲ್ಲಿ ಕೋ.ಚೆನ್ನಬಸಪ್ಪ ಸದಾ ಅಮರರು.