ಮಾಧ್ಯಮ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿ
ಹಿಂದೂ ಮುದ್ರಣ ಸಮೂಹ ಮುಖ್ಯಸ್ಥ ಎನ್.ರಾಮ್ ಸಂದರ್ಶನ
ರಫೇಲ್ ಹಗರಣದ ಒಳಸುಳಿಗಳನ್ನು ತೆರೆದಿಟ್ಟು ಕೇಂದ್ರ ಸರಕಾರವನ್ನು ಬೆಚ್ಚಿ ಬೀಳಿಸಿದ ಹೆಗ್ಗಳಿಕೆ ‘ದಿ ಹಿಂದೂ’ ಪತ್ರಿಕೆಯದ್ದು. ಸರಕಾರದ ಯಾವುದೇ ಒತ್ತಡಗಳಿಗೆ ಜಗ್ಗದೆ ರಫೇಲ್ ದಾಖಲೆಗಳನ್ನು ಮುಂದಿಟ್ಟು ತನಿಖಾ ವರದಿಯನ್ನು ಪ್ರಕಟವಾಗುವಂತೆ ನೋಡಿಕೊಂಡವರು ಹಿಂದೂ ಮುದ್ರಣ ಸಮೂಹ ಮುಖ್ಯಸ್ಥ ಎನ್.ರಾಮ್.ಈ ಹಿನ್ನೆಲೆಯಲ್ಲಿ ದಿ ಹಿಂದು ಮುದ್ರಣ ಸಂಸ್ಥೆಯ ಮುಖ್ಯಸ್ಥ ಎನ್.ರಾಮ್ ದಿ ವೈರ್.ಇನ್ ಜಾಲತಾಣಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ.
ಪ್ರಶ್ನೆ: ನೀವು ಹಿಂದೂ ಪತ್ರಿಕೆಯಲ್ಲಿ ಮುದ್ರಿಸಿರುವ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾದಂಥವುಗಳಾಗಿವೆ. ರಹಸ್ಯ ದಾಖಲೆಗಳ ಕಾಯ್ದೆಯಡಿ ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸರಕಾರ ಹೇಳಿದೆ. ಸರಕಾರ ಈ ಬಗ್ಗೆ ತನಿಖೆ ನಡೆಸಲು ಬಯಸಿದೆ.
ಉತ್ತರ: ನಾವು ಯಾರಿಂದಲೂ ದಾಖಲೆಗಳನ್ನು ಕಳವು ಮಾಡಿಲ್ಲ. ನಾವು ಈ ದಾಖಲೆಗಳಿಗೆ ಹಣವನ್ನೂ ಪಾವತಿಸಿಲ್ಲ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಮೂಲಭೂತ ಹಕ್ಕನ್ನು ನೀಡುವ ಭಾರತೀಯ ಸಂವಿಧಾನದ ವಿಧಿ 19(1)(ಎ) ಯ ಅಡಿಯಲ್ಲಿ ಸಂಪೂರ್ಣವಾಗಿ ರಕ್ಷಿಸಲ್ಪಟ್ಟಿದ್ದೇವೆ. ಜೊತೆಗೆ ನಾವು ಮಾಹಿತಿ ಹಕ್ಕು ಕಾಯ್ದೆಯ ವಿಧಿ 8(ಎ)(1) ಮತ್ತು 8(2)ರ ಅಡಿಯೂ ರಕ್ಷಣೆ ಹೊಂದಿದ್ದೇವೆ.
ದಾಖಲೆಗಳು ಸೋರಿಕೆಯಾಗುವುದು ಇದೇ ಮೊದಲೇನಲ್ಲ. ಕಲ್ಲಿದ್ದಲು ಹಂಚಿಕೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ನ್ಯಾಯವಾದಿ ಪ್ರಶಾಂತ್ ಭೂಷಣ್ ಇದನ್ನೇ ಮಾಡಿದ್ದಾರೆ. ಇವುಗಳನ್ನು ನ್ಯಾಯಾಲಯ ಸ್ವೀಕರಿಸಿದೆ. ಹಾಗಾಗಿ ಅವುಗಳು ಕಳವು ಮಾಡಿದವುಗಳಲ್ಲ.
ಅಟಾರ್ನಿ ಜನರಲ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ಮತ್ತು ಮಾಧ್ಯಮಗಳನ್ನು ಪ್ರಮುಖವಾಗಿ ‘ದಿ ಹಿಂದೂ’ ಪತ್ರಿಕೆಯನ್ನು ಶಿಕ್ಷಿಸುವ ಹೇಳಿಕೆಯನ್ನು ಭಾರತೀಯ ಎಡಿಟರ್ಸ್ ಗಿಲ್ಡ್ ಖಂಡಿಸಿದೆೆ. ಇದಕ್ಕೆ ನಂತರ ಸ್ಪಷ್ಟನೆ ನೀಡಿದ ಅಟರ್ನಿ ಜನರಲ್ ಪತ್ರಕರ್ತರ ಮತ್ತು ವಕೀಲರ ವಿರುದ್ಧ ತನಿಖೆ ನಡೆಸುವ ಅಥವಾ ದೂರು ದಾಖಲಿಸುವ ಯಾವುದೇ ಉದ್ದೇಶವಿಲ್ಲ ಎಂದು ತಿಳಿಸಿದ್ದರು. ಇದು ಒಳ್ಳೆಯ ವಿಷಯ. ಆದರೆ ನಾವು ಸರಿಯಾದುದನ್ನೇ ಮಾಡಿರುವುದರಿಂದ ಮತ್ತು ನಮಗೆ ರಕ್ಷಣೆಯಿರುವುದರಿಂದ ನಾವು ಅಷ್ಟೊಂದು ಚಿಂತಿತರಾಗಿಲ್ಲ.
ಇದನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮುದ್ರಿಸಲಾಗಿತ್ತು. ಈ ವಿಷಯ ಮತ್ತು ಮಾಹಿತಿಯನ್ನು ಹತ್ತಿಕ್ಕಲಾಯಿತು.
ಈ ಮಾಹಿತಿಯನ್ನು ಸಂಪೂರ್ಣ ಸಿದ್ಧಗೊಂಡಿದ್ದ ಯುದ್ಧವಿಮಾನ, ಸಮಾನಾಂತರ ಮಾತುಕತೆ, ಭಾರತೀಯ ಮಾತುಕತೆ ತಂಡದ ಒಳಗಿನ ಭಿನ್ನಾಭಿಪ್ರಾಯ, ಭ್ರಷ್ಟಾಚಾರನಿಗ್ರಹ ವಿಧಿಗಳ ನಿರ್ಲಕ್ಷ, ಕಮಿಶನ್ ಏಜೆಂಟ್‌ಗಳ ಉಪಸ್ಥಿತಿ, ಒಪ್ಪಂದ ಅಥವಾ ಪ್ರಭಾವ, ಅಥವಾ ದಾಖಲೆಗಳನ್ನು ಪಡೆಯಲು ನಿರಾಕರಿಸುವುದು ಇತ್ಯಾದಿಗಳ ಬೆಲೆಗೆ ಪಡೆದಂತಹದ್ದಾಗಿದೆ.
ನೆನಪಿಡಿ ಈ ಬೇಡಿಕೆಗಳನ್ನು ಇಟ್ಟಿರುವುದು ಫ್ರೆಂಚ್ ಸರಕಾರವಲ್ಲ. ಅವುಗಳನ್ನು ಯುದ್ಧವಿಮಾನ ಪೂರೈಕೆದಾರ ಡಸ್ಸಾಲ್ಟ್ ಏವಿಯೇಶನ್ ಮತ್ತು ಎಂಬಿಡಿಎ ಫ್ರಾನ್ಸ್ ಇಟ್ಟಿತ್ತು. ಹಾಗಾಗಿ ಭ್ರಷ್ಟಾಚಾರ ನಿಗ್ರಹ ನಿಬಂಧನೆಗಳನ್ನು ತೆಗೆದುಹಾಕಿರುವುದಾದರೂ ಯಾಕೆ?
ಪ್ರಶ್ನೆ: ಅಂತಿಮವಾಗಿ, ಐದನೇ ಲೇಖನದಲ್ಲಿ ಚರ್ಚಿಸಲಾಗಿರುವ ಬ್ಯಾಂಕ್ ಖಾತರಿ ವಿಷಯ.
ಆದರೆ ಇದು ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧವಾಗಿದೆ ಎಂದು ಅವರು ಹೇಳುತ್ತಾರೆ. ‘‘ಇದು ಒಂದು ರೀತಿಯಲ್ಲಿ ರಾಷ್ಟ್ರೀಯ ಭದ್ರತೆಯ ಜೊತೆ ಹೊಂದಾಣಿಕೆ ಮಾಡಿಕೊಂಡಂತೆ’’ ಎಂದು ಹೇಳುವ ಮಟ್ಟಕ್ಕೆ ಅವರು ಹೋಗಿದ್ದಾರೆ. ಈ ವಿಷಯವನ್ನು ಈ ಮಟ್ಟಕ್ಕೆ ಏರಿಸಿ ಪತ್ರಿಕೆಗಳ ಹೆಡ್‌ಲೈನ್‌ಗಳನ್ನಾಗಿ ಮಾಡಿದ ಮಾತ್ರಕ್ಕೆ ಅವರು ತಮ್ಮ ಕೆಲಸ ಮುಗಿಯಿತು ಎಂದು ಭಾವಿಸಿದ್ದಾರೆಯೇ? ಹೀಗೆ ಮಾಡುವುದರಿಂದ ಪತ್ರಕರ್ತರನ್ನು ಬೆದರಿಸಬಹುದು ಎಂದು ಅವರು ಭಾವಿಸಿದ್ದಾರೆಯೇ?
ಉತ್ತರ: ಹೌದು, ಇದು ಉತ್ತಮ ಅಂಶವಾಗಿದೆ. ಇದನ್ನೇ ಭಾರತೀಯ ಎಡಿಟರ್ಸ್ ಗಿಲ್ಡ್ ಕೂಡಾ ಹೇಳುತ್ತಿದೆ. ಸ್ವತಂತ್ರ ಮತ್ತು ಮುಖ್ಯವಾಗಿ ತನಿಖಾ ಪತ್ರಕರ್ತರ ಮೇಲೆ ಅಗಾಧ ಪರಿಣಾಮ ಬೀರುವ ಸಂದೇಶವನ್ನು ರವಾನಿಸಲು ಅವರು ಪ್ರಯತ್ನಿಸುತ್ತಿದ್ದಾರೆ.
ಮತ್ತೊಂದೆಡೆಯಲ್ಲಿ, ಪ್ರಸಕ್ತ ಸರಕಾರದಡಿ ಮಾಧ್ಯಮ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದರೂ ಜನರು ಭಯಗೊಳ್ಳಬಾರದು. ಈ ರೀತಿಯ ದಬ್ಬಾಳಿಕೆಯನ್ನು ಗಮನಿಸಲು ನಾವು ತುರ್ತು ಪರಿಸ್ಥಿತಿ ಕಾಲಕ್ಕೆ ತೆರಳಬೇಕು. ನಾನು ಸದ್ಯದ ಸ್ಥಿತಿಯನ್ನೂ ಅದನ್ನೂ ಹೋಲಿಕೆ ಮಾಡುತ್ತಿಲ್ಲ. ಆದರೆ ಭಯದ ವಾತಾವರಣ ಸೃಷ್ಟಿಸಲು ಈ ರೀತಿಯ ಪ್ರಯತ್ನಗಳು ನಡೆದಿರಲಿಲ್ಲ.
ಪ್ರಮುಖ ಮಾಧ್ಯಮ ಸಂಸ್ಥೆಗಳು ಸೈದ್ಧಾಂತಿಕ ಪಾತ್ರ ನಿರ್ವಹಿಸುವ ಹೊಣೆಯನ್ನು ತಾವೇ ಹೊತ್ತುಕೊಂಡಿವೆ ಎಂಬುದನ್ನು ನಾನಿಲ್ಲಿ ಹೇಳಬೇಕಾಗುತ್ತದೆ.
ಪ್ರಮುಖ ಮಾಧ್ಯಮ ಸಂಸ್ಥೆಗಳು, ಮುಖ್ಯವಾಗಿ ಟಿವಿ ಚಾನೆಲ್‌ಗಳು, ಎಲ್ಲವೂ ಅಲ್ಲದಿದ್ದರೂ ಅನೇಕ ಚಾನೆಲ್‌ಗಳು ಪ್ರಮುಖ ವಿಷಯಗಳಲ್ಲಿ ಸರಕಾರದ ಸಿದ್ಧಾಂತವನ್ನು ಹರಡುವ ಪಾತ್ರಧಾರಿಗಳಂತೆ ಕಾರ್ಯನಿರ್ವಹಿಸುತ್ತಿವೆ.
ಪ್ರಶ್ನೆ: ನನ್ನ ಕೊನೆಯ ಪ್ರಶ್ನೆ ರಾಜಕೀಯ ಮತ್ತು ರಫೇಲ್‌ಗೆ ಸಂಬಂಧಿಸಿದ್ದಾಗಿದೆ. ಪುಲ್ವಾಮ ಮತ್ತು ಪಾಕಿಸ್ತಾನದ ಮೇಲೆ ವಾಯುದಾಳಿಯ ನಂತರ ರಫೇಲ್ ಒಂದು ವಿಷಯವಾಗಿ ಉಳಿಯುವುದಿಲ್ಲ ಎಂದು ಸರಕಾರ ಭರವಸೆ ಹೊಂದಿರಬಹುದು. ಆದರೆ ಈಗ ಸರಕಾರ ಹೊರಗೆಡವುತ್ತಿರುವ ಆತಂಕವನ್ನು ಗಮನಿಸಿದಾಗ ರಫೇಲ್ ಒಪ್ಪಂದವು ಮೇ ತಿಂಗಳಲ್ಲಿ ತನ್ನ ಅದೃಷ್ಟದ ಮೇಲೆ ಪರಿಣಾಮ ಬೀರಲಿರುವ ಪ್ರಮುಖ ರಾಜಕೀಯ ವಿಷಯವಾಗಿದೆ ಎಂದು ಸರಕಾರ ಈಗಲೂ ಭಾವಿಸಿದೆ ಎಂಬುದನ್ನು ತೋರಿಸುತ್ತದೆ.
ಉತ್ತರ: ಹೌದು, ಪುಲ್ವಾಮ ಉಗ್ರರ ದಾಳಿ ಮತ್ತು ಬಾಲಕೋಟ್ ವಾಯುದಾಳಿಯಿಂದ ರಫೇಲ್ ಪ್ರಕರಣ ಬದಿಗೆ ಸರಿಯಬಹುದು ಎಂದು ಬಿಜೆಪಿ ಭಾವಿಸಿತ್ತು. ಈ ಘಟನೆಗಳು ಪ್ರಮುಖವಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಬಹುದು ಎಂದು ಭಾವಿಸಲಾಗಿತ್ತು. ಈ ರಾಜ್ಯಗಳಲ್ಲೇ ಎಲ್ಲ ರೀತಿಯ ರಾಷ್ಟ್ರವಾದಿಗಳು, ಕಟ್ಟರ್ ದೇಶಭಕ್ತರು, ಭಾಷಣಕಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಈ ದಾಳಿಗಳು ದೇಶದ ಯೋಚನೆಯನ್ನು ಬದಲಿಸಬಹುದು ಎಂದು ಬಿಜೆಪಿ ಭಾವಿಸಿತ್ತು ಮತ್ತು ಒಂದು ಹಂತದವರೆಗೆ ಅದು ಆಗಿದೆ ಕೂಡಾ.
ನನ್ನ ಅನಿಸಿಕೆ ಪ್ರಕಾರ ಭ್ರಷ್ಟಾಚಾರ ಎಂದೂ ಚುನಾವಣೆಗಳಲ್ಲಿ ಪ್ರಮುಖ ವಿಷಯವಾಗಿರಲೇ ಇಲ್ಲ. ಅದು ಬೊಫೋರ್ಸ್ ಆಗಲಿ ಅಥವಾ 2ಜಿ ತರಂಗ ಹಂಚಿಕೆ ಪ್ರಕರಣವಾಗಲಿ ಎಲ್ಲವೂ ಚುನಾವಣೆಯಲ್ಲಿ ಲಾಭ ತಂದುಕೊಟ್ಟಿಲ್ಲ. ನಿರುದ್ಯೋಗ, ಕೃಷಿ ಸಮಸ್ಯೆ, ಹಣದುಬ್ಬರ, ಬೆಲೆಯೇರಿಕೆ ಇತ್ಯಾದಿಗಳು ಚುನಾವಣಾ ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಸದ್ಯದ ಭ್ರಷ್ಟ ಮಾಧ್ಯಮ ಪರಿಸರದಲ್ಲೂ ಕೆಲವು ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯಾಚರಿಸುತ್ತಿವೆ. ಮಾಧ್ಯಮಗಳು ಹೀಗೆ ತಮ್ಮ ಪಾತ್ರವನ್ನು ಮುಂದಿನ ಚುನಾವಣೆಯೂ ಸೇರಿದಂತೆ ಭವಿಷ್ಯದಲ್ಲೂ ನಿರ್ಭಿಡತೆಯಿಂದ ನಿಭಾಯಿಸಬೇಕು.
ಕೃಪೆ: thewire.in