ಹಿಂದೂ ವಿರೋಧಿ ಹೇಳಿಕೆ ನೀಡಿದ ಪಾಕ್ ಸಚಿವನ ವಜಾ, ದ್ವೇಷ ಭಾಷಣ ಮಾಡಿದ ಬಿಜೆಪಿ ನಾಯಕರ ಬಗ್ಗೆ ಮೋದಿ ಮೌನ!
ಕಳೆದ ನಾಲ್ಕು ವರ್ಷಗಳಲ್ಲಿ ಉನ್ನತ ರಾಜಕಾರಣಿಗಳು ದ್ವೇಷಭಾಷಣ ಮಾಡುವ ಪ್ರಮಾಣ ಶೇ. 500ರಷ್ಟು ಹೆಚ್ಚಿದೆ ಎಂದು ಎನ್ಡಿಟಿವಿ ಸಂಗ್ರಹಿಸಿದ ಮಾಹಿತಿಗಳಿಂದ ತಿಳಿದುಬಂದಿದೆ. 1,300ಕ್ಕೂ ಹೆಚ್ಚು ಲೇಖನಗಳನ್ನು ಪರಿಶೀಲಿಸಿ, ಅದನ್ನು ಮರುಪರಿಶೀಲನೆ ನಡೆಸಿ, ಸಾರ್ವಜನಿಕ ಸೇವಕರ ಮತ್ತು ರಾಜಕಾರಣಿಗಳ ಇತ್ತೀಚಿನ 1,000 ಟ್ವೀಟ್ಗಳನ್ನು ವಿಶ್ಲೇಷಿಸಿ, ಈ ನಿರ್ಧಾರಕ್ಕೆ ಬಂದಿದೆ. 2009ರಿಂದ 2014ರವರೆಗೆ ಅಂದರೆ ಯುಪಿಎ ಅಧಿಕಾರಾವಧಿಯಲ್ಲಿ, 21 ರಾಜಕಾರಣಿಗಳು ದ್ವೇಷಭಾಷಣ ಮಾಡಿದ 21 ನಿದರ್ಶನಗಳು ಸಿಗುತ್ತವೆ. ಆದರೆ 2014ರಿಂದ 2018ರ ಅವಧಿಯಲ್ಲಿ 44 ರಾಜಕಾರಣಿಗಳು ಇಂಥ 124ಕ್ಕೂ ಅಧಿಕ ದ್ವೇಷಭಾಷಣ ಮಾಡಿದ್ದಾರೆ. ಯುಪಿಎ ಅವಧಿಯಲ್ಲಿ, ಶೇ. 86ರಷ್ಟು ದ್ವೇಷಭಾಷಣದಲ್ಲಿ ಬಿಜೆಪಿ ಶಾಮೀಲಾಗಿದ್ದರೆ, ಉಳಿದ ಶೇ.14ರಷ್ಟು ದ್ವೇಷಭಾಷಣವನ್ನು ಕಾಂಗ್ರೆಸ್ ಮುಖಂಡರು ಮಾಡಿದ್ದಾರೆ. ಎನ್ಡಿಎ ಅಧಿಕಾರಾವಧಿಯಲ್ಲಿ ಬಿಜೆಪಿ ಶಾಮೀಲಾಗಿರುವ ಪ್ರಮಾಣ ಶೇ.90ಕ್ಕಿಂತಲೂ ಅಧಿಕವಾಗಿದೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಪಾಕಿಸ್ತಾನದ ಮಾಹಿತಿ ಮತ್ತು ಸಂಸ್ಕೃತಿ ಖಾತೆ ಸಚಿವ ಫಯಾಝುಲ್ ಹಸನ್ ಚೋಹಾನ್ ಇತ್ತೀಚೆಗೆ ತಮ್ಮ ಭಾಷಣದಲ್ಲಿ ಹಿಂದೂ ವಿರೋಧಿ ಭಾವನೆ ವ್ಯಕ್ತಪಡಿಸಿದಾಗ, ದೇಶದ ಅಲ್ಪಸಂಖ್ಯಾತರು ಮತ್ತು ಪಕ್ಷದ ಕೆಲ ಹಿರಿಯ ಮುಖಂಡರು ಕೂಡಾ ಅದನ್ನು ತೀವ್ರವಾಗಿ ಖಂಡಿಸಿದರು. ಸಮಾಜ ಮಾಧ್ಯಮ ಅಭಿಯಾನದಲ್ಲಿ ಅವರ ಪದಚ್ಯುತಿಗೆ ಪಾಕಿಸ್ತಾನಿಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಯಿತು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಂದಲೇ ನೇರವಾಗಿ ಈ ವಜಾ ಆದೇಶ ಬಂದಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
ಭಾರತದ ಸಂವೀಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ಖಾತರಿ ಪಡಿಸಿದೆ. ನಾಗರಿಕರು ಅವರಿಗೆ ಇಷ್ಟವಾದ ಧರ್ಮವನ್ನು ಅನುಸರಿಸಲು ಅವಕಾಶವಿದೆ. ಪಾಕಿಸ್ತಾನ ಇಸ್ಲಾಮಿಕ್ ದೇಶ ಮತ್ತು ಇಲ್ಲಿ ಎಲ್ಲ ನಾಗರಿಕರು ಸಮಾನರಲ್ಲ. ಉದಾಹರಣೆಗೆ ಮುಸ್ಲಿಮೇತರರು ಇಲ್ಲಿ ಅಧ್ಯಕ್ಷರಾಗುವಂತಿಲ್ಲ. ಜಾತ್ಯತೀತ ದೇಶವಾಗಿ ಭಾರತ, ತನ್ನ ಅಲ್ಪಸಂಖ್ಯಾತರನ್ನು, ಪಾಕಿಸ್ತಾನ ಹಿಂದೂಗಳು ಹಾಗೂ ಕ್ರಿಶ್ಚಿಯನ್ನರನ್ನು ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಿದೆ. ಇಷ್ಟಾಗಿಯೂ ಹಿಂದೂ ವಿರೋಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಸಚಿವರನ್ನು ವಜಾಗೊಳಿಸಿರುವ ಪಾಕಿಸ್ತಾನ, ಈ ವಿಷಯದಲ್ಲಿ ಭಾರತವನ್ನು ಸ್ಪಷ್ಟವಾಗಿ ಮೀರಿಸಿದೆ.
ನರೇಂದ್ರ ಮೋದಿಯವರು ಇಮ್ರಾನ್ಖಾನ್ ಉದಾಹರಣೆಯನ್ನು ಅನುಸರಿಸುವುದಾದಲ್ಲಿ, ಆಡಳಿತಾರೂಢ ಬಿಜೆಪಿಯಲ್ಲಿದ್ದುಕೊಂಡು ದ್ವೇಷಭಾಷಣ ಮಾಡಿದ ಸಚಿವರ ಪಟ್ಟಿಯಲ್ಲಿರುವವರನ್ನು ಮೋದಿ ವಜಾಗೊಳಿಸಬೇಕಾಗುತ್ತದೆ.
1. ಮಹೇಶ್ ಶರ್ಮಾ
ಇಂಡಿಯಾ ಟುಡೇ ಟಿವಿಗೆ 2015ರಲ್ಲಿ ನೀಡಿದ ಸಂದರ್ಶನದಲ್ಲಿ ಕೇಂದ್ರ ಸಂಸ್ಕೃತಿ ಖಾತೆ ಸಚಿವ ಮಹೇಶ್ ಶರ್ಮಾ ಅವರು, ದಿವಂಗತ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಬಗ್ಗೆ ಮಾತನಾಡುತ್ತಾ ‘‘ಮುಸ್ಲಿಮ ರಾಗಿದ್ದುಕೊಂಡೂ ಅವರೊಬ್ಬ ಶ್ರೇಷ್ಠ ವ್ಯಕ್ತಿ ಮತ್ತು ರಾಷ್ಟ್ರೀಯವಾದಿ, ಮಾನವತಾವಾದಿ’’ ಎಂದು ಬಣ್ಣಿಸಿದ್ದರು. ಇಂಥ ಕೋಮುಭಾವನೆ ಕೆರಳಿಸುವ ಅಭಿಪ್ರಾಯ ವ್ಯಕ್ತಪಡಿಸಿದರೂ, ಅದು ಕೂಡಾ ದೇಶದ ಜನತೆಯ ಅತ್ಯಂತ ಪ್ರೀತಿಪಾತ್ರರಾಗಿದ್ದ ಮಾಜಿ ರಾಷ್ಟ್ರಪತಿ ಬಗ್ಗೆ ಇಂಥ ಅಭಿಪ್ರಾಯ ವ್ಯಕ್ತಪಡಿಸಿದರೂ, ಅವರ ರಾಜೀನಾಮೆ ಪಡೆಯುವುದು ಹಾಗಿರಲಿ; ಅವರ ಸರಕಾರದ ಹಿರಿಯರು ಅವರನ್ನು ಖಂಡಿಸಲೂ ಇಲ್ಲ.
2. ಅನಂತ ಕುಮಾರ್ ಹೆಗಡೆ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ 2016ರಲ್ಲಿ, ‘‘ವಿಶ್ವದಲ್ಲಿ ಇಸ್ಲಾಂ ಇರುವವರೆಗೂ, ಭಯೋತ್ಪಾದನೆ ಇರುತ್ತದೆ. ಇಸ್ಲಾಂ ಧರ್ಮವನ್ನು ಬೇರುಸಹಿತ ಕಿತ್ತುಹಾಕುವವರೆಗೂ, ನಾವು ಭಯೋತ್ಪಾದನೆ ಕಿತ್ತುಹಾಕಲಾಗದು. ಇಸ್ಲಾಂ ಎನ್ನುವುದು ವಿಶ್ವಶಾಂತಿಗೆ ಬಾಂಬ್ ಇದ್ದಂತೆ’’ ಎಂದು ಹೇಳಿದ್ದರು.
ಐದು ಬಾರಿಯ ಸಂಸದ ಈ ಹೇಳಿಕೆ ನೀಡಿದ ತಕ್ಷಣ, ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಕರ್ನಾಟಕದ ಪ್ರಾತಿನಿಧ್ಯವನ್ನು ಹೆಚ್ಚಿಸುವ ಸಲುವಾಗಿ ಇವರನ್ನು ಸಂಪುಟ ಪುನಾರಚನೆಯಲ್ಲಿ ಸಚಿವರನ್ನಾಗಿ ಮಾಡಲಾಯಿತು.
ಹೆಗಡೆಯವರ ವಿವಾದಾತ್ಮಕ ಹೇಳಿಕೆ ಇಲ್ಲಿಗೆ ಮುಗಿಯಲಿಲ್ಲ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಈ ವರ್ಷದ ಆರಂಭದಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಸಮಾರಂಭದಲ್ಲಿ, ‘‘ಹಿಂದೂ ಮಹಿಳೆ ಯರನ್ನು ಮುಟ್ಟುವ ಕೈಗಳು ಉಳಿಯಬಾರದು’’ಎಂದು ಅಬ್ಬರಿಸಿದ್ದರು.
2017ರ ಕೊನೆಯಲ್ಲಿ ಕೂಡಾ ಬಿಜೆಪಿ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದು, ಸಂವಿಧಾನದಿಂದ ಜಾತ್ಯತೀತ ಎಂಬ ಪದವನ್ನು ಕಿತ್ತು ಹಾಕುವ ನಿಟ್ಟಿನಲ್ಲಿ ಸಂವಿಧಾನ ಬದಲಿಸಲಿದೆ ಎಂದೂ ಹೇಳಿ ವಿವಾದದಲ್ಲಿ ಸಿಲುಕಿಕೊಂಡಿದ್ದರು.
3. ಸಾಧ್ವಿ ನಿರಂಜನ್
ಆಹಾರ ಸಂಸ್ಕರಣಾ ಕೈಗಾರಿಕೆಗಳ ಖಾತೆ ರಾಜ್ಯ ಸಚಿವೆ ಸಾಧ್ವಿ ನಿರಂಜನ್, 2014ರಲ್ಲಿ ದಿಲ್ಲಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿ, ‘‘ಮತದಾರರು ರಾಮಝದಾನ್ (ರಾಮವಂಶದವರು) ಮತ್ತು ಹರಾಮಝದಾನ್ (ಅಕ್ರಮ ಸಂಪರ್ಕದಿಂದ ಹುಟ್ಟಿದವರು) ಮಧ್ಯೆ ಆಯ್ಕೆ ಮಾಡಬೇಕು’’ ಎಂದು ಹೇಳಿಕೆ ನೀಡಿದ್ದರು. ಈ ರ್ಯಾಲಿ ಪಶ್ಚಿಮ ದಿಲ್ಲಿಯ ಶ್ಯಾಮನಗರ ಪ್ರದೇಶದಲ್ಲಿ ನಡೆದಿತ್ತು. ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಮೋದಿ ಸಂಸತ್ತಿನಲ್ಲಿ, ಸಚಿವರು ಇಂಥ ಮಾತನ್ನಾಡಬಾರದಿತ್ತು ಎಂದು ಹೇಳಿದರೇ ವಿನಃ ಅವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ.
4. ಗಿರಿರಾಜ್ ಸಿಂಗ್
ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವ ಗಿರಿರಾಜ್ ಸಿಂಗ್ ಅವರು, 2014ರ ಎಪ್ರಿಲ್ 19ರಂದು ಜಾರ್ಖಂಡ್ನ ದೇವಗಡ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ‘‘ಮೋದಿಯನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಬೇಕು’’ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಅವರ ವಿರುದ್ಧ ಎಫ್ಐಆರ್ ದಾಖಲಾದರೂ, ಬಳಿಕ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿತು. 2016ರ ಕೊನೆಯ ಭಾಗದಲ್ಲಿ ಕೂಡಾ ಅವರು, ಕಮ್ಯುನಿಸ್ಟ್ ರಾಜಕಾರಣಿಗಳ ಸಾಮಾನ್ಯ ವಾದದಂತೆ, ಮುಸ್ಲಿಮರು ಹೆಚ್ಚು ಮಕ್ಕಳನ್ನು ಉತ್ಪಾದಿಸುತ್ತಿದ್ದಾರೆ ಎಂದು ಆಪಾದಿಸಿದ್ದರು.
5. ಸಾಧನಾ ಸಿಂಗ್
ಬಿಜೆಪಿ ಶಾಸಕಿ ಸಾಧನಾ ಸಿಂಗ್, ವಿರೋಧ ಪಕ್ಷದ ನಾಯಕಿ ಮಾಯಾವತಿ ವಿರುದ್ಧ ಈ ವರ್ಷಾರಂಭದಲ್ಲಿ, ‘‘ಆಕೆ ಮಹಿಳಾ ಕುಲಕ್ಕೇ ಕಪ್ಪುಚುಕ್ಕೆ. ಶಿಖಂಡಿಗಳಿಗಿಂತ ಕೆಟ್ಟವಳು’’ ಎಂದು ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆ ಬಗ್ಗೆ ಅವರು ಬಳಿಕ ಕ್ಷಮೆಯನ್ನೂ ಯಾಚಿಸಿದರು.
6. ಅನುಪ್ರಿಯಾ ಪಟೇಲ್
ಮೋದಿ ಸಂಪುಟದ ಕಿರಿಯ ಸಚಿವರಲ್ಲೊಬ್ಬರಾಗಿರುವ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ವಿವಾದಾತ್ಮಕ ಹಾಗೂ ದ್ವೇಷ ಹರಡುವ ಹೇಳಿಕೆಗಳನ್ನು ಟ್ವೀಟ್ ಮಾಡುವ ಮೂಲಕ ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿದ್ದರು. ‘‘ನಮ್ಮದೇ ದೇಶ ದ್ರೋಹಿಗಳು ನಮ್ಮನ್ನು ಹಾಳು ಮಾಡಿದರು. ಇಲ್ಲದಿದ್ದರೆ, 100 ಕೋಟಿಯ ಸಮುದಾಯ (ಹಿಂದೂಗಳ ಒಟ್ಟು ಸಂಖ್ಯೆ)ಕೇವಲ 20ಕೋಟಿಯ ಮುಲ್ಲಾಗಳಿಗೆ(ಮುಸ್ಲಿಮರಿಗೆ) ಹೆದರುವುದನ್ನು ನೋಡಿದ್ದೀರಾ’’ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ‘‘ಇಂಥ ಟ್ವೀಟ್ ಮಾಡಲು ಬಳಸಿದ ಟ್ವಿಟರ್ ಹ್ಯಾಂಡಲ್ ನಕಲಿ’’ ಎಂದು ಅವರು ಎಫ್ಐಆರ್ ದಾಖಲಿಸಿದರು. ಹಲವು ಮಂದಿ ಬಿಜೆಪಿ ಸಚಿವರು ಆಕೆಯನ್ನು ಕೇಂದ್ರದ ಸಚಿವೆಯನ್ನಾಗಿ ಮಾಡಿದ ಸಂದರ್ಭದಲ್ಲಿ, ಅದೇ ಟ್ವಿಟರ್ ಹ್ಯಾಂಡಲ್ ಮೂಲಕ ಅವರನ್ನು ಅಭಿನಂದಿಸಿದ್ದರು.
7.ಶೋಭಾ ಕರಂದ್ಲಾಜೆ
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಯವರ ವಿರುದ್ಧ 2017ರ ಡಿಸೆಂಬರ್ನಲ್ಲಿ ದ್ವೇಷ ಭಾಷಣ ಮಾಡಿದ ಕಾರಣಕ್ಕೆ ಪ್ರಕರಣ ದಾಖಲಿಸಲಾಯಿತು. ಪ್ರಚೋದನೆ ನೀಡುವ ಸ್ವರೂಪದ ಹೇಳಿಕೆಗಳನ್ನು ಟ್ವೀಟ್ ಮಾಡಿದ್ದಕ್ಕಾಗಿ ಹಾಗೂ ಇವು ಎರಡು ಸಮುದಾಯಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಹಾಗೂ ಈ ಪ್ರದೇಶದಲ್ಲಿ ಶಾಂತಿ ಕದಡಲು ಕಾರಣವಾಗುತ್ತದೆ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿತ್ತು.
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿದ ಟ್ವೀಟ್ನಲ್ಲಿ ಅವರು, ‘‘ಜಿಹಾದಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’’ ಎಂದು ಶಾಲಾ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸುವ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಬಾಲಕಿಯ ಗಾಯಗಳು ಸ್ವತಃ ಮಾಡಿಕೊಂಡ ಗಾಯಗಳು ಎನ್ನುವುದು ಆ ಬಳಿಕ ಬೆಳಕಿಗೆ ಬಂದಿತ್ತು.
8. ಯೋಗಿ ಆದಿತ್ಯನಾಥ್
2015ರ ನವೆಂಬರ್ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘‘ಶಾರುಕ್ ಖಾನ್ ಮತ್ತು ಹಫೀಝ್ ಸಯೀದ್ ಅವರ ಭಾಷೆಯ ನಡುವೆ ಯಾವುದೇ ವ್ಯತ್ಯಾಸ ಇಲ್ಲ’’ ಎಂದು ಹೇಳಿಕೆ ನೀಡಿ ದ್ದರು. ದೇಶದಲ್ಲಿ ಅಸಹಿಷ್ಣುತೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗೆ ಬಾಲಿವುಡ್ನ ಈ ಮೇರುನಟ ಬೆಂಬಲ ಸೂಚಿಸಿದ ಬಳಿಕ ಯೋಗಿ ಈ ಹೇಳಿಕೆ ನೀಡಿದ್ದರು.
‘‘ದೊಡ್ಡ ಸಂಖ್ಯೆಯ ಜನ ಶಾರುಕ್ ಖಾನ್ ಅವರನ್ನು ಬಹಿಷ್ಕರಿಸಿದರೆ, ಆತ ಮಾಮೂಲಿ ಮುಸ್ಲಿಮರಂತೆ ಬೀದಿಯಲ್ಲಿ ಅಲೆಯಬೇಕಾಗುತ್ತದೆ’’ ಎಂದು ಹೇಳಿಕೆ ನೀಡಿದ್ದರು. ಈ ಬಾಲಿವುಡ್ ನಟ ಪಾಕಿಸ್ತಾನಕ್ಕೆ ಹೋಗಲಿ ಎಂಬ ಅರ್ಥದಲ್ಲೂ ಅವರು ಮಾತನಾಡಿದ್ದರು.
ಮುಖ್ಯಮಂತ್ರಿಯನ್ನು 2017ರ ದ್ವೇಷ ಭಾಷಣ ಪ್ರಕರಣದಲ್ಲಿ ಹೆಸರಿಸಲಾಗಿತ್ತು. ಆದರೆ ಅವರದ್ದೇ ನೇತೃತ್ವದ ಉತ್ತರ ಪ್ರದೇಶ ಸರಕಾರ, ಈ ಬಗ್ಗೆ ವಿಚಾರಣೆ ನಡೆಸಲು ಪೊಲೀಸರಿಗೆ ಅನುಮತಿ ನಿರಾಕರಿಸಿತು. ತನ್ನ ವಿರುದ್ಧದ ಆರೋಪಗಳು ನಿಜ ಎಂದು ಟಿವಿಯಲ್ಲಿ ಆದಿತ್ಯನಾಥ್ ಸ್ಪಷ್ಟನೆ ನೀಡಿದ್ದರೂ, ಅಲಹಾಬಾದ್ ಹೈಕೋರ್ಟ್ ಈ ನಿರ್ಧಾರವನ್ನು ಬೆಂಬಲಿಸಿತು. ಯೋಗಿ ಈ ದ್ವೇಷಭಾಷಣದಲ್ಲಿ ಮುಸ್ಲಿಮರ ವಿರುದ್ಧದ ಪ್ರತೀಕಾರಕ್ಕೆ ಕರೆ ನೀಡಿದ್ದು, ಇದರ ಪರಿಣಾಮವಾಗಿ ಗೋರಖ್ಪುರ ಕೋಮುಲಗಭೆ ನಡೆಯಿತು ಎಂದು ಅರ್ಜಿದಾರರು ವಾದ ಮಂಡಿಸಿದ್ದರು.
9. ಟಿ. ರಾಜಾ ಸಿಂಗ್
ತೆಲಂಗಾಣ ವಿಧಾನಸಭಾ ಸದಸ್ಯ ಹಾಗೂ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರು, ‘‘ಜಾತ್ಯತೀತ ಹಿಂದೂಗಳೂ ಅಖಂಡ ಹಿಂದೂ ರಾಷ್ಟ್ರದ ಕನಸಿಗೆ ತಡೆ’’ ಎಂದು ಬಣ್ಣಿಸಿದ್ದರು.
ಕಳೆದ ವರ್ಷದ ನವೆಂಬರ್ನಲ್ಲಿ ಮಾಡಿದ ಭಾಷಣದಲ್ಲಿ ಅವರು, ‘‘ಗೋಮಾಂಸ ತಿನ್ನುವ ಮತ್ತು ನನ್ನ ಭಾವನೆಗಳಿಗೆ ಧಕ್ಕೆ ತರುವ ಮುಸ್ಲಿಮರ ಮತ ನನಗೆ ಬೇಕಾಗಿಲ್ಲ’’ ಎಂದು ಹೇಳಿದ್ದರು. ತೆಲಂಗಾಣದ ಮತ್ತೊಬ್ಬ ಶಾಸಕ ಅಕ್ಬರುದ್ದೀನ್ ಉವೈಸಿಯವರ ತಲೆ ಐದು ನಿಮಿಷದಲ್ಲಿ ನನ್ನ ಪದತಲದಲ್ಲಿ ಬಿದ್ದಿರುತ್ತದೆ. ಇಲ್ಲದಿದ್ದರೆ ತಾನು ಹೆಸರು ಬದಲಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಉವೈಸಿಯನ್ನು ದೇಶದ್ರೋಹಿ ಎಂದು ಕರೆದ ಅವರು, ಉವೈಸಿಯನ್ನು ದೇಶದಿಂದ ಹೊರಗಟ್ಟುವುದಾಗಿ ಗುಡುಗಿದ್ದರು.
10. ವಿನಯ್ ಕಟಿಯಾರ್
ಬಜರಂಗದಳದ ಸಂಸ್ಥಾಪಕ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾದ ವಿನಯ್ ಕಟಿಯಾರ್, ‘‘ಮುಸ್ಲಿಮರಿಗೆ ಅವರ ಪಾಲಿನ ಭೂಮಿ ನೀಡಲಾಗಿದೆ. ಅವರು ಬಾಂಗ್ಲಾದೇಶ ಅಥವಾ ಪಾಕಿಸ್ತಾನಕ್ಕೆ ಹೋಗಲಿ’’ ಎಂದು ಹೇಳಿಕೆ ನೀಡಿದ್ದರು. ಮುಸ್ಲಿಂ ಸಮುದಾಯ ದೇಶವನ್ನು ಜನತೆಯ ಆಧಾರದಲ್ಲಿ ವಿಭಜಿಸಿದೆ ಎಂದೂ ಅವರು ಆಪಾದಿಸಿದ್ದರು.
11. ತಥಾಗತ ರಾಯ್
ಹಿರಿಯ ಬಿಜೆಪಿ ಮುಖಂಡರೂ ಆಗಿದ್ದ ಮೇಘಾಲಯ ರಾಜ್ಯಪಾಲ ತಥಾಗತ ರಾಯ್ ಇತ್ತೀಚೆಗೆ ಕಾಶ್ಮೀರಿಗಳಿಗೆ ಹಾಗೂ ಕಾಶ್ಮೀರಿ ಉತ್ಪನ್ನಗಳಿಗೆ ಸಂಪೂರ್ಣ ನಿಷೇಧ ಹೇರುವಂತೆ ಆಗ್ರಹಿಸಿದ್ದರು. ಭಾರತೀಯ ಸೇನೆಯ ನಿವೃತ್ತ ಕರ್ನಲ್ ಅವರಿಂದ ಮನವಿ ಎಂಬ ಶೀರ್ಷಿಕೆಯಡಿ ಅವರು ಟ್ವಿಟರ್ನಲ್ಲಿ ಈ ಆಗ್ರಹ ಮಾಡಿದ್ದರು.
12. ವಿಕ್ರಮ್ ಸಿಂಗ್ ಸೈನಿ
ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಮ್ ಸೈನಿ, ‘‘2013ರ ಗಲಭೆಯ ಕೇಂದ್ರಸ್ಥಾನವಾಗಿದ್ದ, ಕೋಮುಸೂಕ್ಷ್ಮತೆಯ ಮುಝಫ್ಫರ್ನಗರದಲ್ಲಿ ಕೆಲ ಛಿದ್ರಮನಸ್ಕ ಮುಖಂಡರು ಗಡ್ಡಧಾರಿಗಳು ಇಲ್ಲಿ ವಾಸಿಸುವಂತೆ ಮಾಡಿದರು. ಈ ಕಾರಣದಿಂದ ನಾವು ಇಂದು ಸಮಸ್ಯೆ ಎದುರಿಸುತ್ತಿದ್ದೇವೆ... ಅವರು ಹೋಗಿದ್ದರೆ, ಈ ಎಲ್ಲ ಭೂಮಿ ನಮಗೇ ಸೇರಿರುತ್ತಿತ್ತು’’ ಎಂದು ಹೇಳಿದ್ದರು. ಜನವರಿ ಆರಂಭದಲ್ಲಿ, ‘‘ಭಾರತದಲ್ಲಿ ಅಸುರಕ್ಷಿತ ಹಾಗೂ ಅಪಾಯವಿದೆ ಎನಿಸುವವರಿಗೆ ಬಾಂಬ್ ಹಾಕಬೇಕು’’ ಎಂದು ಹೇಳಿಕೆ ನೀಡಿದ್ದರು. ಸಚಿವಾಲಯದಲ್ಲಿ ಜನ ಇಂಥ ಜವಾಬ್ದಾರಿಯನ್ನು ತಮಗೆ ನೀಡಿದಲ್ಲಿ, ಈ ಬಾಂಬ್ ಕಾರ್ಯಾಚರಣೆಯ ಮುಂಚೂಣಿಯಲ್ಲಿ ತಾವೇ ಇರುವುದಾಗಿಯೂ ಹೇಳಿಕೊಂಡಿದ್ದರು.
ಕೃಪೆ: thewire.in