ಯುದ್ಧಾಪರಾಧದ ಆರೋಪ: ಇಸ್ರೇಲಿ ಪಡೆಗಳು ವಿಚಾರಣೆ ಎದುರಿಸಲಿ; ವಿಶ್ವಸಂಸ್ಥೆಯ ತನಿಖಾ ಸಮಿತಿ ವರದಿ,
ಜಿನೇವ, ಫೆ. 28: ಕಳೆದ ವರ್ಷ ಗಾಝಾದಲ್ಲಿ ಫೆಲೆಸ್ತೀನಿಯರು ಪ್ರತಿ ವಾರ ನಡೆಸಿದ ಪ್ರತಿಭಟನೆಗಳ ವೇಳೆ, ಇಸ್ರೇಲಿ ಭದ್ರತಾ ಪಡೆಗಳು ಯುದ್ಧಾಪರಾಧಗಳು ಹಾಗೂ ಮಾನವತೆಯ ವಿರುದ್ಧ ಅಪರಾಧಗಳನ್ನು ಮಾಡಿರುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಗುರುವಾರ ಹೇಳಿದ್ದಾರೆ.
ಹಾಗಾಗಿ, ಇಸ್ರೇಲಿ ಭದ್ರತಾ ಪಡೆಗಳನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರತಿಭಟನೆಗಳ ವೇಳೆ 189 ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ ಹಾಗೂ 6,100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಹತ್ಯೆಗಳಿಗೆ ಕಾರಣರೆಂದು ತಾನು ಭಾವಿಸಿರುವವರ ಬಗ್ಗೆ ತನ್ನಲ್ಲಿ ಗುಪ್ತ ಮಾಹಿತಿಯಿದೆ ಹಾಗೂ ಇದರಲ್ಲಿ ಸ್ನೈಪರ್‌ಗಳು (ಅಡಗಿಕೊಂಡು ಗುಂಡು ಹಾರಿಸುವವರು) ಮತ್ತು ಕಮಾಂಡರ್‌ಗಳು ಸೇರಿದ್ದಾರೆ ಎಂದು ಸ್ವತಂತ್ರ ತನಿಖಾ ಸಮಿತಿ ಹೇಳಿದೆ.
‘‘ಇಸ್ರೇಲಿ ಭದ್ರತಾ ಪಡೆಗಳು ಫೆಲೆಸ್ತೀನಿ ಪ್ರತಿಭಟನಕಾರರನ್ನು ಕೊಂದಿವೆ ಹಾಗೂ ಅವರನ್ನು ಊನಗೊಳಿಸಿವೆ. ಇಸ್ರೇಲ್ ಸೈನಿಕರು ಗುಂಡು ಹಾರಿಸಿದಾಗ ಪ್ರತಿಭಟನಕಾರರು ಸೈನಿಕರನ್ನು ಕೊಲ್ಲುವ ಅಥವಾ ಗಂಭೀರ ಗಾಯವುಂಟು ಮಾಡುವ ಬೆದರಿಕೆಯಾಗಿರಲಿಲ್ಲ. ಪ್ರತಿಭಟನಕಾರರು ಹಿಂಸಾಚಾರದಲ್ಲಿ ನೇರವಾಗಿ ಭಾಗಿಯೂ ಆಗಿರಲಿಲ್ಲ’’ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ವಿಧಿಸಿರುವ ದಿಗ್ಬಂಧನಗಳನ್ನು ಸಡಿಲಿಸಬೇಕು ಹಾಗೂ ಫೆಲೆಸ್ತೀನ್ ನಿರಾಶ್ರಿತರಿಗೆ ಇಸ್ರೇಲ್‌ನಲ್ಲಿರುವ ತಮ್ಮ ಪೂರ್ವಜರ ಮನೆಗಳಿಗೆ ಹೋಗುವ ಹಕ್ಕು ನೀಡಬೇಕು ಎಂದು ಒತ್ತಾಯಿಸಿ ಇಸ್ರೇಲ್ ಮತ್ತು ಗಾಝಾ ಪಟ್ಟಿ ನಡುವಿನ ಗಡಿಯಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಶಸ್ತ್ರಧಾರಿ ಉಗ್ರರಿಂದ ಗಡಿಯನ್ನು ರಕ್ಷಿಸುವುದಕ್ಕಾಗಿ ತನ್ನ ಪಡೆಗಳು ಗುಂಡು ಹಾರಿಸಿದ್ದವು ಎಂಬುದಾಗಿ ಇಸ್ರೇಲ್ ಹೇಳಿದೆ.
ಕಳೆದ ವರ್ಷದ ಮಾರ್ಚ್ 30ರಿಂದ ಡಿಸೆಂಬರ್ 31ರವರೆಗಿನ ಅವಧಿಯ ವರದಿಯನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ಸಲ್ಲಿಸಲಾಗಿದೆ.
ಸಂತ್ರಸ್ತರು ಮತ್ತು ಪ್ರತ್ಯಕ್ಷದರ್ಶಿಗಳೊಂದಿಗೆ ನಡೆಸಿದ ನೂರಾರು ಸಂದರ್ಶನಗಳು, ವೈದ್ಯಕೀಯ ದಾಖಲೆಗಳು, ವೀಡಿಯೊ ಮತ್ತು ಡ್ರೋನ್ ಚಿತ್ರಗಳು ಹಾಗೂ ಇತರ ಚಿತ್ರಗಳನ್ನು ಆಧರಿಸಿ ವರದಿಯನ್ನು ತಯಾರಿಸಲಾಗಿದೆ.