ಗಾಂಧಿ ಹತ್ಯೆಗೆ ಸಿದ್ಧರಾದ ಕೊಲೆಗಾರರು
ಭಾಗ-9
ಸಾಯಿಸಬೇಕು, ನಿಜ. ಆದರೆ ಹೇಗೆ? ಖಡ್ಗದಿಂದ ಕತ್ತು ಕತ್ತರಿಸುವುದೇ? ಚೂರಿಯಿಂದ ಇರಿದು ಕೊಲ್ಲುವುದೇ? ಕೈ ಬಾಂಬು ಎಸೆದು ಗಾಂಧಿ ದೇಹವನ್ನು ಛಿದ್ರಿಸುವುದೇ? ಅಥವಾ ಬಂದೂಕಿನಿಂದ ಇಲ್ಲವೇ ಪಿಸ್ತೂಲಿನಿಂದ ಗುಂಡಿಕ್ಕಿ ಕೊಲ್ಲುವುದೇ? ‘ಏಕ್ ಮಾರ್ ದೋ ತುಕಡಾ’- ಒಂದೇ ಏಟು ಎರಡು ತುಂಡು ಮಾಡುವ ಗುರಿ ತಪ್ಪದ ಕೊಲೆಯ ಆಯುಧ ಯಾವುದು? ಎಲ್ಲಿ ದೊರೆಯುತ್ತದೆ? ಅಂಥ ಆಯುಧ ಪಡೆಯಲು ನಾರಾಯಣ ಆಪ್ಟೆ ಆಲೋಚಿಸಿದ. ಅವನಿಗೆ ಈ ವಿಚಾರವಾಗಿ ಮಾಹಿತಿಯಿತ್ತು.
ಲಾಹೋರಿನಲ್ಲಿ ಆಗ ಹಿಂದೂ ಮತ್ತು ಸಿಖ್ ಜನರ ಮೇಲೆ ನಡೆದ ಹತ್ಯಾಕಂಡವನ್ನು ಕ್ಯಾಪ್ಟನ್ ಆರ್.ಇ.ಅಟ್ಕಿನ್, ಮದನಲಾಲ್ ಕಂಡ ಸತ್ಯ ಸಂಗತಿಗಿಂತ ಘೋರ ಸಂಗತಿಯನ್ನು ಹೇಳುತ್ತಿದ್ದ: ‘‘ ‘ರಕ್ತದ ಕಾಲುವೆ ಹರಿಯಿತು’ ಎಂಬ ಉತ್ಪ್ರೇಕ್ಷಿತ ಮಾತು ಕೇಳಿದ್ದೆ. ದಿಟವಾಗಿಯೂ ರಕ್ತದ ಕಾಲುವೆ ಹರಿದಿದ್ದನ್ನು ನಾನು ಲಾಹೋರಿನ ಗಟಾರಗಳಲ್ಲಿ ಪ್ರತ್ಯಕ್ಷ, ವಾಸ್ತವವಾಗಿ ಕಂಡೆ! ಪೌರಾತ್ಯ ಪ್ಯಾರಿಸ್ ಎಂದೇ ಪ್ರಸಿದ್ಧವಾಗಿದ್ದ ಲಾಹೋರ್ ಬೆಂಕಿ ಹತ್ತಿ ಉರಿಯುತ್ತಿದ್ದುದನ್ನು ಕಂಡೆ! ಹಿಂದೂ -ಸಿಖ್ಖರಿದ್ದ ಬೀದಿಯಲ್ಲಿದ್ದ ಮನೆಗಳೆಲ್ಲ ಧಗಧಗಿಸಿ ಉರಿಯುತ್ತಿದ್ದವು. ಮುಸ್ಲಿಂ ಪೊಲೀಸರು ನಿಂತು ನೋಡುತ್ತಿದ್ದರು. ಒಬ್ಬ ಆಗರ್ಭ ಹಿಂದೂ ಶ್ರೀಮಂತ ತನ್ನನ್ನು ನನ್ನ ಜೀಪಿನಲ್ಲಿ ಕರೆದೊಯ್ಯಲು ಬೇಡಿಕೊಂಡ. ಹತ್ತು, ಹದಿನೈದು, ಮೂವತ್ತು, ಐವತ್ತು ಸಾವಿರ ರೂಪಾಯಿ ಕೊಡುತ್ತೇನೆ. ನನ್ನ ಹೆಂಡತಿ ಮಗಳನ್ನು ಬೇಕಾದರೆ ಕೊಡುತ್ತೇನೆ. ಅವರ ಆಭರಣಗಳನ್ನೆಲ್ಲ ಕೊಡುತ್ತೇನೆ. ಲಾಹೋರಿನ ಈ ನರಕದಿಂದ ನನ್ನನ್ನು ಪಾರುಮಾಡಿ’ ಎಂದು ಅಂಗಲಾಚಿ ಬೇಡಿಕೊಂಡ...!’’
ಮದನಲಾಲ್ ಪಂಜಾಬಿನಲ್ಲಿ ಕಂಡು ಕೇಳಿದ್ದ ಹಿಂದೂ ಸಿಖ್ಖರ ಬವಣೆಯ ಗೋಳಿನ ಕತೆಗಳನ್ನೆಲ್ಲ ಅಹಮದ್ ನಗರ, ಪುಣೆಯ ಆರೆಸ್ಸೆಸ್ ಬಳಗಕ್ಕೆ ಹೇಳಿದ್ದ. ಲಾಹೋರಿನಲ್ಲಿ ಮುಸ್ಲಿಂ ಗೂಂಡಾ ಜನರ ಗುಂಪು ನಿರಂಜನ ಸಿಂಗ್ ಎಂಬಾತನ ಕಾಲು ಕತ್ತರಿಸಿದರು. 90 ವರ್ಷ ವಯಸ್ಸಿನ ಅವನ ತಂದೆಯನ್ನು ಇರಿದು ಕೊಂದರು... ಎಲ್ಲಕ್ಕಿಂತ ಘೋರತರವಾದ ಹೇಯಕೃತ್ಯ ಅವನ 18 ವರ್ಷದ ಮಗಳನ್ನು ಹೆಗಲಮೇಲೆ ಹೊತ್ತುಕೊಂಡು ಓಡಿಹೋಗಿ... ಮುಂದೇನಾಯಿತೆಂಬುದನ್ನು ಬಾಯಿಬಿಟ್ಟು ಹೇಳಲಾರದೆ ಮುಖ ಮುಚ್ಚಿಕೊಂಡು ಅತ್ತ. ಅದಕ್ಕಿಂತಲೂ ಹೇಯವಾದ ಘೋರತರವಾದ ಕೃತ್ಯಗಳೂ ನಡೆದವು.
ಇಂಥ ಎಷ್ಟೋ ಘೋರ ಹಿಂಸಾಕೃತ್ಯಗಳನ್ನು ಮದನಲಾಲ್ ಮತ್ತೆ ಮತ್ತೆ ಹೇಳುತ್ತಿದ್ದ. ಸಿಂಧ್ ಪ್ರಾಂತದಿಂದ, ಕರಾಚಿ ಶಹರದಿಂದ ಭಾರತಕ್ಕೆ ಓಡಿಬಂದಿದ್ದ ಸಹಸ್ರಾರು ನಿರಾಶ್ರಿತರಿಗೆ ಗುಜರಾತ್ ಮತ್ತು ಮುಂಬೈ ರಾಜ್ಯದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಶಿಬಿರಗಳನ್ನು ರಚಿಸಿ ಆಶ್ರಯಕೊಟ್ಟು ಸೇವೆ ಮಾಡುತ್ತಿದ್ದರು. ಮದನಲಾಲ್ ಮತ್ತು ಕರ್ಕರೆ ಅಹಮದ್ ನಗರದಲ್ಲಿ ಹತ್ತು ಸಾವಿರ ನಿರಾಶ್ರಿತರಿಗೆ ರಕ್ಷಣೆ ಕೊಟ್ಟಿದ್ದರು. ಇಂಥದ್ದನ್ನೆಲ್ಲ ಕಂಡು, ಕೇಳಿದ, ಅನುಭವಿಸಿದ ಮದನಲಾಲ್ ಮತ್ತು ಅವನಂತಹ ಆರೆಸ್ಸೆಸ್ ಯುವಕರಿಗೆ ಸೇಡಿನ ದಾವಾಗ್ನಿ ಹೃದಯದಲ್ಲಿ ಹತ್ತಿ ಉರಿಯುತ್ತಿದ್ದರೆ ಏನಾಶ್ಚರ್ಯ! ಇಂಥ ವಿಪತ್ತು ಬಂದಿದ್ದರೂ ಗಾಂಧಿ ಮುಸ್ಲಿಮರ ಕ್ಷೇಮಕ್ಕಾಗಿ ಹಠಹಿಡಿದು ಉಪವಾಸ ಕುಳಿತಿದ್ದುದು ಯಾವ ನ್ಯಾಯ? ಅಲ್ಲಿ ಪಾಕಿಸ್ತಾನದಲ್ಲಿ ಹಿಂದೂ, ಸಿಖ್ಖರ ಮನೆಗಳನ್ನು, ಮಂದಿರಗಳನ್ನು ಮುಸ್ಲಿಮರು ಆಕ್ರಮಿಸಿ ‘ಸುಖ’ವಾಗಿ ಇರುವಾಗ ಇಲ್ಲಿ ದಿಲ್ಲಿಯಲ್ಲಿ ನಿರಾಶ್ರಿತರಾಗಿ ಓಡಿಬಂದ ಹಿಂದೂ-ಸಿಖ್ ಬಾಂಧವರು ಮುಸ್ಲಿಮರ ಮಸೀದಿಗಳನ್ನು ಆಕ್ರಮಿಸಿ ಜೀವ ಹಿಡಿದುಕೊಂಡಿದ್ದರೆ ತಪ್ಪೇನು? ಆ ಮಸೀದಿಗಳನ್ನು ತೆರವುಗೊಳಿಸಿ ಎಂದು ಹಿಂದೂ-ಸಿಖ್ ನಿರಾಶ್ರಿತರಿಗೆ ಬುದ್ಧಿವಾದ, ಔದಾರ್ಯ, ಪ್ರೇಮ ಸಂದೇಶ ಕೊಡುವುದರಲ್ಲಿ ಏನರ್ಥ? ಗಾಂಧೀಜಿಯ ಈ ನೀತಿಸಂಹಿತೆ ಪ್ರತ್ಯಕ್ಷ ನೋವುಂಡ ಮದನಲಾಲ್ನಿಗೆ ಅದನ್ನು ಕೇಳಿದ ಕರ್ಕರೆ, ಗೋಡ್ಸೆ, ಆಪ್ಟೆ ಅಂಥವರಿಗೆ ಅರ್ಥವಾಗಲಿಲ್ಲ! ಅಲ್ಲಿ ನಮ್ಮವರು ಹಾಗೆ ದುಃಖ ಅನುಭವಿಸುತ್ತಿರುವಾಗ, ಇಲ್ಲಿರುವ ಮುಸ್ಲಿಮರ ರಕ್ಷಣೆಗಾಗಿ ಗಾಂಧಿ ಉಪವಾಸ ಮಾಡುವುದೇ? ಅದಕ್ಕೆ ನಮ್ಮ ಸರಕಾರ ಮಣಿಯುವುದೇ? ಇದು ಕೂಡದು ! ಈ ಗಾಂಧಿ ಬದುಕಿರುವವರೆಗೆ ನೊಂದ ಹಿಂದೂ -ಸಿಖ್ ಜನರಿಗೆ ನ್ಯಾಯ ದೊರೆಯದು. ಆದ್ದರಿಂದ ಗಾಂಧಿ ಸಾಯಲೇಬೇಕು, ಸಾಯಿಸಬೇಕು!!
ಸಾಯಿಸಬೇಕು, ನಿಜ. ಆದರೆ ಹೇಗೆ? ಖಡ್ಗದಿಂದ ಕತ್ತು ಕತ್ತರಿಸುವುದೇ? ಚೂರಿಯಿಂದ ಇರಿದು ಕೊಲ್ಲುವುದೇ? ಕೈ ಬಾಂಬು ಎಸೆದು ಗಾಂಧಿ ದೇಹವನ್ನು ಛಿದ್ರಿಸುವುದೇ? ಅಥವಾ ಬಂದೂಕಿನಿಂದ ಇಲ್ಲವೇ ಪಿಸ್ತೂಲಿನಿಂದ ಗುಂಡಿಕ್ಕಿ ಕೊಲ್ಲುವುದೇ? ‘ಏಕ್ ಮಾರ್ ದೋ ತುಕಡಾ’- ಒಂದೇ ಏಟು ಎರಡು ತುಂಡು ಮಾಡುವ ಗುರಿ ತಪ್ಪದ ಕೊಲೆಯ ಆಯುಧ ಯಾವುದು? ಎಲ್ಲಿ ದೊರೆಯುತ್ತದೆ? ಅಂಥ ಆಯುಧ ಪಡೆಯಲು ನಾರಾಯಣ ಆಪ್ಟೆ ಆಲೋಚಿಸಿದ. ಅವನಿಗೆ ಈ ವಿಚಾರವಾಗಿ ಮಾಹಿತಿಯಿತ್ತು. ಹೈದರಾಬಾದ್ ನಿಜಾಂ ರಾಜ್ಯದಲ್ಲಿ ಆಗ ನಡೆಯುತ್ತಿದ್ದ ರಜಾಕರ್ ಹಾವಳಿಯಿಂದ ರಕ್ಷಿಸಿಕೊಳ್ಳಲು ಹಾಗೂ ನಿಜಾಂ ಆಡಳಿತೆಯನ್ನು ಬುಡಮೇಲು ಮಾಡಲು ತೀವ್ರವಾದ ಚಳವಳಿ ನಡೆದಿತ್ತು. ಅಲ್ಲಿಯ ಆರ್ಯಸಮಾಜದ ಮುಖಂಡರಾದ ಸ್ವಾಮಿ ರಾಮಾನಂದ ತೀರ್ಥ ಮುಂತಾದವರಿಗೆ ಮುಂಬೈ ರಾಜ್ಯದ ಸ್ವಾತಂತ್ರ ಯೋಧರು ಎಲ್ಲ ರೀತಿಯಿಂದಲೂ ಸಹಾಯ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಆರೆಸ್ಸೆಸ್ ಕಾರ್ಯಕರ್ತರು, ಹಿಂದೂ ಮಹಾಸಭೆಯ ಮುಖಂಡರು, ಕಾಂಗ್ರೆಸ್ ನಾಯಕರು..... ಮುಂತಾದವರು ಹೈದರಾಬಾದ್ ವಿಮೋಚನಾ ಚಳವಳಿಯ ಕಾರ್ಯಕರ್ತರಿಗೆ ಆಯುಧಗಳನ್ನು ಒದಗಿಸುವ ಸಹಾಯವನ್ನೂ ಮಾಡುತ್ತಿದ್ದರು. ಆರೆಸ್ಸೆಸ್ ಕಾರ್ಯಕರ್ತ ಆಪ್ಟೆ, ಸಹಸ್ರಾರು ಚೂರಿ, ಚಾಕು, ಖಡ್ಗ, ಉಕ್ಕಿನ ಹುಲಿ ಉಗುರು, ಕೈ ಬಾಂಬು, ನಾಡ ಪಿಸ್ತೂಲು, ಮದ್ದು ಗುಂಡುಗಳನ್ನು ಸಂಗ್ರಹಿಸಿ ಹೈದರಾಬಾದ್ಗೆ ರವಾನಿಸುತ್ತಿದ್ದ ಅಂತಹ ಆಯುಧಗಳ ಗುಪ್ತ ಕಳ್ಳ ವ್ಯಾಪಾರ ಮಾಡುತ್ತಿದ್ದ ಒಬ್ಬ ದಿಗಂಬರ ಬಡ್ಗೆ ಎಂಬ ಕಪಟ ಸನ್ಯಾಸಿಯ ಪರಿಚಯವಿತ್ತು. ಆ ಕಾಷಾಯಧಾರಿ, ಅದಕ್ಕೆ ತಕ್ಕ ಗಡ್ಡ ಬಿಟ್ಟ ವೇಷಧಾರಿ ಒಂದು ಪುಸ್ತಕ ಅಂಗಡಿಯ ಮುಖವಾಡದ ಹಿಂದೆ ಆಯುಧಗಳನ್ನು ಆಪ್ಟೆಗೆ ಒದಗಿಸಿದ್ದ. 1930ರಿಂದ ಇಲ್ಲಿಯವರೆಗೆ ಅವನ ಮೇಲೆ 37 ಅರೆಸ್ಟ್ ವಾರೆಂಟ್ಗಳನ್ನು ಹೊರಡಿಸಲಾಗಿತ್ತು. ಕೊಲೆ, ಸುಲಿಗೆ, ದೊಂಬಿ, ಡಕಾಯಿತಿ, ಅಕ್ರಮ ಆಯುಧಗಳ ಸಂಗ್ರಹ... ಇತ್ಯಾದಿ ಬಗೆ ಬಗೆಯ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಸಿಕ್ಕಿಬಿದ್ದಿದ್ದರೂ ಒಂದರಲ್ಲೂ ಶಿಕ್ಷೆಯಾಗಿರಲಿಲ್ಲ! ಅಂಥ ನಿಸ್ಸೀಮ ಕ್ರಿಮಿನಲ್ ಈ ದಿಗಂಬರ ಬಡ್ಗೆ! ಅಂಥವನ ಸಂಪರ್ಕ ನಾರಾಯಣ ಆಪ್ಟೆಗಿತ್ತು. ಗಾಂಧಿ ಕೊಲೆಗೆ ಬೇಕಾದ ತಕ್ಕ ಆಯುಧ ಪಡೆಯಲು ಗೋಡ್ಸೆ ಗೆಳೆಯ, ಹಿಂದೂ ರಾಷ್ಟ್ರ ಪತ್ರಿಕೆಯ ಪ್ರಕಾಶಕ, ಮುದ್ರಕ, ಆರೆಸ್ಸೆಸ್ ಕಡು ನಿಷ್ಠೆಯ ಕಾರ್ಯಕರ್ತ ಆಪ್ಟೆ ಉದ್ಯುಕ್ತನಾದ. ಬಡ್ಗೆಯಿಂದ ಸುಮಾರು ಮೂರು ಸಾವಿರ ರೂಪಾಯಿಗಳ ಅಕ್ರಮ ಆಯುಧಗಳನ್ನು ಖರೀದಿಸಿದ್ದ. ಆಪ್ಟೆ ಆಯುಧಗಳನ್ನು ಕೊಂಡಾಗ ಯಾವುದೋ ಒಂದು ದೊಡ್ಡ ‘ಕೆಲಸ’ಕ್ಕಾಗಿಯೇ ಎಂಬುದು ಬಡ್ಗೆಗೆ ಗೊತ್ತಿತ್ತು. ಹಿಂದೆ ಒಮ್ಮೆ ದಿಲ್ಲಿಯಲ್ಲಿ ಜರುಗಿದ ಮುಸ್ಲಿಂ ಲೀಗ್ ಸಭೆಯಲ್ಲಿ ಕೈಬಾಂಬ್ ಹಾರಿಸಿ ಪಾಕಿಸ್ತಾನದ ಪ್ರತಿಪಾದಕ ಜಿನ್ನಾರನ್ನು ಸಾಧ್ಯವಾದರೆ ಹತಮಾಡಲು ಸಂಚುಹೂಡಿದ್ದ. ಇನ್ನೊಮ್ಮೆ ಜಿನ್ನಾ ಜಿನೀವಾಕ್ಕೆ ಹೋಗುವರೆಂದೂ ಅಲ್ಲಿ ಅವರ ಹತ್ಯೆ ಮಾಡಬೇಕೆಂದೂ ಆಪ್ಟೆ ಹೊಂಚುಹಾಕಿದ್ದ. ಆದರೆ ಅನಾರೋಗ್ಯಾದಿಂದ ಬಳಲುತ್ತಿದ್ದ ಜಿನ್ನಾ ಕರಾಚಿ ಬಿಟ್ಟು ಕದಲಲಿಲ್ಲ. ಆಪ್ಟೆಯ ಉದ್ದೇಶ ಈಡೇರಲಿಲ್ಲ. ಇತ್ತೀಚೆಗೆ ಹೈದರಾಬಾದಿನಲ್ಲಿ ಗೆರಿಲ್ಲಾ ಯುದ್ಧ ಹೂಡಲು, ಸಾಧ್ಯವಾದರೆ ನಿಜಾಮನ ಪ್ರಾಣ ತೆಗೆಯಲೂ ಏರ್ಪಾಟು ಮಾಡಿದ್ದ. ಇಂಥ ಕೊಲೆ ಸಂಚುಗಳಲ್ಲಿ ಪರಿಣತನಾದ ಆಪ್ಟೆ ಈಗ ಗಾಂಧಿ ಹತ್ಯೆಗಾಗಿ ಆಯುಧಕೊಳ್ಳಲು ಬಡ್ಗೆಯನ್ನು ಕಂಡು:
‘‘ನಾನೀಗ ಒಂದು ದೊಡ್ಡ ‘ಕೆಲಸ’ ಮಾಡಬೇಕಾಗಿದೆ. ನನಗೆ ಕೆಲವು ಕೈಬಾಂಬು (ಗ್ರೆನೇಡ್) ಕೆಲವು ಪಿಸ್ತೂಲುಗಳು ಗನ್-ಕಾಟನ್-ಸ್ಲಾಬ್ (gun-cotton-slab)ಸಲ್ಫೂರಿಕ್/ನೈಟ್ರಿಕ್ ಆ್ಯಸಿಡ್ನಲ್ಲಿ ಅದ್ದಿದ್ದ ಅರಳೆಯ ಉಂಡೆ)... ಬೇಕಾಗಿವೆ. ಮಾರಾಟಕ್ಕಿದ್ದರೆ ಕೊಡಿ’’ ಎಂದು ಪಿಸುಗುಟ್ಟಿದ.
ಬಡ್ಗೆ: ‘‘ಸದ್ಯ ಇಲ್ಲ, ಕಾಲಾವಕಾಶಕೊಟ್ಟರೆ ಒದಗಿಸುತ್ತೇನೆ.’’
ಆಪ್ಟೆ: ‘‘ಆಗಬಹುದು. ಅಂತೂ ಅವು ಬೇಕು, ಅಲ್ಲಿಯವರೆಗೆ ಕಾಯುತ್ತೇನೆ.’’
ಇನ್ನೊಂದು ಕಡೆ ವಿಷ್ಣು ಕರ್ಕರೆ, ಮದನಲಾಲ್ ಪಹ್ವಾ ಕೂಡ ಆಯುಧ ಸಂಗ್ರಹಕ್ಕಾಗಿ ಪ್ರಯತ್ನಿಸಿದ್ದರು. ಕರ್ಕರೆ ನಡೆಸುತ್ತಿದ್ದ ‘ಡೆಕ್ಕನ್ ಗೆಸ್ಟ್ ಹೌಸ್’ ಕೊನೆಯ ಅಂತಸ್ತಿನ ಮೇಲುಪ್ಪರಿಗೆಯ ಕೊಠಡಿಯಲ್ಲಿ ಅನೇಕ ಆಯುಧಗಳನ್ನು -ಚಾಕು, ಚೂರಿ, ಭರ್ಜಿ, ನಾಡ ಪಿಸ್ತೂಲು, ಕೈಬಾಂಬು ಇತ್ಯಾದಿಗಳನ್ನು ದಾಸ್ತಾನು ಮಾಡಿದ್ದರು. ಆ ಆಯುಧಗಳನ್ನು ಹೈದರಾಬಾದ್ ವಿವೇಚನಾ ಗೆರಿಲ್ಲಾ ಸೈನಿಕರಿಗೆ ಒದಗಿಸಲು ಹವಣಿಸಿದ್ದರು. ಆದರೆ ವಿದೇಶೀ ಕಂಪೆನಿಯಲ್ಲಿ ತಯಾರಿಸಿದ ಪಿಸ್ತೂಲು ಇರಲಿಲ್ಲ. ಅಂಥ ವಿದೇಶಿ ಪಿಸ್ತೂಲು ಗಾಂಧಿ ಹತ್ಯೆಗೆ ಶ್ರೇಷ್ಠ ಆಯುಧ ಎಂದು ಅದಕ್ಕಾಗಿ ಹುಡುಕುತ್ತಿದ್ದರು. ಗ್ವಾಲಿಯರ್ನಲ್ಲಿದ್ದ ಡಾ.ದತ್ತಾತ್ರೇಯ ಪರಚುರೆ ಎಂಬ ಹೋಮಿಯೋಪಥಿ ವೈದ್ಯನಲ್ಲಿದೆ ಎಂಬುದು ಮದನಲಾಲ್ ಪಹ್ವಾನಿಗೆ ಗೊತ್ತಿತ್ತು. ಅವನು ಪಂಜಾಬಿನಿಂದ ನಿರಾಶ್ರಿತನಾಗಿ ಓಡಿಬಂದು ಮೊದಲು ದಿಲ್ಲಿಯಲ್ಲಿ ಕೆಲವು ದಿನಗಳಿದ್ದ. ಅಲ್ಲಿಂದ ಗ್ವಾಲಿಯರ್ಗೆ ಬಂದಿದ್ದ. ಅಲ್ಲಿದ್ದ ಡಾ.ಪರಚುರೆ ಅತ್ಯಂತ ಕಡುನಿಷ್ಠ ಆರೆಸ್ಸೆಸ್ ಮುಖಂಡ. ಅವನ ಆಶ್ರಯಕ್ಕೆ ಮದನ್ಲಾಲ್ ಬಂದ. ಅವನಿಗೆ ಊಟ, ವಸತಿ ಒದಗಿಸಿ ಆಶ್ರಯ ಕೊಟ್ಟ. ಋಣ ತೀರಿಸಲು ಮದನ್ಲಾಲ್ ಮಾಡಬೇಕಾಗಿದ್ದ ಒಂದೇ ಒಂದು ಕೆಲಸ ಗ್ವಾಲಿಯರ್ನಲ್ಲಿದ್ದ ಮುಸ್ಲಿಮರನ್ನು ಹತ್ಯೆ ಮಾಡುವುದು!!
ಡಾ. ಪರಚುರೆ 1,000 ಜನರ ಹಿಂದೂ ರಾಷ್ಟ್ರ ಸೇನೆಯನ್ನೇ ಕಟ್ಟಿಕೊಂಡಿದ್ದ. ಅವರ ನೆರವಿನಿಂದ ಗ್ವಾಲಿಯರ್ ಶಹರದಲ್ಲಿದ್ದ 60,000 ಮುಸ್ಲಿಮರನ್ನು ಅಲ್ಲಿಂದ ಓಡಿಸುವುದು, ಸಾಧ್ಯವಾದಷ್ಟು ಜನರನ್ನು ಮುಗಿಸುವುದು ಅವನ ಗುರಿಯಾಗಿತ್ತು. ಆ ಹಿಂದೆ ರಾಷ್ಟ್ರಸೈನ್ಯಕ್ಕೆ ಹೊಸ ಅಭ್ಯರ್ಥಿಗಳಿಗಾಗಿ ಆ ಅಗ್ನಿಭಕ್ಷಕ ಮುಖಂಡ ಹಾತೊರೆಯುತ್ತಿದ್ದ. ಈಗ ಈ ಮದನಲಾಲ್ ತನ್ನ ಸೈನ್ಯಕ್ಕೆ ಸೇರ್ಪಡೆಯಾಗಲು ಬಂದದ್ದು ಅವನ ಆಕಾಂಕ್ಷೆಗೆ ಬೆಂಬಲ ಸಿಕ್ಕಿದಂತಾಗಿತ್ತು. ಅದಕ್ಕೆ ಮದನಲಾಲ್ಸಿದ್ಧನಾಗಿಯೇ ಇದ್ದ. ಪಂಜಾಬ್ನಲ್ಲಿ ಆದ ಹಿಂದೂ -ಸಿಖ್ ಜನರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ತೋಳುಗಳು ತುಡಿಯುತ್ತಿದ್ದವು. ಮನಸ್ಸು ದ್ವೇಷದಾವಾಗ್ನಿ ಹತ್ತಿ ಧಗಧಗಿಸುತ್ತಿತ್ತು. ಇನ್ನು ಕೇಳಬೇಕೇ? ಮುಂದಿನ ಒಂದು ತಿಂಗಳು ಗ್ವಾಲಿಯರ್ನಿಂದ ಪಲಾಯನ ಮಾಡುತ್ತಿದ್ದ ಮುಸ್ಲಿಮರನ್ನು ಪಾಕಿಸ್ತಾನದಲ್ಲಿ ತನ್ನ ತಂದೆಯನ್ನು, ಇತರ ಹಿಂದೂಗಳನ್ನು ಮುಸ್ಲಿಮ್ ರಕ್ಕಸರು ನಿರ್ದಯೆಯಿಂದ ಕೊಂದಂತೆ ಇಲ್ಲಿಯ ಮುಸ್ಲಿಮರನ್ನು ಕೊಂದ. ಮುಸ್ಲಿಮರು ತುಂಬಿದ್ದ ರೈಲ್ವೆ ಡಬ್ಬಿಯನ್ನು ಮದನಲಾಲ್ ಮತ್ತು ಪರಚುರೆ ದಳದವರು ಕಗ್ಗೊಲೆ ಮಾಡಿದರು. ಇದನ್ನು ಕೇಳಿದ ಗಾಂಧೀಜಿ ದಿಲ್ಲಿಯ ಪಾರ್ಥನಾ ಸಭೆಯಲ್ಲಿ ಕಟುವಾಗಿ ಖಂಡಿಸಿದ್ದರು. ಆಗ ಗ್ವಾಲಿಯರ್ ಮಹಾರಾಜ ಡಾ.ಪರಚುರೆಯನ್ನು ಕರೆಸಿ ಈ ಪ್ರತೀಕಾರ ಮಾರಣಹೋಮ ನಿಲ್ಲಿಸಲು ಪ್ರಾರ್ಥನಾ ರೂಪದ ಆಜ್ಞೆ ಮಾಡಿದ್ದರು. ಹತ್ಯಾಖಂಡ ನಿಂತಿತು. ಮದನಲಾಲನಿಗೆ ‘ಕೆಲಸ’ ಇಲ್ಲದಂತಾಯಿತು. ಆದ್ದರಿಂದ ಮುಂಬೈಗೆ ಹೋಗಿ ಅಲ್ಲಿಂದ ಅಹಮದಾಬಾದ್ಗೆ ಹೋಗಿ ವಿಷ್ಣು ಕರ್ಕರೆಯ ಡೆಕ್ಕನ್ ಗೆಸ್ಟ್ ಹೌಸಿನಲ್ಲಿ ಜೀತಕ್ಕಿದ್ದ. ಅವನ ಈ ಹಿಂದಿನ ಅನುಭವದಿಂದ ಡಾ.ಪರಚುರೆಯ ಸಹಾಯವನ್ನು ಪುಣೆ ಆರೆಸ್ಸೆಸ್-ಬಳಗ ಗಾಂಧಿ ಹತ್ಯೆಯ ಪಿತೂರಿಗಾರರು ಪರಚುರೆಯ ವಿದೇಶೀ ಪಿಸ್ತೂಲನ್ನು ಪಡೆಯಲು ಹವಣಿಸಿದರು. ಡಾ. ಪರಚುರೆಯೇ ಮ್ಯಾಜಿಸ್ಟ್ರೇಟರಿಗೆ ಕೊಟ್ಟ ತಪ್ಪೊಪ್ಪಿಗೆ (confessional) ಹೇಳಿಕೆಯಂತೆ 1940-41ರಿಂದಲೂ ಆಪ್ಟೆಯ ನಿಕಟ ಪರಿಚಯವಿತ್ತು.
ಮದನಲಾಲ್ ಪುಣೆಯ ಆರೆಸ್ಸೆಸ್ ಬಳಗದೊಡನೆ ಗ್ವಾಲಿಯರ್ ತಲುಪಿದ. ಇವರನ್ನು ‘ಸೀತಾಫಲಾದಿ’ ಡಾಕ್ಟರ್ ಪರಚುರೆಗೆ ಪರಿಚಯಿಸಿದ. ಅವನಿಗೆ ಇವರನ್ನು ಕಂಡು ಪರಮ ಸಂತೋಷವಾಯಿತು. ಅವನು ಗ್ವಾಲಿಯರ್ನಲ್ಲಿ, ಆಸುಪಾಸಿನಲ್ಲಿ ಮಾಡುತ್ತಿದ್ದ ‘ಪವಿತ್ರ’ ಕಾರ್ಯವನ್ನು ಇವರೂ ಇನ್ನೂ ವ್ಯಾಪಕವಾಗಿ, ಪರಿಣಾಮಕಾರಿಯಾಗಿ ವೀರಾವೇಶದಿಂದ ಮುಂಬೈ ಗುಜರಾತ್ ಪ್ರದೇಶದಲ್ಲಿ ಮಾಡುತ್ತಿದ್ದರು. ತಾವು ಬಂದಿದ್ದ ಉದ್ದೇಶವನ್ನು -ವಿದೇಶೀ ಪಿಸ್ತೂಲು ಬೇಕೆಂಬುದನ್ನು ತಿಳಿಸಿ, ಅದನ್ನು ತಮಗೆ ಬೆಲೆಗೆ ಮಾರಬೇಕೆಂದು ಕೇಳಿದರು.
‘‘ಇಲ್ಲ. ಅದು ನನ್ನ ಆತ್ಮರಕ್ಷಣೆಗೆ ಬೇಕು. ಏನೇ ಬೆಲೆ ಕೊಟ್ಟರೂ ಕೊಡಲಾರೆ’ ಎಂದು ನಿರಾಕರಿಸಿದ. ಆದರೆ ಬಂದವರು ಮದನಲಾಲ್ನ ಮೂಲಕ ಪರಿಪರಿಯಾಗಿ ಬೇಡಿಕೊಂಡರು. ಮೊದಮೊದಲು ಆ ಮಾರಕಾಸ್ತ್ರ ಗಾಂಧೀಜಿ ಹತ್ಯೆಗಾಗಿ ಬೇಕೆಂಬುದನ್ನು ಬಿಚ್ಚಿ ಹೇಳಲಿಲ್ಲ. ಆದರೂ ಬರಬರುತ್ತ ಪರೋಕ್ಷವಾಗಿ ಈ ಇಂಗಿತವನ್ನು ಸೂಚ್ಯವಾಗಿ ತಿಳಿಸಿದರು. ‘ಸೀತಾಫಲಾದಿ’ ಸಿದ್ಧಷಧ ಪಂಡಿತ ಒಂದು ದೇಶಿ ನಾಡ ಪಿಸ್ತೂಲು ಮಾರಕಾಸ್ತ್ರವನ್ನು ಕೊಡಲೊಪ್ಪಿದ. ಪುಣೆ ಬಳಗಕ್ಕೆ ಅಪರಿಮಿತ ಸಂತೋಷವಾಯಿತು. ಶಸ್ತ್ರಸಜ್ಜಿತರಾಗಿ ಪುಣೆಗೆ ಹಿಂದಿರುಗಿದರು.
ಕೊಲೆಗಾರರು ಗಾಂಧೀ ಹತ್ಯೆಗೆ ಸಿದ್ಧರಾದರು. ಇನ್ನು ಉಳಿದದ್ದು ತಮ್ಮ ರಾಜಕೀಯ ಗುರು, ಹಿಂದುತ್ವದ ರೂವಾರಿ, ವೀರ ಸಾವರ್ಕರರ ಆಶೀರ್ವಾದ. ಮುಂಬೈನಲ್ಲಿದ್ದ ಬಡ್ಗೆ, ಸಾವರ್ಕರ್ ಸದನಕ್ಕೆ, ನಾಥೂರಾಮ್, ಆಪ್ಟೆ, ಬಡ್ಗೆ ಜನವರಿ 17ರಂದು ಹೋದರು. ಅಲ್ಲಿಗೆ ತನ್ನ ಟ್ಯಾಕ್ಸಿ ಕರೆದುಕೊಂಡು ಹೋದ ಐತಪ್ಪ ಕೋಟಿಯಾನ್ (ದಕ್ಷಿಣ ಕನ್ನಡ ಜಿಲ್ಲೆಯವನು) ವಿಚಾರಣೆಯ ಕಾಲಕ್ಕೆ ಕೊಟ್ಟ ಹೇಳಿಕೆ ಪ್ರಕಾರ ಗೋಡ್ಸೆ, ಆಪ್ಟೆ, ಬಡ್ಗೆ ಕಾರಿನಲ್ಲಿ ಹತ್ತಿ:
‘‘ಟ್ಯಾಕ್ಸಿಯನ್ನು ಶಿವಾಜಿ ಪಾರ್ಕ್ಗೆ ಹೊಡೆ ಎಂದರು. ರಾನಡೆ ರೋಡ್ ಮೂಲಕ ಶಿವಾಜಿ ಪಾರ್ಕ್ ದಕ್ಷಿಣ ದಿಕ್ಕಿಗೆ ಹೊಡೆದೆ... ಅಲ್ಲಿ ಎರಡು ರಸ್ತೆಗಳು ಕೂಡುವ ಕತ್ತರಿಯ ಬಳಿ ನಿಲ್ಲಿಸಿದೆ. ಅಲ್ಲಿ ಟ್ಯಾಕ್ಸಿಯಲ್ಲಿದ್ದ ನಾಲ್ವರು ಇಳಿದರು. (ಅವರನ್ನು ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ಇತರ ಜನರೊಡನೆ ಸಾಲಾಗಿ ನಿಲ್ಲಿಸಿದ್ದಾಗ ಗುರುತಿಸಿದ್ದ) ನನ್ನ ಬಲಕ್ಕಿದ್ದ ರಸ್ತೆಯಲ್ಲಿ ಅವರು ನನಗೆ ಕಾಣಿಸುವಷ್ಟು ದೂರ ನಡೆದರು. ಅಲ್ಲೊಂದು ಮನೆಯೊಳಗೆ ಹೋದರು. ಐದು ನಿಮಿಷಗಳಲ್ಲಿ ಹೊರಬಂದರು. ಟ್ಯಾಕ್ಸಿಯ ಬಳಿ ಬಂದರು. ದಾದಾರಲ್ಲಿದ್ದ ಹಿಂದೂ ಕಾಲನಿಗೆ ಹೊಡೆ ಎಂದರು. ರೂಯಿ ಕಾಲೇಜಿನ ಬಳಿ ಬಂದಾಗ ಅಲ್ಲಿದ್ದ ಒಬ್ಬಾತನನ್ನು ಡಾ.ಮಹೇಶೈಸ್ಕರ್ ವಾಡಿ ಎಲ್ಲಿದೆ ಎಂದು ಕೇಳಿದರು. ಇರಾನಿ ಅಂಗಡಿಯ ಹಿಂಬದಿಯಲ್ಲಿದೆ ಎಂದು ಆತ ಹೇಳಿದ. ಅಲ್ಲಿಗೆ ನಾನು ಟ್ಯಾಕ್ಸಿ ಹೊಡೆದುಕೊಂಡು ಹೋಗಿ ನಿಲ್ಲಿಸಿದೆ. ಅಲ್ಲೊಂದು ಮನೆಯೊಳಗೆ ಹೋದರು. ಹದಿನೈದು ನಿಮಿಷಗಳ ನಂತರ ಹಿಂದಿರುಗಿದರು. ಆ ತರುವಯ ಕುರ್ಲಾಕ್ಕೆ ಕರೆತಂದೆ.’’
approverಆ ಜನವರಿ 17ನೇ ತಾರೀಖು ಹೋಗಿದ್ದ ಆ ನಾಲ್ವರು ಯಾರೆಂಬುದನ್ನು, ಸಾವರ್ಕರ್ಸದನಕ್ಕೆ ಹೋಗಿದ್ದರೆಂಬುದನ್ನು ಆರೋಪಿಯಾಗಿದ್ದ ತರುವಾಯ ಸರಕಾರದ ಪರವಾಗಿ ಸಾಕ್ಷಿ ಹೇಳಿದ (ಮಾಫಿ ಸಾಕ್ಷಿ ) - ದಿಗಂಬರ ಬಡ್ಗೆ ಸಾಕ್ಷ):
‘‘ನಾವು ಮೂವರು (ಗೋಡ್ಸೆ, ಆಪ್ಟೆ ಮತ್ತು ನಾನು) ದಾದರ್ನಲ್ಲಿರುವ ಹಿಂದೂ ಮಹಾಸಭಾ ಕಚೇರಿಯ ಕಡೆ ಹೋದೆವು. ಶಂಕರ ಕ್ರಿಷ್ಣಯ್ಯನನ್ನು ಕರೆದುಕೊಂಡು ಹೋಗಲು ಅಲ್ಲಿಗೆ ಹೋದೆವು. ಅವನು ಗಾಡಿಯಲ್ಲಿ ಕುಳಿತ ಮೇಲೆ ಗೋಡ್ಸೆ ನಾವು ‘ತಾತ್ಯಾರಾವ್’ ಅವರ ಅಂತ್ಯದರ್ಶನ ಮಾಡಬೇಕೆಂದು ಸೂಚಿಸಿದರು. ಆಗ ನಾವು ಶಿವಾಜಿ ಪಾರ್ಕ್ ಹತ್ತಿರದಲ್ಲಿರುವ ಸಾವರ್ಕರ್ ಸದನಕ್ಕೆ ಹೋದೆವು... ಆ ಕತ್ತರಿ ರಸ್ತೆಯಿಂದ 30-40 ಹೆಜ್ಜೆ ಸಾವರ್ಕರ್ ಸದನವಿದೆ. ನಾವು ಟ್ಯಾಕ್ಸಿಯಿಂದ ಇಳಿದು ಆ ಓಣಿಯಲ್ಲಿ ನಡೆದು ಸಾವರ್ಕರ್ಸದನದ ಕಾಂಪೌಂಡಿನೊಳಗೆ ಹೋದೆವು. ಆಪ್ಟೆ, ಗೋಡ್ಸೆ, ನಾನು (ಸಾಕ್ಷಿ ಬಡ್ಗೆ) ಒಳ ನಡೆದವು. ನನ್ನನ್ನು ಆ ಮನೆಯ ಗ್ರೌಂಡ್ ಪ್ಲೋರಿನಲ್ಲಿ ಕುಳಿತಿರಲು ಹೇಳಿದರು. ಗೋಡ್ಸೆ, ಆಪ್ಟೆ ಮೇಲೆ ಹೋದರು. 5-10 ನಿಮಿಷದಲ್ಲಿ ಕೆಳಗಿಳಿದು ಬಂದರು... ಅವರ ಹಿಂದೆಯೇ ತಾತ್ಯಾರಾವ್ ಕೂಡ ಬಂದರು: ‘ಯಶಸ್ವಿಯಾಗಿ ಹಿಂದಿರುಗಿ ಬನ್ನಿ’ ಎಂದರು. ಅವರಾಡಿದ ತದ್ವತ್ ಶಬ್ದಗಳೆಂದರೆ: ‘ಯಶಸ್ವಿ ಹೋ ಯಾ’ ಈ ಮಾತುಗಳನ್ನು ಆಪ್ಟೆ ಮತ್ತು ಗೋಡ್ಸೆಯನ್ನು ಉದ್ದೇಶಿಸಿ ಹೇಳಿದರು...’’
ಇಲ್ಲಿಗೆ ಗಾಂಧಿ ಹತ್ಯೆಗೆ ಸಿದ್ಧರಾದ ಕೊಲೆಗಾರರು ಮಾಡಿದ ಸಂಚು, ಬೇಕಾದ ಮಾರಕಾಸ್ತ್ರ ಸಂಗ್ರಹ, ಕೊನೆಯದಾಗಿ ಗುರುಗಳ ಆಶೀರ್ವಾದ ಎಲ್ಲ ಮುಗಿಯಿತು. ಇನ್ನು ಉಳಿದದ್ದು ಕೃತ್ಯವನ್ನು ಈಡೇರಿಸುವುದು!
(ಬುಧವಾರದ ಸಂಚಿಕೆಗೆ)