ನಿವೃತ್ತಿಯ ಅಂಚಿಗೆ ಸರಿಯುತ್ತಿರುವ ಮಿಗ್ 21
1993ರಿಂದ 2013ರವರೆಗೆ 198 ಮಿಗ್-21 ವಿಮಾನಗಳು ಪತನಗೊಂಡು, 151 ಮಂದಿ ಪೈಲಟ್‌ಗಳು ಮೃತಪಟ್ಟಿರುವುದಾಗಿ ಸೇನೆಯ ವಿಮಾನಗಳ ಬಗೆಗಿನ ಆಸಕ್ತರು ನಡೆಸುವ ವೆಬ್‌ಸೈಟ್ ಆಗಿರುವ ಭಾರತ್ ರಕ್ಷಕ್ ಪ್ರಕಟಿಸಿರುವ ದತ್ತಾಂಶವು ತಿಳಿಸಿದೆ. ಹೀಗಾಗಿ ಮಿಗ್21 ವಿಮಾನಗಳನ್ನು ಹಾರುವ ಶವಪೆಟ್ಟಿಗೆಗಳೆಂದು ಬಣ್ಣಿಸಿರುವುದರಲ್ಲಿ ಅತಿಶಯೋಕ್ತಿಯೇನೂ ಇಲ್ಲ.
ಪಾಕಿಸ್ತಾನ ವಾಯುಪಡೆಯ ಎಫ್-16 ವಿಮಾನವು ಹೊಡೆದುರುಳಿಸಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಚಲಾಯಿಸುತ್ತಿದ್ದ ಮಿಗ್-21 ಬೈಸನ್ ವಿಮಾನವು ತನ್ನ ನಿವೃತ್ತಿಯ ವಯಸ್ಸಿನ ಅಂಚಿಗೆ ಬಂದಿತ್ತು. ಆದರೆ ಈ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಯು ಪದೇ ಪದೇ ಉನ್ನತೀಕರಣ (ಅಪ್‌ಗ್ರೇಡೇಶನ್) ಹಾಗೂ ಸೇವಾವಧಿ ವಿಸ್ತೀರ್ಣಗೊಳಿಸುವ ಮೂಲಕ ಜೀವಂತವಾಗಿರಿಸಿತ್ತೆಂದು ಪರಿಣಿತರು ‘ಇಂಡಿಯಾ ಸ್ಪೆಂಡ್’ ಆನ್‌ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪದೇ ಪದೇ ಅವಘಡಗಳಿಗೆ ತುತ್ತಾಗುತ್ತಲೇ ಇರುವ ರಶ್ಯ ನಿರ್ಮಿತ ಮಿಗ್ ಸರಣಿಯ ಒಟ್ಟು 482 ವಿಮಾನಗಳು 1971 ಹಾಗೂ ಎಪ್ರಿಲ್ 2012ರ ನಡುವೆ ಸಂಭವಿಸಿದ ವಿವಿಧ ವಾಯುದುರಂತಗಳಲ್ಲಿ ಪತನಗೊಂಡಿದ್ದವು.ಅಂದರೆ ವರ್ಷಕ್ಕೆ ಸರಾಸರಿ 12 ಮಿಗ್‌ವಿಮಾನಗಳು ಪತನಗೊಂಡಿದ್ದವು. ಮಿಗ್ ಸರಣಿಯ ವಿಮಾನಗಳನ್ನು 1960ರ ದಶಕದಲ್ಲಿ ಭಾರತೀಯ ವಾಯುಪಡೆಗೆ ಮೊದಲ ಬಾರಿ ಸೇರ್ಪಡೆಗೊಳಿಸಲಾಯಿತು. 1990ರ ದಶಕದ ಮಧ್ಯದಲ್ಲಿ ಅವು ನಿವೃತ್ತಿಗೊಳ್ಳುವುದರಲ್ಲಿದ್ದವು. ಆದರೆ ಅವುಗಳನ್ನು ಬೈಸನ್ ಗುಣಮಟ್ಟಕ್ಕೆ ಉನ್ನತೀಕರಣಗೊಳಿಸಲಾಯಿತು. 1980 ದಶಕದವರೆಗೂ ಅದರ ಕ್ರಮಾಗತ ವಿಭಿನ್ನ ಆವೃತ್ತಿಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು.
‘‘ಈಗಲೂ ಮಿಗ್-21 ವಿಮಾನಗಳನ್ನು ಹಾರಿಸುತ್ತಿರುವ ವಾಯುಪಡೆಯನ್ನು ಹೊಂದಿರುವ ಜಗತ್ತಿನ ಕಟ್ಟಕಡೆಯ ರಾಷ್ಟ್ರ ಭಾರತವಾಗಿದೆ’’ ಎಂದು ‘ವಾಯು ಏರೋಸ್ಪೇಸ್ ಆ್ಯಂಡ್ ಡಿಫೆನ್ಸ್ ರಿವ್ಯೆ’ ಪತ್ರಿಕೆಯ ಸ್ಥಾಪಕ ಸಂಪಾದಕ ಪುಷ್ಪೀಂದರ್‌ಸಿಂಗ್,ಆನ್‌ಲೈನ್ ಪತ್ರಿಕೆ ‘ಇಂಡಿಯಾಸ್ಪೆಂಡ್’ಗೆ ತಿಳಿಸಿದ್ದಾರೆ. ‘‘ ಎಫ್-16 ವಿರುದ್ಧ ವಿಮಾನವನ್ನು ಹಾರಾಡಿಸಿದ ಈ ಬಡಪಾಯಿ ಯುವಕನಿಗೆ ದಾಳಿಯಿಂದ ಪಾರಾಗಲು ಯಾವುದೇ ಅವಕಾಶ ದೊರೆಯದೆ ಆತ ಎದುರಾಳಿ ರಾಷ್ಟ್ರದ ಕೈದಿಯಾಗಿಬಿಟ್ಟ. 2019ನೇ ಇಸವಿಯಲ್ಲಿ ಕೂಡಾನಾವು ಇಂತಹ ವಿಮಾನಗಳನ್ನು ಹಾರಿಸುತ್ತಿರುವುದು ನಿಜಕ್ಕೂ ರಾಷ್ಟ್ರೀಯ ನಾಚಿಕೆಗೇಡಿನ ವಿಷಯವಾಗಿದೆ.
ವಿಮಾನಗಳ ಕಾರ್ಯನಿರ್ವಹಣಾ ಉಪಕರಣ ಅಥವಾ ವ್ಯವಸ್ಥಾ ಘಟಕ (ಸಿಸ್ಟಮ್ ಕಂಪೊನೆಂಟ್ಸ್) ಗಳು ಹಳೆಯದಾದಂತೆಲ್ಲಾ ಅವುಗಳ ವೈಫಲ್ಯತೆಗಳು ಕೂಡಾ ಹೆಚ್ಚುತ್ತವೆ.
ಪ್ರತಿಯೊಂದು ವಿಮಾನವೂ ಅದರದ್ದೇ ಆದ ಜೀವಿತಾವಧಿಯನ್ನು ಹೊಂದಿರುತ್ತದೆ. ಅನೇಕ ಅಪ್‌ಗ್ರೇಡ್‌ಗಳು ಹಾಗೂ ಸೇವಾವಧಿ ವಿಸ್ತೀರ್ಣಗಳ ಬಳಿಕ, ಭಾರತವು ಮಿಗ್-23 ಹಾಗೂ ಮಿಗ್-27 ಜೊತೆಜೊತೆಗೇ ಮಿಗ್-21 ವಿಮಾನಗಳನ್ನು ಕೂಡಾ 2022ರಿಂದ ವಾಯುಪಡೆಯಿಂದ ತೆರವುಗೊಳಿಸುವ ಕಾರ್ಯವನ್ನು ಆರಂಭಿಸಲಿದೆ.
ಮಿಗ್ ವಿಮಾನಗಳು 1960 ಹಾಗೂ 1970ರ ದಶಕಗಳ ತಂತ್ರಜ್ಞಾನವನ್ನು ಆಧರಿಸಿ ನಿರ್ಮಾಣಗೊಂಡಿರುವಂತಹವು ಎಂದು ಭಾರತೀಯ ವಾಯುಪಡೆಯ ಪಶ್ಚಿಮ ಏರ್‌ಕಮಾಂಡ್‌ನ ವರಿಷ್ಠ ಏರ್‌ಮಾರ್ಶಲ್ ಪರಮ್‌ಜಿತ್ ಸಿಂಗ್ ಅಹ್ಲುವಾಲಿಯ, ಇಂಡಿಯಾಸ್ಪೆಂಡ್‌ಗೆ ತಿಳಿಸಿದ್ದಾರೆ. ‘‘ನಾವು 2020ರ ದಶಕವನ್ನು ಸಮೀಪಿಸುತ್ತಿದ್ದೇವೆ... ಅವು ಎಫ್-16 ವಿಮಾನಗಳಿಗೆ ಸರಿಸಾಟಿಯಾಗಿರದಿದ್ದರೂ ಕೂಡಾ ಮಿಗ್ ಈಗಲೂ ತನ್ನ ಬಳಕೆಯ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಶಕ್ತವಾಗಿರುವುದು ಅಭೂತಪೂರ್ವವೇ ಸರಿ’’ ಎಂದು ಅವರು ಅಭಿಪ್ರಾಯಿಸುತ್ತಾರೆ.
ಅವಘಡಗಳ ಇತಿಹಾಸ
2012ರ ಎಪ್ರಿಲ್ ಹಾಗೂ 2016ರ ಮಾರ್ಚ್ ನಡುವೆ ಭಾರತೀಯ ವಾಯುಪಡೆ (ಐಎಎಫ್)ಯ ನಾಲ್ಕನೆ ಒಂದಂಶಕ್ಕಿಂತಲೂ ಅಧಿಕ ಅಂದರೆ ಸುಮಾರು ಎಂಟು ಮಿಗ್-21 ವಿಮಾನಗಳು ಪತನಗೊಂಡಿವೆ. ಆ ಪೈಕಿ ಆರು ವಿಮಾನಗಳು ಮಿಗ್-21 ಬೈಸನ್ ಶ್ರೇಣಿಗೆ ಸೇರಿದ್ದವಾಗಿವೆಯೆಂದು ಕೇಂದ್ರ ಸರಕಾರವು 2016ರ ಮಾರ್ಚ್‌ನಲ್ಲಿ ಸಂಸತ್‌ನಲ್ಲಿ ತಿಳಿಸಿತ್ತು.
1971ರಿಂದ ಎಪ್ರಿಲ್ 2012ರವರೆಗೆ, 472 ಮಿಗ್ ವಿಮಾನಗಳು ಅಪಘಾತಕ್ಕೀಡಾಗಿದ್ದು, 171 ಮಂದಿ ಪೈಲಟ್‌ಗಳು, 39 ಮಂದಿ ನಾಗರಿಕರು, ಎಂಟು ಮಂದಿ ಸೇವಾ ಸಿಬ್ಬಂದಿ ಹಾಗೂ ಓರ್ವ ವೈಮಾನಿಕ ಸಿಬ್ಬಂದಿ ಮೃತಪಟ್ಟಿದ್ದಾರೆಂದು ಕೇಂದ್ರ ಸರಕಾರವು 2012ರ ಮೇನಲ್ಲಿ ಸಂಸತ್‌ಗೆ ತಿಳಿಸಿತ್ತು.
ಮಿಗ್-21 ವಿಮಾನ ದುರಂತಗಳಲ್ಲಿ ಗರಿಷ್ಠ ಸಂಖ್ಯೆಯ ಅವಘಡಗಳು ವರದಿಯಾಗಿರುವುದಾಗಿ ಏರ್‌ಮಾರ್ಶಲ್ ಅಹ್ಲುವಾಲಿಯ ತಿಳಿಸಿದ್ದಾರೆ. ‘ಈ ವಿಮಾನಗಳಲ್ಲಿ ಹಾರಾಟ ಕಷ್ಟಕರವಾಗಿದ್ದು, ಅವುಗಳಲ್ಲಿ ಅವಘಡದ ಪ್ರಮಾಣ ಅತ್ಯಧಿಕ’’ವೆಂದು ಅವರು ಹೇಳುತ್ತಾರೆ.
1993ರಿಂದ 2013ರವರೆಗೆ 198 ಮಿಗ್-21 ವಿಮಾನಗಳು ಪತನಗೊಂಡು, 151 ಮಂದಿ ಪೈಲಟ್‌ಗಳು ಮೃತಪಟ್ಟಿರುವುದಾಗಿ ಸೇನೆಯ ವಿಮಾನಗಳ ಬಗೆಗಿನ ಆಸಕ್ತರು ನಡೆಸುವ ವೆಬ್‌ಸೈಟ್ ಆಗಿರುವ ಭಾರತ್ ರಕ್ಷಕ್ ಪ್ರಕಟಿಸಿರುವ ದತ್ತಾಂಶವು ತಿಳಿಸಿದೆ. ಹೀಗಾಗಿ ಮಿಗ್-21 ವಿಮಾನಗಳನ್ನು ಹಾರುವ ಶವಪೆಟ್ಟಿಗೆಗಳೆಂದು ಬಣ್ಣಿಸಿರುವುದರಲ್ಲಿ ಅತಿಶಯೋಕ್ತಿಯೇನೂ ಇಲ್ಲ.
ಕಳೆದ 50 ವರ್ಷಗಳಿಂದ ಭಾರತೀಯ ವಾಯುಪಡೆಯು ರಶ್ಯ ನಿರ್ಮಿತ ಮಿಗ್ ವಿಮಾನಗಳು ಹಾಗೂ ಅದರ ಆವೃತ್ತಿಗಳನ್ನು ಬಳಸಿಕೊಳ್ಳುತ್ತಾ ಬಂದಿದೆ. ಐಎಎಫ್‌ನ ವಿಮಾನತಂಡದಲ್ಲಿ ಮಿಗ್ ವಿಮಾನಗಳೇ ಅತ್ಯಂತ ಹಳೆಯದಾಗಿವೆ. ‘‘ನಮ್ಮಲ್ಲಿ ಈಗಲೂ ಹಳೆಯ ಮಾದರಿಯ ಸ್ಕ್ವಾಡ್ರನ್‌ಗಳಿವೆ ಎಂದು ಪಶ್ಚಿಮ ಏರ್ ಕಮಾಂಡ್ ನೇತೃತ್ವ ವಹಿಸಿದ್ದ ನಿವೃತ್ತ ಏರ್‌ಮಾರ್ಶಲ್ ವಿ.ಕೆ. ಜಿಮ್ಮಿ ಭಾಟಿಯಾ ಹೇಳುತ್ತಾರೆ. ‘‘ ಸುಮಾರು ಒಂದು ದಶಕಕ್ಕೂ ಅಧಿಕ ಸಮಯದಿಂದ ನಾವು ಇವುಗಳನ್ನು ಬೈಸನ್‌ನ ಗುಣಮಟ್ಟಕ್ಕೆ ಅಪ್‌ಗ್ರೇಡ್ ಮಾಡುತ್ತಾ ಬಂದಿದ್ದೇವೆ. ಅವು ನೂತನ ರಾಡಾರ್‌ಗಳು ಹಾಗೂ ನೂತನ ನೇವಿಗೇಶನ್ ಸಾಮರ್ಥ್ಯ ಸೇರಿದಂತೆ ಹಲವಾರು ಅಪ್‌ಗ್ರೇಡ್‌ಗಳನ್ನು ಹೊಂದಿದೆ’’ ಎಂದು ಅವರು ತಿಳಿಸುತ್ತಾರೆ.
ಆದಾಗ್ಯೂ ಪ್ರತಿಯೊಂದು ವಿಮಾನಕ್ಕೂ ಅದರದ್ದೇ ಆದ ಜೀವಿತಾವಧಿಯಿರುತ್ತದೆ ಹಾಗೂ ಮಿಗ್-21 ವಿಮಾನಗಳಎರಡು ದಶಕಗಳ ಜೀವಿತಾವಧಿಯು ಈಗ ಅಂತ್ಯದ ಸನಿಹಕ್ಕೆ ಬಂದಿದೆ.
2022ರ ವೇಳೆಗೆ, ಮಿಗ್-21ಗಳು ಇತರ ಮಿಗ್-23 ಹಾಗೂ ಮಿಗ್-27 ಜೊತೆ ವಾಯುಪಡೆಯಿಂದ ಹೊರಬೀಳಲಿವೆ.
ಪಾಕಿಸ್ತಾನ ವಾಯುಪಡೆ ಬಳಸುವ ಅಮೆರಿಕ ನಿರ್ಮಿತ ಎಫ್16 ಬಳಿ ಅತ್ಯಂತ ‘‘ ಸುಧಾರಿತವಾದ ರಾಡಾರ್‌ಗಳು, ನೇವಿಗೇಶನ್ ವ್ಯವಸ್ಥೆಗಳು ಹಾಗೂ ಇತರ ಸಾಮರ್ಥ್ಯಗಳನ್ನು ಹೊಂದಿದೆ. ವ್ಯಾಪ್ತಿಯ ಮಟ್ಟದಲ್ಲಿ ಹೇಳುವುದಾದರೆ, ಎಫ್ - 16ಗಳು ಮಿಗ್-21ಗಿಂತಲೂ ಉತ್ತಮವಾಗಿವೆ’’ ಎಂದು ಏರ್‌ಮಾರ್ಶಲ್ ಭಾಟಿಯಾ ತಿಳಿಸಿದ್ದಾರೆ. ಇದೀಗ 40 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಪಾಕಿಸ್ತಾನ ವಾಯುಪಡೆಯು ಎಫ್-16 ವಿಮಾನಗಳನ್ನು ಬಳಸುತ್ತಾ ಬಂದಿದೆ ಹಾಗೂ ಅದರ ಬ್ಲಾಕ್ 50 ಮಾದರಿಯ ನೂತನ ತಂಡವನ್ನು 10 ವರ್ಷಗಳ ಹಿಂದೆ ಸ್ವೀಕರಿಸಿತ್ತೆಂದು ಅವರು ಹೇಳಿದ್ದಾರೆ.
ಆದಾಗ್ಯೂ ಮಿಗ್-21 ವಿಮಾನವು ಎಫ್-16 ವಿಮಾನಗಳಿಗೆ ಸಡ್ಡು ಹೊಡೆಯಬಲ್ಲದು ಎಂದು ಏರ್‌ಮಾರ್ಶಲ್ ಭಾಟಿಯಾ ಹೇಳುತ್ತಾರೆ. ‘‘ ಮಿಗ್-21 ಬೈಸನ್ ಸಮರ ವಿಮಾನವು ಅತ್ಯಾಧುನಿಕ ರಶ್ಯನ್ ಕ್ಷಿಪಣಿಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಈ ದೃಷ್ಟಿಯಲ್ಲಿ ನೋಡುವುದಾದರೆ ಅವು ಎಫ್-16ಗಿಂತ ಕೆಳದರ್ಜೆಯವು ಎಂದು ಹೇಳಲು ಸಾಧ್ಯವಿಲ್ಲ. ಈಗಲೂ ಅವು ಹೋಲಿಕೆಗೆ ಯೋಗ್ಯವೆಂದು ಹೇಳಬಲ್ಲೆ. ಆದರೆ ವಾಸ್ತವವೇನೆಂದರೆ ಇನ್ನು ಅವುಗಳ ಜೀವಿತಾವಧಿ ತುಂಬಾ ಕಡಿಮೆಯಿದೆ. ಜೀವಿತಾವಧಿ ವಿಸ್ತರಿಸಲ್ಪಟ್ಟ ವಿಮಾನಗಳೂ ಕೂಡಾ ಅವುಗಳ ವಿಸ್ತೃತ ಜೀವನವನ್ನು ಕೊನೆಗೊಳಿಸುವ ಹಂತಕ್ಕೆ ಸಮೀಪಿಸಿವೆ’’ ಎಂದು ಹೇಳುತ್ತಾರವರು.
ಇಂದಿನ ಕಾಲದ ಫೈಟರ್‌ಜೆಟ್‌ಗಳಿಗೆ ಸರಿಸಾಟಿಯಾಗಬೇಕಾದರೆ ವಿಮಾನವು ಅತ್ಯಂತ ಸುಧಾರಿತ ಅವಿಯೊನಿಕ್ಸ್ ಹಾಗೂ ರಾಡಾರ್, ಅತ್ಯುತ್ತಮ ಶಸ್ತ್ರಾಸ್ತ್ರ ಹೇರುವ ಸಾಮರ್ಥ್ಯ, ದಿಢೀರ್ ದಾಳಿ ತಂತ್ರಜ್ಞಾನ, ಇಲೆಕ್ಟ್ರಾನಿಕ್ ಸಮರ ಕೌಶಲ ತಂತ್ರಜ್ಞಾನ, ನಿಖರ ದಾಳಿಯ ತಂತ್ರಜ್ಞಾನ ಮತ್ತಿತರ ಸಾಮರ್ಥ್ಯಗಳನ್ನು ಹೊಂದಿರಬೇಕು. ಆದರೆ ಮಿಗ್-21 ಈ ಸಾಮರ್ಥ್ಯಗಳನ್ನು ಪಡೆದಿಲ್ಲವೆಂದು ಪಶ್ಚಿಮ ವಾಯುಕಮಾಂಡ್‌ನ ಮಾಜಿ ವರಿಷ್ಠ ಪರಮ್ ಜಿತ್ ಸಿಂಗ್ ಅಹ್ಲುವಾಲಿಯ ಹೇಳುತ್ತಾರೆ.
ವಿಂಗ್ ಕಮಾಂಡರ್ ವರ್ಧಮಾನ್ ಅವರ ಮಿಗ್-21 ಬೈಸನ್ ಅನ್ನು ಹೊಡೆದುರುಳಿಸಿದ ಬಳಿಕ ಅವರನ್ನು ಪಾಕ್ ಪಡೆಗಳು ಬಂಧಿಸಿದ ಘಟನೆಯ ಬಳಿಕ ವಾಯುಪಡೆ ಮೂಲಗಳು ಮಿಗ್21-ಬೈಸನ್‌ನ ಬಳಕೆಯನ್ನು ಸಮರ್ಥಿಸಿದವು. ಈ ವಿಮಾನವು ತನ್ನ ದಾಸ್ತಾನಿನಲ್ಲಿರುವ ಫೈಟರ್‌ಗಳಲ್ಲೊಂದಾಗಿದ್ದು, ಅದು ಕಾರ್ಯನಿರ್ವಹಣೆ, ಸಮಯ ಹಾಗೂ ಬೆದರಿಕೆಯ ಮಟ್ಟವನ್ನು ಆಧರಿಸಿ ಬಳಸಿಕೊಳ್ಳಲಾಗುತ್ತದೆಯೆಂದು, ‘ದಿ ಪ್ರಿಂಟ್’ ಫೆಬ್ರವರಿ 27ರಂದು ವರದಿ ಮಾಡಿತ್ತು.
ನೂತನ ವಿಮಾನದ ಆವಶ್ಯಕತೆ
ಮೊದಲ ತೇಜಸ್ ಸಮರ ವಿಮಾನವನ್ನು 2016ರ ಜುಲೈನಲ್ಲಿ ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು. ಫೆಬ್ರವರಿ 14ರಂದು ಪುಲ್ವಾಮ ಭಯೋತ್ಪಾದಕ ದಾಳಿ ನಡೆದ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ತೇಜಸ್ ಎಂಕೆ1ರ ಕಾರ್ಯನಿರ್ವಹಣೆಗೆ ಅಂತಿಮ ಅನುಮೋದನೆಯನ್ನು ನೀಡುವ ದಾಖಲೆಗಳನ್ನು ವಾಯುಪಡೆಗೆ ಹಸ್ತಾಂತರಿಸಲಾಯಿತು.
‘‘ 1999ರಲ್ಲಿ ಕಾರ್ಗಿಲ್ ಯುದ್ಧದ ಕಾರ್ಯಾಚರಣೆಗಳಲ್ಲಿ ನಾವು ಮೀರಜ್ 2000 ವಿಮಾನಗಳನ್ನು ಬಳಸಿಕೊಂಡಿದ್ದು ಅವು ಅತ್ಯುತ್ತಮವಾಗಿ ಕಾರ್ಯಾಚರಿಸಿದ್ದವು ಎಂದು ಸಿಂಗ್ ಹೇಳಿದ್ದಾರೆ. ಮಿಗ್ ವಿಮಾನವನ್ನು ತೆರವುಗೊಳಿಸುವುದಕ್ಕಾಗಿ, ಬಹುವಿಧದ ಪಾತ್ರಗಳನ್ನು ನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ವಿಮಾನವನ್ನು ಪಡೆಯಲು ಮೂರು ಸೇನಾಪಡೆಗಳ ಮುಖ್ಯಸ್ಥರು ತುಂಬಾ ಶ್ರಮಿಸಿದ್ದರು. ಆದರೆ ‘‘ವ್ಯವಸ್ಥೆಯು ಅವುಗಳನ್ನು ಸಂಪಾದಿಸಲು ಅವಕಾಶ ನೀಡಲಿಲ್ಲ’’ ಎಂದವರು ಹೇಳಿದರು.
ಅದರ ಬದಲಿಗೆ 2007ರಲ್ಲಿ ಕಾಂಗ್ರೆಸ್ ಸರಕಾರವು ಮಧ್ಯಮ ದರ್ಜೆಯ ಬಹುಮುಖಿ ಪಾತ್ರ ವಹಿಸಬಲ್ಲ ಸಮರವಿಮಾನವನ್ನು (ಎಂಆರ್‌ಸಿಎ)ಅಭಿವೃದ್ಧಿ ಪಡಿಸುವ ಪ್ರಕ್ರಿಯೆಯನ್ನು ಆರಂಭಿಸಿತ್ತು. ಇದಕ್ಕಾಗಿ ಸ್ವೀಡನ್‌ನ ಏರೋಸ್ಪೇಸ್ ಕಂಪೆನಿ ಸಾಬ್, ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಶನ್ ಎಸ್‌ಎ, ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಕಾರ್ಪೊರೇಶನ್ ಮತ್ತು ಬೋಯಿಂಗ್ ಕಂಪೆನಿಹಾಗೂ ಬ್ರಿಟನ್, ಜರ್ಮನಿ, ಸ್ಪಾನಿಶ್ ಹಾಗೂ ಇಟಲಿ ವಿಮಾನ ತಯಾರಿಕಾ ಸಂಸ್ಥೆಗಳ ಒಕ್ಕೂಟ ಜೊತೆ ಒಪ್ಪಂದ ಮಾಡಿಕೊಂಡಿತು.
2018ರ ಎಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಂಆರ್‌ಸಿಎ ವಿಮಾನಗಳ ನಿರ್ಮಾಣಕ್ಕೆ ಕರೆಯಲಾಗಿದ್ದ ಟೆಂಡರನ್ನು ಬದಿಗೊತ್ತಿ, 36 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿಸುವ ಕುರಿತು ಫ್ರಾನ್ಸ್ ಸರಕಾರದ ಜೊತೆ ನೇರ ಒಪ್ಪಂದ ಮಾಡಿಕೊಂಡರು. 2018ರ ಜುಲೈನಲ್ಲಿ ಆಗಿನ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು 126 ಎಂಆರ್‌ಸಿಎ ಫೈಟರ್ ಜೆಟ್‌ಗಳ ಖರೀದಿಗೆ ಕರೆಯಲಾಗಿದ್ದ ಬಹುಶತಕೋಟಿ ಡಾಲರ್ ಟೆಂಡರ್ ಅನ್ನು ರದ್ದುಪಡಿಸಿದರು.
ರಫೇಲ್ ಒಪ್ಪಂದವು ಭಾರೀ ವಿವಾದಕ್ಕೆ ಕಾರಣವಾಗಿದೆ. ಹಾಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು, ಆಡಳಿತಾರೂಢ ಬಿಜೆಪಿಯು ರಫೇಲ್ ಒಪ್ಪಂದದಲ್ಲಿ ಭಾರೀ ದೊಡ್ಡ ಭ್ರಷ್ಟಾಚಾರವೆಸಗಿರುವುದಾಗಿ ಆರೋಪಿಸಿದೆ.
ರಫೇಲ್ ಜೆಟ್‌ಗಳು ಅತ್ಯಾಧುನಿಕ ಹಾಗೂ ಉನ್ನತ ಗುಣಮಟ್ಟದ್ದಾಗಿವೆ. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ಮಿಗ್-21 ವಿಮಾನಗಳ ಜಾಗವನ್ನು ಭರ್ತಿ ಮಾಡುವಂತಹ ವಿಮಾನಗಳು ಅವಾಗಿಲ್ಲ. ನಮಗೆ ಸಣ್ಣ, ಲಘು ಹಾಗೂ ಮಿತದರದ ಫೈಟರ್ ವಿಮಾನಗಳು ಮುಂಚೂಣಿಯಲ್ಲಿರುವ ಅಗತ್ಯವಿದೆಯೆಂದು ಸಿಂಗ್ ಇಂಡಿಯಾಸ್ಪೆಂಡ್ ಆನ್‌ಲೈನ್ ಪತ್ರಿಕೆಗೆ ತಿಳಿಸಿದ್ದಾರೆ.
ಮುಂದಿನ ದಶಕದಲ್ಲಿ ಮಿಗ್-21, 27 ಹಾಗೂ 29 ಮಾದರಿಯ 14 ಸ್ಕ್ವಾಡ್ರನ್‌ಗಳು ಭಾರತೀಯ ವಾಯುಪಡೆಯ ವಿಮಾನದಳದಿಂದ ನಿವೃತ್ತವಾಗಲಿವೆ. ಇದರಿಂದಾಗಿ 2027ರೊಳಗೆ ಭಾರತೀಯ ವಾಯುಪಡೆಯಲ್ಲಿ ಕೇವಲ 19 ಸ್ಕ್ವಾಡ್ರನ್ (ವಿಮಾನದಳ)ಗಳು ಹಾಗೂ 2032ರಲ್ಲಿ 16 ಸ್ಕ್ವಾಡ್ರನ್‌ಗಳು ಮಾತ್ರವೇ ಉಳಿಯಲಿವೆ. ಈ ಕೊರತೆಯನ್ನು ನೀಗಿಸಲು ವಾಯುಪಡೆಯು ಸುಖೋಯ್-20, ತೇಜಸ್ ಲಘು ಯುದ್ಧ ವಿಮಾನ ಹಾಗೂ ರಫೇಲ್ ಜೆಟ್‌ಗಳನ್ನು ಸೇರ್ಪಡೆಗೊಳಿಸಲಿದೆಯೆಂದು ಭಾರತೀಯ ವಾಯುಪಡೆಯು ಸಂಸದೀಯ ಸಮಿತಿಗೆ ತಿಳಿಸಿದೆ.
ನಮಗೆ ಎದುರಾಗಿರುವ ಸವಾಲುಗಳು ಹಾಗೂ ಬೆದರಿಕೆಗಳನ್ನು ನಿವಾರಿಸಲು ನಿರ್ದಿಷ್ಟ ಗಾತ್ರದ ವಾಯುಪಡೆಯ ಅಗತ್ಯವಿದೆಯೆಂದು ಏರ್‌ಮಾರ್ಶಲ್ ಭಾಟಿಯಾ ಹೇಳುತ್ತಾರೆ. ನಮ್ಮ ಬೇಡಿಕೆಗಳನ್ನು ಪೂರೈಸಲು ನಮಗೆ ಸುಮಾರು 400 ನೂತನ ಫೈಟರ್ ಜೆಟ್‌ಗಳ ಅಗತ್ಯವಿದೆ.ನಾವು ನೇರಾನೇರ ಒಪ್ಪಂದಗಳನ್ನು ಏರ್ಪಡಿಸಿಕೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಫೈಟರ್ ವಿಮಾನಗಳನ್ನು ಸೇರ್ಪಡೆಗೊಳಿಸಬೇಕೇ ಹೊರತು, ಸಣ್ಣ ಪ್ರಮಾಣದಲ್ಲಿ ಯುದ್ಧ ವಿಮಾನಗಳನ್ನು ಖರೀದಿಸುವಂತಹ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಭಾಟಿಯಾ ಅಭಿಪ್ರಾಯಿಸಿದ್ದಾರೆ.
ಕೃಪೆ: indiaspend.com