‘ಭಾರತೀಯರ ಮಾತೆ’ ಕಸ್ತೂರ್ಬಾ, ಬೋಸ್ ಮತ್ತು ಸಂಘಪರಿವಾರ
ಭಾಗ-2
ಅವರ ಸಾವಿನ ನಂತರ ಕೆಲವರು ಮಿತ್ರರು ಕೂಡಿಕೊಂಡು ಕಸ್ತೂರ್ಬಾ ಗಾಂಧಿ ಸ್ಮಾರಕ ನಿಧಿಯನ್ನು ಸ್ಥಾಪಿಸಿದರು. ಇದು ತುಂಬಾ ಔಚಿತ್ಯಪೂರ್ಣವಾದ ಒಂದು ಕೆಲಸವಾಗಿತ್ತು. ಸೂಕ್ತವಾದ ಒಂದು ನಿರ್ಧಾರವಾಗಿತ್ತು ನಿಧಿಯ ಉದ್ದೇಶ ಮಹಿಳೆಯರು ಹಾಗೂ ಹುಡುಗಿಯರ ಕಲ್ಯಾಣವಾಗಿತ್ತು. ಈ ಉದ್ದೇಶಕ್ಕಾಗಿ ನಿಧಿ ಸಂಗ್ರಹಿಸುವ ಒಂದು ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಜೈಲಿನಿಂದ ಬಿಡುಗಡೆಯಾದ ಬಳಿಕ ಗಾಂಧೀಜಿ ಕೂಡ ನಿಧಿ ಸಂಗ್ರಹ ಕಾರ್ಯಕ್ಕೆ ನೆರವಾದರು ಮತ್ತು ನಿಧಿಯ ಸಮರ್ಪಕ ವಿತರಣೆಗಾಗಿ ಬೇಕಾಗಿದ್ದ ಮಾರ್ಗದರ್ಶಿ ಸೂತ್ರಗಳನ್ನು ಅವರು ನಿಗದಿಪಡಿಸಿದರು. ಆಗ ಇದ್ದ ವಾತಾವರಣವನ್ನು, ಪರಿಸ್ಥಿತಿಯನ್ನು ಗಮನಿಸಿದರೆ ಭಾರತದ ವಿವಿಧ ಸ್ತರಗಳ ಜನರಿಂದ ಆ ನಿಧಿಗೆ ವಿಶ್ವಸ್ಥ ಮಂಡಲಿಗೆ ತುಂಬಾ ಧನಾತ್ಮಕವಾದ ಪ್ರತಿಕ್ರಿಯೆ ದೊರಕಿತು ಮತ್ತು ವಿಶ್ವಸ್ಥ ನಿಧಿಗೆ ದೇಶದ ಮೂಲೆ ಮೂಲೆಗಳಿಂದ ಕಾಣಿಕೆಗಳು ಕೊಡುಗೆಗಳು ಹರಿದು ಬಂದವು.
ಆದರೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಹಿಂದೂ ಸಂಘಟನಾಕಾರರು ಸಮಾಧಾನ ಹೊಂದಿರಲಿಲ್ಲ. ಉತ್ಸಾಹದಿಂದ ಪ್ರತಿಕ್ರಿಯಿಸಲಿಲ್ಲ ಎಂಬುದು ಮಾತ್ರ ವಿಚಿತ್ರವಾಗಿ ಕಾಣುತ್ತದೆ. ಆ ಸಂದರ್ಭವನ್ನು ಅವರು ಗಾಂಧೀಜಿಯ ಮಹತ್ವವನ್ನು ಕುಗ್ಗಿಸುವುದಷ್ಟೇ ಅಲ್ಲದೇ ಕಸ್ತೂರ್ಬಾ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಯಾವುದೇ ಪಾತ್ರವನ್ನು ಅಲ್ಲಗಳೆಯಲು ಮತ್ತು ಹೀಗೆ ಅಲ್ಲಗಳೆದು ಆಕೆಯ ಸಮಗ್ರ ಬದುಕನ್ನು ಓರ್ವ ಸಾಮಾನ್ಯ ಗೃಹಿಣಿಯ ಮಟ್ಟಕ್ಕಷ್ಟೇ ಇಳಿಸಲು ಬಳಸಿಕೊಂಡರು.
ಹಿಂದೂ ಮಹಾಸಭಾದ ನಾಯಕ ವಿನಾಯಕ ದಾಮೋದರ ಸಾವರ್ಕರ್ ಆಗ ತನ್ನ ಅತ್ಯಂತ ವಿಷಪೂರಿತ ಸ್ವಭಾವವನ್ನು ಹೊರಗೆಡಹಿದರು. ಗಾಂಧೀಜಿಯ ಬಗ್ಗೆ ತನಗಿದ್ದ ಒಂದು ದಶಕದ ದ್ವೇಷಕ್ಕೆ ಪ್ರತೀಕಾರ ತೀರಿಸಲು ಅದನ್ನೊಂದು ಅವಕಾಶವಾಗಿ ಅವರು ಬಳಸಿಕೊಂಡರು. ಅವರು ಅಂಡಮಾನ್ ಜೈಲಿನಿಂದ ತನ್ನನ್ನು ಅವಧಿಗೆ ಮೊದಲೇ ಬಿಡುಗಡೆಗೊಳಿಸಬೇಕೆಂದು ಒಂದು ಸಂದರ್ಭದಲ್ಲಿ ಬ್ರಿಟಿಷರಿಗೆ ಹಲವಾರು ಮನವಿಗಳನ್ನು ಸಲ್ಲಿಸಿದ್ದರು. ಯುದ್ಧದಲ್ಲಿ ಬ್ರಿಟಿಷರ ಕೈ ಬಲಪಡಿಸುವುದಕ್ಕಾಗಿ ಭಾರತದಾದ್ಯಂತ ಪ್ರವಾಸ ಕೈಗೊಂಡು ‘‘ಹಿಂದೂಗಳನ್ನು ಮಿಲಿಟರೀಕರಿಸಿ, ರಾಷ್ಟ್ರವನ್ನು ಹಿಂದೂಕರಿಸಿ’’ ಎಂಬ ಕರೆ ನೀಡುತ್ತಾ ದೇಶದ ಹಿಂದೂ ಯುವಕರನ್ನು ಬ್ರಿಟಿಷ್ ಸೇವೆಗೆ ಸೇರುವಂತೆ ಪ್ರೋತ್ಸಾಹಿಸಿದ್ದರು. ಅವರು ಆಗ ನೀಡಿದ್ದ ಪತ್ರಿಕಾ ಹೇಳಿಕೆ ಹೀಗಿತ್ತು: ‘‘ಹಿಂದೂ ಸಂಘಟನಾಕಾರರು (ಸಂಘಟಿಸ್ಥಾನ್) ಕಾಂಗ್ರೆಸ್ವಾದಿ ಕಸ್ತೂರ್ಬಾ ನಿಧಿಗೆ ಒಂದು ಪೈಸೆಯನ್ನು ಕೂಡ ದೇಣಿಗೆಯಾಗಿ ನೀಡಬಾರದು.’’ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸುವ ಉದ್ದೇಶಕ್ಕಾಗಿ ಪ್ರಾಣತೆತ್ತು ಹುತಾತ್ಮರಾದ ಪುರುಷರ ಮತ್ತು ಮಹಿಳೆಯರ ಬಗ್ಗೆ, ಅವರ ಸಾವುಗಳ ಬಗ್ಗೆ ಗಾಂಧೀಜಿ ತಾಳಿದ್ದರೆನ್ನಲಾದ ಮೌನವನ್ನು ಪ್ರಶ್ನಿಸುತ್ತಾ ಸಾವರ್ಕರ್ ಆ ಪತ್ರಿಕಾ ಹೇಳಿಕೆ ನೀಡಿದ್ದರು.
ಇದು ಅವರಿಗೆ ಗಾಂಧಿ ಬಗ್ಗೆ ಇದ್ದ ಆಳವಾದ ದ್ವೇಷದ ಸೂಚನೆಯಾಗಿತ್ತು, ಸಂಕೇತವಾಗಿತ್ತು. ಭಾರತದಲ್ಲಿ ಆಗುತ್ತಿದ್ದ ಬೆಳವಣಿಗೆಗಳ ಬಗ್ಗೆ ಅವರು ಹತಾಶರಾಗಿದ್ದರು. ಅವರ ಹತಾಶೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಅವರು ಆಗ ಬ್ರಿಟಿಷರ ಕೈಗೊಂಬೆಯಂತೆ ಕಾಣಿಸುತ್ತಿದ್ದರು. ಎಷ್ಟರ ಮಟ್ಟಿಗೆ ಎಂದರೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಸ್ತೂರ್ಬಾ ವಹಿಸಿದ್ದ ಪಾತ್ರವನ್ನು ವಸ್ತುನಿಷ್ಠವಾಗಿ ಪರಿಗಣಿಸಲು ಕೂಡ ಅವರು ಅಸಮರ್ಥರಾಗಿದ್ದರು. ಆ ಪಾತ್ರವನ್ನು ಸುಭಾಶ್ಚಂದ್ರ ಬೋಸ್ ಸರಿಯಾಗಿ ಗುರುತಿಸಿದ್ದರು.
ಸಾವರ್ಕರ್ ಅವರು ಯಾವುದೇ ಅಳುಕು, ಮುಜುಗರ ಇಲ್ಲದೆ ಗಾಂಧೀಜಿಯ ದೇಶಭಕ್ತಿಯನ್ನು ಪ್ರಶ್ನಿಸಿದ್ದರು. ಆದರೆ ಆಗ ಅವರು (ಮತ್ತು ಅವರ ಹಿಂದೂ ಮಹಾಸಭಾ) ಸಿಂಧ್ ಮತ್ತು ಬಂಗಾಳ ಪ್ರಾಂತದಲ್ಲಿ ಮುಸ್ಲಿಮರ ಜತೆ ಕೈಜೋಡಿಸಿ ಸಮ್ಮಿಶ್ರ ಸರಕಾರಗಳನ್ನು ನಡೆಸುತ್ತಿದ್ದರು ಮತ್ತು ಯಾವುದೇ ನಾಚಿಕೆ ಇಲ್ಲದೆ ಈ ಅಧಿಕಾರ ಹಂಚಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದರು. ‘‘ಪ್ರಾಯೋಗಿಕ ರಾಜಕಾರಣದಲ್ಲಿ ಕೂಡ ನಾವು ತಕ್ಕಮಟ್ಟಿನ ರಾಜಿಪಂಚಾಯ್ತಿಗಳ ಮೂಲಕ ಮುಂದುವರಿಯಬೇಕೆಂದು ಮಹಾಸಭಾಕ್ಕೆ ತಿಳಿದಿದೆ’’
ಅವರ ಬಲಗೈಯಂತಿದ್ದ ಶ್ಯಾಮಪ್ರಸಾದ್ ಮುಖರ್ಜಿ ಬಂಗಾಳ ಸರಕಾರದಲ್ಲಿ ಮುಖ್ಯವಾದ ಹುದ್ದೆ ಹೊಂದಿದ್ದರು. ಮುಖರ್ಜಿಯವರು ಬಳಿಕ ಹಿಂದೂ ಮಹಾಸಭಾದ ಅಧ್ಯಕ್ಷರಾದರು.
ಕಾಂಗ್ರೆಸ್ಗೆ ಎದುರಾಗಿ ಹಿಂದೂ ಸಂಘಟನಾಕಾರರನ್ನು ಬಲಪಡಿಸುವುದು ಗಾಂಧಿ ಮತ್ತು ಕಸ್ತೂರ್ಬಾ ಅವರನ್ನು ಅಮುಖ್ಯ ಗೊಳಿಸುವ, ಅವರ ಪಾತ್ರವನ್ನು ಚಿಕ್ಕದಾಗಿಸುವ ತಂತ್ರದ ಹಿಂದಿನ ಉದ್ದೇಶವಾಗಿರಬಹುದು.
1942ರಲ್ಲಿ ಕಾಂಗ್ರೆಸ್ನ ನಿಷೇಧ ಮತ್ತು...‘‘ ರಾಜಕೀಯ ರಂಗದಿಂದ ಒಂದು ಮುಕ್ತ ವೇದಿಕೆಯಾಗಿ ಅದನ್ನು ಕಿತ್ತು ಹಾಕಿದಾಗ ‘ಭಾರತೀಯ ರಾಷ್ಟ್ರೀಯ’ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಕೇವಲ ಹಿಂದೂ ಮಹಾಸಭಾ ಮಾತ್ರ ಉಳಿದಂತಾಗಿದೆ’’ ಎಂಬುದು ಸಾವರ್ಕರ್ ಅವರ ಅಭಿಪ್ರಾಯವಾಗಿತ್ತು. ಕಸ್ತೂರ್ಬಾ ಸ್ಮಾರಕ ನಿಧಿಗಾಗಿ ಸಂಗ್ರಹಿಸಲ್ಪಟ್ಟ ಹಣವನ್ನು ಕಾಂಗ್ರೆಸ್ ಹಿಂದೂ ಮುಸ್ಲಿಂ ಏಕತೆಗಾಗಿ ಬಳಸುತ್ತದೆ ಮತ್ತು ಅಂತಿಮವಾಗಿ ಅದು ಮುಸ್ಲಿಂ ನಿಧಿಗೆ ಹೋಗುತ್ತದೆ ಎಂದು ಸಾವರ್ಕರ್ ಹೇಳಿದ್ದರು.
ಹಿಂದುತ್ವದ ಈ ಸಿದ್ಧಾಂತಿಯಿಂದ ಪ್ರಭಾವಿತರಾಗಿ ಇರಬಹುದು; ಪೂನಾದ ಅವರ ಅನುಯಾಯಿಯೊಬ್ಬ ಕಸ್ತೂರ್ಬಾರವರನ್ನು ನಿಂದಿಸುವುದರಲ್ಲಿ ಇನ್ನೂ ಒಂದೆಜ್ಜೆ ಮುಂದೆ ಹೋದ. ಎಸ್.ಎಲ್. ಕರಂಡಿಕರ್ ಹೇಳಿದ: ‘‘ಕಸ್ತೂರ್ಬಾರವರೇ ಸ್ವತಃ ಶಿಕ್ಷಿತೆಯಲ್ಲ; ಮಹಿಳಾ ಶಿಕ್ಷಣವನ್ನು ಆರಂಭಿಸಿದ ಮೊದಲಿಗರೂ ಅಲ್ಲ, ಹಾಗಿರುವಾಗ ಕಸ್ತೂರ್ಬಾ ಸ್ಮಾರಕವಾಗಿ ಹುಡುಗಿಯರಿಗೆ ಹಾಗೂ ಮಹಿಳೆಯರಿಗೆ ಯಾಕೆ ಶಾಲೆಗಳನ್ನು ತೆರೆಯಬೇಕು? ಕಸ್ತೂರ್ಬಾ ಒಬ್ಬಳು ಪಕ್ಕಾ ಹಿಂದೂ ಮಹಿಳೆ. ಹಿಂದೂ ಮಹಿಳೆಯ ಪರಮ ಸಂತೋಷ, ಕರ್ತವ್ಯ ಎಂದರೆ ಅವಳ ಗಂಡನ ಬದುಕಿನ ಒಂದು ಭಾಗವಾಗುವುದು. ಕಸ್ತೂರ್ಬಾ ಅವರ ಬದುಕು ಮತ್ತು ಸಾವು ಇಷ್ಟೇ ಅಲ್ಲದೆ ಇನ್ನೇನು?’’ ಆದ್ದರಿಂದ ಹಿಂದೂ ಸ್ತ್ರೀತ್ವದ ಪರಂಪರೆಯನ್ನು ವೈಭವೀಕರಿಸುವ ಒಂದು ಸ್ಮಾರಕವನ್ನು ಸ್ಥಾಪಿಸಬೇಕು.
ಕೃಪೆ: countercurrents