ಸ್ತ್ರೀವಾದ ಎಂಬುದು ಯುದ್ಧ ಅಲ್ಲ: ಡಾ.ಎಂ.ಎಸ್.ಆಶಾದೇವಿ
‘ಮಹಾ ಇಳೆ- ವುಹಿಳೆ’ ರಾಜ್ಯಮಟ್ಟದ ವಿಚಾರ ಸಂಕಿರಣ
ಉಡುಪಿ, ಮಾ.2: ಸ್ತ್ರೀವಾದ ಎಂಬುದು ಯುದ್ಧವೂ ಅಲ್ಲ, ಸ್ಪರ್ಧೆಯೂ ಅಲ್ಲ. ಬದಲಿಗೆ ಅದು ಮನುಷ್ಯ ನಾಗರಿಕತೆ ಕಂಡಿರುವ ಅಂತರ್ಗತ ರಚನೆ ಯಾಗಿದೆ. ಸ್ತ್ರೀವಾದ ಅತ್ಯಂತ ಮಾನವೀಯವಾದ ಪರಿಸರ ಹಾಗೂ ಸಮಾಜ ವನ್ನು ಕಟ್ಟಲು ಬಯಸುತ್ತದೆಯೇ ಹೊರತು ಯಾರನ್ನು ದ್ವೇಷಿಸುತ್ತಿಲ್ಲ ಮತ್ತು ಯಾರನ್ನು ನಿರಾಕರಿಸುತ್ತಿಲ್ಲ ಎಂದು ಬೆಂಗಳೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕಿ, ವಿಮರ್ಶಕಿ ಹಾಗೂ ಸ್ತ್ರೀವಾದಿ ಚಿಂತಕಿ ಡಾ.ಎಂ.ಎಸ್.ಆಶಾದೇವಿ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಎನ್‌ಎಸ್‌ಎಸ್ ಘಟಕ 1 ಮತ್ತು 2ರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶನಿವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಮಹಾ ಇಳೆ- ಮಹಿಳೆ’ ಮನೆಯಿಂದ ಮಹಾ ಮನೆಯಡೆಗೆ... ರಾಜ್ಯಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶಯ ನುಡಿಗಳನ್ನಾಡಿದರು.
ಗಂಡಿಗೂ ಹೆಣ್ಣಿಗೂ ಇರುವ ಸ್ವಾಯತ್ತತೆಯನ್ನು ಮತ್ತು ಪುರುಷ ಹಾಗೂ ಮಹಿಳೆಯರು ಒಡೆಯರಲ್ಲದ ವಿಕೇಂದ್ರೀಕೃತ ವ್ಯವಸ್ಥೆಯನ್ನು ನಾವು ಕೇಳುತ್ತಿ ದ್ದೇವೆ. ಆದುದರಿಂದ ನಾವು ಗಂಡಿನಲ್ಲಿರುವ ಹೆಣ್ಣನ್ನು, ಹೆಣ್ಣಿನಲ್ಲಿರುವ ಗಂಡನ್ನು ಕಂಡುಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹೆಣ್ಣು ಮಕ್ಕಳು ನಮ್ಮನ್ನು ನಾವು ಹೊಸದಾಗಿ ಎಚ್ಚರಿಕೆಯಿಂದ ರಚಿಸಿ ಕೊಳ್ಳಬೇಕಾಗಿದೆ.ಯಾಕೆಂದರೆ ನಮ್ಮ ಎದುರಲ್ಲಿರುವ ಆಧುನಿಕತೆ, ಸ್ವಾವಲಂಬನೆ, ಬಿಡುಗಡೆ ಹೆಸರಿನಲ್ಲಿ ಕಾಣಿಸಿಕೊಳ್ಳುವ ಛದ್ಮವೇಷಗಳು ಬಹಳ ಭೀಕರವಾಗಿ ರುತ್ತವೆ. ನಮ್ಮನ್ನು ನಾವು ಪುನರ್ ರಚಿಸುವುದು, ನನ್ನ ಅಸ್ಮಿತೆಯನ್ನು ಕಂಡು ಕೊಳ್ಳುವುದು ಮತ್ತು ನಮ್ಮ ವ್ಯಕ್ತಿತ್ವವನ್ನು ಸ್ಥಾಪಿಸುವುದು ಸದ್ಯ ನಮ್ಮ ಮುಂದೆ ಇರುವ ಬಹಳ ದೊಡ್ಡ ಸವಾಲು ಆಗಿದೆ ಎಂದರು.
ವೃದ್ಧರಿಂದ ಹೆಣ್ಣು ಮಗುವಿನವರೆಗೆ ಈ ದೇಶ ಹಾಗೂ ಪರಿಸರದಲ್ಲಿ ಯಾರೂ ಸುರಕ್ಷಿತ ಅಲ್ಲ ಎನ್ನುವುದಾದರೆ ನಾವು ಹೆಣ್ಣನ್ನು ಯಾವ ರೀತಿಯ ನೋಡುತ್ತಿ ದ್ದೇವೆ ಎಂಬುದು ಪ್ರಶ್ನೆ. ಶತಮಾನದ ಆರಂಭದಲ್ಲಿ ವಿದ್ಯೆ, ಉದ್ಯೋಗ, ಆರ್ಥಿಕ ಸ್ವಾವಲಂಬನೆ ಹೆಣ್ಣಿನ ಬಿಡುಗಡೆಯ ಮಹಾ ದಾರಿಗಳು ಎಂದು ತಿಳಿದು ಕೊಂಡಿದ್ದೆವು. ಆ ಮೂರು ದಾರಿಗಳು ಸಿಕ್ಕಿಯೂ ಯಾಕೆ ಹೆಣ್ಣಿನ ಮೇಲೆ ಈ ರೀತಿಯ ಆಕ್ರಮಣಗಳು ನಡೆಯುತ್ತಲೇ ಇವೆ. ಹೆಣ್ಣು ಮಕ್ಕಳ ರಕ್ಷಣೆಗೆ ನೂರಾರು ಕಾನೂನುಗಳಿದ್ದರೂ ಕೂಡ ಇಂದು ಈ ಹಿಂದೆ ಊಹಿಸಲು ಅಸಾಧ್ಯ ವಾದ ಬಗೆಯ ಶೋಷಣೆಗಳು, ದೌರ್ಜನ್ಯಗಳು ಹೆಣ್ಣಿನ ಮೇಲೆ ಯಾಕೆ ನೆಯುತ್ತಿವೆ ಎಂದವರು ಪ್ರಶ್ನಿಸಿದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ನ್ಯೂಸ್ 18 ಕನ್ನಡ ಖಾಸಗಿ ವಾಹಿನಿ ಯ ವಿಶೇಷ ತನಿಖಾ ವಿಭಾಗದ ಸಂಪಾದಕಿ ವಿಜಯಲಕ್ಷ್ಮೀ ಶಿಬರೂರು ಮಾತನಾಡಿ, ಪತ್ರಿಕೋದ್ಯಮದಲ್ಲಿ 17 ವರ್ಷಗಳ ಕಾಲ ದುಡಿದರೂ ಮಹಿಳೆ ಎಂಬ ಒಂದೇ ಒಂದು ಕಾರಣಕ್ಕೆ ಸಂಪಾದಕ ಹುದ್ದೆಗೆ ಏರಲು ಸಾಧ್ಯವಾಗಿಲ್ಲ. ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆ ನೆಲೆಯೂರಲು ಬಹಳ ಕಷ್ಟ ಇದೆ. ಎಲ್ಲ ಕಡೆ ಗಳಲ್ಲೂ ಬೇರೆ ಬೇರೆ ಸ್ವರೂಪಗಳಲ್ಲಿ ಮಹಿಳೆಯ ಮೇಲೆ ಶೋಷಣೆಗಳು ನಡೆ ಯುತ್ತಿವೆ. ಆದುದರಿಂದ ಮಹಿಳೆ ತನ್ನ ಅಸ್ಥಿತ್ವಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ್ ವಹಿಸಿ ದ್ದರು. ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್, ಕಾಲೇಜಿನ ಐಕ್ಯೂ ಎ.ಸಿ. ಸಂಚಾಲಕ ಅರುಣ್ ಕುಮಾರ್, ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಪ್ರಿಯಾಶ್ರೀ ಕೆ.ಟಿ. ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಶಮಂತ್ ಕುಮಾರ್ ಕೆ.ಎಸ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಬರಿ ವಂದಿಸಿದರು. ಮೇಘಾ ಭಟ್ ಕಾರ್ಯಕ್ರಮ ನಿರೂಪಿಸಿದರು.
‘ದೇವಿಯ ಪಟ್ಟ ಬೇಕಾಗಿಲ್ಲ’
‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ’ ಎಂಬ ಮಾತನ್ನು ನಾವು ಮರೆತು ಬಿಡಬೇಕು. ನಮಗೆ ದೇವಿಯ ಪಟ್ಟ ಯಾವತ್ತೂ ಬೇಕಾಗಿಲ್ಲ. ಯಾಕೆಂದರೆ ನಮಗೆ ದೇವಿ ಪಟ್ಟ ಕೊಡುವುದರ ಜೊತೆಗೆ ದೆವ್ವದ ಪಟ್ಟವನ್ನು ಕೊಡುತ್ತಾರೆ. ನಮ್ಮನ್ನು ವರ್ಗೀಯಾಗಿಯೂ, ಅಪವರ್ಗಿಯಾಗಿಯೂ, ಸ್ವರ್ಗಿ ಯಾಗಿಯೂ ನೋಡದೆ, ಮನುಷ್ಯರಾಗಿ, ಮನುಷ್ಯರ ಘನತೆಯಲ್ಲಿ ನೋಡಿ ಹಾಗೂ ನಡೆಸಿಕೊಳ್ಳಿ ಎಂದು ಡಾ.ಎಂ.ಎಸ್.ಆಶಾದೇವಿ ತಿಳಿಸಿದರು.