ರೈಲು ಪ್ರಯಾಣಿಕರೀಗ ಬರ್ತ್ಗಳಿಗಾಗಿ ಟಿಟಿಇ ಹಿಂದೆ ಓಡಬೇಕಿಲ್ಲ
ಮಾಹಿತಿ
ರೈಲು ಪ್ರಯಾಣಿಕರು ಈಗ ರೈಲುಗಳಲ್ಲಿ ಖಾಲಿ ಬರ್ತ್ಗಳಿಗಾಗಿ ಟಿಟಿಇ ಅಥವಾ ರೈಲು ಟಿಕೆಟ್ ಪರೀಕ್ಷಕರಿಗೆ ದುಂಬಾಲು ಬೀಳಬೇಕಿಲ್ಲ. ಹೆಚ್ಚಿನ ಪಾರದರ್ಶಕತೆಗಾಗಿ ಮತ್ತು ತಳಮಟ್ಟದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುವ ಉದ್ದೇಶದೊಂದಿಗೆ ಭಾರತೀಯ ರೈಲ್ವೆಯು ಈಗ ಎಲ್ಲ ರೈಲುಗಳ ರಿಸರ್ವೇಷನ್ ಚಾರ್ಟ್ಗಳನ್ನು ಐಆರ್ಸಿಟಿಸಿಯ ಜಾಲತಾಣ ‘ಐಆರ್ಸಿಟಿಸಿ.ಕೋ.ಇನ್’ನಲ್ಲಿ ಸಾರ್ವಜನಿಕರಿಗೆ ಲಭ್ಯಗೊಳಿಸಿದೆ. ಇದರೊಂದಿಗೆ ಈಗ ಪ್ರಯಾಣಿಕರು ರಿಸರ್ವೇಷನ್ ಚಾರ್ಟ್ ಸಿದ್ಧಗೊಂಡ ಬಳಿಕ ರೈಲಿನಲ್ಲಿ ಖಾಲಿಯಿರುವ ಬರ್ತ್ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ರೈಲು ಹೊರಡುವ ಸಮಯಕ್ಕೆ ಸುಮಾರು ನಾಲ್ಕು ಗಂಟೆ ಮುನ್ನ ಮೊದಲ ಚಾರ್ಟ್ ಸಿದ್ಧಗೊಂಡ ಬಳಿಕ ಮಾಹಿತಿಯು ಜಾಲತಾಣದಲ್ಲಿ ಪ್ರಯಾಣಿಕರಿಗೆ ಲಭ್ಯವಾಗುತ್ತದೆ ಮತ್ತು ಎರಡನೇ ಚಾರ್ಟ್ನ್ನು ರೈಲು ಹೊರಡುವ ಸಮಯಕ್ಕೆ ಅರ್ಧ ಗಂಟೆ ಮೊದಲು ಪ್ರಯಾಣಿಕರ ವೀಕ್ಷಣೆಗೆ ಒದಗಿಸಲಾಗುತ್ತದೆ. ಎರಡನೇ ಚಾರ್ಟ್ ಮೊದಲ ಚಾರ್ಟ್ ಪ್ರಕಟಗೊಂಡ ಬಳಿಕ ಹಾಲಿ ರಿಸರ್ವೇಷನ್ಗಳು ಮತ್ತು ಮಾಡಲಾದ ಯಾವುದೇ ಟಿಕೆಟ್ ರದ್ದತಿಯನ್ನು ಆಧರಿಸಿ ಬದಲಾವಣೆಗಳನ್ನು ಒಳಗೊಂಡಿರುತ್ತದೆ.
ನೂತನ ಸೌಲಭ್ಯವು ಐಆರ್ಸಿಟಿಸಿ ಇ-ಟಿಕೆಟ್ ಬುಕಿಂಗ್ ಪ್ಲಾಟ್ಫಾರ್ಮ್ನ ವೆಬ್ ಮತ್ತು ಮೊಬೈಲ್ ಆವೃತ್ತಿಗಳೆರಡರಲ್ಲೂ ಲಭ್ಯವಿದೆ. ಸೀಟ್ ಲಭ್ಯತೆಯ ಮಾಹಿತಿಯ ಆಧಾರದಲ್ಲಿ ಪ್ರಯಾಣಿಕರು ಟಿಕೆಟ್ ಬುಕಿಂಗ್ಗಾಗಿ ರೈಲಿನಲ್ಲಿರುವ ಟಿಟಿಇಯನ್ನು ಸಂಪರ್ಕಿಸಬಹುದು. ಜಾಲತಾಣದಲ್ಲಿ ರೈಲು ಬೋಗಿಗಳ ಚಿತ್ರಾತ್ಮಕ ನಿರೂಪಣೆ ಮತ್ತು ಬರ್ತ್ವಾರು ಲಭ್ಯತೆಯ ವಿವರಗಳಿರುತ್ತವೆ. ಒಂಬತ್ತು ವರ್ಗಗಳ ಬೋಗಿಗಳ ಲೇಔಟ್ ಪ್ರದರ್ಶಿತವಾಗಿರುತ್ತದೆ.
ನೂತನ ಸೌಲಭ್ಯದಲ್ಲಿ ಪ್ರಯಾಣಿಕರಿಗೆ ಅತ್ಯಂತ ಮಹತ್ವದ್ದೆಂದರೆ ತಾತ್ಪೂರ್ತಿಕ ನೆಲೆಯಲ್ಲಿ ಬರ್ತ್ಗಳನ್ನು ನಿರಾಕರಿಸಲು ಟಿಟಿಇಗೆ ಸಾಧ್ಯವಾಗುವುದಿಲ್ಲ. ಜೊತೆಗೆ ಪ್ಯಾಸೆಂಜರ್ ನೇಮ್ ರೆಕಾರ್ಡ್ (ಪಿಎನ್ಆರ್)ವಿಚಾರಣೆ ಸಂದರ್ಭ ದಲ್ಲಿ ಪಿಎನ್ಆರ್ಗೆ ಹಂಚಿಕೆ ಮಾಡಲಾಗಿರುವ ಬರ್ತ್ನ ನಿಖರವಾದ ಸ್ಥಾನವನ್ನೂ ಪ್ರಯಾಣಿಕರು ನೋಡಬಹುದಾಗಿದೆ. ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ರಿಸರ್ವೇಷನ್ ಚಾರ್ಟ್ಗಳನ್ನು ಹೇಗೆ ಪರಿಶೀಲಿಸಬಹುದು ಎಂಬ ಮಾಹಿತಿ ಇಲ್ಲಿದೆ......
1) ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ನೋಡಲು ‘ಚಾರ್ಟ್ಸ್/ವೇಕೆನ್ಸಿ’ ಎಂಬ ಹೊಸ ಆಯ್ಕೆಯನ್ನು ನೀಡಲಾಗಿದೆ.
2) ರೈಲಿನ ಸಂಖ್ಯೆ, ಪ್ರಯಾಣ ದಿನ ಮತ್ತು ಹತ್ತುವ ನಿಲ್ದಾಣದಂತಹ ಪ್ರಯಾಣ ವಿವರಗಳನ್ನು ಬಳಕೆದಾರರು ಸಲ್ಲಿಸಿದ ನಂತರ ದರ್ಜೆವಾರು ಮತ್ತು ಕೋಚ್ವಾರು ಖಾಲಿ ಬರ್ತ್ಗಳ ಸಂಖ್ಯೆಯನ್ನು ಕಾಣಬಹುದು.
3) ಪೂರ್ಣ ಪ್ರಯಾಣಕ್ಕೆ ಅಥವಾ ಭಾಗಶಃ ಪ್ರಯಾಣಕ್ಕೆ ಕಾಯ್ದಿರಿಸಲಾ ಗಿದೆಯೇ ಮತ್ತು ಪೂರ್ಣ ಪ್ರಯಾಣದ ವರೆಗೆ ಖಾಲಿಯಾಗಿದೆಯೇ ಇತ್ಯಾದಿಯಂತಹ ಬರ್ತ್ ವಾರು ಲಭ್ಯತೆ ಸ್ಥಿತಿಗತಿ ಮತ್ತು ಲೇಔಟ್ನ್ನು ನೋಡಲು ಬಳಕೆದಾರರು ನಿರ್ದಿಷ್ಟ ಕೋಚ್ ಮೇಲೆ ಕ್ಲಿಕ್ ಮಾಡಬಹುದಾಗಿದೆ.
4) ಕೋಚ್ ಲೇಔಟ್ನಲ್ಲಿ ಪಿಎನ್ಆರ್ಗೆ ಹಂಚಿಕೆ ಮಾಡಲಾಗಿರುವ ಬರ್ತ್ನ ಸ್ಥಿತಿಗತಿಯನ್ನು ಪಿಎನ್ಆರ್ ಎನ್ಕ್ವೈರಿ ಮತ್ತು ಬುಕ್ ಟಿಕೆಟ್ ಹಿಸ್ಟರಿಯಲ್ಲಿ ವೀಕ್ಷಿಸಬಹುದು.