ಮಾನವ ಕುಲಕ್ಕೆ ಅಮೂಲ್ಯ ಕೊಡುಗೆಯಾದ ಕೆಲವು ಸಂಶೋಧನೆಗಳು
ಇಂದು ರಾಷ್ಟ್ರೀಯ ವಿಜ್ಞಾನ ದಿನ
ಭಾರತೀಯ ವಿಜ್ಞಾನಿ ಸರ್.ಸಿ.ವಿ ರಾಮನ್ ಅವರ ಮಹತ್ತರ ಸಾಧನೆಯ ನೆನಪಿಗಾಗಿ ಇಂದು ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಬೆಂಕಿಯಿಂದ ಸೆಲ್ಯುಲಾರ್ ಫೋನ್‌ವರೆಗಿನ ಮಾನವ ಚಿಂತನೆಗಳು ಮನುಕುಲಕ್ಕೆ ಹೆಚ್ಚೆಚ್ಚು ಅನುಕೂಲ, ಆಯುಷ್ಯ ಒದಗಿಸುವ ಹತ್ತು ಹಲವು ಆವಿಷ್ಕಾರಗಳಿಗೆ ಮೂಲವಾಗಿದೆ. ಚಿಂತೆ ಚಿತೆಯಾಗಿ ಆರೋಗ್ಯ, ಆಯುಸ್ಸು ಮೊಟಕುಗೊಳಿಸದರೆ ಚಿಂತನೆಗಳು ತನಗೂ ತಾನಿರುವ ಸಮಾಜಕ್ಕೂ ಅಮೂಲ್ಯ ಕೊಡುಗೆಗಳನ್ನು ನೀಡುವ ಸಂಶೋಧನೆಗಳಿಗೆ ಮೂಲವಾಗುತ್ತದೆ. ಅಂಥ ಕೆಲವು ಶೋಧನೆಗಳು ವಿಜ್ಞಾನ ದಿನದ ಹಿನ್ನೆಲೆಯಲ್ಲಿ ಇಲ್ಲಿ ಕೊಡಲಾಗಿದೆ.
ಮೊಳೆ:
ಚಿಕ್ಕದಾದರೂ ಮೊಳೆ ಬಹೂಪಯೋಗಿಯಷ್ಟೇ. ಪ್ರಗತಿಗೆ ಚಿಹ್ನೆಯಾದ ಚಕ್ರವು ಮೊಳೆಯಿಲ್ಲದೆ ತಿರುಗಲಾರದು. ತುಂಡುಗಳನ್ನು ಒಂದು ಉಪಕರಣವಾಗಿಸುವ ಸಾಧನ ಇದು. ನಾಗರಿಕತೆಗೆ ಮೊಳೆ ಬೆನ್ನು ಮೂಳೆ ಎಂದರೆ ಉತ್ಪ್ರೇಕ್ಷೆಯಲ್ಲ. ಇದರಿಂದಲೇ ಅನೇಕ ಉಪಕರಣಗಳಿಗೆ ಕೆಲಸ ತಿಳಿಯುವಂತಾಯಿತು.
ಪ್ರಾಚೀನ ರೋಮನ್‌ರ ಕಾಲಕ್ಕಿಂತ 2 ಸಾವಿರ ವರ್ಷಗಳಿಗಿಂತ ಮೊದಲು ಲೋಹವನ್ನು ಕರಗಿಸುವುದು ತಿಳಿದುಕೊಂಡ ಬಳಿಕವಷ್ಟೇ ಮೊಳೆಯನ್ನು ತಯಾರಿಸುವ ಆಲೋಚನೆ ಮೊಳೆಯಿತು ಎನ್ನಲಾಗುತ್ತದೆ. 1886ರಿಂದಾಚೆಗೆ ಮೊಳೆ ಆಧುನಿಕ ರೂಪ ಪಡೆಯಿತು. ಕಬ್ಬಿಣದಿಂದ ತಯಾರಾಗುತ್ತಿದ್ದ ಮೊಳೆಗಳು ಉಕ್ಕಿನಿಂದ ತಯಾರಾಗುವಂತಾಯಿತು. ಮೊಳೆಗಳಿಂದ ಸ್ಕ್ರೂ, ಸರ್ಜನ್‌ಗಳು ರೂಪ ಪಡೆದವು.
ಕ್ರಿ.ಪೂ.3ನೇ ಶತಮಾನದಲ್ಲಿ ಅರ್ಕಿಮಿಡೀಸ್ ಸ್ಕ್ರೂ ತಯಾರಿಸುವ ಪ್ರಯತ್ನ ಮಾಡಿದನು. ಮೊಳೆಯನ್ನು ರೂಪಾಂತರಗೊಳಿಸಿ ಸ್ಕ್ರೂ ಕಂಡುಹಿಡಿದನು.
ದಿಕ್ಸೂಚಿ:
ಹಿಂದೆ ದೂರ ಪ್ರಯಾಣಗಳಿಗೆಲ್ಲಾ ಸಮುದ್ರ ಮಾರ್ಗವೇ ಗತಿಯಾಗಿತ್ತು. ಆ ಮಾರ್ಗಕ್ಕೆ ನಕ್ಷತ್ರಗಳೇ ಹೆಡ್‌ಲೈಟ್ಸ್. ರಾತ್ರಿಗಳಲ್ಲೇನೋ ನಕ್ಷತ್ರಗಳು ಮಾರ್ಗದರ್ಶನ ನೀಡುತ್ತದೆ. ಹಗಲಿನಲ್ಲಿ? ಅಥವಾ ರಾತ್ರಿ ಮೋಡ ಮುಸುಕಿದರೆ? ದೋಣಿ ದಡ ಮುಟ್ಟುವುದುಂಟೆ?
ಚೀನಿಯರು ಸಮುದ್ರದಲ್ಲಿ ಮುಳುಗುವ ಮೂರ್ಖರಲ್ಲ. ತಾವೂ ತೇಲಿ, ಇತರರನ್ನು ತೇಲಿಸುವ ಚಾಣಾಕ್ಷರು. ಅವರು ಕಲ್ಲಿನಿಂದ ದಿಕ್ಸೂಚಿ ತಯಾರಿಸಿ, ಸೂಜಿಗಳನ್ನು ಅಂಟಿಸಿ ದಿಕ್ಕು ನಿರ್ದೇಶನ ಮಾಡಿಕೊಂಡರು. ಯುರೋಪಿಯನ್ನರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮೆಟಲ್‌ನಿಂದ ಅದನ್ನು ಮೋಕೊವರ್ ಮಾಡುತ್ತಾರೆ. ಚೀನೀಯರ ಸಂಶೋಧನೆಯಾಗಿರುವ ದಿಕ್ಸೂಚಿ ಕೊಲಂಬಸ್, ವಾಸ್ಕೋ-ಡ-ಗಾಮರಂತಹವರ ಅನ್ವೇಷನೆಗಳಿಗೆ ದಿಕ್ಕು ಸೂಚಿಸಿದವು AGE OF DISCOVERY ಅಧ್ಯಾಯ ತೆರೆದುಕೊಂಡಿತು.
ಮುದ್ರಣ ಯಂತ್ರ:
ಮುದ್ರಣಯಂತ್ರ ಎಂಬುದು ಇರದಿದ್ದಲ್ಲಿ ಕಾಗದಗಳು ಬರಿದಾಗಿಯೇ ಉಳಿಯುತ್ತಿದ್ದವು. ಜ್ಞಾನ ಭಂಡಾರ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲ್ಪಡುತ್ತಿರಲಿಲ್ಲ. ಮುದ್ರಣ ಯಂತ್ರಣದ ಮೂಲಗುರು ಜರ್ಮನ್ ದೇಶದ ಜೊಹಾನ್ನೆಸ್ ಗುಟೆನ್‌ಬರ್ಗ್. 1440ರಲ್ಲಿ ಇವನ ಕಚ್ಚಾ ಮುದ್ರಣಯಂತ್ರಕ್ಕೆ ಆಧುನಿಕ ರೂಪಗಳು ಸಿಗುತ್ತಾ ಬಂದು ಅಕ್ಷರಗಳು ಅಮರವಾಗುತ್ತಿದೆ.
ಟೆಲಿಫೋನ್:
ಹಲೋ ಹಲೋಗಳು ಆರಂಭವಾಗಿ ಯಾವುದೋ ಜನ್ಮವಾದಂತಿದೆಯಲ್ಲವೆ. ಹಲೋ ಎಂಬ ಕರೆ ಇಂಟರ್ನೆಟ್ ಗೆಳೆತನದವರೆಗೆ ಮುಂದುವರಿದಿದ್ದರೂ ಮೂಲಪುರುಷನನ್ನು ಮರೆಯುವಂತಿಲ್ಲ. ಆತ ಅಲೆಗ್ಸಾಂಡರ್ ಗ್ರಹಂಬೆಲ್ ಕಿವುಡರಿಗೆ ಶಿಕ್ಷಣ ನೀಡುತ್ತಿದ್ದ. ಗ್ರಹಂಬೆಲ್‌ನ ಪತ್ನಿಯೂ ಕಿವುಡಿ ಎಂದು ಹೇಳಲಾಗಿದೆ. 1876ರಲ್ಲಿ ತಂತಿಗಳ ಮೂಲಕ ಈತ ಮೊದಲು ಹಲೋ ಹೇಳಿದ್ದು ಆಕೆಗೇನೇ. ಆತ ಟೆಲಿಫೋನ್ ಮೇಲೆ ಪೇಟೆಂಟ್ ಪಡೆದರೂ ಹಲೋ ಹಲೋಗಳು ಸರ್ವವ್ಯಾಪಿಯಾಗಿವೆ. ಲೇಟೆಸ್ಟ್ ಕಮ್ಯುನಿಕೇಶನ್ ಟೂಲ್‌ಗಳು ಅವನ ನೆನಪನ್ನು ರಿಂಗಣಿಸುತ್ತಿವೆ. 2.8.1922ರಂದು ಗ್ರಹಾಂಬೆಲ್ ತೀರಿಕೊಂಡಾಗ ಅಮೆರಿಕ ಒಂದು ಗಂಟೆಕಾಲ ಟೆಲಿಫೋನು ಸೇವೆಯನ್ನು ಸ್ತಬ್ಧಗೊಳಿಸಿತ್ತು.
ಪೆನ್ಸಿಲಿನ್:
ಲಂಡನ್‌ನಲ್ಲಿನ ಸೈಂಟ್‌ಮೇರಿಸ್ ಆಸ್ಪತ್ರೆಯಲ್ಲಿ ಒಂದು ದಿನ ಲ್ಯಾಬ್ ನಿರ್ವಾಹಕ ಸೈಫಲ್ ಕಾಕಸ್ ಬ್ಯಾಕ್ಟೀರಿಯಾ ಇರುವ ಶೀಷೆಯನ್ನು ತೆರೆದಿಟ್ಟು ಬಿಟ್ಟಿದ್ದ. ಮರುದಿನ ಬೆಳಗ್ಗೆ ಪ್ರಮುಖ ವಿಜ್ಞಾನಿ ಅಲೆಗ್ಸಾಂಡರ್ ಫ್ಲೆಮಿಂಗ್ ಬಂದು ನೋಡಿದಾಗ ನೀಲಿ-ಹಸಿರು ಬೂಜು ಬೆಳೆದಿರುವುದನ್ನು ಕಾಣುತ್ತಾನೆೆ. ಆ ವೌಲ್ಡ್ ಬೆಳವಣಿಗೆಯಿಂದ ಬ್ಯಾಕ್ಟೀರಿಯಾ ಸತ್ತು ಹೋಗಿರುವುದನ್ನು ಗ್ರಹಿಸಿದ ಫ್ಲೇಮಿಂಗ್ ಈ ವಿಧಾನದ ಆಧಾರದ ಮೇಲೆ ಹಲವು ರೋಗಗಳಿಗೆ ರಾಮಬಾಣ ಆಗಬಲ್ಲ ಪೆನ್ಸಿಲಿನ್ ಸಂಶೋಧಿಸಿದರು. ಆದರೆ ಪೆನ್ಸಿಲಿನ್‌ನ್ನು ಟೆಸ್ಟ್ ಡೋಸ್ ಕೊಟ್ಟ ಬಳಿಕವಷ್ಟೇ ಔಷಧ ರೂಪದಲ್ಲಿ ನೀಡಲಾಗುತ್ತದೆ.
ಕಾಂಟ್ರಸೆಪ್ಟಿವ್ ಪಿಲ್ಸ್:
ಜನಸಂಖ್ಯೆ ಮೀತಿ ಮೀರುತ್ತಿರುವ ಈ ಕಾಲದಲ್ಲಿ ಗರ್ಭ ನಿರೋಧಕಗಳ ಪ್ರಾಧಾನ್ಯತೆಯನ್ನು ಒಪ್ಪಿಕೊಳ್ಳಲೇಬೇಕು. ಇದು ಸ್ತ್ರೀಯರ, ಭಾವೀಸಂತಾನದ ಆರೋಗ್ಯ ರೂಪಿಸಲು ಸಹಕಾರಿಯಾಗಿದೆ. 18ನೇ ಶತಮಾನದಲ್ಲಿ ‘ಕಾಂಡೊಮ್ಸ್’ 1930ರಲ್ಲಿ ‘ಕಾಂಟ್ರಾಸೆಪ್ಟಿವ್ ಪಿಲ್ಸ್’ಗಳನ್ನು ವೈದ್ಯ ಜಗತ್ತು ಸಂಶೋಧಿಸಿತು. ಆದರೆ ಪಾರ್ಶ್ವ ಪರಿಣಾಮಗಳು ತಪ್ಪಿದ್ದಲ್ಲ.
ಸಾಬೂನು:
ನೀರಿನಿಂದ ಯಾವುದೇ ಕೊಳೆಯನ್ನಾದರೂ ಸ್ವಚ್ಛಗೊಳಿಸಲು ಸಾಧ್ಯವಿದೆಯಾಗಲೀ ಹೆಚ್ಚಿನ ಬಿಳುಪು-ಹೊಳಪು ಬಯಸುವ ಗೀಳಿಗೆ ರೋಗಕಾರಕ ಕ್ರಿಮಿಗಳ ನಾಶಕ್ಕೆ ಸಾಬೂನೇ ಉತ್ತರ. 19ನೇ ಶತಮಾನದಲ್ಲಿ ಟಿಯೆನ್ನಾದಲ್ಲಿನ ಹಂಗೇರಿಯನ್ ಡಾಕ್ಟರ್ ಇಗ್ನಾಜ್ ಸೆಮ್ಮೆ ಲೇವಿಸ್ ಶಿಶುಮರಣಗಳ ಹಿನ್ನೆಲೆ ಶೋಧಿಸಲು ಹೊರಟರು. ಸೂಲಗಿತ್ತಿಯರು ಹೆರಿಗೆ ಮಾಡಿಸಿದ ಮಕ್ಕಳಿಗಿಂತ ಆಸ್ಪತ್ರೆಯಲ್ಲಿ ಹುಟ್ಟಿದ ಕಂದಗಳೇ ಹೆಚ್ಚಾಗಿ ಸಾಯುತ್ತಿದ್ದವು. ಹೊರಬಿದ್ದ ಗುಟ್ಟು ಏನೆಂದರೆ ಹೆರಿಗೆ ಮಾಡಿಸುವ ಮೆಡಿಕಲ್ ವಿದ್ಯಾರ್ಥಿಗಳು ಶವಪರೀಕ್ಷೆ ನಂತರ ಕೈ ತೊಳೆದಿದ್ದರೂ ಸೂಕ್ಷ್ಮ ಕ್ರಿಮಿಗಳು ಉಳಿದುಕೊಂಡು ಎಳೆ ಶಿಶುಗಳಿಗೆ ಮಾರಕವಾಗುತ್ತಿದ್ದವು. ಇಗ್ನೇಜ್ ಹ್ಯಾಂಡ್‌ವಾಶ್ ತಯಾರಿಸಿ ವಿದ್ಯಾರ್ಥಿಗಳಿಗೆ ಕೈ ತೊಳೆಯಲು ನೀಡಿದ ಬಳಿಕ ಶಿಶುಮರಣಗಳು ತಗ್ಗಿದವು. ಕ್ರಮೇಣ ಅದು ಸಾಲಿಡ್ ಆಗಿ ಸಾಬೂನಾಯಿತು. ಹ್ಯಾಂಡ್‌ವಾಶ್ ಆಗಿಯೂ ಬಳಕೆಯಲ್ಲಿದೆ. ಬಟ್ಟೆಗಳೂ ಸಾಬೂನ್ ಭಾಗ್ಯ ಕಾಣುತ್ತಿದೆ.
ಜಿಪಿಎಸ್:
ಹಾದಿ ತಪ್ಪಲು ಹಡಗಿನಲ್ಲಿ ಸಮುದ್ರದ ಮೇಲೆ ಹೋಗಬೇಕೆಂದೇನಿಲ್ಲ. ವಿಮಾನದಲ್ಲಿ ಹಾರುತ್ತಿರಬೇಕೆಂದಿಲ್ಲ. ಭಾರತದಲ್ಲಿ ಹೊಸಬರು ಅಡ್ರೆಸ್ ಕೇಳಿದರೆ ಹೇಳುವಷ್ಟು ಸಮಯ, ಸೌಜನ್ಯ ಇರುವವರಿಗೂ ಬರ ಬಂದಿದೆ. ಹಾಗಾಗಿ ಯಂತ್ರದಂತಾಗಿರುವ ಮಾನವರಿಗೆ ಜಿಪಿಎಸ್ ಎಂಬ ದಿಕ್ಸೂಚಿ ಸಿದ್ಧವಾಗಿದೆ. ಈ ಸಂಶೋಧನೆ ಸಂಕೋಚದ ವ್ಯಕ್ತಿಗಳು ಸಂಕುಚಿತ ಮನಸ್ಸುಗಳ ಮಧ್ಯೆ ಬದುಕಲು, ತಮ್ಮ ನೆಲೆ ಮುಟ್ಟಲು ಮಾರ್ಗದರ್ಶಿಯಾಗಿದೆ.
ಇಂಟರ್ನೆಟ್:
ಇದು ಕಲಿಯುಗದಲ್ಲಿ ಬಾಲಕೃಷ್ಣನ ತೆರೆದ ಬಾಯಿಯಿದ್ದಂತೆ. ಸಮಸ್ತ ಜಗವನ್ನೂ ಅನ್ವೇಷಕನಿಗೆ ತೆಗೆದಿಡುತ್ತದೆ. ಎಲ್ಲೆಂದೆಲ್ಲಿಗೆ ಬೇಕಾದರೂ ಸಂಪರ್ಕ ಒದಗಿಸುತ್ತದೆ. ಅಭಿವ್ಯಕ್ತಿಗೆ ವೇದಿಕೆಯಾಗಿದೆ. ಕಾಳಗದ ಕಣವಾಗಿದೆ. ಶೃಂಗಾರದ ಸಂಗಡಿಗನಾಗಿದೆ. ಅಮೆರಿಕೆಯ ಡಿಫೆನ್ಸ್ ಇಲಾಖೆಯಲ್ಲಿ ದುಡಿಯುತ್ತಿದ್ದ ಕಂಪ್ಯೂಟರ್ ವಿಜ್ಞಾನಿ ಲಾರೆನ್ಸ್ ರಾಬರ್ಟ್ ಮತ್ತು ಆತನ ತಂಡ Advanced Research Projects Agencyಗಾಗಿ ಕಮ್ಯುನಿಕೇಶನ್ ನೆಟ್‌ವರ್ಕ್ ರೂಪಿಸಿದನು. ಕ್ರಮೇಣ ಅದು ಇಂಟರ್ನೆಟ್ ಪ್ರೊಸಿಜರ್ ಆಗಿ ಬದಲಾಯಿತು.
ರೋಬೊ:
ಕಬ್ಬಿಣದಲ್ಲೂ ಹೃದಯ ಚಿಗುರಿದೆ, ಪ್ರೇಮ ಮೂಡಿದೆ ಎಂದು ರೋಬೊ ರಜನಿಕಾಂತ್ ಹಾಡಿದ್ದು ಕಲ್ಪನಾತಿರೇಕ ಇರಬಹುದು. ಆದರೆ ರೋಬೊಗಳು ಪ್ರೇಮಕಾಮಗಳಿಗೆ ಹೊರತಾದ ಎಷ್ಟೋ ಮುಖ್ಯ ಕೆಲಸಗಳನ್ನು ಮಾಡಬಲ್ಲದು. ಗೃಹಕೃತ್ಯಗಳು, ಶೋಧಿಸಿ ನಿರ್ವೀರ್ಯಗೊಳಿಸುವುದು, ಗಗನ ಚುಂಬಿಗಳನ್ನೇರುವುದು, ಜಲಾಂತರ್ಗಾಮಿ ನೌಕೆಗಳಿಗೆ ವೆಲ್ಡಿಂಗ್ ಮಾಡುವುದು.
ಅಲ್ಲದೆ ಶೂನ್ಯ (ಸೊನ್ನೆ), ಜೀವಪರಿವರ್ತನಾ ಕ್ರಮ, ವ್ಯವಸಾಯ, ಸಾಪೇಕ್ಷ ಸಿದ್ಧಾಂತ, ಫ್ರಿಡ್ಜ್, ಎಕ್ಸ್‌ರೇ, ಕ್ಯಾಮರಾ, ವಾಷಿಂಗ್ ಮೆಶಿನ್, ವ್ಯಾಕ್ಸಿನೇಶನ್‌ಗಳಂತಹ ಹತ್ತು ಹಲವು ಅಮೂಲ್ಯ ಸಂಶೋಧನೆಗಳಿಂದ ಮನುಕುಲದ ಆಯುರಾರೋಗ್ಯ, ಅಭಿವೃದ್ಧಿಗಳಿಗೆ ಜೀವನವನ್ನು ಧಾರೆ ಎರೆದ ವಿಜ್ಞಾನಿಗಳಲ್ಲಿ ಬಹು ಮಂದಿ ಪಾಶ್ಚಾತ್ಯರಾದರೂ ಇಡೀ ಜಗತ್ತು ಅವರಿಗೆ ಋಣಿಯಾಗಿದೆ.
(ವಿವಿಧ ಮೂಲಗಳಿಂದ)