ಭಾರತದ ಶಿಕ್ಷಣ ಶಿಲ್ಪಿ ಆಝಾದ್
ಆಝಾದ್ ಓರ್ವ ನಿರ್ಭೀತ ಮತ್ತು ಧೀಮಂತ ವ್ಯಕ್ತಿ. ಇತ್ತೀಚಿನ ದಿನಗಳಲ್ಲಿ ಕೆಲವರಿಗಷ್ಟೇ ಸೀಮಿತವಾಗಿರುವ ಸಂಸ್ಕೃತಿಯ ಉತ್ಪನ್ನ ಎಂದು ಜವಾಹರ ಲಾಲ್ ನೆಹರೂ ಆಝಾದ್ ಅವರನ್ನು ವರ್ಣಿಸಿದ್ದರು. 1992ರಲ್ಲಿ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಲಾಯಿತು. ಆದರೆ ಅವರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸುವುದು ಅವರು ಮಾಡಿದ ಕಾರ್ಯ ಮತ್ತು ಜೀವನಕ್ಕೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ.
ಪೇಟೊ, ಅರಿಸ್ಟಾಟಲ್ ಮತ್ತು ಪೈಥಗಾರಸ್ ಅವರಷ್ಟೇ ಘನತೆಯನ್ನು ಹೊಂದಿದ್ದ ವ್ಯಕ್ತಿತ್ವ ಅಬುಲ್ ಕಲಾಮ್ ಗುಲಾಮ್ ಮುಹಿಯುದ್ದೀನ್ ಅವರದ್ದು. ನಾವೆಲ್ಲರೂ ಗೌರವಪೂರ್ಣವಾಗಿ ವೌಲಾನಾ ಅಬುಲ್ ಕಲಾಮ್ ಆಝಾದ್ ಎಂದು ಕರೆಯುವ ಆ ಮೇರು ವ್ಯಕ್ತಿ ಓರ್ವ ಅಪ್ರತಿಮ ಸ್ವಾತಂತ್ರ ಹೋರಾಟಗಾರ, ರಾಜಕಾರಣಿ, ಪತ್ರಕರ್ತ ಮತ್ತು ಶಿಕ್ಷಣತಜ್ಞ. ನಾಗರಿಕರನ್ನು ಸಬಲಗೊಳಿಸಲು ಸೌಹಾರ್ದ, ಒಗ್ಗಟ್ಟು ಮತ್ತು ಶಿಕ್ಷಣವನ್ನು ಪ್ರತಿಪಾದಿಸಿದ ಚಿಂತಕ. ನವೆಂಬರ್ 11,1888ರಲ್ಲಿ ಸೌದಿ ಅರೇಬಿಯದ ಮಕ್ಕಾದಲ್ಲಿ ಜನಿಸಿದ ಆಝಾದ್ ಅವರ ತಂದೆ ಭಾರತೀಯನಾಗಿದ್ದರೆ ತಾಯಿ ಅರಬ್ ಮೂಲದವರು. ಆಝಾದ್‌ಗೆ ಕೇವಲ ಎರಡು ವರ್ಷವಿದ್ದಾಗ ಅವರ ಕುಟುಂಬ ಕೋಲ್ಕತಾಗೆ ವಲಸೆ ಬಂತು. ಅಲ್ಲಿ ಅವರಿಗೆ ಗಣಿತ, ತತ್ವಶಾಸ್ತ್ರ, ವಿಶ್ವ ಇತಿಹಾಸ, ವಿಜ್ಞಾನ ವಿಷಯಗಳಲ್ಲಿ ಮತ್ತು ಪರ್ಶಿಯನ್, ಉರ್ದು ಮತ್ತು ಅರಬ್ ಭಾಷೆಗಳಲ್ಲಿ ಗೃಹಶಿಕ್ಷಣ ನೀಡಲಾಯಿತು. ಸಾಂಪ್ರದಾಯಿಕ ಇಸ್ಲಾಮಿಕ್ ಶಿಕ್ಷಣ ಪಡೆಯುವ ಮಧ್ಯೆಯೇ ಆಝಾದ್ ತನ್ನ ತಂದೆಗೆ ಅರಿವಿಲ್ಲದೆ ಇಂಗ್ಲಿಷ್ ಕಲಿಯಲು ಆರಂಭಿಸಿದ್ದರು ಎಂದು ಹೇಳಲಾಗುತ್ತದೆ.
ಸಣ್ಣ ವಯಸ್ಸಿನಲ್ಲೇ ಸರ್ವಾಂಗೀಣ ಶಿಕ್ಷಣದ ಬಗ್ಗೆ ಸರ್ ಸಯೀದ್ ಅಹಮದ್ ಖಾನ್ ಅವರ ಬೋಧನೆಯಿಂದ ಪ್ರಭಾವಿತರಾದ ಆಝಾದ್ ಇಂಗ್ಲಿಷ್ ಜೊತೆಗೆ ಪಾಶ್ಚಾತ್ಯ ತತ್ವಶಾಸ್ತ್ರ, ಇತಿಹಾಸ ಮತ್ತು ಸಮಕಾಲೀನ ರಾಜಕೀಯ ಅಭ್ಯಸಿಸುವ ಇರಾದೆಯಿಂದ ಅಫ್ಘಾನಿಸ್ತಾನ, ಈಜಿಪ್ಟ್, ಇರಾಕ್, ಸಿರಿಯ ಮತ್ತು ಟರ್ಕಿಗೆ ಪ್ರಯಾಣ ಬೆಳೆಸಿದರು. ಉರ್ದು ಕವಿತೆಗಳನ್ನು ಬರೆಯಲು ಆರಂಭಿಸಿದ ಆಝಾದ್ ಧರ್ಮ ಮತ್ತು ತತ್ವಗಳ ಬಗ್ಗೆ ಗ್ರಂಥಗಳನ್ನು ಬರೆಯಲು ಆರಂಭಿಸಿದರು. ಅದಕ್ಕಾಗಿ ಅವರು ಅಳವಡಿಸಿಕೊಂಡ ಕಾವ್ಯನಾಮವೇ ಆಝಾದ್. ಶಿಕ್ಷಣ ಮತ್ತು ಸಂಯೋಜನೆಯಲ್ಲಿ ಜೀವನದಲ್ಲಿ ಬಹುಬೇಗನೆ ಆಸಕ್ತಿ ಹೊಂದಿದ ಕಾರಣ ಆಝಾದ್ ಓರ್ವ ರಾಷ್ಟ್ರವಾದಿಯಾಗಿ ರೂಪುಗೊಂಡರು. ಅವರು ಬ್ರಿಟಿಷರ ನೀತಿಗಳ ಮತ್ತು ಭಾರತೀಯರ ಮೇಲೆ ನಡೆಸುತ್ತಿದ್ದ ದೌರ್ಜನ್ಯದ ವಿರುದ್ಧ ತಮ್ಮ ವಾರ ಪತ್ರಿಕೆ ಅಲ್ ಹಿಲಾಲ್ ಮತ್ತು ನಂತರ ಅಲ್ ಬಲಗ್‌ನಲ್ಲಿ ಧ್ವನಿಯೆತ್ತಿದ್ದರು.
ಮಹಾತ್ಮಾ ಗಾಂಧಿಯ ಅಸಹಕಾರ ಚಳವಳಿಯಿಂದ ತೀವ್ರ ಪ್ರಭಾವಿತರಾಗಿದ್ದ ಆಝಾದ್ 1919ರ ರೊವ್ಲಟ್ ಕಾಯ್ದೆಯನ್ನು ವಿರೋಧಿಸಿ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಯನ್ನು ಸಂಘಟಿಸಲು ಗಾಂಧಿ ಜೊತೆ ಕೈಜೋಡಿಸಿದ್ದರು. ಆಝಾದ್ ಅವರ ಪತ್ರಿಕೆಗಳನ್ನು ನಿಷೇಧಿಸುವ ಮೂಲಕ ಅವರ ಧ್ವನಿಯನ್ನು ಉಡುಗಿಸಲು ಬ್ರಿಟಿಷರು ಪ್ರಯತ್ನಪಟ್ಟರೂ ಎದೆಗುಂದದ ಆಝಾದ್ ಖಿಲಾಫತ್ ಆಂದೋಲನವನ್ನು ಮುನ್ನಡೆಸಿದರು ಮತ್ತು 1923ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷಸ್ಥಾನಕ್ಕೇರಿದ ಅತ್ಯಂತ ಯುವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಕ್ವಿಟ್ ಇಂಡಿಯಾ ಆಂದೋಲನದಲ್ಲಿ ಭಾಗವಹಿಸಿದ ಕಾರಣಕ್ಕೆ ಅವರನ್ನು ಜೈಲಿಗಟ್ಟಲಾಯಿತು.
ಕಾಂಗ್ರೆಸ್‌ನ ಓರ್ವ ಪ್ರಭಾವಿ ಸದಸ್ಯರಾಗಿ ಆಝಾದ್, ನಮ್ಮ ಸಂವಿಧಾನದ ಶಿಕ್ಷಣ ನೀತಿಗಳ ಮೂಲವಾಗಿರುವ ಹಲವು ಚರ್ಚೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹಾಗಾಗಿ ಅವರು ಸ್ವತಂತ್ರ ಭಾರತದ ಮೊತ್ತಮೊದಲ ಶಿಕ್ಷಣ ಸಚಿವರಾಗಿದ್ದರು ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ. ರಾಜಕೀಯ, ಇತಿಹಾಸ, ಭಾಷೆಯ ಬಗ್ಗೆ ಆಸಕ್ತಿ ಹೊಂದಿದ್ದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣವೇ ದಾರಿ ತೋರುವುದು ಎಂದು ದೃಢವಾಗಿ ನಂಬಿದ್ದ ಆಝಾದ್ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಸೂಕ್ತ ಆಯ್ಕೆಯಾಗಿದ್ದರು. ಶಿಕ್ಷಣ ಸಚಿವರಾಗಿ ಆಝಾದ್ ಗಮನಹರಿಸಿದ ಅತ್ಯಂತ ಪ್ರಮುಖ ವಿಷಯವೆಂದರೆ ಹೆಣ್ಮಕ್ಕಳು ಮತ್ತು ಗ್ರಾಮೀಣ ಬಡವರಿಗೆ ಶಿಕ್ಷಣ. 14ರ ವಯಸ್ಸಿನವರೆಗೆ ಎಲ್ಲರಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದನ್ನು ಅವರು ದೃಢವಾಗಿ ಪ್ರತಿಪಾದಿಸಿದ್ದರು ಮತ್ತು ಈ ತತ್ವವನ್ನು ಈಗಲೂ ಪಾಲಿಸಲಾಗುತ್ತಿದೆ.
ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಭಾರತದ ಸಾಕ್ಷರತೆ ದರ ಶೇ.12 ಆಗಿದ್ದು ಸ್ವರಾಜ್ಯದೊಂದಿಗೆ ಭಾರತದ ವಯಸ್ಕರನ್ನು ಸುಶಿಕ್ಷಿತರನ್ನಾಗಿಸುವ ಜವಾಬ್ದಾರಿಯೂ ಇತ್ತು. ಇದರಿಂದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತಿತ್ತು. ಶಿಕ್ಷಣವನ್ನು ಕೇವಲ ಮಕ್ಕಳ ಮೇಲೆಯೇ ಕೇಂದ್ರೀಕರಿಸುವ ಅಗತ್ಯವಿಲ್ಲ ಎಂದು ಅರಿತ ಆಝಾದ್ ವಯಸ್ಕರ ಶಿಕ್ಷಣವನ್ನು ತಮ್ಮ ಪ್ರಾಥಮಿಕ ಉದ್ದೇಶಗಳಲ್ಲಿ ಒಂದನ್ನಾಗಿಸಿದರು ಮತ್ತು ವಯಸ್ಕ ಶಿಕ್ಷಣಕ್ಕಾಗಿ ಮಂಡಳಿಗಳನ್ನು ರಚಿಸಿದರು. ಮೂಲ ಶಿಕ್ಷಣವನ್ನು ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕು ಮತ್ತು ಅದರ ಹೊರತು ಆತ ನಾಗರಿಕನಾಗಿ ತನ್ನ ಕರ್ತವ್ಯವನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ನಾವು ಅರೆಕ್ಷಣವೂ ಮರೆಯಬಾರದು ಎಂದು 1948ರಲ್ಲಿ ನಡೆದ ಅಖಿಲ ಭಾರತ ಶಿಕ್ಷಣ ಕುರಿತ ಸಮ್ಮೇಳನದಲ್ಲಿ ಆಝಾದ್ ತಿಳಿಸಿದ್ದರು. ಆರಂಭದಲ್ಲಿ, ಶಿಕ್ಷಣವು ಕೇಂದ್ರ ಸರಕಾರದ ಜವಾಬ್ದಾರಿಯಾಗಬೇಕೇ ಅಥವಾ ರಾಜ್ಯದ್ದೇ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳು ತಲೆದೋರಿದ್ದವು.
ಶಿಕ್ಷಣವನ್ನು ಕೇಂದ್ರದ ಜವಾಬ್ದಾರಿಯನ್ನಾಗಿಸಿದರೆ ಏಕಸಮಾನತೆ ಉಂಟಾಗುತ್ತದೆ ಎನ್ನುವುದು ಆಝಾದ್ ಅವರ ವಾದವಾಗಿತ್ತು. ಆದರೆ ಭಾರತ ಸಾಂಸ್ಕೃತಿಕವಾಗಿ ವೈವಿಧ್ಯತೆ ಹೊಂದಿರುವ ದೇಶವಾಗಿರುವುದರಿಂದ ಶಿಕ್ಷಣದ ಬಗ್ಗೆ ಒಂದೇ ರೀತಿಯ ನಿಯಮ ನ್ಯಾಯ ಒದಗಿಸದು ಎನ್ನುವುದು ಇತರ ಅನೇಕ ನಾಯಕರ ನಿಲುವಾಗಿತ್ತು. ಅಂತಿಮವಾಗಿ, ಶಿಕ್ಷಣವನ್ನು ರಾಜ್ಯ ಸರಕಾರದ ಪಟ್ಟಿಗೆ ಸೇರಿಸಿದ ನಾಯಕರು ಉನ್ನತ ಶಿಕ್ಷಣದ ಕೆಲವೊಂದು ವಿಷಯಗಳನ್ನು ಕೇಂದ್ರ ಸರಕಾರದ ಸುಪರ್ದಿಗೆ ಬಿಟ್ಟರು. 1945ರಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯನ್ನು ಸ್ಥಾಪಿಸಿದ ಆಝಾದ್ ಸಾಹಿತ್ಯ ಅಕಾಡಮಿ ಮತ್ತು ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿದರು. ಅವರ ನಾಯಕತ್ವದ ಅಡಿಯಲ್ಲಿ, ದೇಶದ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಲು ಸಂಶೋಧನಾ ಕೇಂದ್ರವಾಗಿ ಕೇಂದ್ರ ಶಿಕ್ಷಣ ಸಂಸ್ಥೆಯನ್ನು ದಿಲ್ಲಿಯಲ್ಲಿ ಸ್ಥಾಪಿಸ ಲಾಯಿತು (ಈ ಸಂಸ್ಥೆ ಮುಂದೆ ದಿಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗವಾಗಿ ಬದಲಾಯಿತು).
1953ರಲ್ಲಿ ವಿಶ್ವವಿದ್ಯಾನಿಲಯಗಳ ದತ್ತಿ ಆಯೋಗ (ಯುಜಿಸಿ)ವನ್ನು ಸ್ಥಾಪಿಸಿದ ಮತ್ತು ಪ್ರಪ್ರಥಮ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ಸ್ಥಾಪಿಸಿದ ಹೆಗ್ಗಳಿಕೆಯೂ ಆಝಾದ್ ಅವರದ್ದಾಗಿದೆ. ಐಐಟಿಯ ಜನಪ್ರಿಯತೆಯನ್ನು ಕಂಡ ಆಝಾದ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ದಿಲ್ಲಿ ವಿಶ್ವವಿದ್ಯಾನಿಲಯದ ತಂತ್ರಜ್ಞಾನ ವಿಭಾಗವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದರು. ಈ ಸಂಸ್ಥೆಯ ನಿರ್ಮಾಣದಿಂದ ದೇಶದ ಉನ್ನತ ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಯ ಪ್ರಗತಿಯಲ್ಲಿ ಹೊಸ ಮೈಲುಗಲ್ಲನ್ನು ಕ್ರಮಿಸಲಾಗುವುದು ಎಂದು ಆಝಾದ್ ತಿಳಿಸಿದ್ದರು. ಓರ್ವ ನಿರ್ಭೀತ ಮತ್ತು ಧೀಮಂತ ವ್ಯಕ್ತಿ. ಇತ್ತೀಚಿನ ದಿನಗಳಲ್ಲಿ ಕೆಲವರಿಗಷ್ಟೇ ಸೀಮಿತವಾಗಿರುವ ಸಂಸ್ಕೃತಿಯ ಉತ್ಪನ್ನ ಎಂದು ಜವಾಹರ ಲಾಲ್ ನೆಹರೂ ಆಝಾದ್ ಅವರನ್ನು ವರ್ಣಿಸಿದ್ದರು. 1992ರಲ್ಲಿ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಲಾಯಿತು. ಆದರೆ ಅವರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸುವುದು ಅವರು ಮಾಡಿದ ಕಾರ್ಯ ಮತ್ತು ಜೀವನಕ್ಕೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ.
►ಆಝಾದ್ ಅವರ ಪತ್ರಿಕೆಗಳನ್ನು ನಿಷೇಧಿಸುವ ಮೂಲಕ ಅವರ ಧ್ವನಿಯನ್ನು ಉಡುಗಿಸಲು ಬ್ರಿಟಿಷರು ಪ್ರಯತ್ನಪಟ್ಟರೂ ಎದೆಗುಂದದ ಆಝಾದ್ ಖಿಲಾಫತ್ ಆಂದೋಲನವನ್ನು ಮುನ್ನಡೆಸಿದರು ಮತ್ತು 1923ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷಸ್ಥಾನಕ್ಕೇರಿದ ಅತ್ಯಂತ ಯುವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಕ್ವಿಟ್ ಇಂಡಿಯಾ ಆಂದೋಲನದಲ್ಲಿ ಭಾಗವಹಿಸಿದ ಕಾರಣಕ್ಕೆ ಅವರನ್ನು ಜೈಲಿಗಟ್ಟಲಾಯಿತು.
ಕೃಪೆ: ದ ಬೆಟರ್ ಇಂಡಿಯಾ.ಕಾಮ್